Thursday, August 01, 2024

ಗಡಿದಾಟಿದ ಕವಿತೆಗಳ ಮಣಿಸರ

ಕರಾವಳಿಯಲ್ಲಿ ಮುಂಗಾರು ಎಡಬಿಡದೇ ಸುರಿಯುತ್ತಿದೆ. ರಜೆಗೆಂದು ಮನೆಗೆ ಬಂದ ಮಗ ತಡರಾತ್ರಿಯವರೆಗೆ ಓಲಂಪಿಕ್ ಪಂದ್ಯಗಳನ್ನು ವೀಕ್ಷಿಸುತ್ತಾ ಸಮಯ ಕಳೆದರೆ ಅವನೊಂದಿಗೆ ಕುಳಿತುಕೊಳ್ಳುವ ನಾನು ಕವಿತೆಗಳ ಗುಚ್ಛವನ್ನು ಕೈಹಿಡಿದಿರುವೆ. ಈ ಕವಿತೆಗಳ ಮೋಹವೇ ಹಾಗೆ, ಒಮ್ಮೆ ಎದೆಯೊಳಗೆ ಹೊಕ್ಕರೆ ನಮಗರಿವಿಲ್ಲದಂತೆ ಚಿಗುರಿ ಮರವಾಗಿ ಬೇರೂರಿಬಿಡುತ್ತದೆ. ಹಾಗೆ ಕೈಗೆ ಬಂದ ಮಣಿಸರವನ್ನು ವಾರದಿಂದಲೂ ಓದುತ್ತಿರುವೆ.
ಜಗತ್ತಿನ ಉತ್ತಮವಾದ ಕವಿತೆಗಳನ್ನು ಇಲ್ಲಿ ೨೩ ಕವಿಗಳು ಕನ್ನಡಕ್ಕೆ ಅನುವಾದಿಸಿದ್ದಾರೆ. ಹೆಚ್ಚಿನ ಕವಿತೆಗಳು ಇಂಗ್ಲೀಷಿನ ಮೂಸೆಯಿಂದ ಹಾದುಬಂದರೂ ಕೆಲವು ಕವಿತೆಗಳು ಮರಾಠಿ, ತೆಲಗು, ಉರ್ದು ಮತ್ತು ಮಲೆಯಾಳಂನಿಂದ ನೇರ ಕನ್ನಡಕ್ಕಿಳಿದಿವೆ. ರೂಮಿ, ಗುಲ್ಜಾರ್, ಹಫೀಜ್, ಬ್ರೆಕ್ಟ್, ನೆರೂಡಾ, ಅಫ್ರಿನ್, ಮಾಯಾ ಏಂಜೆಲೋ, ಟ್ಯಾಗೋರ್, ಶೆಲ್ಲಿ, ಎಮಿಲಿ, ಬುಕೋವ್ ಸ್ಕಿ ಮೊದಲಾದ ಅನೇಕರ ಕವಿತೆಗಳು ಇಲ್ಲಿವೆ. ಎಚ್. ಎಸ್. ಆರ್. ಓ. ಎಲ್. ಎನ್., ಎಂ. ಆರ್. ಕಮಲಾ, ಚಿದಂಬರ ನರೇಂದ್ರ, ಫಣಿರಾಕ್, ರಮೇಶ ಅರೋಲಿ, ಶಂಕರ ಕೆಂಚನೂರ ಹೀಗೆ ಅನೇಕರು ಇವುಗಳನ್ನು ಕನ್ನಡಿಸಿದ್ದಾರೆ. ಪ್ರತಿಯೊಬ್ಬ ಅನುವಾದಕರು ಅವರ ಅಭಿಪ್ರಾಯದ ಪ್ರಕಾರ ಅನುವಾದವೆಂದರೆ ಏನು? ಮತ್ತು ತಾವು ಯಾಕೆ ಅನುವಾದದಲ್ಲಿ ತೊಡಗಿದ್ದೇವೆ ಎಂಬುದನ್ನು ಸಂಕ್ಷಿಪ್ತವಾಗಿ ಹೇಳಿದ್ದಾರೆ. ಅನುವಾದದ ಬಗೆಗಿನ ಅವರ ಹೇಳಿಕೆಗಳು ತುಂಬಾ ಕತೂಹಲಕಾರಿಯಾಗಿವೆ. 

