Thursday, March 22, 2018

ಕಣಿವೆಯ ಹಾಡು -3

ಯುದ್ಧ - ಗಿದ್ದ ಗೆದ್ದೋನಲ್ಲ
ಈ ಸೈನಿಕ
ಬಿತ್ತಿದ ಕುಂಬಳ ಬೀಜವ ತುಂಬ
ಈ ಸೈನಿಕ

ಕೋವಿಯ ಹಿಡಿದು ಖೈದಿಯ ಕಾಯ್ದ
ಈ ಸೈನಿಕ
ಖೈದಿಯ ಹಾಡನು ಕಲಿತೆ ಬಿಟ್ಟ
ಈ ಸೈನಿಕ
ಕದ್ದೋಡಲು ಹೊರಟ ಖೈದಿಗಳನೆಲ್ಲ
ಸದ್ದಿಲೆ ಕರೆದಾತ
ಇವನೊಂದಿಗೆ ಕುಣಿದರು ಇವನೀಗ
ಅವರ ಸ್ನೇಹಿತ

ಬಿತ್ತಿದ ಬೀಜ ಮೊಳಕೆಯೊಡೆದು
ಬಳ್ಳಿ ಹಬ್ಬಿತು
ಪ್ರೀತಿಯ ಹಾಡು ಎದೆಗೆ ಇಳಿದು
ಭಾವ ಅರಳಿತು
ಬಳ್ಳಿಯ ತುಂಬಾ ದೊಡ್ಡ ದೊಡ್ಡ
ಸಿಹಿಯಾದ ಕುಂಬಳ
ಯುದ್ಧದ ಮಾತು ಮರೆತೇ ಹೋಯ್ತು
ಅಜ್ಜ ಈಗ ಕೃಷಿಕ

ಲೆಪ್ಟು- ರೈಟು, ಲೆಪ್ಟು- ರೈಟು
ಬಳ್ಳಿಗೆ ಆದೇಶ
ಅರೆರೆ ಬಳ್ಳಿಯು ಪಾಲಿಸುತ್ತಿದೆ
ಅಜ್ಜನ ಆದೇಶ
ಕುಂಬಳ ಬೆಳೆದು ಕಾಯುವೆ ನಾನು
ನನ್ನಯ ದೇಶ
ಕುಂಬಳದಂತೆ ಸಿಹಿಯನು ಹಂಚಿ ಸಾರುವೆ
ಶಾಂತಿಯ ಸಂದೇಶ

ಕಣಿವೆಯ ಹಾಡು- 2

ಕಣ್ಣ ಕವಿಯುವಂಥ ಕನಸು
ಮುಂದಿದೆ
ಕಾಯುತಿಹುದೆನ್ನ ಮನಸು

ಹಕ್ಕಿಯಂತೆ ಹಾರುವಾಸೆ
ಬೇಕು ಎರಡು ರೆಕ್ಕೆ
ದಿಗಂತದಾಚೆ ತೇಲುವಾಸೆ
ಮುಟ್ಟಿ ತಾರೆ ಚುಕ್ಕೆ

ಪುಟ್ಟ ಕಣಿವೆಯೂರಿನ
ದಿಟ್ಟ ಹುಡುಗಿ ನಾನು
ದೊಡ್ಡ ಕನಸು ನನ್ನದಿದೆ
ಮುಟ್ಟಬೇಕು ಅದನು

(Fast rhythm)
ಹಾಡಿ ಎಲ್ಲ ಹಾಡಿ
ನನ್ನ ಹಾಡು ಹಾಡಿ
ತೆರೆದು ಎದೆಯ ಕದವ
ಕನಸ ಕಸಿಯ ಮಾಡಿ
ಬಿತ್ತಿದಂತ ಬಿತ್ತವದು
ಮೊಳಕೆ ಚಿಗುರು ಉಸಿರು
ಅರಳಲಿ ಬಿಡಿ
ಎದೆಯ ತುಂಬಾ
ಹೂವು ಹಣ್ಣು ಹಸಿರು
ಹಾಡಿ ಎಲ್ಲ ಹಾಡಿ
ನಿಮ್ಮ ಎದೆಯ ಹಾಡು
ಹಾಡಿ ಎಲ್ಲ ಹಾಡಿ
ನಿಮ್ಮ ಕನಸ ಪಾಡು
ಹಾಡಿ ಎಲ್ಲ ಹಾಡಿ
ಸಂಕೋಚವನು ತೊರೆದು
ಹಾಡಿ ಎಲ್ಲ ಹಾಡಿ
ಸಂಕೋಲೆಗಳ ಕಳೆದು

