Tuesday, November 05, 2024

ಮುದಿತನ ಮತ್ತು ಯೌವ್ವನ

ಮುದಿತನ ಮತ್ತು ಯೌವ್ವನ ಒಟ್ಟಿಗೆ ವಾಸಿಸಲಾರವು
ಯೌವ್ವನವೆಂದರೆ ಸಂತಸದ ಬುಗ್ಗೆ, ಮುದಿತನವೆಂದರೆ ಕೊನೆಯಿರದ ಕಾಳಜಿ
ಯೌವ್ವನ ಬೇಸಿಗೆಯ ಮುಂಜಾನೆ, ಮುದಿತನ ಚಳಿಗಾಲದ ಸಂಜೆ
ಯೌವ್ವನವೆಂದರೆ ಬೇಸಿಗೆಯ ಉತ್ಸಾಹ, ಮುದಿತನವೆಂದರೆ ಶೀತಗಾಳಿಯ ಕೊರೆತ
ಯೌವ್ವನವೆಂದರೆ ಕ್ರೀಡೋತ್ಸಾಹ, ಮುದಿತನವೆಂದರೆ ಏದುಸಿರು
ಯೌವ್ವನವೆಂದರೆ ಸದಾ ಚಟುವಟಿಕೆ, ಮುದಿತನವೆಂದರೆ ಹೆಳವನ ಹೆಜ್ಜೆ
ಯೌವ್ವನವೆಂದರೆ ಬೆಚ್ಚಗಿನ ದಿಟ್ಟತನ, ಮುದಿತನವೆಂದರೆ ತಂಪಾದ ನಿಶ್ಶಕ್ತಿ
ಮುದಿತನವೇ, ನೀನೆಂದರೆ ಹೇವರಿಕೆ, ಯೌವ್ವನವೇ, ನೀನೆಂದರೆ ಆರಾಧನೆ
ಓ ನನ್ನ ಪ್ರೀತಿಯೇ, ನೀನೆಷ್ಟು ತಾರುಣ್ಯಪೂರ್ಣ!
ಮುದಿತನವೇ, ನೀನೆಂದರೆ ಅದೆಷ್ಟು ತಿರಸ್ಕಾರ!
ಬದುಕ ಕಾಯುವ ಕುರುಬ ನೀನಿನ್ನೂ ದೂರದಲ್ಲಿರುವೆ ಎಂದೇ ಹೇಳುತ್ತಾನೆ
        -ವಿಲಿಯಂ ಶೆಕ್ಸಪಿಯರ್