" ಈ ಕವಿಯ ಆಲೋಚನಾಕ್ರಮ ನಮಗಿಂತ ಅದೆಷ್ಟು ಭಿನ್ನ ಅಥವಾ ಈ ಪರದೇಶಿ ಕವಿ ಅದೆಷ್ಟು ನಮ್ಮ ಹಾಗೆಯೇ ಯೋಚಿಸುತ್ತಾಳೆ" ಎನ್ನುವ ಸೋಜಿಗವೇ ಅನುವಾದಕ್ಕೆ ಪ್ರೇರಣೆ ಎಂದು ಬಾಗೇಶ್ರೀ ಹೇಳಿದರೆ, "ಅವಳ ಹಿಂದೆ ಓಡಾಡಿದ್ದೆಲ್ಲ ಆಧ್ಯಾತ್ಮ, ಆಕೆ ಹಿಂತಿರುಗಿ ನೋಡಿದ್ದಷ್ಟೇ ಕವಿತೆ" ಎನ್ನುತ್ತಾರೆ ಚಿದಂಬರ ನರೇಂದ್ರ. ಜಗದ ನಿಜಸಾಹಿತ್ಯಗಳು 'ಬದುಕನ್ನು ಬದಲಾಯಿಸುವ ತತ್ವಶಾಸ್ತ್ರ' ಗಳ ಹಾಗೆ ಕಾಣತ್ತವೆ ಎನ್ನುತ್ತಾರೆ ಫಣಿರಾಜ್. ಹಲವು ಅನುವಾದಗಳು ಸರಾಗವಾಗಿ ಓದಿಸಿಕೊಳ್ಳುತ್ತವೆಯಾದರೂ, ಕೆಲವು ಕನ್ನಡ ಭಾಷೆಯಲ್ಲಿ ಬರೆದ ಅನ್ಯಭಾಷೆಯ ಕವಿತೆಯಂತೆ ಭಾಸವಾಗುತ್ತವೆ. ಕವನಗಳನ್ನು ಅನುವಾದಿಸುವಾಗ ಪದಗಳೊಂದಿಗೆ ಭಾವಗಳೂ ಅನುವಾದಗೊಳ್ಳುವುದು ಕವಿ, ಅನುವಾದಕರಿಬ್ಬರ ಅದೃಷ್ಟ ಅನಿಸುತ್ತದೆ. ಹಾಗೆ ಓದುತ್ತ ಹೋದಂತೆ ಹಿಡಿದು ನಿಲ್ಲಿಸಿದ ಕೆಲವು ಸಾಲುಗಳು ಇಲ್ಲಿವೆ.
ಇನ್ನೇನು
ಕೆಲ ಕೋಟಿ ವರ್ಷಗಳಲ್ಲಿ
ಸೂರ್ಯನ ಬೆಂಕಿ 
ತಣ್ಣಗಾಗಿ
ಎಲ್ಲೆಲ್ಲೂ
ಬೂದಿ ಹರಡಿಕೊಳ್ಳುತ್ತದೆ
.......
....ಆಗೇನಾದರೂ
ಕಾಗದದ ಮೇಲೆ
ಬರೆದ ಕವಿತೆಯೊಂದು
ಸೂರ್ಯನ ಮೇಲೆ ಬಿದ್ದರೆ
ಸೂರ್ಯ ಮತ್ತೆ ಹೊತ್ತಿ ಉರಿಯಬಹುದು
ಅದೊಂದೇ ಆಸೆಯಿಂದ
ನಾನು ಬರೆಯುತ್ತೇನೆ
-ಗುಲ್ಜಾರ್ (ಚಿದಂಬರ ನರೇಂದ್ರ)

