Monday, August 03, 2020
Saturday, January 11, 2020
ಕವಿತೆ
ವಿರಹದ ಕಡಲನ್ನು ಧರಿಸಿದವರ್ಯಾರೂ
ಸತ್ತಿಲ್ಲ ಸಾಕೀ
ಒಳಗೊಳಗೆ ಕುದಿಯುತ್ತ
ಹೊರಗೆ ಮೊರೆಯುತ್ತಾರೆ
ಪಾಪಿ ಚಂದ್ರ
ಇರುಳೆಲ್ಲ ನೋಡಿ
ನಗುತ್ತಿರುತ್ತಾನೆ
ಅವನು ಬರುವನೆಂದು
ಒಸಗೆಯಾಯಿತು ನನಗೆ
ಸಾಕಿ,
ಇಂದವನ ಮಧುಪಾತ್ರೆಯಲಿ
ನಶೆಯ ಬೆರಸಲುಬೇಡ
ಹಿಡಿದು ಕೇಳಬೇಕಿದೆ
ನನ್ನ ಇರವ
ಮೂಗುತಿ
ವರ್ಷ ಹತ್ತಾಯ್ತು
ಮೂಗು ಬೆಳೆದೋಯ್ತು
ಮೂಗುತಿಗೆ ಗತಿಯಿಲ್ಲ
ಅಮ್ಮ ಅಲವತ್ತುಕೊಳ್ಳುವಾಗಲೆಲ್ಲ
ಅಪ್ಪನ ಕಿವಿ ಮಂದ
ಮೂಗನ್ನು ಒತ್ತಿ, ಒತ್ತಿ
ಮತ್ತೆ ಕೆಲವೊಮ್ಮೆ ಚಿವುಟಿ
ಬೆಳೆದಿದೆಯೆ?
ಎಂದು ಪರೀಕ್ಷಿಸುತ್ತಿದ್ದ ಬಗೆಗೆ
ಗೊಂಡೆಮೂಗು ಇನ್ನಷ್ಟು ಅಗಲ
ಆ ಬೇಸಗೆಯಲ್ಲಿ
ತೊಡೆ, ಸೀರೆ ಸೀಳಿಕೊಂಡು
ಸರಕಾರೀ ಪ್ಲಾಟಿನ
ಗೇರುಬೀಜ ಕೆದರಿ
ನಾಲ್ಕು ಕಾಸು ಹುಟ್ಟಿಸಿದ ಅಮ್ಮ
ತಾಮ್ರಕ್ಕೆ ಚಿನ್ನ ಬೆರಸುವ
ತವರಿನ ಬಿಂಬಲ ಶೆಟ್ಟಿಯ ಕೈಗಿಟ್ಟು
ಮೂಗುಬೊಟ್ಟಿನ ವೀಳ್ಯಕ್ಕೆ
ಸೈ ಎನಿಸಿಬಿಟ್ಟಳು
ಐಸಿರಿಯ ತವರು
ಅತ್ತೆಗೂ ಆರರ ಮಗಳು
ಅವಳಿಗೂ ಅಂದೇ
ಮೂಗುಚುಚ್ಚುವ ಶಾಸ್ತ್ರ
ಬೆಳ್ಳಿಯ ಹರಿವಾಣದಲಿ
ವಜ್ರದ ಮೂಗುಬೊಟ್ಟು
ರೇಶಿಮೆಯ ಹೊದ್ದ ರತ್ನಾಕರ
ಹೇಳಿದ ಸಮಯಕ್ಕೆ ಹಾಜರಾಗಿದ್ದ
ನಾನು- ಅವಳು
ಬಿಂಬಲ-ರತ್ನಾಕರ
ತಾಮ್ರ- ವಜ್ರ
ಯಾವುದೂ ಏನೂ ತಾಳೆಯಾಗದೇ
ಬೆಳೆದ ಮೂಗಿನ ಹೆದರಿಕೆಯಲಿ
ನಡುಗುತ್ತ ಕುಳಿತೆ