Tuesday, October 22, 2024

ಮತ್ತೆ, ಮತ್ತೆ ಬ್ರೆಕ್ಟ್

ಕವಿತೆಯೆಂಬುದು ಮನದೊಳಗೆ ಇಳಿದರೆ ಮಗುವೊಂದು ಮನೆಗೆ ಬಂದಂತೆ. ಎಲ್ಲಿ ಏನು ಮಾಡುತ್ತಿದ್ದರೂ ಗಮನ ಸದಾ ಅದರ ಮೇಲೆಯೇ ಇರುವುದು. ಕವಿತೆಯ ಓದುಗರು ಕಂಡಾಗಲೆಲ್ಲ ಅದರ ಬಗ್ಗೆಯೇ ಮಾತನಾಡುವುದು ಇತ್ತೀಚಿನ ಚಾಳಿಯೇ ಆಗಿಹೋಗಿದೆ. ಹಾಗೆ ಮಾತನಾಡುವಾಗ ಪುಟ್ಟ ಗೆಳತಿ ಶೀತಲಾ ಕವಿತೆ ಕಾಲದ ಕಥನ ಮಾತ್ರವಲ್ಲ, ಕಾಲವನ್ನು ನಿಯಂತ್ರಿಸುವ ಹೊಸ ಆಲೋಚನೆಗಳ ಬೀಜವೂ ಹೌದು ಎಂಬ ಒಳನೋಟವನ್ನು ನೀಡಿದ್ದಳು. ಬ್ರೆಕ್ಟ್, ನೆರುಡಾ, ಮಹಮ್ಮದ್ ದರವೇಶ, ಅಕ್ಕ, ಅಲ್ಲಮ, ಕಬೀರ ಇವರನ್ನೆಲ್ಲ ಓದುವಾಗ ಈ ಮಾತು ಎಷ್ಟು ನಿಜ ಅನಿಸಿತ್ತು.
ಕಗ್ಗತ್ತಲ ಕಾಲದಲಿ ಹಾಡುವುದು ಉಂಟೆ?
ಹೌದು, ಹಾಡುವುದು ಉಂಟು
ಕಗ್ಗತ್ತಲ ಕಾಲದ ಕುರಿತು
ಎನ್ನುತ್ತಾನೆ ಬ್ರೆಕ್ಟ್. ಜರ್ಮನಿಯ ಸರ್ವಾಧಿಕಾರಿಗಳ ವಿರುದ್ಧ ಎಂತೋ ಅಂತೆಯೇ ಕಮ್ಯುನಿಸ್ಟಗಳನ್ನೂ ಲೇವಡಿ ಮಾಡದೇ ಬಿಟ್ಟವನಲ್ಲ ಅವನು. ನಾಟಕದಲ್ಲಿ ಎಪಿಕ್ ಥಿಯೇಟರ್ ಎಂಬ ಹೊಸಪ್ರಕಾರವನ್ನೇ ಸೃಸ್ಟಿಸಿದವನು. ಇಂದಿಗೂ ಅವನ ಕವಿತೆಗಳನ್ನು, ಬರಹಗಳನ್ನು ಓದಿದರೆ ವರ್ತಮಾನದಲ್ಲಿಯೇ ನಿಂತು ಮಾತನಾಡುತ್ತಿದ್ದಾನೆ ಎಂಬಷ್ಟು ಸಾರ್ವಕಾಲಿಕ ಕವಿ ಬ್ರೆಕ್ಟ್. ಬ್ರೆಕ್ಟ್ನ ಕವಿತೆಗಳನ್ನಿಟ್ಟುಕೊಂಡು ಹೆಣೆದ ರಂಗಪ್ರಸ್ತುತಿಯನ್ನು ನೋಡುವ ಅವಕಾಶವೊಂದನ್ನು  ಕುಂದಾಪುರ ಸಮುದಾಯವು ಒದಗಿಸಿಕೊಟ್ಟಿತು. ಡಾ. ವೆಂಕಟೇಶ ಅವರು ಬ್ರೆಕ್ಟ್ ಕವಿತೆಗಳನ್ನು ಆಳವಾಗಿ ಅಭ್ಯಸಿಸಿದವರು. ಅವರ ಸಂಶೋಧನಾ ಪ್ರಬಂಧವೂ ಬ್ರೆಕ್ಟ್ ಸಾಹಿತ್ಯವನ್ನು ಕುರಿತಾದದ್ದು. ಹಾಗಾಗಿಯೇ ಬ್ರೆಕ್ಟ್ ಕವಿತೆಗಳ ಸಾಗರದಿಂದ ವರ್ತಮಾನಕ್ಕೆ ಸಲ್ಲಬೇಕಾದ ಸೊಲ್ಲುಗಳನ್ನು ಆಯ್ದು ಪೋಣಿಸಲು ಅವರಿಗೆ ಸಾಧ್ಯವಾಗಿದೆ. ಅವರು