ಆ ಕೋಮುದಂಗೆಯಲ್ಲಿ
ಅವರು ಅಳಿಸಿಹಾಕಿದ್ದು
ವ್ಯಕ್ತಿಗಳನ್ನಲ್ಲ
ಕೇವಲ ಹೆಸರುಗಳನ್ನು
ಅವರು ತರಿದು ಹಾಕಿದ್ದು
ತಲೆಗಳನ್ನಲ್ಲ
ಕೇವಲ ಟೊಪ್ಪಿಗೆಗಳನ್ನು
ಆಕಸ್ಮಿಕವಾಗಿ ಟೊಪ್ಪಿಗೆಯೊಳಗೆ
ತಲೆಗಳಿದ್ದವು ಅಷ್ಟೆ
-ಗುಲ್ಜಾರ್ (ಜಗದೀಶ ಕೊಪ್ಪ)

ಬೇರುಗಳಿಗೆ ಗೊತ್ತು
ತನ್ನ ಜೀವಂತ ಇಡುವುದು
..........
ಉರಿವ ಕಾಡಿನಲ್ಲಿ 
ಉಳಿದೇ ಇರುತ್ತವೆ ಅನೇಕ ಬೇರುಗಳು
ಮಳೆಗಾಗಿ ಕಾದು
ತೊನೆಯಲು ಸಿದ್ದವಾಗಿ
-ಪ್ರಭಾ ಮುಜುಂದಾರ್ (ಲಲಿತಾಂಬಾ ಬಿ. ವೈ)

ಅವರು ನನ್ನ ಭಾಷೆಯನ್ನು ಆಕ್ರಮಿಸುವುದಕ್ಲೂ ಮುಂಚೆ
ನನಗೆ ಅರಬ್ಬಿಯಲ್ಲಿ ಮಾತಾಡಲು ಬಿಡಿ
ನನ್ನಮ್ಮನ ನೆನಪುಗಳನ್ನು ವಸಾಹತಾಗಿಸುವ ಮುಂಚೆ
ನನ್ನ ತಾಯ್ನುಡಿಯಾಡಲು ಅವಕಾಶ ಕೊಡಿ
ನಾನು ಅರಬರ ಹೆಣ್ಣು, ನಮ್ಮ ಸಿಟ್ಟಿಗೆ ಹಲವು ನೆಸಲುಗಳು
-ರಫೀಪ ಜಿಯದಹ್ (ಫಣಿರಾಜ್)

ಆಕೆ ಬಾಗಿಲು ಬಡಿದಳು
ನಾನು 
ಚಾವಿಯ ಗೊಂಚಲನ್ನೇ ಕೊಟ್ಟೆ
ಕೋಣೆ
ಮನೆಯಾಗುವುದನ್ನು ನೋಡುತ್ತಿತ್ತು
ನಾನು
ಪ್ರೀತಿ ಉದಿಸುವುದನ್ನು ನೋಡುತ್ತಿದ್ದೆ
-ಇಮರೋಜ್ (ರೇಣುಕಾ ನಿಡುಗುಂದಿ)

