Thursday, November 05, 2020

ಸೌಹಾರ್ದ ಕಥನಗಳು

೧.
ಫೇಸ್ಬುಕ್ಕಲ್ಲಿ ಸುಧಾ ಅಡುಕಳ  ಅವರ ಸೌಹಾರ್ದ ಕಥನ  ಎಂಬ ವಿಚಾರಕ್ಕೆ ಟ್ಯಾಗ್ ಆಗಿ  ಬಹಳಷ್ಟು ದಿನಗಳುರುಳಿತು. ಆರಂಭದಲ್ಲಿ ಏನು ಬರೆಯಬೇಕೆಂದು ತಲೆ ಹತ್ತದೆ ಏನೋ ಹೇಳುವುದಿದೆ ಎಂಬ ಹಳವಂಡವೂ ಜೊತೆಗೂಡಿ ದಿನಗಳುರುಳಿತು.  ಆದರೂ ಹೇಳುವುದಿದೆ ಎಂಬ ತುಡಿತವೇ ಮುಂದೊತ್ತಿ ಆಮೆಗತಿಯಲ್ಲಿ ಬರೆಯಲಾರಂಭಿಸಿದರೆ  ಅದು ಹಿಡಿದಿಟ್ಟಷ್ಟು ಉದ್ದುದ್ದ ಆಗಲಾರಂಭಿಸಿತು. ಕೊನೆಗೂ ಇಲ್ಲಿಗೆ ತಂದು ನಿಲ್ಲಿಸಿದೆ. ಆದರೆ ಫೇಸ್ಬುಕ್ಕಿಗೆ ಇದು ದೀರ್ಘವೇ.   
   ಸೌಹಾರ್ದ ಕಥನ ಇದಕ್ಕೆ ಬಹು ವಿಶಾಲ ವ್ಯಾಪ್ತಿಯಿದೆ ಅಲ್ಲವೆ. 
ಅದು ಒಂದು ಕೋಮು ಕೇಂದ್ರಿತ ಕಥನವಾಗಿ ಜನಪ್ರಿಯಗೊಂಡು ಸೀಮಿತಗೊಳ್ಳಬಾರದು. ಒಂದು ಕುಟುಂಬವಾಗಿ, ಒಂದು ಊರಾಗಿ., ಊರು ಅಂದೊಡನೆ ಎಲ್ಲಾ ಜಾತಿ-ಮತಗಳ, ಬಡವ-ಬಲ್ಲಿದರ ಮನುಷ್ಯ ಜನಾಂಗವಾಗಿ ಸಹಜೀವಿಗಳಾಗಿ ಸೌಹಾರ್ದ ಕಥನವನ್ನು ಕಾಣಬೇಕು. 
ಆದರೂ ಒಂದು ಸಮುದಾಯ ಕೇಂದ್ರಿತವಾಗಿ ಸೌಹಾರ್ದ ಎಂಬ ಪದಕ್ಕೆ ಬಹು ಬೇಡಿಕೆ ಬರುವ ಸಂದರ್ಭಗಳು ಎದುರಾಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ. ಸೌಹಾರ್ದ ಪದವನ್ನು ಇಟ್ಟುಕೊಂಡು ಹಿಂತಿರುಗಿ ನೋಡುವಾಗ  ಸೌಹಾರ್ದವೆಂಬ ಪದ  ಕೇಳಿಯೇ ಗೊತ್ತಿಲ್ಲದ ಆ  ಕಾಲದ ಬದುಕಿನಲ್ಲಿ ಎದುರಾದ ಎಷ್ಟೋ ಸಂಗತಿಗಳು ಈ ಕಾಲದ ಸೌಹಾರ್ದ ಕಥನದೊಳಗೆ ಹೇಳುವಂತದ್ದು ಅನಿಸುತ್ತಿದೆ. 
ನಾನಿಲ್ಲಿ ನನ್ನ ಅನುಭವ ಕೇಂದ್ರಿತ ಸೀಮಿತತೆಯಲ್ಲಿ ಒಟ್ಟಾರೆ ಅನುಭವದಲ್ಲಿ ಒಂದಿಷ್ಟು ಹೆಕ್ಕಿಕೊಡಬಹುದೇನೋ.    
  ಐದು ಜನ ಮಕ್ಕಳೊಂದಿಗರಾದ ನನ್ನ ಅಪ್ಪ ಅವನ ಮೂವತ್ತಾರನೇ ವರ್ಷದಲ್ಲಿ ತಾನು ಹುಟ್ಟಿ ಬೇರು ಬಿಟ್ಟು ತನ್ನ ಹನ್ನೊಂದನೆ ವರ್ಷದಲ್ಲಿ ಹೆಗಲಿಗೇರಿದ ನೇಗಿಲು ಹಿಡಿದು ಬಾಳು ಕಟ್ಟಿಕೊಂಡ ನೆಲವಾದ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ  ತಾಲೂಕಿನ ಆ ಹಳ್ಳಿಯಲ್ಲಿ ನೆಮ್ಮದಿಯ ಬಾಳುವೆ ಸಾಧ್ಯವಿಲ್ಲದಾದಾಗ ಅಲ್ಲಿಂದ ತನ್ನ ಬೇರೆಬ್ಬಿಸಿ ವಲಸೆ ಹೊರಡುವುದು ಅನಿವಾರ್ಯವಾಗಿತ್ತು. 
ಹೀಗೆ 1976ರ ಒಂದು ದಿನ ಅಪ್ಪ ತನ್ನ ಹೆಂಡತಿ ಹಾಗು ಪುಟ್ಟ ಪುಟ್ಟ ಮಕ್ಕಳೊಂದಿಗೆ ದಕ್ಷಿಣ ಕನ್ನಡದ ಉಜಿರೆಯತ್ತ ಜಾನುವಾರುಗಳಾದಿಯಾಗಿ ಸಂಸಾರದ ಸಾಮಾನು ಹೊತ್ತ ಲಾರಿಯಲ್ಲಿ ಪಯಣ ಬೆಳೆಸಿದವನು ಬಂದು ಇಳಿದಿದ್ದು ಕಟ್ಟಪ್ಪುಣಿಯಲ್ಲಿ ಒಂದಷ್ಟು ತೆಂಗಿನ ಮರಗಳಿದ್ದ ನಾಲ್ಕೈದು ಎಕರೆ ಗದ್ದೆ ಬಯಲಿನ ನಡುವಿನ ಮಣ್ಣಿನ ಗೋಡೆಯ ಪುಟ್ಟ ಮನೆಯಲ್ಲಿ. 
ಅಪ್ಪ ಆ ನೆಲವನ್ನು ಅದರ ಧಣಿಯಿಂದ ಖರೀದಿಸುವವರೆಗೆ ಅಲ್ಲಿ ಬೇಸಾಯ ನಡೆಸಿಕೊಡುತ್ತಿದ್ದವನು ಅಂಗಾರ. ಉತ್ತರ ಕನ್ನಡದ ಬೇಸಾಯ ಪದ್ದತಿಗೂ ದಕ್ಷಿಣ ಕನ್ನಡದ ಬೇಸಾಯ ಪದ್ದತಿಗೂ ವ್ಯತ್ಯಾಸಗಳಿವೆ. ಹಾಗೆಯೇ ದಕ್ಷಿಣ ಕನ್ನಡದ ಕೃಷಿ ಭೂಮಿಗಳಲ್ಲಿ ಯಾವ ಜಾತಿಯವರೇ ಆಗಿರಲಿ ದೈವಕ್ಕೊಂದು ಸ್ಥಾನವಿದೆ.
 ತುಳು ಕೇಳಿಯೇ ಗೊತ್ತಿಲ್ಲದ ಅಪ್ಪನಿಗೆ ತುಳು ಮಾತ್ರವೇ ಮಾತಾಡುವ ಅಂಗಾರ ಈ ಎಲ್ಲದರ ಮಾಹಿತಿ ಕೊಡುತ್ತ ಪುಂಡಿ ಬಿತ್ತು ಹಾಕಿ ಬಿತ್ತನೆ ಸುರುವಾಗುವಲ್ಲಿಂದ ಕೊಯಿಲಿನವರೆಗೆ ಅಪ್ಪನಿಗೆ ಹೆಗಲು ಕೊಟ್ಟವನು. 
ನಾವು ಮಕ್ಕಳಂತು ಅವನ ಸಂಸಾರದೊಂದಿಗೆ ಕೈ ಭಾಷೆ ಬಳಸಿ ಅರ್ಥ ಮಾಡಿಸುತ್ತಿದುದೇ ಜಾಸ್ತಿ. ಅವರೂ ಹಾಗೆಯೇ. ನಾನು ಮೊದಲು ಕಲಿತ ತುಳು ಶಬ್ದ “ಒಂಜಿ ಕೊಂಡೆ ಪೇರ್” ಅಂದರೆ ಒಂದು ಕುಡ್ತೆ ಹಾಲು. ಹೀಗೆ ತುಳು ಭಾಷೆ ಕಲಿಕೆಯ ಯುನಿವರ್ಸಿಟಿ ನಮಗೆ ಅಂಗಾರನ ಸಂಸಾರ.  ಅಮ್ಮ ಕುಂಬಳೆ ಸೀಮೆಯವಳಾದ್ದರಿಂದ ಭಾಷೆಯ ವಿಷಯದಲ್ಲಿ ತುಸು ವಾಸಿ. ಇನ್ನು ಗದ್ದೆ ಬಯಲೆಂದರೆ ಒಬ್ಬರ ಬೇಲಿ ಆದ ಮೇಲೆ ಇನ್ನೊಬ್ಬರದೆಂಬಂತೆ ಉದ್ದಾನುದ್ದಕೆ ಶೆಟ್ಟರದ್ದು.. ಪೂಜಾರ್ರದ್ದು.. ಪೊರ್ಬುಗಳದ್ದು ಹೀಗೆ. ಬೇಲಿ ಅಂದ್ರೆ ಕಾಡು ಗಿಡಗಳೋ ದಾಸವಾಳದ್ದೋ ಗೆಲ್ಲು ಊರಿ ಕಾಡು ಬಳ್ಳಿಯಿಂದ ಬಿಗಿದಿರುತ್ತಿದುದು ಅಷ್ಟೆ.  ಎಲ್ಲೋ ಗುಡ್ಡೆಗಳ ನಡುವೆ ಹುದುಗಿಕೊಂಡಿರುವ ಮನೆಗಳು.  ಜೋರಾಗಿ ಕೂ ಎಂದರೂ ಪಕ್ಕನೆ ಯಾರಿಗೂ ಕೇಳಿಸದು. ಆದರೆ, ಬೇಸಾಯ ಸುರುವಾಯಿತೆಂದರೆ ಗದ್ದೆಗಳಲ್ಲಿ ಕಲರವ. ಉಳುವವರ ಹಾಡು. ನೇಜಿ ನೆಡುವವರ ಓ ಬೇಲೆ. ಯಾರದೋ ಗದ್ದೆಯಲ್ಲಿ ಹೆಚ್ಚಾದ ನೇಜಿಸೂಡಿಗಳು ಇನ್ಯಾರದೋ ಗದ್ದೆಗೆ ನೇಜಿ ಕಮ್ಮಿಯಾಗಿ ಆ ಜಾಗ ತುಂಬಲು ಬರುತ್ತಿದ್ದವು. ನೇಜಿ ನೆಡಲು ಹೆಂಗಸರ ಕೊರತೆ ಬೀಳಬಾರದೆಂದು ಬಯಲಿನಲ್ಲಿ ಒಬ್ಬೊಬ್ಬರು ಒಂದೆರಡು ದಿನ ಹಿಂದು ಮುಂದಾಗಿ ಬೇಸಾಯಕ್ಕಿಳಿಯುತ್ತಿದ್ದುದು. ಈ ಬಯಲುಗಳ ಮಕ್ಕಳು ಶಾಲೆಗೆ ಹೋಗುವ ದಾರಿಯೂ ಈ ಎಲ್ಲಾ ಗದ್ದೆ ಹುಣಿಗಳು..ಇವರುಗಳೆಲ್ಲರ ಗುಡ್ಡ ಕಾಡುಗಳ ಕಾಲುದಾರಿಗಳು.  ಇದೆಲ್ಲ ಒಂದೂರಿನ ರೈತಾಪಿ ಜನಗಳ ಸೌಹಾರ್ದ ಬದುಕಾಗಿಯೇ ನನಗೆ ಕಾಣಿಸುತ್ತದೆ. ಇನ್ನು ಶಿವರಾತ್ರಿಗೆ ಪೊರ್ಬುಗಳ ಮನೆಯಂಗಳದ ಬಿಲ್ವಪತ್ರೆ ಮರದಿಂದ ಎಲೆ ಕೀಳಲು ಅಣ್ಣನೊಂದಿಗೆ ಹೋಗುತ್ತಿದುದು, ನಾವು ಮಕ್ಕಳೆಂದು ಕೆಲವೊಮ್ಮೆ ಪೊರ್ಬುಗಳೇ ಬಂದು ಕೊಯ್ದು ಕೊಡುತ್ತಿದುದು ಇದನ್ನೆಲ್ಲ ಏನೆಂದು ಕರೆಯಲಿ.. ಶಾಲೆಯ ದಿನಗಳ ಬಗ್ಗೆ, ಈಗಲೂ ಎಲ್ಲೋ ಇರುವ ಗೆಳತಿ ಬಾನುಳನ್ನು ಕಾಣಬೇಕೆಂಬ ಹಪಾಹಪಿಯ ಬಗ್ಗೆ ಹೇಳಿದರೆ ಅದೇ ಒಂದು ಅಧ್ಯಾಯವಾದೀತು. ನೆನೆವುದೆನ್ನ ಮನಂ ಅನ್ನುವಾಗ ಮತ್ತೆ ಮತ್ತೆ ನೆನೆಯುವುದು, “ನನ್ನ ಬದುಕಿನ ಪ್ರಮುಖ ಘಟ್ಟ ಮದುವೆಯಾಗಿ ನಾನು ಪ್ರಸಾದ್ ಜೊತೆ ಸಂಸಾರ ಹೂಡಿದ ಕುಂಬಳೆ ಸಮೀಪದ ಸಣ್ಣ ಊರು ಸೀತಾಂಗೋಳಿಯನ್ನು.”
 ಒಂದು ಮತದೊಳಗಿನ ಜಾತಿ ಜಾತಿಗಳಲ್ಲದೆ ಮತ-ಮತಗಳ ನಡುವಿನ ಸಹಬಾಳ್ವೆಯ ದರ್ಶನ ಮಾಡಿಸಿದ ನನ್ನತನವನ್ನು ಹೊಳಪುಗೊಳಿಸಿದ ಸ್ಯಾಂಡ್ ಪೇಪರ್ ನಾನು ಬದುಕಿದ ನನ್ನೊಳಗೆ ಬದುಕುತ್ತಿರುವ ಸೀತಾಂಗೋಳಿ.  1995-96ರ ದಿನಗಳವು. ಆ ಹಳ್ಳಿಪೇಟೆಯ ಸಣ್ಣ ಊರಿನಲ್ಲಿ ಮೂರು ಕೋಣೆಯ ಬಾಡಿಗೆ ಮನೆ. ಮನೆಯೊಳಗೆ ನಲ್ಲಿ ವ್ಯವಸ್ಥೆ ಇಲ್ಲ. ಓನರ್ ಮನೆಯದೇ ಬಾವಿ ನೀರು.  ಕ್ವಾಟರ್ಸ್ ಮಾದರಿ. ಓನರ್ ಅಬೂಬಕರ್ ಮನೆ ಒತ್ತಟ್ಟಿಗೇ..  ಓಡಾಡಲು ಉದ್ದಕ್ಕೆ ಒಂದೇ ಜಗಲಿ. ಅಂಗಳ ದಾಟಿದರೆ ನೇರ ರಸ್ತೆಗೇ ಇಳಿಯುವುದು. ಗುಡ್ಡ-ಗದ್ದೆ-ತೋಟ ತಿರುಗಾಡುತ್ತ ಒಂಟಿ ಮನೆಯಲ್ಲಿ ಬೆಳೆದ ನನಗೆ ಇದು ತೀರಾ ಅಪರಿಚಿತ ವಾತಾವರಣ. ಆದರೆ ಸಂಗಾತಿ ರಾಮಕೃಷ್ಣ ಪ್ರಸಾದರಿಗೆ ಇವರೆಲ್ಲ ಅದ್ಲಿಚ್ಚ, ಟೊಪ್ಪಿಚ್ಚ, ಚೇಚಿ, ಉಮ್ಮಂದಿರು. ನಾವಿನ್ನು ಸಂಸಾರ ಹೂಡಿ ಒಂದು ವಾರ ಆಗಿರಲಿಲ್ಲ. ನನಗೆ ಅಲ್ಲಿತನಕ ಕುಕ್ಕರ್ ಬಳಸಿ ಗೊತ್ತಿರಲಿಲ್ಲ. ಪ್ರಸಾದ್ ಒಂದಿನ ಸಣ್ಣ ಕುಕ್ಕರ್ ತಗಂಡ್ಬಂದ. ರಾತ್ರಿ ಅಡುಗೆಗೆ ಕುಕ್ಕರ್ ಪ್ರಯೋಗ. ಆಗಲೆ ಒಂಭತ್ತು ಘಂಟೆ.  ಒಂದು ವಿಷಲ್ ಹಾಕಿತ್ತು ಕುಕ್ಕರ್. ಒಂದೆರಡು ನಿಮಿಷದಲ್ಲೇ ಜೋರಾಗಿ ಬಾಗಿಲು ಬಡಿಯುವ ಸದ್ದು. ಜೊತೆಗೆ ಡಾಕ್ಟ್ರೆ ಡಾಕ್ಟ್ರೇ ಅಂತ ಗಾಬರಿಯ ಸ್ವರಗಳು. ಏನಾಯ್ತಪ್ಪ ಅಂತ ಬಾಗಿಲು ತೆಗೆದರೆ ಓನರ್ ಸಂಸಾರದ ಬಳಗವೇ ನಿಂತಿತ್ತು. ಮುಖದಲ್ಲಿ ಗಾಬರಿ. ಎಂತಾಯ್ತು..ಎಂತಾಯ್ತು? ದೊಡ್ಡ ಶಬ್ದ ಬಂತಲ್ಲ. ನಿಮಗೇನೋ ತೊಂದರೆ ಆಯ್ತು ಅಂತ ಹೆದರಿ ಓಡಿ ಬಂದಿದ್ದು ಅಂದರು. ಅಲ್ಲಿ ಯಾರಿಗೂ ಕುಕ್ಕರ್ ಅಭ್ಯಾಸವಿಲ್ಲವೆಂಬುದು ಆಗಲೇ ನಮಗೆ ಗೊತ್ತಾಗಿದ್ದು. ಜಾಗ್ರತೆ ಹೇಳುತ್ತ ಕುಕ್ಕರ್ ನೋಡಿಕೊಂಡು ಅವರು ಹೊರಟ ಮೇಲೆ ಮತ್ತೆ ನಮ್ಮ ಪ್ರಯೋಗ ಮುಂದುವರಿದಿದ್ದು. ಅವರ ಆ ಕಾಳಜಿಗೆ ಇವತ್ತೂ ಮನಸು  ತುಂಬಿಕೊಳ್ಳುತ್ತದೆ.  ಇನ್ನು ಎಷ್ಟೋ ಬಾರಿ ಎರಡು ಘಂಟೆ ರಾತ್ರಿಯಲ್ಲಿ ಹಳ್ಳಿಗಳಿಂದ ಯಾರಾದರೂ ಬಡಪಾಯಿಗಳು ಅಸೌಖ್ಯ ತಡೆಯಲಾರದೆ ಬಂದು “ಒಮ್ಮೆ ಬಂದು ನೋಡಿ ಡಾಕ್ಟ್ರೆ ಎಂದು ದುಂಬಾಲು ಬಿದ್ದಾಗ ಪ್ರಸಾದ್ ಅವರೊಂದಿಗೆ ಹೊರಟುಬಿಡುತ್ತಿದ್ದರು. ವಾಹನ ಹೋಗದಲ್ಲಿಗೆ ನಡೆದೇ ಹೋಗಬೇಕಾದ್ದರಿಂದ  ಹೋಗಿ ಬರುವಾಗ ಮೂರು ನಾಲ್ಕು ಘಂಟೆಯಾಗುವುದೂ ಇತ್ತು. ಆಗೆಲ್ಲ ಗಳಿಗೆಗೊಮ್ಮೆ ಬಂದು ನನಗೆ ಹೆದರಬೇಡವೆಂದು ಧೈರ್ಯ ಹೇಳುತ್ತಿದ್ದ ನೆಬಿಸಳ ಅಕ್ಕರೆಯನ್ನು ಈ ಸೌಹಾರ್ದ ಕಥನದೊಳಗೆ ಏನಂತ ಹೇಳುವುದು? ಇಂದಿಗೂ ರಂಝಾನ್ ಉಪವಾಸದ ಸಂಜೆಗಳಲ್ಲಿ ನೆಬಿಸುಮ್ಮ ಮತ್ತವಳ ಹೆಣ್ಣು ಮಕ್ಕಳು, ಅಕ್ಕ-ತಂಗಿಯರು ತರುತ್ತಿದ್ದ ಶರಬತ್ತಿನ ರುಚಿ ನಾಲಿಗೆಗೆ ನೆನಪಾಗುತ್ತದೆ. ಚೌತಿ, ದೀಪಾವಳಿ ದಿನಗಳಲ್ಲಿ  ಸಾಂಪ್ರದಾಯಿಕ ಆಚರಣೆ ಪ್ರಸಾದ್ ಕುಟುಂಬದಲ್ಲಿ ಅಷ್ಟಾಗಿ ಇಲ್ಲದಿದ್ದರೂ ಸಂಜೆ ಬರುವ ಈ ನನ್ನ ಗುಂಪಿಗಾಗಿ ಸಿಹಿಯಂತು ಮಾಡುತ್ತಿದ್ದೆ.  ನಮ್ಮನೆಗೆ ಟಿವಿ ಬಂದ ದಿನದ್ದೂ ಒಂದು ಕಥೆಯೇ. ಆ ವಠಾರಕ್ಕೆ ಅದು ಹೊಸತು. ಅವತ್ತು ಸಾಯಂಕಾಲ  ಕಿಟಕಿಯಲ್ಲಿ ಹೆಣ್ಣು ಮಕ್ಕಳ ಗುಂಪು ಇಣುಕಿ ನನ್ನ ಕರೆಯಿತು. ಟಿವಿ ಸ್ಕ್ರೀನ್ ಮುಚ್ಚಿಟ್ಟಿದ್ದೆ. ಅದು ಕಾಣ್ಲಿಕ್ಕಿರುದಲ್ವಾ ಅಕ್ಕಾ ಅಂತ ನಗ್ತಾ ಕೇಳಿದ್ದಳು ನಸೀಮಾ. ಹೀಗೆ ಅಂದಿನಿಂದ ಸಂಜೆ ಬಳಗದ ಎಲ್ಲಾ ಮನೆಯ ಹೆಣ್ಣು ಮಕ್ಕಳು, ಪುಟ್ಟ ಹುಡುಗರು ನಮ್ಮ ಪುಟ್ಟ ಜಗಲಿಯಲ್ಲಿ ಸೇರಿ ಬಿಡುತ್ತಿದ್ದರು. ಹಾಗೆ ಮಲೆಯಾಳಂ ಚಾನೆಲ್ ರುಚಿ ಹಿಡಿಸಿಬಿಟ್ಟರು ನಂಗೆ. ಪ್ರಸಾದ್ ತನ್ನ ಗದಗಿನ ಓದಿನ ದಿನಗಳನ್ನಂತು ಇವತ್ತಿಗೂ ಮತ್ತೆ ಮತ್ತೆ ಮೆಲುಕು ಹಾಕುತ್ತಾನೆ. ಅದು 1992ರ ದೇಶ ಕಂಡ ಅತ್ಯಂತ ವಿನಾಶಕಾರಿ  ಆತಂಕದ ದಿನಗಳು. ಬಾಬರಿ ಮಸೀದಿ ಬೆಂಕಿಯಲ್ಲಿ ಜನ ಸಾಮಾನ್ಯರು ಬೇಯುತ್ತಿದ್ದ ಆ ದಿನಗಳಲ್ಲಿ ಪ್ರಸಾದ್ ಹಾಗು ಆತನ ಸಹವರ್ತಿಗಳು ವಾಸವಾಗಿದ್ದ ಕೋಣೆಯ ಓನರ್ ಮೊಹಮ್ಮದ್ ಸಾಬರ ಮನೆ ಮಂದಿ ಇವರನ್ನು ಓಣಿಯಲ್ಲಿ ಓಡಾಡದಂತೆ ಮನೆಯೊಳಗೇ ಜೋಪಾನ ಮಾಡಿ ಆಹಾರ ಒದಗಿಸಿ ಕಾಪಾಡಿದ ಪರಿಯನ್ನು ಪ್ರಸಾದ್  ಹೇಳುತ್ತಿದ್ದರೆ ಇದು ಜನ ಸಾಮಾನ್ಯರ ನಿಜ ಬಹುತ್ವ ಭಾರತ ಅನಿಸಿ ಎದೆ ಒದ್ದೆಯಾಗುತ್ತದೆ. ಇಂದಿಗು ಇಂತಹ ಘಟನೆಗಳು ಸಾಮಾನ್ಯ ಜನಜೀವನದಲ್ಲಿ ಪರಸ್ಪರ ಅನುಭವಕ್ಕೆ ಬರುತ್ತಿದೆ. ಅದೇ 92ರ ಆ ದಿನಗಳಲ್ಲಿ ಸೀತಾಂಗೋಳಿ ಸಮೀಪದಲ್ಲಿ ನಡೆದ ಒಂದು ದುರ್ಘಟನೆಯಲ್ಲಿ ಅಂಚೆಪೇದೆ ದುರಂತ ಸಾವಿಗೆ ಬಲಿಯಾದದ್ದನ್ನು ನೆಬಿಸಳೇ ನನಗೆ ವಿವರಿಸಿ ಕಣ್ಣಲ್ಲಿ ನೀರು ತುಂಬಿಕೊಂಡಿದ್ದಳು.  ಅದೇ ಸಮಯದಲ್ಲಿ ಇಂತಹುದೇ ದುರಂತದಲ್ಲಿ ಗಂಡನನ್ನು ಕಳೆದುಕೊಂಡು ಊರಿಗೆ ಬಂದ ಅವಳ ಸಂಬಂಧಿಕರ ಮಗಳ ಬಗ್ಗೆಯೂ ಹೇಳಿದಳು. 
ಇವತ್ತು ಮಗ ದೂರದ ಜರ್ಮನಿಯಲ್ಲಿ ಭೌತ ಶಾಸ್ತ್ರದ ವಿದ್ಯಾರ್ಥಿಯಾಗಿ ಪದವಿ ಓದುತ್ತಿದ್ದಾನೆ. ಎಂಟು ತಿಂಗಳ ಹಿಂದೆ ಇಲ್ಲಿಂದ ಒಬ್ಬನೇ ಹೋಗಿ ಅಲ್ಲಿ ವಿಮಾನ ನಿಲ್ದಾಣದಲ್ಲಿಳಿದು ಉಳಿದುಕೊಳ್ಳಬೇಕಾದ ಹಾಸ್ಟೆಲ್ಲಿಗೆ ಹೋಗಲು ಲಗೇಜುಗಳೊಂದಿಗೆ ಬಸ್ ಹಿಡಿಯುವ ಜಾಗ ಗೊತ್ತಿಲ್ಲದೆ ರಸ್ತೆಯಲ್ಲಿ ಪರದಾಡುತ್ತಿದ್ದವನನ್ನು ನೀನು ಇಂಡಿಯಾದಿಂದ ಬಂದವನಾ ಎಂದು ಮಾತಾಡಿಸಿ ಸ್ವತಃ ತಾನೇ ನಿಂತು ಆ ಸ್ಥಳಕ್ಕೆ ಹೋಗುವ ಬಸ್ ಹತ್ತಿಸಿದವನು ಗುರುತು ಪರಿಚಯವಿಲ್ಲದ ಅಫ್ಘಾನಿಸ್ತಾನಿ. ಈ ಆತಂಕದ ದಿನಗಳಲ್ಲಿ ಅಲ್ಲೇ ಉಳಿದಿರುವ ಅವನ ಅನುಭವ ಹೇಗಿದೆಯೆಂದರೆ ಅವನುಳಿದುಕೊಂಡಿರುವ ಕೋಣೆಯ ಆಸುಪಾಸಿನ ಅಫ್ಗಾನಿಸ್ತಾನಿ, ಪಾಕಿಸ್ತಾನಿ, ಅರಬ್ಬಿ, ಟರ್ಕಿ, ಇತ್ಲಾಗಿ ತಮಿಳ, ಬೆಂಗಾಲಿ - ಇವರಿಗೆಲ್ಲ ಪರಸ್ಪರರು ಸ್ವಂತ ಊರಿನವರೇ. ಪರಸ್ಪರರು ಹಂಚಿಕೊಂಡು ಚಹಾ ಕುಡಿಯುವವರೇ. ಇದನ್ನೆಲ್ಲ ಸೌಹಾರ್ಧ ಕಥನದೊಳಗೆ ಹೇಳುವುದಾದರೆ ಇನ್ನೆಷ್ಟು ದೀರ್ಘವಾದೀತು..
**  ** 
ಅನುಪಮಾ ಪ್ರಸಾದ್.

೨.ಸೌಹಾರ್ದ ಕಥನ
ಸಹ ಬಾಳ್ವೆಯ ಜೀವನ
ಸಾಕಿಯ ಮಧುಶಾಲೆ
ನನ್ನ ಅಮ್ಮ ಮತ್ತು ಫಾತಿಮಾ ಮೊದಲು ಭೆಟ್ಟಿಯಾಗಿದ್ದೂ ನಂತರ ಸ್ನೇಹ ಬೆಳೆದದ್ದು ನಾವು ಆಗಾಗ ಹೋಗುತ್ತಿದ್ದ ಒಂದು ಹಿಟ್ಟಿನ ಗಿರಣಿಯಲ್ಲಿ. ಆಗ ನನಗೆ ಎಂಟೊಬ್ಬತ್ತು ವರ್ಷ ಇರಬಹುದು. ಫಾತಿಮಾಳ ಗಂಡ ಅಮೀರ್ ಯಾವುದೋ ಶಾಲೆಯಲ್ಲಿ ಕಸಗುಡಿಸುವ ಕೆಲಸ ಮಾಡುತ್ತಿದ್ದನೆಂದು ನೆನಪು. ಅವರ ಮನೆಯಲ್ಲಿ ಮಕ್ಕಳು, ಸಂಬಂಧಿಕರು ಸೇರಿ ಐದಾರು ಜನ. ಆಗಾಗ ನಮ್ಮ ಮನೆಗೆ ಬಂದು ಸಣ್ಣ ಪುಟ್ಟ ಕೆಲಸ ಮಾಡಿಕೊಡುತ್ತಿದ್ದ ಅಮೀರನನ್ನು ಕಂಡರೆ ಮಕ್ಕಳಾದ ನಮಗೆಲ್ಲಾ ಇಷ್ಟ. ಮಾಸಲು ಬಿಳಿ ಬಣ್ಣದ ದೊಗಲೆ ಪೈಜಾಮ, ಶರ್ಟು, ಶುಕ್ರವಾರವಾದರೆ ತಲೆ ಮೇಲೊಂದು ಟೊಪ್ಪಿ, ಮುಖದ ಮೇಲೊಂದು ಮಾಸದ ನಗು. ಹೀಗಿರುತ್ತಾ ನಾನು ಐದನೇ ಇಯತ್ತೆಯಲ್ಲಿದ್ದಾಗ ಇಂಥದ್ದೇ ಒಂದು ಬೇಸಗೆ ರಜೆಯಲ್ಲಿ ಇದ್ದಕ್ಕಿದ್ದಂತೆ ನನಗೆ ಗಂಟಲು ನೋವು ಶುರುವಾಗಿ ಉಗುಳು ನುಂಗುವುದೂ ಕಷ್ಟವಾಯ್ತು.  ಮನೆಯಲ್ಲಿ ಅಮ್ಮನ ಹೊರತು ಆಗ ಯಾರೂ ಇರಲಿಲ್ಲ. ಅಮ್ಮ ಓಡಿ ಹೋಗಿ ಅಮೀರನಿಗೆ ಹೇಳಿದ್ದೇ ಅವನು ಬಂದು ತನ್ನ ಸೈಕಲ್ಲಿನ ಮೇಲೆ ನನ್ನನ್ನು ಐದು ಕಿ.ಮೀ.ದೂರದ ಸರ್ಕಾರಿ ಆಸ್ಪತ್ತೆಗೆ ಕರೆದೊಯ್ದ. ಪುಣ್ಯಕ್ಕೆ ಅಲ್ಲೇ ಇದ್ದ ಡಾಕ್ಟರು ಇದು ಗಂಟಲು ಮಾರಿ (ಡಿಫ್ತೀರಿಯಾ) ಎಂದು ಹೇಳಿ ತಕ್ಷಣ ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ಶುರುಮಾಡಿದರು. ಇನ್ನೊಂದೇ ಒಂದು ಘಂಟೆ ತಡಮಾಡಿದ್ದರೂ ಮಗು ಉಳಿಯುತ್ತಿರಲಿಲ್ಲ ಎಂದು ಡಾಕ್ಟರು ಹೇಳಿದ್ದನ್ನೂ, ಅಮೀರನ ಆ ಹೊತ್ತಿನ ಉಪಕಾರವನ್ನೂ ಅಮ್ಮ ಅದೆಷ್ಟು ಸಲ ನನಗೆ ಹೇಳಿದ್ದಳೊ. ಒಂದು ವಾರದ ಬಳಿಕ ಮನೆಗೆ ಬಂದು ಇನ್ನೂ ಒಂದು ವಾರ ಕಳೆಯುವಷ್ಟರಲ್ಲಿ ಶಾಲೆ ಪ್ರಾರಂಭವಾಯ್ತು. ಎರಡು ಕಿ.ಮೀ. ದೂರದ ಶಾಲೆಗೆ ನಡೆದುಕೊಂಡು ಹೋಗಲೂ ಆಗದಷ್ಟು ನಿಶ್ಯಕ್ತಿ. ಈಗಿನ ಹಾಗೇ ಆಟೋ, ಸ್ಕೂಲ್ ಬಸ್ ಇಲ್ಲದ ಕಾಲ. ಆಗ ಅಮೀರ್ ನನ್ನನ್ನು ದಿನವೂ ತನ್ನ ಹಳೇ ಸೈಕಲ್ಲ ಮೇಲೆ ಕೂರಿಸಿಕೊಂಡು ಶಾಲೆಗೆ ಬಿಟ್ಟು ನಂತರ ತನ್ನ ಶಾಲೆಯ ಕೆಲಸಕ್ಕೆ ಹೋಗುತ್ತಿದ್ದ. ಮತ್ತೆ ಶಾಲೆ ಮುಗಿದ ಮೇಲೆ ನನ್ನನ್ನು ಕರೆದು ತಂದು ತನ್ನ ಶಾಲೆಯ ಕಟ್ಟೆಯ ಮೇಲೆ ಕೂಡಿಸಿ ಶಾಲೆ ಕಸ ಗುಡಿಸಿ ಬಾಗಿಲು, ಕಿಟಕಿ ಮುಚ್ಚಿ, ಬೀಗ ಹಾಕಿ ನಂತರ ನನ್ನನ್ನು ಮನೆ ತಲುಪಿಸುತ್ತಿದ್ದ. ಹೀಗೆ ಹೋಗಿ ಬರುವಾಗಲೆಲ್ಲಾ ಅವನು ನನಗೆ ಕಥೆ ಹೇಳುತ್ತಿದ್ದ. ಅವನ ಕಥೆಗಳಲ್ಲಿ ನಮ್ಮ ರಾಮನು ಅವರ ಅಲ್ಲಾವೂ ಗೆಳೆಯರು. ರಾವಣನ ಜೊತೆ ಯುದ್ಧದಲ್ಲಿ ಅಲ್ಲಾವು ಒಮ್ಮೆ ಕರಡಿಯಾಗಿ, ಒಮ್ಮೆ ಅಳಿಲಾಗಿ ಬಂದು  ಸಹಾಯ ಮಾಡಿದ್ದು, ನಮ್ಮ ಸರಸ್ವತಿ ಅಲ್ಲಾವುವಿಗೆ ವರ ಕೊಟ್ಟಿದ್ದು, ಇನ್ನೊಂದು ಕಥೆಯಲ್ಲಿ ಕೃಷ್ಣ ಮತ್ತು ಪೈಗಂಬರರು ಚರ್ಚೆ ಮಾಡಿ ಮಾಡಿ ಯಾರೂ ಸೋಲದೆ ಕಡೆಗೆ ಗೆಳೆಯರಾದದ್ದು ಹೀಗೆ ಹತ್ತು ಹಲವು. ನನಗೆ ಆಗ ಗೊತ್ತಿದ್ದ ಹಲವು ಗಣೇಶನ ಮತ್ತು ಶಾರದೆಯ ಸ್ತೋತ್ರಗಳು ಅವನಿಗೂ ಬರುತ್ತಿತ್ತು. ಒಮ್ಮೊಮ್ಮೆ ಅವನ ಮನೆಗೆ ಕರೆದೊಯ್ದಾಗ ಫಾತಿಮಾ ನನಗೆ ಕಲ್ಲಂಗಡಿಯೋ, ಕರಬೋಜವೋ, ತಾಟೀನಿಂಗೋ ಕೊಟ್ಟೇ ಕೊಡುತ್ತಿದ್ದಳು. ಒಮ್ಮೆ ನನ್ನ ಹುಟ್ಟಿದ ಹಬ್ಬಕ್ಕೆ ಹೊಲಿಯಲು ಕೊಟ್ಟಿದ್ದ ನನ್ನ ಫ್ರಾಕನ್ನು ದರ್ಜಿ ಹೇಳಿದ ಸಮಯಕ್ಕೆ ಕೊಡದೇ ನಾನು ಅತ್ತು ರಂಪ ಮಾಡಿದಾಗ ಇದೇ ಅಮೀರ್ ನನ್ನನ್ನು ಸಮಾಧಾನಿಸಿ ಸೈಕಲ್ಲಲ್ಲಿ ಹತ್ತಿರದ ಬಳೇ ಅಂಗಡಿಗೆ  ಕರೆದೊಯ್ದು ಕೊಡಿಸಿದ ಒಂದು ಕೆಂಪು ಕಲ್ಲಿನ ಲೋಲಾಕು ನನ್ನ ಹತ್ತಿರ ಬಹಳ ಕಾಲ ಇತ್ತು ಮತ್ತು ಆ ದಿನ ಅವನು ತನ್ನ ಪೈಜಾಮ, ಶರ್ಟು ಜೇಬುಗಳನ್ನು ತಡಕಾಡಿ ಹಣ ಒಟ್ಟು ಮಾಡಿ ಕೊಟ್ಟ ಚಿತ್ರ ನನ್ನ ಮನಸ್ಸಿನಲ್ಲಿ ನೆನ್ನೆ ನಡೆದಷ್ಟೇ ಹಸಿರು. ಅಷ್ಟು ಕಡಿಮೆ ಸಂಬಳದಲ್ಲೂ ರಂಜಾನ್ ಹಬ್ಬಕ್ಕೆ ತನ್ನ ಮಗಳು ನಝೀಮಾಗೆ ಬಣ್ಣ ಬಣ್ಣದ ಬಳೆ, ಕಿವಿಯೋಲೆ ತಂದಾಗಲೆಲ್ಲಾ ನನಗೂ ಕೊಡಿಸುತಿದ್ದುದು ಹೇಗೆಂದು ನನಗೆ ಇವತ್ತಿಗೂ ಗೊತ್ತಿಲ್ಲ. ನಮ್ಮ ಮನೆ ಗೌರಿ,ಗಣೇಶ, ದೀಪಾವಳಿ, ಉಗಾದಿಯಂದು ಅವನು ಬಂದು ಹೋಳಿಗೆ, ಪಾಯಸ ಒಯ್ಯದೆ  ನಾವ್ಯಾರೂ ಊಟ ಮಾಡುತ್ತಿರಲಿಲ್ಲ.
ಅವನನ್ನು ನೋಡದೆ ಐವತ್ತು ವರ್ಷಗಳಾಗಿರಬಹುದು.
ಅಮೀರ ನನ್ನ ಮನಸ್ಸಿನಿಂದ  ಎಂದೂ ಮರೆಯಾಗದ ಅಮೀರನಾಗೇ ಇದ್ದಾನೆ, ಇರುತ್ತಾನೆ.
                                     __ ಉಮಾ ಮುಕುಂದ್
                                 ‌‌‌‌‌    ‌‌‌‌‌‌‌ ‌        17.4.20
೩.
#ಸೌಹಾರ್ದ_ಕಥನ
#ಸಹಬಾಳ್ವೆಯ_ಬದುಕು
#ಸಾಕಿಯ_ಮಧುಶಾಲೆ
ಸುಧಾ ಆಡುಕಳ ಅವರ ಕರೆಯ ಮೇರೆಗೆ ಸೌಹಾರ್ದ ಕಥನ.
ನಮ್ಮೂರು ಸಾಲಿಕೇರಿ. ಒಂದು ಕಾಲದಲ್ಲಿ ಬಟ್ಟೆ ನೇಯುವುದೇ ಇಲ್ಲಿಯ ಜನರ ಮುಖ್ಯ ಉದ್ಯೋಗವಾಗಿತ್ತು. ಬಣ್ಣ ಬಣ್ಣದ ನೂಲು ಹಾಸು ಹೊಕ್ಕಾಗಿ ಚೆಂದದ ಸೀರೆಯಾಗುವ ಪ್ರಕ್ರಿಯೆ ನಮ್ಮೂರ ಜನರ ಬದುಕಿಗೆ ರೂಪಕದಂತಿದೆ. ಇಲ್ಲಿ ಹಿಂದೂ ಮುಸ್ಲಿಮ್ ಕ್ರಿಶ್ಚಿಯನ್ನರ ಅನೇಕ ಕುಟುಂಬಗಳು ಪರಸ್ಪರರನ್ನು ಅನುಮಾನದಿಂದ ನೋಡದೆ ಸಹಜ ಲಯದಲ್ಲಿ ಬದುಕುತ್ತಿರುವುದು ನಮ್ಮ‌ ಭಾಗ್ಯ.
ಇಲ್ಲಿನ ಬದುಕಿಗೆ ಎಲ್ಲರೂ ಅನಿವಾರ್ಯರು ಎಂಬುದು ಎಲ್ಲರಿಗೂ ಅರಿವಿದೆ. ಹಾಗಾಗಿಯೇ ಮನೆಯ ಮಾವಿನ ಮರದಲ್ಲಿ ಮಿಡಿಯಾದರೆ, ಮಾವಿನ ಹಣ್ಣು ಕೊಯಿಸಬೇಕಾದರೆ ಸಾಯಬ್ರು‌ ಬಂದೇ ಬರಬೇಕು. ಹಿಡಿಸೂಡಿಯನ್ನು ನಮ್ಮ ಬಾಯಮ್ಮನಷ್ಟು ಚೆಂದ ಯಾರೂ ಮಾಡಿಕೊಡುವುದಿಲ್ಲ. ಮನೆಯಲ್ಲಿ ಬೆಳೆದ ತರಕಾರಿಯನ್ನು ಆಚೀಚೆ ಮನೆಯವರಿಗೆ ಹಂಚುವ ಶ್ರಮಜೀವಿ ನಾಯಕರು ಊರವರಿಗೆಲ್ಲಾ ಬೆರಗು ಮೂಡಿಸುವವರು. ಗುಜರಿಗೆಂದು ಬಂದ ಸಾಯಬ್ರು ನನ್ನತ್ತೆ ಜೊತೆ ಎಲೆ ಅಡಕೆ ಮೆಲ್ಲುತ್ತಾ ತಮ್ಮ‌ ಸುಖ ಕಷ್ಟ ಹಂಚಿಕೊಳ್ಳಬಲ್ಲರು. ಎಲ್ಲೋ ಮಂದಿರ ಮಸೀದಿಗಳ ಜಗಳ ಆದದ್ದನ್ನ ಮೂರನೆ ವ್ಯಕ್ತಿಯಾಗಿ ಇಬ್ಬರೂ ಆಡಿಕೊಂಡು ನಗಬಲ್ಲರು.ನಮ್ಮ‌ ಹೊನ್ನಾಳಕ್ಕೆ ಬರುವ ಬಸ್ಸಿನ ಕಂಡಕ್ಟರ್ ಸಾಯಬ್ರಂತೂ ಬಸ್ ಹತ್ತಿದ ತಕ್ಷಣವೇ ಅಪರೂಪದ ಅತಿಥಿಗಳನ್ನು ಮಾತಾಡಿಸುವವರಂತೆ ಮನೆ ಮಕ್ಕಳ ಸುದ್ದಿಯೆಲ್ಲಾ ಪ್ರೀತಿಯಿಂದ ಕೇಳುತ್ತಲೆ ಟಿಕೆಟ್ ಕೊಡುತ್ತಾರೆ. ರಿಕ್ಷಾ ಚಾಲಕರು ನಂಬಿಕಸ್ತರು ಎಂದು ಹೆಸರು ಮಾಡಿದವರು. ನಮ್ಮೂರ ಮಹನೀಯರೊಬ್ಬರು  ಪ್ರಾರ್ಥನಾ ಮಂದಿರ ಕಟ್ಟಿ ಅದರ ಮೂರು ಕಡೆ ಮೂರೂ ಧರ್ಮದವರಿಗೆ ಪ್ರಾರ್ಥನೆ ಮಾಡುವ ಅವಕಾಶ ಕಲ್ಪಿಸಿದ್ದಾರೆ. ಇಲ್ಲಿ ಒಮ್ಮೆ ದೀಪ ಹಚ್ಚುವವರು ಮತ್ತೊಮ್ಮೆ ಮೇಣದ ಬತ್ತಿಯೊಂದಿಗೆ ಬಂದದ್ದಿದೆ. ಒಂದೊಂದು ಸಮಸ್ಯೆಗೆ ಒಂದೊಂದು ಧರ್ಮದ ದೇವರಿಗೆ ಹರಕೆ ಹೊತ್ತುಕೊಳ್ಳವ ಭಕ್ತಾದಿಗಳು!!
ಬದುಕಿನ ಪಯಣದುದ್ದಕ್ಕೂ ಇಂತಹ ಅನೇಕ ಸಹಜೀವಿಗಳ ಸಖ್ಯ ಬದುಕನ್ನು ಸಹನೀಯಗೊಳಿಸಿದೆ. ಆತ್ಮೀಯ ಸ್ನೇಹಿತರು, ಜೀವ ಉಳಿಸಿದ ವೈದ್ಯರು, ಬದುಕು ಕಲಿಸಿದ ಅಧ್ಯಾಪಕರುಗಳು , ದಿನದ ಬಹಳಷ್ಟು ಕಾಲ ಒಟ್ಟಿಗೇ ಇರುವ ಸಹೋದ್ಯೋಗಿಗಳು‌, ಅಸಂಖ್ಯ ಸಂಖ್ಯೆಯ ಪ್ರೀತಿಯ ವಿದ್ಯಾರ್ಥಿಗಳು - ಇವರಲ್ಲಿ ಅನೇಕರು ಮುಸ್ಲಿಮ್ ಮತ್ತು ಕ್ರೈಸ್ತ ಬಾಂಧವರು ಎಂದು‌ ಪ್ರತ್ಯೇಕವಾಗಿ ಹೇಳಬೇಕಾದ ಸಂದರ್ಭ ಬಂದಿರುವುದಕ್ಕೆ ಅತ್ಯಂತ ನೋವಾಗುತ್ತದೆ.
ಅಭಿಲಾಷಾ .

೪.
#ಸೌಹಾರ್ದ_ಕಥನ ಬರೆಯುವಂತೆ Sudha Adukal   ಮೇಡಂ ಟ್ಯಾಗ್ ಮಾಡಿದ್ದರು. ನಾನು ಸ್ವಲ್ಪ ಜಾಸ್ತಿ ಬರೆಯುತ್ತೇನೆ.

ಈ ಸಮಯಕ್ಕೆ ಸೌಹಾರ್ದ ಕಥನವೆಂದರೆ ಧರ್ಮ ಧರ್ಮದ ನಡುವಿನ ಸೌಹಾರ್ದದ ಕಥನ ಮಾತ್ರ ಅಲ್ಲದೆ, ಜಾತಿ ಜಾತಿಗಳ ನಡುವೆ  ಅಂತರ ಕಡಿಮೆ ಮಾಡಿ ಸೌಹಾರ್ದ ಮೂಡುವ ಬಗ್ಗೆ ಬರೆಯಬೇಕಾದ ಸಂದರ್ಭ ಇದು. ಇದು ನನ್ನ ವೈಯಕ್ತಿಕ ಅನುಭವ. ನನಗೆ ಸ್ವೀಟ್ ಆಗಿ ಹೇಳಲು ಬರುವುದಿಲ್ಲ. ಹಾಗೆ ನಾಣ್ಯದ ಎರಡೂ ಮುಖವನ್ನು ಪರಿಚಯಿಸುವುದು ನನಗೆ ಇಷ್ಟ. ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮ ನಿಮ್ಮ ನಡುವೆ ಅಂತರ ಹೆಚ್ಚಿಸಿರುವಾಗ ಇದು ಅಗತ್ಯ ಕೂಡ.

ಹಿಂಗಿರಲಿಲ್ಲ ಈ ಮೊದಲು ಅನಿಸುತ್ತದೆ. ಅಥವಾ ನನಗೆ ತಿಳುವಳಿಕೆ ಕೊರತೆಯೇನೊ ನನ್ನ ಮುಸ್ಲಿಂ ಸಮುದಾಯದವರು ನನ್ನ ಬ್ರಾಹ್ಮಣ ಸಮುದಾಯದವರು ಯಾರೂ ಹೀಗಿರಲಿಲ್ಲ. ಅಥವಾ ಈಗಲೂ ಹೀಗಲ್ಲವೇನೊ ಹತ್ತಿರದಿಂದ ನಾನು ಕಂಡಿಲ್ಲ. ಆದರೆ/ಹಾಗಾದರೆ ಸೋಷಿಯಲ್ ಮೀಡಿಯಾದಲ್ಲಿ ವಿರೋದಾಭಾಸಗಳ ನಡುವೆ ಬದುಕುತ್ತಿದ್ದೇವೆ ? ಎಂಬುದು ಸತ್ಯ.  

ನಾನು ಕನ್ನಡ ಶಾಲೆ ಓದುವಾಗ, ಹೈಸ್ಕೂಲ್ ಕಾಲೇಜು ಓದುವಾಗಲೂ ಹೀಗಿರಲಿಲ್ಲ ಪರಿಸ್ಥಿತಿ. ಹೀಗೆ ಎಂದರೆ ಒಬ್ಬರ ಮೇಲೆ ಒಬ್ಬರು ಮುಗಿಬೀಳುವಷ್ಟು. ರಾಜಕೀಯ ಅಜೆಂಡಾಗಳನ್ನು ಫೇಸ್ಬುಕ್, ಮನೆ, ಶಾಲೆ, ಕಾಲೇಜು, ಕೆಲಸ ಮಾಡುವ ಸ್ಥಳದಲ್ಲೆಲ್ಲ, ಬಿಟ್ಟುಕೊಂಡು ದ್ವೇಷ ಕಾರುವಷ್ಟು.  ಅದ್ಯಾವ ಕೀಳರಿಮೆ, ಹಿರಿಮೆ, ಭಯಭೀತ ಸನ್ನಿವೇಷ, ರಕ್ಷಣಾತ್ಮಕ ಥಿಯರಿ, ಸನ್ನಿವೇಶ ಒಂದಿಷ್ಟು ಮುಸ್ಲಿಂಮರಲ್ಲಿ ಮತ್ತು ಬ್ರಾಹ್ಮಣರಲ್ಲಿ ತುಂಬಿತೊ ನಾ ಕಾಣೆ. ನನಗೆ ನನ್ನ ಜಾತಿಯನ್ನು ಬಿಟ್ಟರೆ ಗೊತ್ತಿರುವುದು ಮೊದಲು ಬ್ರಾಹ್ಮಣರು ಆ ನಂತರ ಮುಸ್ಲಿಂ ಸಮುದಾಯ. ನನ್ನ ಜಾತಿಯ ಜನರ ಜೊತೆ ಒಡನಾಟ ಇರುವಷ್ಟೆ ಒಡನಾಟ ನನಗೆ ಬಾಲ್ಯದಿಂದ ಬ್ರಾಹ್ಮಣರ ಜೊತೆ ಇದೆ. ಆಮೇಲೆ ಮುಸ್ಲಿಂಮರು. ಜಾಸ್ತಿ ಫ್ರೆಂಡ್ಸ್ ಕೂಡ ಬ್ರಾಹ್ಮಣರೆ. 

ಫೇಸ್ಬುಕ್ ನಲ್ಲಿ ಆಕ್ಟಿವ್ ಆದ ಹೊಸತರಲ್ಲಿ ಊರು ಮನೆಯವರು ಕಂಡೊಡನೆ ರಿಕ್ವೆಸ್ಟ್ ಕಳಿಸಿ ಅಕ್ಸೆಪ್ಟ್ ಮಾಡುತ್ತಿದ್ದೆ. ಅದರಲ್ಲಿ ಬ್ರಾಹ್ಮಣರೆ ಜಾಸ್ತಿ. ಶುರುವಾದವು ಬೈಗುಳ ನನ್ನ ಪ್ರತಿ ಪೋಸ್ಟಿಗೂ ಲೈಕ್ ಗಿಂತ ಕಮೆಂಟ್ ಗಳು ಜಾಸ್ತಿಯಾದವು. ಕಮೆಂಟ್ ಅನಗತ್ಯವಾಗಿ ಎತ್ತಲೊ ಸಾಗುತ್ತಿತ್ತು. ಆದರೆ ಈಗಲೂ ನನಗೆ ಎಲ್ಲಕ್ಕಿಂತ ಮಾನವೀಯತೆ ಮತ್ತು ಕಿರಿ ಕಿರಿ ಹಚ್ಚಿಕೊಳ್ಳದೆ ನನ್ನ ಪಾಡಿಗೆ ಬದುಕುವುದು ಇಷ್ಟ. ನಾನು ಯಾರನ್ನೂ ವೈಯಕ್ತಿಕವಾಗಿ ಹೋಗಿ ಕೆದಕಿ ಜಗಳವಾಡುವುದನ್ನು ಮಾಡಿಲ್ಲ ಆದರೆ ಅವೆಲ್ಲ ಕಮೆಂಟ್ ನನಗೆ ಮೋದಿ ವಿರೋಧಿ ಅಭಿಪ್ರಾಯ ಆರ್ ಎಸ್ ವಿರೋಧ ಅಭಿಪ್ರಾಯವಿದೆ ಎಂಬ ಕಾರಣಕ್ಕಷ್ಟೆ ಆಗಿದ್ದರಿಂದ ನನಗೆ ಕ್ಷುಲ್ಲಕ ಮತ್ತು ಅತಿರೇಕ ಹಾಗೆ ವಿಚಿತ್ರ ಅನಿಸಿದವುಗಳು. ಬಾಲ್ಯದಿಂದ ಕಂಡ ಎಲ್ಲಾ ಮುಖ ವಿಚಿತ್ರ ಅನಿಸಿದವು. ಅನ್ಫ್ರೆಂಡ್ ಮಾಡುತ್ತಾ ಹೋದರೂ ಕಷ್ಟವಾದಾಗ ಹೊಸ ಅಕೌಂಟ್ ತೆರೆದು ಪ್ರೊಫೈಲ್ ಚೆಕ್ ಮಾಡಿ ರಿಕ್ವೆಸ್ಟ್ ಕಳಿಸುವುದು ಅಕ್ಸೆಪ್ಟ್ ಮಾಡುವ ಕೆಲಸವಾದ ಮೇಲೆ ಈಗ ನೆಮ್ಮದಿ. ನನಗೆ ಯಾರನ್ನೂ ಬದಲಾಯಿಸುವ ಹಾದಿಯಲ್ಲಿಲ್ಲ. ಹಾಗೆ ಬದಲಾಗಿ ಬಿಡುತ್ತಾರೆ ಎಂಬ ಭ್ರಮೆ ಇಲ್ಲ. ಆದರೆ ಪ್ರೀತಿಯನ್ನು ಹಂಚಬಹುದು ಎಂದಾದಾಗ ಹಂಚೋಣ ಎಂಬುದಷ್ಟೆ. ಅದೆ ವೇಳೆಯಲ್ಲಿ ನಾನು ಯಾರಿಗೋಸ್ಕರವೊ  ಬದಲಾಗುವುದಕ್ಕಾಗುವುದಿಲ್ಲ. ಎಲ್ಲಾ ವಿಭಿನ್ನತೆ ಇಟ್ಟುಕೊಂಡು ಎಲ್ಲರಿಗೂ ಸ್ನೇಹ ಹಂಚೋಣ. ಸೌಹಾರ್ದ ಕಥನ ಹೇಳೋಣ.

ಯಾಕೆ ಒಂದಷ್ಟು ಜನ ಯಾವಾಗ ಹೀಗಾದರು ? ಮೋದಿ ಸಪೋರ್ಟ್ ಮಾಡುವವರ ಬಗ್ಗೆ ನನಗೆ ಅಭಿಪ್ರಾಯವೂ ಇಲ್ಲ. ಬೇಜಾರಂತೂ ಇಲ್ಲವೆ ಇಲ್ಲಅವರ ಆಯ್ಕೆ. ವಿಭಿನ್ನ ನಿಲುವಿರಬೇಕು ಆದರೆ ಜಗಳದಿಂದ ನೀಚತನಕ್ಕಿಳಿಸು ಮಾತನಾಡುವುದು ಅವಿವೇಕ ತೋರಿಸುತ್ತದೆ. ಕೆಲವರು ಹೇಗೆ ಮುಸ್ಲಿಂಮರ ಬಗ್ಗೆ ಸಾರಾಸಗಟಾಗಿ ಒಂದು ಹೇಳಿಕೆ ನೀಡಿಬಿಡುತ್ತಾರೊ ಹಾಗೆ ಮೇಲ್ವರ್ಗದ ಮೇಲೆ ಬ್ರಾಹ್ಮಣ್ಯದ ಸಾರಾಸಗಟಾದ ಹೇಳಿಕೆ ಕೆಲವರು ನೀಡಿ ಬಿಡುತ್ತಾರೆ. ಕೆಲವೊಮ್ಮೆ ನನಗೆ ಸಿಟ್ಟು ಬಂದಾಗಲೂ ತೀರಾ ನಾನ್ಸೆನ್ಸ್ ಅನಿಸಿದಾಗ ನಾನು ಹಾಗೆ ಜನರಲೈಸ್ ಆಗಿ ಬೈದಿದ್ದಿದೆ. ಆದರೆ ಅದು ತಪ್ಪು ಎಂತಲೂ ನನಗೆ ಅರಿವಿದೆ. ಕ್ಷಮೆ ಇರಲಿ. ‘ನೀವೆಲ್ಲಾ ಒಂದೆ’ ಎಂಬ ವಾಕ್ಯಕ್ಕೆ. 

ಹೇಗೆ ತಳ ಸಮುದಾಯದವರನ್ನು ಜಾತಿ ಆಧಾರದಲ್ಲಿ ಬೈಯ್ಯಬಾರದು ಎನ್ನುತ್ತೇವೊ ಹಾಗೆಯೆ ಮೇಲ್ವರ್ಗದ ಸಮುದಾಯವನ್ನು ಬೈಯ್ಯುವುದು ತಪ್ಪು ಎಂಬುದು ನನ್ನ ಅರಿವು. ಆದ್ದರಿಂದ ಧರ್ಮಾಂಧರು ಯಾವುದೆ ಧರ್ಮದವರಾದರು ಅವರನ್ನು ದೂರವಿಡಬೇಕು. ಯಾರನ್ನು ಓಲೈಕೆ ಮಾಡದ ನೇರವಾದ ನೋಟದ ಜೊತೆ ಮನುಷ್ಯತ್ವ ಇಟ್ಟುಕೊಳ್ಳಬೇಕು.