ಆಯ್ದುಕೊಂಡ ಘನಪಾಠವನ್ನು ಕಟ್ಟಕಡೆಯ ಪ್ರೇಕ್ಷಕನಿಗೂ ಮುಟ್ಡಿಸಿಯೇ ತೀರಬೇಕೆಂಬ ಕಾಳಜಿಯಿಂದ ಒಂದಕ್ಷರವನ್ನೂ ಕಡೆಗಾಣಿಸದೇ ನುಡಿದವರು ಉದಯ ಅಂಕರವಳ್ಳಿ. ಬ್ರೆಕ್ಟ್ ನ ಜೀವನ ಮತ್ತು ಕವಿತೆಗಳ ಕೊಲಾಜ್ ನ್ನು ರಂಗಭಾಷೆಯಲ್ಲಿ ತೆರೆದಿಡುವುದು ಸುಲಭದ ಕೆಲಸವೇನೂ ಅಲ್ಲ. ಬ್ರೆಕ್ಟ್ ನ ದೈಹಿಕ ಭಾಷೆ ಮಾತ್ರವಲ್ಲ, ಕಾವ್ಯದ ಘಮವನ್ನೂ ಒಳಗೆ ಇಳಿಸಿಕೊಂಡಾಗ ಮಾತ್ರ ಈ ನಟನೆ ಸಾಧ್ಯ. ಉದಯ್ ಅವರ ಪರಿಶ್ರಮ ಪ್ರದರ್ಶನದುದ್ದಕ್ಕೂ ಕಾಣಿಸುತ್ತದೆ. ಬೆಳಕಿನ ವಿನ್ಯಾಸದಲ್ಕಾದ ತಾಂತ್ರಿಕ ತೊಡಕುಗಳು ಅವರನ್ನು ಹೆಚ್ಚೇನೂ ಬಾಧಿಸದಿರುವುದು ಈ ಕಾರಣಕ್ಕೆ. ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮವನ್ನು ಓದುವ ಇಂದಿನ ಯುವಜನಾಂಗ ನೋಡಲೇಬೇಕಾದ ರಂಗಪ್ರಸ್ತುತಿಯಿದು. ಸಾಮಾನ್ಯ ಪ್ರೇಕ್ಷಕರನ್ನೂ ಒಳಗೊಳ್ಳುವ ನಾಟಕವಿದು. ಆದಾಗ್ಯೂ ಬ್ರೆಕ್ಟ್ ಕೇವಲ ಕಟುವಿಮರ್ಶಕ ಮಾತ್ರವಲ್ಲ, ಅವನೊಳಗೊಬ್ಬ ವಿಡಂಬನೆಯ ವಿಟಿ ಕೂಡಾ ಇದ್ದ. ಅಂತಹ ಒಂದೆರಡು ಸನ್ನಿವೇಶಗಳನ್ನು ನಡುವೆ ಸೇರಿಸಿಕೊಂಡರೆ ಹಾಸ್ಯ ನಟನೆಯಲ್ಲಿ ಸೈ ಎನಿಸಿಕೊಂಡ ಉದಯ್ ಸ್ವಲ್ಪ ಉಸಿರೆಳೆದುಕೊಳ್ಳಬಹುದು, ಪ್ರೇಕ್ಷಕರೂ  ಕೊಂಚ ನಿರಾಳತೆಯಿಂದ ಇನ್ನೊಂದು ಘನಪಾಠಕ್ಕೆ ಅಣಿಗೊಳ್ಳಬಹುದು ಅನಿಸಿತು. ಸಂಗೀತ ಸ್ವಲ್ಪ ಲೌಡ್ ಅನಿಸಿತು. ಮೊದಲ ಪ್ರಯೋಗವಾದ್ದರಿಂದ ಮುಂದೆ ಖಂಡಿತಕ್ಕೂ ಮಾರ್ಪಾಡಾದೀತು. 
ಇಂಥದೊಂದು ಚಂದದ ಮತ್ತು ಸಾಂದರ್ಭಿಕವಾದ ರಂಗಪ್ರಸ್ತುತಿಯನ್ನು ನೋಡುವ ಅವಕಾಶ ಕಲ್ಪಿಸಿದ ಕುಂದಾಪುರ ಸಮುದಾಯಕ್ಕೆ, ಬ್ರೆಕ್ಟನನ್ನು ರಂಗಕ್ಕಿಳಿಸುವ ಸಾಹಸಕ್ಕೆ ಮುಂದಾದ ಇಡಿಯ ನಾಟಕ ತಂಡಕ್ಕೆ, ನಿದ್ದೆಯಿಂದೆಬ್ಬಿಸಿ ನಾಟಕಕ್ಕೆ ಕರೆದುಕೊಂಡು ಹೋದ ಶ್ರೀಪಾದಣ್ಣನಿಗೆ ರಾಶೀ ಪ್ರೀತಿ.