ಇವುಗಳಲ್ಲದೇ ಬುಕೋವಸ್ಕಿಯವರ, ಶಂಕರ ಕೆಂಚನೂರು ಅನುವಾದಿಸಿದ 'ನಗು' ಕವಿತೆ, ತೇಜಶ್ರೀ ಅನುವಾದಿಸಿದ ಪಾಬ್ಲೋ ನೆರುಡಾ ಅವರ 'ಪಾದದ ಮಗು ಪಾದಕ್ಕೆ ಹೇಳಿದ್ದು' ಕವಿತೆ, ರಮೇಶ ಅರೋಲಿ ಅನುವಾದದ ಗೋರಟಿ ವೆಂಕನ್ನ ಅವರ 'ಮಳೆ ಬಂತಮ್ಮಾ' ಕವಿತೆ, ಎಂ. ಆರ್. ಕಮಲಾ ಅವರ ಅನುವಾದದ ಕಸೂತಿಯಾದ ನೆನಪು ಕವಿತೆಗಳು ಮತ್ತೆ, ಮತ್ತೆ ಓದಿಸಿಕೊಂಡವು. ಒಂದೇ ಕವಿತೆಯನ್ನು ದಿಗ್ಗಜ ಅನುವಾದಕರಾದ ಓ. ಎಲ್. ಎನ್. ಮತ್ತು ಎಚ್. ಎಸ್. ಆರ್. ಅವರು ಅನುವಾದಿಸಿದ್ದು ಗ್ರಹಿಕೆಗಳ ವಿಭಿನ್ನತೆಗೊಂದು ಉಪಮೆಯಂತೆ ದಾಖಲಾಗಿವೆ. ಕುವೆಂಪು ಭಾಷಾಭಾರತಿ ಪ್ರಕಟಿಸಿದ ಈ ಪುಸ್ತಕದ ಬೆಲೆ ಕೇವಲ ೧೨೦ ರೂಪಾಯಿಗಳು. ಡಾ| ಎಚ್. ಎಸ್ ಅನುಪಮಾ ಈ ಕವಿತೆಗಳನ್ನು ಸಂಪಾದಿಸಿದ್ದಾರೆ. 

Friday, March 15, 2024

ನೆರುಡಾ ಕವನಗಳ ಅನುವಾದ

೧.
ನಾವು ಈ ಮುಸ್ಸಂಜೆಯನ್ನೂ ಕಳಕೊಂಡಿದ್ದೇವೆ
ನೀಲಿ ರಾತ್ರಿಯು ಈ ಜಗವ ಕವಿಯುವ 
ಮೊದಲ ಜಾವದಲಿ ನಾವು ಕೈಯ್ಯಲ್ಲಿ ಕೈಯಿಟ್ಟು ನಡೆವುದನು
 ಈ ಸಂಜೆ ಯಾರೂ ನೋಡಲಿಲ್ಲ

ಕಿಟಕಿಯಿಂದ ನೋಡಿದೆ, ಆ ಬೆಟ್ಟದ 
ತುದಿಯಲ್ಲಿ ಸೂರ್ಯಾಸ್ತದ ಹಬ್ಬ!
ಕೆಲವೊಮ್ಮೆ ಸೂರ್ಯನ ತುಣುಕೊಂದು
ನನ್ನ ಕೈಗಳ ನಡುವೆ ನಾಣ್ಯದಂತೆ ಉರಿಯುತ್ತದೆ
ನಾನು ನಿನ್ನನ್ನು ನೆನೆಯುತ್ತೇನೆ
ನಿನಗೆ ಪರಿಚಿತವಾದ ನನ್ನ ನೋವು
ಆತ್ಮದಲಿ ಮಿಸುಕಾಡುತ್ತದೆ

ಎಲ್ಲಿರುವೆ ಹೇಳು ನೀನು? ಯಾರಿದ್ದಾರೆ ನಿನ್ನೊಂದಿಗೆ?
ಏನು ಹೇಳುತ್ನಾತಿದ್ನುದಾರೆ?
ಬೇಸರದಲ್ಲಿರುವಾಗ, ನೀನು ಅಲ್ಲೆಲ್ಲೋ ಇರುವಾಗ..
ಪ್ರೀತಿಯ ಪೂರ್ಣತೆಯೊಂದು ನನ್ನಲ್ಲಿ ಮೂಡುವುದಾದರೂ ಯಾಕೆ?

ಮುಸ್ಸಂಜೆಯ ಪುಸ್ತಕದ ಪುಟಗಳಿಂದು ಮಗುಚಿಬಿದ್ದಿವೆ
ನನ್ನ ನಿಲುವಂಗಿ ಗಾಯಗೊಂಡ ನಾಯಿಯಂತೆ ಕಾಲಡಿ ಮುದುರಿದೆ
ಮುಸ್ಸಂಜೆಯು ಮೆಲ್ಲನೆ ಪ್ರತಿಮೆಗಳನ್ನು ಅಳುಸಿಹಾಕುವಾಗ
ಸದಾ, ಸದಾ ನೀನು ಸಂಜೆಯೊಂದಿಗೆ ಜಾರಿಹೋಗುವೆ 