ಕಥನ 1- ನನ್ನ ಕುಟುಂಬಕ್ಕೆ ಕಷ್ಟದಲ್ಲಿ ಆಧಾರವಾಗಿದ್ದು ಎಲ್ಲಾ ಸಮಯದಲ್ಲೂ ಸಹಾಯ ಮಾಡಿದವರು ಬ್ರಾಹ್ಮಣರು ಮತ್ತು ಮುಸ್ಲಿಂಮರು. ಅಪ್ಪ 5 -10 ಸಾವಿರ ಸಾಲ ಮಾಡುತ್ತಿದ್ದ ವಿ.ಎಸ್ ಹೆಗಡೆ ಅವರು ನಮ್ಮ ಮೂವರ ಓದು ಮುಗಿಯುವವರೆಗೂ ಒಂದು ರೂಪಾಯಿ ಬಡ್ಡಿ ತೆಗೆದುಕೊಂಡಿಲ್ಲ. ಹೈಸ್ಕೂಲಿನ ಕ್ಲರ್ಕ್ ಅವರೆ ಆಗಿದ್ದರಿಂದ ವರ್ಷದ ಆರಂಭಕ್ಕೆ ನಾವು ಹೋಗಿ ಅಡ್ಮಿಷನ್ ಮಾಡುವ ಮೊದಲೆ ಅವರೆ ಮಾಡಿರುತ್ತಿದ್ದರು ಅದರ ದುಡ್ಡು ಲೆಕ್ಕದ ಪಟ್ಟಿಯಲ್ಲಿರುತ್ತಿತ್ತು. ಅಪ್ಪ ಯಾವಾಗಲೊ ವಾಪಸ್ಸು ನೀಡುವರು. ನನ್ನ ಶಾಲೆ ಹೈಸ್ಕೂಲಿನ ಫ್ರೆಂಡ್ ಗಳ ಮನೆಯಲ್ಲಿ ಅಪ್ಪ ಕೆಲಸಗಾರ. ಆದರೆ ಶಾಲೆಯಲ್ಲಿ ನಾವು ಒಂದೆ ಬೆಂಚಿನಲ್ಲಿ ಕೂತು ಕಲಿತವರು. ಅವರ್ಯಾವತ್ತು ಜಾತಿ ವಿಷಯ ಎತ್ತಿ, ಅಪ್ಪ ಕೆಲಸಗಾರನೆಂಬ ಕಾರಣಕ್ಕೆ ಅವಮಾನ ಮಾಡಿಲ್ಲ. ನಮ್ಮ ಆಟ ಜಾಸ್ತಿ ನಮ್ಮ ಮನೆಯಲ್ಲಿ ನಡೆಯುತ್ತಿದ್ದರಿಂದ ಅವರು ನಮ್ಮ ಮನೆಯಲ್ಲಿ ಎಲ್ಲಾ ಕಡೆ ಓಡಾಡಬಹುದಿತ್ತು ನಾನು ಅವರ ಮನೆಗೆ ಹೋಗಿದ್ದೆ ಕಡಿಮೆ ಹೋದಾಗ ಎಲ್ಲಾ ಕಡೆ ಓಡಾಡುವಂತಿಲ್ಲ. ಹೈಸ್ಕೂಲ್ ಮುಗಿಯುವವರೆಗೆ ನನ್ನ ಬೆಂಚ್ ಮೇಟ್ ಡೆಸ್ಕ್ ಮೇಟ್ ಗಳು ಬ್ರಾಹ್ಮಣ ಹುಡುಗಿಯರೆ. ದೊಡ್ಡವರನ್ನ ನನ್ನ ಅಪ್ಪನನ್ನ ಏಕವಚನದಲ್ಲಿ ಕರೆಯುತ್ತಿದ್ದುದು ಮಾತ್ರ ಇಷ್ಟವಾಗುತ್ತಿರಲಿಲ್ಲ. ಕಾಲೇಜಿನಲ್ಲೂ ಅಕ್ಕನಿಗೆ ನನಗೆ ಬ್ರಾಹ್ಮಣರೆ ಜಾಸ್ತಿ ಫ್ರೆಂಡ್ಸ್. ಆಗ ಜಾತಿ ಎಲ್ಲಾ ಕೇಳೋರ್ಯಾರು ನಾವು ಅವರ ಮನೆಗೆ ಹೋಗ್ತಿರಲಿಲ್ಲ ಅವರೆಲ್ಲಾ ಈಗಲೂ ಹಬ್ಬಕ್ಕೆ ಮನೆಗೆ ಬಂದು ಊಟ ಮಾಡುವಾಗ ನನಗೆ ಅವರು ಬೇರೆ ಅನಿಸುವುದಿಲ್ಲ. ಆದರೆ ಫೇಸ್ಬುಕ್ ಗೆ ಬಂದಾಗ ....

ಕಥನ 2- ಚಿಕ್ಕವರಿದ್ದಾಗ ಮನೆಯಲ್ಲಿ ಚಿನ್ನಿ ದಾಂಡು ಆಡುವಾಗ ಆಯಿ ಮತ್ತು ಮುಂಸ್ಲಿಂ ಬಾಬಣ್ಣ ಒಂದು ಪಾರ್ಟಿ. ನಾವು ಮಕ್ಕಳು ಅಪ್ಪ ಒಂದು ಪಾರ್ಟಿ. ಮೀನು ಮಾರಲು ಬರುವ ಅನ್ನು ಅಣ್ಣನಿಗೆ ದಿನ ಬೆಳಿಗ್ಗೆ ನಮ್ಮ ಮನೆಯಲ್ಲಿ ಚಾ ಆಗುತ್ತಿತ್ತು. ಹೈಸ್ಕೂಲಿನಲ್ಲಿ ಮುಷ್ತಾಕ್ ಗೆ ಹುಷಾರಲ್ಲದಾಗ ಆಯಿ ಹೋಳಿಗೆ ಮಾಡಿಕೊಟ್ಟು ನನ್ನನ್ನು ಅಕ್ಕನನ್ನ ಅವರ ಮನೆಗೆ ಕಳ್ಸಿದ್ಲು. ನಮ್ಮ ಮನೆಯಲ್ಲಿ ಹಾಲು ಒಯ್ಯಲು ಬರುವವರು ಮುಸ್ಲಿಂಮರು. ಹಬ್ಬದ  ತಿಂಡಿಗಳನ್ನು ಅವರಿಗೆ ಚಾದ ಜೊತೆ ಕೊಡುವುದು ಆಯಿಯ ರೂಢಿ.  ಕಾಲೇಜಿನಲ್ಲಿ ನನ್ನ ಫ್ರೆಂಡ್ ತಬಸುಂ ಮನೆಯಲ್ಲಿ ನಾನು ಎಷ್ಟೊ ಬಾರಿ ಉಳಿದಿದ್ದೇನೆ. ಅವರ ಮನೆಯ ಎಲ್ಲಾ ಕಾರ್ಯಕ್ರಮಕ್ಕೂ ಒಂದು ದಿನ ಮುಂಚೆ ಇರುತ್ತಿದ್ದೆ. ನನಗೆ ನನ್ನ ಸಂಬಂಧಿಕರು ಅನೇಕರು ಗೊತ್ತಿಲ್ಲ. ಆದರೆ ತಬಸುಂ ಅಮ್ಮನ ಕಡೆ ಅಪ್ಪನ ಕಡೆ ಎಲ್ಲರನ್ನೂ ಗೊತ್ತು. ಫಂಕ್ಷನ್ ಮುಗಿದ ಮೇಲೆ ನಾವಿಬ್ಬರು ಎಲ್ಲರ ಮನೆಗೆ ಊಟ ಕೊಡೋಕೆ ಹೋಗ್ತಿದ್ವಿ. ಅವಳ ಅಕ್ಕನ ಮದುವೆಯಲ್ಲಿ ಎಲ್ಲರೂ ಮದುವೆ ಛತ್ರದಲ್ಲಿದ್ದು ಮನೆ ಕಾಯೊದಕ್ಕೆ ನಾನಿದ್ದೆ. ಅವರ ಮನೆ ನನ್ನ ಮನೆ ಬೇರೆ ಅನ್ನಿಸಿದ್ದಿಲ್ಲ ನಂಗೆ. ನನ್ನ ಫ್ರೆಂಡ್ ವಿಶಾಲ್ ಮನೆಗೆ ಬಂದಾಗ ಆಯಿತು ಬಳಿ ನಾನು ಕ್ರಿಶ್ಚಿಯನ್ ಎಂದು ಹೇಳಿದ್ದಕ್ಕೆ, ಯಾರು ಕೇಳಿದ್ದು ಜಾತಿ ಧರ್ಮನ ? ಅದೆಲ್ಲಾ ಮುಖ್ಯ ಅಲ್ಲ ಸ್ನೇಹಕ್ಕೆ ಅಂದಿದ್ದಳು.

ಇನ್ನು ಅಕ್ಕನ ಗೆಳತಿ ಫಾತಿಮಾ ಅಕ್ಕ ಒಮ್ಮೆ ಮನೆಗೆ ಬಂದರೆ 10 ದಿನ ಉಳಿಯದೆ ಊರಿಗೆ ಹೋಗುವುದಿಲ್ಲ. ನನ್ನ ಚಿಕ್ಕಪ್ಪನ ಮಗನ ಮದುವೆಗೆ ಅವಳ ದೊಡ್ಡಮ್ಮನ ಜೊತೆ ಬಂದು ವಾರಕ್ಕೂ ಜಾಸ್ತಿ ದಿನ ಮನೆಯಲ್ಲೆ ಇದ್ದರು. ಅವಳು ನನ್ನ ಅಕ್ಕಂದೀರಿಗಿಂತ ಬೇರೆ ಅಲ್ಲ. ಜೋಳದ ರೊಟ್ಟಿ ಮಾಡುವುದ ಕಲಿಸಿದ್ದು ಅವಳೆ. ಉತ್ತರ ಕರ್ನಾಟಕದವಳಾದ್ದರಿಂದ ಮನೆಯಲ್ಲಿ ಬೆಳೆದ ಎಲ್ಲವನ್ನೂ ನಮ್ಮ ಮನೆಗೆ ಬರುವಾಗ ಹೊತ್ತು ತರುತ್ತಾಳೆ. ಅವರ ಮನೆಯಲ್ಲು ದನ ಕರು ಎತ್ತುಗಳಿವೆ. ಅವುಗಳ ಪೂಜೆ ಮಾಡುತ್ತಾರೆ. ಶೀಗೆ ಹುಣ್ಣಿಮೆ ಯಲ್ಲಿ ಪಾಂಡವರನ್ನು ಮಾಡಿ   ಭೂಮಿ ಪೂಜೆ ಮಾಡುತ್ತಾರೆ. 

ಫಾತಿಮಾ ಅಕ್ಕ ಕೊಯ್ದ ಹೂ ನಮ್ಮ ಮನೆ ದೇವರ ತಲೆ ಮೇಲೆ ಏರುತ್ತದೆ. ಅವಳು ತಟ್ಟಿದ ರೊಟ್ಟಿ ಹೊಟ್ಟೆ ತುಂಬಿಸುತ್ತದೆ. ನಮ್ಮ ಮನೆಯಲ್ಲಿ ಮನೆಗೆ ಬಂದವರಿಗೆ ಯಾರಿಗೂ ಜಾತಿ ಕೇಳುವುದಿಲ್ಲ. ಧರ್ಮ ಕೇಳುವುದಿಲ್ಲ. ಹೌದು ಅಸ್ಪೃಶ್ಯತೆ ನನಗೆ ಅನುಭವ ಆಗಿದೆ. ಬೇರೆಯವರ ಮನೆಯಲ್ಲಿ ತಟ್ಟೆ ತೊಳಿದಿದ್ದೇನೆ. ಅಪ್ಪ ಊಟ ಮಾಡಿದ ಜಾಗ ಒರೆಸಿ ಬಾಳೆ ಎತ್ತಿದ್ದನ್ನ ಕಂಡಿದ್ದೇನೆ. ಯಾಕೆ ನಮ್ಮ ಮನೆಯಲ್ಲೆ ನಾವು ಹೆಣ್ಣು ಮಕ್ಕಳು ತಿಂಗಳಿಗೊಮ್ಮೆ ಮಗಲಿದ ಜಾಗ ಒರೆಸಿ ಊಟದ ಜಾಗ ಒರೆಸಿದ್ದೇವೆ. ನಮ್ಮ ಮನೆಯಲ್ಲೆ ತಾರತಮ್ಯ ಅನುಭವಿಸಿದ್ದೇವೆ. 

ಎಲ್ಲಾ ಅನುಭವಗಳಾಚೆ ತಪ್ಪಿದ್ದಿದ್ದನ್ನು ಸರಿ ಮಾಡಿಕೊಳ್ಳುತ್ತಾ ಎಲ್ಲರನ್ನೂ ಪ್ರೀತಿಸುತ್ತಾ ಬದುಕು ಸಾಗಿಸುತ್ತಾ ಹೋಗಬೇಕು. ಇರುವುದೊಂದೆ ಜೀವನ. ಪ್ರೀತಿಸಲೆ ಸಮಯವಿಲ್ಲದಿರುವಾಗ ದ್ವೇಷಕ್ಕೆಲ್ಲಿದೆ ಸಮಯ. ರಾಜಕೀಯ ಭಿನ್ನಾಭಿಪ್ರಾಯಗಳ ಜೊತೆ ಶಾಂತಿಯುತವಾಗಿ ಬದುಕುವುದ ಕಲಿಯೋಣ.

೫.
# ಸೌಹಾರ್ಧ ಕಥನ......

ನಾನು ಹೊಸ ಪರಿಚಯ. ವನಿತಾ ಮಾರ್ಟಿಸ್. 

 ನಾನು ಕ್ರೈಸ್ತಳು. ಮದುವೆಯಾಗಿ  20 ವರುಷಗಳ ಹಿಂದೆ ಗಂಡನ ಮನೆಗೆ ಬಂದೆ. ತುಂಬಿದ ಮನೆಯಿಂದ ಬಂದ ನನಗೆ, ಗಂಡ-ಅತ್ತೆ, ಮನೆಯಲ್ಲಿ ಬಹಳ ಏಕಾಂತ. Adjust ಆಗಲು ಬಹಳ ಕಷ್ಟವಾಯಿತು. ಆ ಸಮಯದಿ ನನಗೆ ಆಪ್ತರಾಗಿ ಸಿಕ್ಕಿದ್ದು ಹಿಂದೂ ಗೆಳತಿ, ವಸಂತಿ. 
ಬಡತನ ಅವರಲ್ಲಿತ್ತು. ಆದರೂ ನಾವಿಬ್ಬರೂ ಏನೇ ಅಡುಗೆ ಮಾಡಿದರೂ, ಹಂಚಿಕೊಂಡು ತಿನ್ನುತ್ತಿದ್ದೆವು. ಆಕೆಗೆ ಮಕ್ಕಳಿಲ್ಲ.   ಗಂಡ ಹೆಂಡತಿ ಇಬ್ಬರೂ ಕೂಲಿ ಕೆಲಸ. ನಾನು ಆಗ ಖಾಸಗಿ ಶಾಲೆಯಲ್ಲಿ ಶಿಕ್ಷಕಿ.
ಮುಂದೆ, ನನ್ನ ಇಬ್ಬರು ಮಕ್ಕಳನ್ನು ಅವರು ಶಾಲೆಗೆ ಹೋಗುವವರೆಗೂ ಹಗಲಿನ ಸಮಯ ಅವರೇ ನೋಡಿಕೊಳ್ಳುತ್ತಿದ್ದರು‌ ಮನೆಯಲ್ಲೇ ಬೀಡಿ ಕಟ್ಟುವ ಕೆಲಸ ಮಾಡಿಕೊಂಡು. ನನ್ನ ಅವರ ಬಾಂಧವ್ಯ ಅಮ್ಮ, ಅಕ್ಕ,.ಗೆಳತಿ,.... ಎಲ್ಲವೂ ಎನ್ನಬಹುದು. 
ಆದರೆ...... 
ಮುಂದೊಂದು ದಿನ ಆಕೆಯ ಗಂಡನ ಆಕಸ್ಮಿಕ ಮರಣ. ತಾನು ಏಕಾಂಗಿ. ನಾನು ಆಕೆಯ ಕೈ ಬಿಡಲಿಲ್ಲ.  ಇದಾಗಿ ಆರು ತಿಂಗಳಲ್ಲೇ ಆಕೆಯ ತಾಯಿಗೆ ಆಧಾರವಾಗಿದ್ದ, ತಮ್ಮನ ಅಪಘಾತದ ದುರ್ಮರಣ. ಪುನಃ ಆಘಾತ. ತವರಿನಲ್ಲಿ ತಾಯಿ ಏಕಾಂಗಿ. ಸ್ವಂತ ಮನೆಯಿಲ್ಲ. ಹೀಗಾಗಿ ಈ ಊರು ಬಿಟ್ಟು  ಪಕ್ಕದೂರು ಬ್ರಹ್ಮಾವರದಲ್ಲಿ ತಾಯಿ-ಮಗಳು ಬಾಡಿಗೆ ಮನೆಯಲ್ಲಿ ವಾಸ. 
 ಆಕೆ ನನಗೆ ಬಡತನದೊಡನೆಯೂ ಮಾಡಿದ ಉಪಕಾರಗಳನ್ನು ಮರೆಯಲಸಾಧ್ಯ. ಈಗಲೂ ಆಕೆಯ ಬಾಡಿಗೆ ಕಟ್ಟಲು, ಅಗತ್ಯ ವಸ್ತುಗಳನ್ನು ತರಲು,  ಅಡುಗೆ ಅನಿಲ...... ಹೀಗೆ ನನ್ನಿಂದಾದಷ್ಟು ಸಹಾಯ ಮಾಡುವೆ. 
ನನ್ನಲ್ಲಿರುವ ತೆಂಗಿನಕಾಯಿ, ಕಟ್ಟಿಗೆ, ತರಕಾರಿ ಇವುಗಳನ್ನು ಹಂಚಿಕೊಳ್ಳುವೆವು. ಶಾಲಾ ರಜೆ ಸಿಕ್ಕಿದಾಗ ಒಂದೆರಡು ರಾತ್ರಿ ಆಕೆಯೊಡನೆ ತಂಗುವೆನು. ಹೊಸ ಸೀರೆ, ಬಟ್ಟೆ ಕೊಡುವೆನು.  
ವಯಸ್ಸಾದ ತಾಯಿಯ ಆಶೀರ್ವಾದವೇ ನನಗೆ ಮಹತ್ತರ ಉಡುಗೊರೆ. ಬಡತನದಲ್ಲೂ ತುಂಬುಹೃದಯದಿಂದ ನನ್ನ ವಸಂತಕ್ಕ ಉಪಚರಿಸುವ ರೀತಿಯೇ, ನೀಡುವ ಪ್ರೀತಿಯೇ ನನ್ನೆಲ್ಲಾ ನೋವನ್ನು ಮರೆಸುವ ಸಾಧನ. ಇದಕ್ಕಿಂತ ಸೌಹಾರ್ಧತೆ ಮತ್ತೇನಿದೆ????

೬.

Sudha Adukal
#ಸೌಹಾರ್ದ_ಕಥನ
#ಸಹಬಾಳ್ವೆಯ_ಬದುಕು

ಹಿಂದೆ ಬರೆದಿದ್ದೆ, ಈಗ ಮತ್ತೊಮ್ಮೆ …

1960ರ ಸುತ್ತಲಿನ ಕತೆಯಿದು. ಬಂಟಮಲೆ ಕಾಡೊಳಕ್ಕೆ ಆಗಾಗ ಬರುತ್ತಿದ್ದವನೆಂದರೆ ಕುಟ್ಟಬ್ಯಾರಿ. ಬಿಸಿಲಲ್ಲಿ ಬೆವರೊರಸಿಕೊಳ್ಳುತ್ತಾ ಮನೆಯೊಳಕ್ಕೆ ಬಂದು ಅಪ್ಪನಿಗೆ ನಮಸ್ಕಾರ ಹೇಳಿ ಕುಖಿತುಕೊಳ್ಳುವ  ಅವನಿಗೆ ಅಮ್ಮ ಒಂದೆರಡು ಬೆಲ್ಲದ ತುಂಡುಗಳ ಜೊತೆ ತಂಬಿಗೆ ನೀರು ತಂದು ಕೊಡುತ್ತಿದ್ದಳು. 
ಕುಟ್ಟಬ್ಯಾರಿ, ಆ ಕಾಲದಲ್ಲಿಯೇ ಕಾಸರಗೋಡು,  ಮಂಗಳೂರುವರೆಗೆ ಹೋಗಿಬರುತ್ತಿದ್ದನಾದ್ದರಿಂದ ಅವನ ಅನುಭವ ಲೋಕ ಅಪಾರವಾಗಿತ್ತು. ಅವನು ಭೇಟಿ ಮಾಡುತ್ತಿದ್ದ ನೂರಾರು ಜನಗಳು, ಮಂಗಳೂರು ಬಂದರಿನಲ್ಲಿ ಅವನು ಬಾಳೆಕಾಯಿ ಮಾರಲು ಪಟ್ಟ ಶ್ರಮ, ಹಿಂದೆ ಬರುವಾಗ ಪಾಣೆಮಂಗಳೂರು ಸೇತುವೆ ಬಳಿ ನೀರು ಉಕ್ಕಿ ಹರಿದದ್ದು, ಪುತ್ತೂರಿನಲ್ಲಿ ಅವನು ಕುಡಿದ ಚಹಾದಲ್ಲಿ ಕಡಿಮೆ ಸಕ್ಕರೆ ಇದ್ದದ್ದು, ಇತ್ಯಾದಿಗಳನ್ನು ಆತ ಸೊಗಸಾಗಿ ವರ್ಣನೆ ಮಾಡುತ್ತಿದ್ದ. ಜೊತೆಗೆ, ಅಡಿಕೆ ಧಾರಣೆಯಲ್ಲಿ ಉಂಟಾದ ಏರಿಳಿತ, ಕಾಳುಮೆಣಸಿಗೆ ಬಂದ ಆಪತ್ತು , ವ್ಯಾಪಾರಕ್ಕೆ ಹೋದವರನ್ನು ನಗರದ ಜನ ಮೋಸ ಮಾಡುವ ರೀತಿ, ಇತ್ಯಾದಿಗಳ ಬಗೆಗೂ ಆತ ವಿವರ ನೀಡುತ್ತಿದ್ದ.  ಅವನೇ ನನಗೆ ಆ ಕಾಲದಲ್ಲಿ ಟಿವಿ, ರೇಡಿಯೋ, ಮತ್ತು ವರ್ತಮಾನ ಪತ್ರಿಕೆ.  
ಗಂಟೆಗಟ್ಲೆ ಮಾತಾಡಿದ ಆನಂತರ ‘ಏನಾದರೂ ಇದ್ರೆ ಕೊಡಿ’ ಅಂತ ಆತ ದುಂಬಾಲು ಬೀಳುತ್ತಿದ್ದ. ಅಪ್ಪ ‘ ಸ್ವಲ್ಪ ಅಡಿಕೆ ಇದೆ, ಎಷ್ಟು ಕೊಡ್ತೀ? ಅಂದರೆ ಸಾಕು, ಮತ್ತರ್ಧ ಗಂಟೆ ರೇಟಿನ ಬಗ್ಗೆ ಚರ್ಚೆ. ಕೊನೆಗೆ ಕೆಲವು ರೂಪಾಯಿಗಳನ್ನು ಅಪ್ಪನ ಕೈಗಿತ್ತು-‘ ನೋಡಿ ಯಜಮಾನ್ರೇ, ಇಷ್ಟು ಕಡಿಮೆ ಅಡಿಕೆ ಹೊತ್ತುಕೊಂಡು ಊರು ಸುತ್ತಲಿಕ್ಕೆ ಆಗ್ತದಾ? ಅದು ಇಲ್ಲಿಯೇ ಅಂಗಳದಲ್ಲಿ ಒಣಗಲಿ, ಮುಂದಿನ ಬಾರಿ ಕೊಂಡು ಹೋಗುತ್ತೇನೆ’ ಎಂದು ಹೇಳಿ ಹೋಗುತ್ತಿದ್ದ. ಅಪ್ಪನಿಗೀಗ ಕುಟ್ಟ ಬ್ಯಾರಿಯ ಅಡಿಕೆ ಕಾಯುವ ಕೆಲಸ. ಎಲೆ ಅಡಿಕೆ ತಿನ್ನಲು ಅದರಿಂದ ಒಂದಡಿಕೆ ತೆಗೆದರೂ ಅಪ್ಪ ಗದರಿಸುತ್ತಿದ್ದರು-‘ ಅದು ಕುಟ್ಟ ಬ್ಯಾರಿಯ ಅಡಿಕೆಯಾ, ತೆಗೀಬಾರ್ದು ಅಂತ ಗೊತ್ತಾದುಲೆ?’. ತಾನು ಅಂಗಳಲ್ಲಿ ಬಿಟ್ಟು ಹೋದ ಅಡಿಕೆಯನ್ನು ಯಜಮಾನರು ತೆಗೆಯಲಾರರೆಂಬ ವಿಶ್ವಾಸ ಕುಟ್ಟಬ್ಯಾರಿಯಲ್ಲಿಯೂ, ಕುಟ್ಟಬ್ಯಾರಿ ಅಂಗಳದಲ್ಲಿ ಬಿಟ್ಟು ಹೋದ ಅಡಿಕೆಯನ್ನು ತೆಗೆಯಬಾರದೆಂಬ ಪ್ರಜ್ಞೆ ಅಪ್ಪನಲ್ಲಿಯೂ ಇದ್ದ ಕಾಲವದು. 
ಒಮ್ಮೆ ಕೇರಳದಿಂದ ತಂದ ಓಲೆಬೆಲ್ಲದ ಕಟ್ಟನ್ನು ಉಚಿತವಾಗಿ ಅಪ್ಪನ ಕೈಗಿಟ್ಟು ‘ ನಿಮ್ಮದು ಯಕ್ಷಗಾನ ಮಾಡಿ ಬಂದಾಗ ಈ ಬೆಲ್ಲ ಹಾಕಿ ಚಾಯ ಕುಡಿರಿ, ಪಿತ್ತ ಎಲ್ಲ ಇಳಿಯುತ್ತದೆ’ ಅಂದಿದ್ದ. ನನ್ನ ಬಗೆಗೆ ಕುಟ್ಟ ಬ್ಯಾರಿಗೆ ವಿಶೇಷ ಪ್ರೀತಿ. ಅವನ ಮಾತುಗಳು ನನಗೆ ಸ್ವಲ್ಪ ಬ್ಯಾರೀ ಭಾಷೆಯನ್ನೂ ಕಲಿಸಿದುವು. ಪಂಜದಲ್ಲಿ ಯಕ್ಷಗಾನವಿದ್ದರೆ ಅದರ ಸುದ್ದಿಯನ್ನು ಆತ ನನಗೆ ತಲುಪಿಸುತ್ತಿದ್ದ. ಪಂಜಕ್ಕೆ ಆಟ ನೋಡಲು ಹೋದಾಗ.  ಯಕ್ಷಗಾನದ ಟೆಂಟ್ ಬಳಿ ಅವನು ಪ್ರತ್ಯಕ್ಷವಾಗುತ್ತಿದ್ದ. ‘ಬನ್ನಿ ಯಜಮಾನ್ರೇ’ ಅಂತ ಹೇಳಿ ಯಾವುದೋ ಗೂಡಂಗಡಿ ಬಳಿ ಕರೆದುಕೊಂಡು ಹೋಗಿ, ಚಾಯ ಕುಡಿಸುತ್ತಿದ್ದ. ಯಕ್ಷಗಾನ ನೋಡುವ ನನ್ನ ಬಗ್ಗೆ ಅವನಲ್ಲಿ ತಕರಾರುಗಳಿರಲಿಲ್ಲ.  ಯಕ್ಷಗಾನ ನೋಡದ ಅವನ ಬಗ್ಗೆ ನನ್ನಲ್ಲೂ ತಕರಾರುಗಳಿರಲಿಲ್ಲ. 

ಅದು ನನ್ನ ಭಾರತವಾಗಿತ್ತು.

೭.
#ನಾನು_ಕಂಡ_ಸರ್ವಧರ್ಮಸಮನ್ವಯದ_ಊರು

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ತಿರುಗಾಡಿದ್ದೇನೆ. ಮೂರು ನಾಲ್ಕು ತಾಲೂಕುಗಳಲ್ಲಿ ಕೆಲ ವರ್ಷ ವಾಸವಾಗಿದ್ದೆ ಕೂಡಾ. ಅಷ್ಟೂ ತಾಲೂಕುಗಳಲ್ಲಿ ನನಗೆ ಹೆಚ್ಚು ಇಷ್ಟವಾದುದು ಕಾರ್ಕಳ. ಅದಕ್ಕೆ ಮುಖ್ಯ ಕಾರಣ ಕಾರ್ಕಳದ ಐತಿಹಾಸಿಕ ಮಹತ್ವ ಮತ್ತು ಅಲ್ಲಿಯ ಜನಬದುಕಿನಲ್ಲಿನ ಮತೀಯ ಸಾಮರಸ್ಯ.
ಇತರ ತಾಲೂಕುಗಳಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಮತಗಳಿಗೆ ಸೇರಿದವರನ್ನು ಕಾಣಬಹುದಾದರೆ, ಕಾರ್ಕಳದಲ್ಲಿ ಹೆಚ್ಚುವರಿಯಾಗಿ ಜೈನರನ್ನೂ ದೊಡ್ಡ ಸಂಖ್ಯೆಯಲ್ಲಿ ಕಾಣಬಹುದು. ಉತ್ತರದ ವರಂಗದಿಂದ ಹಿಡಿದು ವೇಣೂರು, ಧರ್ಮಸ್ಥಳ, ದಕ್ಷಿಣದ ಪಂಜ ಹೀಗೆ ಸಾಗುವ ಜೈನ ಪರಂಪರೆಯ ಪಟ್ಟಿ ಬಹುದೊಡ್ಡ ಪ್ರಮಾಣದಲ್ಲಿ ಸಾಗುವುದು ಕಾರ್ಕಳದಲ್ಲಿ. 
ಕಾರ್ಕಳದಲ್ಲಿ ಜೈನರಿಗೆ ಅತ್ಯಂತ ಮಹತ್ವದ್ದಾದ ಚತುರ್ಮುಖ ಬಸದಿಯಿದೆ, ಗೊಮಟೇಶ‍್ವರ ವಿಗ್ರಹವಿದೆ, ಕ್ರೈಸ್ತರ ಪ್ರಸಿದ್ಧ ಅತ್ತೂರು ಚರ್ಚ್ ಇದೆ, ಹಿಂದೂಗಳ ಅನಂತಶಯನ ದೇವಸ್ಥಾನವಿದೆ, ವೆಂಕಟರಮಣ ದೇವಸ್ಥಾನ ಇದೆ. ಅಲ್ಲದೆ ಮುಸಲ್ಮಾನರ ಜಾಮಿಯಾ ಮಸೀದಿಯಿದೆ. ಇವೆಲ್ಲವೂ ಕಾಲ ಕಾಲಾಂತರದಿಂದ ಎಲ್ಲ ಮತೀಯರೂ ಇಲ್ಲಿ ಸಾಮರಸ್ಯದಿಂದ ಬಾಳಿದ ಕತೆ ಹೇಳುತ್ತವೆ.
ಕಾರ್ಕಳದಲ್ಲಿ ನಮಗೊಂದು ಸ್ವಂತದ ಮನೆಯಿದ್ದರೂ ಬಡತನದ ಕಾರಣ ಅದರಲ್ಲಿ ಅತಿಥಿಗಳನ್ನು ಕರೆಯುವಂತಹ ಯಾವ ಸೌಲಭ್ಯವೂ ಇರಲಿಲ್ಲ. ಹಾಗಾಗಿ ಗೆಳೆಯರನ್ನು ಅಲ್ಲಿಗೆ ಕರೆಯಲಾಗುತ್ತಿರಲಿಲ್ಲ. ಆದರೆ ನನಗಂತೂ ಅ ಊರಲ್ಲಿ ತಮ್ಮ ಮನೆಗೆ ಕರೆಯುವ ಅಸಂಖ್ಯ ಗೆಳೆಯರಿದ್ದರು; ಎಲ್ಲ ಮತಧರ್ಮಕ್ಕೆ ಸೇರಿದವರು. ನಕ್ರೆಯ ರೊನಾಲ್ಡ್ ಫೆರ್ನಾಂಡಿಸ್, ಕಣಂಜಾರಿನ ಇನಾಸ್ ಮಿನೆಜಸ್, ಸಾಲ್ಮರದ ಖಲೀಲ್, ಮುಶ್ತಾಕ್ ಅಹಮದ್, ರೆಂಜಾಳದ ಮುನಿರಾಜ ರೆಂಜಾಳ, ಬೈರ್ಲಬೆಟ್ಟುವಿನ ಜಿನರಾಜರು ಹೀಗೆ. 
ಕ್ರಿಸ್ ಮಸ್ ಬಂತೆಂದರೆ ರೊನಾಲ್ಡ್ ಫೆರ್ನಾಂಡಿಸ್ ಅಥವಾ ಇನಾಸ್ ಮಿನೆಜಸ್ ನ ಮನೆಯಲ್ಲಿ ರುಚಿರುಚಿಯಾದ ಇಡ್ಲಿ ಮತ್ತು ಪೋರ್ಕ್ ಇರುತ್ತಿತ್ತು; ಜತೆಗೆ ಒಂದಿಷ್ಟು ಎಣ್ಣೆಯೂ. ರಂಜಾನ್ ಬಂದರೆ ಮುಶ‍್ತಾಕ್ ನ ಮನೆಯಲ್ಲಿ ಸ್ವಾದಿಷ್ಟಕರ ಬಿರಿಯಾನಿ ಇರುತ್ತಿತ್ತು. ಜೈನ ಧರ್ಮೀಯನಾದ ಮುನಿರಾಜ ತನ್ನ ರೆಂಜಾಳದ ಮನೆಗೆ ಕರೆದು ರಾತ್ರಿಯಿಡೀ ಅಲ್ಲೇ ಇರಿಸಿಕೊಂಡು ವಿಶಿಷ್ಟ ಜೈನ ಖಾದ್ಯಗಳನ್ನು ತಿನ್ನಿಸುತ್ತಿದ್ದ, ತಿರುಗಾಡಿಸುತ್ತಿದ್ದ. ಇನ್ನು ಬೈರ್ಲಬೆಟ್ಟುವಿನ ಜಿನರಾಜರ ಮನೆಯಲ್ಲಿ ದೀಪಾವಳಿಯ ಮೂರು ದಿನಗಳ ಕಾಲದ ಉದ್ದಿನ ದೋಸೆ ಮತ್ತು ವಿಶಿಷ್ಟ ಉಪ್ಪಿನಕಾಯಿ ನೆನೆಸಿಕೊಂಡರೆ ಈಗಲೂ ಬಾಯಿಯಲ್ಲಿ ನೀರೂರುತ್ತದೆ. 
ಇವರಾರ ಮನೆಗೆ ಹೋದರೂ ನಾವು ಅವರು ಬೇರೆಯವರು ಅನಿಸುತ್ತಿರಲಿಲ್ಲ. ತಮ್ಮ ಮನೆಯವರಂತೆಯೇ ನಡೆಸಿಕೊಳ್ಳುತ್ತಿದ್ದರು, ಜತೆಯಾಗಿ ಕೂರಿಸಿ ತಿನ್ನುತ್ತಿದ್ದರು. ಅವರು ಬೇರೆ ಮತೀಯರು ಎಂದು ಅರಿವಾಗುವುದಕ್ಕೆ ಅವಕಾಶವೇ ಇರದಂತಹ ಉದಾರ ವರ್ತನೆ. ಮುಸ್ಲಿಂ ಸಮುದಾಯದವರ ಮನೆಗಳು ಬೇರೆ ಮತೀಯರಿಗೆ ಅಷ್ಟೊಂದು ಮುಕ್ತ ಪರಿಸರ ಅಲ್ಲ ಎಂಬ ಭಾವನೆ ಇದ್ದರೂ ನನಗೆ ಅ ಭೇದ ಕಂಡೇ ಇರಲಿಲ್ಲ. ಖಲೀಲ, ಮುಶ್ತಾಕನ ಮನೆಯಲ್ಲಿ ಆ ಮನೆಯವನಂತೆಯೇ ಓಡಾಡುತ್ತಿದ್ದೆ. ಅಲ್ಲಿನ ಹೆಣ್ಣುಮಕ್ಕಳೂ ನಮ್ಮೊಡನೆ ಮುಕ್ತವಾಗಿ ಮಾತನಾಡುತ್ತಿದ್ದರು.
ವೆಂಕಟ್ರಮಣ ದೇವಸ್ಥಾನದ ಜಾತ್ರೆ, ಬಾಹುಬಲಿ ಮಸ್ತಕಾಭಿಷೇಕ ಅಂದರೆ ಊರಿಗೇ ಹಬ್ಬ ಇದ್ದಂತೆ. ಅಲ್ಲಿ ಎಲ್ಲ ಮತೀಯರನ್ನೂ ಕಾಣಬಹುದಾಗಿತ್ತು. ಅತ್ತೂರಿನ ಇಗರ್ಜಿಯ ಸಾಂತ್ ಮಾರಿಗೆ ದೊಡ್ಡ ಸಂಖ್ಯೆಯಲ್ಲಿ ಹಿಂದೂಗಳೂ ನಡೆದುಕೊಳ್ಳುತ್ತಿದ್ದರು (ಅಲ್ಲಿನ ಸಾಂತ್ ಮಾರಿಯ ಸಮಯ ನಾವೂ ಅಂಗಡಿ ಹಾಕಿ ಬ್ರೆಡ್ ಆಮ್ಲೆಟ್, ಐಸ್ ಕ್ರೀಂ ಮಾರಿ ವ್ಯಾಪಾರ ಮಾಡುತ್ತಿದ್ದೆವು. ಮಾರಿದ್ದಕ್ಕಿಂತ ಹೆಚ್ಚು ನಾವೇ ತಿನ್ನುತ್ತಿದ್ದುದರಿಂದ ಅಂತಿಮವಾಗಿ ವ್ಯಾಪಾರದಲ್ಲಿ ನಷ್ಟವೇ ಜಾಸ್ತಿ ಇರುತ್ತಿತ್ತು. ಆದರೆ ಮೂರು ದಿನ ಅಲ್ಲಿ ಕಳೆದ ಖುಷಿಯ ಮುಂದೆ ಈ ಆರ್ಥಿಕ ನಷ್ಟ ಲೆಕ್ಕಕ್ಕಿರಲಿಲ್ಲ. ನಮ್ಮ ಆ ವ್ಯಾಪಾರಿ ಟೀಮ್ ನಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಈ ಮೂರೂ ಮತದವರಿದ್ದರು). ಯಾವ ರೀತಿಯಲ್ಲಿ ನೋಡಿದರೂ ಮತೀಯ ವೈವಿಧ್ಯದ, ಮತೀಯ ಸಾಮರಸ್ಯದ ಒಂದು ನಾಡು ಹೇಗಿರಬೇಕು ಎಂಬುದಕ್ಕೆ ಒಂದು ಉದಾಹರಣೆಯಂತಿತ್ತು ಕಾರ್ಕಳ.
ಅದು 1980 ರ ದಿನಗಳು. 1985ರ ನಂತರ ನನಗೆ ಕಾರ್ಕಳದೊಂದಿಗಿನ ನಂಟು ಕಡಿಮೆಯಾಯಿತು (ನನ್ನ ದೊಡ್ಡ ಭಾವ ಅಂದರೆ ಪುರುಷೋತ್ತಮ ಬಿಳಿಮಲೆಯವರ ಹಿರಿಯಣ್ಣ, ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪದ್ಮನಾಭ ಗೌಡರ ಮನೆ ಈಗಲೂ ಅಲ್ಲಿನ ತೆಳ್ಳಾರಿನಲ್ಲಿದೆ). ಅಲ್ಲಿನ ನಮ್ಮ ಮನೆ ಮಾರಿದುದರಿಂದ ಅಲ್ಲಿನ ಗೆಳೆಯರನ್ನು ನೋಡಲು ಮಾತ್ರ ಅಲ್ಲಿಗೆ ಹೋಗುತ್ತಿದ್ದೆ. 1990ರ ಬಳಿಕ ದೇಶದಲ್ಲಿ ಮತೀಯ ವಿಚಾರದಲ್ಲಿ ಆದ ಬದಲಾವಣೆಗಳಿಗೆ ಕಾರ್ಕಳವೂ ಹೊರತಾಗಲಿಲ್ಲ. ಅಲ್ಲಿನ ಹಿಂದೂ ಮುಸ್ಲಿಮ್ ಸಾಮರಸ್ಯದ ಬೇರುಗಳನ್ನು ಅಲುಗಾಡಿಸಲು ತೀವ್ರ ಯತ್ನ ಆರಂಭವಾಯಿತು. ಈಗಲೂ ಅದು ನಡೆದೇ ಇದೆ. ಮತೀಯ ನೆಲೆಯಲ್ಲಿ ಗಲಭೆ ಸೃಷ್ಟಿಸಲು ಯತ್ನಗಳೂ ನಡೆದವು, ಹಲ್ಲೆಗಳೂ ಆದವು. ಆದರೆ ಕೋಮುವಾದಿಗಳಿಗೆ ಹೇಳಿಕೊಳ್ಳುವಂತಹ ‘ಸಾಧನೆ’ ಮಾಡಲು ಸಾಧ‍್ಯವಾಗಲಿಲ್ಲ. ಅದಕ್ಕೆ ಕಾರಣ ಅಲ್ಲಿನ ಮಣ್ಣಿನ ಗುಣ. ಈ ನಾಡಿಗೆ ಇರುವ ಭವ್ಯ ಸೆಕ್ಯುಲರ್ ಪರಂಪರೆ. ಅದರ ಬೇರುಗಳು ಅಲುಗಾಡಿಸಲಾಗದಷ್ಟು ಗಟ್ಟಿಯಾಗಿಯೇ ಇವೆ. 
ಅವು ಗಟ್ಟಿಯಾಗಿಯೇ ಇರಲು ಇನ್ನೊಂದು ಕಾರಣವೂ ಇದೆ. ಈ ಮತೀಯ ಭಾವನೆ ಮತೀಯ ದ್ವೇಷ ಹೆಚ್ಚಾಗಿರುವುದು ಒಂದಿಷ್ಟು ಅಕ್ಷರಜ್ಞಾನ ಪಡೆದು ವಿದ್ಯಾವಂತರು ಎನಿಸಿಕೊಂಡವರಲ್ಲಿ (ಈಗಿನ ವಾಟ್ಸಪ್ ಯುನಿವರ್ಸಿಟಿಯ ಪದವೀಧರರಾದ ಇವರನ್ನು ವಿದ್ಯಾವಂತರು ಎನ್ನಲಾಗದು, ಬರೇ ಅಕ್ಷರಸ್ಥರು ಅಷ್ಟೇ), ಅದನ್ನು ಹರಡಲು ಯತ್ನಿಸುವವರೂ ಅವರೇ. ಆದರೆ ಸಾಮಾನ್ಯ ಜನ ಬಹುವಾಗಿ ಈಗಲೂ ಸೆಕ್ಯುಲರ್ ಆಗಿಯೇ ಇದ್ದಾರೆ. ಯಾಕೆಂದರೆ ಇದು ಬದುಕಿನ ಪ್ರಶ್ನೆ. ಎಲ್ಲ ಮತಧರ್ಮಗಳಿಗೆ ಸೇರಿದವರು ಇರುವ ಪ್ರದೇಶಗಳಲ್ಲಿ ಯಾರೊಬ್ಬರಿಗೂ ಕೋಮುವಾದಿಗಳಾಗಿ ಇತರರಿಂದ ಬೇರೆಯಾಗಿ ಬದುಕಲು ಆಗುವುದಿಲ್ಲ. ಈ ಅರ್ಥದಲ್ಲಿ ಬಹುತ್ವವೇ ಈ ದೇಶದ ವೈಶಿಷ್ಟ್ಯ ಮತ್ತು ಶಕ್ತಿ. ಮತೀಯ ಸಾಮರಸ್ಯ, ಸಹಬಾಳ್ವೆಯ ವಿಷಯಕ್ಕೆ ಬಂದಾಗ ಅಂತಿಮವಾಗಿ ಈ ದೇಶವನ್ನು ಉಳಿಸುವವರು ಕೊನೆಗೂ ಈ ಸಾಮಾನ್ಯ ಜನರು. 
#ಸೌಹಾರ್ದ_ಕಥನ
#ಸಹಬಾಳ್ವೆಯ_ಬದುಕು
~ಶ್ರೀನಿವಾಸ ಕಾರ್ಕಳ

೮.


Sudha Adukal....ನಾನೂ ಅಂಟಿಸಿದ್ದೇನೆ ಸಾಕಿಯ ಮಧುಶಾಲೆ
#ಸಹಬಾಳ್ವೆಯ_ಕಥನ
#ಸೌಹಾರ್ದ_ಬದುಕು 

ಬಳಸಿ

ಸ್ವಲ್ಪ ದೀರ್ಘ ಬರೆಹ...ನಿಧಾನವಾಗಿ ಓದಿಕೊಳ್ಳಿ.    

#ಮೊಹರಮ್_ಹಬ್ಬ, ಮತ್ತು #ರಾಜಮ್ಮನ_ಚೊಂಗೆ,

ನಮ್ಮ ಮನೆಯ ಎಡಗಡೆ ಪಾರ್ಶ್ವದ ಸಣ್ಣ ಮನೆಯನ್ನು ಒಬ್ಬ ಮುಸ್ಲಿಮ್ ಕುಟುಂಬಕ್ಕೆ ಬಾಡಿಗೆ ಕೊಟ್ಟಿದ್ದರು. ನಮ್ಮ ಅಪ್ಪನ ಕಾಲಕ್ಕೋ, ಅಜ್ಜನ ಕಾಲಕ್ಕೋ ಗೊತ್ತಿಲ್ಲ. ಆದರೆ ನಮ್ಮ ಮನೆಯ ಹಿಂದಿನ ಓಣಿಯೆಲ್ಲ ಪೆಂಡಾರ್ ಓಣಿಯೆಂಬ ಹೆಸರಿನ ಮುಸ್ಲಿಂ ಕೇರಿಯಿದೆ. ಸುತ್ತ ಮುತ್ತಲೂ ಬಹುತೇಕ ಜನ ಮುಸ್ಲಿಂರಾಗಿದ್ದಕ್ಕೋ ಅಥವಾ ಸರ್ವ ಧರ್ಮಸಮನ್ವಯತೆ ಮತ್ತು ಸಹಬಾಳ್ವೆಯ ಸಂಕೇತವೋ ಅಂತೂ ನಮ್ಮ ಬಾಡಿಗೆದಾರರು ’ಅಲ್ಲಾಬಕ್ಷ ಮತ್ತು ರಾಜಮ್ಮ” ಸಂಸಾರ.  ಅವರಿಗೆ ನಾಲ್ಕು ಗಂಡು ಇಬ್ಬರು ಹೆಣ್ಣು ಮಕ್ಕಳು.  ಆ ಸಣ್ಣ  ಮನೆಯ ಹೊರಗಿನ ಭಾಗಕ್ಕೆ ಬಿದಿರಿನ ತಟ್ಟಿ ಕಟ್ಕೊಂಡು ಅವರು ಅಲ್ಲಿ ಕುದುರೆ ಕಟ್ಟುತ್ತಿದ್ದರು. ಒಂದೆರಡು ಟಾಂಗಾ ಇದ್ದುವು.ಅವು ನಮ್ಮ ವಿಶಾಲ ಅಂಗಳದಲ್ಲೂ ಮತ್ತೆ ರಸ್ತೆಯಂಚಿಗೂ ನಿಂತಿರುತ್ತಿದ್ದವು.  ಒಂದು ಕುದುರೆ ಒಳಗಿದ್ದರೆ, ಇನ್ನೊಂದು ನಮ್ಮ ಅಂಗಳದಲ್ಲಿ.  ರಾಜಮ್ಮನ ದೊಡ್ದವರಿಬ್ಬರು ಗಂಡು ಮಕ್ಕಳು ಟಾಂಗಾ ಓಡಿಸುತಿದ್ದರು.  ನಾವು ಶಾಲೆಗೆ ಹೋಗುವಾಗ ಸೈಯದ್ ನ ಟಾಂಗೆಯಲ್ಲಿ ಹತ್ತಿ ಕೂತುಬಿಡುತ್ತಿದ್ದೆವು. ಅವ ಸ್ವಲ್ಪ ದೂರ ಅಂದರೆ ಕಾಮನಕಟ್ಟಿ ವರೆಗೆ ಹೋಗಿ ನಮ್ಮನ್ನು ಇಳಿಸುತ್ತಿದ್ದ. ಅಲ್ಲಿಂದ ನಮ್ಮ ಮಟ್ಟೀಪರಪ್ಪನ ಕೂಟಿನಲ್ಲಿದ್ದ  ಹತ್ತನೇ ನಂಬರಿನ ಶಾಲೆಗೆ ಓಟಕೀಳುತ್ತಿದ್ದೆವು.  ಬಾಬಾಜಾನ್ ಟಾಂಗೆಯಲ್ಲಿ ಕೂರುತ್ತಿರಲಿಲ್ಲ ಯಾವ ಮಕ್ಕಳೂ. ಅವ ಸ್ವ್ಲಲ್ಪ ಹುಚ್ಚನ ತರ. ಹೆದರಿಕೆ ಬರುತ್ತಿತ್ತು.  ಬೂಬುನ ಹೆಸರು ರಾಜಮ್ಮ ಹೇಗೆ ಅಂತಾ  ನಾನು ಯಾವತ್ತೂ ಕೇಳಲಿಲ್ಲ. ಮುಂದೆ ನನ್ನ ಬುದ್ಧಿಗೆ ತೋರಿದ್ದು ಬಹುಶಃ ಅವಳ ಹೆಸರು ರಜೀಯಾ ಬೇಗಮ್, ಅಥವಾ ರಜಿಯಾ ಬಾನೋ  ಅಂತಾ ಇದ್ದೀತು. ನಮ್ಮ ಭಾಷೆಯಲ್ಲದು ರಾಜಮ್ಮ ಆಗಿ ಹೋಗಿರಬಹುದು. ಅದಕ್ಕೆ ರಾಜಮ್ಮ ಯಾವತ್ತೂ ಆಕ್ಷೇಪಿಸಿಲ್ಲ.  ಕಪ್ಪಗೇ ಗಿಡ್ದಗಿನ ಆಕೃತಿಯ ರಾಜಮ್ಮ ಸದಾ ಹಸನ್ಮುಖಿ.  ಚಿಂತೆ- ದುಗುಡ ಏನೇ ಇರಲಿ ಯಾವತ್ತೂ ವಟಗುಡಿದ್ದನ್ನು ಕೇಳಿಲ್ಲ. 

ಅವರ ಮನೆಯ ಒಳಗಡೇ ಜಾಗ ಇರದ್ದಕ್ಕೆ ನಮ್ಮ ಕಟ್ಟೆಯ ಮೇಲೆ ಒಂದಿಬ್ಬರು ಮಕ್ಕಳು ಮಲಗುತ್ತಿದ್ದರು. ಎರಡೇ ರೂಮು. ಒಂದರಲ್ಲಿ ಅಡುಗೆಮನೆ, ಹೊರಗಿನದು ಅದಕ್ಕಿಂತಲೂ ಸಣ್ಣ ನಡುಮನೆ. ಅಷ್ಟೇ ಪುಟ್ಟ ಜಾಗದಲ್ಲಿ ಆರು ಮಕ್ಕಳು, ಗಂಡ ಹೆಂಡ್ತಿ, ರಾಜಮ್ಮನ ಗಂಡನಿಲ್ಲದ ನಾದಿನಿ ಹುಸೇನಬೀ, ಎರಡ್ಮೂರು ಆಡುಗಳು ಅಲ್ಲೆ ಬಾಗಿಲ ಆಚೆ  ಹೊರಗಡೆ ಕಟ್ಟಿರುತ್ತಿದ್ದರು.  ಕೋಳಿಗಳನ್ನು ಹಿಡಿದು ದೊಡ್ಡ ದೊಡ್ದ ಬಿದಿರಿನ ಬುಟ್ಟಿ ಮುಚ್ಚಿ ಇಟ್ಟಿರುತ್ತಿದ್ದರು.  ಮನೆಮುಂದೆ ಒಗೆಯುವ ಕಲ್ಲಿನ ಪಕ್ಕ ನೀರು ತುಂಬಿಸಿಡಲು ದೊಡ್ದ ಡ್ರಮ್ಮು, ಅಲ್ಲಲ್ಲೇ ಪೇರಿಸಿಟ್ಟ ಬೇಡದ ಚಿಂದಿ ಗಂಟು,ನಿಚ್ಚಣಿಕೆ, ಉರುವಲಿಗೆ ಒಟ್ಟಿಟ್ಟ ಕಟ್ಟಿಗೆ,  ಕೊಡಪಾನ, ಹರಕಲು ಬಾಲ್ಟಿ, ಬಾವಿಗೆ ಹೋಗಲು ಹಗ್ಗ, ತುಸು ದೂರಕ್ಕೆ ನಮ್ಮನೇ ಎದುರಿನ ಗೋಡೆಗೆ ಆನಿಸಿಟ್ಟ ಟಾಂಗಾದ ಮುರುಕಲು ಗಾಲಿ. ಗೋಡೆಯ ತುಂಬ ಸೆಗಣಿಯಿಂದ ತಟ್ಟಿದ ಕುಳ್ಳು.  ಅಂಗಳ ತುಂಬ ಕೋಳಿ ಹೇಲು, ಆಡಿನ ಹಿಕ್ಕೆಗಳೆ ತುಂಬಿರುತ್ತಿತ್ತು. ಬಿದಿರಿನ ತಟ್ಟಿ ಒಳಗಡೆ ಕುದುರೆ ಲದ್ದೀ  ಹೀಗೆಲ್ಲ ಒಮ್ಮೆ ನೋಡಿದರೆ  ಗಲೀಜು ಎನಿಸುವ, ಕಾಲಿಡಲಾಗದ ನೋಟ ಕಾಣುತ್ತಿತ್ತು. ಆದರೂ ಹಬ್ಬ ಹರಿದಿನ ಬಂತೆಂದರೆ ಸುಣ್ಣ ಬಣ್ಣ ಬಳಿದು, ಸಗಣಿ ಸಾರಿಸಿ ಚೆಂದಕಾಣುವ ಹಾಗೆ ಮಾಡುತ್ತಿದ್ದರು.  ರಮಜಾನದಲ್ಲಿ  ಮದರಂಗಿ (ಗೋರಂಟಿ)ಎಲೆ ತಂದು ನಮ್ಮ ಕಟ್ಟೆಮೇಲೆ ಕೂತು ಹುಸೇನ್ ಬೂಬು  ಮದರಂಗಿ ಅರೆಯುತ್ತಿದ್ದಳು.  ರಾತ್ರಿ ಅವರೆಲ್ಲ ಮದರಂಗಿ ಹಚ್ಚಿಕೊಳ್ಳುವಾಗೆಲ್ಲ ನಮ್ಮ ಮನೆ ಬಾಗಿಲು ಬಡಿದು ಬನ್ನಿ ಮೆಹಂದಿ ಹಚ್ಕೊ ಬನ್ನಿ ಮಕ್ಕಳೆ ಅಂತಾ ಕರೆಯುತ್ತಿದ್ದರು.  ನಾನು ತಂಗಿ ಇದಕ್ಕಾಗಿಯೆ ಕಾಯುತ್ತಿದ್ದವರಂತೆ ಅವ್ವನ ಯಾವ ಅಪ್ಪಣೆಗೂ ಕಾಯದೆ ಬುದಂಗನೇ ಎದ್ದು ಅವರ ಪುಟ್ಟ ಗೂಡಿಗೆ ಓದುತ್ತಿದ್ದೆವು. ಮದರಂಗೀ ಹಚ್ಚಿಕೊಳ್ಳುವುದೆಂದರೆ ಈಗಿನಂತೆ ವಿಧ ವಿಧ ವಿನ್ಯಾಸವಾಗಲೀ, ಕೋನ ಬಳಕೆಯಾಗಲೀ ಅಲ್ಲ. ತೋರು ಬೆರಳಿನಿಂದ ತಗೆದು ಅಂಗೈ ಮೇಲೆ ಗುಂಡು ಗುಂಡಗೆ ಇಡುತ್ತಾ ಹೋಗುವುದು ಇಲ್ಲಾ ಇಡೀ ಅಂಗೈಗೆ ಮತ್ತು ಉಗುರಿಗೆ  ಕೈಯಿಂದ ಪೂರ್ತಿ ಮೆತ್ತಿ ಬಿಡುವುದು. ಅಷ್ಟೇ.  ನಡು ರಾತ್ರಿವರೆಗೂ  ಹೊರಗಡೆ ಮಕ್ಕಳು ’ಚೀಡಿ ಚೀಡಿ ರಂಗ ದೇ, ರಂಗ ದೇ’ ಎಂದು ಹಾಡಿಕೊಳ್ಳುತ್ತಾ ಒಡಾಡುತ್ತಿರುತ್ತಿದ್ದರು ಮದರಂಗಿಯನ್ನು ಒಣಗಿಸಿಕೊಳ್ಳಲು. ನಾವು ಕೈಯನ್ನು ಹಾಸಿಗೆಯಿಂದ ಹೊರಗಿಟ್ಟುಕೊಂಡು ಮದರಂಗಿಯ ಕಡುಗೆಂಪು ರಂಗಿನ ಕನಸಲ್ಲಿ  ನಿದ್ದೆಗೆ ಜಾರುತ್ತಿದ್ದೆವು.  ರಾಜಮ್ಮನ ಕೋಳಿ ಕೂಗುವಾಗಲೇ ನಮಗೆ ಬೆಳಗು. ಆಡಿನ ಮರಿಗಳೊಂದಿಗೆ ಆಟ, ಕೋಳಿಗಳ ಹಿಂದೆ ಓಟ. ಅವನ್ನು ದೂರ ಓಡಿಸಲು.  ಮಸೀದಿಯ ಸಮಯ ಸಮ್ಯಕ್ಕೆ ಸರಿಯಾಗಿ ಆಗುವ ಅಜಾನ್ ಅವ್ವನ ಗಡಿಯಾರ. ಈಗ ಊಟದ ಹೊತ್ತು, ಈಗ ಚಹಾ ಹೊತ್ತು ಅಂತ ಅವಳ ಲೆಕ್ಕಾಚಾರವಿರುತ್ತಿತ್ತು.  

ಪ್ರತೀ ವರ್ಷ ರಮಜಾನ್ ದ  ಖೀರು, ಮೊಹರಂನಲ್ಲಿ ಮಾಡುವ ಚೊಂಗೆ ಮತ್ತಿತರ ಕಜ್ಜಾಯ ನಮಗೆ ಬರುತ್ತಿತ್ತು.  ರಮಜಾನ್ ನಲ್ಲಿ ಮಾಡುವ ಶ್ಯಾವಿಗೆ ಖೀರಿಗೆ ನಮ್ಮಲ್ಲಿ ಆಡುಭಾಷೆಯಲ್ಲಿ ’ಸುರುಕುಂಬಾ’ ಎನ್ನುತ್ತಿದ್ದರು.   ನಮ್ಮ ಮನೆಯ ಪಡಸಾಲೆಯಲ್ಲಿ ಒಂದು ಕಿಟಕಿಯಿತ್ತು. ಅದರ ಮೇಲೆ ಒಂದು ಗೂಡು. ಅದರಲ್ಲಿ ರಂಗೋಲಿ ಡಬ್ಬಿ, ಕುಂಕುಮ ಕರಡಿಗೆ ಯಾವತ್ತೂ ಇರುತ್ತಿತ್ತು ಬೆಳಿಗೆ ಎದ್ದು ಬಾಗಿಲ ಕಸ ಗುಡಿಸಿ, ನೀರು ಹಾಕಿ, ಬಾಗಿಲೆದುರಿನ ಅಂಗಳದ ಮಣ್ಣಿನ ನೆಲದಲ್ಲಿ ಒಂದೂವರೆ ಫೂಟು ವ್ಯಾಸದ ಗೋಲಾಕಾರವಾಗಿ ಸೆಗಣಿ ಸಾರಿಸಿ, ಅಲ್ಲಿ ರಂಗವಲ್ಲಿ ಇಟ್ಟರೇ ಬೆಳಗಿನ ಸುಪ್ರಭಾತ ಮುಗಿದು ನೀರು ತುಂಬುವ, ಒಲೆಯ  ಬೂದಿ ಬಳಿದು ಕೆಮ್ಮಣ್ಣು ಸಾರಿಸಿ ಮಡಿಗೊಳಿಸಿಯೇ ಅವ್ವನ ಮುಂದಿನ   ಕಾರ್ಯಕ್ರಮ ಆರಂಭವಾಗೋದು.  ಆಗ ಗ್ಯಾಸ್ ಸ್ಟೋವ್ ತಗೊಂಡಿರಲಿಲ್ಲ.   ರಮಜಾನ್ , ಮೊಹರಂ ಬಂದರೆ ನನ್ನ ಅವ್ವನಿಗೆ ಇರಿಸು ಮುರಿಸಾಗುವುದು. ಮುಜುಗರವೂ ಆಗುವುದು.  ರಾಜಮ್ಮ ಮಕ್ಕಳಿಗೆಂದು ಕೊಡುವ ಖೀರು, ಚೊಂಗೆ ಬೇಡವೆನ್ನಲೂ ಬಾಯಿಬರದು.  ಕೊಡಬೇಡಾ ಅಂದರೆ ತಪ್ಪು ತಿಳಿಬಹುದು.  ಆ ಪದಾರ್ಥ ಮನೆ ಒಳಗಡೆ ತರುವ ಬಗ್ಗೆಯೂ ಭಯ. ಧರ್ಮ - ಸಂಸ್ಕಾರ ಏನೆನ್ನುತ್ತದೊ ಎಂಬ ಅಳುಕು. ಹಾಗಾಗಿ ಅವಳು ಆರಿಸಿಕೊಂಡ ದಾರಿ ರಾಜಮ್ಮ ಏನೇ ಕೊಟ್ಟರೂ ಅದನ್ನು ಗೂಡಿನಲ್ಲಿ ಇಡುವುದು. ಮಕ್ಕಳೇನು ತಿಂದೇ ತಿಂತಾವೆ. ಬೇಡವೆಂದರೇ ಕೇಳ್ತೀವಾ ಸಾವಿರ ಪ್ರಶ್ನೆ. ಉತ್ತರಿಸಲು ಅವಳಿಗೆ ಗೊತ್ತಾಗುವುದಿಲ್ಲ.   ಮಕ್ಕಳು ತಿಂದರೆ ತಪ್ಪೇನು ?  ಚಿಕ್ಕ ಮಕ್ಕಳಿಗೆ ಯಾಕೆ ಜಾತಿ ಪಾತಿ ಎಂಬ ಉದಾರವಾದವೋ ತಿಳಿಯದು. ರಾಜಮ್ಮ ಕೊಟ್ಟ ಚೊಂಗೆ ತುಂಬಾ ರುಚಿ ಇರುತಿದ್ದವು. ತಿಂದ ನಂತರ ನಮ್ಮನ್ನು ಪರಿಶುದ್ಧಗೊಳಿಸುವ ಕ್ರಿಯೆ ನಡೆಯುತ್ತಿತ್ತು.  ಅವ್ವ ಊದಿನಕಡ್ಡಿಯಿಂದ ನಮ್ಮ ನಾಲಿಗೆಯ ತುದಿಗೆ ಸ್ವಲ್ಪವೇ ಬೆಂಕಿ ತಾಗಿಸಿ ಚೊಂಗೆ ತಿಂದ ಪಾಪವನ್ನು ಪರಿಹರಿಸುತ್ತಿದ್ದಳು. ನೆನಪಾದರೆ ಈಗ ನಗು ಬರುತ್ತದೆ.  ಹಾಗೇ ಯಾರು ಅವಳಿಗೆ ಹೇಳಿ ಕೊಟ್ಟಿದ್ದರು.  ಬೆಂಕಿಕಡ್ದಿಯಿಂದ ತಾಗಿಸಿ ಶುದ್ಧ ಮಾಡು ಅಂತಾ.  ಆದರೂ ನಮಗೆ ತಿನ್ನಲು ಅನುಮತಿ ಕೊಡುತ್ತಿದ್ದ ಅವಳ ಉದಾರವಾದ ನನಗೆ ಇಷ್ಟವಾಗುತ್ತದೆ.  ಅವಳ ಮುಗ್ಧತೆ  ಮನಸ್ಸಿನಿಂದ ಮರೆಯಾಗುವುದಿಲ್ಲ. 

ನಮಗಾಗಿ ಕೊನೆಗೆ ಅವ್ವನೂ ದಸರೆಯ ಲಕ್ಷ್ಮೀ ನಾರಾಯಣ ಜಾತ್ರೆಯಲ್ಲಿ ಚೊಂಗೆ ಮಣೆ ತಂದಿಟ್ಟುಕೊಂಡಿದ್ದಳು. ಮೊಹರಂ ನಲ್ಲಿ ನಮಗೆ ಮಾಡಿಕೊಡುತ್ತಿದ್ದಳು. ಚೊಂಗೆ ಮೊಹರಂ ನಲ್ಲಿ ಮಾತ್ರವೇ ಮಾಡುತ್ತಾರೆ. ಬೇರೆ ದಿನಗಳಲ್ಲಿ ಮಾಡುವುದಿಲ್ಲ.  ನಮ್ಮಲ್ಲಿ ಸುಮಾರು ಎಲ್ಲಾ  ಹಿಂದೂ ಮನೆಗಳಲ್ಲಿ ಚೊಂಗೆ ಮಣೆ ಇರುತ್ತಿದ್ದುದು ಸಾಮಾನ್ಯ.  ಮೊಹಮ್ಮದ ಪೈಗಂಬರರ ಮಗಳು ಬೀಬಿ ಫಾತಿಮಾ ಮತ್ತವಳ ಇಬ್ಬರು ಮಕ್ಕಳು ಹಸೇನ್, ಹುಸೇನ್ರೊ ದೊಡ್ಡ ಸೇನೆಯೊಂದಿಗೆ ಅಜ್ಜನೊಂದಿಗೆ ಯಹೂದಿಗಳೊಂದಿಗೆ ಯುದ್ದ ಮಾಡಿ ಹತರಾದುದಕ್ಕೆ ದು:ಖ, ಖೇದದ  ಸಾಂಕೇತಿಕ ಹಬ್ಬ. ಅವರಿಗೆ ಹತ್ತು ದಿನಗಳೂ ಮಾತಮ್.   ’ಕತಲ್ ರಾತ್ರಿ’ ಎಂದು ಒಂಬತ್ತನೇ ದಿನ ದೇವರು ಮೈದುಂಬಿ ಬೆಂಕಿ ಹೊಂಡವನ್ನು ಹಾರುತ್ತಾರೆ. ಅದು ಅಂದಿನ ಘೋರ ಯುದ್ಧದ ಸಂಕೇತ.  ಹತ್ತು ದಿನಗಳ  ಯುದ್ಧ ನಡೆದು ಎಲ್ಲರೂ ಹತರಾಗಿ ಕೊನೆಗೆ ’ಶಾಹದತ’ ಎಂದರೆ ದೇವರು ಹೊಳೆಗೆ ಹೋಗುವ ದಿನ. ಹುತಾತ್ಮರನ್ನು  ಸಂಸ್ಕಾರ ಮಾಡಿ ಹೊಳೆಯೆಲ್ಲಿ ಶುದ್ಧರಾಗಿ ಬರುತ್ತಾರೆ. ಮೂರು ದಿನ ಸೂತಕ.  ಹೊಳೆಯಲ್ಲಿ ಮಿಂದ ಆಲಿ ದೇವರುಗಳನ್ನು ಮಸೀದಿಯಲ್ಲೇ ಇಟ್ಟಿರುತ್ತಾರೆ.  ಮೂರು ದಿನ, ಒಂಭತು ದಿನ ನಂತರ ನಾಲ್ವತ್ತು ದಿನಗಳ ಸೂತಕವನ್ನು ಅವರವ್ರಿಗೆ ತಕ್ಕಂತೆ ಆಚರಿಸುತ್ತಾರೆ.  ಹೊಳೆಗೆ ಹೋದ ದಿನ ರಾತ್ರಿ  ಚೊಂಗೆ ಮತ್ತು ಶರಬತ್ ಮಾಡುತ್ತಾರೆ. ಇದು ನಮ್ಮ ಉತ್ತರ ಕರ್ನಾಟಕದ ಆಚರಣೆ.  ಹೆಚ್ಚಿನ ಹಿಂದೂಗಳೂ ಈ ದೇವರಿಗೆ ನಡೆದುಕೊಳ್ಳುತ್ತಾರೆ. ನಾವು ಮೊಹರಂನಲ್ಲಿ ಕೋರ್ಟಿನ ಆಲಿ ದೇವರಿಗೆ, ಹೆಬ್ಬಾಳ ಅಗಸೀಯಲ್ಲಿಡುತ್ತಿದ್ದ  ದೇವರಿಗೆ ಹೋಗಿ ಸಕ್ಕರೆ ಓದಿಸಿಕೊಂಡು ಬರುತ್ತಿದ್ದೇವು.  ಹಾಗೆ ನಮ್ಮನೇ ಹಿತ್ತಲಿಗೆ ತಾಗಿಕೊಂಡ ಹಿಂದಿನ ಮನೆ ಗಡ್ದೇ ಸಾಬರು ( ಗಡ್ದ ಬಿಟ್ಟುಕೊಂಡಿದ್ದಕ್ಕೆ ಗಡ್ಡೇ ಸಾಬರಾದರೋ ಏನೋ )  ನಮ್ಮ ಎರಡು ಓಣಿಯ ನಡುವಿನ ಸೂಫಿ ಸಂತರಿದ್ದಂತೆ.  ಅಳುವ ಮಗುವಿನ, ಸಣ್ಣ ಪುಟ್ಟ ಕಿರಿ ಕಿರಿಗೆ ನವಿಲುಗರಿಯ  ಬೆತ್ತದಿಂದ ನಿವಾಳಿಸಿ, ಬೆನ್ನಿಗೆ ಗುದ್ದಿ, ಸಕ್ಕರೆಗೆ ಮಂತ್ರ ಊದಿ ಕೊಡುತ್ತಿದ್ದರು.ಕೆಲವು ಬಾರಿ ಕರೀ ದಾರದಲ್ಲಿ ಚೀಟಿ ಕಟ್ಟಿದ ತಾಯಿತವನ್ನೂ  ಕೊಡುತ್ತಿದ್ದರು. ನೋಡಲೂ ಸೂಫಿ ಸಂತರಂತೆ ಯಾವಾಗಲೂ  ತಲೆಗೆ ಬಿಳಿ ದಾರದ ಹೆಣಿಕೆಯ ಟೊಪ್ಪಿ, ಒಂದು ಚೌಕಳಿ ಚೌಕಳಿ ಲುಂಗಿ, ಮೇಲೊಂದು ಬಿಳಿ ಜುಬ್ಬಾ.  ನಾನು ಅವರನ್ನು ಕೊನೇವರೆಗೂ ಕಂಡದ್ದು ಹೀಗೆಯೇ. ನಮ್ಮೂರಲ್ಲಿ ಮೊಹರಂನಲ್ಲಿ  ದೇವರುಗಳಿಗೆ ನಡೆದುಕೊಳ್ಳುವ ಭಕ್ತರು, ಕಷ್ಟ ಸುಖಗಳಿಗೆ ಮುಡಿಪು ಕಟ್ಟಿ ಬೇಡಿಕೊಳ್ಳುವವರು,  ತಲೆಗೆ ಕರವಸ್ತ್ರ ಕಟ್ಟಿಕೊಂಡು ಆಲಿ ದೇವರನ್ನು ಹೊರುವ ಹರಕೆಯ ಗಂಡಸರು, ಸೂಫಿ ಸಂತರುಗಳ ದರ್ಗಾಕೆ ಹೋಗುವ ಜನರ ಧಾರ್ಮಿಕ ನಂಬಿಕೆ, ದೋಷಪೂರಿತ ಸಾಮಾಜಿಕ ಮತ್ತು ರಾಜಕೀಯ ವಿರುದ್ಧಗಳಿಗೆ ತಲೆಕೆಡಿಸಿಕೊಳ್ಳದ ಸಾಮಾನ್ಯ ಜನರು.  ಅನರಕ್ಷರಾಗೇ ಬದುಕಿ, ಬೀಡಿ ಕಟ್ಟಿಕೊಂಡೋ, ಟಾಂಗೆ ಇಟ್ಟುಕೊಂಡೊ ಹೇಗೋ ಡಝನ್ ಗಟ್ಟಲೇ ಮಕ್ಕಳನ್ನು ಸಾಕಿಕೊಂಡು  ಬಾಳುವ ನನ್ನ ನೆರೆಹೊರೆಯ ಬೂಬುಗಳು ನಮ್ಮನ್ನು ಓದಿ ತಿಳಿದವರೆಂದು ತೋರಿದ ಪ್ರೀತಿ ಗೌರವ  ಮರೆಯಲಾರದು. ಇಂಥ  ಸಮನ್ವಯದ  ಸಹಬಾಳ್ವೆಯನ್ನು ಅನುಭವಿಸಿದ ನನಗೆ ಮತ್ತು ನನ್ನಂಥ ಬಹುತೇಕರಿಗೆ ಈಗಿನ  ಹಿಂದೂ ಮುಸ್ಲಿಂ ಗಲಭೆ ಅರ್ಥವಾಗುವುದಿಲ್ಲ. ಭಯೋತ್ಪಾದಕರನ್ನು ಹುಟ್ಟು ಹಾಕುವ ಪಾಕಿಸ್ತಾನ ಮತ್ತು ಕೋಮು, ಕಾಶ್ಮೀರ  ವಿವಾದ ಹಲವಾರು ಗೊಂದಲವನ್ನು ಸೃಷ್ಟಿಸಿ ಶಬ್ದಗಳಿಗೆ ನಿಲುಕದ ಹಳಹಳಿಕೆಯನ್ನೂ , ಮನಸ್ಸಿಗೆ ಕಸಿವಿಸಿಯನ್ನೂ ಉಂಟುಮಾಡುತ್ತದೆ. 

ಬಿಸಿಲಿಗೆ ಹಾಕಿದ ಒಣಮೆನಸಿನಕಾಯಿ, ಜೋಳ, ಸಂಡಿಗೆ ಇತ್ಯಾದಿಯನ್ನು ಕೈಯಲ್ಲಿ ಕೋಲು ಹಿಡಿದುಕೊಂಡು ಕೂತು ಆಡು ಬಾಯಿ ಹಾಕದಂತೆ, ಕೋಳಿ ಹೆಕ್ಕಿ ಕುಕ್ಕಿ ತಿನ್ನದಂತೆ ಕಾಯುವ ರಾಜಮ್ಮ.   ಅವ್ವನಿಗೆ ಓಣಿಯ ಸುದ್ದಿ ಸಮಾಚಾರ ಹೇಳುವ, ನಾವು ಶಾಲೆಯಿಂದ ತಲೆಗೆ ಹೇನು  ಮಾಡಿಕೊಂಡು ಬಂದಾಗ ಕೂರಿಸಿಕೊಂಡು ಹೆಕ್ಕಿ ಹೆಕ್ಕಿ ತೆಗೆದು, ಬಾಚಣಿಕೆಯಿಂದ ಬಾಚಿ ಕೊಡುವ ರಾಜಮ್ಮ.  ಗಿರಣಿಗೆ ಹಿಟ್ಟು ಮಾಡಿಸಿ ತರುವ  ಹುಸೇನ ಬೀ, ಮದರಂಗಿ ಅರೆದು ನನಗೂ ಕರೆದು ಹಚ್ಚುವ ಗುಲ್ಜಾರ, ದಿನಾ ತಪ್ಪದೇ ಇಡೀ  ಅಂಗಳ ಗುಡಿಸುವ ಮಾಬೂಬೀ.  ಸೈಯ್ಯದನ ಟಾಂಗೆ ಪೇಟೆಯಲ್ಲಿ, ಬಸ್ ಸ್ಟ್ಯಾಂಡಿನಲ್ಲಿ, ಕೂಟಿನಲ್ಲಿ  ಎಲ್ಲೇಯೇ ಕಂಡರೂ ಜಿಗಿದು ಕೂತರೆ ಮನೆವರೆಗೂ ತಂದು ಬಿಡುವ ಅವನ ವಿಧೇಯ ಕಾಳಜಿ.  ನಮ್ಮ ಹಿತ್ತಲಿಗೆ ಹೊಂದಿಕೊಂಡ ಮನೆಯ ದಾದೀಬೂ ತನ್ನ ಬಸುರಿ ಸೊಸೆಗಾಗಿ ಅವ್ವನನ್ನು ಕೂಗಿ ಕರೆದು  ಉಪ್ಪಿನಕಾಯಿ ಕೇಳುತ್ತಿದ್ದ ರೀತಿ. ನೋಟ್ ಬುಕ್ಕಿನಲ್ಲಿ ನವಿಲುಗರಿ ಇಟ್ಟುಕೊಂಡಿರು ಮರಿಹಾಕುತ್ತದೆ ಎಂದ ಗಡ್ದೆಸಾಬರ ಮೊಮ್ಮಗಳು ಜೈತೂನ್ ಬೀ.  ಮದುವೆಯಲ್ಲಿ ಡೋಲಕ್ ಬಾರಿಸುತ್ತಾ ಕನ್ನಡದಲ್ಲಿ ’ಚಿಗವ್ವಾ ಹೆಂಗೆಂಗ್ ಮಾಡ್ತಾನ್ ನೋದ್ಬೇ ಗುಮಾನಿ ಗುಮಾನಿ, ದೊಡ್ದವಾ ಹೆಂಗಂಗ್ ಮಾಡ್ತಾನ್ ನೋಡ್ಬೇ ಗುಮಾನಿ ಗುಮಾನಿ ’ ಎಂದು ಹುಸಿ ಚೇಷ್ಟೆ, ತಮಾಷೆ ಮಾಡುತ್ತ ಮುಖದ ತುಂಬಾ ನಗು ಸುರಿಸಿಕೊಂಡು ಹಾಡುತ್ತಿದ್ದ  ಫಾತೀಮಾಳನ್ನು ನಾನವರ ಚಾಪೆಯ ಮೇಲೆ ಕೂತು ಅನನ್ಯವಾಗಿ ಕೇಳಿದ ಘಳಿಗೆಯನ್ನು ಹೇಗೆ ಮೆಲುಕುಹಾಕುವುದು ಅಂತಾ ಯೋಚಿಸುತ್ತಿದ್ದೇನೆ.

೧೦.

ಎಲ್ಲಾ ಧರ್ಮದ ಜನರೂ ಮನುಷ್ಯರು ಮತ್ತು ಅಷ್ಟೇ ಎಂಬುದನ್ನು ತಿಳಿಸಲು ನನ್ನ ಅನುಭವದ ಪುಟ್ಟ ಬರೆಹ;
 
ನಾವು ಘಟ್ಟದ ಮೇಲಿನ ತಂಪು ಊರೊಂದರಲ್ಲಿದ್ದೆವು. ನರ್ಸರಿ ತರಗತಿಗೆ ಹೋಗುವ ವಯಸ್ಸಾಗಿದ್ದ ಮಗನನ್ನು ಶಿಸ್ತು ಶಿಸ್ತು ಎಂದು ಬೊಬ್ಬೆ ಹೊಡೆಯುವ ಶಾಲೆಗೆ ಸೇರಿಸುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಟೈ, ಬೆಲ್ಟು, ಬೂಟುಗಳನ್ನು ಬಿಗಿದು ಸೈನಿಕರಂತೆ ವೇಷ ಧರಿಸಿ ಬೆಳ್ಳಂಬೆಳಿಗ್ಗೆ ಸಪ್ಪೆ ಮುಖಹೊತ್ತು ಹೋಗುವ ಮಕ್ಕಳನ್ನು ಕಂಡರೆ ನನಗೆ ಪಾಪವೆನಿಸುತ್ತಿತ್ತು. ಹಾಗಾಗಿ ಮನೆಯ ಹತ್ತಿರವೇ ಇದ್ದು ಇಂತಹ ವಿಷಯಗಳಲ್ಲಿ ತೀರಾ ಸರಳವಾಗಿದ್ದ ಕನ್ನಡ ಮಾಧ್ಯಮದ ಖಾಸಗಿ ಶಾಲೆಗೆ ಸೇರಿಸಿದೆವು. ನಾವಿಬ್ಬರೂ ಬೆಳಿಗ್ಗೆಯೇ ಕೆಲಸಕ್ಕೆ ಹೊರಡುವವರಾದ್ದರಿಂದ ಮಗುವಿನ ಶಾಲೆ ದೂರವಾದರೆ ಕಷ್ಟ ಆಗುತ್ತಿತ್ತು. ಅದಲ್ಲದೆ ಹಾಡು, ಆಟಗಳು ಇದ್ದ ಆ ಶಾಲೆ ಉತ್ತಮ ಎಂದುಕೊಂಡೆವು; ದಿನಗಳೂ ಹಾಗೇ ಕಳೆಯುತ್ತಿದ್ದವು. ಆದರೆ ವಿನ್ಯಾಸ್ ಮೂರು- ನಾಲ್ಕನೇ ತರಗತಿಗೆ ಬರುವ ಹೊತ್ತಿಗೆ ಆ ಶಾಲೆಯ ಒಳತಿರುಳು ಗೊತ್ತಾಯಿತು. ಮಗನ ತಲೆಯಲ್ಲಿ ಆಗಲೇ ಕೋಮುದ್ವೇಷದ ಸಣ್ಣ ಕಿಡಿ ಹೊತ್ತುತ್ತಿರುವುದು ಅವನ ಮಾತುಗಳಲ್ಲಿ ತಿಳಿಯುತ್ತಿತ್ತು. ಅದು ಹಾಗಲ್ಲ ಎಂದು ಹೇಳಹೋದರೆ " ನಮ್ಮ ಮಾತಾಜಿಯಷ್ಟು ನಿನಗೇನು ಗೊತ್ತು?" ಎಂದು ನನ್ನ ಬಾಯಿ ಮುಚ್ಚಿಸುತ್ತಿದ್ದ! ಇದರಿಂದ ನಾವಿಬ್ಬರೂ ಚಿಂತೆಗೊಳಗಾದೆವು. ಸುಮಾರು ಒಂದು ವಾರ ಯೋಚಿಸಿ ನಮ್ಮನೆಯವರಿಗೆ ಕೆಲ ಮಾತುಗಳನ್ನು ಹೇಳಿದೆ. ಅದರಂತೆ ಅವರು ಮರುದಿನ ಮಗನ ಜೊತೆ ಆಟವಾಡುತ್ತಾ" ಪುಟ್ಟ , ನಿನ್ನಮ್ಮ ಮುಸ್ಲಿಂ..ನಿನಗೆ ಗೊತ್ತಾ?" ಎಂದರು. ಮಗನಿಗೆ ಆಶ್ಚರ್ಯ ! ಊಹೆಗೂ ಮೀರಿದ ಈ ವಿಷಯವನ್ನು ತಿರಸ್ಕರಿಸಿದ. ಆದರೆ ಇವರು " ಹೌದು ವಿನ್ಯಾಸ್, ಅವಳ ಮೊದಲಿನ ಹೆಸರು ಫಾತಿಮಾ. ಸಣ್ಣ ಮಗುವಾಗಿದ್ದಾಗಲೇ ಅಜ್ಜಯ್ಯ, ದೊಡ್ಡಮ್ಮ ಅವಳನ್ನು ದತ್ತು ತೆಗೆದುಕೊಂಡರು " ಎಂದರು. ಮಗ ಒಪ್ಪದಿದ್ದಾಗ " ನೋಡು, ಅಮ್ಮ ಮನೆಯಲ್ಲಿದ್ದಾಗ ಯಾವತ್ತಾದರೂ ಬೊಟ್ಟು ಇಡುತ್ತಾಳ? ಅವಳ ಆತ್ಮೀಯ ಸ್ನೇಹಿತೆ ಮುಸ್ಲಿಂ ಅಲ್ವಾ" ಎಂದೆಲ್ಲ ಹೇಳಿದರು. ನಾನೂ ಕೆಲ ಪೂರಕ ಅಂಶಗಳನ್ನು ಸೇರಿಸಿದೆ.  ಮಗ ಅರ್ಧ ಅನುಮಾನದಲ್ಲೇ ಒಪ್ಪಿಕೊಂಡ! ಅವನ ಎಳೆ ಮನಸ್ಸಿನಲ್ಲಿ ಏನಾಯಿತೋ ಗೊತ್ತಿಲ್ಲ.
 ಇದಾಗಿ  ಎರಡು ವರ್ಷದೊಳಗೆ ನಮ್ಮ ಜಿಲ್ಲೆಗೆ ವರ್ಗಾವಣೆ ತೆಗೆದುಕೊಂಡು ಬಂದೆವು.. ಮಗನ ಶಾಲೆ, ಪರಿಸರ ಬದಲಾಯಿತು. ಮತ್ತೂ ಎರಡು ವರ್ಷ ಕಳೆಯಿತು. ಇಷ್ಟೊತ್ತಿಗೆ ವಿನ್ಯಾಸ್ ಪೂರ್ತಿ ಬದಲಾಗಿದ್ದ. ಮನುಷ್ಯರೆಲ್ಲರೂ  ಒಂದೇ ಎಂಬ ಮನಸ್ಥಿತಿ ಅವನದಾಗಿತ್ತು.  ಈ ಸಂದರ್ಭದಲ್ಲಿ ಅವನಿಗೆ ನಾವು ಹೇಳಿದ್ದು ಸುಳ್ಳು ಎಂದು ತಿಳಿಸಿ, ಹಾಗೆ ಸುಳ್ಳು ಹೇಳಲು ಕಾರಣ ಆಗಿದ್ದ ಅವನ ಹಳೆಯ ಶಾಲೆಯ ವಾತಾವರಣವನ್ನು ನೆನಪಿಸಿದೆವು. ಅವನು ನಾವು ಮಾಡಿದ್ದು ಸರಿಯೆಂದು ಒಪ್ಪಿಕೊಂಡ.

ಈಗ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ನಮ್ಮ ಮಗ ನಮಗಿಂತಲೂ ಪ್ರಬುದ್ಧ ಮನಸ್ಥಿತಿ ಹೊಂದಿದ್ದಾನೆ ಎಂಬುದೇ ನಮ್ಮಿಬ್ಬರ ಹೆಮ್ಮೆ. ಅವನು ಶಾಲೆಯ ಪುಸ್ತಕಗಳಿಗಿಂತ ಇತರ ಪುಸ್ತಕಗಳು, ಜಗತ್ತಿನ ಅನೇಕ ವಿಷಯಗಳ ಕುರಿತು ಓದಿದ್ದೇ ಜಾಸ್ತಿ. ಜಾತಿ- ಧರ್ಮಗಳ ಮೇಲುಕೀಳು , ಮೂಢನಂಬಿಕೆಗಳು, ಮನುಷ್ಯನ ಸಣ್ಣತನಗಳು ಎಲ್ಲವನ್ನೂ ಖಂಡಿಸುತ್ತಾನೆ. ಮಾನವೀಯವಾಗಿ ಯೋಚಿಸುತ್ತಾನೆ. 
ನನಗೂ ಅಷ್ಟೇ. ನಾನು ಹಿಂದೂ ಧರ್ಮದಲ್ಲಿ ಹುಟ್ಟಿದ್ದು ಒಂದು ಆಕಸ್ಮಿಕವೆಂದು ಅರ್ಥಮಾಡಿಕೊಂಡಿದ್ದೇನೆ. ಸದಾ ಮನುಷ್ಯಳಾಗಿಯೇ ಇರಲು ಬಯಸುತ್ತೇನೆ.

ಕೊರೊನಾ ತೊಲಗಿಯೇ ತೊಲಗುತ್ತದೆ. ನಮ್ಮೊಳಗೆ ಇರಬಹುದಾದ ಕೋಮುದ್ವೇಷದ ವೈರಸ್ಸುಗಳನ್ನು ಹುಡುಕಿ ನಾಶಪಡಿಸೋಣ.
*
ವಿಜಯಶ್ರೀ ಹಾಲಾಡಿ

೧೧.

ತನ್ನ 14 ನೇ ವಯಸ್ಸಿಗೇ ಊರು ಬಿಟ್ಟು ಮುಂಬಯಿ ಪಟ್ಟಣ ಸೇರಿದ ನಮ್ಮ ತಂದೆಯ ಬದುಕಿಗೆ ಆಶ್ರಯವಾಗಿದ್ದು ಮುಸಲ್ಮಾನರು ನಡೆಸುತ್ತಿದ್ದ ಪುಕಾರ್ ಬೇಕರಿ.. ಹಲವು ವರ್ಷಗಳ ಕಾಲ ಆ ಬೇಕರಿಯಲ್ಲಿ ಕೆಲಸ ನಿರ್ವಹಿಸಿದ ನಮ್ಮ ತಂದೆಗೆ ನಂತರದ ದಿನಗಳಲ್ಲಿ ಮುಂಬಯಿಯ ಪ್ರಮುಖ ಭಾಗಗಳ ಅಂಗಡಿಗಳಿಗೆ ಬೇಕರಿ ಉತ್ಪನ್ನಗಳ ಮಾರಾಟ ಮಾಡುವ ಸ್ವತಂತ್ರ ವ್ಯವಸ್ಥೆಯನ್ನು ಮಾಲಿಕರು ಮಾಡಿಕೊಟ್ಟರು..  ಅಕ್ಕನ ಮದುವೆಯಾಗಿ... ಅಣ್ಣನಿಗೆ ಮುಂಬಯಿ ಕಂಪೆನಿಯಲ್ಲಿ ಕೆಲಸ ಸಿಕ್ಕಿ ಅವನು ನಮ್ಮ ಸಂಸಾರದ ನೊಗ ಹೊರಲು ಸಿದ್ಧನಾದ ಮೇಲೆ.. ಅಪ್ಪ ತನ್ನ ಲೈನ್ ಸೇಲ್ ನ್ನು ಅವರ ಮಿತ್ರ ಉತ್ತರಪ್ರದೇಶದ ಮುಸ್ತಾಕ್ ಅನ್ನುವವರಿಗೆ ವಹಿಸಿಕೊಟ್ಟು ಊರಿಗೆ ಬಂದರು.. ಮುಸ್ತಾಕ್  ಪ್ರತಿ ತಿಂಗಳೂ ಚಾಚು ತಪ್ಪದೇ ವ್ಯಾಪಾರದಲ್ಲಿ ಸಿಕ್ಕ ಲಾಭಾಂಶದ ಪಾಲನ್ನು ಅಪ್ಪನಿಗೆ ಮನಿ ಆರ್ಡರ್ ಮಾಡುತ್ತಿದ್ದರು.. ಮನಿ ಆರ್ಡರ್ ತಲುಪಿದ ದಿನವೇ ಮುಸ್ತಾಕರಿಗೆ ಧನ್ಯವಾದ ಅರ್ಪಿಸಿ.. ಅವರ ಕಷ್ಟ ಸುಖಗಳನ್ನು ವಿಚಾರಿಸಿ ಹಿಂದಿಯಲ್ಲಿ ನನ್ನ ಬಳಿ ಅಪ್ಪ ಕಾಗದ ಬರೆಸುತ್ತಿದ್ದರು.. 
ತನ್ನ ಬದುಕಿಗೆ ದಾರಿ ತೋರಿದ.. ಕಷ್ಟ ಕಾಲದಲ್ಲಿ ಸಹಕರಿಸಿದ ಇಂತಹ ಮುಸ್ಲಿಂ ಗೆಳೆಯರ ಜೊತೆ ತಾನು ಕಳೆದ ದಿನಗಳ ಅನುಭವಗಳ ಕುರಿತು ಅಪ್ಪ ನಮ್ಮೊಂದಿಗೆ ಆಗಾಗ ಹಂಚಿಕೊಳ್ಳುತ್ತಿದರು.. ಆ ಕಾರಣಕ್ಕಾಗಿಯೇ ನಮಗೆಲ್ಲಾ ಈಗಲೂ ಮುಸ್ಲಿಂಮರ ಮೇಲೆ ಅತೀ ಪ್ರೀತಿ.. ಅವರನ್ನು ಬಾಂಧವರು ಎನ್ನುವಾಗ ಹೃದಯ ತುಂಬಿ ಬರುತ್ತೆ...
ಆ ದಿನಗಳಿಂದ ಹಿಡಿದು ತೀರಾ ಇತ್ತೀಚಿನವರೆಗೂ ಕರಾವಳಿಯ ಬಹುತೇಕ ಹಿಂದೂ ಕುಟುಂಬಗಳ ಸದಸ್ಯರು ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಪಡೆಯುವ ಅವಕಾಶ ಪಡೆದಿದ್ದಾರೆಂದಾದರೆ ಅದಕ್ಕೆ ಬಹುಮುಖ್ಯ ಕಾರಣ ಮುಸ್ಲಿಮರು.. ಕೆಲಸ ಕೊಡಿಸುವುದಲ್ಲದೇ ತಾನು ಗಲ್ಫ್ ನಿಂದ ಊರಿಗೆ ಬರುವಾಗೆಲ್ಲಾ ಸೆಂಟ್ ಬಾಟಲನ್ನೂ ಪ್ಯಾಂಟ್ ಶರ್ಟ್ ಪೀಸ್ ಗಳನ್ನು ನೆನಪಿನಿಂದ ತಮ್ಮ ಹಿಂದೂ ಗೆಳೆಯರಿಗೆ ತಂದುಕೊಟ್ಟು  ಪ್ರೀತಿ ಮೆರೆಯುತ್ತಿದ್ದರು.. 
ಯಾರೋ ಒಂದಷ್ಟು ಧರ್ಮಾಂಧ ಅವಿವೇಕಿಗಳು ಆಗಾಗೇ ವಿಕೃತಿ ಪ್ರದರ್ಶಿಸಬಹುದು.. ಅದು ಅಕ್ಷರಶಃ ಖಂಡನಾರ್ಹ... ಆದರೆ ಪ್ರೀತಿಸುವ ಹೃದಯಗಳೂ ಅಲ್ಲಿ ಸಾಕಷ್ಟಿವೆ..
ನಮ್ಮ ಅಮ್ಮ ತನ್ನ ಕೊನೆ ಘಳಿಗೆಯಲ್ಲೂ ನೆನಪು ಮಾಡಿಕೊಳ್ಳುತ್ತಿದದ್ದು  ನಾವು ಮಕ್ಕಳು ಊರಲ್ಲಿರದ ಸಂದರ್ಭ... ಇಲ್ಲಾ ಅನಿವಾರ್ಯ ಕಾರಣಗಳಿಂದ ನಮಗೆ ಅನನುಕೂಲವಾಗಿದ್ದಾಗ.. ಮಗನಂತೆ ಮನೆಗೆ ದಿನಸಿ ಸಾಮಗ್ರಿಗಳನ್ನು ಬೇಕೆಂದಾಗಲೆಲ್ಲ ತಂದುಕೊಡುತ್ತ ಆಸರೆಯಾಗಿದ್ದ ಅಷ್ಫಕ್ ನನ್ನು... 
ಬಾಂಧವ್ಯ ಹೃದಯದಿಂದ ಮೂಡುತ್ತೆ..
“ಸಂಬಂಜ ಅನ್ನೋದು ದೊಡ್ಡದು ಕನಾ”

೧೨.

#ಸಹಬಾಳ್ವೆಯ_ಕಥನ
#ಸೌಹಾರ್ದ_ಬದುಕು 

#ಸಾಬರೊಡನೆ_ಸಹವಾಸದ_ಬದುಕಿನ_ಚಿತ್ರಗಳು   

  ಮೊವತ್ತು ವರ್ಷಗಳಾಚೆಯ ಬದುಕು ಎಷ್ಟೊಂದು ಚೆನ್ನಾಗಿತ್ತು! ಈ ಮತಧರ್ಮ ಆಧಾರಿತ ಭಿನ್ನಭೇಧಗಳು ನಮ್ಮಂತಹವರ ತನಕ ಇಳಿದು ಬಂದಿರಲಿಲ್ಲ.ಅದು ಎಲ್ಲಿಯದೋ ಓದಿನ ಮಾತಾಗಿತ್ತು. ಪಳ್ಳಿಯ ಬಾಂಗು ಕೇಳಿದರೆ ಎಳೆತನದ ಬುದ್ದಿಯಿಂದ ಹಾಗೆಯೇ ಕೂಗಿದರೆ,ಹಾಗೆ ಕೂಗಬಾರದು,ಕೂಗಿದರೆ ಅವರ ಗಂಟಲು ಕಟ್ಟುತ್ತದೆ,ಎಂದು ಅಮ್ಮ ತಿಳಿಹೇಳುತ್ತಿದ್ದಳು.ಅವರ ಗಂಟಲು ಕಟ್ಟಬಾರದು ಎಂಬ ಸಹಾನುಭೂತಿಯ ಪ್ರೇಮ ನಮ್ಮ ಹಿರಿಯರ ಎದೆಯ ಬೆಳಕಾಗಿತ್ತು.ಬೀಡಿ ಕಟ್ಟುವ ಶೆಟ್ರ್‌ಕಟ್ಟಿ ಸಾಯ್ಬ್ರ್ ಅಮ್ಮ ನನ್ನಮ್ಮನ ಗೆಳತಿ, ಬೀಡಿ ಕಟ್ಟುತ್ತಿದ್ದ ನನ್ನ ಅಕ್ಕನ ಜೊತೆಗಾತಿ.ಒಂದು ಕಾಲದಲ್ಲಿ  ಮೀನು ಮಾರುತ್ತಿದ್ದ ನಮ್ಮೂರ  ಚರಿಯಬ್ಬ ಸಾಹೇಬರ ಚಿತ್ರವನ್ನು ತನ್ನ ಮಾತುಗಳಲ್ಲಿ ಕಟ್ಟಿಕೊಡುತ್ತಿದ್ದಳು ಅಮ್ಮ.ಅದೇ ಚರಿಯಬ್ಬ ಸಾಹೇಬರು ಹಂಚಿನ ಕಾರ್ಖಾನೆ ,ಗೇರುಭೀಜದ ಕಾರ್ಖಾನೆ ಕಟ್ಟಿ ಜಾತಿಮತ ಪ್ರಜ್ಞೆ ಮೀರಿ ಉದ್ಯೋಗಾವಕಾಶ ಕಲ್ಪಿಸಿದ್ದು ಈಗ ಇತಿಹಾಸ.
               ಯಕ್ಷಗಾನ ರಂಗಭೂಮಿಯ ಇತಿಹಾಸದಲ್ಲಿ ಒಂದು ಗಣನೀಯ ಮೇಳವಾದ ನಮ್ಮ ಸೌಕೂರು ಮೇಳ ಜೋಡಾಟದಲ್ಲಿದ್ದರೆ,ಮೇಳದವರನ್ನು ಹುರಿದುಂಬಿಸುತ್ತಿದ್ದವರಲ್ಲಿ ಕಂಡ್ಲೂರು,ಕಾವ್ರಾಡಿ ಭಾಗದ ಸಾಬರ ಗುಂಪು ದೊಡ್ಡದಿರುತಿತ್ತು. ಸೌಕೂರು ದೇವಸ್ಥಾನದ ವಾರ್ಷಿಕ ರಥೋತ್ಸವ ತೇರುಕಟ್ಟುವಲ್ಲಿ ನಮ್ಮೂರ ಸಾಬರ ಸೇವೆ ಕೂಡ ಉಂಟು.ಮಂದಾರ್ತಿ ಮೇಳದಲ್ಲಿ ಹಾರಾಡಿ ರಾಮನ ಕರ್ಣನ ಎದುರಿನ ಕೃಷ್ಣ ಮಾಡುವವರು ಯಾವುದೋ ಮುಸ್ಲಿಂ ಪ್ರೇಕ್ಷಕರಿಂದ ಬಯ್ಯಿಸಿಕೊಳ್ಳಬೇಕಾಗುತಿತ್ತು ಎಂದು ಓದಿ ತಿಳಿದದ್ದಿದೆ. ಒಂದು ಸಾರ್ವಜನಿಕ ಸಾಮಾಜಿಕ ವ್ಯವಸ್ಥೆ ಅಂದರೆ ಅದೊಂದು ಜಾತಿ,ಮತ,ಪಂಥಗಳನ್ನೆಲ್ಲ ಮೀರಿ ಎಲ್ಲರೂ ಒಂದಾದ,ಎಲ್ಲರೊಳಗೊಂದಾದ ಒಂದು ಚಂದದ ನೇಯ್ಗೆ.ಅಂತಹ ದಿನಗಳನ್ನು ನಾವು ಯಾರದೋ ಶ್ರೀಮಂತ ಬದುಕಿನ ಕನಸಿಗೆ ಬಲಿ ಕೊಡಬಾರದು.
               ಮನೆ ಎದುರಿಗೆ ಮೀನು ಮಾರಲು ತರುವ ಸಾಬಣ್ಣ,ಮಿಮ್ಮಿಮಿಮ್ಮಿ ಅಂತ ಓಡುವ ನಮ್ಮನೆ ಮಗು,ಮಗುವಿನ ಮೇಲಿನ ಪ್ರೀತಿಯಿಂದ ಮೂರ್ನಾಲಕು ಮೀನು ಉಚಿತವಾಗಿಯೇ ಕೊಟ್ಟ ಸಾಬಣ್ಣ,ಇದು ತೀರ ಇತ್ತೀಚಿನ ಚಿತ್ರ. ಸಾಯ್ಬರ ಅಂಗಡಿಗಳಲ್ಲಿ ನಗದು  ದುಡ್ಡು ಕೊಡದೇ ಸಾಲಕಡ ಮಾಡಿ ಸಾಮಾನು ತಂದು,ತಿಂದು,ಹೇತು ಬಹಳ ತಡ ಮಾಡಿ ಕೊಟ್ಟೋ,ಕೊಡದೆಯೋ  ಬದುಕಿದವರ ಮಕ್ಕಳು 
ನಾವಾಗಿರಬಹುದಾದ ಸಾಧ್ಯತೆಗಳನ್ನೂ ನಾವು ಹುಡುಕಿಕೊಳ್ಳಬೇಕು. ಅಂತಹವರ ಮಕ್ಕಳೂ ಇಂದು ಸಾಬರನ್ನು ಬಯ್ಯೋದು ನೋಡಿದರೆ ನಾವೆಲ್ಲಿಗೆ ಬಂದು ನಿಂತಿದ್ದೇವೆ,ಈ ಚಕ್ರಭೀಮನ ಕೋಟೆ ಒಡೆಯೋದು ಹೇಗೆ ಎಂಬ ಚಿಂತೆ ಹತ್ತುತ್ತದೆ.
            ಗುಲ್ವಾಡಿ ಹನುಮಂತ ದೇವರ ವಾರ್ಷಿಕ ಜಾತ್ರೆಗೆ ಸ್ಥಳೀಯ ಮುಸ್ಲಿಂ ವ್ಯಕ್ತಿಗಳು ಬೆಂಬಲವಾಗಿ ನಿಲ್ಲುತ್ತಿದ್ದುದನ್ನು ಇಂದಿಗೂ ನೆನಪಿಸಿಕೊಳ್ಳುವ ನಮ್ಮ ಹೊಳ್ಳ ಮಾಸ್ತರು -ಉಪ್ಪಿನಕುದ್ರು ವೆಂಕಟರಮಣ ಹೊಳ್ಳ-  ಆ ದಿನಗಳಲ್ಲೇ ಗುಲ್ವಾಡಿಯಲ್ಲಿ ಜಾತ್ರೆಯ ಭಾಗವಾಗಿ ಸರ್ವಧರ್ಮೀಯ ಸಭೆ ಮಾಡಿದ್ದಿದೆ.
            ಹಿಂದುಗಳು ದೇವಸ್ಥಾನಗಳಿಗೆ,ದೈವಸ್ಥಾನಗಳಿಗೆ ಮಾತ್ರ ನಡೆದುಕೊಳ್ಳುತ್ತಾರೆ ಎಂದು ಎಣಿಸಿದರೆ ಅದು ತಪ್ಪು,ಮಸೀದಿ,ಇಗರ್ಜಿಗಳಿಗೂ ನಡೆದುಕೊಳ್ಳುವ ಅದೆಷ್ಟೋ ಹಿಂದುಗಳಿದಾರೆ.ಸಾಬರ ದೇವರಿಂದಲೇ,ಮಸೀದಿಯಿಂದಲೇ ತನ್ನ ಮಗು ಸಾಯದೇ ಉಳಿಯಿತು ಎಂದು ನಂಬಿ ಮುಸ್ಲಿಂ ಹೆಸರನ್ನು ಅಡ್ಡಹೆಸರಾಗಿ ಇಟ್ಟ ಹಿಂದುಗಳಿದಾರೆ.ಮನೆಗಳಲ್ಲಿ, ನಡೆಯುವ ಪೂಜೆ ಇತ್ಯಾದಿಗಳಲ್ಲಿ ಪರಗಿರಾಸ್ತರಿಗೂ,ಪರಮತಸ್ಥರಿಗೂ ಕಾಯಿಕಡಿ,ಪಂಚಕಜ್ಜಾಯ,ಹೂವಿನಹುಸಿ ಕೊಡುವ ಕ್ರಮ ಇದೆ.ಸ್ವತಃ ದೈವ ಪರಮತಸ್ಥರನ್ನು ಕರೆದು ಹೀಗೆ ಪ್ರಸಾದ ಕೊಡುವ ಕ್ರಮ ಇದೆ.ಜನಪದ ಹಿಂದು ಧರ್ಮ ಅಂತ ಏನಿದೆ,ಅದು ಬಹಳ ಉದಾರವಾದಿಯಾದದ್ದು.ಅದು ಸಾಬರನ್ನು ತನ್ನ ತೆಕ್ಕೆಯೊಳಗೆ ತಗೊಳ್ಳುತ್ತದೆ,ಇಸ್ಲಾಂ‌ನ ತೆಕ್ಕೆಯೊಳಗೆ ಧ್ಯಾನಿಸುತ್ತದೆ.ಅದರ ಈ ಗುಣವನ್ನು ಉದಾರವಾದಿ ಇಸ್ಲಾಂ ಪ್ರೀತಿಯಿಂದಲೆ ತನ್ನೊಳಗೆ ಒಗ್ಗಿಸಿಕೊಂಡಿದೆ.
            ಇಂತಹ ಚಂದದ ಬದುಕನ್ನು ನಮ್ಮ ಮುಂದಿನ ತಲೆಮಾರಿಗೆ ಕಷ್ಟಪಟ್ಟಾದರೂ ಉಳಿಸಿಕೊಡಬೇಕಾದ ಹೊಣೆ ನಮ್ಮ ಮೇಲಿದೆ.ಆ ಹೊಣೆ ನಿರ್ವಹಿಸಲು ಒಂದಾಗಿ ಕ್ರಿಯೋನ್ಮುಖರಾಗುವ ತುರ್ತು ಕೂಡ ನಮ್ಮ ಮುಂದಿದೆ.
            ~ತಿಮ್ಮಪ್ಪ ಗುಲ್ವಾಡಿ

೧೩.

Sudha Adukal ಸಾಕಿಯ ಮಧುಶಾಲೆ 

ಹೋಮ್ ವರ್ಕ್ ಮಾಡಿದಿವಿ ಒಪ್ಪಸ್ಕಳಿ..

( ಕಮೆಂಟುಗಳು ದಯವಿಟ್ಟು ನಿಮಗೆ ಚಾಚಾ ಇಷ್ಟವಾದಲ್ಲಿ,ಚಪ್ಪಾಳೆ-ಹಾರ್ಟು ಇತ್ಯಾದಿ ಇಮೋಜಿ ಮುಖೇನ ಇರಲಿ, ಬರಹ ಬೇಡ) 
-----‐-----‐------------‐------------------------------------------

ಭಕ್ತಿಗೊಲಿಪ ಮುಕ್ತಿಗೊಡೆಯ
ಖಾದರಲಿಂಗ ನೆಲಸಿಪ ಗಿರಿಗೆ...

ಹೀಗೆ ಮೊನ್ನೆ ನಾನೊಂದು status ಹಾಕಿದೆ, ಗೆಳೆಯರು ನೀವು ನನ್ನ ಪ್ರಯಾಣಕ್ಕೆ ಶುಭ ಹರಸಿದಿರಿ, ವೈದ್ಯಾನುಮತಿಯಿಲ್ಲದೆ ನಾನು ದೂರದ ಪ್ರಯಾಣ ಇನ್ನೂ ಒಂದು ತಿಂಗಳು ಮಾಡುವಂತಿಲ್ಲ, ಮೊನ್ನೆ 26 ರ ಜನೆವರಿ ನಾನು ಹೋಗಿದ್ದು ಈ ಕೆಳಗಿನ ಚಿತ್ರದಲ್ಲಿರು ಚಾಚಾ "ಖಾದರಭಾಷಾ" ಸಂದರ್ಶನ ಮಾಡಲು..

ಧಾರವಾಡದವರಾದರೆ/ ನೀವು ಧಾರವಾಡದ ಕರ್ನಾಟಕ ಕಾಲೇಜು ನೋಡಿದ್ದರೆ, ಕಾಲೇಜಿನ ಪ್ರವೇಶ ದ್ವಾರದ ಮುಂದಿರುವ ವೃತ್ತಕ್ಕಂಟಿಕೊಂಡು ಒಂದು ಪ್ರಸಿದ್ಧ ಗಣೇಶ ದೇವಸ್ಥಾನವಿದೆ, ಗುಡಿಗೆ ಮುಖ ಮಾಡಿ ನಿಂತರೆ ಬಲಗಡೆ ಆಕಾಶವಾಣಿ ವಸತಿ ಗೃಹ, ಅದರ ತುದಿಗೆ ದೊಡ್ಡ ಹುಣಸೆ ಮರ, ಅದರ ಬುಡದಲ್ಲಿ ತರಕಾರಿ ವ್ಯಾಪಾರ.

ಆ ಹುಣಸೆ ಗಿಡ ಹತ್ತಿ 22-25 ವರ್ಷದ ಯುವಕನೊಬ್ಬ ಹುಣಸೆ ಹಣ್ಣು ಕೀಳುತ್ತಿದ್ದ, ಗಿಡದ ತುದಿಯಲ್ಲಿ ಹೆಚ್ಚುಕಮ್ಮಿ ಗಿಡದ ಟೊಂಗೆಗಂಟಿಕೊಂಡೆ ಎಳೆಯಲಾದ ವಿದ್ಯುತ್ ತಂತಿ ನೋಡಿಲ್ಲ ಈ ಹುಡುಗ, ಅವನು ಹಣ್ಣು ಹರಿಯುತ್ತ ಹರಿಯುತ್ತ ತುದಿ ತಲುಪುವಷ್ಟರಲ್ಲಿ ವಿದ್ಯುತ್ ತಂತಿ ಹುಡುಗನ ಹಿಂದಲೆಗೆ ತಗುಲಿ ಗಿಡದಲ್ಲಿ ಸಿಕ್ಕು ಒದ್ದಾಡತೊಡಗಿದ್ದ, ಬುಡದಲ್ಲಿ ಹಣ್ಣು ಆಯ್ದುಕೊಳ್ಳುತ್ತಿದ್ದ ಆತನ ಸಂಬಂಧಿಗಳು ಜೋರಾಗಿ ಕಿರುಚುತ್ತ, ಅಳುತ್ತಾ ಇಡಿ ವೃತ್ತ ಜನ ಜಾತ್ರಿ ಕೂಡಿತು.  

ಖಾದರಭಾಷಾ ಇದೆ ವೃತ್ತದ ತುದಿಗೆ ಕಬ್ಬಿನಗಾಣ ಇಟ್ಟುಕೊಂಡು ಸಿಹಿ ಹಾಲು ಮಾರುವ ಕಬ್ಬಿನ ಗಣೆಯಂತ ಮನುಷ್ಯ. ಈ ಘಟನೆ ನೋಡಿತ್ತಿದ್ದಂತೆ ಭಾಷಾ ಚಾಚಾ( ನಾವೆಲ್ಲ ಚಾಚಾ ಅಂತಲೇ ಕರೆಯುತ್ತಿದ್ದೆವು, ಈಗಲೂ)  ತನ್ನಂಗಡಿಯ ಬದಿಯಲ್ಲಿದ್ದ 
"ಹೈ ವೊಲ್ಟ ಶಕ್ತಿಯಲ್ಲಿ ವಿದ್ಯುತ್ ಹರಿಯುವ ಟ್ರಾನ್ಸ್ಫಾರ್ಮರ" ಕಡೆಗೆ ಧಾವಿಸಿದ, ಅದು ಸಪ್ತಾಪೂರ, ದಾಸನಕೊಪ್ಪ, ಆಕಾಶವಾಣಿ, ಕಾಲೇಜು ಈ ನಾಲ್ಕೂ ಓಣಿಗೆ ವಿದ್ಯುತ್ ಪೂರೈಸುವ ದೊಡ್ಡ ಮಟ್ಟದ ವಿದ್ಯುತ್ ಪ್ರಸರಣ ಶಕ್ತಿ ಹೊಂದಿರುವ ಟ್ರಾನ್ಸ್ ಫಾರ್ಮರ್" ಅದರ ಕೆಳಗೆ ನಿಲುಕವಂತರದಲ್ಲಿ open fuse ಅಂದ್ರೆ ಮನೆಯಲ್ಲಿ ಇರುವಂತೆ ರಕ್ಷಾಕವಚವಿಲ್ಲದಂತ ಫ್ಯೂಸ್, ಕೆಂಪಗೆ ಕಾದಿರುತ್ತಿದ್ದ, ದಪ್ಪ ತಂತಿಯ ಸದಾ ವಿದ್ಯುತ್ ಹರಿಯುತ್ತಿರುವ ತಂತಿ ಫ್ಯೂಸ್. KEB ಯವರೇ ಸುರಕ್ಷತಾ ಕವಚವಿಲ್ಲದೇ ತೆಗೆದು ಹಾಕಲು ಹೆದರುವ ಫ್ಯೂಸ್.

ಈ ಒಬ್ಬ ಪುಣ್ಯಾತ್ಮ ತನ್ನ ಜೀವದ ಖಬರೂ ಇಲ್ಲದೆ ಕಂಬದ ಬಳಿ ಓಡಿಬಂದವನೆ ತೆರೆದ ಫ್ಯೂಸ್ ಗೆ ನೇರ ಕೈ ಹಾಕಿ, ದೇಹದ ಬಲವನ್ನೆಲ್ಲ ಒಗ್ಗೂಡಿಸಿ ಎಳೆದ, ಕರೆಂಟು ಹೊಡೆದ ರಭಸಕ್ಕೆ ಕಂಬದಿಂದ 5-6 ಅಡಿ ದೂರಕ್ಕೆ ಅನಾಮತ್ತು ಬಿದ್ದಬಿಟ್ಟ. ಅಲ್ಲಿ ಗಿಡದಲ್ಲಿದ್ದ ಮನುಷ್ಯ ತಂತಿಯಿಂದ ಬಿಡಿಸಿಬಿದ್ದ. ಫ್ಯೂಸ್ ಕೀಳುವಲ್ಲಿ ಒಂದೇ ಸೆಕೆಂಡು ತಡ ಮತ್ತು ವಿದ್ಯುತ್ ಹರಿಯುತ್ತಿರುವ ಫ್ಯೂಸ್ ಕೀಳಲು ಚಾಚಾನ ಕಸುವು ಸಾಲಿದಿದ್ದಲ್ಲಿ ಚಾಚಾ ಅಕ್ಷರಶಃ ಭಸ್ಮವೇ.. 

ಇದೆಲ್ಲಾ ಬರೆಯಲು ನನಗೆ 25 ನಿಮಿಷ ಬೇಕಾಯಿತು, ಇಡಿ ಈ ಕಥೆ ನಡೆದದ್ದು ಕೇವಲ ಸೆಕೆಂಡಿನ ಲೆಕ್ಕದಲ್ಲಿ, ಖಾದರಭಾಷಾ ಚಾಚಾನ ಜೀವ ಕಳಕಳಿ, ಇಬ್ಬರೂ ಉಳಿದ ಪವಾಡದಂತಹ  ಜೀವಗಳು, ಸಮಯ ಪ್ರಜ್ಞೆ,  ಶುದ್ಧ ಮನುಷ್ಯ ಮನಸ್ಸು" ಗುರುತಿಸಿ ಈತನ ಹುಂಬ ಸಾಹಸಕ್ಕೆ ಸಣ್ಣಗೆ ಬೈದು, ತಣ್ಣಗೆ ಹೊಗಳಿ ಆಗ ಧಾರವಾಡ ಆಕಾಶವಾಣಿ ಈತನಿಗೆ ಗೌರವ ನೀಡಿತು, ಮಾರನೇ ದಿನದ ಪೇಪರ್ ತುಂಬ ನನ್ನ ಚಾಚಾ.. 
ಖಾದರಭಾಷಾ-ಖಾದರಲಿಂಗ.......

ಈಗಲೂ ಅವನೆತ್ತರ ಬೆಳೆದ ಮಗನ ಜೊತೆ ಅದೇ ಕಬ್ಬಿನ ಹಾಲು ಮಾರುತ್ತಾನೆ, ಈ ಮುಗಿದು ಬದುಕುತ್ತಿರುವ ಕಥೆ ನೆನಪಿಸಿ ನೀವು ಒಂದು ಗ್ಲಾಸ್ ಹಾಲು ಕುಡಿದು, ಚಾಚಾನನ್ನು ನೋಡಿ ಬನ್ನಿ.

೧೪.

#ಸಾಕಿಯ_ಮಧುಶಾಲೆ
#ಸೌಹಾರ್ದ_ಬದುಕು
#ಸಹಬಾಳ್ವೆಯ_ಕಥನ

ನನ್ನ ಅಮ್ಮನ ನೆಚ್ಚಿನ ಗೆಳತಿಯರಲ್ಲಿ ನಾಗಮಂಗಲದ ಫಹೀಮ್ ಆಂಟಿ ಪ್ರಮುಖರು. ಬಹುಕಾಲದ ಆಪ್ತ ಗೆಳತಿ ಅಮ್ಮನಿಗೆ ಅವರು. ನಾವು‌ ಮೈಸೂರಿಗೆ ಬಂದಮೇಲೆ ಅಮ್ಮ ಯಾವಾಗಲೇ ನಾಗಮಂಗಲಕ್ಕೆ ಹೋದರೂ ಫಹೀಮ್ ಆಂಟಿಯ ಮನೆಗೆ ಹೋಗಿ ಬರಲೇ‌ಬೇಕು. ಅಮ್ಮನಿಗೆ ಕಣ್ಣು ಕಾಣುತ್ತಿರಲಿಲ್ಲ ಆದರೂ ನಾವೇ ಯಾರಾದರೂ ಕರೆದುಕೊಂಡು ಹೋಗಲೇಬೇಕಿತ್ತು. ಹೀಗೆ‌.. ಆಕೆ ಹಟ ಹಿಡಿದಂತೆ, ಶಪಥ ತೊಟ್ಟಂತೆ, ಪ್ರತಿ ಬಾರಿಯೂ ತಪ್ಪಿಸದೆ ಹೋಗುತ್ತಿದ್ದ ಮನೆಗಳಲ್ಲಿ ಫಹೀಮ್ ಆಂಟಿಯ ಮನೆಯೂ ಒಂದು. ಅಷ್ಟು ನೆಚ್ಚಿನ ಗೆಳತಿಯರು ಅವರಿಬ್ಬರೂ.. ಅಮ್ಮ ಉರ್ದು ಕಲಿತಿದ್ದೂ ಅವರಿಂದಲೇ. ನನ್ನಮ್ಮ ಕನ್ನಡ ಪಂಡಿತ್ ಮಾಡಿದ್ದರಿಂದ ಫಹೀಮ್ ಆಂಟಿ ಎಷ್ಟೋ ಬಾರಿ ಅಮ್ಮನ ಬಳಿ ಕನ್ನಡದ ಬಗೆಗೆ ಆಸಕ್ತಿ ತೋರುತ್ತಿದ್ದುದನ್ನು ಅಮ್ಮ ನನಗೆ ಹೇಳಿದ್ದರು.. ಅನೇಕ ವರ್ಷ ಒಂದೇ ಶಾಲೆಯಲ್ಲಿ ಒಟ್ಟಿಗೆ ಕೆಲಸ ಮಾಡ್ತಿದ್ರು.. ಅಮ್ಮ ಮತ್ತು ಫಹೀಮ್ ಆಂಟಿ ಶಾಲೆಯ ಎಲ್ಲಾ ಕಾರ್ಯಕ್ರಮಗಳಿಗೂ ಒಂದೇ ತರಹದ ಸೀರೆ ಕೊಳ್ಳುತ್ತಿದ್ದುದೂ ಉಂಟು. ನನ್ನ ಹಾಗೂ ಅಣ್ಣನ ಬಾಲ್ಯದಲ್ಲಿ ಫಹೀಮ್ ಆಂಟಿಗೆ‌ ಒಂದು ಅಗ್ರಸ್ಥಾನ ಇರುವುದಂತೂ ಖಚಿತ.. ನನ್ನನ್ನೂ ಅಣ್ಣನನ್ನೂ ಬಹಳ ಮುದ್ದಿನಿಂದ, ಮಮತೆಯಿಂದ ಆಟವಾಡಿಸಿದ್ದಾರೆ!
ಕಡೆಯವರೆಗೂ ಅಮ್ಮನ MTS ಫೋನಿನ ಸ್ಪೀಡ್ ಡಯಲ್‌ನಲ್ಲಿ ಫಹೀಮ್ ಆಂಟಿ ಇದ್ದರು.