Monday, September 23, 2024

ಇದೊಂದು ಸಿರೀಸನ್ನು ನೋಡು ಎಂದು ಮಗ ನೆನಪಿಸುತ್ತಲೇ ಇದ್ದ. ಕಾಲೇಜು, ಮನೆ, ನೆಂಟರು, ಹಬ್ಬ ಎಂದೆಲ್ಲ ಕೆಲಸಗಳ ಗೊಂಡಾರಣ್ಯದಲ್ಲಿ ಕಳೆದುಹೋದ ನಾನು ಅವನ ಮಾತನ್ನು ಕಿವಿಯ ಮೇಲೇ ಹಾಕಿಕೊಳ್ಲಕುತ್ತಿರಲಿಲ್ಲ. ಮೂರು ದಿನಗಳ ಹಿಂದೆ ಮೈಯ್ಯೇರಿ ಬಂದ ಜ್ವರ ಮಂಚಬಿಟ್ಟು ಇಳಿಯದಂತೆ ಕಟ್ಟಿಹಾಕಿದಾಗ ಭಾನುವಾರವಿಡೀ ಬೆಚ್ಚಗೆ ಕುಳಿತು ಸಿರೀಸ್ ನೋಡತೊಡಗಿದೆ.
ಎಂ. ಟಿ. ವಾಸುದೇವ್ ನಾಯರ್ ಮಲೆಯಾಳಂ ಸಾಹಿತ್ಯದಲ್ಲಿ ಮರೆಯಲಾಗದ ಹೆಸರು. ಸಿನೆಮಾ ಕ್ಷೇತ್ರದಲ್ಲಿಯೂ ಕೆಲಸ ಮಾಡಿದವರು ಅವರು. ಅವರ ಕಥೆಗಳ ದೃಶ್ಯರೂಪವೇ ಈ ಮನೋರತ್ನಂಗಳ್. ಎಂ. ಟಿ. ಯವರು ಕಟ್ಟಿಕೊಡುವ ಕಥಾಜಗತ್ತು, ಮನುಷ್ಯಲೋಕದ ವ್ಯಾಪಾರಗಳು, ಹೆಣ್ಣ ಕಣ್ಣೋಟದ ಒಳಪದರುಗಲ ಅನಾವರಣ, ಇಡಿಯ ಕೇರಳದ ಸಂಸ್ಕೃತಿಯ ಅನಾವರಣ ಎಲ್ಲವೂ ಒಪ್ಪ ಓರಣವಾಗಿವೆ. ಕತೆಗಳು ಸಹಜ ದೃಶ್ಯಗಳಾಗಿ ಕಣ್ಮುಂದೆ ಬರಲು ಕಾರಣ ಇಲ್ಲಿ ನಟಿಸಿರುವ ನಟ/ನಟಿಯರ ಪ್ರಬುದ್ಧ ನಟನೆ. ದಕ್ಷಿಣದ ಅನೇಕ ಪ್ರಸಿದ್ಧ ತಾರೆಯರೂ ಇಲ್ಲಿದ್ದಾರೆ. ಕಮಲಹಾಸನ್ ಅವರ ನಿರೂಪಣೆಯಿದೆ. ಕನ್ನಡದಲ್ಲಿಯೂ ಡಬ್ಬಿಂಗ್ ಇದೆ. ಆದರೆ ಅದರ ಗುಣಮಟ್ಟ ಅಷ್ಟೇನೂ ಒಳ್ಳೆಯದಿಲ್ಲ. ಹಾಗಿದ್ದರೂ ಸಂಗೀತ, ಕತೆಯ ಆವರಣದ ನೈಜತೆ, ಸಾಂದರ್ಭಿಕ ಮತ್ತು ಸಹಜ ನಟನೆ ಕತೆಗಳ ಹೂರಣವನ್ನು ಒಂದಿಷ್ಟೂ ಮುಪ್ಪಾಗದಂತೆ ನಮ್ಮೊಳಗೆ ಇಳಿಸುತ್ತವೆ. ಹೊಸದಾಗಿ ಕತೆ ಬರೆಯುತ್ತಿರುವ ನಮ್ಮ ಸ್ನೇಹಿತರಂತೂ ಖಂಡಿತ ನೋಡಲೇಬೇಕಾದ ಸರಣಿ. ನೀವು ನೋಡಿಲ್ಲವಾದರೆ ಬೇಗನೆ ನೋಡಿ. ಜೀ೫ ನಲ್ಲಿ ಲಭ್ಯವಿದೆ.
ಮಗನಿಗೆ ಕರೆಮಾಡಿ ಹತ್ತಾರು ಸಲ ಚೆನ್ನಾಗಿದೆ ಎಂದೆ. ಅವನು ನಕ್ಕು" ಜ್ವರ ಒಳ್ಳೆಯದೆ" ಎಂದ!