೨.
ಈ ರಾತ್ರಿ ನಾನು ಕಡುದುಃಖದ ಸಾಲುಗಳನ್ನು ಬರೆಯಬಲ್ಲೆ
ಹೀಗೆಲ್ಲ ಬರೆಯಬಲ್ಲೆ, "ರಾತ್ರಿಯು ಛಿದ್ರಗೊಂಡಿದೆ
ನೀಲಿ ತಾರೆಗಳು ದೂರದಲ್ಲಿ ನಡುಗುತ್ತಿವೆ
ಆಗಸದ ತುಂಬಾ ತಂಗಾಳಿಯು ಸುಳಿಯುತ್ತಿದೆ, ಹಾಡುತ್ತಿದೆ"

ಈ ರಾತ್ರಿ ನಾನು ಕಡುದುಃಖದ ಸಾಲುಗಳನ್ನು ಬರೆಯಬಲ್ಲೆ
ನಾನವಳನ್ನು ಪ್ರೀತಿಸಿದೆ, ಅವಳೂ ಕೆಲವೊಮ್ಮೆ ನನ್ನ ಪ್ರೀತಿಸಿದಳು

ಇಂಥದೊಂದು ರಾತ್ರಿ ನಾನವಳನ್ನು ತೋಳಿನಲಿ ಬಂಧಿಸಿದೆ
ವಿಶಾಲ ಆಗಸದಡಿಯಲ್ಲಿ ಮತ್ತೆ, ಮತ್ತೆ ಅವಳ ಚುಂಬಿಸಿದೆ

ಅವಳು ನನ್ನ ಪ್ರೀತಿಸಿದಳು, ನಾನೂ ಅವಳನ್ನು ಕೆಲವೊಮ್ಮೆ ಪ್ರೀತಿಸಿದೆ
ಅವಳ ವಿಶಾಲ ನಿಶ್ಚಲ ಕಣ್ಣುಗಳನು ಯಾರು ತಾನೆ ಪ್ರೀತಿಸಲಾರರು?

ಈ ರಾತ್ರಿ ನಾನು ಕಡುದುಃಖದ ಸಾಲುಗಳನ್ನು ಬರೆಯಬಲ್ಲೆ
ಅವಳು ನನ್ನವಳಾಗಿಲ್ಲವೆಂದು ಯೋಚಿಸಲು, ಅವಳ ಅಗಲಿಕೆಯನ್ನು ಅನುಭವಿಸಲು

ಈ ರಾತ್ರಿ ದೀರ್ಘವಾಗಿದೆ, ಅವಳಿಲ್ಲದೇ ಇನ್ನಷ್ಟು ಲಂಭಿಸಿದೆ
ಹುಲ್ಲುಗಾವಲಿನ ಮೇಲೆ ಸುರಿದ ಇಬ್ಬನಿಯಂತೆ ಕವಿತೆ ಆತ್ಮವನು ತೋಯಿಸುತ್ತಿದೆ

ನನ್ನ ಪ್ರೀತಿಯು ಅವಳನ್ನು ಉಳಿಸಿಕೊಳ್ಳದಿದ್ದರೆ ತಾನೆ ಏನು?
ಅವಳಿಲ್ಲದ ಈ ರಾತ್ರಿಯಾಗಸದಲ್ಲಿ ತಾರೆಗಳ ಸಾಲು, ಸಾಲು

ಇಷ್ಟೆ, ದೂರದಲ್ಲಿ ಕುಳಿತು ಯಾರೋ ಹಾಡುತ್ತಿದ್ದಾರೆ
ಅವಳನ್ನು ಕಳಕೊಂಡ ಆತ್ಮ ಚಡಪಡಿಸುತ್ತಿದೆ

ನನ್ನ ನೋಟ ಅವಳನ್ನು ಹತ್ತಿವಾಗಿಸಲು ಹವಣಿಸುತ್ತದೆ
ಹೃದಯ ಹಂಬಲಿಸುತ್ತದೆ, ನನ್ನೊಂದಿಗಿಲ್ಲದ ಅವಳನ್ನು