ನಂತರ ನನ್ನ ಅಮ್ಮ ನಮ್ಮನ್ನ ಬಿಟ್ಟು ಹೋದಮೇಲೆ ನಾನು ಫಹೀಮ್ ಆಂಟಿಯನ್ನ ಭೇಟಿಯಾದದ್ದು ನನ್ನಣ್ಣನ ಮದುವೆಯಲ್ಲಿ. ಕಣ್ಣುಗಳೆರಡೂ ಬಹುತೇಕ‌ ಕಾಣದಂತಾಗಿದ್ದವು. ಬಂದವರೇ ಅಣ್ಣನನ್ನೂ, ನನ್ನನ್ನೂ ಕರೆದು ತಬ್ಬಿ ಕಣ್ಣೀರು ಸುರಿಸಿ ಚೆನ್ನಾಗಿರ್ರಪ್ಪ ಅಂತ ಹೃದಯತುಂಬಿ‌ ಹಾರೈಸಿದರು... ನಾನಂತೂ ಆ ಕ್ಷಣ ಕಂಬದಂತಾಗಿದ್ದೆ..!

ಆ ಕಣ್ಣೀರಿಗೆ ಅರ್ಥ ಹುಡುಕಲಾರೆ‌ ನಾನು.. 
ಈ ಕೋಮುವೈರಸ್ಸಿನಿಂದ ಬಳಲುವವರು ಹಂಬಲಿಸಿ ಹರಿಸುವ ರಕ್ತ ಬೇಡ ನನಗೆ.. ನನಗೆ ಆ ಕಣ್ಣೀರು ಬೇಕು.. ಅದರಲ್ಲಿ ತಾಯ್ತನದ ಪ್ರೀತಿಯಿದೆ, ತೊರೆದ ಗೆಳತಿಯ ನೆನಪಿನ ಬೇಸರವಿದೆ, ಮಕ್ಕಳಿಬ್ಬರು ಚೆನ್ನಾಗಿರಲಿ ಎಂಬ‌ ಅಭಿಲಾಷೆಯಿದೆ, ಬೆಳೆದ ನಮ್ಮ ಬಗೆಗಿನ ಹೆಮ್ಮೆಯೂ ಇದೆ....
ಆ ಕಣ್ಣೀರಿಗೆ ಬೆಲೆ ಕಟ್ಟಲಾದೀತೇ?

ಮತ್ತೆ ನಾಗಮಂಗಲದ ಕಡೆ ಹೊರಡಬೇಕು.
ಈ ಬಾರಿ ಮತ್ತೇನಲ್ಲದಿದ್ದರೂ ಫಹೀಮ್ ಆಂಟಿಯೆಂಬ‌ ಮಾತೃರೂಪಿಯನ್ನು ಕಂಡು ಒಂದಷ್ಟು ಪ್ರೀತಿ ಪಡೆಯಬೇಕು..!

೧೫.

ರೇಣುಕಾ ನಿಡಗುಂದಿ ಮತ್ತು ಸುಧಾ ಅಡ್ಕಲ್ ನಾನೂ ಅಂಟಿಸಿದ್ದೇನೆ.

#ಸೌಹಾರ್ಧ ಬದುಕು
#ಸಹ ಬಾಳ್ವೆಯ ಕಥನ

ನಂಗೆ ಇವತ್ತಿಗೂ ಬಹಳ ಆಶ್ಚರ್ಯ ಮತ್ತು ಒಂದು ಬಗೆ ಕುಶಿ ಕೂಡಾ ಆಗೋದು ಯಾಕೆಂದರೆ, ನಾನು ಈ ಜಗತ್ತಿನಲ್ಲಿ ಹುಟ್ಟಿದ ಮನೆ ಬಿಟ್ಟರೆ ಮೊದಲು ಕಾಲಿಟ್ಟದ್ದು ಮುಸ್ಲೀಮರ ಮನೆಗೆ ಅದೂ ಹದಿನಾರು ದಿನಗಳ ಮಗುವಿರುತ್ತಾ! ನಮ್ಮ ಮನೆಯಿಂದ ಅರ್ಧ ಫರ್ಲಾಂಗ್ ದೂರದಲ್ಲಿ ಗಾಂಧಿ ಚೌಕದಲ್ಲಿ ಖಾಜಿ ಸಾಬರ ಮನೆ. ಅವರ ಮಡದಿ ಬೂಬಮ್ಮ ನನ್ನ ಅಮ್ಮನ ಗೆಳತಿ. ಅವರು ಮನೆಯಿಂದ ಹೊರಗಡೆ ಯಾರ ಮನೆಗೂ ಹೋಗುತ್ತಿರಲಿಲ್ಲವಾಗಿ ನನ್ನ ಅಮ್ಮನಿಗೆ ಐದು ಗಂಡು ಮಕ್ಕಳ ನಂತರ ನಾನು ಹುಟ್ಟಿದ್ದರಿಂದ ನೋಡಲೇಬೇಕು ಅಂತ ಹಂಬಲಿಸಿದರಂತೆ.(ನನ್ನ ಅಮ್ಮನಿಗೆ ನಾನು ಹನ್ನೆರಡನೆಯ ಮಗು! ಅರ್ಧ ಡಜನ್ ತೀರಿಕೊಂಡಿದ್ದರು ಬಿಡಿ. ಐದು ಗಂಡು ಮಕ್ಕಳಿದ್ದರು ಅಮ್ಮನಿಗೆ ಹೆಣ್ಣಿಲ್ಲ ಅನ್ನೋ ಕೊರಗು ಜೊತೆಯಲ್ಲಿ ಅಕ್ಕಪಕ್ಕದವರಿಗೂ ಈ ಸಾರಿನಾದರೂ ಲಕ್ಷ್ಮಮ್ಮಂಗೆ(ಅಮ್ಮನ ಹೆಸರು ಲಕ್ಷ್ಮಿ) ಹೆಣ್ಣಾಗಲೀ ಅಂತಾ ಹಾರೈಸೋರಂತೆ ಅದರಲ್ಲಿ ಈ ಬೂಬಮ್ಮ ಕೂಡಾ ಒಬ್ಬರು! ಬಾಣಂತಿಗೆ ಒಂದು ತಿಂಗಳಾದ ನಂತರ ಮೊದಲು ದೇವಸ್ಥಾನಕ್ಕೆ ಮಗುವನ್ನು ಕರೆದುಕೊಂಡು ಹೋಗಿ ಬಂದು ನಂತರ ಬೇರೆ ಎಲ್ಲಾದರೂ ಹೋಗಬಹುದು. ಸಾಮಾನ್ಯವಾಗಿ ಇದು ನಡೆದುಬಂದ ಪದ್ಧತಿ. ಆದರೆ ಗೆಳತಿ ಬೂಬಮ್ಮ ಮಗುವನ್ನು ನೋಡಬೇಕು ಅಂತ ಆಸೆ ಪಡ್ತಾ ಇದ್ದಾರೆ ತೋರಿಸಬೇಕು ಅನ್ನೋ ಆಸೆ ಅಮ್ಮನದು. ಅಮ್ಮ ಕೂಡಾ ಯಾವತ್ತೂ ಜಾತಿಧರ್ಮ ಸಂಪ್ರದಾಯಗಳಿಗಿಂತ ಮಾನವ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಟ್ಟವಳು. ಗೆಳತಿಗಾಗಿ ಒಂದು ಮುಸ್ಸಂಜೆ ಮುಗಿದ ನಂತರ  ಎಲ್ಲರೂ ಮನೆ ಬಾಗಿಲು ಹಾಕಿಕೊಂಡ ಮೇಲೆ ಆಗೆಲ್ಲ ಸ್ವಲ್ಪ ಕತ್ತಲಾದ ನಂತರ ಎಲ್ಲ ಒಳಸೇರಿ ಬಾಗಿಲು ಹಾಕಿಕೊಳ್ಳುತ್ತಿದ್ದರು. ಬೀದಿ ದೀಪಗಳು ಮಿಣುಕು ಮಿಣುಕು ಅನ್ನುತ್ತಿರುತ್ತಿತ್ತು. ಆ ಹೊತ್ತಲ್ಲಿ ತಲೆತುಂಬಾ ಸೆರಗು ಹೊದ್ದು ಹದಿನಾರು ದಿನದ ಮಗುವನ್ನು ಬೆಚ್ಚಗೆ ಬಟ್ಟೆ ಹೊದಿಸಿ ಅವರ ಮನೆಗೆ ಕರೆದುಕೊಂಡು ಹೋದರಂತೆ! ಅವರಿಗೆ ಅದೆಷ್ಟು ಕುಶಿಯಾಗಿತ್ತು ಅಂತ ಅಮ್ಮ ಯಾವಾಗಲೂ ಹೇಳೋಳು.  ಅವರು ಯಾವಾಗಲೂ ನನ್ನ ಮೇಲೆ ಒಂದು ಪ್ರೀತಿ ತುಂಬಿದ ಅಧಿಕಾರದಿಂದ ಗದರುವವರು. ಬಹಳ ದಿನ ಅವರ ಮನೆಗೆ ಹೋಗಿಲ್ಲ ಅಂದರೆ  ಅವರ ಮನೆ ಮುಂದೆ ಬೀದಿಯಲ್ಲಿ ಹೋಗ್ತಾ ಇದ್ದರೆ ಕಿಟಕಿಯಲ್ಲಿ ನೋಡಿ ಕರೆಯಲು ಕಳಿಸುತ್ತಿದ್ದರು. ನೀನು ಯಾಕೆ ಬಂದಿಲ್ಲ ಖಬರ್ ಹೈ ನೀನು ಮೊದಲು ಬಂದಿರೋದು ನಮ್ಮನೆಗೆ ಗೊತ್ತಾ....ಪಾಸ್ ಆಜಾವ್ ಅಂತ ಹೇಳಿ ಮುಖ ಕೂದಲು ಎಲ್ಲಾ ಮುಟ್ಟಿ ನೆಟಿಕೆ ಮುರಿಯೋರು. ಪ್ರತಿ ಸಾರೀನೂ ನಾನು ಹದಿನಾರು ದಿನಗಳ ಮಗು ಇರುತ್ತಾ ಹೇಗಿದ್ದೆ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಅಂತ ಅವರದ್ದೇ ಮುಸ್ಲಿಂ ಕನ್ನಡದಲ್ಲಿ ವರ್ಣಿಸೋರು. ಅದು ನನಗೆ ಆಗ ಬಾಯಿಪಾಠ ಆಗಿಹೋಗಿತ್ತು.

 ಅವರ ಹೆಸರೇನಿತ್ತೋ ಗೊತ್ತಿಲ್ಲ. ಅದೇನೋ ಆಗ ಮುಸ್ಲೀಂ ಹೆಂಗಸರನ್ನು ಬೂಬಮ್ಮ ಅಂತಲೇ ಕರೆಯುತ್ತಿದ್ದುದು. ನಂಗೆ ಆಶ್ಚರ್ಯ ಆಗ್ತಾ ಇತ್ತು. ಇವರು ಎಲ್ಲರೂ ಯಾಕೆ ಒಂದೇ ಹೆಸರಿಟ್ಟುಕೊಳ್ಳುತ್ತಾರೆ ಒಬ್ಬರನ್ನೊಬ್ಬರು ಗುರುತಿಸುವುದು ಹೇಗೆ ಅಂತ. ಆಮೇಲೆ ಅರ್ಥ ಮಾಡಿಕೊಂಡದ್ದು ಮುಸ್ಲೀಮರ ಹೆಸರನ್ನು ಹೇಳಲು ಇವರಿಗೆಲ್ಲ ಕಷ್ಟ ಆಗ್ತಾ ಇತ್ತಲ್ಲಾ ಅದಕ್ಕೆ ಬೂಬಮ್ಮ/ ಸಾಬಣ್ಣ ಅಂತಲೇ ಕರೀತಾರೆ ಅಂತ. ಈ ಬೂಬಮ್ಮ ಸ್ವಲ್ಪ ಕಪ್ಪಗೆ ಕುಳ್ಳಗೆ ದಪ್ಪಗೆ ಇದ್ದರು. ಆದರೆ ಇವರ ಗಂಡನಾದರೋ ಏಕ್ ಧಂ ಹೀರೊ... ಬೆಳ್ಳಗೆ ಎತ್ತರ ನಿಲುವು. ತೆಳ್ಳನೆ ಶರೀರ. ಬಿಳಿಯ ಉದ್ದನೆಯ ಗಡ್ಡ.  ಬಿಳಿ ಪೈಜಾಮ ಜುಬ್ಬಾ ಅದೆಷ್ಟು ಶುಭ್ರವಾಗಿರುತ್ತಿತ್ತೆಂದರೆ, ಆ ಐರನ್ ಗೆರೆಗಳು ಇನ್ನೂ ನನ್ನ ಕಣ್ಣಲ್ಲಿವೆ. ತಲೆ ಮೇಲೆ ಬಿಳಿ  ಕುಸುರಿ ಕೆಲಸದ ಟೊಪ್ಪಿಗೆ. ರಂಜಾನ್ ಹಬ್ಬದ ಸಂದರ್ಭದಲ್ಲಿ ಪಿಣಗುಡುವ ಶೇರ್ವಾನಿ ತೊಡುತ್ತಿದ್ದರು ತುಂಬಾ ಚೆಂದವಿರುತ್ತಿತ್ತು.  ಅಕ್ಬರ್ ಮುಂತಾದ ರಾಜರು ಹಾಕಿಕೊಳ್ಳುವಂತಹ ಟೊಪ್ಪಿಗೆ ಅದಕ್ಕೊಂದು ಕುಚ್ಚು ಇರುತ್ತಿತ್ತು. ನಂಗೇನಾದರೂ ಚಿತ್ರ ಬಿಡಿಸಲು ಬರುವಂತಿದ್ದರೆ, ಈಗ ಅವರ ಚೆಂದ ಚಿತ್ರ ಬಿಡಿಸಿಬಿಡುತ್ತಿದ್ದೆ. ಅವರಿಗೆ ಖಾಜಿಸಾಬರು ಅಂತಲೇ ಎಲ್ಲರೂ ಕರೆಯುತ್ತಿದ್ದದ್ದು. ಸದಾ ಕಾಲ ಅವರ ಮನೆ ಮುಂದಿನ ಸರ್ಕಲ್ ನಲ್ಲಿ ಹಿಂದಕ್ಕೆ ಕೈಕಟ್ಟಿಕೊಂಡು ಓಡಾಡ್ತಾ ಇರೋರು. ನಾನು ಚಿಕ್ಕವಳಿರುತ್ತಾ ಅಂಗಡಿಗೆ ಅಥಾವಾ ಏನಕ್ಕಾದರೂ ಆ ಸರ್ಕಲ್ ಹಾದು ಹೋಗಬೇಕಾದರೆ, ನಂಗೆ ನಡೆದು ಅಭ್ಯಾಸವೇ ಇರಲಿಲ್ಲ ಬರೀ ಓಡೋದೆ ಅವರು ಏ ಲಕ್ಷಮ್ಮಾಕೀ ಬೇಟಿ ಓಡಬೇಡ ಮೆಲ್ಲ ಹೋಗು ಅನ್ನುತ್ತಿದ್ದರು. . ನಂಗೆ ಏಳೆಂಟು ವರುಷಗಳಿರಬಹುದು. ಏಯ್ ಬಿಳಿಹೆಂಡ್ತಿ ನಿಂಗೆ ಮದುವೆ ಮಾಡ್ಕೊಳ್ಳೋದು ನಾನು ಅಂತ ಹಿಡಿಯಲು ಬರೋರು. ನಾನು ಕೈಗೆ ಸಿಗದೆ ನಿಮಗೆ ಈಗಲೇ ಬಿಳಿಗಡ್ಡ ಹೋಗ್ರಿ ನಾನು ನಿಮ್ಮನ್ನ ಮದುವೆ ಆಗಲ್ಲ....ನೀವು ಮುದುಕರಾಗಿ ಹೋಗಲ್ವಾ ಅಂತಿದ್ದೆ... ಅಕ್ಕಪಕ್ಕ ಯಾರಾದರೂ ನಿಂತಿದ್ರೆ ಅವರ ಹತ್ರ ನಗ್ತಾ ಚೋರಿ ಕ್ಯಾ ಬಾತ್ ಕರ್ತಿ ಹೈ... ಬಾಳಾ ಚೂಟಿ ಅಂತ ಹೇಳ್ತಾ ಇರ್ತಿದ್ದರು. ಅವರ ಹೆಂಡತಿ ಬೂಬಮ್ಮ ಮಾತ್ರಾ ಯಾವತ್ತೂ ಚೆಂದ ಡ್ರೆಸ್ ಮಾಡಿಕೊಂಡಿದ್ದು ನನಗೆ ನೆನಪಿಲ್ಲ. ಮನೆಯಲ್ಲಿರುತ್ತಾ ನೈಲಾನ್ ಸೀರೆ ತಲೆಮೇಲೆ ಹೊದ್ದುಕೊಂಡು ಇರುತ್ತಿದ್ದರು. ಅಪ್ಪಿತಪ್ಪಿ ಗಂಡನೊಂದಿಗೆ ಬೈಕ್ ನಲ್ಲಿ ಹೊರಟರೆ ಬುರ್ಕಾ ಹಾಕಿಕೊಂಡಿರುತ್ತಿದ್ದರು. ನಂಗೆ ಇವರು ಇಷ್ಟು ಚೆಂದ ಇದ್ದಾರೆ ಹೇಗೆ ಈ ಬೂಬಮ್ಮನನ್ನು ಮದುವೆಯಾದರೋ ಅನಿಸುತ್ತಿತ್ತು. ಅವರ ಮಗಳು ಹಬೀಬಾ ಮಾತ್ರ ಥೇಟ್  ಅಪ್ಪನ ಹಾಗೆ ಅದ್ಭುತ ಚೆಲುವೆ ಬೆಳ್ಳಗೆ ದಂತದ ಬಣ್ಣ. ಎತ್ತರ ನಿಲುವು. ಅಗಲವಾದ ಕಣ್ಣುಗಳಂತೂ ಕಾಡಿಗೆಯಿಂದ ತುಂಬಾ ಸುಂದರವಾಗಿ ಕಾಣುತ್ತಿತ್ತು. ಈಗಿನ ಇರಾನಿ ಸುಂದರಿಯರಂತೆ. ಬಹುಶಃ ನಮ್ಮ ಕೇರಿಯಲ್ಲಿ ಅವಳನ್ನು ನೋಡಲು ಹಂಬಲಿಸದೇ ಇದ್ದವರು ಇರಲಿಲ್ಲವೆಂದೇ ಅನ್ನಬಹುದು. ಅವಳು ಆಚೆ ಬರುತ್ತಲೇ ಇರಲಿಲ್ಲ. ಅಪ್ಪಿತಪ್ಪಿ ಬಾಗಿಲ ಹೊರಗೆ ಒಂದರಗಳಿಗೆ ಕಂಡರೂ ಏ ನೋಡೊ ನೋಡೊ ಹಬೀಬಾ ಕಾಣ್ತಿದಾಳೆ, ಅನ್ನೋರು ಮತ್ತೆ ಕೆಲವೊಮ್ಮೆ ನಾನು ಇವತ್ತು ಹಬೀಬಾನ್ನ ನೋಡಿದೆ ಅನ್ನೋದೇ ಒಂದು ವಿಷಯವಾಗ್ತಾ ಇತ್ತು. ನಾನು ಅವರ ಮನೆಗೆ ಹೋಗ್ತಾ ಇದ್ದದ್ದು ಹೇಗಾದರೂ ಚೂರು ಇಣುಕಿ ಅವಳು ಕಾಣುತ್ತಾಳಾ ನೋಡಬೇಕು ಅಂತ. ನಾನು ಹೈಸ್ಕೂಲ್ ಓದೋವಾಗ ಕೆಲವೊಮ್ಮೆ ಅಮ್ಮ ಅವರ ಮನೆಯಲ್ಲಿರುವಾಗ ಕರೆಯಲು ಹೋಗುತ್ತಿದ್ದೆ. ಬೂಬಮ್ಮ ಸ್ವಲ್ಪ ತಿಳುವಳಿಕೆ ಉಳ್ಳವರಾಗಿದ್ದರು. ನನಗೂ ಅವರಿಗೂ ಧರ್ಮ ಜಾತಿ ಈ ವಿಷಯಗಳ ಬಗ್ಗೆ ಮಾತುಕತೆ ಆಗೋದು. ಬೇಕಂತಲೇ ನನ್ನನ್ನು ಕೆಣಕೋರು ಮಾತಾಡಲಿ ಅಂತ. ಅಮ್ಮ ಅವರ ಮನೆಯಲ್ಲಿ ಟೀ ಕುಡಿತಾರೆ ಅಂತ ಬ್ರಾಹ್ಮಣರಾಗಿ ಒಂದಿಷ್ಟೂ ರೀತಿನೀತಿ ಇಲ್ಲ ಅಂತ ಕೆಲವರು ಆಡಿಕೊಳ್ಳೋರು. ಆ ವಿಷಯ ಚರ್ಚೆ ಮಾಡ್ತಾ ಇದ್ವಿ. ಹಬೀಬಾ ಮಾತ್ರ ಈ ಮಾತುಗಳನ್ನೆಲ್ಲ ಕೇಳಿಸಿಕೊಳ್ಳುತ್ತಾ ನಡುಮನೆಯಲ್ಲಿರುತ್ತಿದ್ದಳು. ಏನಾದರೂ ತಮಾಷೆಯ ಮಾತನಾಡಿದಾಗ ಒಳಗೆ ಕುಳಿತು ಚೆಂದ ಕಿಲಕಿಲ ನಗುತ್ತಿದ್ದಳು. ನಂಗೆ ಒಳಗಡೆ ಹೋಗಿ ಅವಳನ್ನು ನೋಡಬೇಕು ಅನಿಸಿದರೂ  ಅವರ ಜಗುಲಿಯನ್ನು ದಾಟಿ ಒಳಗೆ ಹೋಗಿದ್ದೇ ಅಪರೂಪ.  ಈಗಲೂ ನೆನಪಾದಾಗ ಅವಳನ್ನು ನೋಡಬೇಕು ಈಗ ಹೇಗಿರಬಹುದು ಅನಿಸದೆ ಹೋಗುವುದಿಲ್ಲ. 

 ಬೂಬಮ್ಮನಿಗೆ ವರುಷಕ್ಕೊಂದು ಮಕ್ಕಳಾದರೂ ಅದೇನೋ ಹೆರಿಗೆಯಲ್ಲಿ ತೊಂದರೆಯಾಗಿ ಉಳಿಯುತ್ತಿರಲಿಲ್ಲವಂತೆ ಹಬೀಬಾ ಒಬ್ಬಳೇ ಉಳಿದದ್ದು. ಹಬೀಬಾ ನನಗಿಂತ ಆರೇಳು ವರ್ಶಗಳಾದರೂ ದೊಡ್ಡವಳಿರಬೇಕು. ಅವಳ ನಂತರ ಯಾವ ಮಕ್ಕಳೂ ಉಳಿದಿರಲಿಲ್ಲ. ನಾನು ಹುಟ್ಟುವ ಮೊದಲಿನ ಒಂದು ಹೆರಿಗೆಯಲ್ಲಿ ಮಗುವಿನ ಕಾಲು ಮುಂದೆ ಬಂದು ಹೆರಿಗೆ ಕಷ್ಟವಾಗಿತ್ತಂತೆ. ಇನ್ನೇನು ತಾಯಿ ಮಗು ಇಬ್ಬರ ಪ್ರಾಣವೂ ಉಳಿಯಲ್ಲ ಅನ್ನುವ ಹಾಗೆ. ಆಗೆಲ್ಲ ಮನೆಯಲ್ಲೇ ಹೆರಿಗೆ ಬಾಯಮ್ಮ ಕೂಡಾ ಕಂಗಾಲಾಗಿರುವಾಗ ಅಮ್ಮನಿಗೆ ವಿಷಯ ಗೊತ್ತಾಗಿ ಅವರ ಮನೆಗೆ ಹೋಗಿ ಮಗುವಿನ ಕಾಲಿಗೆ ಒಂದು ಸೂಜಿ ಕಾಯಿಸಿ ಚೂರು ಮುಟ್ಟಿಸಿದ್ದೇ ತಡ ಮಗು ಸರಕ್ಕನೆ ಕಾಲು ಒಳಗೆಳೆದುಕೊಂಡು ತಕ್ಷಣ ತಿರುಗಿ ಡೆಲಿವರಿ ಆಯ್ತಂತೆ. ಆಗಿಂದ ಅಮ್ಮನ ಬಗ್ಗೆ ಅವರ ಮನೆಯಲ್ಲಿ ವಿಶೇಷ ಮರ್ಯಾದೆ. ಅಮ್ಮ ಬೂಬಮ್ಮ ಗೆಳತಿಯರಾದದ್ದು ಹೀಗೆ. ಅವರ ಮನೆಯ ಗೋರಂಟಿ ಎಲೆಗಳನ್ನು ಕಿತ್ತುಕೊಳ್ಳಲು ಹೋಗುತ್ತಿದ್ದದ್ದು ಈಗಲೂ ಮದರಂಗಿ ನೋಡಿದಾಗೆಲ್ಲ ಕಾಡುತ್ತದೆ. ಹಬೀಬಾಳ ಮದುವೆ ಅವರ ಚಿಕ್ಕಪ್ಪನ ಮಗನೊಂದಿಗೆ ಅನ್ನೋದು ನಮಗೆ ಆಗ ಸಖತ್ ಆಶ್ಚರ್ಯದ ವಿಷಯ. ಅವಳ ಮದುವೆಯ ದಿನದ ಅತ್ತರಿನ ಪರಿಮಳ ಇನ್ನೂ ಮೂಗಿನಲ್ಲೇ ಇದ್ದ ಹಾಗಿದೆ. ಕೆಂಪು ಬಣ್ಣದ ಹೊಳೆಯುವ ಆ ಮದುವೆ ಡ್ರೆಸ್ನಲ್ಲಿ ಅದೆಷ್ಟು ಚೆಂದ ಕಾಣ್ತಾ ಇದ್ದಳು ಸಿಕ್ಕಾಪಟ್ಟೆ ಜನಜಂಗುಳಿಯಿಂದ ತುಂಬಿದ್ದರೂ ಒಳಗೆ ನುಗ್ಗಿ ಅವಳ ಮುಸುಕು ತೆಗೆದು ನೋಡಿದ್ದೆ. ಬೆವರಿನಿಂದ ತೋಯ್ದು ಹೋಗಿದ್ದಳು. ನನ್ನ ನೋಡಿ ಮದುವೆಯ ಹೆಣ್ಣಿನ ನಾಚಿಕೆಯ ನಗು ಇಂದೂ ಕಣ್ಣಿಗೆ ಕಟ್ಟುತ್ತದೆ. ಮುಂದೆ ಹಾರ್ಟ್ ಅಟ್ಯಾಕ್ ಆಗಿ ಖಾಜಿ ಸಾಬರು ತೀರಿಕೊಂಡಾಗ ತುಂಬಾ ಅಳು ಬಂದಿತ್ತು. ಹಬೀಬಾಗೆ ಮೂರೊನಾಲ್ಕೋ ಹೆಣ್ಣು ಮಕ್ಕಳು ಆಗ ಎಲ್ಲರೂ ಅವಳಂತೆ ಚೆಂದ ಚೆಂದ. ಅಮ್ಮ ಹಾಸಿಗೆ ಹಿಡಿದ ನಂತರ  ಓದು ಭವಿಷ್ಯ ಅಂತೆಲ್ಲಾ ಮುಳುಗಿ ಅವರ ಸಂಪರ್ಕ ಕಡಿಮೆಯಾದರೂ ಅಂದಿನ ನೆನಪುಗಳು ಹಾಗೆ ಅಚ್ಚಳಿಯದೆ ಉಳಿದಿವೆ. ಖಾಜಿ ಸಾಬರ ತಮ್ಮನೊಬ್ಬ ಸ್ವಲ್ಪ ಮೆಂಟಲೀ ರಿಟಾರ್ಟೆಡ್ ಇದ್ದ. ಇಡೀ ಮನೆಕೆಲಸ ಅವನೇ ಮಾಡುತ್ತಿದ್ದ. ಅವನು ಬಟ್ಟೆ ಬದಲಾಯಿಸಿದ್ದು ಮಾತ್ರ ಯಾವತ್ತೂ ನೋಡಿರಲಿಲ್ಲ. ಅರ್ಧ ಮಡಚಿದ ಪ್ಯಾಂಟ್ ಬಣ್ಣ ಯಾವುದು ಅಂತಾ ಗೊತ್ತಾಗದಷ್ಟು ಗಲೀಜಾದ ದೊಗಲೆ ಷರ್ಟ್ ತಲೆ ಮೇಲೊಂದು ಟೊಪ್ಪಿಗೆ. ಮನೆ ಕೆಲಸ ಎಲ್ಲಾ ಅವನೇ ಮಾಡುತ್ತಿದ್ದ. ಸರಿಯಾಗಿ ಮಾತಾಡಲು ಬರುತ್ತಿರಲಿಲ್ಲ. ಮೂಗಿನಲ್ಲಿ ಅವನು ಗೊಣಗೊಣ ಅನ್ನುತ್ತಿದ್ದದ್ದೂ ಇನ್ನೂ ಕಿವಿಯಲ್ಲಿದೆ.  ಮುಂದೆ ನಾನು ಸಾಗರ ಬಿಟ್ಟು ಶಿವಮೊಗ್ಗಕ್ಕೆ ಓದಲು ಹೋದೆ ಅಲ್ಲಿಂದ ಹಾಗೆ ಬೆಂಗಳೂರು ಕೆಲಸದ ನಿಮಿತ್ತ. ಮದುವೆಯಾದ ನಂತರ ಸಾಗರಕ್ಕೆ ಹೋದಾಗ ಅವರ ಮನೆ ದಾಟಿ ನಾವಿಬ್ಬರೂ ಹೋಗುತ್ತಿರುವಾಗ ಹೀಗೆ ಕರೆ ಕಳಿಸಿದರು " ನಮ್ಮ ಮನೆಗೆ ಬರದೇ ಹೋಗುತ್ತಿದ್ದೀಯಾ ಯಾರೊ ಹೇಳಿದ್ರು ಲಕ್ಷಮ್ಮಾ ಕೀ ಬೇಟಿ ಶಾದಿ ಆಯ್ತು ಅಂತಾ... ಅಂತೂ  ಜಾತಿಗೀತಿ ನೋಡಲ್ಲಾ ನಂಗಿಷ್ಟ ಆಗೋ ಹುಡುಗನ್ನೇ ಮದುವೆ ಆಗೋದು ಅಂತ ಹೇಳ್ತಿದ್ದೆ ಹಾಗೇ ಮದುವೆಯಾದೆ ಅಂತ ಹೇಳಿ ನನ್ನ ಬಗ್ಗೆ ತುಂಬಾ ಒಳ್ಳೆಯ ಮಾತುಗಳನ್ನಾಡಿದರು. ಜೊತೆಯಲ್ಲಿ ಹದಿನಾರು ದಿನದ ಮಗು ನಾನು ಹೇಗಿದ್ದೆ ಅಂತ ನನ್ನವರಿಗೆ ವರ್ಣಿಸಿದರು. ನೂರಾ ಒಂದನೇ ಬಾರಿ ಕೇಳಿದ್ದರೂ ಅದು ತುಂಬಾ ಅಪ್ಯಾಯಮಾನ ಇವತ್ತಿಗೂ.
💕

೧೬.

#ಸಹಬಾಳ್ವೆಯಕಥನ
#ಸಾಮರಸ್ಯದಬದುಕು.

ಜಾತಿ ಧರ್ಮಗಳನ್ನು ಮೀರಿದ ಬದುಕೊಂದನ್ನು ಕಟ್ಟಿಕೊಳ್ಳುವಲ್ಲಿ ಒಬ್ಬ ಸಾಮಾನ್ಯ ಕಾರ್ಮಿಕನಾಗಿ ನನ್ನ ಅನುಭವಗಳು ಅನೇಕ.  ಕಷ್ಟ ಕಾರ್ಪಣ್ಯಗಳ ಸಂದರ್ಭದಲ್ಲಿ ಯಾರು ನಮ್ಮ ಕೈ ಹಿಡಿಯುತ್ತಾರೋ ಅವರೇ ನಿಜವಾದ ಸಂಬಂಧಿಕರು ಎಂದು ಭಾವಿಸುತ್ತೇನೆ.

ಕಳೆದ ಮೂರು ವರ್ಷಗಳಿಂದ ನಿರ್ಮಾಣ ಕ್ಷೇತ್ರವನ್ನು ನಿರ್ನಾಮ ಮಾಡಿ ಬಿಟ್ಟಿರುವ ಮರಳು ಸಮಸ್ಯೆ ಕಟ್ಟಡ ಕಾರ್ಮಿಕನಾಗಿರುವ ನನ್ನ ಬದುಕನ್ನೇ ಬಿಗಡಾಯಿಸಿಬಿಟ್ಟಿದೆ. ಇದು ಇತರ ಕಾರ್ಮಿಕರ ಕುಟುಂಬಗಳಿಗೂ ಅನ್ವಯ. ಈ  ಸೀಸನ್ ನ ಆರಂಭದಲ್ಲೇ ಮತ್ತೆ ಮರಳುಗಾರಿಕೆ ನಿಷೇದವಾಗಿ ಕನಿಷ್ಟ ಮೂರು ತಿಂಗಳು ಯಾವುದೇ ಉದ್ಯೋಗವಿಲ್ಲದೆ ಮನೆ ಖರ್ಚು,ಮಕ್ಕಳ ಶಾಲಾ ಖರ್ಚು ಮತ್ತು ಪುಟ್ಟದೊಂದು ಮನೆ ಕಟ್ಟಿಕೊಳ್ಳುವುದಕ್ಖಾಗಿ ಮಾಡಿಕೊಂಡ ಸ್ವ ಸಹಾಯ ಸಂಘದ ಸಾಲದ ಕಂತುಗಳು ಇತ್ಯಾದಿಯಾಗಿ ಕಾಡುತ್ತಿದ್ದ ದಿನಗಳಲ್ಲಿ  "ದುಡ್ಡಿಗೆ ಏನು ಮಾಡಿದಿ ?" ಎಂದು ಸೌಜನ್ಯಕ್ಕಾದರೂ ಕೇಳದ ಕಂಟ್ರಾಕ್ಟುದಾರ ಬಂಧುವಿನ ಮೇಲೆ ತುಸು ಮುನಿಸು ಇದ್ದರೂ ಇಂತಹ ಸಂದರ್ಭದಲ್ಲಿ ಯಾರೆದುರೂ ಕೈಯೊಡ್ಡಬಾರದು ಎಂದು ತೀರ್ಮಾನಿಸಿದ್ದ ನನ್ನನ್ನು ನೇರಳಕಟ್ಟೆಯ ಕೌಂಜೂರು ರಜಬ್ ಬ್ಯಾರಿಯವರ ಸಾಂದರ್ಭಿಕ ನೆರವು ಬಚಾವು ಮಾಡಿದ್ದನ್ನು ಹೇಗೆ ಮರೆಯಲಿ ! 

ಅವರೂ ಕಟ್ಟಡ ಕಾರ್ಮಿಕರಾಗಿ  ಊರೆಲ್ಲಾ ತಿರುಗಾಡಿ ಉದ್ಯೋಗದ ಬೇಟೆಯಾಡಿ ವೈಶಾಖದ ಬಿಸಿಲಿಗೆ ಬತ್ತಿ ಹೋದ ಬಾವಿಗಳ ದುರಸ್ತಿಯೋ ಅಥವಾ ಹೊಸ ಬಾವಿಗೆ ಕಲ್ಲು ಕಟ್ಟುವ ಕೆಲಸವನ್ನೋ ಕಂತ್ರಾಟು ಮಾಡಿಕೊಂಡು ಬಂದು ನನಗೊಂದು ಫೋನ್ ಹಚ್ಚಿ ಬಿಡುತ್ತಿದ್ದರು. "ನೀನು ಜೊತೆಗಿದ್ದರೆ ಎಷ್ಟು ದೊಡ್ಡ ಬಾವಿಯಾದರೂ ಮಾಡಿಯೇನು" ಎಂದು ಅಭಿಮಾನದಿಂದ ಮಾತನಾಡಿ ತನಗೆ ಬಂದ ಲಾಭದಲ್ಲಿ ಸಾಕಷ್ಟನ್ನು ನನಗೂ ಹಂಚಿದ ಕಾರಣಕ್ಕೆ  ಆ ಸಮಯದ ನನ್ನ ಆರ್ಥಿಕ ಸಮಸ್ಯೆಗಳೆಲ್ಲಾ ಪರಿಹಾರವಾಗಿ ಕೈಯಲ್ಲಿ ಒಂದಿಷ್ಟು ಬಿಡಿಗಾಸು ಉಳಿದಿತ್ತು ಕೂಡಾ.

ಈ ಕೌಂಜೂರು ರಜಬ್ ಸಾಯೇಬರೆಂದರೆ ನನಗೊಂದು ಪುನರ್ಜನ್ಮ ನೀಡಿದ ವ್ಯಕ್ತಿ !

ಆ ಕಥೆ ಬೇರೆಯೇ ಇದೆ.

ಆದರೆ ಈ ಲಾಕ್ ಡೌನ್ ಕಾರಣದಿಂದ ಮತ್ತೆ ಉದ್ಯೋಗಕ್ಕೆ ಕತ್ತರಿ ಬಿದ್ದು ಮನೆಯಲ್ಲೇ ಕುಳಿತುಕೊಂಡಿರುವ ಸಂದರ್ಭದಲ್ಲಿ ಒಂದು ದೊಡ್ಡ ಕುಟುಂಬವನ್ನು ನಿಭಾಯಿಸುವ ಕೆಲಸವನ್ನು ಜಾಣ್ಮೆಯಿಂದ ಮಾಡುತ್ತಿರುವಾಗ ಮತ್ತೆ ರಜಬ್ ಸಾಹೇಬರು ಫೋನ್ ಮಾಡಿದ್ದಾರೆ !
" ಕಾರ್ಮಿಕ ಇಲಾಖೆಯಿಂದ ಎರಡು ಸಾವಿರದಂತೆ ಪ್ರತಿ ತಿಂಗಳು ಪಿಂಚಣಿ ಬರಲು ಸುರುವಾಗಿದೆ.  ನಿನಗೂ ಕೆಲಸ ಇಲ್ಲವಲ್ಲಾ....ಖರ್ಚಿಗೆ ಬೇಕಿದ್ದರೇ..,"

ಇಂತಹ ಸಾಮರಸ್ಯವಲ್ಲವೇ ಬೇಕಿರುವುದು ?

೧೭.

ಲೆಕ್ಕದ ಟೀಚರ್ ಸುಧಾ ಮೇಡಂ ಸೌಹಾರ್ದದ ಸಂಗತಿಗಳಿದ್ದರೆ ಹಂಚಿಕೊಳ್ಳಿ ಅಂದಿದ್ದಕ್ಕೆ ನನ್ನ ನೆನಪು.
ಸೌಹಾರ್ದ ಸಹಜವಾಗಿದ್ದ ನೆಲದಲ್ಲಿ ಅದೀಗ ಚಪ್ಪಾಳೆ ಗಿಟ್ಟಿಸಿಕೊಳ್ಳುವಂತಾದ ದುರಂತದ ಕಾಲದಲ್ಲಿ...

ಸಲೀಂ.
ಧಾರವಾಡದಲ್ಲಿ ಬದುಕು ಕಣ್ತೆರೆದುಕೊಳ್ಳುವ ಸಂದರ್ಭದಲ್ಲಿ ಜೊತೆಗಿದ್ದ ಗೆಳೆಯ. ನಾವು ಜೊತೆಯಲ್ಲಿ construction ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದೆವು. ಕಂಪೆನಿ ನಮಗಾಗಿ ನೀಡಿದ ರೂಮಿನ ಮಗ್ಗುಲಲ್ಲಿದ್ದ ಕೆರೆಯಿಂದ ಬಿಟ್ಟೂ ಬಿಡದೆ ಬೀಸುವ ಗಾಳಿಗೆ ನಾನು ಚಳಿಯಿಂದ ಪತರುಗುಟ್ಟುವಾಗ ನನಗೆ ತಾನು ಹೊದ್ದುಕೊಂಡ ರಗ್ಗು ಹೊದಿಸಿ ಬೆಚ್ಚಗಿಡುತ್ತಿದ್ದ ಗೆಳೆಯ. ಹುಬ್ಬಳ್ಳಿಯ ಅಪ್ಸರಾ ಸಿನೆಮಾ ಮಂದಿರದ ಬಾಲ್ಕನಿಯಿಂದ 70mm ಪರದೆಯಲ್ಲಿ ಐಶ್ವರ್ಯ ರೈಯನ್ನು ಸಲ್ಮಾನ್ ಖಾನ್ ತಬ್ಬಿಕೊಳ್ಳುವ ಆ 'ಸುಖ'ವನ್ನು ನಾನು ಸಲೀಂ ಜೊತೆಯಾಗಿ 'ಅನುಭವಿಸಿದ್ದು' ಈಗ ಬೆಚ್ಚಗಿನ ನೆನಪು. ಸಲೀಂ ಹಬ್ಬಕ್ಕೆಂದು ತನ್ನೂರು ಬೆಳಗಾವಿಗೆ ಹೊರಟು ನಿಂತಾಗ ಮುನ್ನೂರೈವತ್ತು, ನಾಲ್ಕೂರು ರೂಪಾಯಿಗೆ ತನ್ನ ಹಬ್ಬದ ಶಾಪಿಂಗ್ ಮುಗಿಸಿ ನಮಗೆಲ್ಲ ಹೊಟ್ಟೆ ತುಂಬಾ ಗಾಡಿಯಂಗಡಿಯ ಎಗ್ ರೈಸ್ ತಿನಿಸಿ ಕೆಂಪು ಬಸ್ಸು ಹತ್ತುವಾಗ ಸಲೀಂನ ಕಣ್ಣುಗಳಲ್ಲಿನ ಖುಷಿ ಇನ್ನೂ ಕಣ್ಣೆದುರಿಗಿದೆ. ಈ national, ideal, majestic ಅಂತ ನೀವೆಲ್ಲಾದರೂ ಬೋರ್ಡ್ ನೋಡಿದರೆ ಅದು ನಮ್ಮವರದ್ದೇ ಬ್ಯಾರೆ ಡೌಟೇ ಬೇಡ ಅನ್ನುತ್ತಿದ್ದ ಸಲೀಂ ನನಗ್ಯಾವತ್ತೂ ಬೇರೆಯವ ಅಂತ ಅನಿಸಲೇ ಇಲ್ಲ.
ಸಲೀಂ ಜತೆಗಿರುವ ಬಹುತ್ವ ಭಾರತವೇ ನನ್ನ ಭಾರತ.

೧೮.

ಇದು ನನ್ನ ಮೊತ್ತ ಮೊದಲ ಲೇಖನ 
ತಪ್ಪು, ಒಪ್ಪುಗಳನ್ನು ತಿದ್ದಲೆಂದೇ ನಿಮ್ಮ ಉಡಿಗೆ ಹಾಕಿದ್ದೇನೆ 

ರಿಯಾಜಣ್ಣನ ಕೋಳಿಗೆ ಚಿಟುಬಿಲ್ಲಿಂದ ಹೊಡೆದು, ಕೋಳಿ ಒದ್ದಾಡುತ್ತಿದ್ದಾಗ ನಮ್ಮವ್ವ 'ಬಾಡ್ಯಾಗುಳ ಮಾಡೋದು ಮಾಡ್ರಿ ಅಂದ್ರ ಮಾಡಬಾರದ ಮಾಡ್ತೀರಿ ' ಅಂತ ಬೈದು ಹೊಡೆವಾಗ ರಿಯಾಜಣ್ಣನ ಮಡದಿ ಬೇಬಕ್ಕ  ಯವ್ವ ಪಕ್ಕೀರಕ್ಕ 'ಏನ ಹುಡುಗುರು ಹುಡುಗಾಟ ಮಾಡ್ಯಾವು ಬಿಡವ್ವಾ ಯಾಕೆ ಹೊಡಿತಿ ' ಅಂತ ಬಿಡಿಸಿದ್ದು ನೆನಪಿದೆ. ನಮ್ಮೂರಲ್ಲಿ ಮೊಹರಂ ಹಬ್ಬ ಬಂದ್ರೆ ನಾವು ಪಾಂಜಾ ಹಿಡಿತಿದ್ವಿ. ನಮಗೂ ಲಾಡಿ ಕಟ್ಟಿಸುತ್ತಿದ್ದರು ( ಒಂದು ವ್ರತ ) ನಾವು 'ಫಕೀರ ' ಆಗತಿದ್ವಿ. ಮನೇಲಿ ರೊಟ್ಟಿ, ಹರಿವೆ ಸಪ್ಪಿನ ಪಲ್ಯ, ಬೆಲ್ಲದ ಪಾನಕ ಮಾಡಿ ನಾವು ಮೊಹರಂ ಹಬ್ಬ ಮಾಡಿ ಓದಿಕಿ ( ನೈವೇದ್ಯ )ಮಾಡಿಸಿಕೊಂಡು ಬಂದು ಮನೇಲಿ ಎಲ್ಲರೂ ಊಟ ಮಾಡತಿದ್ವಿ. ಬೇಬಕ್ಕ ಗರಿ ಗರಿ ಚೊನ್ಗ್ಯಾ ( ಸಿಹಿತಿಂಡಿ ) ಸುರಕುಂಬ ಮಾಡಿ ನಮ್ಮನೆಗೆ ಕೊಟ್ಟು ಕಲಿಸುತಿದ್ದರು. ನಮ್ಮನೇಲಿ ಯಾವುದೇ ಹಬ್ಬಗಳಾದರೂ ದೇವರ ನೈವೇದ್ಯ ಆದಮೇಲೆ ರಿಯಾಜಣ್ಣನ ಮನೆಗೆ ಹೋಳಿಗೆ ಹೋಗುತ್ತಿದ್ದವು.  ದಿನ ಸಂಜೆ ಅವ್ರ ಕೋಳಿಗಳು ನಮ್ಮ ಗೂಡಿನಲ್ಲಿ ಬಂದ್ರೆ ರಿಯಾಜಣ್ಣನ ಮಕ್ಕಳು ಅಬ್ಬು, ಶಪ್ಪಿ ಬಂದು 'ಅಮ್ಮಾ ರೀ  ನಮ್ದು ಕೋಳಿ ಇಲ್ಲಿ ಬಂದಾವ್ರಿ ' ಅಂತ ನಮ್ ಗೂಡಿನಾಗ್ ಹುಡುಕ್ಯಾಡಿ ಕೋಳಿ ಒಯ್ಯುತ್ತಿದ್ದರು.  ನಾವ್ ಕಟ್ಟಿಗೆ ಕಡಿಯೋಕೆ ಹೋದ್ರೆ, ಗೋಲಿ, ಬುಗುರಿ ಏನ್ ಆಟ ಆಡಿದ್ರು ನಮ್ ಜೊತೆಯಲ್ಲಿ ಅವ್ರು, ಅವ್ರ ಜೊತೇಲಿ ನಾವು ಇರತಿದ್ವಿ. ಶಾಲೇಲು ಅಷ್ಟೇ ನೌಶಾದಲಿ, ಮುಜಾಫರ್, ಟೋಪಿಕ್, ಸೈಯದ್ ಅಲಿ, ಇರ್ಫಾನ್, ಅಲೀಮತ್, ದುದ್ದು.... ಇನ್ನು ಅನೇಕರು ಒಟ್ಟಿಗೆ ಆಟ -ಪಾಠ ಗಳಸ್ಯ ಕಂಠಸ್ಯ್ ಅನ್ನೋ ಹಾಗೆ ಇದ್ವಿ.  ಆಗ ಬಾವುಟಗಳ ಬಂಧವಿರಲಿಲ್ಲ, ಬದಲಾಗಿ ಅನುಭಂದವಿತ್ತು. ಈಗ ಊರಲ್ಲಿ ಸರ್ಕಲ್ ಗೊಂದು  ಬೀದಿಗೊಂದು, ಮನೆ ಮನೆಗೊಂದು ಬಾವುಟಗಳು  ಹಾರಾಡುತ್ತಿವೆ.  ಪಕ್ಷಗಳು ಅವನ್ನು ಪ್ರೇರೇಪಿಸಿವೆ. ಈಗ ಮೊದಲಿನ ಸೌಹಾರ್ದ ಸಪ್ಪೆಯಾಗಿ ಹೋಗಿದೆ. 'ಇವ್ರು ಅವ್ರಲೇ ಅವ್ರನ್ನ ನಂಬಬಾರದು ' ಅನ್ನೋ ಗಿಳಿಪಾಠವನ್ನು ವಾಟ್ಸಾಪ್ ಮೆಸೇಜ್ ಗಳಂತೆ ಫಾರ್ವರ್ಡ್ ಮಾಡಿದ್ದಾರೆ.  ಈ ಬಿರುಕಿಕೆ ಮತ್ತಷ್ಟು ಬಲ ತುಂಬುತ್ತಿದ್ದಾರೆ.  ಬಾವುಟಗಳು ಸೌಹಾರ್ದ ಸಾರುವ ಬದಲು ಕಂದಕಗಳನ್ನು ಸೃಷ್ಟಿಸುತ್ತಿವೆ. ಬೇಕಾದ ಹಾಗೆ  ಬೀದಿಗಳಿಗೊಂದು ಹೆಸರಿಡುತ್ತಿದ್ದಾರೆ.  ಸಣ್ಣ ಸಣ್ಣ ವಿಷಯಗಳು ಸಂಭಂದವನ್ನು ಸಡಿಲಿಲುತ್ತಿವೆ. ಸಾಮಾಜಿಕ ಜಾಲತಾಣಗಳು ಅದಕ್ಕೆ ನೀರೆಯುತ್ತಿವೆ. ಬಾವುಟಗಳ ಹಿಂದೆ ಕತ್ತಿ, ಕೊಡಲಿಗಳ ನೆರಳುಗಳಿವೆ. ಇದೆಲ್ಲರ ನಡುವೆ ನಾವು  ನಾವಾಗುವುದನ್ನು  ಬಲವಂತವಾಗಿ ತಡೆಯಲಾಗುತ್ತಿಗೆ. ಊರೊಳಗಿನ ಈ ಕಂದಕವನ್ನು ಮುಚ್ಚಬೇಕಿದೆ, ಮುಚ್ಚಲೇಬೇಕಾಗಿದೆ. ನಾವೆಲ್ಲ ಭಾರತೀಯರೆಂಬ ಭಾವ ಮೂಡಬೇಕಿದೆ. ಸ್ವ ಅರಿವಿನ ಹಣತೆ ಬೆಳಗಬೇಕಿದೆ..  
ಅದೇ ನಿರೀಕ್ಷೆಯಲ್ಲಿದ್ದೇನೆ. 

ಎಮ್. ಎಸ್ ನಾರಾಯಣ

೧೯.

ಬಾಲ್ಯದಿಂದಲೂ  ಮುಸ್ಲಿಂ  ಕ್ರಿಶ್ಚಿಯನ್ ರ ಒಡನಾಟ ತುಂಬಾ ಕಡಿಮೆ. ಬೆಳೆದ  ಹಾಗೂ ಮನೆಯ ಸುತ್ತಲಿನ ವಾತಾವರಣವೂ ಕಾರಣ ಇರಬಹುದು.
 
ಸ್ವಲ್ಪ ಸಮಯ ಅದೂ ತೀರಾ ಸಣ್ಣದಿರುವಾಗ  ಕಾನ್ವೆಂಟ್ನಲ್ಲಿ ಓದಿದ್ರೂ..   ಊರು ಬದಲಾಯಿಸಿದ ಕಾರಣ ಗೆಳತಿಯರು ,ಗೆಳೆಯರಾಗಲೇ ಇಲ್ಲ. 
ಚರ್ಚ್ ಶಾಲೆಯ  ಹತ್ತಿರವೇ ಇತ್ತು . ಮುಕ್ತ  ಪ್ರವೇಶ , ಕ್ಯಾಡಂಲ್ ಹಚ್ಚುವುದು ಪ್ರೇಯರ್,  ಯಾವುದಕ್ಕೂ ನಿರ್ಭಂಧವಿರಲಿಲ್ಲ. ದಾರಿಯಲ್ಲೇ ಇದ್ದ ಮಸೀದಿ. ಸುತ್ತಲಿನ  ಮುಳ್ಳಿನ ಬೇಲಿ ಎತ್ತರವಾದ ಕಿಟಕಿ ಏನೋ ಒಂದು ರೀತಿ ಕುತೂಹಲ. ಒಳಗೆ ಏನಿರ ಬಹುದು.  ಅವರ ದೇವರು ಹೇಗಿರುತ್ತಾರೆ ಅಂತ. ಅದರೊಳಗೆ  ಏನು ಮಾಡ್ತಾರೆ!    ಒಂದು ಸಲ ಧೈರ್ಯ  ಮಾಡಿ ಮುಳ್ಳಿನ ಬೇಲಿ ದಾಟಲಿಕ್ಕೂ ಮನಸು ಮಾಡಿದ್ದೆ.. ಒಳಗೆ ಕಾಲಿಡುವಷ್ಟರಲ್ಲಿಯೆ ಅಲ್ಲಿದ್ದ ಕಾವಲುಗಾರ ಓಡಿಸಿದ್ದೂ ಅಸ್ಪಷ್ಟ ನೆನಪು. ಇವತ್ತಿನ ವರೆಗೂ ಆ ಕುತೂಹಲ  ಹಾಗೆಯೇ  ಉಳಿದು ಬಿಟ್ಟಿದೆ. 

ಇನ್ನು ಜಾತ್ರೆ-   ನಮ್ಮಜ್ಜಿ ಮನೆಯ ಹತ್ತಿರ ಆಂಜನೇಯ ದೇವಸ್ಥಾನ ಇತ್ತು. ಮುಸ್ಲಿಂ ರ ದೇವರು ಅಂದ್ರೆ ಎರಡು ಕೈಯ ಚಿನ್ಹೆ  ಯನ್ನು  ಅದಕ್ಕೆ ಹೂವಿಂದ ಅಲಂಕರಿಸಿ ಹೊತ್ತುಕೊಂಡು ಬರುತ್ತಿದ್ದರು.  (ಪಕ್ಕದ ಮನೆ ಅಜ್ಜಿ ಹೇಳಿದ ಕಥೆ -  ಕಥೆ ಅಜ್ಜಿದ್ದು.  -   ಅದೇನಂದ್ರೆ  ಎಲ್ಲಾ ದೇವರುಗಳೂ, ಲಾಂಛನವೂ ಹಿಂದೂಗಳದ್ದೇ ಆದ ಕಾರಣ ಮುಸ್ಲಿಂ ರಿಗೆ ದೇವರಿರಲಿಲ್ಲ ಅಂತೆ. ನಮಗೂ ದೇವರು ಬೇಕು ಅಂತ ಒಂದು ಸಲ ಒಂದು ದೇವರು ಒಬ್ಬರೇ ಹೋಗ ಬೇಕಾದ್ರೆ ಮುಸ್ಲಿಂ ರು ಒಟ್ಟು ಸೇರಿ ದೇವರನ್ನು ಅಡ್ಡಗಟ್ಟಿದರಂತೆ. ನೀವು ನಮ್ಮ ಜೊತೆ ಬರ್ಬೇಕು ಅಂತ ಆ ದೇವರು ಬರೋದಿಲ್ಲ ಅಂತ ಅವರಿಂದ ತಪ್ಪಿಸಿ ಅಲ್ಲಿಂದ ಹೋಗ ಬೇಕಾದ್ರೆ ಎದುರಾದ ಭಕ್ತ   ಮುಸ್ಲಿಂರ ಕಣ್ಣು ತಪ್ಪಿಸಲು ಅವರೆದುರಲ್ಲಿ ಓಡಿ ಹೊಳೆಯಲ್ಲಿ ಅವಿತು ಕೂತನಂತೆ ನೀರಿನ ಆಳದ ಭೀತಿಗೆ ಕೈಗಳೆರಡನ್ನೂ ಮೇಲೆ ಮಾಡಿದನಂತೆ. ದೇವರನ್ನು  ಹುಡುಕಿಕೊಂಡು ಬಂದ ಮುಸಲ್ಮಾನರು ಹೋ  ಇದೇ ನಮ್ಮ  ದೇವರು ಅಂತ ಕೈಯನ್ನು ತೆಗೆದುಕೊಂಡು ಹೋದರಂತೆ. .ಹೀಗೆ ಅವರಿಗೆ ಕೈಯೇ ದೇವರಾಯ್ತು ಅಂದಿದ್ರು.) ಇದು ಅಜ್ಜಿ ಹೇಳಿದ ಕಥೆ ಅಷ್ಟೇ.

ನಮ್ಮಜ್ಜಿ ಮನೆ ಅವರ ಮೆರವಣಿಗೆಗೆ ಗಡು ಮತ್ತೆ ಅಲ್ಲಿಂದ ಮುಂದೆ ಹೋಗಲಿಕ್ಕೆ ಆಂಜನೇಯ ಬಿಡ್ತಿರಲಿಲ್ಲ ಅಂತ ಅದೇ ಅಜ್ಜಿ ಹೇಳಿದ ನೆನಪು. ಅದೇನೇ ಇದ್ರೂ  ಎಲ್ಲಾ ಪಂಗಡದವರೂ ಸಕ್ಕರೆ ನೈವೇದ್ಯದ ಹರಕೆ ಹೇಳಿ.  ಧೂಪ ಹಾಕಿಕೊಂಡು  ಸಂಭ್ರಮಿಸುತ್ತಿದ್ದರು.

ಅದನ್ನೆಲ್ಲಾ ಮೀರಿ ನಾವೆಲ್ಲ ಮನುಷ್ಯರು,ಮಾನವೀಯತೆಯಿಂದ ಬದುಕಬೇಕು.

ಜಲವೆ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೇನಾದರೂ ಬಲ್ಲಿರಾ
ಜಲದೊಕುಳಿಯಂತೆ ಸ್ಥಿರವಲ್ಲ ಈ ದೇಹ
ನೆಲೆಯ ಅರಿತು ನೀ ನೆನೆಕಂಡ್ಯಾ ಮನುಜ ||

೨೦.


Sudha Adukal
#ಸೌಹಾರ್ದ_ಕಥನ
#ಸಹಬಾಳ್ವೆಯ_ಬದುಕು

ಹಿಂದೆ ಬರೆದಿದ್ದೆ, ಈಗ ಮತ್ತೊಮ್ಮೆ …

1960ರ ಸುತ್ತಲಿನ ಕತೆಯಿದು. ಬಂಟಮಲೆ ಕಾಡೊಳಕ್ಕೆ ಆಗಾಗ ಬರುತ್ತಿದ್ದವನೆಂದರೆ ಕುಟ್ಟಬ್ಯಾರಿ. ಬಿಸಿಲಲ್ಲಿ ಬೆವರೊರಸಿಕೊಳ್ಳುತ್ತಾ ಮನೆಯೊಳಕ್ಕೆ ಬಂದು ಅಪ್ಪನಿಗೆ ನಮಸ್ಕಾರ ಹೇಳಿ ಕುಖಿತುಕೊಳ್ಳುವ  ಅವನಿಗೆ ಅಮ್ಮ ಒಂದೆರಡು ಬೆಲ್ಲದ ತುಂಡುಗಳ ಜೊತೆ ತಂಬಿಗೆ ನೀರು ತಂದು ಕೊಡುತ್ತಿದ್ದಳು. 
ಕುಟ್ಟಬ್ಯಾರಿ, ಆ ಕಾಲದಲ್ಲಿಯೇ ಕಾಸರಗೋಡು,  ಮಂಗಳೂರುವರೆಗೆ ಹೋಗಿಬರುತ್ತಿದ್ದನಾದ್ದರಿಂದ ಅವನ ಅನುಭವ ಲೋಕ ಅಪಾರವಾಗಿತ್ತು. ಅವನು ಭೇಟಿ ಮಾಡುತ್ತಿದ್ದ ನೂರಾರು ಜನಗಳು, ಮಂಗಳೂರು ಬಂದರಿನಲ್ಲಿ ಅವನು ಬಾಳೆಕಾಯಿ ಮಾರಲು ಪಟ್ಟ ಶ್ರಮ, ಹಿಂದೆ ಬರುವಾಗ ಪಾಣೆಮಂಗಳೂರು ಸೇತುವೆ ಬಳಿ ನೀರು ಉಕ್ಕಿ ಹರಿದದ್ದು, ಪುತ್ತೂರಿನಲ್ಲಿ ಅವನು ಕುಡಿದ ಚಹಾದಲ್ಲಿ ಕಡಿಮೆ ಸಕ್ಕರೆ ಇದ್ದದ್ದು, ಇತ್ಯಾದಿಗಳನ್ನು ಆತ ಸೊಗಸಾಗಿ ವರ್ಣನೆ ಮಾಡುತ್ತಿದ್ದ. ಜೊತೆಗೆ, ಅಡಿಕೆ ಧಾರಣೆಯಲ್ಲಿ ಉಂಟಾದ ಏರಿಳಿತ, ಕಾಳುಮೆಣಸಿಗೆ ಬಂದ ಆಪತ್ತು , ವ್ಯಾಪಾರಕ್ಕೆ ಹೋದವರನ್ನು ನಗರದ ಜನ ಮೋಸ ಮಾಡುವ ರೀತಿ, ಇತ್ಯಾದಿಗಳ ಬಗೆಗೂ ಆತ ವಿವರ ನೀಡುತ್ತಿದ್ದ.  ಅವನೇ ನನಗೆ ಆ ಕಾಲದಲ್ಲಿ ಟಿವಿ, ರೇಡಿಯೋ, ಮತ್ತು ವರ್ತಮಾನ ಪತ್ರಿಕೆ.  
ಗಂಟೆಗಟ್ಲೆ ಮಾತಾಡಿದ ಆನಂತರ ‘ಏನಾದರೂ ಇದ್ರೆ ಕೊಡಿ’ ಅಂತ ಆತ ದುಂಬಾಲು ಬೀಳುತ್ತಿದ್ದ. ಅಪ್ಪ ‘ ಸ್ವಲ್ಪ ಅಡಿಕೆ ಇದೆ, ಎಷ್ಟು ಕೊಡ್ತೀ? ಅಂದರೆ ಸಾಕು, ಮತ್ತರ್ಧ ಗಂಟೆ ರೇಟಿನ ಬಗ್ಗೆ ಚರ್ಚೆ. ಕೊನೆಗೆ ಕೆಲವು ರೂಪಾಯಿಗಳನ್ನು ಅಪ್ಪನ ಕೈಗಿತ್ತು-‘ ನೋಡಿ ಯಜಮಾನ್ರೇ, ಇಷ್ಟು ಕಡಿಮೆ ಅಡಿಕೆ ಹೊತ್ತುಕೊಂಡು ಊರು ಸುತ್ತಲಿಕ್ಕೆ ಆಗ್ತದಾ? ಅದು ಇಲ್ಲಿಯೇ ಅಂಗಳದಲ್ಲಿ ಒಣಗಲಿ, ಮುಂದಿನ ಬಾರಿ ಕೊಂಡು ಹೋಗುತ್ತೇನೆ’ ಎಂದು ಹೇಳಿ ಹೋಗುತ್ತಿದ್ದ. ಅಪ್ಪನಿಗೀಗ ಕುಟ್ಟ ಬ್ಯಾರಿಯ ಅಡಿಕೆ ಕಾಯುವ ಕೆಲಸ. ಎಲೆ ಅಡಿಕೆ ತಿನ್ನಲು ಅದರಿಂದ ಒಂದಡಿಕೆ ತೆಗೆದರೂ ಅಪ್ಪ ಗದರಿಸುತ್ತಿದ್ದರು-‘ ಅದು ಕುಟ್ಟ ಬ್ಯಾರಿಯ ಅಡಿಕೆಯಾ, ತೆಗೀಬಾರ್ದು ಅಂತ ಗೊತ್ತಾದುಲೆ?’. ತಾನು ಅಂಗಳಲ್ಲಿ ಬಿಟ್ಟು ಹೋದ ಅಡಿಕೆಯನ್ನು ಯಜಮಾನರು ತೆಗೆಯಲಾರರೆಂಬ ವಿಶ್ವಾಸ ಕುಟ್ಟಬ್ಯಾರಿಯಲ್ಲಿಯೂ, ಕುಟ್ಟಬ್ಯಾರಿ ಅಂಗಳದಲ್ಲಿ ಬಿಟ್ಟು ಹೋದ ಅಡಿಕೆಯನ್ನು ತೆಗೆಯಬಾರದೆಂಬ ಪ್ರಜ್ಞೆ ಅಪ್ಪನಲ್ಲಿಯೂ ಇದ್ದ ಕಾಲವದು. 
ಒಮ್ಮೆ ಕೇರಳದಿಂದ ತಂದ ಓಲೆಬೆಲ್ಲದ ಕಟ್ಟನ್ನು ಉಚಿತವಾಗಿ ಅಪ್ಪನ ಕೈಗಿಟ್ಟು ‘ ನಿಮ್ಮದು ಯಕ್ಷಗಾನ ಮಾಡಿ ಬಂದಾಗ ಈ ಬೆಲ್ಲ ಹಾಕಿ ಚಾಯ ಕುಡಿರಿ, ಪಿತ್ತ ಎಲ್ಲ ಇಳಿಯುತ್ತದೆ’ ಅಂದಿದ್ದ. ನನ್ನ ಬಗೆಗೆ ಕುಟ್ಟ ಬ್ಯಾರಿಗೆ ವಿಶೇಷ ಪ್ರೀತಿ. ಅವನ ಮಾತುಗಳು ನನಗೆ ಸ್ವಲ್ಪ ಬ್ಯಾರೀ ಭಾಷೆಯನ್ನೂ ಕಲಿಸಿದುವು. ಪಂಜದಲ್ಲಿ ಯಕ್ಷಗಾನವಿದ್ದರೆ ಅದರ ಸುದ್ದಿಯನ್ನು ಆತ ನನಗೆ ತಲುಪಿಸುತ್ತಿದ್ದ. ಪಂಜಕ್ಕೆ ಆಟ ನೋಡಲು ಹೋದಾಗ.  ಯಕ್ಷಗಾನದ ಟೆಂಟ್ ಬಳಿ ಅವನು ಪ್ರತ್ಯಕ್ಷವಾಗುತ್ತಿದ್ದ. ‘ಬನ್ನಿ ಯಜಮಾನ್ರೇ’ ಅಂತ ಹೇಳಿ ಯಾವುದೋ ಗೂಡಂಗಡಿ ಬಳಿ ಕರೆದುಕೊಂಡು ಹೋಗಿ, ಚಾಯ ಕುಡಿಸುತ್ತಿದ್ದ. ಯಕ್ಷಗಾನ ನೋಡುವ ನನ್ನ ಬಗ್ಗೆ ಅವನಲ್ಲಿ ತಕರಾರುಗಳಿರಲಿಲ್ಲ.  ಯಕ್ಷಗಾನ ನೋಡದ ಅವನ ಬಗ್ಗೆ ನನ್ನಲ್ಲೂ ತಕರಾರುಗಳಿರಲಿಲ್ಲ. 

ಅದು ನನ್ನ ಭಾರತವಾಗಿತ್ತು.

೨೧.

ನಾನು ಹುಟ್ಟಿದಾಗ ಅಮ್ಮನ ಜೊತೆ ಆಸ್ಪತ್ರೆಯಲ್ಲಿ ಯಾರು ಇರಲ್ಲಿಲ್ಲವಂತೆ, ಅಮ್ಮ ಮಲಗಿದ್ದಾಗ ನಾನು ಹಾಸಿಗೆಯಿಂದ ಕೆಳಗೆ ಬೀಳುವುದನ್ನು ನೋಡಿ ಒಬ್ಬ ಮುಸ್ಲಿಂ ಮಹಿಳೆ ಎತ್ತಿಕೊಂಡಿದ್ದಳಂತೆ, ಅಮ್ಮ ಎದ್ದಾಗ ಕಾಫಿ ಕೂಟ್ಟಿದ್ದರಂತೆ. 
ಅಮ್ಮ ಅವರನ್ನು ಆಗಾಗ ನೆನಪಿಸಿಕೂಳ್ಳುತ್ತಿದ್ದರು, ಆವತ್ತು ಅವರು ಕೊಟ್ಟ ಕಾಫಿ ಅಮ್ರತಕ್ಕೆ ಸಮಾನ ಅನ್ನುತಿದ್ದರು. 

ನಮ್ಮೂರ ಸುತ್ತಲೂ ವ್ಯಾಪಾರ ಮಾಡುತ್ತಿದ್ದುದು ಮುಸ್ಲಿಂಮರೇ. ಉತ್ತರ ಕನ್ನಡ ಜಿಲ್ಲೆಯಲ್ಲಿ, ಅದೂ, ನಾನು ಕಂಡ ಮಂಕಿ, ಬಣಸಾಲೆ ಕಡೆ ಮುಸ್ಲಿಂ ಕುಟುಂಬ ಹೆಚ್ಚು.  ಕೊಳಗದ್ದೆ ಶಾಲೆಯಲ್ಲಿ ಓದುವಾಗ ಕೆಲವು ವಿಷಯಗಳನ್ನು ಬಗಲಿನ ಉರ್ದು ಶಾಲೆಯೊಂದಿಗೆ ಕೂಡಿಸಿ ಕಲಿಸುತ್ತಿದ್ದರು. ಹೀಗಾಗಿ ನಮ್ಮ ಒಟ್ಟು ಪರಿಸರದ ಲ್ಲಿ ಮುಸ್ಲಿಂರೇ ಇರುತ್ತಿದ್ದರರೂ ನಮಗೆ ಅದೇನೋ ವಿಶೇಷ ಅನ್ನಿಸದೇ ಅವರೂ ನಾವೂ ದಿನನಿತ್ಯದ ಬದುಕಿನಲ್ಲಿ ಸಹಜವಾಗಿ ಎಂಬಂತೆ ಇರುತ್ತಿದ್ದೆವು. ನಮ್ಮ ಮನೆಯಲ್ಲಿ ಸಂಪ್ರದಾಯ, ಶಾಸ್ತ್ರ ಜಾಸ್ತಿ, ಬಸ್ಸು ತಪ್ಪಿಸಿಕೊಂಡು ವ್ಯಾಪಾರದ ಮುಸಲ್ಮಾನರು ಎಷ್ಟೋ ಬಾರಿ ನಮ್ಮ ಮನೆಯಲ್ಲಿ ರಾತ್ರಿ ಉಳಿದದ್ದಿದೆ, ನಮ್ಮಪ್ಪ ಸಂಧ್ಯಾ ವಂದನೆ ಮಾಡುವಾಗ ನೋಡುತ್ತ, ಊಟ ಮುಗಿಸಿ ಎಲೆಅಡಿಕೆ  ಹಾಕಿ ಮಲಗುತ್ತಿದ್ದರು. ಮಡಿಮಯ್ಲಿಗೆ ಅಂತ ಅವರನ್ನು ನಮ್ಮೊಂದಿಗೆ ಕೂರಿಸಿ ಊಟ ಹಾಕದಿದ್ದರೂ, ಆದರಕ್ಕೇನು ಕಮ್ಮಿ ಇರಲಿಲ್ಲ, ಅಲ್ಲಾ ಕಾಯ್ತನೆ ಅಂತ ಅವರು-ಶಿವ ಕಾಯ್ತನೆ ಅಂತ ಇವರು ಕುಶಲೋಪರಿ ನಡೆಸಿ ಬೆಳಕು ಹರಿಯುವ ಮೊದಲೇ ಜಾಗ ಖಾಲಿ ಮಾಡ್ತಾ ಇದ್ದರು. 
ಒಂದು ಮಜಾ ಪ್ರಸಂಗ ಹೇಳ್ತೀನಿ - ಒಂದು ದಿನ ಹೊನ್ನಾವರದ ಬಸ್ಸು ನಿಲ್ದಾಣದಲ್ಲಿ ನಮ್ಮಪ್ಪನೊಂದಿಗೆ ನಿಂತಿದ್ದಾಗ, ಬುರ್ಕ ತೊಟ್ಟ ಒಬ್ಬರು ನನ್ನ ಕಡೆ ಬಂದು ತಬ್ಬಿಕೊಂಡು ಮಾತನಾಡಿ, ಹೊರಟುಹೋದರು. ತಟ್ಟನೆ ಎದುರಾದ ಈ ಘಟನೆಯಲ್ಲಿ ನಮ್ಮಪ್ಪ ಕೊಂಚ ಕಸಿವಿಸಿ ಆದಂತೆ ಕಂಡರೂ ಮನೆಗೆ ಬರುವವರೆಗೂ ಏನೂ ಹೇಳದೇ, ಚಿಡೆ ಮೇಲೆ ಕೂತು ಕವಳ ಹಾಕುತ್ತಾ ಯಾರೊಂದಿಗೋ -ವನಿತ್ನಿಗೆ ಯಾರ್ಯಾರ ಪರಿಚಯ ಇದ್ದೊ, ಹೆದರೋದ್ನೋ ಮಾರಾಯ, ಬಸ್ಸು ಸ್ಟಾಪಲ್ಲಿ ಬುರ್ಕ ಹಾಕಿ ಬಂದು ತಬ್ಕಂಬುಡ್ತು.-ಅಂತ ಹೇಳಿ ನಗುತ್ತಿದ್ದನು. ತಪ್ಪದೇ ದಿನವೂ ಅನುಷ್ಠಾನ ಮಾಡುವ ಅಪ್ಪ ಯಾವತ್ತೂ ನನ್ನ ಸ್ನೇಹಿತರ ಬಳಗದಲ್ಲಿ ತಪ್ಪು ಹುಡುಕುತ್ತಿರಲಿಲ್ಲ, ಅಮ್ಮ ಈಗಲೂ -ಅದು ಹುಟ್ಟಿದ ಕೂಡಲೇ ಎತ್ತಿಕೊಂಡಿದ್ದು ಮುಸಲ್ಮಾನತಿ, ಅದಕ್ಕೆ ವನಿತ್ನಿಗೆ ಜಾತಿಬೇಧನ ಇಲ್ಲೆ-ಅನ್ನುತ್ತಾರೆ. 

ಇಂಥ ಪರಿಸರದಲ್ಲಿ ನನ್ನೊಂದಿಗೆ ಬೆಳೆದು ಹಲವರು, social mediaಗಳಲ್ಲಿ ಮುಸ್ಲಿಂರ ಕುರಿತು ಕಿಡಿ ಕಾರುವುದನ್ನ ನೋಡ್ತಿದ್ರೆ ಅತ್ಮವಂಚಕರರಂತೆ ಕಾಣ್ತಾರೆ. ಗೆಳತಿ ನಜೀಬ ಅವರ ಹಬ್ಬಗಳಲ್ಲಿ ಸಿಹಿ ತಂದು ಕೊಟ್ಟು, ಕೊಳಗದ್ದೆ ಜಾತ್ರೆಯಲ್ಲಿ ಜನುಮದಜೋಡಿ ಸರ ಕೊಡಿಸಿ ನನ್ನ ಬಾಲ್ಯಕ್ಕೆ ರಂಗು ತುಂಬಿದ್ದಾಳೆ, ಅವಳಿಗೂ ಮದುವೆ,ಮಕ್ಕಳು ಇರುತ್ತಾರೆ. ಅವಳ ಮಗುವನ್ನು "ಥೂ ಸಾಬರು" ಅಂದರೆ, ನೀವು ಯಾರದರೂ ಸರಿ ನನ್ನ ದಿಕ್ಕಾರವಿದೆ.  

ಮೊನ್ನೆ ನಮ್ಮಮ್ಮ ಫೋನ್ ಮಾಡಿ, ನನ್ನ ವಯಸ್ಸಿನ, ಪುರುಷನೊಬ್ಬ ಅಡಿಕೆ ವ್ಯವಹಾರಕ್ಕೆಂದು ಬಂದದು, ಗರ್ಭಿಣಿ ಹೆಂಡತಿಗಾಗಿ ತುಪ್ಪ ಪಡೆದು, ಬೇಡವೆಂದರೂ ಜುಲುಮೆ ಮಾಡಿ, "ಈ ವಯಸ್ಸಿನಲ್ಲಿ ದನಕರು ಕಟ್ಟಿ ಕೆಲಸ ಮಾಡ್ತಿರಾ" ಎಂದು ಹಣ ಕೊಟ್ಟದ್ದು, ಹೇಳ್ತಾ, ನಮ್ಮ ಕಡೆ ಮುಸ್ಲಮಾನರು ಒಳ್ಳೆಯವರೇ, ಟಿವಿಲ್ಲಿ ಎಂಥತದೋ ತೋರುಸ್ತಿದ್ವು,"  ಅಂದರು. 

ಓದಿ ಊರು ಬಿಟ್ಟ, ಸ್ವಂತ ಆಲೋಚನೆಯ ಶಕ್ತಿ ಇಲ್ಲದವರಿಂದ ಮಾತ್ರ , ಸತತವಾಗಿ ಟಾಪರ್ಸ್ ಬಿಡುಗಡೆ ಮಾಡುವ ಉ. ಕ ಜಿಲ್ಲೆಗೇ ಅವಮಾನ ಎನ್ನಿಸಿ ಸುಮ್ಮನಾದೆ. ಹೃದಯವಂತ ಜನ ಈಗಲೂ ಇದ್ದಾರೆ, ನಿಮ್ಮ ವಿಷ ಕಕ್ಕುವ ಸುದ್ದಿಗಳನ್ನು ನಂಬಲಾಸಾಧ್ಯವಾಗಿಸಿದ್ದಾರೆ. #ಸೌಹಾರ್ದ_ಕಥನ #ಸಹಬಾಳ್ವೆ #ಸಾಕಿಯಮಧುಶಾಲೆ

(ಎಷ್ಟೋ ದಿನಗಳಿಂದ ಇವನ್ನೆಲ್ಲ ಹೇಳ್ಕೋಬೇಕು ಅನ್ನಿಸಿತ್ತು, ಸುಧಕ್ಕನ Sudha Adukal ಪೂಸ್ಟ್ ನೋಡಿ ಬರೆದದ್ದು, ತ್ಯಾಂಕ್ಯೂ ಸುಧಕ್ಕ.)

೨೨.

#ಸೌಹಾರ್ದ

*ಕಚ್ಚಾ ಹಾಳೆಯಂತಹ ನನ್ನ ಊರು*

 

ಅದೊಂದು ಕಚ್ಚಾ ಹಾಳೆಯಂತಹ ಈ ಊರಿನ  ಬದುಕು ,ಏನಾದರೂ ಬರೆಯಬಹುದಿತ್ತು ,ಬರೆದಿದ್ದು ತಪ್ಪಾಗಿದ್ದರೆ ಅದನ್ನು ಅಳಿಸಿ ಮತ್ತೆ ಬರೆಯಬಹುದಾಗಿತ್ತು,ಅಷ್ಡಕ್ಕೂ ಅಲ್ಲಿ ಬರೆಯುವಂತದ್ದು ಮತ್ತು ನೀವು ಓದುವಂತಹ ಏನೇನೂ ವಿಶೇಷವಲ್ಲದ ತಿಂಗಳಾನುಗಟ್ಟಲೇ ಬ್ರೇಕಿಂಗ್ ನ್ಯೂಜಿನಂತೆ ಪ್ರತಿ ಕ್ಷಣಕ್ಕೂ ಘಟಿಸುವಂತಹ ಪ್ರಮೇಯಗಳಿಗೆ ಆಸ್ಪದವೇಯಿಲ್ಲದ ಭೂಗೋಳದ ಮೇಲಿನ ಸೂಜಿಮೊನೆಯಷ್ಟೇ ಚಿಕ್ಕದಾದ ಹಳ್ಳಿ ನಮ್ಮೂರು. ನಮ್ಮ ಬದುಕು. ಇಲ್ಲಿ ಸಂಕೇತಿಸಿರುವ ನನ್ನ ಹಳ್ಳಿ ನಮ್ಮ ನಿಮ್ಮೆಲ್ಲರ ಹಳ್ಳಿಗಳೂ ಹೌದು.

ಇಕ್ಕಟ್ಟಾದ ಬೀದಿಗಳು. ಬದಿಯಲ್ಲಿ ಒಂದಕ್ಕೊಂದು ತೆಕ್ಕೆ ಬಡಿದು ನಿಂತ ಅಥವ ಕುಂತಲ್ಲೇ ಕುಂತಿರುವ ಕಬ್ಬಿನ ಸೋಗೆಯಗುಡಿಸಲುಗಳು ಅಥವ ಮಣ್ಣು ಗೋಡೆಯ ಎಲ್ಲೋ ಅಪರೂಪಕ್ಕೆ ಒಂದೆರಡು ಮಂಗಳೂರು ಹೆಂಚಿನ ಮನೆಗಳು .ಮನೆಯೆದರು ಎಷ್ಟೇ ಬಡವರಾಗಿದ್ದರೂ ಒಂದೆರಡು  ಕಪ್ಪೆಂದರೆ  ಕಪ್ಪು ಬಣ್ಣದ ಎಮ್ಮೆಗಳು ನಾಲ್ಕೈದು ಆಡುಗಳು ಅದರ ಹಿಂದೆ ಮುಂದೆ ಓಡಾಡುವ ನಾಯಿ ಬೆಕ್ಕುಗಳು ,ಬೆಕ್ಕಿನಂತಹ ಬಿಡಾರಗಳು.

ನನಗೆ ಬುದ್ದಿ ಬರುವ ಹೊತ್ತಿಗೆ ಇಂತಹುದೆ ಬೀದಿಯ ಒಂದು ಹತ್ತು ಅಡಿ ಉದ್ದ್ದದ ಮಂಗಳೂರು ಹೆಂಚಿನ ಮನೆಯಲ್ಲಿ  ನಾನು ದೊಡ್ಡವನಾಗುತ್ತಿದ್ದೆ . ಮತ್ತು ಬದುಕು ಚಿಕ್ಕದಾಗುತ್ತ  ಸಾಗುತಿತ್ತು.ಉತ್ತರಕ್ಕೊಂದು ಬಾಗಿಲು ದಕ್ಷಿಣಕ್ಕೊಂದು ಬಾಗಿಲು ಪಶ್ಚಿಮಕ್ಕೆ ಒಂದು ಮಣ್ಣಿನ ಗೋಡೆ ಪೂರ್ವಕ್ಕೆ ಅರ್ಧಗೋಡೆ  ಕಟ್ಟಿ ಅರ್ಧ ಸೋಗೆ ಹೊದಿಸಿದಂತಹದು.ಉತ್ತರ ದಿಕ್ಕಿನ ಅಂಗಳದ ಎಡಭಾಗದಲ್ಲಿ ಎರಡು ಹಿಂಡುವ ಎಮ್ಮೆ ಮತ್ತು ಇನ್ನೊಂದು ವಯಸ್ಸಾದ ಮುರುಕುಕೋಡಿನ ಗೊಡ್ಡೆಮ್ಮೆ .ದಕ್ಷಿಣದ ಬಾಗಿಲಿನ ಹಿತ್ತಲಿನಲ್ಲಿ ಜೋಳದ ದಂಟಿನಿಂದ ಮರೆಮಾಚಿದ ಸ್ನಾನಕ್ಕೆಂದು ಮರೆಮಾಡಿದ ಎರಡಗಲದ ಒಂದು ಜಾಗ ,ಸ್ನಾನದ ನೀರು ಹೋಗಿ ಇಂಗುವಲ್ಲಿ ತಿಪ್ಪೆ ,ಆ ತಿಪ್ಪೆಯಲ್ಲಿ ಎಮ್ಮೆ ಆಡು ಗಳ ಯಥೇಚ್ಛ ಗೊಬ್ಬರ ಇಂತಹ ಊರಿನಲ್ಲಿ ಬಹುಬೇಗ ಬೆಳೆಯುವಂತವು ಒಂದು ತಿಪ್ಪೆಗಳು ಮತ್ತು ಇನ್ನೊಂದು ಮೈ ನೆರೆದ ಹುಡುಗಿಯರು .ಅಚ್ಚರಿಯೆಂದರೆ ನೋಡ ನೋಡುತ್ತಿದ್ದಂತೆ ಮೈ ನೆರೆದ ಹುಡುಗಿಯರ ಬೇಗ ಬೇಗ ಮದುವೆ ಮಾಡಿ ಕಳಿಸುತ್ತಿದ್ದರು.ಮತ್ತು ಅವರೂ ಕೂಡ ಅವಸರಕ್ಕೆ ಬಿದ್ದವರಂತೆ ಮರುವರ್ಷವೇ ಬಸುರಿ ಬಾಣಂತನವೆಂದು ತವರಿಗೆ ಬಂದು ಬಂದು ನಮಗೆಲ್ಲಾ ಒಂದು ನಮೂನಿ ಆತಂಕ ಹುಟ್ಟಿಸುವವರು.

ಈ ಕಚ್ಚಾ ಹಾಳೆಯಂತಹ ಊರಿನ ಮುತ್ತೈದೆಯರು ನಿತ್ಯ ಕೋಳಿ ಕೂಗುವ ಹೊತ್ತಿಗೆ ಎದ್ದು ಕಸ ಮುಸುರೆ ಅಡುಗೆ ಮಾಡಿ ಮಕ್ಕಳ ಮೈ ತೊಳೆದು ಮಾರು ಹೊತ್ತು ಏರುವ ಗಳಿಗೆಗೆಲ್ಲಾ ಹತ್ತಿ ಬಿಡಿಸಲು ಜೋಳ ಕುಯ್ಯಲು ಶೇಂಗಾದಲ್ಲಿ ಕಸ ತೆಗೆಯಲು ತಲೆ ಮೇಲೆ ಬುತ್ತಿ ಹೊತ್ತುಕೊಂಡು ಸಾಲಾಗಿ ಹೊಲಗಳತ್ತ ಹೆಜ್ಜೆ ಹಾಕುವವರು.ಗಂಡಾಳುಗಳು ಮುರುಕು ಸೈಕಲ್ ತುಳಿಯುತ್ತ ಊರ ಗೌಡರ ಬಾವಿ ತೆಗೆಯಲೊ ಹೊಲಗಳಿಗೆ ಒಡ್ಡು ಹಾಕಲೊ ಹೊರಡುವವರು.ನಮ್ಮಂತ ಚಳ್ಳೆ ಪಿಳ್ಳೆಗಳು ಸಾಲಿಯೆಂದರೆ ಸಾಲಿ ಇಲ್ಲವೋ ಒಂದು ಆಡೊ ಎಮ್ಮೆಯ ಹಿಂದೋ ಸಾಗಿ ಅವುಗಳನ್ನು ಮೇಯಿಸಲು ಬಿಟ್ಟು ಅವುಗಳಿಗೆ ಬಾಯಾರಿಕೆಯೆಂದು ನೀರಿಗಿಳಿದಾಗ ಎಮ್ಮೆಯ ಡುಬ್ಬದ ಮೇಲೆ ಕುಳಿತು ಸಾಧ್ಯವಾದರೆ ಅವೇ ನೀರಿನಲ್ಲಿ ಎಮ್ಮೆ ಮೈ ತೊಳೆಯುವ ನೆವದಲ್ಲಿ ನಾವೂ ಈಜು ಹೊಡೆದು ಮಟ ಮಟ ಮಧ್ಯಾನ್ಹದ ಹೊತ್ತಿಗೆಲ್ಲಾ ಮನೆಗೆ ಬಂದು ಊಟ ಮಾಡಿ ಮತ್ತೆ ಸಂಜೆ ದೊಡ್ಡವರು ಮರಳುವ ತನಕ ಆಟ ಆಟ ಮತ್ತು ಆಟ.
ಸಂಜೆ ಆರಕ್ಕೆಲ್ಲಾ ಎಲ್ಲರ ಹಟ್ಟಿಗಳ ಒಲೆಗಳು ಉರಿದು ಒಂದು ತರಹದ ಹೊಗೆ ಮತ್ತು ಆ ಹೊಗೆಯೊಂದಿಗೇ ತೇಲಿ ಬರುತ್ತಿದ್ದ ವಗ್ಗರಣೆಯ ಘಮ,ನಮ್ಮ ಎದುರುಗಡೆ ಮನೆ ಮುಸ್ಲಿಂ ಕುಟುಂಬವಿದ್ದಿತು ಅವರು ವಾರಕ್ಕೆರಡು ಸಲ ಮಟನ್ ಇಲ್ಲದೆ ಊಟ ಮಾಡುತ್ತಿರಲಿಲ್ಲ ,ಹೀಗಾಗಿ ಅದರ ಸ್ವಲ್ಪ ಪಾಲು ನನಗೂ ಬರುತ್ತಿತ್ತು.ನಮ್ಮ ಮನೆಯ ಎಮ್ಮೆಯ ಹಾಲು ಹೈನು ಮಜ್ಜಿಗೆ ಅವರ ಮನೆಗೆ ಕೊಡುತ್ತಿದ್ದೆವು .ನಮ್ಮ ಮನೆಯ ಹಿತ್ತಲಿನ ಬೀದಿಯಲ್ಲಿ ನಾಲ್ಕು ನಾವಲಿಗರ (ಕ್ಷೌರಿಕರ)ಕುಟುಂಬಗಳಿದ್ದವು. ಅವರ ಮನೆಯ ಸಾರು ಪಲ್ಯ ನಮಗೆ ಕೊಡುತ್ತಿದ್ದರು.ಆದರೆ ಅವರು ಪಕ್ಕಾ ಸಸ್ಯಾಹಾರಿಗಳು .ಮನೆಯ ಮುಂದೆ ಮಾಲಗಾರರ ಕುಟುಂಬಗಳಿದ್ದವು.ಮತ್ತು ಉಪ್ಪಾರರ ನಮ್ಮ ಬೀದಿಯಲ್ಲಿ ಎಂಟತ್ತು ಮನೆಗಳು ,ಈ ಮಾಲಗಾರರೂ ಕೂಡಾ ಸಸ್ಯಾಹಾರಿಗಳು ಇವರ ಮನೆಗಳಿಗೆ ನಮ್ಮ ಮನೆ ಗೋಡೆ ಅಂಟಿಕೊಂಡಿದ್ದರೂ ನಮ್ಮ ಊಟ ಆಚಾರ ವಿಚಾರಗಳ ಬಗ್ಗೆ ಇವರೆಂದೂ ತಲೆಕೆಡಿಸಿಕೊಂಡಂದ್ದು ನನ್ನ ಅನುಭವಕ್ಕೆ ಬಂದಿಲ್ಲ ಮತ್ತು ಕಚ್ಚಾ ಹಾಳೆಯಂತಹ ನನ್ನೂರಿನ ಈ ಎಲ್ಲ ಜಾತಿಯ ನಿತ್ಯ ಮುತ್ತೈದೆಯರು ಬೆಳಕು ಹರಿಯುವ ಹೊತ್ತಿಗೆಲ್ಲ ಬುತ್ತಿಕಟ್ಟಿಕೊಂಡು ಹೊಲದಲ್ಲಿ ಕೂಲಿ ಮಾಡುತ್ತ ಹಾಡು ಹೇಳುತ್ತ ಊಟ ಉಪಚಾರ ತಿಂಡಿ ತೀರ್ಥ ಪರಸ್ಪರ ಹಂಚಿಕೊಂಡು ಸುಖವಾಗಿ ....ಬಾಳುತ್ತಿದ್ದ ಅದೊಂದು ಕಾಲದಲ್ಲಿ ನನ್ನ ಬಾಲ್ಯ ಸೋರಿಹೋಗಿತ್ತು.
ವರ್ಷಕ್ಕೊಂದು ಸಲ ನಡೆಯಿತ್ತಿದ್ದ ಮುಸ್ಲಿಂರ  ಉರುಸಿನಲ್ಲಿ ನಮ್ಮ ಅಣ್ಣ ಕಿಚ್ಚ ಹಾಯುತ್ತಿದ್ದ ಅದಕ್ಕಾಗಿ ಒಂದು ವಾರ ಉಪವಾಸವಿರುತ್ತಿದ್ದ .ಅಕಸ್ಮಾತ್ ಹಾಯ್ದ ಕಿಚ್ವಿನಿಂದೇದಾರೂ ಕಾಲಿಗೆ ಬೊಬ್ಬೆಗಳಾಗಿ ರಕ್ತ ಕೀವು ಯಾರಿಗಾದರೂ ಸೋರಿದರೆ ಏನೋ ಅನಾಚಾರವಾಗಿದೆಯೆಂಬಂತೆ ಅದೇ ಊರಿನ ಮುಲ್ಲಾನ ಬಳಿ ಹೋಗಿ ತಾಯತ ಕಟ್ಟಿಸಿಕೊಂಡು ಬರುತ್ತಿದ್ದರು.ಶ್ರಾವಣದ ಕಡೆಯ ಸೋಮವಾರ ನಡೆಯುವ  ಸಿದ್ದೇಶ್ವರವ ಜಾತ್ರೆಗೆ ಎಲ್ಲರೂ ದುಡ್ಡು ಕೊಟ್ಟು ದೂರದ ರಬಕವಿ ಬನಹಟ್ಟಿ ಊರುಗಳಿಂದ ಬಯಲಾಟದವರನ್ನು ಕರೆಸಿ ಆಟ ಆಡಿಸುತ್ತಿದ್ದರು.ಶ್ರೀ ಕೃಷ್ಣ ಪಾರಿಜಾತದ ಬಯಲಾಟ ನಡೆಯುತ್ತಿದ್ದದ್ದು ಇದೇ ಮುಸ್ಲಿಮರ ದೇವರ ಕೂಡ್ರಿಸುತ್ತಿದ್ದ ಎದರಿನ ಬಯಲಿನಲ್ಲಿ.ಅದರ ಎದುರುಗಡೆ ಹಣುಮಪ್ಪನ ಗುಡಿ ಅದರ ಪಕ್ಕದಲ್ಲಿ ಪಂಢರಪುರದ ವಿಠೋಬಾ ರುಕ್ಮಬಾಯಿಯ ಗುಡಿ ,ನಮ್ಮ ಊರಿನ ಜನರಂತೆ ನಮ್ಮೂರಿನ ದೇವರುಗಳು ಭಾರೀ ಒಳ್ಳೆಯವರು ಪಾಪ ! ಒಂದು ದಿನ ಕೂಡ ನನ್ನ ಜಾತಿ ಮತ ಪಂಥ ಅಂತ ಜಗಳ ಮಾಡಿದ್ದು ಯಾರೂ ನೋಡಿಲ್ಲ

ಈ ಇಂತಹ ಗಟ್ಟಿ ತಳವೂರಿದ ಊರಿಗೆ ಸವಾಲುಗಳೇ ಇಲ್ಲವೆಂತಲ್ಲ ,ನೆರೆ ಗೂ ಬರಕ್ಕೂ ನೇರವಾಗಿ ದೇವರನ್ನೇ ಆರೋಪಿಸುತ್ತಾರೆ ,ಹಾಗೆ ಇವರೊಂದಿಗೆ ಜಗಳವಾಡಲು ಬಹುಶಃ ದೇವರಿಗೂ ಪ್ರೀತಿ.ಬರದಲ್ಲೂ ಹಸಿವಿನಿಂದ ತಲ್ಲಣಿಸಿದರೂ ಅಂಬಲಿ ಗಂಜಿ ಕುಡಿದು ದಿನ ದೂಡಿದವರಿದ್ದಾರೆ.ಪ್ಲೇಗು ಮಾರಿ ಊರಿಗೆ ಬಂದು ಇಡೀ ಊರಿಗೆ ಊರೇ ಊರು ಬಿಡದೆ ದೇಶಾಂತರ ಹೋಗದೆ ಅಮ್ಮನ ಹರಕೆ ತೀರಿಸಿ ನಾಗರೀಕತೆಯ
ಮುಂದಿನ ಇತಿಹಾಸ ಬರೆದವರಿದ್ದಾರೆ ,ಕಳೆಕೊಂಡವರ‌ ನೋವೂ  ಉಡಿಯಲ್ಲಿಟ್ಟುಕೊಂಡು ಊರ ಮಾರಮ್ಮನ ಕೆಂಡ ತುಳಿದಿದ್ದಾರೆ,ಯುದ್ಧ ಇವರನ್ನು ಕಂಗೆಡಿಸದಿದ್ದರೂ ಊರ ಜವಾನರ ಕಳೇ ಬರಹ ಹೊತ್ತ ಕಫನುಗಳು ಊರಿಗೆ ಬಂದಾಗ ಮಾತ್ರ ಕನಲಿ ಹೋಗಿದ್ದಾರೆ.
ಕಾಲ ಕಾಲಕ್ಕೆ ಬರುವ ಚುನಾವಣೆಗಳು ಬಂದು  ಇವರ ಮಧ್ಯ ತಾತ್ಕಾಲಿಕ ಗೋಡೆಗಳೆನ್ನಿಬ್ಬಿಸಿದರೂ ಇವರ ಧಾರಣ ಶಕ್ತಿ ದೊಡ್ಡದು ,ಅವರು ಕೊಡುವ ದುಡ್ಡು ಕೊಟ್ಟೂ ತಾನು ನಂಬಿದ ಪಾರ್ಟಿಗೆ ಓಟು ಮಾಡುತ್ತಾರೆ. ಟೈಂ ಎಷ್ಟಾಯಿತು ಕೇಳಿದರೆ ಬಾರಾ ಎಂದು ಮರಾಠಿ ಯಲ್ಲೇ ಹೇಳಿ ಮಕ್ಕಳನ್ನು ತಪ್ಪದೇ ಕನ್ನಡ ಶಾಲೆಗೇ ಕಳುಹಿಸುತ್ತಾರೆ.
ಮಸೀದೆಯಿಂದ ಬರುವ ಆಜಾನು ಕೂಗೇ ಇವರ ಜೈವಿಕ ಗಡಿಯಾರ.
ಮಂದಿರ ಮಸೀದೆ ಕಟ್ಟುವ ಯಾ ಕೆಡಹುವ  ವಿಚಾರಗಳ ಬಗ್ಗೆ ಧರ್ಮ ಸಂಸತ್ತುಗಳು ನಡೆಯುವಾಗ ,
ನಾಗರೀಕತೆ ಸೋಂಕದ  ಅನಕ್ಷರಸ್ಥ ಹಳ್ಳಿಗಳು ಇನ್ನೂ ಜಾತ್ಯಾತೀತೆ ,ಬಹುತ್ವವನ್ನು ಕಾಪಿಟ್ಟುಕೊಂಡು ಬದುಕುತ್ತಿವೆಯೆಂದಾದರೆ ಅದು ಯಾವ ಧರ್ಮ ಬೋಧನೆಯಿಂದಲೂ ಅಲ್ಲ ಬದಲಾಗಿ ಕೂಡಿ ಬದುಕುವ ಜೀವನೋತ್ಸಾಹವಾಗಿ ಮಾತ್ರ.

ಮನುಷ್ಯ ಹೆಚ್ಚು ಹೆಚ್ಚು ಓದಿದಂತೆಲ್ಲಾ ಜ್ಞಾನ ಸಂಪಾದನೆಯಾದಂತೆಲ್ಲಾ    ತನ್ನ ಸುತ್ತ ಮುತ್ತಲಿನ ಪ್ರಪಂಚದ ಬದುಕನ್ನು ಸುಂದರವಾಗಿ ಸಹ್ಯವಾಗಿ ವಿಶಾಲ ದೃಷ್ಟಿಯಿಂದ ನೋಡುವ ಒಳಗಣ್ಣು ಇರಬೇಕಿತ್ತು,ಬದಲಾಗಿ ಇಲ್ಲಿ ಹೆಚ್ಚು ಓದಿದವರೇ ಈ ನಾಡಿನ ದುಷ್ಟರಾಗುತ್ತಿದ್ದಾರೆ.          ಜಾತಿಗೊಂದು ಮಠ ,ಧರ್ಮಕ್ಕೊಂದು ಶಾಲೆ ,ಸಮುದಾಯಕ್ಕೊಂದು ಪ್ರತ್ಯೇಕ ಮದುವೆ ಮಂಟಪಗಳು ಕೊನೆಗೆ ಅವರವರ ಜಾತಿಗೆಂದೇ ಮೀಸಲಾದ ಸ್ಮಶಾನ ಭೂಮಿ ಮಾಡಿಕೊಂಡು 
ನಾಗರಿಕತೆಯನ್ನು ಇನ್ನಷ್ಟು ಹಿಮ್ಮುಖವಾಗಿ ಚಲಿಸುವಂತೆ ಮಾಡುವಾಗ  ಇದೆಲ್ಲ ಎಲ್ಲಿ ಹೋಗಿ ಮುಟ್ಟುತ್ತದೆಯೆಂದು ನೆನೆದು ಜೀವ ಝಲ್ಲೆನ್ನುತ್ತದೆ.
****

೨೩.

#ನಮ್ಮ_ಅಜ್ಜ.
#ಮೀರಾಸಾಬ
ಅದೇ ಅವನ ಹೆಸರಾಗಿತ್ತೋ ಅಥವಾ ಅವನ ಹೆಸರು ಅಪಭ್ರಂಶವಾಗಿ ಜನ ಅವನನ್ನು ಹಾಗೆ ಕರೆಯುತ್ತಿದ್ದರೋ ಗೊತ್ತಿಲ್ಲ.
ನಾವು ಮಕ್ಕಳಿಗಂತೂ ಆತ ಎಷ್ಟು ಪ್ರಿಯನಾಗಿದ್ದ ಎಂದರೆ, ಆ ಕಾಲದ ಪ್ರಸಿದ್ಧ ಚಿತ್ರ ' ಮೇರಾ ಸಾಯಾ' ದ ಹಾಡನ್ನ 
" ತೂ ಜಹಾಂ ಜಹಾಂ ಚಲೇಗಾ ಮೀರಾ ಸಾಯ್ಬಾ ಸಾಥ್ ಹೋಗಾ...." ಅಂತಲೇ ಹಾಡ್ತಿದ್ದೆವು. ಮುಂದೆ ದೊಡ್ಡವರಾಗಿ ಹಿಂದಿ ಕಲಿತ ಮೇಲೇ ಅದು ಮೇರಾ ಸಾಯಾ ಅಂತ ಗೊತ್ತಾಗಿದ್ದು.
ಕುರುಚಲು ಗಡ್ಡದ ಉದ್ದ ಮುಖದ ಗಿಡ್ಡ ಲುಂಗಿಯ ಆತ ನಾವಿದ್ದ ದುರ್ಗಾಕೇರಿಯ ಪೇಟೇಲಿ ಆಗಾಗ ಕಾಣಿಸಿಕೊಳ್ತಿದ್ದ. 'ಕಲಾಯ್ ಕಲಾಯ್' ಅಂತ ಒದರ್ತಾ ಉದ್ದಕ್ಕೆ ನಡೆದು ಹೋಗ್ತಿದ್ದ. ರಸ್ತೇಲಿ ಯಾವ್ದೇ ಮಗು ಸಿಕ್ಕಲಿ ಅದರ ಹೆಸರು ಹಿಡಿದು ಕೂಗ್ತಾ ಓಡಿ ಹೋಗಿ ಎತ್ಕೋತಿದ್ದ. ಅಲ್ಲೇ ಇದ್ದ ಶ್ರೀಧರ ನಾಯ್ಕರ ಅಂಗಡೀಲಿ ಪೆಪ್ಪರಮಿಂಟ್ ಕೊಡಿಸ್ತಿದ್ದ. ಆತನ ಪ್ರೀತಿಗೋ, ಪೆಪ್ಪರಮಿಂಟ್ ಆಸೆಗೋ ಆತನ ಕೂಗು ಕೇಳಿದ್ರೆ ಸಾಕು ಮಕ್ಕಳು ಮುತ್ಕೊಳ್ತಿದ್ವು. 'ಅಜ್ಜಾ' ಅಂತ ಕರೀತಿದ್ವು. 'ಅಜ್ಜಾ' ಅಂದ್ರೆ ಸಾಕು ಅತನ ಸಪೂರ ಮುಖ ಇಷ್ಟಗಲ ಆಗ್ತಿತ್ತು.ಆತ ಕೆಲಸ ಮಾಡ್ತಾ ಕೂತ್ರೆ ಆತನ ಸುತ್ತ ಇವೆಲ್ಲ ಪಿಳಿ ಪಿಳಿ ಕಣ್ಣು ಬಿಟ್ಕೊಂಡು ಕೂತಿರ್ತಿದ್ವು.
ಬಿಡುವಿನ ವೇಳೆ ಮನೆ ಕಟ್ಟೆ ಮೇಲೆ ಕೂತು ಚಾ ಕೊಟ್ರೆ ಕುಡೀತಾ ಎಲ್ಲರ ಕಷ್ಟ ಸುಖ ವಿಚಾರಿಸ್ತಿದ್ದ. 
ಹೀಗೇ ಅವನ......''ಕಲಾಯ್,ಕಲಾಯ್" ಕೇಳ್ತಾನೇ‌ ನಾವೂ ದೊಡ್ಡವರಾದ್ವಿ.
ನಾವೆಲ್ಲ ಪೂರ್ವಪ್ರಾಥಮಿಕ‌ ಶಾಲೆ ನಾಕ್ನೆತ್ತಿ  ಓದ್ತಿದ್ದ ಸಮಯ ಇರ್ಬೇಕು. ಜೋರು ಮಳೆಗಾಲ.  ನಾವೆಲ್ಲ ತುಂಬಾ ಪ್ರೀತಿಸ್ತಿದ್ದ ನಮ್ಮ ಗ್ಯಾಂಗ್ ನ ಗೆಳೆಯನೊಬ್ಬ ನಾಲ್ಕು ದಿನದಿಂದ್ಲೂ ಶಾಲೆಗೆ ಬಂದಿರ್ಲಿಲ್ಲ. ಆ ಪ್ರಾಯದಲ್ಲೇ ಒಂಥರಾ ಜವಾಬ್ದಾರಿ ಹೊತ್ಕೊಂಡ ಹುಡುಗ ಅವ. ಮನೇಲಿ ಎಲ್ಲ ಕೆಲಸಗಳನ್ನೂ ಬಹಳ ದಿನ ಅಡುಗೇನೂ ಅವನೇ ಮಾಡಬೇಕಿತ್ತು. ತುಂಬ ಕಷ್ಟದಲ್ಲಿದ್ದ. ತಂದೆ ಅಡುಗೆ ಭಟ್ರು. ಅವರು ಅಡುಗೆ ಕೆಲಸಕ್ಕೆ ಹೋಗ್ತಿದ್ರೆ ತಾಯಿಗೆ ಮಾನಸಿಕ ಆರೋಗ್ಯ ಸರಿಯಿರಲಿಲ್ಲ. ಆ ಕಾರಣನಕ್ಕೇ ನಮಗೂ ತುಂಬ ಆತಂಕವಾಗತ್ತು. ಶಾಲೆ ಬಿಟ್ಮೇಲೆ, ಅಂಥ ಘೋರ ಮಳೇಲೂ ಕೊಡೆ ಬಿಡಿಸ್ಕೊಂಡು ಗೆಳೆಯನ ಮನೆಗೆ ಹೊರಟ್ವಿ. ಸುಮಾರು ದೂರದ ಒಂಟಿ ಮನೆ. ಮನೆಯ ಬಾಗಿಲು ಮುಚ್ಚಿತ್ತು. ಬಾಗಿಲು ದೂಡಿ ಒಳಗೆ ಹೋದ್ರೆ ಗೆಳೆಯ ಗೋಣಿ ಚೀಲ ಹೊದ್ದು ಮಲಗಿದ್ದ. ಗಡಗಡ ನಡುಗ್ತಿದ್ದ. ಜೋರು ಜ್ವರ. ಆತನ ಅಮ್ಮ ಏನೂ ಗೊತ್ತಿಲ್ಲದವಳಂತೆ ಮೂಲೇಲಿ ಕೂತಿದ್ಲು. ತಂದೆ ಕಾಣ್ತಿರಲಿಲ್ಲ. ಅವರಿಗಾಗಿ ಸುಮಾರು ಕಾದೆವು. ಅವರೆಲ್ಲಿ ಕೆಲಸಕ್ಕೆ ಹೋಗಿದ್ರೋ ಏನೋ ಎಷ್ಟು ಹೊತ್ತಾದ್ರೂ ಬರಲಿಲ್ಲ. ಕತ್ತಲೆಯಾಗ್ತಾ ಬರ್ತಿತ್ತು. ನಮಗೆ ಏನು ಮಾಡಬೇಕು ಅಂತಲೇ ಗೊತ್ತಾಗ್ಲಿಲ್ಲ. ಅಳುವೇ ಬಂದುಹೋಯ್ತು. 
ಅಷ್ಟರಲ್ಲಿ...ದೂರದಲ್ಲಿ ಸೈಕಲ್ ದೂಡ್ಕೊಂಡು ಬರ್ತಿದ್ದ ಸಾಬಜ್ಜ  ಕಂಡ. ಆತನ್ನ ನೋಡಿದ್ದೇ ಎದ್ದೂ ಬಿದ್ದೂ ರಸ್ತೆಗೆ ಓಡಿದ್ವು. ವಿಷ್ಯ ಕೇಳಿದವ್ನೇ ಆತ ಹಿಂದೆ ಮುಂದೆ ನೋಡ್ಲಿಲ್ಲ. ಸೈಕಲ್ ಕ್ಯಾರಿಯರ್ ಮೇಲೆ ಗೆಳೆಯನ್ನ ಕೂರಿಸ್ಕೊಂಡ. ಗೋಣಿ ಹೊದೆಸಿದ. "ಸೈಕಲ್ ಸೀಟ್ ಗಟ್ಟಿ ಹಿಡ್ಕೋ"  ಅಂದೋನೇ ಒಂದು ಕೈಲಿ ಕೊಡೆ ಹಿಡ್ಕೊಂಡು ಗೆಳೆಯನನ್ನೂ ಮಳೆಯಿಂದ ರಕ್ಷಿಸ್ತಾ ಸೈಕಲ್ ಹತ್ತಿ ಸರ್ಕಾರೀ ಆಸ್ಪತ್ರೆಗೆ ಹೊರಟೇಬಿಟ್ಟ. ನಾವೂ ಅವನ ಹಿಂದೇ ಓಡಿದ್ವಿ. ನಾವು ಆಸ್ಪತ್ರೆ ಸೇರಿದಾಗ ಆಗಲೇ  ಗೆಳೆಯನ್ನ ಅಡ್ಮಿಟ್ ಮಾಡಿಯಾಗಿತ್ತು.
ಡ್ರಿಪ್ಸ್ ಹಾಕಿದ್ರು. ಪಕ್ದಲ್ಲೇ ಅಜ್ಜ ಹಣೆಗೆ ತಣ್ಣೀರು ಪಟ್ಟಿ ಹಾಕ್ತಾ ಕೂತಿದ್ದ. ನಾವು ಮನೆಗೆ ಬಂದ್ವಿ.
ಎರಡು ದಿನ ಬಿಟ್ಟು ಗೆಳೆಯ ಶಾಲೆಗೆ ಬಂದ್ಮೇಲೆ ಹೇಳ್ತಿದ್ದ. ಸಾಬಜ್ಜ  ಇಡೀ ರಾತ್ರಿ ಆಸ್ಪತ್ರೇಲೇ ಇದ್ನಂತೆ. "ಅಪ್ಪಂಗೆ ದುಡ್ಡನ್ನೂ ಕೊಟ್ಟು ಹೋದ" ಅಂತಿದ್ದ.
ಹೀಗೆ ಮೀರಾಸಾಬ ಅಜ್ಜನಂತೆ, ರಕ್ಷಕನಂತೆ ನಮ್ಮ ಬಾಲ್ಯದುದ್ದಕ್ಕೂ ನಮ್ಮ ಜೊತೆಗಿದ್ದ.
ಈ ಘಟನೆಯ ನಂತರ ಮೀರಾಸಾಬಜ್ಜನ ಅನೇಕ ಪರೋಪಕಾರದ ಕಥೆಗಳನ್ನ ಹಿರಿಯರಿಂದ ಕೇಳಿದ್ವಿ.
ನಿಜಕ್ಕೂ ನಾವು ತಪ್ಪಾಗಿ ಹಾಡ್ತಿದ್ದ 
" ತೂ ಜಹಾಂ ಜಹಾಂ ಚಲೇಗಾ ಮೀರಾ ಸಾಯ್ಬಾ ಸಾಥ್ ಹೋಗಾ...." ಎನ್ನೋದು ಆತನ ಮಟ್ಟಿಗೆ ನಿಜವೇ ಆಗಿತ್ತು.

೨೪.

ಸೌಹಾರ್ದತೆಯ ಸಾಕ್ಷಿಗಾಗಿ  #ಸುಧಾ #ಮೇಡಂ ಅವರು ನೀಡಿದ  ಟಾಸ್ಕ್... ಜೀವಮಾನದ ಹತ್ತಾರು ಘಟನೆಗಳನ್ನು ನೆನಪಿಸಿದೆ .ಅದ್ರಲ್ಲೊಂದು ಇದು...... ಧನ್ಯವಾದಗಳು ಮೇಡಂ,ಹಾಗೂ #ಸಚಿನ್ ಅವರಗೂ ಕೂಡ

ಊರಿನಾಚೆ ಕೆಲಸ ಮಾಡೊ ನಾವುಗಳು ಹುಡುಕಿದ್ದು ಪ್ರೀತಿ, ಸ್ನೇಹ, ನೆಮ್ಮದಿ ಅಂತಹವುಗಳು. ಅಲ್ಲಿರೋ ಗೋಡೆಗಳು ವಿಚಿತ್ರ ಅನ್ಸಿದ್ರು ಸೌಹಾರ್ದಯುತ ಬದುಕಿನ ಮದ್ಯೆ ಅದ್ಯಾವುದು ಅಂತರ ಅನ್ಸಲೇ ಇಲ್ಲ. ಉರಿ ಬಿಸಿಲಿನ ಮಧ್ಯಾನದ‌ ಸಮಯದಲ್ಲಿ ಯಾರೋ ಪುಣ್ಯಾತ್ಮ ಹಿಂದೆ ಬಂದು ಬೈಕಿಗೆ ಗುದ್ದಿ ಅಷ್ಟೇ ವೇಗದಲ್ಲಿ ಅಲ್ಲಿಂದ ಮರೆಯಾಗಿದ್ದ...ತಲೆ ಗೋಡೆಗೆ ಬಡದು ಕೆಳಗಡೆ  ಬಿದ್ದಿರುವಾಗ ಸುಮಾರು ಮುಖಗಳು ನೋಡಿ ಕೂಡ ನೋಡದಂತೆ‌  ಇಣಕು ಹಾಕುತ್ತಾ ದಾರಿ ಸಾಗತ ಇದ್ರು .ಕುದುರೆ ಟಾಂಗದ ಗಡ್ಡದಾರಿ ಚಾಲಕನೊಬ್ಬ
ಅರೇ ಕ್ಯಾ ಹುವಾ.. ಸಾಬ್  ಎನ್ನುತ್ತಾ ಲಗುಬಗೆಯಿಂದ ಕೆಳಗೆ ಬಂದು ಭುಜಕ್ಕೆ‌ ಕೈ ಹಾಕಿ ಎತ್ತಕೊಂಡು ಕರವಸ್ತ್ರದಿಂದ ಆಗೀರೊ ಗಾಯಕ್ಕೆ ಕಟ್ಟಿ ,ಟಾಂಗದ ಮೇಲೆ ಆಸ್ಪತ್ರೆ ಸೇರಸಿ ಅವನ ದಿನ ಸಂಪಾದನೆ‌ ಹಣ ಸಾಕಾಗದೆ ಇರುವಾಗ ಪರಿಚಿತ ದುರ್ಗಾ ಪೂಜಾರಿಯೊಬ್ಬರಿಂದ ಹಣ ಪಡೆದು ತುಂಬಿ‌ ಕೈಮೇಲೆ ಕೈ ಇಟ್ಟು ಆಪ್ ಕೊ‌ ಕುಛ್ ನಹೀ‌ ಹೋಗಾ ಸಾಬ್ ಅನ್ತಿರುವಾಗ ಬಂಧುಬಳಗ,ಗೊತ್ತು ಗುರಿಯಿಲ್ಲದವನ ಮೇಲೆ ಇಷ್ಟೊಂದು ಆಪ್ತತೆ ನೋಡಿ ಕಣ್ಣಗಳು ಒದ್ದೆಯಾಗಿದ್ದವು
ನಮ್ಮ ನಡುವೆ  ನಜೀರ್ ನಂತಹ ಸಾವಿರಾರು ಮಾನವೀಯ ಜೀವಿಗಳಿದ್ದಾರೆ.
ಧರ್ಮ ,ಮತ,ಪಂಗಡ, ಜಾತಿಗಳಿಗಿಂತ ಶ್ರೇಷ್ಠವಾಗಿರೊದು ಮನುಷ್ಯತ್ವವಾಗಿರೊದ್ರಿಂದ ದ್ವೇಷ, ಅಸೂಹೆ, ಮತ್ಸರ ಹಂಚುವ ಬದಲು ಪ್ರೀತಿ,ಸ್ನೇಹಗಳನ್ನು ಹಂಚಿದಾಗ ಜಾತ್ಯಾತೀತ ರಾಷ್ಟ್ರಕ್ಕೆ  ಗೌರವ ಸಲ್ಲಿಸಿದಂತೆ

ಕಡತೋಕ ಪ್ರಮೋದ್

೨೪.

ಶರಣು ನಿಮಗೆ🙏 ಸುಧಾ ಮಾ ಹೀಗೊಂದಷ್ಟು ಹಳೆಯ ನೆನಪುಗಳನ್ನ ಕೆದಕಿದ್ದಕ್ಕೆ... ಸಾಕಿಯ ಮಧುಶಾಲೆ ನಿನಗೂ ಕೂಡ💜🧡

 ಈ ಕೋಮು ರಾಜಕಾರಣವಾಗಲಿ, ಸೌಹಾರ್ಧತೆಯ ಆಪ್ತ ಭಾವಗಳಾಗಲಿ ಯಾವುದೂ ಅರಿವಿರದ ಹೊತ್ತಲ್ಲಿಯೂ ನಮ್ಮಲ್ಲಿ ಅನ್ಯ ಧರ್ಮಶದ ಜನರೊಂದಿಗೆ ಸ್ನೇಹ ಪ್ರೀತಿ ಸಹಬಾಳ್ವೆ ಕೋಪ ಜಗಳ ಹೊಂದಾಣಿಕೆ ಎಲ್ಲವೂ ಇದ್ದವು,ಇಗಲೂ ಇದೆ ಕೂಡ..