Wednesday, September 04, 2024

ಗುರುವೇ ನಿಮಗೆ ಶರಣು

ಶಾಲೆ ಗೀಲೆ ಬೇಡ ಅಂದುಕೊಂಡು ಮನೆಯಲ್ಲಿರುವ ಮುದ್ದಿನ ಕರುವನ್ನು ಸಾಕಿಕೊಂಡು ಇರೋಣ ಅಂತ ಇದ್ದಬಿಟ್ಟಿದ್ದೆ. ಪೇಟೆಯಲ್ಲಿರುವ ಅಜ್ಜನ ಮನೆಯಿಂದಲಾದರೂ ಶಾಲೆಗೆ ಹೋಗಲೆಂದು ಬಿಟ್ಟು ಬಂದರೆ ಊಟಮಾಡದೇ ಎಲ್ಲರನ್ನೂ ಹೆದರಿಸಿ ಹಳ್ಳಿಗೆ ಓಡಿಬಂದಿದ್ದೆ. ಆಗೆಲ್ಲ ಮನೆಮನೆಗೆ ಮಕ್ಕಳ ಗಣತಿಗೆಂದು ಬರುತ್ತಿದ್ದ ಮಾಸ್ತರ್ರು ಕಣ್ಣುಬಿಟ್ಟು ಹೆದರಿಸಿ ಶಾಲೆಗೆ ಕರೆದುಕೊಂಡು ಹೋದರು. ಶಾಲೆ ಮತ್ತು ಮನೆಯ ನಡುವಿರುವ ಹೊಳೆಯಿಂದಾಗಿ ವರ್ಷದ ಆರುತಿಂಗಳು ಮನೆಯಲ್ಲೇ ಉಳಿದರೂ ಹಾಜರಿ ಹಾಕಿ ಮುಂದಿನ ತರಗತಿಗೆ ಕಳಿಸಿದರು. ಹಾಡು, ಕತೆ, ಚರ್ಚೆ ಎಂಬೆಲ್ಲ ಸ್ಪರ್ಧೆಗಳಿಗೆ ಕರಕೊಂಡು ಹೋಗಿ ಅಕ್ಷರದ ಅರಿವು ಮೂಡಿಸಿದರು. ಪೆಟ್ಟಿಗೆಯಲ್ಲಿದ್ದ ಕತೆ ಪುಸ್ತಕಗಳನ್ನೆಲ್ಲ ಕೈಯ್ಯಲ್ಲಿಟ್ಟು ಓದಿನ ಹಸಿವನ್ನು ಹಿಂಗಿಸಿದರು. ತೀರ ಹದಿನೆಂಟಕ್ಕೆ ಮದುವೆ ಮಾಡಿ ಕೈತೊಳೆದುಕೊಳ್ಳಬೇಕೆಂದಿರುವ ಪೋಷಕರಿಗೆ ನಿಮ್ಮ ಮಗಳು ಅವಳ ಅನ್ನವನ್ನು ಅವಳು ಗಳಿಸಿಕೊಳ್ಳಬಲ್ಲಳು ಎಂಬ ಭರವಸೆ ಮೂಡಿಸಿದರು. ಅಪೌಷ್ಠಿಕತೆ, ಅನಾರೋಗ್ಯದಿಂದ ಪದೇ ಪದೇ ತರಗತಿಯಲ್ಲಿಯೇ ವಾಂತಿ ಮಾಡಿಕೊಂಡರೂ ಹೇವರಿಸದೇ ಧೈರ್ಯ ತುಂಬಿದರು. ಕಾಡ ನಡುವೆಯೆಲ್ಲೋ ಮನೆಗೆಲಸದಲ್ಲಿ ಕಳೆದುಹೋಗಬೇಕಾದ ಜೀವಕ್ಕೆ ಹೊರಜಗತ್ತಿಗೊಂದು ದಾರಿ ತೋರಿಸಿದರು. ಎಸ್. ಎಸ್. ಎಲ್. ಸಿ. ಯಲ್ಲಿಯೇ ಭರಪೂರ ಅಂಕ ತೆಗೆದು ಯಾವುದಾದರೂ ಸರಕಾರಿ ಇಲಾಖೆಯಲ್ಲಿ ಸಣ್ಣ ಕೆಲಸ ಪಡೆಯಬೇಕೆಂದು ಹೊರಟವಳನ್ನು ತಡೆದು ನಿನ್ನ ಕನಸೇನು? ಎಂದು ವಿಚಾರಿಸಿದರು. ಬದುಕುವುದೇ ಕನಸಾಗಿರುವಾಗ ಬದಕಿನಲ್ಲೊಂದು ಕನಸಿರುತ್ತದೆಯೆಂದು ಕನಸಿನಲ್ಲೂ ಯೋಚಿಸದ ನನಗೆ ಶಿಕ್ಷಕಿಯಾಗುವ ಕನಸು ಮೂಡಿದ್ದು ಆಗಲೆ. ದಾರಿ ತುಂಬಾ ಪುಟ್ಟ ಗುಟುಕು ಕೊಟ್ಟು ಮುಂದೆ ಹಾರಲು ನೆರವಾದ ನನ್ನೆಲ್ಲ ಗುರುಗಳನ್ನು ನೆನಪಿಸಿಕೊಂಡಾಗಲೆಲ್ಲ ಸುಮ್ಮನೆ ಕಣ್ಣು ಹಸಿಯಾಗುತ್ತದೆ.