ರಾತ್ರಿ ಮತ್ತದೇ ಮರಗಳ ಮೇಲೆ ಬೆಳದಿಂಗಳನ್ನು ಚೆಲ್ಲುತ್ತದೆ
ಈ ರಾತ್ರಿ ನಾವು ಆ ರಾತ್ರಿಯ ನಾವಾಗಿಲ್ಲ

ಇನ್ನವಳನ್ನು ಪ್ರೀತಿಸಲಾರೆ, ಖಂಡಿತ, ಹೇಗೆ ಪ್ರೀತಿಸಿದೆ ಅವಳನ್ನು?
ನನ್ನೆದೆಯ ಮಾತುಗಳು ಗಾಳಿಗೂಡಿವೆ ಅವಳ ತಲುಪಲು

ಅನ್ಯಳು, ಅವಳೀಗ ಅನ್ಯಳು, ನಾನು ಮುದ್ದಿಸುವ ಮೊದಲಿದ್ದಂತೆ
ಅವಳ ದನಿ, ಅವಳ ದೇಹಕಾಂತಿ, ಅವಳ ವಿಶಾಲ ಕಣ್ಣುಗಳು

ಇನ್ನವಳನ್ನು ಪ್ರೀತಿಸಲಾರೆ, ಖಂಡಿತ, ಇಲ್ಲ ಪ್ರೀತಿಸುವೆ
ಪ್ರೀತಿ ಎಷ್ಟು ಅಚಾನಕ್, ಮರೆಯುವಿಕೆ ಅದೆಷ್ಟು ದೀರ್ಘ!

ಇಂಥದ್ದೇ ರಾತ್ರಿಯಲಿ ನಾನವಳನ್ನು ತೋಳಿನಲಿ ಬಳಸಿದ್ದೆ
ನನ್ನಾತ್ಮವು ಅವಳ ಕಳಕೊಳ್ಳಲು ಹಿಂಜರಿಯುತ್ತಿದೆ

ಬಹುಶಃ ಅವಳು ನನಗೆ ನೀಡುವ ಕೊನೆಯ ನೋವು ಇದಾಗಿರಬಹುದು
ನಾನವಳಿಗಾಗಿ ಬರೆಯುವ ಕೊನೆಯ ಕವನವೂ ಇದೇ ಆಗಿದೆ

       

Wednesday, February 15, 2023

ಹನಿಗವಿತೆಗಳು

೧.
ಹೊರಗೆ ಸುಡುವ ಬಿಸಿಲು
ನಾವು ಒಲವಿನ ತೊರೆಯಲ್ಲಿ ಮಿಂದೆವು
ಏನಿಲ್ಲ, ಜೀವ ತಂಪಾಯಿತು

೨.
ಅಪರಿಚಿತರಂತಿದ್ದೆವು, ತಬ್ಬಿದೆವು
ಸ್ಪರ್ಶವು ನಮ್ಮನ್ನು ಪರಿಚಯಿಸಿತು

೩.
ಹಚ್ಚೆ ಹಾಕಿದಂತೆ ಮೈತುಂಬಾ ಕಚ್ಚಿದ ಗುರುತುಗಳು
ಬೆಳಗೆದ್ದು ನೋಡಿದರೆ ನಿನ್ನಂತೆ ಮಂಗಮಾಯವಾಗಿದ್ದವು