 ನನಗೆ ಒಂದನೇ ತರಗತಿಯಲ್ಲಿ ಉಲ್ಟಾ ನಂ.ಗಳನ್ನು (100,99,98,97...ಹೀಗೆ) ಹೇಳುವುದನ್ನ ಬಾಯಿಪಾಟ ಮಾಡಿಸಿದ್ದ ಮುಲ್ಲಾ ಟೀಚರ್ ಇಂದ ಹಿಡಿದು ಡಿಪ್ಲೋಮಾದಲ್ಲಿ ಏನೋ ಸಣ್ಣ ಸಿಟ್ಟಿನಲ್ಲಿ ನಿನ್ನನ್ನು fail ಮಾಡ್ತೇನೆ ಎಂದು ರೇಗಿ ಕೊನೆಗೆ ಹಾಗೇನೂ ಮಾಡದೇ ಪ್ರಾಮಾಣಿಕವಾಗೇ ಉಳಿದ ಹುಸೇನ್ ಸರ್ ಒರೆಗೂ ನನಗೆ ಪಾಠ ಮಾಡಿದ ಅನ್ಯ ಧರ್ಮದ ಗುರುಗಳ ದೊಡ್ಡ ಸಂಖ್ಯೆಯೇ ಇದೆ.. ಹಾಗೇ ಗದ್ದೆ ಬಯಲಲ್ಲಿ ಕ್ರಿಕೆಟ್ ಆಡುವಾಗಿನ ಗೆಳೆಯ ಅದ್ಬುಲ್ ಸತ್ತಾರನಿಂದ ಹಿಡಿದು ಮೊನ್ನೆ ಮೊನ್ನೆ ಡಿಪ್ಲೊಮಾ ಓದುವಾಗ ಅಕ್ಕ ಪಕ್ಕದಲ್ಲೇ ಕೂತು ಪಾಠ ಕೇಳುತ್ತಿದ್ದ ಬಿಲಾಲ್, ನವಾಜ್ ನಂತಹ ಅಣ್ಣ ತಮ್ಮಂದಿರಂತಹ ಗೆಳೆಯರ ಸಂಖ್ಯೆಯೂ ಬಹಳ ದೊಡ್ಡದೇ ಇದೆ.. ಇನ್ನು ಈ fb ಅಲ್ಲಿ ಇರುವ ಆಪ್ತರ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಂದ್ಕೋತೇನೆ...

ನಮ್ಮದು ಪುಟ್ಟ ಊರು. ಕ್ರಿಶ್ಚಿಯನ್ ಸಮುದಾಯದ ಮನೆಗಳು ಇರಲಿಲ್ಲವಾದರೂ ಬಹಳಷ್ಟು ಮುಸ್ಲಿಂ ಸಮುದಾಯದ ಮನೆಗಳಿದ್ದವು.. ಅವರ ಕೇರಿಗಳನ್ನ ಹೊರತುಪಡಿಸಿ ಹಿಂದೂ ಜನರ ಮನೆಗಳ ನಡುವೆಯೂ ಹಂಚಿಹೋಗಿದ್ದವು.. ನಮ್ಮೂರಲ್ಲಿ ಅಶ್ಫಾಖ್ ಎಂಬ ಹುಡುಗನಿದ್ದ. ಆಗ ಈ ಕೋಮು ಸಂಘನೆಗಳಿಗಿಂತ ಯುವಕಮಂಡಲಗಳು ಹೆಚ್ಚು ಕ್ರೀಯಾಶೀಲವಾಗಿದ್ದ ಕಾಲ.. ಈ ಅಶ್ಫಾಕ್ ಅದ್ಬುತ ಹಾಡುಗಾರನಾಗಿದ್ದ. ಎಲ್ಲಾ ಯುವಜನ ಮೇಳಗಳಲ್ಲೂ ಪ್ರಶಸ್ತಿ ಬಾಚಿ ತರುತ್ತಿದ್ದ ಇವನು ಊರಿನ ಹೆಮ್ಮೆಯ ಹುಡುಗ.. ಇವನ ಬಾಯಲ್ಲಿ ಭಜನೆಗಳನ್ನ, ಜನಪದ ಗೀತೆಗಳನ್ನ ಕೇಳುವುದೇ ಒಂದು ದೊಡ್ಡ ಸಂತೋಷವಾಗಿತ್ತು.. ಇನ್ನೊಬ್ಬ ಸಯ್ಯದ್ ಎಂಬ ಹುಡುಗ ಇದ್ದ (ಈಗಲೂ ಇವರು ಊರಲ್ಲೇ ವಾಸವಿದ್ದಾರೆ) ಅವನೋ ಒಳ್ಳೆಯ ಹಾಸ್ಯ ಕಲಾವಿದ.. ಇವನಿಲ್ಲದೇ ಊರಲ್ಲಿ ಯಾವ ನಾಟಕಗಳೂ ನಡೆಯುತ್ತಿರಲಿಲ್ಲ ಎಂಬಷ್ಟು ಇವನ ಹಾಸ್ಯ ಪಾತ್ರಗಳು ಜನರ ಮನದಲ್ಲಿ ಅಚ್ಚುಮೆಚ್ಚು.. ಊರಲ್ಲಿ ಒಬ್ಬ ಸುಣ್ಣ ಬಳಿವ ಅಜ್ಜ ಇದ್ದರು.ಅವರ ಹೆಸರು ಗೊತ್ತಿಲ್ಲ ನನಗೆ, ನಾವೆಲ್ಲಾ ಅವರನ್ನು ಸುಣ್ಣದ ಸಾಬ್ರು ಅಂತಾ ಕರೆತಿದ್ವಿ.ಊರಿನ ಯಾವುದೇ ಮನೆಗೆ ಸುಣ್ಣ ಬಳಿಯಬೇಕು ಅಂದರೂ ಅದು ಅವರು ಮಾತ್ರ.. ಜಾತಿ ಧರ್ಮದ ಆಚೆಗೂ ಎಲ್ಲರಿಗೂ ಬೇಕಾದ ಮನುಷ್ಯ ಆಗಿದ್ದವರು..
ನನ್ನ ತಂದೆಯವರ ಆಪ್ತ ಮಿತ್ರ ಶೇಖ್ ಅಂಕಲ್. ಅವರಿಬ್ಬರ ಸ್ನೇಹದಿಂದಾಗಿ ನಮ್ಮ ಎರಡೂ ಕುಟುಂಬಗಳು ಆಪ್ತವಾಗಿದ್ದವು.. ಅವರಿಗೆ ಇಬ್ಬರು ಹೆಣ್ಣು ಮಕ್ಕಳು..ಒಂದೇ ಶಾಲೆಯಲ್ಲಿ ಓದುತಿದ್ದರಿಂದ ಅವರು ಇನ್ನಷ್ಟು ಆಪ್ತರು ನಮಗೆ.ನಾನು ನನ್ನ ತಂಗಿ ಆಗಾಗ ಅವರ ಮನೆಗೆ ಹೋಗಿ ಡ್ಯಾನ್ಸ್ ಕಲಿಯುವುದು, ಮದರಂಗಿ ಹಾಕಿಕೊಳ್ಳೋದು, ಜೊತೆಗೆ ಆಟವಾಡೋದು ಹೀಗೇ ನಡೆಯುತಿತ್ತು.. ಹಬ್ಬದ ದಿನಗಳಲ್ಲಿ ನಮ್ಮ ಎರಡೂ ಕುಟುಂಬಗಳ ನಡುವೆ ವಿಶೇಷ ತಿಂಡಿಗಳ ವಿನಿಮಯವೂ ಆಗುತ್ತಿತ್ತು.. 
ಊರಲ್ಲಿ ನಡೆಯುತ್ತಿದ್ದ ಉರುಸ್ ಹಬ್ಬ ನಮಗೆ ಬಹಳ ವಿಶೇಷವಾದದ್ದು.. ಮಸ್ಜೀದ್ ಗಳಲ್ಲಿ ನಡೆಯುತ್ತಿದ್ದ ಈ ಹಬ್ಬಕ್ಕೆ ಹಿಂದುಗಳೂ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಸಕ್ಕರೆ, ಧೂಪ, ಉಪ್ಪು, ಕಟ್ಟಿಗೆ ತುಂಡುಗಳನ್ನು ಹಿಡಿದು ಪ್ರತಿ ಮನೆಯಿಂದಲೂ ಒಬ್ಬೊಬ್ಬರು ತಪ್ಪದೇ ಮಸ್ಜೀದ್ ಗೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದರು, ಅಲ್ಲಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಹರಕೆಗಳನ್ನ ಹೊತ್ತುಕೊಳ್ಳುತ್ತಿದ್ದರು.. ಬಹುಶಃ ಈ ಆಚರಣೆ ಇಗಲೂ ಮುಂದುವರೆದುಕೊಂಡು ಬಂದಿರಬಹುದು.. ನಮ್ಮಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶ ಹಬ್ಬಗಳು, ಹೋಳಿ, ಊರ ಜಾತ್ರೆಗಳಲ್ಲೆಲ್ಲಾ ಇತರ ಧರ್ಮದ ಜನರೂ ಜೊತೆಯಾಗುತ್ತಿದ್ದದು ಸಹಜವಾಗಿತ್ತು...

ನನಗೆ ಇವತ್ತಿಗೂ ನೆನಪಿರುವ ಒಂದು ಸಂಗತಿಯನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಆಗ ನಾನು ಸುಮಾರು ಆರನೇ ತರಗತಿ ಓದುತ್ತಿದ್ದ ಸಮಯ ಅನ್ನಿಸತ್ತೆ..ವಾರದಲ್ಲಿ ಒಂದು ದಿನ ಬೆಳಿಗ್ಗೆ ಐದು ಒರೆಗೆ ನಮ್ಮನ್ನು ಎಬ್ಬಿಸಿ  RSS ಶಾಖೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು.. ನಿಧಾನ ಒಬ್ಬೊಬ್ಬರೇ ಊರಿನ ಕನ್ನಡ ಶಾಲೆಯೆದುರು ಜಮಾಗೊಳ್ಳುತ್ತಿದ್ದರು.. ಅದರ ಪಕ್ಕದಲ್ಲೇ ಒಂದು ಮಸ್ಜಿದ್ ಇದ್ದು ಅಲ್ಲಿ ಬೆಳಗಿನ ಪ್ರಾರ್ಥನೆಗೆ ಕೆಲವರು ಬಂದಿರುತ್ತಿದ್ದರು.. ಹಾಗೆ ಬಂದವರಲ್ಲಿ ಒಂದಿಬ್ಬರಾದರೂ ನಮ್ಮ ತಂಡದಲ್ಲಿದ್ದ ಹಿರಿಯರ ಮಿತ್ರರಾಗಿಯೇ ಇರುತ್ತಿದ್ದರು.. ಹೀಗೇ ಅವರು ಪ್ರಾರ್ಥನೆ ಮುಗಿಸಿ ಹೋಗೋವಾಗ ಇವರನ್ನು ಕಂಡು ಒಂದೈದು ನಿಮಿಷ ನಿಂತು ಮಾತಾಡಿ ಹೋಗುತ್ತಿದ್ದರು..ಇವರೂ ಅಷ್ಟೇ ಆಪ್ತವಾಗಿ ಮಾತಾಡುತ್ತಾ ನಿಂತಿರುತ್ತಿದ್ದರು..

 ಹೀಗೇ ಬರಿತಾ ಹೋದರೆ ತುಂಬಾ ಆಪ್ತ ಸಂಗತಿಗಳು ಇವೆಯಾದರೂ ತೀರಾ ಇತ್ತೀಚೆಗೆ ನನ್ನನ್ನು ಭಾವುಕನನ್ನಾಗಿಸಿದ ಒಂದು ಸಂಗತಿಯ ಬಗ್ಗೆ ಬರೆದು ಮುಗಿಸುತ್ತೇನೆ..  ಕಳೆದ ಏಳೆಂಟು ತಿಂಗಳ ಹಿಂದೆ ಮಂಗಳೂರಿನಲ್ಲಿ ಒಂದು ಕಾರ್ಯಕ್ರಮದಲ್ಲಿ ಗೆಳೆಯರಾದ ಮುಸ್ತಫಾ ಮುತ್ತು ವಿಲ್ಸನ್ ಕಟೀರ್ ಅವರ ಜೊತೆ ಹೋಗಿದ್ದೆ..ಕಾರ್ಯಕ್ರಮ ಮುಗಿಸಿ ಸಿಟಿ ಬಸ್ ಹತ್ತಿ ಬಸ್ ಸ್ಟಾಂಡ್ ಗೆ ಹೊರಟಿದ್ದೆವು.. ಬೆಳಿಗ್ಗೆಯಿಂದ ಪ್ರಸ್ತುತ ಸನ್ನಿವೇಶಗಳ ಕುರಿತು ಆಗಾಗ ಮಾತಾಡ್ತಾ ಮಾತಾಡ್ತಾ ನಾನು ತುಂಬಾ ಮೆತ್ತಗಾಗಿದ್ದೆ.. ಒಮ್ಮೆಗೆ ನಮ್ಮ್  ಬಸ್ ಮುಂದಕ್ಕೆ ಹೋಗದೇ ನಡುರಸ್ತೆಯಲ್ಲೇ ನಿಂತು ಬಿಟ್ಟಿತು, ಏನು ಅಂತ ನೋಡಿದರೆ ಯಾವುದೋ ಮೆರವಣಿಗೆ.. ಹಾರಾಡುತ್ತಿದ್ದ ಬಾವುಟಗಳು, ದ್ವನಿವರ್ಧಕದಲ್ಲಿ ಹಾಡುಗಳು, ಜೈಕಾರಗಳು ಭೀಕರವಾಗಿತ್ತು.. ನನ್ನ ಅಕ್ಕ ಪಕ್ಕ ಕೂತಿದ್ದ ಇವರ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕೆನಿಸಿತು ನನಗೆ.. ಮಾತುಗಳೆಲ್ಲಾ ಅಡಗಿಸಿ ಸುಮ್ಮನೆ ಕುಳಿತೆ.. ಬಸ್ ನಿಧಾನಕ್ಕೆ ಮುಂದೆ ಮುಂದೆ ಸರಿಯುತ್ತಿತ್ತು ನನ್ನೆದೆಯೊಳಗೆ ತೀವ್ರವಾಗಿ ನೋವಿನ ಅನುಭವವಾಗುತಿತ್ತು.. ಯಾರೋ ಹಿಂದಿನಿಂದ ನಮ್ಮನ್ನು ದೂರ ಮಾಡಲು ಹೊಂಚುಹಾಕಿ ಬರುತ್ತಿರುವಂತೆ, ನಮ್ಮ ಕೈಗಳನ್ನು ಬಲವಂತಾಗಿ ಬಿಡಿಸಲು ಪ್ರಯತ್ನಿಸುತ್ತಿರುವಂತೆ, ನಿಂತ ನೆಲವನ್ನೇ ಸೀಳಿ ಗಡಿಗಳನ್ನಾಗಿಸಿ ನಡುವೆ ಗೋಡೆಗಳನ್ನ ಕಟ್ಟಿ ನಮ್ಮನ್ನು ಪರಸ್ಪರ ನೋಡದಂತೆ ಸಂಧಿಸದಂತೆ ಮಾಡುತ್ತಿದ್ದಾರೇನೋ ಎಂಬಂತೆ ಎದೆ ಜೋರಾಗಿ ಹೊಡೆದುಕೊಳ್ಳುತ್ತಿತ್ತು.... ಬಹಶಃ ಅವರಿಬ್ಬರಿಗೂ ಹೀಗೇ ಆಗಿತ್ತಾ?? ಬಸ್ ಸ್ಟಾಂಡ್ ಬಂದಿತು, ಅವರನ್ನು ಒಮ್ಮೆ ತಬ್ಬಿ ಬೀಳ್ಕೊಟ್ಟೆ...ಜಾಗೃತೆ ಎಂದು ಹೇಳುವುದನ್ನ ನಾನೂ ಮರೆಯಲಿಲ್ಲ ಅವರೂ ಕೂಡ....

-ಸಚಿನ್ ಅಂಕೋಲಾ...

#ಸೌಹಾರ್ದ_ಬದುಕು
#ಸಹಬಾಳ್ವೆ_ಕಥನ
Sudha Adukal
ಸಾಕಿಯ ಮಧುಶಾಲೆ

೨೫.

#ಸಹಬಾಳ್ವೆಯ ಕಥನ... 
ಸಾಕಿಯ ಮಧುಶಾಲೆಯ ಅಂಗಳಕೆ 

**ಸಾಹೆಬ್ಬಿಯ ಮೋಟು ಬಡಿಗೆಯೇ ಕೆಮ್ಮಾಯಣಕ್ಕೆ ರಾಮಬಾಣ **

ನನಗೆ ಆಗ 7-8 ವರ್ಷ, ನನ್ನ ನೆನಪಿಟ್ಟ ವರ್ಷಗಳಿವು ಆದರೆ ಇಂದಕ್ಕಿಂತಲೂ ಹಿಂದಿನ ವರ್ಷಗಳಿಂದಲೂ ಈ ಕೆಮ್ಮಾಯಣ   ಪುರಾಣ ಇದ್ದಿದ್ದೇ ಇತ್ತು. ಹಾ ನನ್ನ ಅವ್ವ ಹೇಳುವ ಹಾಗೆ ನನಗೆ ತಂಪು ವಾತಾವರಣ, ತಣ್ಣೀರು ಸ್ನಾನ, ಐಸ್ ಕ್ರೀಮ್ ಗಳ ಸಹವಾಸ ಅಪಥ್ಯ. ವರ್ಷದಲ್ಲಿ 2 ಬಾರಿಯಂತೂ ನಮ್ಮ ಮನೆಯಲ್ಲಿ ಕೆಮ್ಮಾಯಣದ ಪುರಾಣ ಕಾರ್ಯ ಇರುತ್ತಿತ್ತು. ನನ್ನದೇ ಉಸ್ತುವಾರಿಯಲ್ಲಿ.ಮೊದ ಮೊದಲು ಮೂಗಿನ ಹೊಳ್ಳೆಗಳಿಂದ ಜಲರೂಪಿ ಶ್ಲೇಷ್ಮ ಹರಿದು, 2-3 ದಿನಗಳಲ್ಲಿ ಹಳದಿ ಬಣ್ಣಕ್ಕೆ ತಿರುಗಿ ಹೊರಬಂದು, ಮತ್ತೆರಡು ದಿನಗಳಲ್ಲಿ  ಹೊರಗೆ  ಬರಲು ಅಂಜಿ ಒಳಗೆ ಆಶ್ರಯ ಪಡೆದು ಬಿಡುತ್ತಿತ್ತು.  ಆದರೆ ಕೆಮ್ಮಿಗೆ ವೇದಿಕೆಯನ್ನು ಅನುವು ಮಾಡಿಕೊಡುತ್ತಿತ್ತು.  ಒಮ್ಮೆ ಕೆಮ್ಮು ಹಿಡಿದರೆ ಅಷ್ಟೋತ್ತರ ಶತನಾಮ ವ್ರತದಂತೆ ನಿರಂತರವಾಗಿ ಕೆಮ್ಮೇ ಕೆಮ್ಮು.  ಹೊಟ್ಟೆ ನೋವಾಗಿ, ಎದೆ ಉರಿಬಿದ್ದು, ಗಂಟಲಿನಿ ರಕ್ತದ ಹನಿಗಳೆರಡೂ ಉದುರುವಂತಹ ಕೆಮ್ಮದು.  ಕಣ್ಣು ತೇವವಾಗಿ ಹನಿದರೂ ನಿಲ್ಲದು ಮಾರಿ.  ಡಾಕ್ಟರ್ ಹತ್ರ ಹೋಗುವುದು ಸೂಜಿ ಚುಚ್ಚಿಸುವುದು ಅವ್ವನಿಗೆ ರೂಡಿಯಾಗಿದ್ದರೂ ಈ ಹಠಮಾರಿ ಕೆಮ್ಮು ಜಗ್ಗುತ್ತಲೇ ಇರಲಿಲ್ಲ.  ಕೆಲವೊಮ್ಮೆ ಬೆಳೆಗ್ಗೆ ಡಾಕ್ಟರ್ ಹತ್ರ ಚುಚ್ಚಿಸಿಕೊಂಡು ಬಂದು ಮಾತ್ರೆ ಹಾಕಿದ್ರು ಸಂಜೆಗೆ ಮತ್ತೆ 2 ನೆ ಸೆಷನ್ ಆರಂಭ. ಆಗ ಮತ್ತೆ ಲಕ್ಷ್ಮಿ ಪೇಡ್ನೆಕರ್ ಸಿಸ್ಟರ್ ಮನೆಗೆ ಓಡುವುದು ಅನಿವಾರ್ಯವಾಗಿತ್ತು. ಈ ಸಿಸ್ಟರೋ ನಮ್ಮ ಫ್ಯಾಮಿಲಿ ಡಾಕ್ಟರ್ ಆಗಿದ್ದ ಕಾಲ ಅದು. ಏಕೆಂದರೆ ಅವರ ಪ್ರೀತಿಯ ಮಾತು, ಹಣ ತೆಗೆದುಕೊಳ್ಳದ ಅವರ ಔದಾರ್ಯಕ್ಕೆ ಅವರೇ ಸಾಟಿ. ಬರುಬರುತ್ತ ಈ ಕೆಮ್ಮಾಯಣದ ಭಾಗವಾಗಿ ಉಸಿರಾಟ ತೊಂದರೆ ಮೊದಲಿಟ್ಟಿತು. ಆಗ ಮನೆಯಲ್ಲೆಲ್ಲರೂ ಬಹು ಗಾಬರಿಯಾದರು.  ಆಗ ಅಚಾನಕ್ ಆಗಿ ಸಿಕ್ಕವರೇ "ಸಾಹೇಬಕ್ಕ ".  ಅವರ ನಿಜವಾದ ಹೆಸರೇನು ಎಂಬುದು ನನಗೆ ತಿಳಿಯದು.  ನನ್ನವ್ವ ಸಾಹೆಬ್ಬಿ ಅಂದರೆ ನಾವು 'ಸಾಹೆಬ್ಬಕ್ಕರಾ ' ಅಂತೀವಿ.  ಹೀಗೆ ದಾರಿಯಲ್ಲಿ ಹೋಗುತ್ತಿದ್ದ ಸಾಹೆಬ್ಬಿ ನಾನು ಕೆಮ್ಮುತ್ತಿದ್ದು ಕಂಡು ನನ್ನವ್ವನನ್ನು ಕುರಿತು ' ಪಕ್ಕೀರಕ್ಕಾ ಹುಡುಗ ಏನ್ ಹಿಂಗ್ ಕೆಮ್ಮುತಾನ್, ದಾವಾಖಾನಿ ತೋರಿಸಿಲ್ಲೇನು ' ಅಂತ ಕೇಳಿದ್ರು.  ಉತ್ತರವಾಗಿ ನನ್ನವ್ವ ' ಯೆವ್ವ ಎನ್ ಮಾಡೋದು ಗಂಟು ಬಿದ್ದು ಬಿಟ್ಟೇತಿ ಮಾರಿ: ಎಲ್ಲಾ ದಾವಾಖಾನಿ ಮುಗುದ್ವು, ಔಸುದ ಆದ್ವು, ಹುಡುಗ ಉಸುರಾಡುದು ಕಷ್ಟ ಆಗೇತಿವ, ಬೆಳ್ಳ-ಬೆಳತನ ಬಾಯಿ ಮುಚ್ಚಿಲ್ಲ ಹುಡುಗ ' ಅಂತು.  ಸಾಹೇಬಕ್ಕ "ಎಕ್ಕಾ ನಾಳೆ ಮುಂಜಾನಿ ಹಾಳು ಮುಖದಾಗ ( ಮುಖ ತೊಳೆಯದಲೇ ) ನನ್ನ ಮನಿಗೆ ಕರ್ಕೊಂಡು ಬಾ ನಾನು ಔಸುದಾ ಮಾಡ್ತೇನೆ" ಅಂದ್ರು. ಅದರಂತೆ  ಮರುದಿನ ನನ್ನವ್ವ  ನನ್ನ ಕರ್ಕೊಂಡು ಬೂಬಮ್ಮನ ಮನೆಗೆ  ಹೋದ್ರು.  ಸಾಹೇಬಕ್ಕ ತುಳಸಿ ಸೊಪ್ಪು ಮತ್ತೇನನ್ನೋ ಹಾಕಿ ಕುಟ್ಟಿ ರಸ ತೆಗೆದು, ಆ ರಸಕ್ಕೆ ಕೆಂಪಾಗಿ  ಕಾದ ಕಬ್ಬಿಣ ಸಲಾಖೆ ಅದ್ದಿದ್ರು.  ದೋಸೆ ಹಂಚಿನ ಮೇಲೆ ನೀರು ಬಿದ್ದಾಗ ಚೋಯ್ಗುಟ್ಟುವ ರೀತಿ ಶಬ್ದವಾಯಿತು. ಅದರ ಘಾಟು ವಾಸನೆ ಮತ್ತು ಬಿಸಿ ಹೊಗೆ ನನಗೆ ಪಥ್ಯವಾಗದೆ ನಾನು ಒಲ್ಲೆ ಎಂದೆ.  ಸಾಹೇಬಕ್ಕ ತೊಡೆ ಮೇಲೆ ಮಲಗಿಸಿಕೊಂಡು ಮೂಗು ಹಿಡಿದು ಹಾಕಿಯೇ ಬಿಟ್ಟರು.  ಆ ಕಹಿಯ, ಖಾರದ ಅನುಭವ ಇನ್ನು ನನ್ನ ನಾಲಿಗೆಯಲ್ಲಿದೆ. ನಾನು ಅಳೋಕೆ ಶುರು ಮಾಡಿದೆ.  ಸಾಹೇಬಕ್ಕ ' ಯಾಕೆ ಅಳ್ತೀಯೋ ಆರಾಮ್  ಆಗಬೇಕೋ ಬ್ಯಾಡೋ ' ಅಂದು ಒಂದು ಚಿಕ್ಕ ಬೆಲ್ಲದುಂಡೆ ಬಾಯಿಗೆ ಹಾಕಿದರು. ಹಾಗೆಯೇ ಒಂದು ಚಿಕ್ಕ ಬಡಿಗೆ ( ಬೀಸೋ ಕಲ್ಲಿನ ಗೂಟ )ಯ ತುದಿಗೆ ಒಂದು ಬೆಳ್ಳುಳ್ಳಿಯನ್ನು ಜಜ್ಜಿ ಅದನ್ನು ನನ್ನ ಬಾಯಿಯೊಳಗೆ ತೂರಿಸಿ ಕಿರುನಾಲಿಗೆಯನ್ನು ಒತ್ತಿ ಮೇಲಕ್ಕೆ ಎತ್ತಿದರು. ಅಮ್ಮಾ !! ದೇವರೇ ಆಗ ಆಗುವ ಹಿಂಸೆ ಅನುಭವಿಸಿದವ್ರಿಗೆ ಗೊತ್ತು.  ಹೀಗೆ 5 ದಿನ ಕೆಮ್ಮಾಯಣಕ್ಕೆ ಸಾಹೇಬಕ್ಕನ ಔಸುದದ ( ಔಷದ ) ಪಾರಾಯಣ ಆಯಿತು. ಪವಾಡ ಎಂಬಂತೆ ನನ್ನ ಕೆಮ್ಮಾಯಣದ ಅಧ್ಯಾಯಗಳು ಮುಗಿಯುವ ಲಕ್ಷಣಗಳು ಗೋಚರಿಸ ತೊಡಗಿದವು. ಆದರೆ ಇಂದಿನ ರಾತ್ರಿ ಧಾರಾವಾಹಿಗಳ ಹಗಲಿನ  ಮರು ಪ್ರಸಾರದ  ಹಾಗೆ ಮತ್ತೆ ಮತ್ತೆ ಕೆಮ್ಮಾಯಣದ ಎಪಿಸೋಡ್ ಗಳು ಆರಂಭವಾಗುತ್ತಿದ್ದವು ಆದರೆ ಈಗ ಮೊದಲಿದ್ದ ಭಯ, ಆತಂಕಗಳು ದೂರವಾಗಿದ್ದವು. ಸಾಹೇಬಕ್ಕ ನನ್ನ ಪಾಲಿಗೆ ಧನ್ವಂತರಿಯೇ ಆಗಿದ್ದರು. 

ಮುಂದಿನ ದಿನಗಳಲ್ಲಿ ಕೆಮ್ಮಿದರೆ ಸಾಕು ನಾನೇ ಸ್ವತಃ ಸಾಹೇಬಕ್ಕನ ಮನೆಗೆ ಹೋಗಿ ಬಡಿಗೆ ಸೇವೆ, ಔಷದೋಪಚಾರ ಮಾಡಿಸಿಕೊಂಡು ಬರುವಷ್ಟರ ಮಟ್ಟಿಗೆ ರೂಢಿಯಾಗಿ ಹೋಯಿತು. ಈ ಕಾರ್ಯಕ್ಕೆ ಸಾಹೇಬಕ್ಕ ಯಾವುದೇ ಹಣದ ಅಪೇಕ್ಷೆ ಪಡಲೇ ಇಲ್ಲ.  
ಈಗಲೂ ನಮ್ಮ ಮನೆಯಲ್ಲಿ ಮಕ್ಕಳು ಕೆಮ್ಮಿದರೆ  ಸಾಕು ನನ್ನವ್ವ ಸೂಚಿಸುವುದು  ಸಾಹೇಬಕ್ಕನ ಹೆಸರನ್ನೇ... 

ಸಾಹೇಬಕ್ಕ ಸಾಹೇಬಕ್ಕನಾಗಿಯೇ ಕೆಮ್ಮಿನ ಧನ್ವಂತರಿಯಾಗಿದ್ದಾಳೆ. ನಾವು ಕೆಮ್ಮಿದಾಗೊಮ್ಮೆ ಅವಳನ್ನು ನೆನೆಸಿಕೊಳ್ಳುವ ಈ ಪರಿಗೆ ಯಾವುದೇ ಬಣ್ಣಗಳ, ಭಾವಗಳ ಬಂಧನವಿಲ್ಲ. 

****ನನ್ನ ಬರೆವಣಿಗೆಯ ತಪ್ಪು-ಒಪ್ಪುಗಳನ್ನು ತಿದ್ದಲು, ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನಿಮಗೆ ಸದಾ ಸ್ವಾಗತವಿದೆ. ***
ಸುಧಾ ಮೇಡಂ ಧನ್ಯವಾದಗಳು ನಿಮಗೆ
ಎಮ್.ಎಸ್ ನಾರಾಯಣ

೨೬

Sudha Adukal
ಸಾಕಿಯ ಮಧುಶಾಲೆ

#ಸಹಬಾಳ್ವೆಯ_ಬದುಕು
#ಸೌಹಾರ್ದ_ಕಥನ

#ಮಾಮ್ಮಾಲಿ_ಬ್ಯಾರಿ

ಕೋಟಿ ಚೆನ್ನಯರು ಮರಣ ಹೊಂದಿದ ಮೇಲೆ ಎಣ್ಮೂರು ಸೂತಕದಲ್ಲಿ ಇತ್ತು. ದೇವು ಬಲ್ಲಾಳನ ಪಟ್ಟವನ್ನು ರಕ್ಷಿಸಲು ಅವಳಿ ವೀರರು ತಮ್ಮ ಪ್ರಾಣವನ್ನು ಅರ್ಪಿಸಿದ್ದರು. ಇವರ ನಂತರ ಎಣ್ಮೂರಿನ ದೇವು ಬಲ್ಲಾಳನ ಪಟ್ಟವನ್ನು ಕಾಪಾಡುವ ವೀರರು ಯಾರು? ಆಗ ಅವರಿಗೆ ಬೆಂಗಾವಲಾಗಿ ನಿಂತ ವೀರ "ಮಾಮ್ಮಾಲಿ" ಬ್ಯಾರಿ!

ಕುರಿಯ ಗುತ್ತು ಪುತ್ತೂರಿನ ಹೆಗ್ಗಡೆಯ ಬೀಡಿಗೆ ಸೇರಿದ ಖ್ಯಾತ ಗುತ್ತು. ಇಲ್ಲಿನ ಗುತ್ತಿನಾರ್ ಮರಣಹೊಂದಿದ ಮೇಲೆ ಗುತ್ತಿನ ಹೆಂಗಸು ಗುತ್ತಿನ ಜವಾಬ್ದಾರಿ ಹೊರುತ್ತಾಳೆ. ಗುತ್ತಿನ ಪರಿಸರದಲ್ಲಿ ಇದ್ದ ಮುಸ್ಲಿಂ ಕುಟುಂಬದ ಯುವಕ ಗುತ್ತಿನ ದಂಡಿನ ಮುಖಂಡ. ಅನಾಥನಾಗಿದ್ದ ಅವನು ತನ್ನ ಮಡದಿಯ ಜೊತೆಗೆ ವಾಸ ಮಾಡುತ್ತಿದ್ದ. 

ಹೀಗಿರಲು ಗುತ್ತಿಗೆ ವಿಜಯನಗರದ ತಾಳಿಕೋಟೆಯ ಕದನಕ್ಕೆ ಸೈನಿಕರು ಮತ್ತು ನಿಧಿಯನ್ನು ನೀಡುವಂತೆ ಪುತ್ತೂರಿನ ಹೆಗ್ಗಡೆಗೆ ಬರುತ್ತದೆ. ಅವನು ತನ್ನ ಕೈಕೆಳಗೆ ಬರುವ ನಾಲ್ಕು ಗುತ್ತುಗಳನ್ನು ಕರೆದು ಸಭೆ ನಡೆಸುತ್ತಾನೆ. ಯುದ್ಧಕ್ಕೆ ಪಡೆಯನ್ನು ಕಳುಹಿಸಲು ಅದಕ್ಕೆ ಮುಖಂಡನಾಗಿ ಕುರಿಯ ಗುತ್ತಿನ ಬ್ಯಾರಿ ಮುಖಂಡನನ್ನು ನೇಮಿಸಿದಾಗ ಗುತ್ತಿನ ಹೆಂಗಸು ವಿರೋಧ ಮಾಡುತ್ತಾಳೆ. ಅವಳಿಗೆ ತುಂಬು ಗರ್ಭಿಣಿ ಮಡದಿಯನ್ನು ಹೊಂದಿರುವ ಬ್ಯಾರಿಯನ್ನು ಯುದ್ದಕ್ಕೆ ಕಳುಹಿಸುವುದು ಇಷ್ಟವಿರಲಿಲ್ಲ. ಆದರೆ ಬ್ಯಾರಿ ತನ್ನ ಪಡೆಯೊಂದಿಗೆ ವಿಜಯನಗರದ ಯುದ್ದಕ್ಕೆ ಹೋಗುತ್ತಾನೆ. ಯುದ್ಧದಲ್ಲಿ ಮರಣ ಹೊಂದುತ್ತಾನೆ. 

ಇತ್ತ ಗಂಡನನ್ನು ಕಳೆದುಕೊಂಡ ಬ್ಯಾರ್ದಿ ಒಂದು ಗಂಡು ಮಗುವಿಗೆ ಜನ್ಮ ನೀಡಿ ಮರಣ ಹೊಂದುತ್ತಾಳೆ. ಈ ಮಗುವನ್ನು ಗುತ್ತಿನ ಮನೆಯ ಒಡತಿಯೇ "ಮಮ್ಮಾಲಿ/ಮಮ್ಮದೆ" ಎಂಬ ಹೆಸರು ಇಟ್ಟು ಸಾಕುತ್ತಾಳೆ. ಅವ ಮುಸಲ್ಮಾನನಾದರೂ ಅವನಿಗೆ ನಮಾಜು ಮಾಡಲು ಗುತ್ತಿನಲ್ಲಿ ಅಡ್ಡಿ ಇರಲಿಲ್ಲ. ಒಂದು ದೀಪ ಉರಿಸಿ ನಿತ್ಯ ನಮಾಜು ಮಾಡುತ್ತಿದ್ದ.

ಒಂದು ದಿನ ದನ ಮೇಯಿಸಲು ಹೋಗಿದ್ದ ಮಾಮ್ಮಲಿ ಮರದ ಕೆಳಗೆ ಮಲಗಿದ್ದ. ಅವನ ಮುಖಕ್ಕೆ ಬಿಸಿಲು ಬಡಿಯುತ್ತಿತ್ತು. ಆಗ ಒಂದು ಸರ್ಪ ಹೆಡೆ ಎತ್ತಿ ಅವನ ಮುಖಕ್ಕೆ ಬಿಸಿಲು ಬೀಳದಂತೆ ನಿಂತಿತ್ತಂತೆ. ಅದನ್ನು ನೋಡಿ ಇತರ ಹುಡುಗರು ಭಯದಲ್ಲಿ ಓಡಿ ಹೋಗಿದ್ದರು. ಆದರೆ ಮಮ್ಮಾಲಿ ಮಾತ್ರ ಏನೂ ಅಗದವನಂತೆ ಇದ್ದ.

ಇವನು ಗುತ್ತಿನಲ್ಲಿ ಬೆಳೆದಂತೆ ಅವನ ಕಾರಣಿಕ ಕೂಡಾ ದಿನೇ ದಿನೇ ಬೆಳೆಯಿತು. ಕುರಿಯ ಗುತ್ತಿನ ಸಂಪತ್ತು ಸಮೃದ್ಧವಾಗಿ ಬೆಳೆಯಿತು.

ಒಂದು ದಿನ ಕುರಿಯ ಗುತ್ತಿನ ಕಪಿಲೆ ದನವನ್ನು ಹುಲಿ ಹಿಡಿಯಿತು. ದನವನ್ನು ಕಳೆದುಕೊಂಡ ಗುತ್ತಿನ ಒಡತಿ ಅಳುತ್ತಿದ್ದಳು. ಅಂದು ರಾತ್ರಿ ಮಮ್ಮಾಲಿ ದನವನ್ನು ಕೊಂದ ಜಾಗಕ್ಕೆ ಕರಿ ಕಂಬಳಿ ಹೊದ್ದು ಹೋಗಿ ಹುಲಿಗಾಗಿ ಕಾದನು, ಹುಲಿ ಬಂದಂತೆ ಅದನ್ನು ಹೊಡೆದು ಸಾಯಿಸಿದ. ಸತ್ತ ಹುಲಿಯನ್ನು ಹಗ್ಗದಲ್ಲಿ ಕಟ್ಟಿ ತನ್ನ ಸೊಂಟಕ್ಕೆ ಬಿಗಿದು ಎಳೆದುಕೊಂಡು ಕುರಿಯ ಗುತ್ತಿನ ಅಂಗಳಕ್ಕೆ ತಂದು ಹಾಕಿದ. 

ಇಂತಹ ವೀರನನ್ನು ಗರಡಿಗೆ ಸೇರಿಸಿ ವೀರನನ್ನಾಗಿ ಮಾಡಲು ಗುತ್ತಿನ ಒಡತಿ ತೀರ್ಮಾನಿಸುತ್ತಾಳೆ. ಆದರೆ ಪುತ್ತೂರಿನಲ್ಲಿ ಗರಡಿ ಇರಲಿಲ್ಲ. ಅವನ್ನನ್ನು ವಿಟ್ಲದ ಅರಸನ ಗರಡಿಗೆ ಸೇರಿಸುತ್ತಾಳೆ.

ವಿಟ್ಲದ ಅರಸರಿಗೆ ಗರಡಿಯ ಗುರುವಾಗಿ ಇದ್ದವರು ದೇರಣ್ಣ ಗೌಡ ಎಂಬವನು. ಇವನ ಅಡಿಯಲ್ಲಿ ಮಮ್ಮಾಲಿ ಅಂಗ ಸಾಧನೆಯನ್ನು ಕಲಿಯುತ್ತಿರುತ್ತಾನೆ.

 ಒಮ್ಮೆ ರಾಜ ಕುಟುಂಬಕ್ಕೆ ಸೇರಿದ ಯುವಕ ದೇರಣ್ಣ ಗೌಡರ ಪ್ರೇಯಸಿಯ ಮಾನ ಭಂಗ ಮಾಡುತ್ತಾನೆ. ಆಗ ದೇರಣ್ಣ ಗೌಡ ಇದನ್ನು ಪ್ರಶ್ನಿಸಿ ರಾಜ ವಿರೋಧಕ್ಕೆ ಒಳಾಗಾಗ ಬೇಕಾದೀತು ಎಂದು ಸಾಧುವಾದ ಎಣ್ಮೂರು ದೇವು ಬಲ್ಲಾಳನ ಬೀಡಿಗೆ ತನ್ನ ಪ್ರೇಯಸಿಯೊಂದಿಗೆ ಬರುತ್ತಾನೆ. ಬಲ್ಲಾಳ ಅವನಿಗೆ ಅಕ್ರಿಕೆ (ತುರಿಕೆ ಉಂಟು ಮಾಡುವ ಸಸ್ಯ) ಹೆಚ್ಚಿದ್ದ ಅಕ್ರಿಕಟ್ಟೆ ಎಂಬ ಭೂಮಿಯನ್ನು ನೀಡಿ ಆಶ್ರಯ ನೀಡುತ್ತಾರೆ. ಹಾಗೆ ಬಲ್ಲಾಳರು ಗೌಡನ ಮೂಲಕ ಪಡ್ಪು ಎಂಬಲ್ಲಿ ಗರಡಿ ಶಾಲೆ ತೆರೆಯುತ್ತಾರೆ. 

ಹೇಳದೆ ಕೇಳದೆ ವಿಟ್ಲ ಬಿಟ್ಟ ಗುರುವನ್ನು ಹುಡುಕಿಕೊಂಡು ಮಮ್ಮಾಲಿ ಪಡ್ಪುವಿನಲ್ಲಿ ಇದ್ದ ಗರಡಿಗೆ ಬರುತ್ತಾನೆ. ಮತ್ತೆ ತನ್ನ ಗುರು ದೇರಣ್ಣ ಗೌಡನನ್ನು ಕೂಡಿಕೊಳ್ಳುತಾನೆ. ಇದು ಆಗಿದ್ದು ಕೋಟಿ ಚೆನ್ನಯರು ಮರಣ ಹೊಂದಿ ಎರಡು ವರ್ಷಗಳು ತುಂಬುತ್ತಿದ್ದ ಹಾಗೆ. ಕೋಟಿ ಚೆನ್ನಯರು ಮತ್ತು ಮಂಜು ಪೆರ್ಗಡೆ ತೀರಿದ ಮೇಲೆ ಎಣ್ಮೂರು ಬೀಡಿಗೆ ರಕ್ಷಣೆಗಾಗಿ ಯಾರೂ ಇರಲಿಲ್ಲ. ದೇರಣ್ಣನ ಶಿಷ್ಯ ಮಮ್ಮಾಲಿಯನ್ನು ದೇವು ಬಲ್ಲಾಳ ಮೆಚ್ಚಿ ಹತ್ತಿರ ಮಾಡಿಕೊಂಡ. ಅವನ ರಕ್ಷಣೆಯಲ್ಲಿ ಬಲ್ಲಾಳ ಎಣ್ಮೂರು ಪಟ್ಟವನ್ನು ಅಳುತ್ತಿದ್ದ. 

ವೃದ್ದನಾಗಿದ್ದ ದೇವು ಬಲ್ಲಾಳನ ಪಟ್ಟದ ಮೇಲೆ ಅವನ ಅಳಿಯ ರುಕ್ಮ ಬಲ್ಲಾಳನ ಕಣ್ಣು ಬಿತ್ತು. ಪಟ್ಟವನ್ನು ಹಸ್ತಾಂತರ ಮಾಡುವಂತೆ ಇವನು ಬಲ್ಲಾಳನಿಗೆ ಹೇಳಿದ್ದ. ಇದನ್ನು ಚಾವಡಿಯಲ್ಲಿ ಪ್ರಸ್ತಾಪ ಮಾಡಿದಾಗ ಪಟ್ಟವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ದೇವು ಬಲ್ಲಾಳ ಘೋಷಿಸುತ್ತಾನೆ. ಬಲ್ಲಾಳನಿಗೆ ಇಕ್ಕೇರಿಯ ಅರಸರು ಪಟ್ಟದ ಕತ್ತಿ ಮತ್ತು ಕಿರೀಟವನ್ನು ಕೊಟ್ಟಿದ್ದರಂತೆ. ಅದನ್ನು ತನ್ನ ವಶ ಮಾಡಿಕೊಂಡರೆ ಕಿರೀಟ ಮತ್ತು ಮತ್ತು ಪಟ್ಟದ ಕತ್ತಿ ಇಲ್ಲದ ಬಲ್ಲಾಳ ಅಧಿಕಾರ ಬಿಡಬೇಕಾಗುತ್ತದೆ ಎಂದು ರುಕ್ಮ ಬಲ್ಲಾಳ ಕುತಂತ್ರಗಳನ್ನು ಹೂಡುತ್ತಾನೆ. ಅದಕ್ಕಾಗಿ ಕಡಬದ ಬಲ್ಲಾಳನ ಸಹಾಯ ಕೋರುತ್ತಾನೆ. ಆದರೆ ಇದು ಮಮ್ಮಾಲಿ ಇರುವ ತನಕ ಸಾಧ್ಯ ಇಲ್ಲ ಎಂಬುದು ಅವನಿಗೆ ಗೊತ್ತಿತ್ತು.

ಮಮ್ಮಾಲಿ ನಮಾಜು ಮಾಡಲು ಎಣ್ಮೂರಿನಲ್ಲಿ ಪಳ್ಳಿ (ಮಸೀದಿ) ಇರಲಿಲ್ಲ. ಅವನು ಕಡಬದ ಪಲ್ಲಿಗೆ ಹೋಗಬೇಕಿತ್ತು. ಒಂದು ಶುಕ್ರವಾರ ಕಡಬದ ಪಳ್ಳಿಗೆ ಹೋಗುವಾಗ ಕಡಬದ ಪಲ್ಲಿಯಲ್ಲಿ ಇರುವ ಯುವಕರು ಅಂದು ಒಬ್ಬರೂ ಇರಲಿಲ್ಲ. ಮಮ್ಮಾಲಿಗೆ ಅನುಮಾನ ಬರುತ್ತದೆ. ನೇರ ಎಣ್ಮೂರಿನ ಕಡೆಗೆ ನಡೆಯುತ್ತಾನೆ.

ಇತ್ತ ಮಮ್ಮಾಲಿ ಇಲ್ಲದ ಸಮಯದಲ್ಲಿ ರುಕ್ಮ ಬಲ್ಲಾಳ ಕಡಬದ ಬಲ್ಲಾಳನ ಪಡೆಯೊಂದಿಗೆ ಎಣ್ಮೂರಿನ ಬೀಡಿನ ಮೇಲೆ ಧಾಳಿ ಇಟ್ಟು ಪಟ್ಟದ ಕತ್ತಿ ಮತ್ತು ಪೇಟವನ್ನು ವಶಮಾಡಿಕೊಳ್ಳುತ್ತಾನೆ. 

ಕಡಬದ ದಂಡು ಕಡಬದ ಕಡೆಗೆ ಮರಳುವಾಗ ಹಿಂತಿರುಗಿ ಬರುತ್ತಿರುವ ಮಮ್ಮಾಲಿ ಬ್ಯಾರಿ ಪಂಜದ ಕಮಿಲದಲ್ಲಿ ಎದುರಾಗುತ್ತಾನೆ. ಮಮ್ಮಾಲಿ ಮತ್ತು ಕಡಬದ ದಂಡಿನ ನಡುವೆ ಕಾದಾಟ ನಡೆಯುತ್ತದೆ. ಲಡಾಯಿಯಲ್ಲಿ ಮಮ್ಮಾಲಿ ಒಬ್ಬನೇ ಕಾದಾಡಿ ಎಣ್ಮೂರಿನ ಪಟ್ಟದ ಕತ್ತಿ ಮತ್ತು ಪೇಟವನ್ನು ಮರುವಶ ಮಾಡಿಕೊಳ್ಳುತ್ತಾನೆ. 

ಮಮ್ಮಾಲಿ ಎಣ್ಮೂರಿನ ಬೀಡಿಗೆ ಬಂದಾಗ ದೇವು ಬಲ್ಲಾಳ ಮತ್ತು ದೇರಣ್ಣ ಗೌಡ ದುಃಖದಲ್ಲಿ ಇರುತ್ತಾರೆ. ಬ್ಯಾರಿ ತಾನು ತಂದ ಪೇಟ ಮತ್ತು ಕತ್ತಿಯನ್ನು ಬಲ್ಲಾಳರಿಗೆ ಒಪ್ಪಿಸುತ್ತಾನೆ. ಆಗ ಬಲ್ಲಾಳರು ಒಮ್ಮೆ ಕಳೆದುಕೊಂಡ ಪಟ್ಟವನ್ನು ಮತ್ತೆ ಏರುವುದಿಲ್ಲ ಎಂದು ಹೇಳಿ ಮಮ್ಮಾಲಿಯನ್ನು ಪಟ್ಟ ಏರುವಂತೆ ಒತ್ತಾಯಿಸುತ್ತಾರೆ. ಬ್ಯಾರಿ ಎಷ್ಟೇ ತಿರಸ್ಕರಿಸಿದರು ಬಲ್ಲಾಳ ಒಪ್ಪುವುದಿಲ್ಲ. ಆಗ ಮಮ್ಮಾಲಿ ಪಟ್ಟದ ಕತ್ತಿ ಮತ್ತು ಪೇಟವನ್ನು ಪಟ್ಟದ ಮಣೆಯ (ಸಿಂಹಾಸನ) ಮೇಲೆ ಇಟ್ಟು ಬೀಡನ್ನು ಕಾಯುತ್ತಾನೆ. ಬಲ್ಲಾಳ ತನ್ನ ನಂತರ ಮಮ್ಮಾಲಿಗೆ ಪಟ್ಟ ಹೋಗಬೇಕು ಎಂದು ಅವನು ಪಟ್ಟವೇರಿ ಮಾಡಬೇಕಾದ ಜವಾಬ್ದಾರಿಗಳನ್ನು ಕುರಿತು ಶಾಸನ ಬರೆಸುತ್ತಾನೆ. ಕೆಲ ಕಾಲದ ನಂತರ ಬಲ್ಲಾಳ ಮರಣ ಹೊಂದುತ್ತಾನೆ.

ಇತ್ತ ರುಕ್ಮ ಬಲ್ಲಾಳ ಪಟ್ಟವನ್ನು ದಕ್ಕಿಸಿಕೊಳ್ಳಲು ಪ್ರಯತ್ನ ನಡೆಸುತ್ತಿರುತ್ತಾನೆ. ಅವನು ಕುಂಬ್ಳೆ ರಾವಂತರಸ ಮತ್ತು ವಿಟ್ಲದ ಹೆಗ್ಗಡೆಗೆ ದೂರು ನೀಡುತ್ತಾನೆ. ಇವರು ಮಮ್ಮಾಲಿಯನ್ನು ಕರೆದು ರುಕ್ಮ ಬಲ್ಲಾಳನಿಗೆ ಪಟ್ಟ ಬಿಟ್ಟು ಕೊಡುವಂತೆ ಆದೇಶ ನೀಡುತ್ತಾರೆ. ಪಟ್ಟ ಬಿಟ್ಟು ಕೊಟ್ಟರೆ ಸ್ವರ್ಗರ್ಥರಾದ ದೇವು ಬಲ್ಲಾಳರಿಗೆ ಅಪಚಾರ ಬಗೆದ ಹಾಗೆ ಎಂದು ಮಮ್ಮಾಲಿ ಇದಕ್ಕೆ ಒಪ್ಪುವುದಿಲ್ಲ. 

ಆಗ ಕುಂಬ್ಳೆ ಮತ್ತು ವಿಟ್ಲದ ಅರಸರು ಒಂದು ತೀರ್ಮಾನಕ್ಕೆ ಬರುತ್ತಾರೆ. ಯಾರ ತಲೆಗೆ ಪಟ್ಟದ ಆನೆ ಪಟ್ಟದ ಕಿರೀಟ ಹಾಕಿದ ಮುಂಡಾಸು ತೋಡಿಸುತ್ತದೆಯೋ ಅವರು ಮುಂದೆ ಎಣ್ಮೂರು ಬೀಡಿನ ಪಟ್ಟ ಏರಬೇಕು ಎಂದು ಅದೇಶಿಸುತ್ತಾರೆ. ಇದಕ್ಕೆ ಬ್ಯಾರಿ ಒಪ್ಪುತ್ತಾನೆ. ಆದರೆ ಆನೆ ಮಮ್ಮಾಲಿ ಬ್ಯಾರಿಯ ತಲೆಗೆ ಪಟ್ಟದ ಮುಂಡಾಸು ತೊಡಿಸುತ್ತದೆ. ಪಟ್ಟ ಮಮ್ಮಾಲಿಯದಾಗುತ್ತದೆ. ಆದರೆ ಇವನು ಪಟ್ಟದ ಕತ್ತಿ ಮತ್ತು ಮುಂಡಾಸನ್ನು ಪಟ್ಟದ ಮಣೆಯ ಮೇಲೆ ಇಟ್ಟು ಬೀಡನ್ನು ಅಳುತ್ತಾನೆ. ಮಣೆಯ ಪಕ್ಕ ಒಂದು ಸರ್ಪ ಮಲಾಗಿರುತ್ತಿತ್ತಂತೆ! ರುಕ್ಮ ಬಲ್ಲಾಳ ತನಗೆ ದಕ್ಕಿದ ಭೂಮಿಯನ್ನು ಅನುಭವಿಸಲು ಸಾಧ್ಯವಾಗದೆ ಊರು ಬಿಟ್ಟ.

ಬ್ಯಾರಿ ಬೀಡಿನಲ್ಲಿ ವಾಸ ಮಾಡದೆ ಪಕ್ಕದಲ್ಲಿ ತನಗೊಂದು ಮನೆ ಕಟ್ಟಿಸಿಕೊಂಡ. ಆದರೆ ಬೀಡಿನಿಂದ ಆಗಬೇಕಾದ ಎಲ್ಲ ಧರ್ಮ ಕಾರ್ಯಗಳನ್ನು ಮಾಡಿಸಿಕೊಂಡು ಬರುತ್ತಿದ್ದ. 

 ಸುಮಾರು ಕ್ರಿ.ಶ 1590 ರ ಆಸುಪಾಸಿನಲ್ಲಿ ನಡೆದ ಈ ಘಟನೆಯ ಕಥನ ಇಂದು ಕೆಲವು ಆಚರಣೆಗಳ ಮೂಲಕ ಉಳಿದುಕೊಂಡಿದೆ. ಬಲ್ಲಾಳ ಬರೆಸಿದ ತಾಮ್ರ ಶಾಸನ ಇತ್ತೀಚಿನ ವರೆಗೆ ಇತ್ತಂತೆ. 1920 ರ ಅಜುಬಾಜಿನಲ್ಲಿ ಹಳೆಯ ಬೀಡಿಗೆ ಬೆಂಕಿ ಬಿದ್ದ ಮೇಲೆ ಪಟ್ಟದ ಕಿರೀಟ ಮತ್ತು ಈ ತಾಮ್ರ ಶಾಸನ ನಾಶವಾಗಿ ಹೋಯಿತಂತೆ. 

ನಡ್ಕದ ಅಜ್ಜನಿಗೆ ಈ ಕತೆಯನ್ನು ಹೇಳಿದವರು ಅವರ ಮಾವ ಆಕ್ರಿಕಟ್ಟೆ ದೇರಣ್ಣ ಗೌಡರ ವಂಶದವರಾದ ಆಕ್ರಿಕಟ್ಟೆ ಹುಕ್ರಪ್ಪ ಗೌಡರು. ಅವರು ಈ ತಾಮ್ರ ಶಾಸನವನ್ನು ನೋಡಿದ್ದಾರೆ ಎಂದು ಹೇಳಿದ್ದರಂತೆ ! ಇದರಲ್ಲಿ ಹೀಗೆ ಬರೆದಿತ್ತು ಎಂದು ನಡ್ಕದ ಅಜ್ಜ ಹೇಳುತ್ತಿದ್ದರು - ವಿಷ್ಣು ದೇವರ ಜಾತ್ರೆ ವರ್ಷವರ್ಥಿ ನಡೆಸುವುದು, ದೇವಾಲಯವನ್ನು ಶುಚಿಯಾಗಿ ಇಡುವುದು, ನಾಗಬನಕ್ಕೆ ಹಾಲು ಎರೆಯುವುದು, ಬಾಕಿಮಾರು ಗದ್ದೆಗೆ. ಬಾಳೆ ಹಾಕಿಸುವುದು, ಬೀಡಿನ ಎಲ್ಲ ಕಾರ್ಯಗಳನ್ನು ನಡೆಸುವುದು, ಮಾಗಣೆ ದೇವರಾದ ಪಂಜ ಪರಿವಾರ ಪಂಚಲಿಗೇಶ್ವರ ಸ್ವಾಮಿಯ ಜಾತ್ರೆಯಲ್ಲಿ ಅಮೈ, ಕೆರ್ಪಡ, ಅಲಂಗಾರು, ಎಣ್ಮೂರಿನವರಿಂದ ಬಿಟ್ಟಿ ಚಾಕರಿ ಮಾಡಿಸುವುದು ಮತ್ತು ವಂತಿಕೆ ನೀಡುವಂತೆ ಮಾಡುವುದು.

ಎಣ್ಮೂರಿನ ಮಹಾವಿಷ್ಣು ದೇವರ ದೇವಾಲಯ ಹಡಿಲು ಬಿದ್ದು ಅದರ ಮೂರ್ತಿಯನ್ನು ಚೊಕ್ಕಾಡಿಗೆ ಕೊಂಡು ಹೋಗಲಾಯಿತು. 2003 ರಲ್ಲಿ ಎಣ್ಮೂರಿನ ದೇವಾಲಯದ ಅವಶೇಷಗಳನ್ನು ಪತ್ತೆ ಮಾಡಿ ಅಲ್ಲಿ ದೇವಾಲಯ ನಿರ್ಮಾಣ ಮಾಡಲಾಯಿತು. 

ಮಮ್ಮಾಲಿ ಬ್ಯಾರಿಯು ಅಧಿಕಾರ ಹಿಡಿದ ಮೇಲೆ ಪಂಜದ ದೇವರಿಗೆ ತಪ್ಪದೆ ಸೇವೆ ನಡೆಯುತ್ತಿತ್ತು. ಬ್ಯಾರಿಯ ಕುಟುಂಬ ದೊಡ್ಡದಾಗಿ ಬೆಳೆದಿದೆ. ಸುಳ್ಯದ ಖ್ಯಾತ ನ್ಯಾಯವಾದಿ ಕುಂಞಪಳ್ಳಿಯವರು ಎಣ್ಮೂರು ಬೀಡಿನ ಐವತೊಕ್ಕಲು ಮನೆಯವರು. ಎಣ್ಮೂರು ಪಟ್ಟವನ್ನು ಉಳಿಸಿದ ಕುಂಞಪಿಲಿ ಮಮ್ಮಾಲಿ ಕುಟುಂಬವನ್ನು ಪಂಜ ಜಾತ್ರೆಯಲ್ಲಿ ಗೌರವಾದರ ನೀಡಿ ಆಹ್ವಾನಿಸಿ ಸ್ವಾಗತಿಸುತ್ತಾರೆ. 

ಮಮ್ಮಾಲಿ ಹುಟ್ಟಿದ ಮನೆ ಕುರಿಯದ ಗುತ್ತಿನಲ್ಲಿ ನಮಾಜು ಮಾಡುವಾಗ ಅವನು ಉರಿಸಿದ ದೀಪವನ್ನು ಇಂದಿಗೂ ಉರಿಸುತ್ತಾರೆ. 

ದೇವಾಲಯದ ಜಾತ್ರೆಯಲ್ಲಿ ಬ್ಯಾರಿಗಳು ಅಂಗಡಿ ಹಾಕುವ ಹಾಗಿಲ್ಲ ಎಂದು ಮನಸುಗಳನ್ನು ಒಡೆಯುವ ದೇಶದ್ರೋಹಿ - ಸಂಸ್ಕೃತಿ ಭಂಜಕ ರ ನಡುವೆ, ಅದಕ್ಕೆ ಪ್ರತಿಯಾಗಿ ಬೆಳೆಯುವ ಅಲ್ಪಸಂಖ್ಯಾತ  ಕೋಮುವಾದಕ್ಕೆ ಎದುರಾಗಿ ನಾನು ಮಮ್ಮಾಲಿಯ ಕತೆಯನ್ನು ಗಟ್ಟಿಯಾಗಿ ಹೇಳುತ್ತಾನೆ. ಕೋಟಿ ಚೆನ್ನಯರು ಪ್ರಾಣ ಕೊಟ್ಟದ್ದು ಎಣ್ಮೂರು ಬೀಡಿನ ಪಟ್ಟವನ್ನು ಉಳಿಸಲು. ಅವರ ಮರಣದ ನಂತರ ಅವರ ಕನಸನ್ನು ನಡೆಸಿದ್ದು ಒಬ್ಬ ಬ್ಯಾರಿ ವೀರ ಮಮ್ಮಾಲಿ. 