Wednesday, March 21, 2018

ಕಣಿವೆಯ ಹಾಡು

ಶುಭವಿದಾಯ ನಿನಗೆ ಕಣಿವೆಯೆ
ಹೋಗಿಬರುವೆ ಹರಸು ನನ್ನ ಬಾಲ್ಯದೊಲುಮೆಯೆ

ನಿನ್ನ ಚಿಗುರು ನವಿರು ನನ್ನ
ಕೊರಳಲಡಗಿದೆ
ನಿನ್ನ ಹಕ್ಕಿ ರೆಕ್ಕೆಯ ಕೊಡು
ಹಾರಬೇಕಿದೆ
ದೂರತೀರದ ಆಚೆಯೆಲ್ಲೋ
ನನ್ನ ಬದುಕಿದೆ
ಹುಡುಕಿ ಹೊರಟ ನನಗೆ ನಿನ್ನ
ಒಲವು ಬೇಕಿದೆ

ನಿನ್ನ ಚೆಲುವು ಪ್ರೀತಿಯೊಲವು
ಮರೆಯಲಾರೆನು
ನಿನ್ನ ಸೀಮಿತ ಪರಿಧಿಯಲ್ಲಿ
ಬಾಳಲಾರೆನು
ದೂರ ಹೋದರೇನು ನಾನು
ಬೇರು ಇಲ್ಲಿದೆ
ನೀರನೆರೆವ ನಿನ್ನ ದಯೆಯು
ಎದೆಯ ತುಂಬಿದೆ

ನಿನ್ನ ಹಸಿರು, ಹೂವು, ಚಿಗುರು
ಎದೆಯ ಚಿತ್ರವಾಗಿದೆ
ನಿನ್ನಗಾಧ ಮೌನ ಮನದ
ಭಿತ್ತಿಯಾಗಿದೆ
ನೀ ನೀಡಿದ ದಿವ್ಯದೃಷ್ಟಿಯು
ಪುಷ್ಟಿಯಾಗಿದೆ
ನಿನ್ನ ಎದೆಯ ಹಾಡು ನನ್ನ
ಕಂಠ ತುಂಬಿದೆ

Monday, March 12, 2018

ಕಾಡುವ ಪಾದಗಳ ನೆನಪು

ಇಂದಿಡೀ ಕಿತ್ತುಹೋದ ಆ ತಾಯಿಯ ಪಾದಗಳೇ ಕಾಡಿದವು. ಒಂದು ಟೊಮ್ಯಾಟೊ ಗಿಡ ನೆಟ್ಟು ಎರಡು ತಿಂಗಳ ಮೇಲಾಯ್ತು. ಪ್ರತಿದಿನ ನೀರು, ವಾರಕ್ಕೊಮ್ಮೆ ಗೊಬ್ಬರಗಳ ಸೇವೆಯೂ ನಡೆಯಿತು. ಅಂತೂ ಬೆಟ್ಟದ ನೆಲ್ಲಿ ಗಾತ್ರದ ನಾಲ್ಕಾರು ಟೊಮ್ಯಾಟೋಗಳು ಈಗ ನೇತಾಡುತ್ತಿವೆ. ಮೊನ್ನೆ ಸಂತೆಯಲ್ಲಿ ಇಪ್ಪತ್ತು ರೂಪಾಯಿಗೆ ಮೂರುಕಿಲೋ ಟೊಮ್ಯಾಟೊ ಸಿಗುತ್ತಿತ್ತು. ಆ ಮೂರು ಕಿಲೋ ಟೊಮ್ಯಾಟೋಗೆ ರೈತನಿಗೆ ಸಿಕ್ಕಿದ್ದು ಹೆಚ್ಚೆಂದರೆ ಹತ್ತು ರೂಪಾಯಿಯಿದ್ದೀತು! ಆ ಹತ್ತು ರೂಪಾಯಿಗಾಗಿ ಅವನು ಪಟ್ಟ ಶ್ರಮವೆಷ್ಟಿದ್ದೀತು? ರೈತರ ಬವಣೆಗೆ ಕೊನೆಯೇ ಇಲ್ಲವೆನಿಸುತ್ತದೆ. ಎರಡು ತುತ್ತಿನಲ್ಲಿ ತಿನ್ನಬಹುದಾದ ಚಾಕಲೇಟ್ ಗೆ ಕಣ್ಮುಚ್ಚಿ ಐವತ್ತು ರೂಪಾಯಿ ಕೊಡುವ ನಾವು, ತರಕಾರಿಯವಳ ಕೂಡ ಒಂದು ರೂಪಾಯಿಗೂ ಚೌಕಾಶಿ ಮಾಡುತ್ತೇವೆ. ಆ ಪಾದಗಳಿಗೆ ಇನ್ನಾದರೂ ನ್ಯಾಯ ಸಿಗಲಿ. ಅನ್ನವಿಕ್ಕುವ ಜೀವಗಳು ನೆಮ್ಮೆಯಲ್ಲಿರಲಿ.

