Thursday, June 07, 2018

ಹೊಳೆ - ಹಣ

ಬ್ಲಾಗ್ನಲ್ಲಿ ಬರೆಯದೇ ಅದೆಷ್ಟೋ ದಿನಗಳು ಕಳೆದುಹೋದವು. ಹೊಳೆಕೆರೆಯ ಹೊಳೆ ಇನ್ನೂ ನನ್ನೊಳಗೆ ಹರಿಯುತ್ತಲೇ ಇದೆ. ಹೊಳೆಯದೊಂದು ಕಥೆ ನಿಮಗಾಗಿ.

ಆಗ ನಾನಿನ್ನೂ ತೀರಾ ಸಣ್ಣವಳು. ಮೂರನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಶಾಲೆಯಿಂದ ಚಿತ್ರಾಪುರ ಮಠಕ್ಕೆ ಪ್ರವಾಸ ನಿಗದಿಯಾಗಿತ್ತು. ಹೋಗಲು ನನಗೆ ಮನೆಯಿಂದ ಅನುಮತಿ ಸಿಕ್ಕಿತ್ತು. ಆಗೆಲ್ಲ ಪ್ರವಾಸ ನಿಗದಿಯಾಯಿತೆಂದರೆ ಒಂದಿಡೀ ತಿಂಗಳು ನಾವು ಪ್ರವಾಸದ ಚೀಟಿ ತಯಾರಿಸುತ್ತಿದ್ದೆವು. ಅಂದರೆ ಹೀಗೆ. " ಆಡುಕಳ ಶಾಲಾ ಮಕ್ಕಳ ಚಿತ್ರಾಪುರ ಪ್ರವಾಸಕ್ಕೆ
ಜಯವಾಗಲಿ" ಅಂತ ಒಂದು ಬಗೆಯ ಚೀಟಿಯಾದರೆ, ಇನ್ನೊಂದು ಜಯವಾಯಿತು ಎಂಬ ಚೀಟಿ. ಮೊದಲನೆಯದನ್ನು ಹೋಗುವಾಗ ದಾರಿಯುದ್ದಕ್ಕೂ ಬಿಸಾಡಿದರೆ, ಎರಡನೆಯದನ್ನು ಬರುವಾಗ ಬಸ್ಸಿನ ಕಿಟಕಿಯಿಂದ ಹೊರಗೆ ಬಿಸಾಡುವುದು. ದಾರಿಯುದ್ದಕ್ಕೂ ಅದನ್ನು ಹೆಕ್ಕಿ ಓದುವವರಿಗೆ ನಮ್ಮ ಪ್ರವಾಸದ ವಿಷಯ ಗೊತ್ತಾಗಬೇಕೆಂಬುದು ನಮ್ಮ ಇಂಗಿತ. ಹಾಗೆ ನಾನೂ ಕೂಡ ನೂರಾರು ಚೀಟಿಗಳನ್ನು ತಯಾರಿಸಿ ನನ್ನ ಸ್ಕರ್ಟ ನ ಕಿಸೆಯಲ್ಲಿ ತುಂಬಿಸಿಕೊಂಡಿದ್ದೆ.

ಪ್ರವಾಸದ ಮೊದಲ ದಿನ ರಾತ್ರಿ ನಿದ್ರೆಯೇ ಮಾಡಿರಲಿಲ್ಲ.  ಬೆಳಗಾಗುವುದರೊಳಗೆ ಎದ್ದು ತಯಾರಾಗಿ, ಬೆಳಕು ಹರಿಯುವುದನ್ನೇ ಕಾಯುತ್ತಾ ಕುಳಿತಿದ್ದೆ. ನಾನು ಹೊರಡುವಾಗ ಅಪ್ಪ ನನ್ನ ಕೈಯಲ್ಲಿ ಕೆಲವು ನಾಣ್ಯಗಳನ್ನು ಕೊಟ್ಟರು.  ಹೇಗೂ ಕಿಸೆಯಲ್ಲಿ ಚೀಟಿಯಿತ್ತಲ್ಲ, ಹಾಗಾಗಿ ಅದನ್ನು ಕೈಯಲ್ಲಿ ಹಿಡಿದು ಹೊರಟೆ. (ಆಗೆಲ್ಲ ಸ್ಕೂಲ್ ಬ್ಯಾಗ್ ಎಂಬುದು ಬಹಳ ದುಬಾರಿಯಾಗಿದ್ದು, ನಮಗೆಲ್ಲ ಹತ್ತನೇ ತರಗತಿಯವರೆಗೆ ಚೀಲವೇ ಇರಲಿಲ್ಲ. ಅದರ ಬದಲು ಒಂದು ದಪ್ಪ ಇಲಾಸ್ಟಿಕ್ ಇರುತ್ತಿತ್ತು.  ಅದನ್ನು ಪುಸ್ತಕಕಗಳಿಗೆ ಹಾಕಿಕೊಂಡು ಹೋಗುತ್ತಿದ್ದೆವು.)