Saturday, December 03, 2022

ಹೊಸ ಕವಿತೆಗಳು

"ಮೈಸುಡುವ ಜ್ವರ, ಸಣ್ಣಗೆ ಚಳಿ
ಸ್ವರ ಬದಲಾಗಿದೆ" ಎಂದೆ ಫೋನಿನಲ್ಲಿ
"ಪ್ರೇಮದ ಅಮಲೇರಿದರೆ ಹಾಗೆ ಕಣೇ
ಒಳಗಿನ ಕಾವು ಸುಡುವುದು, ಹೊರಮೈಗೆ ನಡುಕ"
ಎಂದು ಪೋಲಿ ಮಾತಾಡಿ ನಕ್ಕುಬಿಟ್ಟ
ಕೋಪದಲಿ ಫೋನು ಕುಕ್ಕಿ, ಮೈತುಂಬ ಹಚ್ಚಡ
ಹೊದ್ದು ಮಲಗಿದರೆ ಹೊರಳಿಕೆ ತುಂಬ ಅವನೆ
ದೂಡಿದಷ್ಟೂ ಮೈಗೆ ಅಂಟಿಕೊಳ್ಳುತ್ತಾನೆ
ಡೋಲೋ 650ಯ ಅಮಲಿಗೆ ಅರೆಬರೆ ನಿದ್ದೆ-
ಯೊಳಗೂ ಅವನದೇ ಕನಸು, ಹಾಳಾದವನು!
ಕಷ್ಟದಲಿ ಕಣ್ತೆರೆದು ಪುಸ್ತಕವ ಬಿಡಿಸಿದರೆ...
"ಎಲ್ಲೋ ಬಡಿದ ಚಿಟ್ಟೆಯ ರೆಕ್ಕೆಗಳು 
ಇನ್ನೆಲ್ಲೋ ಬಿರುಗಾಳಿಯೆಬ್ಬಿಸುತ್ತವೆ" 
ಪತಂಗ ಪರಿಣಾಮ, ಮನದೊಳಗೆ ನೂರು ತರಂಗ
ಮಾಗಿಯ ಚಳಿ, ಹೂವರಳಿಸಿದ ವಸಂತ
ಮತ್ತೆ ಫೋನು ಕಿವಿಗಿಟ್ಟರೆ ಅತ್ತಲಿಂದ ದನಿ
"ದೇಹಕ್ಕೂ ಅದರದೇ ಭಾಷೆಯಿದೆ ಗೆಳತಿ
ತೀರ ಬುದ್ದಿವಂತರಿಗೆ ತಿಳಿಯುವಾಗ ತಡವಾಗುತ್ತದೆ"
ಕವಿತೆಯೀಗ ತಾಪವಿಳಿಸುವ ಡೋಲೋ-650


ಮುದ್ದು, ಚಿನ್ನಾ,
ಒಲವೇ, ಜೀವವೇ,
ಉಸಿರೇ...
ಎಂದೆಲ್ಲ ಕರೆದ ಮೇಲೂ
ಮತ್ತೆ ಉಳಿಯುವುದಲ್ಲ
ಎದೆಯಾಳದಲೇನೋ?
ಆ ಶೂನ್ಯವ ತುಂಬಲು
ಏನಾದರೂ ಕಳಿಸು

ಜತೆಗಿದ್ದಷ್ಟೂ ಹೊತ್ತು
ಸುಳ್ಳೇಕೆ ಹೇಳುವುದು
ಜತೆಗಿಲ್ಲದ ಹೊತ್ತೂ
ಒಬ್ಬರನಿಬ್ಬರು ಬಿಟ್ಟಿರದಂತೆ
ಹೆಣೆದುಕೊಂಡೇ ಇದ್ದರೂ
ಮತ್ತೂ ಹತ್ತಿರಾಗಬೇಕು
ಅನಿಸುವುದಕೆ ಕಾರಣವ ಹೇಳಿಬಿಡು

ನೆನೆದಾಗಲೆಲ್ಲ
ಸುಳಿದಾಗಲೆಲ್ಲ
ಸುಮ್ಮನೆ ಕುಳಿತಾಗಲೆಲ್ಲ
ಮೈಮನಗಳ ತುಂಬಾ 
ಅದೆಂಥದ್ದೋ ಹೇಳಲಾಗದ
ತಲ್ಲಣವೊಂದು ಉಸಿರಂತೆ
ಹರಿದಾಡುವುದಲ್ಲ
ಅದಕೊಂದು ಉಪಶಮನದ
ದಾರಿಯ ತೋರಿಬಿಡು