ನನಗೆ ಆ ಪಾದಗಳು ಮತ್ತೆ ನನ್ನಮ್ಮನನ್ನು ನೆನಪಿಸಿದವು. ಆ ದಿನ ಅಪ್ಪ, ಅಮ್ಮನಿಗೆ ದೊಡ್ಡ ಜಗಳವಾಗಿತ್ತು. ಅಂದರೆ ಸಣ್ಣ ಜಗಳಗಳು ದಿನವೂ ಸಾಮಾನ್ಯ ಎಂದರ್ಥ. ಜಗಳದ ಕೊನೆಯಲ್ಲಿ ಅಮ್ಮ ಮನೆಯಲ್ಲಿರಲೇಬೇಕೆಂದರೆ ದನ ಕಾಯ್ದುಕೊಂಡು ಇರಬೇಕು ಎಂದು ತೀರ್ಮಾನವಾಯಿತು. ಅಮ್ಮನೂ ಹಟದಿಂದ ಆಯಿತೆಂದು ಒಪ್ಪಿಯೇಬಿಟ್ಟಳು. ಹತ್ತಾರು ದನಗಳನ್ನು ಮೇಯಿಸಲು ಬೆಳಿಗ್ಗೆ ಕಾಡಿಗೆ ಹೋದರೆ ಸಂಜೆ ಬರುತ್ತಿದ್ದಳು. ಅಮ್ಮ ಕಾಲಿಗೆ ಚಪ್ಪಲಿ ಧರಿಸುತ್ತಿರಲಿಲ್ಲ. ಹೆಂಗಸರೆಲ್ಲ ಚಪ್ಪಲಿ ಧರಿಸುವ ಕ್ರಮವೂ ಅಲ್ಲಿರಲಿಲ್ಲ.  ಹೇಳಿ ಕೇಳಿ ಕಾಡಿನಲ್ಲಿ ಮುಳ್ಳುಗಳ ರಾಶಿ. ದಿನವೂ ಮನೆಗೆ ಬಂದು ಮುಳ್ಳು ತೆಗೆಯುವ ನೆವದಲ್ಲಿ ಸೂಜಿ ಚುಚ್ಚಿ ಮತ್ತೊಂದಿಷ್ಟು ಗಾಯ ಮಾಡಿಕೊಂಡಿದ್ದಳು. ಕುಂಟುತ್ತಾ ನಡೆಯುವ ಅವಳನ್ನು ಅಸಹಾಯಕತೆಯಿಂದ ನೋಡುವುದಷ್ಟೇ ನಮ್ಮ ಕೆಲಸವಾಗಿತ್ತು.  ಅಂತೂ ವಾರದೊಳಗೆ ರಾಜಿಯಾಗಿ ಅಮ್ಮ ಮನೆಯೊಳಗೆ ಬಂದರೋ ಮುಳ್ಳಿನ ಗಾಯಗಳು ಕೀವಾಗಿ ಮಾಯಲು ಎಷ್ಟೋ ದಿನಗಳನ್ನು ತೆಗೆದುಕೊಂಡಿದ್ದವು. ಅಮ್ಮನಿಗೂ,ಆ ತಾಯಿಗೂ ಒಂದು ಜೊತೆ ಹೊಸ ಚಪ್ಪಲಿಗಳನ್ನು ಕೊಡಿಸಬೇಕಿತ್ತು.