ನಮ್ಮೂರಿಂದ ಎಲ್ಲಿಗೆ ಹೊರಡಬೇಕೆಂದರೂ ಹೊಳೆ ದಾಟಲೇಬೇಕು. ನಾನು ಒಂದು ಕೈಯಲ್ಲಿ ನನ್ನ ಸ್ಕರ್ಟನ್ನು ಮೇಲಕ್ಕೆತ್ತಿಕೊಂಡು, ನಡುಹೊಳೆಗೆ ಬರುತ್ತಿದ್ದಂತೆ ಕೈಯಲ್ಲಿರುವ ಎಲ್ಲಾ ನಾಣ್ಯಗಳು ಹೊಳೆಯ ಪಾಲಾದವು. ನೀರು ತಿಳಿಯಾಗಿದ್ದರಿಂದ ನಾಣ್ಯಗಳು ಕಾಣುತ್ತಿದ್ದವು.  ಆದರೆ ಅವುಗಳನ್ನು ಹೆಕ್ಕಬೇಕೆಂದರೆ ನೀರಿನಲ್ಲಿ ಪೂರ್ಣವಾಗಿ ಮುಳುಗಬೇಕಿತ್ತು. ಆಗ ನಾನು ಪೂರ್ತಿಯಾಗಿ ಒದ್ದೆಯಾಗುತ್ತಿದ್ದೆ. ಮತ್ತೆ ಹಿಂದಿರುಗಿ ಮನೆಗೆ ಹೋದರೂ ಇನ್ನೊಂದು ಹೊಸ ಅಂಗಿ ಮನೆಯಲ್ಲಿಲ್ಲ. ಒಂದುಕ್ಷಣ ಯೋಚಿಸಿ, ಮತ್ತೆ ಸರಕ್ಕನೆ ಮುಳುಗಿ ನಾಣ್ಯವನ್ನು ಹೆಕ್ಕಿಕೊಂಡೆ. ಆದರೆ ಇವೆಲ್ಲದರ ಮಧ್ಯೆ ನನ್ನ ಪ್ರವಾಸದ ಚೀಟಿಗಳು ಒದ್ದೆಯಾದದ್ದು ನೆನಪಿಗೆ ಬಂದಿರಲಿಲ್ಲ.

ಮುಂದಿನದೆಲ್ಲವನ್ನು ನಿಮ್ಮ ಊಹೆಗೇ ಬಿಡುವುದೊಳಿತು.

Sunday, April 15, 2018

ರಜಾ ಮಜಾ

ಬೇಸಿಗೆ ರಜೆಯ ಜೊತೆಗೆ ಬಂದಿತು ನಟನಾ ಶಿಬಿರ
ನಟನೆಯ ಪಾಠದ ಜೊತೆಗೆ ವಿಧ ವಿಧ ಕಲೆಯ ವಿವರ
ನಗುವಾ, ನಗಿಸುವ, ಕುಣಿವಾ, ಕುಣಿಸುವ
ಚೆಂದದ ಬಾಲ್ಯದ ಶಿಬಿರ

ಬಾಲ್ಯದ ಬಣ್ಣದ ಮೇಳ
ನಮ್ಮಯ ಹೆಜ್ಜೆಯ ತಾಳ
ಧೀಂಕಿಟ ತರಿಕಿಟ ಕುಣಿತ
ಗೆರೆಗಳ ಜೊತೆಗಿನ ಆಟ
ನೋಡುತ, ಕುಣಿಯುತ್ತ, ನಲಿಯುತ, ಕಲಿಯುವ
ರಜಾಮಜಾದ ಕೂಟ

ಶಾಲೆಯ ಪಾಠದ ದಣಿವು
ಮರೆಯಲು ಬಯಸಿದೆ ಮನವು
ನೋಡುತ ಜಗದಾ ಚೆಲುವು
ಹೀರುವ ಕಾವ್ಯದ ಕಸುವು
ಚಿತ್ರವ ಬಿಡಿಸುವ, ರಂಗನು ಬೆರಸುವ
ಬೆರಳೇ ಆಗಲಿ ಕುಂಚ

ನಮ್ಮಯ ಕಲ್ಪನೆಗಳಿಗೆ
ವಿಶ್ವವು ಕೂಡಾ ಕಿರಿದೆ
ಮನಸಿನ ಭಾಷೆಯ ಪರಿಗೆ
ಸೋಲುವ ಭಾವದ ಸಿರಿಗೆ
ಅವರಿವರೆನ್ನದೆ ಎಲ್ಲರೂ ನಮ್ಮವರೆನ್ನುವ ಸುಂದರ ಗಳಿಗೆ