ಹಾಗೆಂದು ಎಲ್ಲರೂ ಹಾಗಿರಲಿಲ್ಲ. ತಮ್ಮ ಮಕ್ಕಳಿಗಿಂತ ಹೆಚ್ಚು ಅಂಕ ತೆಗೆದಳೆಂದು ಕರುಬಿದವರು, ಮಗಳನ್ನು ನೀವೇ ನೋಡಿಕೊಳ್ಳಬೇಕೆಮಬ ಅಪ್ಪನ ಮುಗ್ಧತೆಯನ್ನು ಬಳಸಿಕೊಂಡು ಯೋಗಕ್ಷೇಮ ವಿಚಾರಿಸುವ ನೆಪದಲ್ಲಿ ಪದೇಪದೇ ಮೈಸವರಿದವರು, ತಾವು ಹೇಳಿದವರಿಗೆ ಕಾಪಿ ಮಾಡಲು ಸಹಕರಿಸಲಿಲ್ಲವೆಂದು ನನ್ನ ಬಡತನವನ್ನು ಆಡಿಕೊಂಡವರು, ಪೇಟೆಯ ಮಕ್ಕಳ ಚಾಲಾಕಿತನವಿಲ್ಲವೆಂದು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಕಾಡಿದವರು.... ಹೀಗೆಯೂ ಕೆಲವರಿದ್ದರು. ಆದರೂ ಅಕ್ಷರದ ಗಂಧಗಾಳಿಯಿಲ್ಲದ ಲೋಕದಿಂದ ಬಂದ ನನಗೆ  ಅರಿವಿನ ಲೋಕವನ್ನು ಅವರಲ್ಲದೇ ಅನ್ಯರು ತೋರಿಸುವ ಅವಕಾಶವೇ ಇರಲಿಲ್ಲ.