ಕಣ್ಣು ಮಂದವಾದ ಬಿಂಬಲ
ಎಲ್ಲೆಲ್ಲೋ ಚುಚ್ಚಿ,ಮತ್ತೆ ಸರಿಪಡಿಸಿ
ಶಾಸ್ರ್ತ ಮುಗಿಸುವಾಗ
ವಜ್ರದ ಮೂಗುತಿ
ಅವಳ ಮೂಗಲ್ಲಿ
ರಾರಾಜಿಸುತ್ತಿತ್ತು
ಮತ್ತೆ ರಶಿಗೆ, ಗೂಂಜು, ಔಷಧಿ
ಒಗ್ಗಿಕೊಳ್ಳಲು ಹಠಮಾಡಿದ
ಬೆಳೆದ ಮೂಗು
ಈಗಲೂ ಆಗಾಗ ಬಟ್ಟೆಗೆ ಸಿಕ್ಕಿ
ಬಾಲ್ಯ ನೆನಪಿಸುತ್ತಲೇ ಇರುವುದು
ಮೂಗಿನ ನತ್ತು
ಎಲ್ಲಾ ಸರಿ
ಮೂಗಿಗೂ ಯಾಕೆ ಚಿನ್ನ?
ಎನ್ನುವ ಮಗನ ಮಾತಿಗೆ
ನತ್ತು ತೆಗೆದರೆ ತೂತು ಕಾಣುವುದು
ಎಂದು ನಗುತ್ತೇನೆ
ಒಡವೆಯೊಂದಿಗೆ
ಕನಸೊಂದೇ ಅಲ್ಲ
ಕಹಿನೆನಪುಳೂ....
ಎರಕಗೊಂಡಿವೆ
ತೆಗೆದಿಡಲಾರದಂತೆ....
Friday, January 10, 2020
ಕವಿತೆ
ಅಮ್ಮನ ಕೈತುತ್ತು ತಿಂದ ನೆನಪಿಲ್ಲ
ಹಗಲಿರುಳು ಹೈರಾಣಾಗುವ ಅಮ್ಮನಿಗೆ
ಮಕ್ಕಳ ಹಸಿವೆಯ ಪರಿವೆಯಿರಲಿಲ್ಲ
ಬೆಳೆದಂತೆಲ್ಲ ನನ್ನೊಂದಿಗೆ ಹಠವೂ ಬೆಳೆಯಿತು
ನಾನು ತಿನ್ನುವ ತುತ್ತು ನನ್ನದೇ ಇರಬೇಕು
ಬೆರಳು ಸುಟ್ಟು ಹೆಪ್ಪಳಿಕೆಯೆದ್ದರೂ
ಕತ್ತರಿಸಿ ನೆತ್ತರು ಸೋರಿದರೂ
ನನ್ನ ತುತ್ತ ನಾನೇ ತಿನ್ನುವ ಹಠ
ಕೈತುತ್ತ ಕನಸಾಗಿಯೇ ಉಳಿಸಿತ್ತು
ಸುತ್ತ ಕಂದಮ್ಮಗಳ ಕೂರಿಸಿ ತುತ್ತು
ಕೊಟ್ಟದ್ದಲ್ಲದೇ ತಿಂದ ನೆನಪಿಲ್ಲ
ನಿನಗೊಂದು ಕೈತುತ್ತು ಉಣಿಸಬೇಕಲ್ಲ
ಅವನ ಸಾಲುಗಳಿಗೆ ಹೃದಯವೇ ಕಂಪಿಸಿತು!
ಮುಟ್ಟು ನಿಲ್ಲುವ ಪ್ರಾಯದಲ್ಲಿಯೂ
ಕೆನ್ನೆ ಕೆಂಪೇರಿತು, ಮರುಗಳಿಗೆಯೇ
ಕಣ್ಣಿನಂಚಲೊಂದು ಸಣ್ಣಹನಿ ಜಾರಿತು!