ಇವನ ಕತೆಯನ್ನು ಹೇಳುವುದು ಕಥೆಯನ್ನು ನನಗೆ ಹೇಳಿದ ನಡ್ಕದ ಧರ್ಮಪಾಲ ಅಜ್ಜನಿಗೆ ನೀಡಿದ ಗೌರವ. ಧರ್ಮದ ಹೆಸರಿನಲ್ಲಿ ಒಡೆದು ಹೋಗುತ್ತಿರುವ ದೇಶವನ್ನು ಮರು ಕಟ್ಟುವ ಬಂಧವಾಗಿ ಈ ಕಥೆಯನ್ನು ನಾನು ಹೇಳದೆ ಮತ್ತೆ ಯಾರು ಹೇಳುವುದು?

ಚರಣ್ ಐವರ್ನಾಡು 🙏🙏🙏

Notes : ಸುಂದರ ಕೇನಾಜೆಯವರು ಹೇಳುತ್ತಾರೆ, ಪರ್ಮಲೆ ಬೀಡಿನ ಬಾಕಿತ್ತಿ ಮಾರು ಗದ್ದೆಯ ಮುಂದೆ ಇರುವ ಮಸೀದಿಯಲ್ಲಿ ಕೋಟಿ ಚೆನ್ನಯರ ಹೆಸರಿನಲ್ಲಿ ಇಂದಿಗೂ ದೀಪ ಉರಿಸಿರುವುದನ್ನು ನೋಡಿದ್ದೇನೆ.
ಪೂವಪ್ಪ ಕಾಣಿಯೂರು: ಬ್ಯಾರಿಗಳು ಪರ್ಮಲೆಯ ಉಲ್ಲಾಕುಳು ದೈವಗಳ ಬಂಡಿಯನ್ನು  ಎಲೆಯುವಾಗ ಸಂಕೋಲೆ ಬೀಸಿ ದಾರಿ ಮಾಡಿ ಕೊಡಬೇಕು, ನಂತರ ಉಳಿದವರು ಎಳೆಯುತ್ತಾರೆ.

೨೭.

#ಸೌಹಾರ್ದ_ಕಥನ
#ಸಹಬಾಳ್ವೆಯ_ಬದುಕು
#ಸಾಕಿಯ_ಮಧುಶಾಲೆ

#ಅಜಿಲಮೊಗ್ರು_ಮಾಲಿದಾ

ನನ್ನ ಅನುಭವಕ್ಕೆ ನಿಲುಕಿದ ಸೌಹಾರ್ದ ಘಟನೆ, ವಿಷಯ, ವ್ಯಕ್ತಿಗಳ‌ ಬಗ್ಗೆ ಹಂಚಿಕೊಳ್ಳಲು ಮೊದಲ ಕಾರಣ ಸಚಿನ್ ‌ಅಂಕೋಲ ಎಂಬ ಯುವ‌ ಬರಹಗಾರ. ಸಚಿನ್ ಅಂಕೋಲರು ಟ್ಯಾಗ್ ಮಾಡಿರೊದರಿಂದಲೇ ಈ ಬರಹ ಹುಟ್ಟಿದ್ದು. ಈಗ ಮುಖಪುಸ್ತಕದ ತುಂಬೆಲ್ಲಾ‌ ಟ್ಯಾಗ್ ಮಾಡಿಕೊಂಡು‌‌‌ ಸೌಹಾರ್ದತೆಯ ಬಗ್ಗೆ ಹಂಚಿಕೊಳ್ಳುವ ಸಾಲಿಗೆ  ನಮ್ಮೂರಿನ ಕಥನಗಳು, ಮಾದರಿಗಳು ಸೇರಿ, ಎಲ್ಲರಿಗೂ ಮುಟ್ಟಲಿ‌ ಎಂಬ ಇನ್ನೊಂದು‌ ಕಾರಣಕ್ಕಾಗಿ‌ ಬರೆಯುತ್ತೇನೆ.

ಎರಡು ದಿನದ ಹಿಂದೆ ಅಮ್ಮನ ಜೊತೆ ಅಕ್ಕ ಫೋನ್ನಲ್ಲಿ ಮಾತಾಡುತ್ತ ಕೊರೊನಾ ಲಾಕ್ ಡೌನ್ನಿಂದ ಮಕ್ಕಳಿಗೆ ಯಾವ ತಿಂಡಿ ಮಾಡಿಟ್ರು ಎರಡೇ ದಿನದಲ್ಲಿ ಖಾಲಿ‌ ಆಗ್ತಿದೆ ಅಮ್ಮ..  ಕೊನೆಗೆ ಅಜಿಲಮೊಗ್ರು ಉರೂಸ್ ಮಾಲಿದಾ ನೆನಪಾಯಿತು..‌ಅಕ್ಕಿ ಹುರಿದು, ಕುಟ್ಟಿ ಪುಡಿಮಾಡಿ..ಬೆಲ್ಲದ ಪಾಕದಲ್ಲಿ ಕಲೆಸಿ ಉಂಡೆ ಮಾಡಿಟ್ಟಿದ್ದೇನೆ ಅಂತ ಅಂದ್ಲಂತೆ. ಹೀಗೆ ಊರ ಮಂದಿಗೆ ಎಲ್ಲಿದ್ದರೂ ನೆನಪಾಗುವ  ಅಜಿಲಮೊಗ್ರು ಮಾಲಿದಾ ಒಂದು ಬರೀ ಉರೂಸ್ ಆಗದೆ ಅದೊಂದು ಸೌಹಾರ್ದ ಆಚರಣೆಯಗಿರುವುದೇ ಕಾರಣ. ನನಗೂ ತಟ್ಟನೆ ಮಾಲಿದಾ ರುಚಿ ನೆನಪಾಗಿ ನಾಲಿಗೆ ನೀರಿಳಿಸಿಬಿಟ್ಟಿತು. 

ಅಜಿಲಮೊಗ್ರು ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ‌ ಸಣ್ಣ ಗ್ರಾಮ. ತಾಲೂಕು ಕೇಂದ್ರದಿಂದ 20 ಕಿ.ಮೀ ದೂರವಿರುವ ಈ‌ ಜಾಗ ನಮ್ಮೂರು ತೆಕ್ಕಾರಿನಿಂದ 3 ಕಿ.ಮೀ ಕ್ರಮಿಸಿದರಾಯಿತು. ನೇತ್ರಾವತಿ ನದಿಗೆ ಅಂಟಿಕೊಂಡಿರುವ ಅಜಿಲಮೊಗ್ರು ಇತಿಹಾಸ ಪ್ರಸಿದ್ಧ ಎನಿಕೊಳ್ಳುವುದೇ ಅಂದಾಜು 800 - 1000 ವರ್ಷಗಳಿಂದ ನಿಶ್ಚಲವಾಗಿ‌ ನೆಲೆ‌ನಿಂತ ಜುಮ್ಮಾ ಮಸೀದಿಯಿಂದ. ಮಧ್ಯ ಏಷ್ಯಾದ ಆಡಳಿತಗಾರನಾಗಿದ್ದ ಮುಂದೆ ಸಂತನಾದ ಸಯೈದ್ ಬಾಬಾ ಫಕ್ರುದ್ದೀನ್ ರಿಂದ ಈ ಮಸೀದಿ ಕಟ್ಟಲ್ಪಟ್ಟಿತಂತೆ. ಮಸೀದಿ, ಚರ್ಚು, ದೇಗುಲ, ಸ್ತೂಪಗಳು ಕಟ್ಟಲ್ಪಟಿತೆಂದರೆ ಹೇಗೆ ಸೌಹಾರ್ದ ಸಮಾಜ ನಿರ್ಮಾಣವಾದಿತು ಎಂಬ ಪ್ರಶ್ನೆ ಇದ್ರೂ, ಈ ಶೃದ್ದಾ ಕೇಂದ್ರಗಳಲ್ಲಿ ನಡೆಯುವ ಆಚರಣೆಗಳು ಯಾವುದೇ ಭೇದವಿಲ್ಲದೆ ಎಲ್ಲರನ್ನೂ ಒಟ್ಟುಗೂಡಿಸಿದರೆ ಅಲ್ಲಿ ಸೌಹಾರ್ದಯುತ ಸಮಾಜ ನಿರ್ಮಾಣ ಆಗುವಲ್ಲಿ‌ ಸಂಶಯವಿಲ್ಲ. ಅಂತಹದೇ ಆಚರಣೆಗಳಿಂದಲೇ ಈ ಮಸೀದಿ ಸೌಹಾರ್ದತೆ ಎಂದಾಗ ಪ್ರಥಮತಃ ನನಗೆ ನೆನಪಾಗುವುದು. 

ನಾನಂತು ಸಿಹಿ‌ ಪ್ರೀಯ. ತಿನಿಸು, ತಿಂಡಿ ಬಿಡಿ, ಬರೇ ಬೆಲ್ಲ, ಸಕ್ಕರೆಯಾದರೂ ಚಪ್ಪರಿಸಿ ತಿನ್ನುವಷ್ಟು ಸಿಹಿ ಇಷ್ಟ ನನಗೆ. ಬಾಲ್ಯದಲ್ಲಿ ವರ್ಷಕ್ಕೊಮ್ಮೆ ಅತೀವ ಆಸೆಯಿಂದ ಕಾಯುತ್ತಿದ್ದ ತಿಂಡಿಯೆಂದರೆ 'ಅಜಿಲಮೊಗ್ರು ಮಾಲಿದಾ'.  ಊರಿನ ಸಹಕಾರಿ ಸಂಘದಲ್ಲಿ ಕಾರ್ಯದರ್ಶಿಯಾಗಿ ಕೆಲಸದಲ್ಲಿದ್ದ ಅಪ್ಪನಿಗೆ ಸಂಘದ ಫಲಾನುಭಾವಿ‌ ಮುಸಲ್ಮಾನ ಬಾಂಧವರು ಪ್ಲಾಸ್ಟಿಕ್ ಚೀಲಗಟ್ಟಲೆ ಬಳುವಳಿಯಾಗಿ ತಂದು ಕೊಡುವ  ಮಾಲಿದ ನಮ್ಮ ಮನೆಯಲ್ಲಿ ಕನಿಷ್ಠ ಒಂದೆರಡು ವಾರಗಳು ಸಂಜೆ ಟೀ ಜೊತೆ ತಿಂಡಿ. ಮಸೀದಿಯ ಉರುಸ್ಗೆ ಮಾಲಿದಾ ಎಂಬ ಸಿಹಿತಿಂಡಿಯನ್ನು ತಯಾರಿಸಿ ಮಸೀದಿಗೆ ಅರ್ಪಿಸಿ ಅಲ್ಲಿ ಪ್ರಸಾದ ರೂಪದಲ್ಲಿ ಕೊಡುವ ಮಾಲಿದವನ್ನು ತಂದು ಕುಟುಂಬ, ಊರ ಎಲ್ಲಾ ಮತದವರಿಗೂ ಹಂಚಿ ತಿನ್ನುವ ಈ ಆಚರಣೆ ಅತೀ ವಿರಳ ಎನಿಸುವಂತದ್ದು.  ಮಾಂಸಾಹಾರವನ್ನೇ ಮೆಚ್ಚಿಕೊಳ್ಳುವ ಮಂದಿ‌ ವರ್ಷಕೊಮ್ಮೆ ಅತೀ ಶೃದ್ಧೆಯಿಂದ ಬೆಳ್ತಿಗೆ ಅಕ್ಕಿ ಹುರಿದು, ಕುಟ್ಟಿ ಪುಡಿ ಮಾಡಿ, ಅಕ್ಕಿ ರೊಟ್ಟಿ ಮಾಡಿ, ಸರಿಯಾಗಿ ಸುಟ್ಟು, ಮತ್ತೆ ಪುಡಿಗಟ್ಟಿ ಯಥೇಚ್ಛ ತುಪ್ಪ ಬೆರೆಸಿದ ಬೆಲ್ಲದ ಪಾಕದಲ್ಲಿ ಕಲೆಸಿ ತಯಾರಿಸುವ 'ಮಾಲಿದ' ಎಂಬ ಸಿಹಿತಿಂಡಿ ಮನುಷ್ಯರು ಬಿಡಿ, ದೇವರೂ ತಿನ್ನುತ್ತಿದ್ದರೆ ಚಪ್ಪರಿಸಿ ಮುಕ್ಕುದೆ ಇರುತ್ತಾನೆಯೆ?. 

ಸುಮಾರು 747 ಸಂವತ್ಸರಗಳಿಂದ ಜರುಗುತ್ತಾ ಬರುತ್ತಿರುವ ಮಾಲಿದಾ  ಉರೂಸ್ ನಮ್ಮ ಜಿಲ್ಲೆ ಮತ್ತು ನೆರೆಯ ಜಿಲ್ಲೆಯ ಮುಸಲ್ಮಾನ  ಬಾಂಧವರಿಗೆ ಅತೀ ಶ್ರೇಷ್ಠ ಉರೂಸ್ಗಳಲ್ಲಿ ಒಂದು.‌ ಜೊತೆಗೆ ನಾನು ಬಾಲ್ಯದಿಂದ ಕೇಳಿ ತಿಳಿದ ಮಟ್ಟಿಗೆ ಈ ಉರೂಸ್ ನಲ್ಲಿ ನಮ್ಮೂರಿನ ಅದೆಷ್ಟೋ ಹಿಂದೂ ಬಾಂಧವರು ಮಾಲಿದವನ್ನು ಹರಿಕೆ ರೂಪದಲ್ಲಿ‌ ಸಲ್ಲಿಸುತ್ತಾರೆ. ಹೆಚ್ಚಾಗಿ‌ ಕೊಟ್ಟಿಗೆಯಲ್ಲಿ ದನ ಕರುವಿಗೆ ಸುಖವಿಲ್ಲದಿದ್ದರೆ ರೈತಾಪಿ ವರ್ಗ ಮಾಲಿದಾ ಹರಿಕೆ ಕೊಡುವುದು ಪದ್ದತಿ. ಕೆಲವೊಂದಷ್ಟು ಜನ ಮಾಲಿದಾವನ್ನು ಮಾಡಿಸಿ‌‌ ಮಸೀದಿಗೆ ಅರ್ಪಿಸುತ್ತಾರೆ. 

ಹಜ್ರತ್ ಸಯೈದ್ ಫಕ್ರುದ್ದೀನ್ ಜುಮ್ಮಾ ಮಸೀದಿ, ಅಜಿಲಮೊಗ್ರು ನಮ್ಮ ಜಿಲ್ಲೆಯ ಜೀವ ನದಿ ನೇತ್ರಾವತಿಯ ಒಂದು ತಟದಲ್ಲಿದ್ದರೆ ಇನ್ನೊಂದು ತಟದಲ್ಲಿ ಮಸೀದಿಗೆ ನೇರವಾಗಿ ಕಡೇಶಿವಾಲಯ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ದೇಗುಲವಿದೆ. ಇವೆರಡು ಒಂದೇ ದಿಕ್ಕಿಗೆ ಮುಖಮಾಡಿ ನಿಂತಿದೆ. ನಡುವಲ್ಲೊಂದು ನೇತ್ರಾವತಿ ಶಾಂತವಾಗಿ ಸದ್ಯಕ್ಕಂತು ಹರಿಯುತ್ತಿದ್ದಾಳೆ. ಎತ್ತಿನಹೊಳೆ ದುರಂತ ಕೆಲವೇ ವರ್ಷದಲ್ಲಿ‌ ಅದಕ್ಕೂ ಕುತ್ತು ತಂದರೆ ಆಶ್ಚರ್ಯವಿಲ್ಲ. ಕಡೇ ಶಿವಾಲಯದ ದೇವಾಲಯಕ್ಕೆ ಅಜಿಲಮೊಗ್ರು ಮಾರ್ಗವಾಗಿ ಭೇಟಿ‌‌ ನೀಡುವ ಭಕ್ತರಿಗೆ ಇವತ್ತಿಗೂ ದೋಣಿ ನಡೆಸುವವರು ಮುಸಲ್ಮಾನ ಸಹೋದರರು. ಈ‌ ಎರಡೂ ಹಳ್ಳಿಗಳನ್ನು‌ ಸಂಪರ್ಕಿಸುವ ಸೌಹಾರ್ದ ಸೇತುವೆ ಸದ್ಯದಲ್ಲೇ ಎದ್ದು ನಿಲ್ಲಲಿದೆ.  ಈ ಎರಡೂ ಧಾರ್ಮಿಕ ಕೇಂದ್ರಗಳು ತಮ್ಮ ವಾರ್ಷಿಕ ಆಚರಣೆಗಳಿಗೆ ಒಂದಷ್ಟು ಸಾಮಾಗ್ರಿಗಳನ್ನು ಪರಸ್ಪರವಾಗಿ ಬಳುವಳಿಯಾಗಿ ಕಳುಹಿಸಿಕೊಡುತ್ತಾವೆ ಎಂಬುದನ್ನು ಕೇಳಿದ್ದೇನೆ.‌ ಆದರೆ ಈ ವಿಷಯದಲ್ಲಿ ಎಷ್ಟು ಸತ್ಯಾಸತ್ಯತೆ ಇದೆ ಎಂಬುದರ ಬಗ್ಗೆ ನನಗೆ ಸರಿಯಾದ ಅರಿವಿಲ್ಲ.

ನಮ್ಮೂರಿನವರಿಗೆ ಬ್ಯಾರಿ‌ ಭಾಷೆ ತುಳುವಷ್ಟೇ ನಿರರ್ಗಳ.‌ ಶಾಲಾ ದಿನಗಳಲ್ಲಿ ನಮ್ಮ‌ ಹೆಚ್ಚಿನ ಆಪ್ತ ಗೆಳೆಯರು ಮುಸಲ್ಮಾನರೇ ಆಗಿದ್ದರು. ಅಪ್ಪ ಕೆಲಸದಲ್ಲಿ ಇದಷ್ಟು ದಿನ ಹೆಚ್ಚಿನ ದಿನಗಳಲ್ಲಿ ಊರಿನ‌ ಎಲ್ಲಾ ವರ್ಗದವರೂ ನಮ್ಮ ಮನೆಯ ಅತಿಥಿಗಳಾಗಿದ್ದರು, ಈಗಲೂ ಭೇಟಿ ನೀಡುತ್ತಿರುತ್ತಾರೆ. 
ನಮ್ಮ ಊರಿನ ರೈತಾಪಿ ವರ್ಗದವರು ತಾವು ಬೆಳೆದ ತರಕಾರಿಯಲ್ಲಿ ಒಂದು ಪಾಲು ನಮ್ಮ ಮನೆಗೆ ತಂದು ಕೊಡುವುದು ಇಂದಿಗೂ ಪರಿಪಾಠವಾಗಿದೆ. ಎಷ್ಟೋ ಹಿಂದೂ ವರ್ಗದವರ ತೋಟಗಳು ಮುಸಲ್ಮಾನ ಕೆಲಸಗಾರರನ್ನೇ ಅವಲಂಬಿಸಿವೆ.  ಒಟ್ಟಾಗಿ ಮತ ಭೇದವಿಲ್ಲದೇ ಶಾಲಾ ಮೈದಾನದಲ್ಲಿ ಆಡುತ್ತಿರುವ ನಮಗೆ ನಮ್ಮೆಲ್ಲರ ಬಾಂಧವ್ಯ 'ಮಾಲಿದಾ'ದಷ್ಟೇ ಸಿಹಿ.

ಈಗ ಮಾಲಿದ ತಿನ್ನದೇ ಎಷ್ಟೊ ವರ್ಷಗಳಾಗಿದೆ.  ಉರೂಸ್ ನಡೆಯುವ ಸಂದರ್ಭದಲ್ಲಿ ನಾನು ಊರಲ್ಲಿರುವುದೂ ಕಡಿಮೆ. ಆದರೆ ವಿಪರ್ಯಾಸವೆಂದರೆ  ನಮ್ಮವರೊಡನೆ, ನಮ್ಮ ಮತಗಳ ನಡುವಿನ ಸಿಹಿ ಕೊಂಡಿ ಕಳಚುತ್ತಿರುವುದಂತು ಬೇಸರ ತರುತ್ತಿದೆ. ಕಾರಣಗಳು ಇಷ್ಟೇ, ನಮ್ಮ ನಡುವೆ ಆತ್ಮೀಯತೆ, ಪ್ರೀತಿಗಿಂತ, ವೈಷಮ್ಯವೇ ವಿಜೃಂಭಿಸುತ್ತಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಕಾಲ ಯಾವತ್ತೂ ಇರಲಿ ಎಂಬ ಹಾರೈಕೆಗೊಂದಿಗೆ ದೇವರಿಗೆ ಪ್ರಿಯವಾದ ಮಾಲಿದ ಮತ್ತೆ ತಿನ್ನಬೇಕೆನಿಸುತ್ತಿದೆ. 

- ವಿಘ್ನೇಶ್ ತೆಕ್ಕಾರು

ಚಿತ್ರಗಳು: ಗೂಗಲ್ ಕೃಪೆ

೨೮

ಜಬ್ಬಾರನ್ನು ನಾನೇಕೆ ನೆನಪಿಸಿಕೊಳ್ಳಬೇಕು?.. ಈ ಶೀರ್ಷಿಕೆ ಹಲವರಿಗೆ ಅಚ್ಚರಿ ಉಂಟುಮಾಡಬಹುದು. ಹೌದು, ಈಗ ಆ ನೆನಪು ಯಾಕೆ ? ಎದೆ ಮೀಟಿದ ಭಾವವೇನು?  ಕಾರಣ ನಿಷ್ಕಾರಣ, ನಿರಪೇಕ್ಷ. ನಾನು ಮತ್ತು ಜಬ್ಬಾರ್ ಒಂದೇ ಊರಿನವರು. ನಮ್ಮ ನಡುವೆ ಇಂದಿಗೂ ಏಕವಚನದ ಸಲುಗೆ. ಅವನು ಜಬ್ಬಾರ್ ಸಂಪಾಜೆ ನಾನು ಸುಬ್ರಾಯ ಸಂಪಾಜೆ. ನಾನಿರುವುದು ಸದ್ಯ ಮಡಿಕೇರಿ ಆಕಾಶವಾಣಿಯಲ್ಲಿ. ಜಬ್ಬಾರ್ ನ ಹೆಸರಿನ ನಡುವಿರುವ ಸಮೊ ಅವನ ತಂದೆಗೆ ಅರ್ಪಿತ. ಅದು ಸಂಪಾಜೆ ಮೊಹಮ್ಮದ್. ಜಬ್ಬಾರ್ ಮತ್ತು ನನ್ನ ಮನೆ ನಡುವೆ ಕ್ರೋಶಾಂತರ. ಸರಿ ಸುಮಾರು ಒಂದೇ ಕಾಲಕ್ಕೆ ಯಕ್ಷಗಾನದ ಹುಚ್ಚು ಬೆಳೆಸಿಕೊಂಡವರು ನಾವು. ಹಾಗೆ ನೋಡಿದರೆ ಆತ ನನಗೆ ಸೀನಿಯರ್. ಜಬ್ಬಾರ್ ನನ್ನ ಅಕ್ಕನ ಕ್ಲಾಸ್ಮೇಟ್. ಐದನೇ ತರಗತಿಯಲ್ಲಿದ್ದಾಗ ಚಂದಮಾಮದಲ್ಲಿ ಬರುತ್ತಿದ್ದ ವೀರ ಹನುಮಾನ್ ಕಥಾನಕವನ್ನು ಕ್ಲಾಸಲ್ಲಿ ಪಾಠ ಕೇಳ್ತಾ ಕೇಳ್ತಾ ಕದ್ದು ಕದ್ದು ಓದಿದ ಜಬ್ಬಾರ್ ಗೆ ನನ್ನ ಅಕ್ಕ ಪುಷ್ಪ ಕೇಪಣ್ಣ ಮಾಸ್ತರರಿಗೆ ಚಾಡಿ ಹೇಳಿ ಸರೀ ಹೊಡಿಸಿದ್ದಳಂತೆ. ಚಾಡಿ ಹೇಳಿದ ದಿನ ಅವಳಿಗೆ ಈಗಲೂ ಒಂದು ಹೆಮ್ಮೆಯ ಕ್ಷಣ!
ಕೊಯನಾಡು- ಸಂಪಾಜೆ ವಲಯದಲ್ಲಿ ಯಕ್ಷಗಾನ ಕೂಟಗಳು ಜೀವಂತ ಇರುವಂತೆ ಜಬ್ಬಾರ್ ನೋಡಿಕೊಂಡ ದಿನಗಳಿಗೆ ನಲ್ವತ್ತು ವರ್ಷಗಳಿಗೆ ಮೀರಿದ  ಇತಿಹಾಸ ಇದೆ. ಕೊಯನಾಡಿನ ಹಮೀದ್ ಅವರ ಭೀಮ, ಕೌರವ, ಮಾಗಧ ಪಾತ್ರಗಳಿಗೆ ಪದ್ಯ ಹೇಳಿದ ದಿನಗಳು ನೆನಪಾದರೆ ಈಗಲೂ ನನಗೆ ಗರ್ಭದೊಳಗೆ ಚಳಿಯ ನಡುಕ! ಕೊಯನಾಡಿನ ಇನ್ನೋರ್ವ ಸ್ನೇಹಿತ ಹಮೀದ್ ಆಗ ಉಳಿದೆಲ್ಲರ ಸಾಂಸ್ಕೃತಿಕ ಸಪೋರ್ಟರ್.
ಕಲ್ಲುಗುಂಡಿ ರಾಮಕೃಷ್ಣ ಭಜನಾ ಮಂದಿರವೆಂದರೆ  ' ಅಬ್ದುಲ್.. ನಾರಾಯಣ.. ಫೆರ್ನಾಂಡಿಸ್..' ಎಲ್ಲರ ಸ್ನೇಹ ಸಮ್ಮಿಲನದ ತಂಪುದಾಣ. 
ಭಜನಾ ಮಂದಿರಕ್ಕೆ ಬ್ಯಾರಿಗಳು ಬರೂದಾ...ಅಂತ ತಲೆಬಿಸಿ ಮಾಡಿದವರ ತಲೆಬಿಸಿ ಹೇಗೆ ಕರಗಿಹೋಯ್ತೋ ಕಾಣೆ! ತಿಂಗಳಿಗೊಮ್ಮೆ ನಡೆಯುತ್ತಿದ್ದ ತಾಳಮದ್ದಳೆ ಕೂಟ ಈ ಜಬ್ಬಾರ್ ದೆಸೆಯಿಂದ ವಾರಕ್ಕೊಮ್ಮೆ ನಡೆಯುವ ಹಾಗಾಯ್ತು. ಬಂದು ಬಂದು ಕೊನೆಗೆ ಡೈಲೀ ತಾಳಮದ್ದಳೆ!  ನಾನು ಹಾಡುಗಾರಿಕೆ ಕಲಿಯುತ್ತಿದ್ದ ಕಾಲ. ರಾಧಾಕೃಷ್ಣ ಕಲ್ಚಾರ್ ಕೂಡ ಸಂಪಾಜೆಗೆ ಬಂದು ಕೂಟಗಳಲ್ಲಿ ಪಾಲ್ಗೊಳ್ಳತೊಡಗಿದ. ಜಬ್ಬಾರ್- ಕಲ್ಚಾರ್ ಜೋಡಿ ಇದೆ ಅಂದ್ರೆ ಕಲ್ಲುಗುಂಡಿ ಭಜನಾಮಂದಿರದ ಒಳಗೆ ಮಾತ್ರ ಅಲ್ಲ ಹೊರಗಿಂದಲೂ ಜನ ನಿಂತು ನೋಡುವ, ಇಣಿಕಿ ನೋಡುವ ಹಾಗಾಯ್ತು. ನನ್ನ ಜೊತೆಗೆ ಮದ್ದಳೆಗೆ ಇರುತ್ತಿದ್ದ ಗಂಗಾಧರಣ್ಣನ ಹೋಟೆಲ್ ನಾವೆಲ್ಲ ಕೂಟಕ್ಕೆ ಮೊದಲು ಸೇರಿ ಚಾ ಕುಡಿಯುವ ಜಾಗ. ಈ ಕಲ್ಚಾರ್- ಜಬ್ಬಾರ್ ಫೈಟಿಂಗ್ ನೋಡಿ ಹೋಟೆಲ್ ನಲ್ಲಿ ಒಮ್ಮೆ ಒಬ್ಬರು ಹೇಳ್ತಿದ್ರಂತೆ.." ಹೌದೂ...ವಾದ ಮಾಡಿ ಮಾಡಿ ಇನ್ನು ಇವರು ಹೊಡಕೊಳ್ಳದಿದ್ದರೆ ಸಾಕು' ಅಂತ. ನನಗೆ ಈಗ ಅನ್ನಿಸುವುದು ಈ ಜಬ್ಬಾರ್ ಆ ದಿನಗಳಲ್ಲಿ ತಿನ್ತಾ ಇದ್ದದ್ದು ಮೂರೂ ಹೊತ್ತು ಯಕ್ಷಗಾನವನ್ನೆ !  
ಬಣ್ಣದ ಮಾಲಿಂಗರ ಮಾರ್ಗದರ್ಶನದಲ್ಲಿ ಒಂದು ಬಣ್ಣಗಾರಿಕೆ ಶಿಬಿರವನ್ನೂ ಜಬ್ಬಾರ್ ಮಾಡಿಸಿದ್ದ. ಅದರ ಎರಡು ದೊಡ್ಡ ಪ್ರಾಡಕ್ಟ್ ಅಂದರೆ ದಿವಾಕರ ರೈ ಸಂಪಾಜೆ ಮತ್ತು ಜಯಾನಂದ ಸಂಪಾಜೆ.
ನಾನು ಹೇಳಲು ಹೊರಟ ಒಂದು ಘಟನೆ ಹೇಳಿ  ವಿರಮಿಸುತ್ತೇನೆ. ನಲುವತ್ತು ವರ್ಷದ ಹಿಂದಿನ ಸಂಗತಿ ಇದು.
ಮೂರು ವರ್ಷ ಉಪನ್ಯಾಸಕನಾಗಿ ಕೆಲಸ ಮಾಡಿದ ನನಗೆ ಉದ್ಯೋಗ ಎಲ್ಲೂ ಖಾಯಂ ಆಗಿರಲಿಲ್ಲ. ಅಲ್ಲಲ್ಲಿ ಆಟಕ್ಕೆ ಭಾಗವತನಾಗಿ ಹೋಗುತ್ತಿದ್ದ ನನಗೆ ಸಿಕ್ಕಿದ ನೂರು ಅಥವಾ ಇನ್ನೂರು ರೂಪಾಯಿ ಸುಮಾರು ದಿನದ ಖರ್ಚಿಗೆ ಸಾಕಾಗುತ್ತಿತ್ತು. ಅದೂ ಇಲ್ಲವಾದರೆ ಇಪ್ಪತ್ತು ದಾಟಿದ ಈ ತಮ್ಮನನ್ನು ಅಣ್ಣಂದಿರು ಸಾಕಬೇಕು! ಒಂದು ದಿನ ಸುಳ್ಯ ಕಾಯರ್ತೋಡಿ ದೇವಸ್ಥಾನದಲ್ಲಿ ರಾತ್ರಿಯಿಡೀ ಆಟ! ಜಬ್ಬಾರ್ ನ ದಕ್ಷ. ಪದ್ಯಕ್ಕೆ ನಾನೊಬ್ಬನೆ. ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ ಆರು ಗಂಟೆವರೆಗೆ ಹಾಡಿದ್ದೆ. ಚೌಕಿ ಬಿಡುವ ಹೊತ್ತು. ಎಲ್ಲ ಹೊರಡುತ್ತಿದ್ದಾರೆ. ನನ್ನ ಕಣ್ಣು ಸಂಘಟಕರನ್ನು ಹುಡುಕುತ್ತಿತ್ತು. ಅವರು ನಾಪತ್ತೆ!  ಆಗ ಯಾರೋ ಹೇಳಿದರು." ಇದು ಸೇವೆ ಆಟವಂತೆ.."
ಸ್ವಲ್ಪ ಹೊತ್ತು ನಾನು ಅಲ್ಲೆ ಕೂತೆ. ನನ್ನ ಯೋಚನೆ
 " ಸಂಪಾಜೆವರೆಗೆ ಹೋಗೋದು ಹೇಗೆ?..." 
ಬ್ಯಾಗ್ ಹೆಗಲಿಗೇರಿಸಿದ ಜಬ್ಬಾರ್, " ಓ, ಸುಬ್ರಾಯ, ನಿನಗೆ ಹೊರಡುವುದಕ್ಕೆ ಸಮಯ ಆಗಿಲ್ವ?" ಅಂತ ಕೇಳಿದ. ನನ್ನ ನಾಲಗೆಯಿಂದ ಮಾತು ಹೊರಡಲಿಲ್ಲ. ಜಬ್ಬಾರ್ ಕೈಹಿಡಿದು ಎಬ್ಬಿಸಿ, " ಏಳು ಏಳು ನಾನಿಲ್ವ ಮಾರಾಯ ಸಂಪಾಜೆವರೆಗೆ" ಎಂದ. ಸುಳ್ಯ ಗಾಂಧೀನಗರದಲ್ಲಿ ಒಂದು ಲೈಲಾಂಡ್ ಲಾರಿ ಸಿಗುವವವರೆಗೂ ನಾನು  ನೆಲನೋಟಕನಾಗಿಯೇ ಇದ್ದೆ. ಲಾರಿ ಚಾಲಕನಿಗೆ ನನ್ನ ಲೆಕ್ಕದ  ದುಡ್ಡು ಕೊಟ್ಟವನು ಜಬ್ಬಾರ್. ಸಂಪಾಜೆಯಲ್ಲಿ ಲಾರಿ ಇಳಿದು ಮನೆ ಸೇರಿದೆ.
ಕಳೆದ ಹತ್ತಾರು ವರ್ಷಗಳಲ್ಲಿ ನನ್ನಿಂದ ಈ ಕಥೆ ಕೇಳಿಸಿಕೊಂಡ ನನ್ನ ಊರ ಜನ ಹೇಳಿದ್ದು ಒಂದೆ.." ಆ ಜಬ್ಬಾರ್ ಗೆ ಇದು ಹೊಸತಲ್ಲ. ಅದು ಅವನ ಸ್ವಭಾವ.., ಅಭ್ಯಾಸ "
ಈಗ ಹೇಳಿ..." ಸಂಪಾಜೆವರೆಗೆ ನಾನಿಲ್ವ ಮಾರಾಯಾ " ಎಂದ ಜಬ್ಬಾರನ್ನು ನಾನೇಕೆ ನೆನಪಿಸಿಕೊಳ್ಳಬೇಕು!!

📝ಸುಬ್ರಾಯ ಸಂಪಾಜೆ

೨೯.


#ಸಾಬರೊಡನೆ_ಸಹವಾಸದ_ಚಿತ್ರಗಳು 2
ಬೀಡಿ ಕಟ್ಟುತ್ತಿದ್ದ ಅಕ್ಕನ ಜತೆಗಾತಿಯರಲ್ಲಿ ಹಲವರು ಸಾಬ್ರ್ ಅಮ್ಮಂದಿರು.ಶೆಟ್ರ್‌ಕಟ್ಟಿ ಸಾಬ್ರ್‌ಅಮ್ಮ ನನ್ನಮ್ಮನ ಹಳೆಗೆಳತಿ,ಅಕ್ಕನ ಜತೆಗಾತಿ. ಶೆಟ್ರ್‌ಕಟ್ಟಿ ಸಾಯ್ಬ್ರ್ ಅಂಗಡಿಬಾಗಿಲು ಹತ್ತಾರು ಹಿಂದುಹುಡುಗರ,ಹಿರಿಯರ ಪಂಚಾಯತಿ ಕಟ್ಟೆಯಾಗಿತ್ತು.ಅಲ್ಲಿ ಮಾತಿಗೆ ಮಾತು,ಹರಟೆ,ಆ ಕಾಲದ ಫೇಸ್‌ಬುಕ್ಕುಕಟ್ಟೆ ಅಂತಲೂ ಅನ್ನಬಹುದು. ಆದರೆ ಒಂದೇ ಒಂದು ವ್ಯತ್ಯಾಸ ಅಲ್ಲಿ ಕಡು ಬಣ್ಣಗಳ ಭಕ್ತರಿರಲಿಲ್ಲ. ಬಣ್ಣಗಳೇ ಇರಲಿಲ್ಲವೆ ಕೇಳಿದರೆ ಇತ್ತು.ಅದು ಕಲಾಕಾರನ ಕುಂಚ ಆಡಿ ಮೂಡಿದ ಬಣ್ಣ ಬಣ್ಣದ ಚಿತ್ರದಂತಿತ್ತು.ಅಂಗಡಿಯ ಹಸೈನಾರ್ ಸಾಯ್ಬ್ರು ಎಷ್ಟು ಮುಗ್ಧರು ಎಂದರೆ, ವಿಮಾನಕ್ಕೆ ವಿಮಾನ ನೇತಾಡಿಸಿ,ಕೆಳಗಿನ ವಿಮಾನದ ಮೂಲಕ ಬಹುಮಹಡಿ ಕಟ್ಟಡ ಉರುಳಿಸುತ್ತಾರೆ,ಎಂದದ್ಜನ್ಧೂ ನಂಬುವಷ್ಟು, ಇಡೀ ಮರವೇ ಎದ್ದು ನಡೆದು ಬಂದದ್ದನ್ನು ಕಂಡಿದ್ದೇನೆ ಎಂಬ ಮಾತನ್ನೂ ನಂಬುವಷ್ಟು. ಇದೇ ಹಸೈನರ್ ಸಾಯ್ಬ್ರು,ಸಾಯ್ಬ್ರ್ ಅಮ್ಮರ ಮಗ ಜೈನುದ್ದೀನ್ ನನ್ನ ತೊಡೆಸೋಂಕಿನ ಗೆಳೆಯ.ಅವನ ತಮ್ಮ ಅಯೂಬ್ ನನ್ನ ಕಿರಿಯ ಗೆಳೆಯ.  ತೊಂಬತ್ತೊಂಬತ್ತನೆಯ ಇಸವಿಯ ಜೂನ್ ತಿಂಗಳ ಮೂರನೆಯ ತಾರೀಕಿನಂದು, ಶೆಟ್ರಕಟ್ಟೆ ಅರಮ ದೇವಸ್ಥಾನದ ಸಿಬ್ಬಂದಿಯಾಗಿ  ನಾನು ಕೆಲಸ ನಿರ್ವಹಿಹುತ್ತಿದ್ದ ಒಂದು ದಿನ  ಸಹಾಯಕ ಅರ್ಚಕರಾಗಿ ಜನ್ನಾಡಿಯ ಶಂಕರ ಅಡಿಗರು, ತನ್ನ ಪತ್ನಿ ,ಪುಟ್ಟ ಮಗಳೊಡನೆ ಆಕಸ್ಮಿಕವಾಗಿ ಬಂದು ಪರಿಚಯಿಸಿಕೊಂಡಾಗ,ಅಪರಿಚಿತರಿಗೆ ದೇವಸ್ಥಾನದ ಮನೆಯ ಬೀಗದ ಕೀ ಕೊಡಬೇಕೆ ಬೇಡವೆ ಎಂಬ ಗೊಂದಲ ನಿವಾರಣೆಯ ಸಂದರ್ಭ ಮೊಕ್ತೇಸರರಾದ ರಾಜೀವ ಶೆಟ್ಟರನ್ನು ಸಂಪರ್ಕಿಸಲು ಸಾಧ್ಯ ಆದದ್ದು ಇದೇ ಹಸೈನಾರ್ ಸಾಯ್ಬ್ರ ಮನೆಯ ಸ್ಥಿರದೂರವಾಣಿ.
            ಈ ಅಯೂಬ್ ಶೆಟ್ರಕಟ್ಟೆ ಎಂಬ ಸಾಬರ ಹುಡುಗ,ಇಸ್ಲಾಂ ಧರ್ಮದ ಹುಡುಗ ಶೆಟ್ರಕಟ್ಟೆ ಅರಮ ದೇವಸ್ಥಾನದ  ಜಾತ್ರೆ,ದೀಪೋತ್ಸವ,ಶಿವರಾತ್ರಿ ಭಜನೆ,ಮಾರಿಸಮಾರಾಧನೆ ಎಲ್ಲದರಲ್ಲು ತನ್ನ ಹಿಂದು ಗೆಳೆಯರೊಡನೆ ಸಕ್ರಿಯ.ತೊಳೆಯುವುದರಿಂದ ಹಿಡಿದು ಬಡಿಸುವ ತನಕ.ಅರಮ ಕ್ರಿಕೆಟ್ ಕ್ಲಬ್‌ನ ಪರವಾಗಿ ಆಡಲು,ಅರಮ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಸಕ್ರಿಯನಾಗಲು ಎಂದೂ ಆತನ ಧರ್ಮ ಅಡ್ಡ ಬಂದಿಲ್ಲ.ಹಿಂದೂ ಧರ್ಮ ಕೂಡ ಅಡ್ಡಬಂದದ್ದಿಲ್ಲ 
            ಇದು ದೇವಸ್ಥಾನದ ಜತೆಗಿನ ಆ ಗೆಳೆಯನ ಹೊಕ್ಕುಬಳಕೆಯ ಕತೆಯಾದರೆ,ಇದೆ ತೆರನಾದ ಕತೆ ಸ್ಥಳೀಯ ಹಿಂದು ಗೆಳೆಯರ ಮನೆಗಳ ಮದುವೆ ಇ. ಸಂದರ್ಭದಲ್ಲು ಆತ ಸಹಾಯಕನೇ.
          ಈ ಜೈನುದ್ದೀನ್‌ನ ಅಣ್ಣ ಕುಂಂಞಿಮೋನು ತನ್ನ  ಟೈಲರ್ ವೃತ್ತಿಯನ್ನು ತೊಡಗಿದ , ತನ್ಧ ತಂದೆಯ ಅಂಗಡಿ ನಡೆಸಿದ ದಿನಗಳಲ್ಲಿ ,ಗಂಡುಹುಡುಗರ ನಡುವಿನ ಎಲ್ಲ ಮಾತುಗಳನ್ನೂ ಹಂಚಿಕೊಳ್ಳುವಷ್ಟು  ಸ್ನೇಹಭಾಗ್ಯ ಆತನೊಡನೆ ಸಾಧ್ಯ ಆಗಿತ್ತು. 
          ಇಂತಹ ಹೊಕ್ಕುಬಳಕೆಯ ಹೊಕ್ಕುಳಬಳ್ಳಿಯಂತಹ ಬಂಧದ ಹುಡುಗರ ತಂದೆ ತಾಯಿ ಕುಂದಾಪುರದ ಸೇತುವೆಯ ಮೇಲೆ,ರಿಕ್ಷಾ ಅಪಘಾತಕ್ಕೆ ಸಿಲುಕಿ,ಆಕಸ್ಮಿಕವಾಗಿ ಕಳೆದುಹೋದಾಗ ಕಣ್ಣುಗಳನ್ನು ಹನಿಗೂಡಿಸಿಕೊಳ್ಳದ ಮನಸ್ಸುಗಳೇ ಇರಲಿಲ್ಲ,ಸುತ್ತಲಿನ ನಾಲ್ಕೂರುಗಳಲ್ಲಿ.
       ಹೊಕ್ಕುಬಳಕೆಯ ಕತೆಗಳು ಕೋಟ್ಯಂತರ.
ಬಿರುಕು ಬಿಡಿಸಲು ಕಟ್ಟಿದ ಕತೆಗಳಿಗೆ ಎದುರಾಗಿ ನಾವು ಇಂತಹ ಕೋಟ್ಯಂತರ ಚಿತ್ರಗಳನ್ನು ಜನಮನ ಅನುಭಾವಿಸುವ ಹದವನ್ನು ಕಟ್ಟಿಕೊಡುವ.
      ~ತಿಮ್ಮಪ್ನ ಗುಲ್ವಾಡಿ.

#ಸೌಹಾರ್ಧ_ಕಥನ
#ಸಹಬಾಳ್ವೆಯ_ಬದುಕು

೩೦.

ಬೊಳುವಾರರ #ಉಮ್ಮಾ, ಮತ್ತು ನಾನೆಂಬ #ಮುತ್ತುಪ್ಪಾಡಿಯ ಮಾಣಿ.

ಕನ್ನಡದ ಕತೆಗಳನ್ನು ಅರಿವು ಬಂದಾಗಿನಿಂದ ಓದುತ್ತಿದ್ದ ನನಗೆ ಮನದಲ್ಲಿ ಅಚ್ಚಳಿಯದೇ ಉಳಿದ ಹೆಸರು ಬೊಳುವಾರು ಮಹಮ್ಮದ್ ಕುಂಞ ಯವರದು. ಮುಸ್ಲಿಂ ಸಂವೇದನೆಗೆ ಹೆಚ್ಚು ನಿಷ್ಠರಾದ ಫಕೀರ್ ಮಹಮ್ಮದ್ ಕಟ್ಪಾಡಿಯವರಿಗಿಂತ ಬೊಳುವಾರರ ಕಥಾ ಲೋಕ ನನಗೆ ಸಹಜ ಆಪ್ತ. ಬಳ್ಳಾರಿ ಜಿಲ್ಲೆಯ ಬಿಸಿಲ ಬಯಲಲ್ಲಿ ಬೆಳೆದ ನನಗೆ, ಹಂಪಿಯನ್ನ ಅಂತರ್ಗತ ಭಾವಾವೇಷವಾಗಿ ಧರಿಸಿದ್ದ ನನಗೆ ಮೊದಲು ಮುಸ್ಲಿಂ ಎಂದರೆ ಬೇಸರವಿತ್ತೇನೋ. ಆದರೆ ನನ್ನಲ್ಲಿ ಆರ್ದ್ರ ಭಾವ ಮೂಡಿಸಿದ್ದ ಮೊಹರಂ ಮತ್ತು ಚೋಂಗಿ, ಬಳ್ಳಾರಿ ನೆಲದವರೇ ಆದ ಮುಸ್ಲಿಮರು ಮುಸ್ಲಿಂ ಒಳ ಜಗತ್ತಿನ ಬಗ್ಗೆ ಕುತೂಹಲ ಮೂಡಿಸಿದ್ದರು. ಆಗ ನನ್ನ ಕೌತುಕ ತಣಿಸಿದವರು ಬೊಳುವಾರರು.

ಕರಸೇವೆ ದೇಶದೆಲ್ಲೆಡೆ ಸದ್ದು ಮೂಡಿಸಿದ್ದ ದಿನಗಳಲ್ಲಿ ಬೊಳುವಾರರ "ಒಂದು ತುಂಡು ಗೋಡೆ" ನನಗೆ ನೈಜತೆಯನ್ನು ಪರಿಚಯಿಸಿತ್ತು. ಅವರು "ಆಕಾಶಕ್ಕೆ ನೀಲಿ ಪರದೆ" ಸರಿಸಿ, ಜನ್ನತ್ ನ ತುಣುಕೊಂದ ತೋರಿಸಿದ್ದರು. #ಮುತ್ತುಪ್ಪಾಡಿ ಬೊಳುವಾರರ ಕಥಾ ಭಿತ್ತಿ ಅಷ್ಟೇ ಅಲ್ಲ, ಅದು ನನ್ನೂರು!

ಕಥನ ಕುತೂಹಲಿ ಆದ ನಾನು ಕತೆಗಳ ಸಾಂಸ್ಕೃತಿಕ ಸ್ವರೂಪಗಳ ಬಗ್ಗೆ ಪಿಹೆಚ್ಡಿ ಮಾಡುವಾಗ ಆಯ್ದ ಸಮಕಾಲೀನ ಐವರು ಕತೆಗಾರರಲ್ಲಿ ಬೊಳುವಾರರು ಮೊದಲಿಗರು. ಅವರ ಕತೆಗಳ ಮುಸ್ಲಿಂ ಸಾಂಸ್ಕೃತಿಕ ಪರಿಕಲ್ಪನೆ ಅರಿಯಲು ನಾನು ಓದಿದ ಪೂರಕ ಪಠ್ಯ ಒಂದೆರಡಲ್ಲ. ಅವರು "ಓದಿರಿ" ಎಂದರು. ನಾನು  ಇದ್ದತ್ ಅಖಿರತ್  ಅರಿಯಲು ಗರುಡ ಪುರಾಣವನ್ನು, ಕನ್ನಡದಲ್ಲಿ ಲಭ್ಯವಿರುವ ಕುರಾನನ್ನು ಓದಿದೆ. ಅವರು "ಸ್ವಾತಂತ್ರ್ಯದ ಓಟ" ಎಂದರು. ನಾನು ಮುತ್ತುಪ್ಪಾಡಿಯ ಮೂಲೆ ಮೂಲೆ ಸುತ್ತಿದ್ದೆ!!

ಈಗ ಅವರು "ಉಮ್ಮಾ" ಬರೆದು ತಾಯ್ತನ ಪರಿಚಯಿಸುತ್ತಿದ್ದಾರೆ. ಇವತ್ತು ಅವರ ಕಾದಂಬರಿಯ ಬಿಡುಗಡೆ ಮತ್ತು ಸಂವಾದ ದಾವಣಗೆರೆಯಲ್ಲಿತ್ತು. ನಾನು ರಜೆ ಹಾಕಿ ತುಮಕೂರಿಗೆ ಹೊರಟವನು, ಕೊಂಚ ಹೊತ್ತಾದರೂ ಕಣ್ತುಂಬಿಕೊಳ್ಳಲು ಭವನಕ್ಕೆ ಹೋಗಿದ್ದೆ. ಸಮಾರಂಭದ ಪಟ ತೆಗೆದು ಬೊಳುವಾರರಿಗೇ ವಾಟ್ಸಪ್ಪಿಸಿದ್ದೆ. ಅವರು "ಎಲ್ಲಿದ್ದೀರಿ?" ಎಂದು ಕೇಳುವಷ್ಟರಲ್ಲಿ ಪೀರನ ಕೈ ಕುಲುಕಿ, ಕಲೀಂ ಬಾಷಾರಿಗೆ ಮುಖ ತೋರಿಸಿ ಬಸ್ ನಲ್ಲಿದ್ದೆ!

#ಉಮ್ಮಾ ರ ತಾಯ್ತನ ಹೊಂದಿರುವ ಬೊಳುವಾರರು ಈ ಮುತ್ತುಪ್ಪಾಡಿಯ ಮಾಣಿಯನ್ನು ಪ್ರೀತಿಯಿಂದ ಮನ್ನಿಸಲಿ.

೩೧.

ಆತ್ಮೀಯ ಲೇಖಕಿ  Sudha Adukal ಅವರ 'ಸಾಮರಸ್ಯ ದ ತುಣುಕು ಕಥನ' ಅಭಿಯಾನದ ಸಲಹೆ ಸ್ವೀಕರಿಸುತ್ತ...

ಬಂಧುತ್ವ,ಭಾಷೆ ಮತ್ತು ಸಾಮಾಜಿಕರಣ ಇವು ಮೂರು ಮಾನವೀಯತೆಯ ಪ್ರಭಲವಾದ ಅಸ್ತ್ರಗಳು.ಈ ಮೂರು ವಿಷಯಗಳ ನಡುವೆ ಒಂದು ಭೇದ ಬಂದ್ರೂ ಅದೊಂದು ಅರೆಸಾಮಾಜೀಕರಣದ ದೊಡ್ಡಿ ಎನಿಸಿಕೊಳ್ಳುವುದು.
ಇಲ್ಲಿ ಯಾವುದೇ ಒಂದು ಸಮಾಜವನ್ನು ಕಟ್ಟಲು,ಗುಬ್ಬಿ ಗೂಡು ಕಟ್ಟಿರುವಂತೆ,ಗರಿಕೆಗಳನ್ನು ಜೋಡಿಸಿದಂತೆ ಅಲ್ಲ.ಬಂಧುತ್ವ,ಭ್ರಾತೃತ್ವದ ಆಧಾರದ ಮೇಲೆ ಸಮಾಜ ನಿರ್ಮಾಣದ ಕೆಲಸ ಸುಲಭದ್ದಾಗಿರುವುದಿಲ್ಲ.Humanity ಎನ್ನುವುದು ಪಾದರಸದಂತಿರುವ ವಿಕಾಸದ ಒಂದು ಜಾಲ.

        ಇಂತಹ ಸಾಮರಸ್ಯ,  ಮಾನವಪ್ರೇಮ ಉದಯಿಸುವ ನನ್ನೂರಿನ ಜನರೊಂದಿಗಿನ ಒಡನಾಟದ ತುಣುಕುಗಳನ್ನು ಹಂಚಿಕೊಳ್ಳುವ...

       ಚಿಕ್ಕಂದಿನಿಂದಲೂ ನಾನು ಮುಸ್ಲಿಂ,ಜೈನ್ ರೊಂದಿಗೆ ಬೆಳೆದುಕೊಂಡು ಬಂದವನು.ನನ್ನ ಜಗುಲಿಯ ಮೇಲೆ ಅಲ್ಲಾ ಅಲಾಯಿಯಾಡುತ್ತಿದ್ದನು.ಜೈನರ ದೇವರ ಮನೆಯಲ್ಲಿ ವೆಂಕಟೇಶ್ವರ,ರಾಘವೇಂದ್ರರು ಮಂಟಪ ಹಾಕುತ್ತಿದ್ದರು. ಜೈನರಂತೂ ಬಿಡಿ ಅವರು ನನ್ನೊಳಗಿನ ಆತ್ಮಸಖರು ಆಗಿದ್ದರು
ಮುಸಲರೊಂದಿಗೆ ಬೆಳೆದದ್ದು,ಅವರೊಂದಿಗಿನ ಸ್ನೇಹ ,ಒಡನಾಟ,ಪ್ರೀತಿ,ಪ್ರೇಮ,ಮೋಹ,ಮೋಜು ಮತ್ತು ಸಂಬಂಧಗಳು ಹೀಗೆ ಎಲ್ಲವನ್ನು ಹಂಚಿಕೊಂಡು ಬೆಳೆದ ನೆನಪುಗಳು ಮಾಸದೆ ಹಾಗೇ ಉಳಿದುಕೊಂಡಿವೆ.

       ಒಂದು ಬಳ್ಳಿ ಬೆಳೆದು ಹೂ ಬಿಟ್ಟಾಗ,ಸಸಿ ಬೆಳೆದು ಫಲ ಕೊಟ್ಟಾಗ ಆಗ ನಮಗೆ ಕಾಣ ಸಿಗುವುದು ಹೂ,ಹಣ್ಣು ,ಕಾಯಿ,ಫಲಗಳು ಮಾತ್ರ.ಆದರೆ ಬೀಜ ,ಬೇರು,ನೀರು,ಗಾಳಿ,ಒಲವಿನ ಬಾಂಧವ್ಯ ಇದಾವುದು ಕಾಣಸಿಗದು.ಆದರೆ ನೈಜವಾಗಿ ನಾವು ಬೆಳೆದು ಬಂದ ದಾರಿ,ಸಾಂಸ್ಕೃತಿಕರಣ,ಸಾಮಾಜಿಕರಣದ ಹೊಳವಿನೊಂದಿಗೆ ಬದುಕುವುದೇ ಮಾನವೀಯತೆ.

      ಬಾಲ್ಯದ ದಿನಗಳನ್ನು ಕಳೆದ ನನ್ನೂರಲ್ಲಿರುವುದು ಕೇವಲ ನಾಲ್ಕೇ ನಾಲ್ಕು ಮುಸ್ಲಿಂ ಮನೆಗಳು.ಅದರಲ್ಲಿರುವ ಎರಡು ಮನೆಗಳು ನಮ್ಮ ಅಂಗಳದೊಂದಿಗೆ ಭ್ರಾತೃತ್ವದ ಅಂಕುರವಿರಿಸಿಕೊಂಡಿದ್ದವು.ನಮ್ಮನಮ್ಮ ಮನೆಗಳಲ್ಲಿ ಯಾವುದೇ ತರಹದ ಹಬ್ಬ ಹರಿದಿನಗಳೇ ಇರಲಿ,ನಾವೆಲ್ಲರೂ ಖುಷಿಯಿಂದ ಆಚರಿಸುತ್ತಿದ್ದೇವು. ನಾವು ಎಷ್ಟೊಂದು ಪ್ರಾಥಮಿಕ ಸಂಬಂಧದ ವಲಯವನ್ನು ನಿರ್ಮಿಸಿಕೊಂಡಿದ್ದೇವೆ ಅಂದ್ರೆ,ನನ್ನೂರಿನ ದಾವಲಸಾಬನು, ದೀಪಾವಳಿಯಲ್ಲಿ ಆರತಿ ಬೆಳಗಿಸಿಕೊಂಡು ಹಣಿಗೆ ತಿಲಕವಿಟ್ಟುಕೊಳ್ಳುತ್ತಿದ್ದ ಮತ್ತು ಹೋಳಿಹುಣ್ಣಿಮೆಯಲ್ಲಿ ಹೆಣವಾಗುತ್ತಿದ್ದ.ಓಣಿಯ ಮುಸ್ಲಿಂ ಗೆಳೆಯರು ಅಷ್ಟೇ ಅವರಿಗೆ ಮುಂಜಿ ಲಕ್ಷಣಗಿಂತಲೂ ಉಡದಾರ,ಕುಂಕುಮಗಳೇ ಜಾಸ್ತಿ ಎದ್ದು ಕಾಣುತ್ತಿದ್ದವು.(ಇದಕ್ಕೆ ಕಾರಣ ಹುಡುಕುವಷ್ಟು ಕೆಟ್ಟ ಮನಸ್ಥಿತಿ ಆಗ ನಮ್ಮೂರಲ್ಲಿ ಯಾರಲ್ಲಿಯೂ ಇರಲಿಲ್ಲ)
ನಾವುಗಳು ಅಷ್ಟೆ,ರಮ್ದಾನ್ ಹಬ್ಬ,ಮೊಹರಂ ದೇವರು ಕೂಡಿಸುವಲ್ಲಿ,ಆಲಾಯಿ ಆಡುವಲ್ಲಿ ನಮ್ಮದೇ ಜಾಸ್ತಿ ದರಬಾರು.ಕಾರುಬಾರು. ನಾವೂಗಳೆ ಕೂಡಿಕೊಂಡು ಮುಸ್ಲಿಂರಿಗೆ ಅಲಾಯಿ ಸ್ಟೇಪ್ ಹೇಳಿ ಕೊಡುತ್ತಿದ್ದೇವು.
ಊರಲ್ಲಿ ಅವರು ನಮಗೆ ಸೋದರ ಮಾವಂದಿರು,ಅತ್ತೆಯರು,ಅತ್ತೆಯ ಮಕ್ಕಳು ಹೀಗೆಯೇ ಆಗಿರುತ್ತಿದ್ದರು.
ಕರುಳಬಳ್ಳಿ,ರಕ್ತಹಂಚಿಕೊಂಡು ಜನಿಸಿದವರಿಗಿಂತಲೂ ಒಂದಿಂಚು ಹೆಚ್ವಿನ ಸಂಬಂಧವೇ ಬೆಸೆದುಕೊಂಡಿದ್ದೇವು.

     ನಮ್ಮೂರಿಗೆ ನಮಾಜು ಮಾಡುವ ದರ್ಗಾ,ನಮಾಜ್ ಕಲಿಸುವ ಬಿಹಾರದ ಮಕ್ತುಮ್ ಬರುವಗಿಂತ ಮುಂಚೆ ಲಿಂಗಯ್ಯ,ಹನುಮಪ್ಪ,ಕಾಳಿ,ಹಿರೊಡ್ಯ ಮತ್ತು ರೂಗಿಸಿದ್ದೇಶ್ವರ ಇವು ನಮ್ಮೂರಿನ ದೇವರುಗಳು.ಈ ದೇವರುಗಳ ಮೇಲೆ ನಮಗಿಂತಲೂ ಅತಿಯಾದ ಭಕ್ತಿ,ಶ್ರದ್ದೆ ಇದ್ದಿದ್ದು ಮುಸ್ಲಿಂರಿಗೇ.ಐಗೋಳ ಬುಡ್ಡೇಸಾಬ,ಕುರುಬರ ಅಮೀನಸಾಬ,ಸೌಕಾರ್ ಪೀರಸಾಬ್,ತಳ್ವಾರ ನಬಿಸಾಬ ಹೀಗೆ ಅವರು ಪ್ರಸಿದ್ದರಾಗಿದ್ದರು.ಊರಿನ ಆ ನಾಲ್ಕು ದೇವರ ಗುಡಿಯ ಭಜನಾಮಂಡಳಿಯಲ್ಲಿ ಪ್ರಧಾನರಾಗಿ ಭಾಗವಹಿಸುತ್ತಿದ್ದರು.
ನಮಗೂ ಅಷ್ಟೇ ಹೊಸದಾಗಿ ಬಂದ ಮಸೂತಿ(ಮಸೀದಿ) ಯೊಳಗೆ ನಮಾಜು ಮಾಡೂದಂದ್ರ ಏನೋ ಕ್ಯೂರಿಯಾಸಿಟಿ...