ಇವರಲ್ಲದೇ ಬದುಕೆಂಬ ಸಾಗರದಲ್ಲಿ ಜಿಗಿದಾಗ ಸಿಕ್ಕ ಪ್ರತಿಜೀವವೂ ಮೂಡಿಸಿದ ಅರಿವಿನಿಂದ ನಾವೆಂಬ ನಾವು ಮೈತಳೆಯುವುದು. ಡಿಗ್ರೀಯಾದೊಡನೇ ಕೆಲಸ ಸಿಕ್ಕಿ ಓದು ತುಂಡರಿಸಿದಾಗ ಹೊರಗಿನಿಂದಲೇ ಮಾಸ್ಟರ್ ಡಿಗ್ರೀ ಮಾಡುವ ಆಸೆ ಚಿಗುರಿತ್ತು. ಹೊರರಾಜ್ಯದ ಯುನಿವರ್ಸಿಟಿಯ ನೋಟ್ಸ್ ಮೇಲೆ ಕಣ್ಣಾಡಿಸಿದಾಗ ಏನೊಂದೂ ಅರ್ಥವಾಗದೇ ಪೆಚ್ಚಾಗಿದ್ದೆ.ಗುರುಗಳಲ್ಲಿ ಅಲವತ್ತುಕೊಂಡಾಗ ಭಾರತೀಯ ಲೇಖಕರು ಬರೆದ ಆಕರ ಗ್ರಂಥಗಳನ್ನು ನೀಡಿ ಓದನ್ನು ಸರಾಗಗೊಳಿಸಿದ್ದರು. ಕನ್ನಡಸಾಹಿತ್ಯದಲ್ಲಿಯೂ M. A. ಮಾಡಬೇಕೆಂದಾಗ ಮನೆಯವರೆಲ್ಲರೂ ಜತೆಗೆ ನಿಂತರು. ಇಂದಿಗೂ ನನ್ನೆರಡು ಮಕ್ಕಳು ನನ್ನ ವಿವೇಕ, ವಿವೇಚನೆಯನ್ನು ತಿದ್ದುತ್ತಲೇ ಇರುತ್ತಾರೆ. ಕನಸ ದೀವಿಗೆಯಂತಿರುವ ನನ್ನ ವಿದ್ಯಾರ್ಥಿನಿಯರು ದಿನವೂ ಹೊಸ ನೋಟಗಳನ್ನು ನಮಗೆ ದರ್ಶಿಸುತ್ತಲೇ ಇರುತ್ತಾರೆ. ಮೆಚ್ಚುವ, ಕರುಬುವ, ಪ್ರೋತ್ಸಾಹಿಸುವ ಜನರು ಸುತ್ತಲೂ ಇದ್ದಾರೆ.

ನನ್ನೊಡನೆ ನಡೆದುಬಂದಿರುವ ಈ ಎಲ್ಲ ಸಂಗತಿಗಳು ಮುಂದಿನ ಪೀಳಿಗೆಗೂ ಅಂತರ್ಗಾಮಿಯಾಗಿ ಹರಿಯುತ್ತಲೇ ಇದೆ. ಮನದೊಳಗೊಂದು ವಿಶ್ವಾಸದ ಎಳೆಯನ್ನು ಮೂಡಿಸಲು, ಹೊಸಕನಸೊಂದನ್ನು ಎದೆಯೊಳಗೆ ಕಸಿಮಾಡಲು, ಹೊಸ ಬೆಳಕಿನ ಸೆಳಕೊಂದನ್ನು ಕಣ್ಣುಗಳಲ್ಲಿ ಮೂಡಿಸಲು ಯಾವ ವೇದಿಕೆಗಳೂ ಬೇಕಿಲ್ಲ. ಅಸಲಿಗೆ ತರಗತಿ ಕೊಠಡಿಗಿಂತ ದೊಡ್ಡ ವಿಶ್ವವಿದ್ಯಾಲಯ ಯಾವುದೂ ಅಲ್ಲ. ಮನದೊಳಗೆ ಮಾತ್ರವೇ ಅಚ್ಚಾಗುವ ಈ ಚಿಕ್ಕ ಸಂಗತಿಗಳು ಎದೆಯಲ್ಲಲ್ಲದೇ ಇನ್ನೆಲ್ಲೂ ದಾಖಲಾಗುವುದಿಲ್ಲ; ಹಾಗೆಂದೇ ಶಿಕ್ಷಕತನಕ್ಕೆ ಪ್ರಶಸ್ತಿ ಪ್ರಚಾರಗಳ ಹಂಗಿಲ್ಲ.