Wednesday, April 04, 2018

ಶಿಬಿರ ಗೀತೆ


ಧೀಂ ತನನನ ದಿತ್ತೋಂ ತಾರಾ
ಧೀಂ ತನನನ ದಿತ್ತೋಂ ತಾರಾ
............................ಬಣ್ಣದ ಹೆಜ್ಜೆ

ಬಾಲ್ಯಕ್ಕೆ ರಂಗನು ತುಂಬುವ ಬಣ್ಣದ ಹೆಜ್ಜೆ
ಭಾವಕ್ಕೆ ಗುಂಗನು ಬೆರೆಸುವ ಬಣ್ಣದ ಹೆಜ್ಜೆ
ಬದುಕಿನ ಕನಸನು ಹೆಣೆಯುವ ಬಣ್ಣದ ಹೆಜ್ಜೆ
ಬಯಕೆಗೆ ಭರವಸೆ ಬೆರೆಸುವ ಬಣ್ಣದ ಹೆಜ್ಜೆ
ಝೇಂಕರಿಸುವ ಪ್ರೀತಿಯ ಗೆಜ್ಜೆ
ಧೀಂತರಿಕಿಟ ಕುಣಿಯುವ ಹೆಜ್ಜೆ
ಕುಣಿತದ ತುಂಬ ಹಾಡಿನ ಲಜ್ಜೆ
ಧೀಂ ಧೀಂ ತನನ ತಾನಾ........

ಕನಸಿಗೆ ಸೀಮೆಯೂ ಅಲ್ಲ ಆಕಾಶ
ಅದರಾಚೆಗೂ ಹಬ್ಬಿದೆ ನೋಡು ಅವಕಾಶ
ಹಾರಾಡಲು ನೀಡಿ ನಮಗೆ ಕನಸಿನ ರೆಕ್ಕೆ
ಹಾರುವುದನು ಕಲಿಸುತಿದೆ ಬಣ್ಣದ ಹೆಜ್ಜೆ
ಹಕ್ಕಿಯಂತೆ ಹಾರುವ ನಾವು
ಚುಕ್ಕಿಗಳನು ಎಣಿಸುವ ನಾವು
ಗಡಿರೇಖೆಗಳ ಒರೆಸುವ ನಾವು
ಧೀಂ ಧೀಂ ತನನ ತಾನಾ....

ಗೆರೆಗಳನು ಬರೆಯಲು ಕಲಿಸುವ ಬಣ್ಣದ ಹೆಜ್ಜೆ
ಗಡಿಗಳನು ಮೀರಲು ತಿಳಿಸುವ ಬಣ್ಣದ ಹೆಜ್ಜೆ
ಮನಸನ್ನು ಅರಿಯಲು ಕಲಿಸುವ ಬಣ್ಣದ ಹೆಜ್ಜೆ
ಅನಿಸಿಕೆಗೆ ಭಾಷೆಯ ಬೆರೆಸುವ ಬಣ್ಣದ ಹೆಜ್ಜೆ
ಬಾಲ್ಯಕ್ಕೆ ಬೆರಗನು ತುಂಬುವ
ಬರಹಕ್ಕೆ ಭಾವವ ಬೆರೆಸುವ
ಬೇಲಿಯ ಹಂಗನು ತೊರೆಯುವ
ಧೀಂ ಧೀಂ ತನನ ತಾನಾ

Tuesday, April 03, 2018

ಗೋವರ್ಧನ ಗಿರಿಧಾರಿ

ಮಕ್ಕಳು: ಕಥೆ ಮುಗಿದೋಯ್ತಾ? ನಾವು ಹೇಳೋ ಕತೆ ಮುಗೀತು. ಆದ್ರೆ ನೀವು ಬೇಜಾರು ಮಾಡ್ಕೊಳ್ಳೋದೇನೂ ಬೇಕಾಗಿಲ್ಲ. ಇಲ್ಲೇ ಕಾಣ್ತಾ ಇದೆ  ನೋಡಿ, ಗೋವರ್ಧನಗಿರಿ. ಅಲ್ಲಿರೋ ಅಜ್ಜನ್ನ ಕೇಳಿದ್ರೆ ಇನ್ನು ಚೆಂದದ ಕತೆಯನ್ನ ಹೇಳ್ತಾನೆ.

(ಅಜ್ಜ ಮರದಡಿಯಲ್ಲಿ ಕುಳಿತಿರುವನು)
ಮಕ್ಕಳು: ಅಜ್ಜಾ, ಅಜ್ಜಾ ನಮಗೆ ಕೃಷ್ಣನ ಕತೆ ಹೇಳಿ.

ಅಜ್ಜ: ಹಾಂ, ಹೇಳೋಣಂತೆ. ಆದರೆ ಹೇಳಿ, ನಿಮ್ಮ ಕೃಷ್ಣ ಈಗ ಎಲ್ಲಿದ್ದಾನೆ ಅಂತ.