ಕನಸಿದು ನನಸಾಗದೆಂಬುದು
ನಮಗಿಬ್ಬರಿಗೂ ಗೊತ್ತು, ಆದರೂ
ಎಂದಾದರೊಂದು ದಿನ ಅವನ ತಟ್ಟೆಯ ತುತ್ತ
ಜನರರಿಯದಂತೆ ತೆಗೆದು ತಿನ್ನಬೇಕು
ಅವನ ಕೈಸೋಕಿದ ತುತ್ತು ನನ್ನದಾಗಬೇಕು
Monday, April 22, 2019
ಎಲ್ಲರಿಗೂ ವಿಶ್ವಪುಸ್ತಕ ದಿನದ ಶುಭಾಶಯಗಳು. ಈ ಸಂದರ್ಭದಲ್ಲಿ ನನ್ನ ಕೆಲವು ಅನಿಸಿಕೆಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ಪುಟ್ಟ ಮಕ್ಕಳ ಪಾಲಕರು ಖಂಡಿತ ಓದಿ. ಪುಸ್ತಕವೇ ಆಸ್ತಿಯಾಗಿರಬೇಕಾದ ಅಕಾಡೆಮಿಕ್ ವಲಯದವರಲ್ಲಿ ಕೂಡಾ ಪುಸ್ತಕಗಳ ಬಗ್ಗೆ ತೀರ ಅನಾಸಕ್ತಿಯಿರುವುದನ್ನು ನಾನು ಗಮನಿಸಿದ್ದೇನೆ. ಅವರಿವರಿಂದ ಕೊಡುಗೆಯಾಗಿ ಬರುವ ಪುಕ್ಕಟೆ ಪುಸ್ತಕಗಳನ್ನು ಹರಳಿನ ಕಪಾಟಿನಲ್ಲಿ ಹಿಡಿದಿಟ್ಟು ಶೋ ಕೊಡುವ ಜನರೇ ಹೆಚ್ಚಿದ್ದಾರೆ. ಅನಿವಾರ್ಯವಾಗಿ ಪುಸ್ತಕಕ್ಕೆ ಹಣ ಕೊಡಬೇಕಾದಾಗ ಆ ಹಣವು ಉಪಯೋಗಕ್ಕಿಲ್ಲದೇ ಖರ್ಚಾಯಿತೆಂದು ಕೊರಗುವುದನ್ನು ನಾನು ನೋಡಿದ್ದೇನೆ. ಇನ್ನು ಕೆಲವರಿಗೆ ಓದುವ ಬಗ್ಗೆ ಅತ್ಯಾಸಕ್ತಿಯಿದ್ದರೂ ಆ ಆಸೆಯೆಲ್ಲವೂ ಲೈಬ್ರರಿಯಿಂದ ಪಡೆದ ಅಥವಾ ಬೇರೆಯವರಿಂದ ಎರವಲು ಪಡೆದ ಪುಸ್ತಕಗಳಿಂದಲೇ ಪೂರೈಕೆಯಾಗಬೇಕೆಂಬ ತಪ್ಪು ಗ್ರಹಿಕೆಯಲ್ಲಿರುತ್ತಾರೆ. ಇನ್ನು ಕೆಲವರಿಗಂತೂ ತಮ್ಮ ಕ್ಷೇತ್ರಕ್ಕೆ ಸಂಬಂಧಿಸದ ಪುಸ್ತಕ ಓದುವುದು ಸಮಯದ ವ್ಯರ್ಥ ಎಂದೇ ಭಾವಿಸುತ್ತಾರೆ. ಓದಿನ ಬಗೆಗೆ ನಮ್ಮ ಭಾವನೆಗಳೇನೇ ಇರಲಿ. ಮಕ್ಕಳಿಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ತಿಳಿದಿರಬೇಕಾಧ್ದು ಅವಶ್ಯ. ತಿಂಡಿ, ಬಟ್ಟೆ, ಅಲಂಕಾರಿಕ ಸಾಮಗ್ರಿಗಳಂತೆ ಪುಸ್ತಕಗಳು ಕೂಡಾ ಮಗುವಿನ ಪ್ರಾಥಮಿಕ ಅವಶ್ಯಕತೆಯಾಗಿದೆ. ಓದುವುದೆಂದರೆ ಅದು ಮಾತನಾಡುವುದೆಂದರೆ ಮುಂದಿನ ಭಾಗ. ಇಡಿಯ ಜಗತ್ತೇ ಮಾತು ಕಳಕೊಳ್ಳುತ್ತಿರುವ ಇಂದಿನ ಸನ್ನಿವೇಶದಲ್ಲಿ ಮಾತನಾಡುವ ಅವಕಾಶವನ್ನು ಓದು ಮಕ್ಕಳಿಗೆ ನೀಡುತ್ತದೆ. ಪುಸ್ತಕಗಳ ಆಯ್ಕೆ ಮಾಡುವಾಗ ತೀರ ಎಚ್ಚರಿಕೆ ಅಗತ್ಯ. ಪ್ರತಿಯೊಂದು ಮಗುವಿನ ಆಸಕ್ತಿಯ ಕ್ಷೇತ್ರ ವಿಭಿನ್ನವಾಗಿರುತ್ತದೆ. ಅದರ ಆಸಕ್ತಿಯನ್ನು ಅರಿಯುವುವವರೆಗೆ ವಿಭಿನ್ನ ಮಾದರಿಯ ಪುಸ್ತಕಗಳು ಮನೆಗೆ ಬರುತ್ತಿಲೇಬೇಕು. ಇಷ್ಟಪಟ್ಟು ನೀವು ಆರಿಸಿದ ಡ್ರೆಸ್ ನ್ನು ನಿಮ್ಮ ಮಗು ಧರಿಸಲು ನಿರಾಕರಿಸಿದಾದ ನೀವೇನು ಮಾಡುತ್ತೀರಿ? ನಿಮಗಿಷ್ಟ ಕಂಡ ಹತ್ತಿರದವರಿಗೆ ನೀಡುತ್ತಿರುವ. ಇಲ್ಲೂ ಅದೇ ನಿಯಮ ಪಾಲಿಸಿ. ಅದನ್ನು ಇಷ್ಟಪಡುವ ಮಕ್ಕಳಿಗೆ ಉಡುಗೊರೆಯಾಗಿ ನೀಡಿ. ಬಲವಂತದಿಂದ ಮಕ್ಕಳನ್ನು ಓದಿಸಲಾಗದು. ಅವರಿರುವ ಸ್ಥಳದ ಸುತ್ತಲೂ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಹರಡಿರಲಿ. ಕೆಲವೇ ದಿನಗಲ್ಲಿ ಅದನ್ನವರು ಪ್ರೀತಿಯಿಂದ ಎದೆಗೊತ್ತಿಕೊಳ್ಳುವ ವಿಸ್ಮಯಕ್ಕೆ ನೀವೇ ಬೆರಗಾಗುತ್ತೀರಿ. ದಿನದ ಕೊನೆಯ ಸಂಜೆಯಲ್ಲಿ ಹೀಗೇ ಮನೆಮದಿಯೆಲ್ಲ ಒಂದೊಂದು ಪುಸ್ತಕ ಎತ್ತಿಕೊಂಡು ಮೌನವಾಗುವ ಸಂಪ್ರದಾಯವನ್ನು ಪಾಲಿಸಿ. ಹೀಗೆ ಓದುವುದರಿಂದ ಪರೋಕ್ಷವಾದ ಅನೇಕ ಪ್ರಯೋಜನಗಳಿವೆ. ಓದು ಮಕ್ಕಳ ಮನದೊಳಗೊಂದು ಭಾವಕೋಶವನ್ನು ಬೆಳೆಸುತ್ತದೆ. ಪಠ್ಯಪುಸ್ತಕದ ಓದಿನ ವೇಗವನ್ನು ಅತಿಶಯವಾಗಿ ಹೆಚ್ಚಿಸುತ್ತದೆ. ಅಂತರ್ಜಾಲಗಳು ತೆರೆದಿಡುವ ಭ್ರಮಾಲೋಕದಿಂದ ವಾಸ್ತವಕ್ಕಿಳಿಯಲು ಸಹಾಯ ಮಾಡುತ್ತದೆ. ಅವರ ಬಿಡುವಿನ ವೇಳೆಯನ್ನು ಮೌಲ್ಯಯುತವಾಗಿ ಕಳೆಯುವ ಬಗೆಯನ್ನು ಕಲಿಸುತ್ತದೆ. ಜೀವನದ ಕಠಿಣ ಸನ್ನಿವೇಶದಲ್ಲಿ ಉತ್ತಮ ಜೊತೆಗಾರನಾಗುತ್ತದೆ. ಎದೆಯೊಳಗೊಂದು ಆರ್ದೃ ಲೋಕವನ್ನು ಸೃಷ್ಟಿಸುತ್ತದೆ. ತಮ್ಮ ಆಸಕ್ತಿಯ ಕ್ಷೇತ್ರವನ್ನು ಗುರುತಿಸಲು ನೆರವಾಗುತ್ತದೆ. ಗುರಿಸಾಧನೆಗೆ ಮಾರ್ಗದರ್ಶಿಯಾಗುತ್ತದೆ. ಧರಿಸುವ ಬಟ್ಟೆ ಚಿಕ್ಕದಾದಾಗ ಬದಿಗಿಡುವಂತೆ ಬೆಳೆಯುವ ಮಕ್ಕಳು ಹಿಂದಿನ ಓದನ್ನು ಬದಿಗೆ ಆರಿಸುತ್ತಾರೆ. ಅದನ್ನೇ ಪದೇಪದೇ ಓದಲು ಒತ್ತಾಯೊಸದಿರಿ. ಕನಿಷ್ಠ ವರ್ಷಕ್ಕೆ ಎರಡು ಬಾರಿಯಾದರೂ ದೊಡ್ಡ ಪುಸ್ತಕದ ಮಳಿಗೆಯೊಳಗೆ ನಿಲ್ಲಿಸಿ ಬೇಕಾದ ಪುಸ್ತಕಗಳನ್ನು ಬಾಚಿಕೊಳ್ಳಲು ಹೇಳಿ. ಹಣದ ಲೆಕ್ಕಾಚಾರ ಬೇಡ. ಅದಕ್ಕಿಂತ ದುಪ್ಪಟ್ಟು ಪ್ರತಿಫಲವನ್ನು ಪುಸ್ತಕಗಳು ಖಂಡಿತ ನಿಮಗೆ ನಿಉಡುತ್ತವೆ. ಮನೆಯಲ್ಲಿ ಮಕ್ಕಳಿಗೆಂದೇ ಪ್ರತ್ಯೇಕವಾದ ಪುಟ್ಟ ಲೈಬ್ರರಿಯಿರಲಿ. ಮನೆಗೆ ಬಂದವರೊಂದಿಗೆ ನಿಮ್ಮ ಮಕ್ಕಳು ಈಗ ಓದುತ್ತಿರುವ ಪುಸ್ತಕದ ಬಗ್ಗೆ ಹೇಳಿ. ಅವರ ಪುಸ್ತಕ ಸಂಗ್ರಹವನ್ನೂ ನಿಮ್ಮ ಮನೆಯ ಅಪರೂಪದ ವಸ್ತುವಿನಂತೆ ತೋರಿಸಿ. ಪುಟ್ಟ ಮಕ್ಕಳಿದ್ದರೆ ಅವು