ಮಗು: ಅಜ್ಜಾ,  ಅವ ಈಗ ಅದೇ ಆ ಅಕ್ರೂರ ಅಂತ ಬಂದಿದ್ನಲ್ಲ ಅವನ ಜೊತೆ ಮಧುರೆಗೆ ಹೊರಟಿದ್ದಾನೆ ..

ಅಜ್ಜ: ಮಧುರೆಯ ಕತೆ ನಂಗೆಲ್ಲಿ ಗೊತ್ತು? ಯಾರ್ಯಾರೋ ಹೇಳಿದ್ದನ್ನು ಕೇಳಿ ಹೇಳಬಹುದಷ್ಟೆ. ಅದರಲ್ಲಿ ಸತ್ಯ ಎಷ್ಟು, ಮಿಥ್ಯೆ ಎಷ್ಟು ಒಂದೂ ಗೊತ್ತಿಲ್ಲ. ಆದರೆ ನಾನು ನಿಮಗೆ ಗೋಕುಲದಲ್ಲಿ ನಡೆದ ಒಂದು ಚೆಂದದ ಕಥೆನಾ ಹೇಳ್ತೇನೆ.

ಆಗ ಕೃಷ್ಣ ಚಿಗುರು ಮೀಸೆ ಹುಡುಗ ನೋಡಿ. ಅವನು ಬೀದೀಲಿ ಹೊರಟ ಅಂದ್ರೆ ಅವನ ಹಿಂದೆ ಗೋಪಾಲಕರು, ಗೋಪಿಕೆಯರ ದಂಡೆಯ ಹೊರಟ್ತಿತ್ತು.

(ಕೃಷ್ಣ , ಬಲರಾಮ. ಮತ್ತು ಗೋಪಿಕೆಯರ ಹಿಂಡು ಹೊರಡುವುದು)

ನಂದಗೋಪ: ಇದೇನು ಕೃಷ್ಣ, ಇಂದ್ರನ ಉತ್ಸವಕ್ಕೆ ಒಂದು ವಾರ ಮಾತ್ರ ಇದೆ. ನೀವು ನೋಡಿದರೆ ಹೀಗೆ ನಿರಾಳವಾಗಿ ತಿರುಗುತ್ತಾ ಇರುವಿರಿ?  ತಯಾರಿ ಮಾಡಬಾರದೇನು?

ಕೃಷ್ಣ: ಅಪ್ಪಾ, ಉತ್ಸವದ ಉಸ್ತುವಾರಿಗೆ ಸಣ್ಣ ಇದ್ದಾನಲ್ಲಾ.  ನಮಗೇನು ಕೆಲಸ ಅಲ್ಲಿ?

ನಂ: ಅರೆ ಕೃಷ್ಣ! ಏನಿದು ನಿನ್ನ ಮಾತು? ಕಳೆದಸಲ ಉತ್ಸವದ ಮುಂದಾಳು ಬಲರಾಮನಾಗಿದ್ದ. ಈ ಸಲದ ಸರದಿ ನಿನ್ನದಲ್ಕವೇನು?

ಕೃಷ್ಣ: ನನಗೆ ಇದೆಲ್ಲಾ ಆಗಿಬರದು ತಂದೆ. ನಾನು ಅದರಲ್ಲಿ ಭಾಗಿಯಾಗಲಾರೆ.

ನಂ: ಹಾಗಂದರೇನು? ನಾನೂ ನೋಡ್ತಿದ್ದೇನೆ ನೀನು ಇತ್ತೀಚೆಗೆ ತುಂಬಾ ಸೋಮಾರಿಯಾಗಿರುವೆ. ಗೋಪರನ್ನು ಸೇರಿಸಿಕೊಳ್ಳೋದು, ಬೀದಿ ಬೀದಿ ಅಲೆಯೋದು.  ಅದೆಲ್ಲಾ ನಿಲ್ಲಿಸು. ನಿನ್ನ ಪಟಾಲಂನವರಿಗೆಲ್ಲ ಹೇಳು ಇಂದ್ರೋತ್ಸವದ ತಯಾರಿ ನಡೆಸಲು.

ಕೃ: ಅಪ್ಪಾ, ನಾನೊಂದು ಮಾತು ಕೇಳಲೇನು?

ನಂ: ಕೇಳು.

ಕೃ: ನಾವು ಇಂದ್ರನನ್ನು ಯಾಕೆ ಪೂಜಿಸಬೇಕು?

ನಂ: ಹಾಗಂದರೇನು ಮಗು? ಇಂದ್ರ ನಮ್ಮ ದೇವರು. ಅದಕ್ಕೇ ಪೂಜಿಸಬೇಕು.

ನಂ: ಇಂದ್ರನೇ ಯಾಕೆ?