ಮಲಗುವ ಮೊದಲು ಹಾಸಿಗೆಯ ತುಂಬೆಲ್ಲ ಪುಸ್ತಕಗಳನ್ನು ಹರಡಿ, ಅದನ್ನು ಆಟವಾಡುತ್ತಲೇ ಅವರು ನಿದ್ರಿಸಲಿ. ಓದು ಕಲಿಸಲು ತಾಳ್ಮೆ, ಆಯ್ಕೆ, ಆಸಕ್ತಿಯ ಅರಿಯುವಿಕೆ, ಮಾದರಿಗಳು ಮುಖ್ಯವೆಂದು ನೆನಪಿಡಿ. ಮಕ್ಕಳ ಹುಟ್ಟುಹಬ್ಬಕ್ಕೆ ಡ್ರೆಸ್ ಗೆಂದು ಸಾವಿರಾರು ರೂಪಾಯಿ ವ್ಯಯಿಸುವ ನಾವು ಅದರರ್ಧ ಹಣವನ್ನು ಪುಸ್ತಕಗಳಿಗೆ ಮೀಸಲಿಟ್ಟರೂ ಸಾಕು. ಮಕ್ಕಳು ಖಂಡಿತ ಒಳ್ಳೆಯ ಓದುಗರಾಗುತ್ತಾರೆ. ಎರವಲು ಪುಸ್ತಕಗಳು ಬಾಡಿಗೆಯ ಮನೆಯಂತೆ. ಓದುವ ಸುಖವನ್ನು ಇಡಿಯಾಗಿ ನೀಡಲಾರವು. ಸ್ವಂತ ಪುಸ್ತಕ ಖರೀದಿಸಿ, ಮಕ್ಕಳ ಓದನ್ನು ಪ್ರೋತ್ಸಾಹಿಸಿ. ಚಿಕ್ಕ ಮಕ್ಕಳಿರುವವರು ಮೇಲೆ ಹೇಳಿರುವುದನ್ನೆಲ್ಲ ಪಾಲಿಸಿದರೆ ಖಂಡಿತ ನಿಮ್ಮ ಮಕ್ಕಳ ಓದಿನ ಚಿಂತೆಯನ್ನು ಮೀರಬಹುದು.
-
ನಾನಾಗ ಪುಟ್ಟ ಹುಡುಗಿ. ನನಗೊಬ್ಬಳು ಪುಟ್ಟ ಗೆಳತಿ. ಇಬ್ಬರಿಗೂ ಅದೆಂಥದ್ದೋ ಸೆಳೆತ. ನಮ್ಮ ಅಂದಿನ ದಿನಚರಿಯೆಂದರೆ ಪ್ರತಿದಿನ ನಾವಿಬ್ಬರೂ ಹೊಸದೊಂದು ಕವನ ಬರೆಯುತ್ತಿದ್ದೆವು...
-
UNCATEGORIZED ಸುಡುವ ಕರಾವಳಿಗೆ ಕರಬೂಜವೊಂದೇ ಪರಿಹಾರ..!! ಸುಧಾ ಆಡುಕಳ ಅವನು ದಿನವೂ ನನಗೆ ಟಾಟಾ ಹೇಳಿ ಕಾಲೇಜಿಗೆ ಹೊರಡುತ್ತಾನೆ. ಸಂಜೆ ಎಲ್ಲರೊಂದಿಗೆ ಮನೆ ಸೇ...
-
೧. ನಾವು ಈ ಮುಸ್ಸಂಜೆಯನ್ನೂ ಕಳಕೊಂಡಿದ್ದೇವೆ ನೀಲಿ ರಾತ್ರಿಯು ಈ ಜಗವ ಕವಿಯುವ ಮೊದಲ ಜಾವದಲಿ ನಾವು ಕೈಯ್ಯಲ್ಲಿ ಕೈಯಿಟ್ಟು ನಡೆವುದನು ಈ ಸಂಜೆ ಯಾರೂ ನೋಡಲಿಲ್ಲ ಕಿಟಕಿಯಿ...