        #ರಸೂಲಮ್ ಅಜ್ಜಿ ಹೇಳಿದ #ಉಡದಾರ ಕತೆ:
ಆಗ ರಜ್ಜಾಕಾರರ ಹಾವಳಿ.ಹಿಂದೂ -ಮುಸಲರ ಗಲಾಟೆ ಜೋರಾದ ಸಮಯವಂತೆ.!ಮುಸ್ಲಿಂರಿಗೆ ಕಂಡಕಂಡಲ್ಲಿ ಹೊಡೆಯುವುದು,ಊರ ಬಿಟ್ಟು ಹೊರಹಾಕುವುದು ಹೀಗೆ ನಡೆದಿತ್ತಂತೆ.!ಹಿಂದೂ ಸೈನ್ಯ ಕಟ್ಟಿದ ದುಮ್ಮದ್ರಿ ಶರಣಗೌಡನ ಬಟಾಲಿಯನ್ ದ ಸದಸ್ಯನಾಗಿದ್ದನಂತೆ ನಮ್ಮ ಅಜ್ಜ.!
ನಮ್ಮೂರಲ್ಲಿಯೂ ಮುಸಲ್ಮಾನರಿಗೆ ಗ್ರಾಮದಿಂದ ಹೊರಹಾಕುವ ಸಂದರ್ಭ ಬಂದಾಗ ಅವರ ಕಣ್ಣು ತಪ್ಪಿಸಿ ಮುಸ್ಲಿಂರೆಲ್ಲರಿಗು ಉಡದಾರ ಕಟ್ಟಿ,ಕುಂಕುಮ ಲೇಪಿಸಿ ನಮ್ಮ ಮನೆಯಲ್ಲಿರಿಸಿಕೊಂಡಿದ್ದನಂತೆ.!

       ಅಷ್ಟೊಂದು ಸಾಮರಸ್ಯ ಕ್ಕೆ ನಮ್ಮೂರು ಹೆಸರಾಗಿತ್ತು.ಆದರೆ ಇಂದು ಬಸ್ಸುಗಳು,ಸಮಯ ನುಂಗುವ ತಂತ್ರಜ್ಞಾನ ಗಳು,ಕೆಲವು ಹೊಸಹೊಸ ದೇವರು,ಪೀರಾಗಳು,ಜೊತೆಗೆ ಬದಲಾದ ಮನಸ್ಥಿತಿ ಗಳು ಊರು ತಲುಪಿದ ಕಾರಣ.....
#ಬಸಯ್ಯ ಜುಟ್ಟು ಬಿಟ್ಟು ದುರಂಕಾರಿಯಾದ...
#ಹುಷೇನಿ ಗಡ್ಡ ಬಿಟ್ಟು ಕ್ರೂರಿಯಾದ....
   ಹೀಗೆ ಒಲವಿನ ದುಡಿತ ಕಳೆದುಕೊಂಡ ನನ್ನೂರವೂ ಮುಖಾಮುಖಿ ಸಂಬಂಧ ಸಾಧ್ಯವಿಲ್ಲದೆ ಅನೀತಿ ,ಅಭಿಮಾನ ಶೂನ್ಯಗೋಪುರದಲ್ಲೆ ಮರೆಯಾಗುತ್ತಿದೆ.

        -ದೇವು ಮಾಕೊಂಡ

೩೨.

ಸುಮಾರು ೩೯ ವರ್ಷಗಳ ಹಿಂದೆ. ಬೆಂಗಳೂರಿನ ಮಾಗಡಿ ರಸ್ತೆಯ ೧೦ನೇ ಕ್ರಾಸ್’ನಲ್ಲಿ ಒಂದು ವಠಾರ. ರೈಲ್ವೇ ಗೇಟ್ ಹತ್ತಿರವಿದ್ದ ಆ ವಠಾರದಲ್ಲಿ ಪುಟ್ಟ ಮಗುವಿನ ಸಮೇತ ಬಡ ದಂಪತಿಗಳು. ಗಂಡ ಬೆಳಿಗ್ಗೆಯೇ ಸೈಕಲೇರಿ ಸುಮಾರು ಐದಾರು ಮೈಲಿ ಇರುವ ಪೀಣ್ಯ ಹತ್ತಿರದ ಯಾವುದೋ ಫ್ಯಾಕ್ಟರಿಗೆ ಕೆಲಸಕ್ಕೆಂದು ಹೊರಟುಬಿಟ್ಟರೆ ಮನೆಯಲ್ಲಿ ಆ ಪುಟ್ಟ ಮಗು ಮತ್ತು ತಾಯಿ ಮಾತ್ರವೇ. ಸಂಸಾರಕ್ಕೆ ಸಹಾಯವಾಗಲೆಂದು ಆ ತಾಯಿ ಕಡ್ಡಿ ಮಾಡೋದು ಅಥವಾ ಬತ್ತಿ ಮಾಡೋದು ಕಲಿತು ಮನೆಗೆಲಸವೆಲ್ಲಾ ಮುಗಿದ ಮೇಲೆ ವಠಾರದ ಇತರ ಹೆಂಗಸರ ಜೊತೆ ಕೂತು ಕಡ್ಡಿ ಮಾಡುತ್ತಿದ್ದರು. (ಆಗ ಅಗರಬತ್ತಿ ತಯಾರು ಮಾಡುವುದಕ್ಕೆ ಕಡ್ಡಿ ಮಾಡುವುದು ಎನ್ನುತ್ತಿದ್ದರು) ಒಂದು ಸಾವಿರ ಅಗರಬತ್ತಿ ಮಾಡಿದರೆ ಮೂರೋ ನಾಲ್ಕೋ ರೂಪಾಯಿ ಸಿಗುತ್ತಿತ್ತು.
          ಹೀಗೆ ಒಂದು ಮಟ ಮಟ ಮಧ್ಯಾಹ್ನ ಮಗುವನ್ನು ಮಲಗಿಸಿ, ಕಡ್ಡಿ ಮಾಡುವಾಗ, ಆ ಮಗು ಎದ್ದು ಅಂಬೆಗಾಲಿಡುತ್ತಾ ಹೊರಗೆ ಬಂದಿದೆ. (Baby's day out ನೆನಪಿಸಿಕೊಳ್ಳಿ) ಹೊರಗೆ ಬಂದರೆ ಎಲ್ಲರೂ ಅವರವರ ಮನೆಯ ಕಷ್ಟಗಳನ್ನು ಹೇಳಿಕೊಳ್ಳುತ್ತಾ ಕೇಳಿಸಿಕೊಳ್ಳುತ್ತಾ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಆ ಮಗು ವಠಾರದಿಂದ ಆಚೆ ಹೋಗಿ ಮೆಟ್ಟಿಲಿಳಿದು ರಸ್ತೆಯನ್ನು ದಾಟಿ, ರೈಲ್ವೇ ಗೇಟನ್ನು ದಾಟಿ ಮುಂದೆ ಹೋಗಿದೆ. ಕೆಲವು ಸಮಯದ ನಂತರ ತಾಯಿ ಮನೆಯೊಳಗೆ ನೋಡಿದರೆ ಮಗು ಇಲ್ಲ. ಆ ತಾಯಿಯ ಎದೆ ಧಸಕ್ಕೆಂದಿತು. ತಕ್ಷಣವೇ ಕೆಲಸವನ್ನೆಲ್ಲಾ ಬಿಟ್ಟು ಎಲ್ಲರೂ ಮಗು ಹುಡುಕಲು ಶುರು ಮಾಡಿದ್ದಾರೆ. ಸಂಜೆ ಐದರವರೆಗೂ ಹುಡುಕಿದರೂ ಮಗು ಸಿಕ್ಕಿಲ್ಲ. ತಾಯಿಗೆ ಮಗು ಸಿಕ್ಕಿಲ್ಲವೆಂಬ ದುಃಖ ಒಂದು ಕಡೆಯಾದರೆ ಗಂಡನ ಕೋಪ ಎದುರಿಸುವುದು ಹೇಗೆಂಬ ಭಯ. ಊಟವನ್ನು ಮಾಡದೇ ಹುಡುಕಿದರೂ ಏನೂ ಪ್ರಯೋಜನವಾಗಿಲ್ಲ. ಕೊನೆಗೆ ಆ ವಠಾರದ ಒಬ್ಬ ಹುಡುಗನಿಗೆ ರೈಲ್ವೇ ಗೇಟ್’ನ ಆಚೆ ಆ ಮಗು ಒಬ್ಬರು ಮುಸಲ್ಮಾನ ದಂಪತಿಗಳು ಹೊರಗಡೆ ತೊಡೆಯ ಮೇಲೆ ಕೂತು ಅಳುತ್ತಿರುವುದು ಕಂಡಿದೆ. ತಕ್ಷಣವೇ ಆ ಹುಡುಗ, ಇದು ನಮ್ಮ ವಠಾರದ ಮಗು ಕೊಡಿ ಎಂದು ಕೇಳಿದ್ದಾನೆ. ಅವರು ಅನುಮಾನದಿಂದ ಸಾಧ್ಯವಿಲ್ಲ, ಆ ಮಗುವಿನ ತಂದೆ ತಾಯಿ ಬಂದರೆ ಮಾತ್ರ ಕೊಡುತ್ತೇವೆ ಎಂದು ಹೇಳಿದ್ದಾರೆ. ಆ ಹುಡುಗ ವಠಾರಕ್ಕೆ ದೌಡಾಯಿಸಿ ಮಗು ಸಿಕ್ಕಿದೆಯೆಂದು ‘ತುರುಕ’ರ ಮನೆಯಲ್ಲಿ ಇದೆಯೆಂದು ಒಂದೇ ಉಸಿರಿನಲ್ಲಿ ಹೇಳಿದ್ದಾನೆ. ಅಷ್ಟರಲ್ಲಿ ಗಂಡನೂ ಕೆಲಸದಿಂದ ಬಂದು ವಿಷಯ ತಿಳಿದು ಮಗನನ್ನು ಹುಡುಕಲು ಶುರು ಮಾಡಿದ್ದಾರೆ. ವಿಷಯ ತಿಳಿದು ಈಡೀ ವಠಾರದವರೆಲ್ಲಾ ಆ ಮುಸಲ್ಮಾನ ದಂಪತಿಗಳಿರುವ ಗುಡಿಸಲಿನ ಬಳಿ ಹೋಗಿದ್ದಾರೆ. ತಂದೆತಾಯಿಯನ್ನು ನೋಡಿದಾಕ್ಷಣವೇ ಆ ಮಗು ಅಳು ನಿಲ್ಲಿಸಿ ತಾಯಿಯ ಬಳಿ ಓಡಿಬಂದು ಅಪ್ಪಿದೆ. ಸಂತೋಷದಿಂದ ಮುಸಲ್ಮಾನ ದಂಪತಿಗಳು ಮಗುವನ್ನು ಒಪ್ಪಿಸಿ ಎಚ್ಚರಿಕೆಯಿಂದ ಇರುವಂತೆ ಹೇಳಿ ಕಳುಹಿಸಿದ್ದಾರೆ.
          ಈಗ ಹೇಳಿ ಎಲ್ಲಾ ಮುಸಲ್ಮಾನರು ಟೆರ್ರರಿಸ್ಟ್’ಗಳೇ? ಎಲ್ಲಾ ಮುಸಲ್ಮಾನರು ದೇಶದ್ರೋಹಿಗಳೇ? ಎಲ್ಲಾ ಮುಸಲ್ಮಾನರು ಕೆಟ್ಟವರೇ? ಹಾಗಾಗಿದ್ದಲ್ಲಿ ಆ ಹುಡುಗ ಬೆಳೆದು ಈ ಸತ್ಯಘಟನೆ ಬರೆಯುತ್ತಿರಲಿಲ್ಲ. ಈ ದೇಶದಲ್ಲಿ ಹುಟ್ಟಿ ಬೆಳೆದ ಎಲ್ಲಾ ಧರ್ಮೀಯರು ನಮ್ಮೊಳಗೆ ಬೆರೆತವರು.
(ಒಂದು ವಾರದ ಹಿಂದೆ Sudha Adukal ಅವರು ನಮ್ಮನ್ನು ಒಡೆಯುವ ಭಾಷಣಗಳು ಮತ್ತು ವಾಟ್ಸಾಪ್ ಯುನಿವರ್ಸಿಟಿಯ ಸಂದೇಶಗಳು, ಸುದ್ದಿವಾಹಿನಿಗಳ ಪ್ರಚೋದನಾತ್ಮಕ ಸುದ್ಧಿಗಳು ಮತ್ತೆ ಸುನಾಮಿಯಂತೆ ಅಪ್ಪಳಿಸುವ ಮುನ್ನ ನಿಮ್ಮ ನಿಮ್ಮ ಬಾಲ್ಯದ ಅಥವಾ ನೆನಪಿನ ಸೌಹಾರ್ದ ಕಥನಗಳನ್ನು ಬರೆಯಿರಿ ಎಂದು ಕರೆ ಕೊಟ್ಟಿದ್ದರು. ಅದರ ಭಾಗವಾಗಿ ನನ್ನ ಬಾಲ್ಯದ ಒಂದು ತುಣುಕು. ಮುಂದಿನ ಪೀಳಿಗೆಯ ಸ್ಮೃತಿಯ ಭಾಗವಾಗಿಯಲ್ಲವಾದರೂ ಓದಿನ ಅನುಭವವಾಗಿ ಇದನ್ನು ತೆರೆದಿಟ್ಟಿದ್ದೇನೆ.)
ಯಾರನ್ನೂ ದೂರದಿರೋಣ, ಎಲ್ಲರನ್ನೂ ಪ್ರೀತಿಸೋಣ.

೩೩.

#ಸೌಹಾರ್ಧ_ಕಥನ
#ಸಹಬಾಳ್ವೆಯ_ಜೀವನ
ಸಾಕಿಯ ಮಧುಶಾಲೆ

ನಾನು ಕಲಬುರ್ಗಿಯವ, ನಮ್ಮ ಮನೆ ಹತ್ತಿರಾನೆ ಜಗತ್ಪ್ರಸಿದ್ಧ ಖ್ವಾಜಾ ಬಂದೆ ನವಾಜ್ ದರ್ಗಾ ಇದೆ, ಮತ್ತೆ ನಮ್ಮೂರಲ್ಲಿ ಶರಣಬಸವೇಶ್ವರರು ನೆಲೆಸಿದ್ದರಿಂದ ನಮ್ದು ಶರಣರ ನಾಡು, ಮುಂಚೆಯಿಂದಲೂ ನಮ್ಮಲ್ಲಿ ಹಿಂದೂ ಮುಸ್ಲಿಂ ಎಂಬ ಭಾವೈಕ್ಯತೆ ನಮ್ಮಲ್ಲಿ ಮೂಡುತ್ತಿರಲೇ ಇಲ್ಲ. ನಾವೆಲ್ಲರೂ ಮನುಷ್ಯರೇ ಎಂದು ಬಾಳುತ್ತಿರುವವರು ನಾವು. ನಮ್ಮಲ್ಲಿನ ಪ್ರತಿಯೊಂದು ಹಬ್ಬವು ಎಲ್ಲರು ಸೇರಿಯೇ ಆಚರಿಸುತ್ತಾ ಬಂದಿದ್ದೇವೆ. 

ಅಪ್ಪ ಚಿಕ್ಕಂದಿನಿಂದಲೂ ಬೆಳೆದ ವಾತಾವರಣ ಮುಸ್ಲಿಂ ಓಣಿಯೆ ಆದುದ್ದರಿಂದ, ಅಪ್ಪ ಉರ್ದು ತುಂಬಾ ಸಲೀಸಾಗಿ ಮಾತಾಡುತ್ತಿದ್ದರು, ಹಾಗಾಗಿ ಅವರಿಗೆ ಮುಸ್ಲಿಂ ಗೆಳೆಯರೇ ಜಾಸ್ತಿಯಾಗಿದ್ದರು. ನಮ್ಮಪ್ಪ ತನ್ನ ಸಹೋದರ/ಸಹೋದರಿಯರ ವಾತ್ಸಲ್ಯಕ್ಕಿಂತಲೂ ಅವರ ಮುಸ್ಲಿಂ ಸ್ನೇಹಿತರ ವಾತ್ಸಲ್ಯದಲ್ಲೇ ಬೆಳೆದವರು. ಹೀಗಾಗಿ ಅಪ್ಪನಿಗೆ ಸಂಬಂಧಿಕರ ನಂಟಿಗಿಂತ, ಸ್ನೇಹಿತರ ನಂಟೇ ಜಾಸ್ತಿ. ಚಿಕ್ಕಪ್ಪ/ದೊಡ್ಡಪ್ಪ ಇದೆ ಒಂದು ಸಲಿಗೆಯಾಗಿ ತಗೊಂಡು ಮನೆಯ ಹಿರಿಯರ ಆಸ್ತಿಯಲ್ಲಿ ಅಪ್ಪನಿಗೆ ಮೋಸವು ಮಾಡಿದ್ದುಂಟು. ಆದರೆ ನಮ್ಮಪ್ಪ ದೇವರ ಪ್ರತಿರೂಪ, ಯಾರ್ ಏನೇ ಅಂದರೂ ಒಂದು ಮಾತು ಎದುರಾಡದೆ, ನೀವೇ ದೊಡ್ಡವರು, ನೀವೇ ಒಳ್ಳೆಯವರೆಂದು ಹೇಳಿ ಅವರ ಒಳಿತನ್ನೇ ಬಯಸಿದರೆ ಹೊರತು ಯಾರ ಬಗ್ಗೆಯೂ ಕೆಟ್ಟದ್ದನ್ನು ಬಯಸಲೇ ಇಲ್ಲ. 

ಅಪ್ಪನ ಮದುವೆಯಾದ ಹೊಸತರಲ್ಲಿ ಅಪ್ಪನಿಗಾಗಿ ಸಹಾಯ ಮಾಡಿದ್ದು ಅಪ್ಪನ ಗೆಳೆಯ ಸಿಕಂದರ್ ಚಾಚಾ, ಹಾಲಿನ ಡೈರಿಯಲ್ಲಿ ಕೆಲಸ ಕೊಡಿಸಿ ಬಹುದೊಡ್ಡ ಉಪಕಾರ ಮಾಡಿದ್ದರಂತೆ. ಇವತ್ತಿಗೂ ಅಪ್ಪ ಸಿಕಂದರ್ ಚಾಚಾರನ್ನೇ ಸ್ವಂತ ಸಹೋದರನಿಗಿಂತಲೂ ಮಿಗಿಲಾಗಿ ಪ್ರೀತಿಸುತ್ತಾರೆ, ಅವರು ಅಷ್ಟೇ ಸಿದ್ದು(ನಮ್ಮಪ್ಪ) ತುಂಬಾ ಸಂಭಾವಿತ ಮತ್ತೆ ಪ್ರಾಮಾಣಿಕ ಎಂದು ಎಲ್ಲದರಲ್ಲೂ ಸಹಾಯ ಮಾಡುತ್ತಾ ಬಂದಿದ್ದಾರೆ, ಕಳೆದ  ಎರಡು ವರುಷದಿಂದ ಅವರಿಗೂ ಇವರಿಗೂ ಏನೋ ಮಾತಿನಲ್ಲಿ ಸ್ವಲ್ಪ ಏರುಪೇರಾದುದ್ದರಿಂದ ಸ್ವಲ್ಪ ಮಾತಾಡುತ್ತಿರಲಿಲ್ಲ, ಆದರೂ ಹೋದ ವರ್ಷ ಅವರ ಮಗಳ ಮದುವೆಗೆ ಕರೆದಿದ್ದರು, ನಾನು, ಅಮ್ಮ, ಅಪ್ಪ ಎಲ್ಲರೂ ಮದುವೆಗೆ ಹೋಗಿದ್ವಿ, ಯಾವುದಕ್ಕೂ ಬೇಸರಗೊಳ್ಳದೆ ಅವರ ಮನೆಯವರ ಹಾಗೆಯೇ ತಿಳಿದು ಉಪಚರಿಸಿದ್ದು ನಮಗೂ ತುಂಬಾ ಖುಷಿ ಕೊಟ್ಟಿತು. ಅಪ್ಪ ಮನೆಗೆ ಬಂದವರೇ ಕಣ್ಣಲ್ಲಿ ಒಂದೇ ಸಮ ನೀರು ಹಾಕಿದರು, ಸಿಕಂದರ್ ತುಂಬಾ ಒಳ್ಳೆಯವ ನಾನೇ ಏನೇನೋ ಅಂದೇ ಅಂತ ಬೇಸತ್ತಿದ್ದರು. ಆದರೆ ಒಂದೆರಡು ದಿನ ಕಳೆದಮೇಲೆ ಸಿಕಂದರ್ ಚಾಚಾ ಹಾಗೆ ಮಾರ್ಕೆಟ್ಗೆ ಬಂದಿದ್ದರಿಂದ ಮನೆಗೂ ಬಂದಿದ್ದರು. ಬಂದವರೆ ಸಿದ್ದು , ವೈನಿ ನೀವೆಲ್ಲಾ ಮದುವೆಗೆ ಬಂದಿದ್ದು ತುಂಬಾ ಖುಷಿ ಆಯ್ತು ಅಂತ ಹೇಳಿ ಚಹಾ ಕುಡಿಯುತ್ತ ಅಪ್ಪ ಮತ್ತೆ ಚಾಚಾ ಎಂದಿನಂತೆ ನಗುನಗುತ್ತಾ ಮಾತಾಡುತ್ತ ಮಾರ್ಕೆಟ್ ಕಡೆಗೆ ಹೋದರು.

ಥ್ಯಾಂಕ್ಯೂ Sudha Adukal ಮ್ಯಾಮ್.

- Sangamesh Sajjan

೩೪.

ಈ ಕರೋನ ಲಾಕ್ಡೌನ್ ಸಮಯದಲ್ಲಿ ಯಾರದ್ದೂ ಒಂದು ತಪ್ಪಿಂದ ಒಂದು ಸಮುದಾಯವನ್ನೆ ದ್ವೇಸಿಸಲಾಗುತ್ತಿದೆ ,ಆದರೆ ನನಗೆ ಇ ಸಮುದಾಯವನ್ನು ಪ್ರೀತಿಸಲು ಇ ಕುಟುಂಬ ತೋರಿದ ಪ್ರೀತಿಯೊಂದೆ ಸಾಕು.(ಆ ಘಟನೆಯನ್ನು ವಿರೋಧಿಸುತ್ತೇನೆ ಇಡೀ ಆ ಸಮುದಾಯವನ್ನಲ್ಲ),
ಲಾಕ್ಡೌನ್ ಸಂದರ್ಭದಲ್ಲಿ ನಾವು ಉಂಡುಕೊಂಡು ತಿನ್ಕೊಂಡು ಚೆನ್ನಾಗಿದೀವಿ ಅಂದ್ರೆ, ಇವರು ಹೊತ್ತು ಹೊತ್ತಿಗೂ ಮಾಡಿ ಹಾಕ್ತ ಇದ್ದ ಬಿಸಿ ಬಿಸಿ ಊಟ. ರಂಗಾಯಣದಲ್ಲಿ ಇದ್ದಗಲೂ ಇವರದೊಂದು ಪುಟ್ಟ ಕ್ಯಾಂಟೀನ್ನಲ್ಲಿಯೇ ಬೆಳಿಗ್ಗೆ ಮಧ್ಯಾಹ್ನ ಊಟ ತಿಂಡಿ,ರಾತ್ರೆ ಊಟ ಪಾರ್ಸಲ್ ತಗೊಂಡು ಹೋಗಿ ತಿಂತಾ ಇದ್ವಿ. 

ಲಾಕ್ಡೌನ್ ಟೈಮಲ್ಲಿ
ದಾರಿಯಲ್ಲಿ ಅವರ ಮನೆಗೆ ಹೊಗ್ತಾ ನ್ಯೂಸ್ ನಲ್ಲಿ ಮುಸ್ಲಿಂ ಸಮುದಾಯದ ಮೇಲೆ ಆರೋಪ ಹೋರಿಸಿ ಇಡಿ ಸಮುದಾಯವನ್ನೆ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ,ಬೀದಿಯಲ್ಲಿ ತರಕಾರಿ ಮಾರೋಕೆ ಹೋದ ಮುಸ್ಲಿಂಮರ ಹತ್ತಿರ ತರಕಾರಿ ಯಾರೂ ತಗೋತಾ ಇಲ್ಲ, ಮುಸ್ಲಿಂಮರು ಕರೋನ ಹಬ್ಬಲಿ ಅಂತ ಹಣ್ಣುಗಳಿಗೆ ಉಗುಳನ್ನು ಸವರ್ತಾ ಇದಾರೆ ಅನ್ನೋ ಸುದ್ಧಿನ ಅರಗಿಸಿ ಕೊಳೋದೆ ಕಷ್ಟ ಆಗ್ತಿತ್ತು.
ಅಷ್ಟರಲ್ಲೇ ಅವರ ಮನೆ ಬರೋದು ಊಟ ಎಲ್ಲಾ ತಗೊಂಡು ಆಂಕಲ್ ಬಿಲ್ ಜಾಸ್ತಿ ಆಗಿದೆ ,ಎಟಿಮ್ ಹೋಗೋಕೆ ಆಗ್ತಿಲ್ಲ ಅಂದ್ರೆ, "ನೀವು ದುಡ್ಡು ಕೋಡೋದೆ ಬೇಡ ನಮ್ಮ ಮಕ್ಕಳಿದ್ದ ಹಾಗೆ ನಮ್ಮ ಮಕ್ಕಳಿಗೆ ಹಾಕಲ್ವ, ದುಡ್ಡು ತಗೊಂಡು ಎನ್ಮಡ್ತಿರ ಮನುಷ್ಯತ್ವ ಮುಖ್ಯ,ದೇವರೊಬ್ಬ ಇದಾನೆ ಕೊಡೋದನ್ನ ಕೊಡ್ತಾನೆ ,ಇವಾಗ ಪರಿಸ್ಥಿತಿ ಸರಿ ಇಲ್ಲ ಬೇರೆಯೆಲ್ಲಿ ಹೋಗೋಕಾಗತ್ತೆ ಎನೂ ಚಿಂತೆ ಮಾಡ್ಬೇಡಿ ಬನ್ನಿ ತಿನ್ನಿ " ಅಂದು ಊಟ ಹಾಕೋರು. 
ಇಡಿ ದೇಶಕ್ಕೆ ದೇಶವೇ ಲೂಟಿ ಹೋಡಿಯೋ ಯೋಚನೆಯಲ್ಲಿ ಇತ್ತು, ನಮಗೆ ಶಿವಮೊಗ್ಗ ಹವ್ಯಾಸಿ ಕಲಾವಿದರು ಪುಡ್ ಕಿಟ್ ಕೊಟ್ಟಿದ್ರು (ಹೆಸರು ಹೇಳೂ ಹಾಗಿಲ್ಲ ಅಂತ ಕರಾರಾಗಿದೆ,ಶಿವಮೊಗ್ಗದ ಕಲಾವಿದರಿಗೆ ಧನ್ಯವಾದಗಳು ) ಅದನ್ನು ಅವರಿಗೆ ಕೊಟ್ವಿ ಹದಿನೈದು ದಿನ ನಮ್ಮ ಹತ್ರ ದುಡ್ಡು ತಗೋಳದೆ ಮೂರು ಹೊತ್ತು ಅಡುಗೆ ಮಾಡಿ ಹಾಕಿದಾರೆ.
ಇಬ್ಬರಿಗೆ ಕೊಡೋದ್ರಲ್ಲಿ ಮೂರು ಜನ ಊಟ ಮಾಡ್ಬೋದು ಅಷ್ಟು ಊಟ ಕೊಡೋರು ,ನಾವು ಕೇಳಿದಾ ತಿಂಡಿ ,ಊಟ ಅವರ ಮನೇಲಿ ಚಿಕ್ಕನ್ ಮಾಡಿದಾಗ ಚಿಕ್ಕನ್, ಮೊಟ್ಟೆ ಮಾಡಿದಾಗ ಮೊಟ್ಟೆ, ಅವರು ತಿನ್ನೋಕೆ ಎನ್ಮಕೋಳ್ತಾರೂ ಅದನ್ನೇ ನಮಗೆ ಕೋಡೋದು ,ಆದರೂ ಅವರು ದುಡ್ಡು ತಗೋಳೋದು ಮುಂಚಿನಷ್ಟೇ ಇಪ್ಪತೈದ್ ರೂಪಾಯಿ ಅದೂ ನಮ್ಮ ಒತ್ತಾಯಕ್ಕೆ. 

ಅವರು ರಂಜಾನ್ ಉಪವಾಸದಲ್ಲಿ ಇದ್ದರೂ, ನಮಗೆ ಹೊತ್ತು ಹೊತ್ತಿಗೆ ಸರಿಯಾಗಿ ಅಡುಗೆ ಮಾಡಿ ಬಡಿಸ್ತಾ ಇದಾರೆ, ಬರಿ ಅಡುಗೆಯಲ್ಲ ಬಡಿಸ್ತಾ ಇದದ್ದು , ಮುನುಷ್ಯತ್ವವನ್ನು, ಸೌಹಾರ್ದತೆಯನ್ನ. 

ಅವರಲ್ಲಿ ಮನುಷ್ಯ ಪ್ರೀತಿ ಇಲ್ಲದೆ ಇದ್ದಿದ್ದರೆ ---
ಅವರು ಒಂದು ಸಲ ಕರೋನ ರೋಗ ಇದೆ ನೀವು ಬರ್ಬೇಡಿ, ನಮಗೂ ರೋಗ ಬಂದರೆ ಅಂತ ಹೇಳಿದ್ರೆ, 
ಅವರಲ್ಲಿ ಮಾನವಿಯ ಪ್ರೀತಿ ಇಲ್ಲದೆ, ಧರ್ಮದ ಮೇಲಿನ ಪ್ರೀತಿ ಇದ್ದಿದ್ದರೆ, ಯಾರೂ ಮಾಡಿದ ತಪ್ಪಿಗೆ ನಿಮ್ಮ ಹಿಂದೂಗಳು ನಮ್ಮ ಧರ್ಮಕ್ಕೆ ಅವಮಾನ ಮಾಡ್ತಿದಾರೆ, ಊಟ ಕೊಡಲ್ಲ ಅಂದಿದ್ರೆ. 

ಆ ಘಟನೆಯನ್ನು ಖಂಡಿಸಬೇಕಾಗಿದ್ದ ಮಾಧ್ಯಮಗಳು ಇಡಿ ಸಮುದಾಯದವನ್ನೆ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದು ಎಷ್ಟರ ಮಟ್ಟಿಗೆ ಸರಿ. 

ನಮ್ಮ ಜನಕ್ಕೆ ನಾವೆಲ್ಲ ಊರಿನಲ್ಲಿ ಒಟ್ಟಿಗೆ ಅಣ್ಣಾ ತಮ್ಮಂದಿರ ಹಾಗೆ ಬದುಕ್ತಾ ಇದೇವೆ, ಯಾರೂ ಎಲ್ಲೂ ಜಮಾತಿನಲ್ಲಿ ನಮಾಜ್ ಮಾಡಿದ್ದು ,ನಮ್ಮ ಜೋತೆ ಬದುಕ್ತಾ ಇರೋರನ್ನ ಯಾಕೆ ದ್ವೇಷಿನ ಬೇಕು,ಅನ್ನುವ ಮನುಷ್ಯತ್ವ ಬೇಡ್ವಾ .

ಹಾಗಾದ್ರೆ ಧರ್ಮ ಅಂದ್ರೆ ಯಾವುದು ಪೂಜೆ ಮಾಡೋದ, ನಮಾಜ್ ಮಾಡೋದ, ಮತ್ತೊಂದು ಧರ್ಮದ ಮೇಲೆ ಕತ್ತಿ ಮಸಿಯೋದ.

ಹಿಂದೂ ಮುಸ್ಲಿಂ ಕ್ರೈಸ್ತ ಎನೇ ಆಗಿರು 
ಮೊದಲು ಮಾನವನಾಗಿರು.

೩೫.
Sudha Adukal ಸೌಹಾರ್ದ ಕಥನಗಳನ್ನು ಪ್ರಸ್ತಾಪಿಸಿದ್ದರು. Kiran Bhat Honnavar ಕವಿತೆ ಓದಲು ಹೇಳಿದ್ದರು. ಆದರೆ  ಲಾಕ್'ಡೌನ್'ನ ಈ ಸಂದರ್ಭ ನನಗೆ  ಬಿಡುವನ್ನೇನೂ ನೀಡಲಿಲ್ಲ. ನಿತ್ಯದ ಕೃಷಿ , ಇತ್ತೀಚಿನ ವರ್ಷಗಳಲ್ಲಿ ಸಹ ಉದ್ಯೋಗವಾಗಿ ಸ್ವೀಕರಿಸಿರುವ ಡಿಟಿಎಚ್ ಕೆಲಸ, ಜೊತೆಗೆ ಗ್ರಾಮದ ಜನರಿಗೆ ಅಗತ್ಯ ಔಷಧ-ಗುಳಿಗೆ ಪೂರೈಸುವುದಕ್ಕಾಗಿನ ಓಡಾಟ, ಎಲ್ಲ ಸೇರಿ ಸಾಮಾನ್ಯ ದಿನಗಳಿಗಿಂತಲೂ ಹೆಚ್ಚು ಕಾರ್ಯನಿರತನಾಗಿಬಿಟ್ಟೆ. ಹೊರಗಡೆಯ ಓಡಾಟ ಸಾಮಾನ್ಯ ದಿನಗಳಿಗಿಂತ ಜಾಸ್ತಿಯೇ ಆಯಿತು! ಸಮಯದ ಹೊಂದಾಣಿಕೆಗಾಗಿ ಕೆಲ ದಿನ ಮಧ್ಯಾಹ್ನದ 
 ಊಟವನ್ನೂ 
 ರದ್ದುಗೊಳಿಸಬೇಕಾಯಿತು. 

ಸ್ನೇಹಿತರನೇಕರು ಓದಿದ,ಹಂಚಿಕೊಂಡ ಕಥೆ-ಕವಿತೆ ಇತ್ಯಾದಿಗಳನ್ನು  ಸರಿಯಾಗಿ ಗಮನಿಸಲು ಸಾಧ್ಯವಾಗಲಿಲ್ಲ. ನನ್ನ ಓದು-ಬರವಣಿಗೆಗೂ ಸಮಯವಿಲ್ಲವಾಯಿತು. ಎಲ್ಲರ ಬಿಡುವು ಕಂಡು ತುಸು 
 ಹೊಟ್ಟೆಕಿಚ್ಚಾಯಿತು.
 
ನನ್ನ ಓಡಾಟದ ಬಗ್ಗೆ ಕೆಲವರಿಂದ'ಅಪಾಯಕಾರಿ, ಅಗತ್ಯವಿರಲಿಲ್ಲ' ಎಂಬ ಅಭಿಪ್ರಾಯ ಬಂದರೆ ಕೆಲವರಿಂದ 'ಒಳ್ಳೆಯ ಕೆಲಸ 'ಎಂಬ ಶ್ಲಾಘನೆಯೂ  ಬಂತು. ನಿಜವಾಗಿ ನನಗೆ ರೋಗದ-ಜೀವದ ಭಯ ಅಷ್ಟೇನೂ ಇಲ್ಲವಾದರೂ ಒಂದು ಭಯ ಮಾತ್ರ ಒಳಗೊಳಗೆ ಕಾಡುತ್ತಲೇ ಇತ್ತು. ಅಕಾಸ್ಮಾತ್ ನನಗೆಲ್ಲಾದರೂ ರೋಗ ಅಂಟಿಕೊಂಡು ನನ್ನಿಂದ ಇತರರಿಗೆ ಹರಡಿದ ಸನ್ನಿವೇಶ ಉಂಟಾಗಿಬಿಟ್ಟರೆ ಎಂಬುದು. (ಹಾಗೇನಾದರೂ ಆಗಿಬಿಟ್ಟಿದ್ದರೆ ನನ್ನ ಓಡಾಟದ ಹಿನ್ನೆಲೆಯಲ್ಲಿ ಶಿರಸಿ ನಗರ ಸೇರಿದಂತೆ, ಅರ್ಧ ಶಿರಸಿ-ಸಿದ್ದಾಪುರ ತಾಲೂಕುಗಳನ್ನು
ಕ್ವಾರಂಟೈನ್'ನಲ್ಲಿಡಬೇಕಾಗುತ್ತಿತ್ತು! ಹಾಗೇನೂ ಆಗದೆ ಹಲವರ ಪರಿಶ್ರಮ ಮತ್ತು ಎಲ್ಲರ ಸಹಕಾರದಿಂದ ಸದ್ಯ ಉತ್ತರ ಕನ್ನಡ ಜಿಲ್ಲೆ ಕೊರೋನಾ ಮುಕ್ತವಾಗಿದೆ.)
ಅಂತಹ ಅಪವಾದದ ಅನುಮಾನದೊಂದಿಗೆ ಸೆನಿಟೈಸರ್ ಬಾಟಲೊಂದನ್ನು ಗಾಡಿಯಲ್ಲಿಟ್ಟುಕೊಂಡು ಕಳೆದೊಂದು ತಿಂಗಳಿಂದ  ಹಿಂದೂಗಳ, ಮುಸ್ಲೀಂಮರ, ಕ್ರಿಶ್ಚಿಯನ್ನರ, ಭಟ್ಟರ, ಹೆಗಡೇರ, ಗೌಡರ, ನಾಯ್ಕರ..ಹೀಗೆ ಹೇಳಿದ ಎಲ್ಲ ಸಮುದಾಯದವರ ಔಷಧ ಗುಳಿಗೆಗಳನ್ನು  ತಂದು ಒದಗಿಸಿದೆ.ಜನರ ಬೇರೆ ಕೆಲ ಅಗತ್ಯಗಳನ್ನೂ ಪೂರೈಸಿದೆ. 
ಕೆಲ ಕೇರಿಯ ದಾರಿಯಲ್ಲಿ ಓಡಾಡಬಾರದು, ಕೆಲವರೊಂದಿಗೆ ಮಾತನಾಡಲೂಬಾರದು ಎಂಬ ಹಲವರ ಅಭಿಪ್ರಾಯದ ಹೊತ್ತಿನಲ್ಲಿ, ಭಟ್ಕಳದವರು ಈ ಕಡೆ ಬಂದು ಸೇರುತ್ತಿದ್ದಾರೆ ಎಂದು ಕೆಲ ಪತ್ರಿಕೆಗಳು ವರದಿ ಮಾಡುತ್ತಿರುವ ಸಂದರ್ಭದಲ್ಲಿ ಸಹಾ  ಎಲ್ಲರೊಂದಿಗೆ ಒಡನಾಡಿದೆ. (ನನ್ನ ಈ ಒಡನಾಟ ಸರ್ವೇಸಾಮಾನ್ಯವಾಗಿದ್ದರೂ ಈ ಹೊತ್ತಿನಲ್ಲಿ  ಬಿಡಿಸಿ ಹೇಳುವುದು 
ಔಚಿತ್ಯಪೂರ್ಣವೆಂದುಕೊಂಡಿದ್ದೇನೆ.) 

ಈ ಕಾರ್ಯದಿಂದ,
ಇಂಥ  ಸಮಯದಲ್ಲಿ ಜನರಲ್ಲಿ ಏನು ನಡೆಯುತ್ತದೆ ಜನರ ಸಹಜ ತೊಂದರೆ-ತೊಡಕುಗಳೇನು ಎಂಬುದನ್ನು ಗಮನಿಸಲು ಸಾಧ್ಯವಾಗಿದ್ದು, ಜನರನೇಕರಲ್ಲಿ ಬೇರೂರಿರುವ ಬೇರೂರುತ್ತಿರುವ ಕೆಲ ವಿಚಾರ-ನಂಬಿಕೆಗಳೊಂದಿಗೆ ಸಂವಾದ ಸಾಧ್ಯವಾಗಿದ್ದು ನನಗಾದ ದೊಡ್ಡ ಲಾಭ ಮತ್ತು ಸಮಾಧಾನ.
 
ಜವಾಬ್ದಾರಿ- ಪ್ರೀತಿಯಿಂದ ನಾವು ಮಾಡುವ ಕೆಲಸ ಯಾವುದೋ ರೂಪದಲ್ಲಿ ಒಳ್ಳೆಯ ಫಲವನ್ನೇ ನೀಡುತ್ತದೆಯೆಂದು ಸದಾ ನಂಬುತ್ತೇನೆ
ಗಣೇ ಹೊಸ್ಶಮನೆ

೩೬.


ಫೇಸ್ಬುಕ್ಕಲ್ಲಿ ಸುಧಾ ಅಡುಕಳ  ಅವರ ಸೌಹಾರ್ದ ಕಥನ  ಎಂಬ ವಿಚಾರಕ್ಕೆ ಟ್ಯಾಗ್ ಆಗಿ  ಬಹಳಷ್ಟು ದಿನಗಳುರುಳಿತು. ಆರಂಭದಲ್ಲಿ ಏನು ಬರೆಯಬೇಕೆಂದು ತಲೆ ಹತ್ತದೆ ಏನೋ ಹೇಳುವುದಿದೆ ಎಂಬ ಹಳವಂಡವೂ ಜೊತೆಗೂಡಿ ದಿನಗಳುರುಳಿತು.  ಆದರೂ ಹೇಳುವುದಿದೆ ಎಂಬ ತುಡಿತವೇ ಮುಂದೊತ್ತಿ ಆಮೆಗತಿಯಲ್ಲಿ ಬರೆಯಲಾರಂಭಿಸಿದರೆ  ಅದು ಹಿಡಿದಿಟ್ಟಷ್ಟು ಉದ್ದುದ್ದ ಆಗಲಾರಂಭಿಸಿತು. ಕೊನೆಗೂ ಇಲ್ಲಿಗೆ ತಂದು ನಿಲ್ಲಿಸಿದೆ. ಆದರೆ ಫೇಸ್ಬುಕ್ಕಿಗೆ ಇದು ದೀರ್ಘವೇ.   
   ಸೌಹಾರ್ದ ಕಥನ ಇದಕ್ಕೆ ಬಹು ವಿಶಾಲ ವ್ಯಾಪ್ತಿಯಿದೆ ಅಲ್ಲವೆ. 
ಅದು ಒಂದು ಕೋಮು ಕೇಂದ್ರಿತ ಕಥನವಾಗಿ ಜನಪ್ರಿಯಗೊಂಡು ಸೀಮಿತಗೊಳ್ಳಬಾರದು. ಒಂದು ಕುಟುಂಬವಾಗಿ, ಒಂದು ಊರಾಗಿ., ಊರು ಅಂದೊಡನೆ ಎಲ್ಲಾ ಜಾತಿ-ಮತಗಳ, ಬಡವ-ಬಲ್ಲಿದರ ಮನುಷ್ಯ ಜನಾಂಗವಾಗಿ ಸಹಜೀವಿಗಳಾಗಿ ಸೌಹಾರ್ದ ಕಥನವನ್ನು ಕಾಣಬೇಕು. 
ಆದರೂ ಒಂದು ಸಮುದಾಯ ಕೇಂದ್ರಿತವಾಗಿ ಸೌಹಾರ್ದ ಎಂಬ ಪದಕ್ಕೆ ಬಹು ಬೇಡಿಕೆ ಬರುವ ಸಂದರ್ಭಗಳು ಎದುರಾಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ. ಸೌಹಾರ್ದ ಪದವನ್ನು ಇಟ್ಟುಕೊಂಡು ಹಿಂತಿರುಗಿ ನೋಡುವಾಗ  ಸೌಹಾರ್ದವೆಂಬ ಪದ  ಕೇಳಿಯೇ ಗೊತ್ತಿಲ್ಲದ ಆ  ಕಾಲದ ಬದುಕಿನಲ್ಲಿ ಎದುರಾದ ಎಷ್ಟೋ ಸಂಗತಿಗಳು ಈ ಕಾಲದ ಸೌಹಾರ್ದ ಕಥನದೊಳಗೆ ಹೇಳುವಂತದ್ದು ಅನಿಸುತ್ತಿದೆ. 
ನಾನಿಲ್ಲಿ ನನ್ನ ಅನುಭವ ಕೇಂದ್ರಿತ ಸೀಮಿತತೆಯಲ್ಲಿ ಒಟ್ಟಾರೆ ಅನುಭವದಲ್ಲಿ ಒಂದಿಷ್ಟು ಹೆಕ್ಕಿಕೊಡಬಹುದೇನೋ.    
  ಐದು ಜನ ಮಕ್ಕಳೊಂದಿಗರಾದ ನನ್ನ ಅಪ್ಪ ಅವನ ಮೂವತ್ತಾರನೇ ವರ್ಷದಲ್ಲಿ ತಾನು ಹುಟ್ಟಿ ಬೇರು ಬಿಟ್ಟು ತನ್ನ ಹನ್ನೊಂದನೆ ವರ್ಷದಲ್ಲಿ ಹೆಗಲಿಗೇರಿದ ನೇಗಿಲು ಹಿಡಿದು ಬಾಳು ಕಟ್ಟಿಕೊಂಡ ನೆಲವಾದ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ  ತಾಲೂಕಿನ ಆ ಹಳ್ಳಿಯಲ್ಲಿ ನೆಮ್ಮದಿಯ ಬಾಳುವೆ ಸಾಧ್ಯವಿಲ್ಲದಾದಾಗ ಅಲ್ಲಿಂದ ತನ್ನ ಬೇರೆಬ್ಬಿಸಿ ವಲಸೆ ಹೊರಡುವುದು ಅನಿವಾರ್ಯವಾಗಿತ್ತು. 
ಹೀಗೆ 1976ರ ಒಂದು ದಿನ ಅಪ್ಪ ತನ್ನ ಹೆಂಡತಿ ಹಾಗು ಪುಟ್ಟ ಪುಟ್ಟ ಮಕ್ಕಳೊಂದಿಗೆ ದಕ್ಷಿಣ ಕನ್ನಡದ ಉಜಿರೆಯತ್ತ ಜಾನುವಾರುಗಳಾದಿಯಾಗಿ ಸಂಸಾರದ ಸಾಮಾನು ಹೊತ್ತ ಲಾರಿಯಲ್ಲಿ ಪಯಣ ಬೆಳೆಸಿದವನು ಬಂದು ಇಳಿದಿದ್ದು ಕಟ್ಟಪ್ಪುಣಿಯಲ್ಲಿ ಒಂದಷ್ಟು ತೆಂಗಿನ ಮರಗಳಿದ್ದ ನಾಲ್ಕೈದು ಎಕರೆ ಗದ್ದೆ ಬಯಲಿನ ನಡುವಿನ ಮಣ್ಣಿನ ಗೋಡೆಯ ಪುಟ್ಟ ಮನೆಯಲ್ಲಿ. 
ಅಪ್ಪ ಆ ನೆಲವನ್ನು ಅದರ ಧಣಿಯಿಂದ ಖರೀದಿಸುವವರೆಗೆ ಅಲ್ಲಿ ಬೇಸಾಯ ನಡೆಸಿಕೊಡುತ್ತಿದ್ದವನು ಅಂಗಾರ. ಉತ್ತರ ಕನ್ನಡದ ಬೇಸಾಯ ಪದ್ದತಿಗೂ ದಕ್ಷಿಣ ಕನ್ನಡದ ಬೇಸಾಯ ಪದ್ದತಿಗೂ ವ್ಯತ್ಯಾಸಗಳಿವೆ. ಹಾಗೆಯೇ ದಕ್ಷಿಣ ಕನ್ನಡದ ಕೃಷಿ ಭೂಮಿಗಳಲ್ಲಿ ಯಾವ ಜಾತಿಯವರೇ ಆಗಿರಲಿ ದೈವಕ್ಕೊಂದು ಸ್ಥಾನವಿದೆ.
 ತುಳು ಕೇಳಿಯೇ ಗೊತ್ತಿಲ್ಲದ ಅಪ್ಪನಿಗೆ ತುಳು ಮಾತ್ರವೇ ಮಾತಾಡುವ ಅಂಗಾರ ಈ ಎಲ್ಲದರ ಮಾಹಿತಿ ಕೊಡುತ್ತ ಪುಂಡಿ ಬಿತ್ತು ಹಾಕಿ ಬಿತ್ತನೆ ಸುರುವಾಗುವಲ್ಲಿಂದ ಕೊಯಿಲಿನವರೆಗೆ ಅಪ್ಪನಿಗೆ ಹೆಗಲು ಕೊಟ್ಟವನು. 
ನಾವು ಮಕ್ಕಳಂತು ಅವನ ಸಂಸಾರದೊಂದಿಗೆ ಕೈ ಭಾಷೆ ಬಳಸಿ ಅರ್ಥ ಮಾಡಿಸುತ್ತಿದುದೇ ಜಾಸ್ತಿ. ಅವರೂ ಹಾಗೆಯೇ. ನಾನು ಮೊದಲು ಕಲಿತ ತುಳು ಶಬ್ದ “ಒಂಜಿ ಕೊಂಡೆ ಪೇರ್” ಅಂದರೆ ಒಂದು ಕುಡ್ತೆ ಹಾಲು. ಹೀಗೆ ತುಳು ಭಾಷೆ ಕಲಿಕೆಯ ಯುನಿವರ್ಸಿಟಿ ನಮಗೆ ಅಂಗಾರನ ಸಂಸಾರ.  ಅಮ್ಮ ಕುಂಬಳೆ ಸೀಮೆಯವಳಾದ್ದರಿಂದ ಭಾಷೆಯ ವಿಷಯದಲ್ಲಿ ತುಸು ವಾಸಿ. ಇನ್ನು ಗದ್ದೆ ಬಯಲೆಂದರೆ ಒಬ್ಬರ ಬೇಲಿ ಆದ ಮೇಲೆ ಇನ್ನೊಬ್ಬರದೆಂಬಂತೆ ಉದ್ದಾನುದ್ದಕೆ ಶೆಟ್ಟರದ್ದು.. ಪೂಜಾರ್ರದ್ದು.. ಪೊರ್ಬುಗಳದ್ದು ಹೀಗೆ. ಬೇಲಿ ಅಂದ್ರೆ ಕಾಡು ಗಿಡಗಳೋ ದಾಸವಾಳದ್ದೋ ಗೆಲ್ಲು ಊರಿ ಕಾಡು ಬಳ್ಳಿಯಿಂದ ಬಿಗಿದಿರುತ್ತಿದುದು ಅಷ್ಟೆ.  ಎಲ್ಲೋ ಗುಡ್ಡೆಗಳ ನಡುವೆ ಹುದುಗಿಕೊಂಡಿರುವ ಮನೆಗಳು.  ಜೋರಾಗಿ ಕೂ ಎಂದರೂ ಪಕ್ಕನೆ ಯಾರಿಗೂ ಕೇಳಿಸದು. ಆದರೆ, ಬೇಸಾಯ ಸುರುವಾಯಿತೆಂದರೆ ಗದ್ದೆಗಳಲ್ಲಿ ಕಲರವ. ಉಳುವವರ ಹಾಡು. ನೇಜಿ ನೆಡುವವರ ಓ ಬೇಲೆ. ಯಾರದೋ ಗದ್ದೆಯಲ್ಲಿ ಹೆಚ್ಚಾದ ನೇಜಿಸೂಡಿಗಳು ಇನ್ಯಾರದೋ ಗದ್ದೆಗೆ ನೇಜಿ ಕಮ್ಮಿಯಾಗಿ ಆ ಜಾಗ ತುಂಬಲು ಬರುತ್ತಿದ್ದವು. ನೇಜಿ ನೆಡಲು ಹೆಂಗಸರ ಕೊರತೆ ಬೀಳಬಾರದೆಂದು ಬಯಲಿನಲ್ಲಿ ಒಬ್ಬೊಬ್ಬರು ಒಂದೆರಡು ದಿನ ಹಿಂದು ಮುಂದಾಗಿ ಬೇಸಾಯಕ್ಕಿಳಿಯುತ್ತಿದ್ದುದು. ಈ ಬಯಲುಗಳ ಮಕ್ಕಳು ಶಾಲೆಗೆ ಹೋಗುವ ದಾರಿಯೂ ಈ ಎಲ್ಲಾ ಗದ್ದೆ ಹುಣಿಗಳು..ಇವರುಗಳೆಲ್ಲರ ಗುಡ್ಡ ಕಾಡುಗಳ ಕಾಲುದಾರಿಗಳು.  ಇದೆಲ್ಲ ಒಂದೂರಿನ ರೈತಾಪಿ ಜನಗಳ ಸೌಹಾರ್ದ ಬದುಕಾಗಿಯೇ ನನಗೆ ಕಾಣಿಸುತ್ತದೆ. ಇನ್ನು ಶಿವರಾತ್ರಿಗೆ ಪೊರ್ಬುಗಳ ಮನೆಯಂಗಳದ ಬಿಲ್ವಪತ್ರೆ ಮರದಿಂದ ಎಲೆ ಕೀಳಲು ಅಣ್ಣನೊಂದಿಗೆ ಹೋಗುತ್ತಿದುದು, ನಾವು ಮಕ್ಕಳೆಂದು ಕೆಲವೊಮ್ಮೆ ಪೊರ್ಬುಗಳೇ ಬಂದು ಕೊಯ್ದು ಕೊಡುತ್ತಿದುದು ಇದನ್ನೆಲ್ಲ ಏನೆಂದು ಕರೆಯಲಿ.. ಶಾಲೆಯ ದಿನಗಳ ಬಗ್ಗೆ, ಈಗಲೂ ಎಲ್ಲೋ ಇರುವ ಗೆಳತಿ ಬಾನುಳನ್ನು ಕಾಣಬೇಕೆಂಬ ಹಪಾಹಪಿಯ ಬಗ್ಗೆ ಹೇಳಿದರೆ ಅದೇ ಒಂದು ಅಧ್ಯಾಯವಾದೀತು. ನೆನೆವುದೆನ್ನ ಮನಂ ಅನ್ನುವಾಗ ಮತ್ತೆ ಮತ್ತೆ ನೆನೆಯುವುದು, “ನನ್ನ ಬದುಕಿನ ಪ್ರಮುಖ ಘಟ್ಟ ಮದುವೆಯಾಗಿ ನಾನು ಪ್ರಸಾದ್ ಜೊತೆ ಸಂಸಾರ ಹೂಡಿದ ಕುಂಬಳೆ ಸಮೀಪದ ಸಣ್ಣ ಊರು ಸೀತಾಂಗೋಳಿಯನ್ನು.”
 ಒಂದು ಮತದೊಳಗಿನ ಜಾತಿ ಜಾತಿಗಳಲ್ಲದೆ ಮತ-ಮತಗಳ ನಡುವಿನ ಸಹಬಾಳ್ವೆಯ ದರ್ಶನ ಮಾಡಿಸಿದ ನನ್ನತನವನ್ನು ಹೊಳಪುಗೊಳಿಸಿದ ಸ್ಯಾಂಡ್ ಪೇಪರ್ ನಾನು ಬದುಕಿದ ನನ್ನೊಳಗೆ ಬದುಕುತ್ತಿರುವ ಸೀತಾಂಗೋಳಿ.  1995-96ರ ದಿನಗಳವು. ಆ ಹಳ್ಳಿಪೇಟೆಯ ಸಣ್ಣ ಊರಿನಲ್ಲಿ ಮೂರು ಕೋಣೆಯ ಬಾಡಿಗೆ ಮನೆ. ಮನೆಯೊಳಗೆ ನಲ್ಲಿ ವ್ಯವಸ್ಥೆ ಇಲ್ಲ. ಓನರ್ ಮನೆಯದೇ ಬಾವಿ ನೀರು.  ಕ್ವಾಟರ್ಸ್ ಮಾದರಿ. ಓನರ್ ಅಬೂಬಕರ್ ಮನೆ ಒತ್ತಟ್ಟಿಗೇ..  ಓಡಾಡಲು ಉದ್ದಕ್ಕೆ ಒಂದೇ ಜಗಲಿ. ಅಂಗಳ ದಾಟಿದರೆ ನೇರ ರಸ್ತೆಗೇ ಇಳಿಯುವುದು. ಗುಡ್ಡ-ಗದ್ದೆ-ತೋಟ ತಿರುಗಾಡುತ್ತ ಒಂಟಿ ಮನೆಯಲ್ಲಿ ಬೆಳೆದ ನನಗೆ ಇದು ತೀರಾ ಅಪರಿಚಿತ ವಾತಾವರಣ. ಆದರೆ ಸಂಗಾತಿ ರಾಮಕೃಷ್ಣ ಪ್ರಸಾದರಿಗೆ ಇವರೆಲ್ಲ ಅದ್ಲಿಚ್ಚ, ಟೊಪ್ಪಿಚ್ಚ, ಚೇಚಿ, ಉಮ್ಮಂದಿರು. ನಾವಿನ್ನು ಸಂಸಾರ ಹೂಡಿ ಒಂದು ವಾರ ಆಗಿರಲಿಲ್ಲ. ನನಗೆ ಅಲ್ಲಿತನಕ ಕುಕ್ಕರ್ ಬಳಸಿ ಗೊತ್ತಿರಲಿಲ್ಲ. ಪ್ರಸಾದ್ ಒಂದಿನ ಸಣ್ಣ ಕುಕ್ಕರ್ ತಗಂಡ್ಬಂದ. ರಾತ್ರಿ ಅಡುಗೆಗೆ ಕುಕ್ಕರ್ ಪ್ರಯೋಗ. ಆಗಲೆ ಒಂಭತ್ತು ಘಂಟೆ.  ಒಂದು ವಿಷಲ್ ಹಾಕಿತ್ತು ಕುಕ್ಕರ್. ಒಂದೆರಡು ನಿಮಿಷದಲ್ಲೇ ಜೋರಾಗಿ ಬಾಗಿಲು ಬಡಿಯುವ ಸದ್ದು. ಜೊತೆಗೆ ಡಾಕ್ಟ್ರೆ ಡಾಕ್ಟ್ರೇ ಅಂತ ಗಾಬರಿಯ ಸ್ವರಗಳು. ಏನಾಯ್ತಪ್ಪ ಅಂತ ಬಾಗಿಲು ತೆಗೆದರೆ ಓನರ್ ಸಂಸಾರದ ಬಳಗವೇ ನಿಂತಿತ್ತು. ಮುಖದಲ್ಲಿ ಗಾಬರಿ. ಎಂತಾಯ್ತು..ಎಂತಾಯ್ತು? ದೊಡ್ಡ ಶಬ್ದ ಬಂತಲ್ಲ. ನಿಮಗೇನೋ ತೊಂದರೆ ಆಯ್ತು ಅಂತ ಹೆದರಿ ಓಡಿ ಬಂದಿದ್ದು ಅಂದರು. ಅಲ್ಲಿ ಯಾರಿಗೂ ಕುಕ್ಕರ್ ಅಭ್ಯಾಸವಿಲ್ಲವೆಂಬುದು ಆಗಲೇ ನಮಗೆ ಗೊತ್ತಾಗಿದ್ದು. ಜಾಗ್ರತೆ ಹೇಳುತ್ತ ಕುಕ್ಕರ್ ನೋಡಿಕೊಂಡು ಅವರು ಹೊರಟ ಮೇಲೆ ಮತ್ತೆ ನಮ್ಮ ಪ್ರಯೋಗ ಮುಂದುವರಿದಿದ್ದು. ಅವರ ಆ ಕಾಳಜಿಗೆ ಇವತ್ತೂ ಮನಸು  ತುಂಬಿಕೊಳ್ಳುತ್ತದೆ.  ಇನ್ನು ಎಷ್ಟೋ ಬಾರಿ ಎರಡು ಘಂಟೆ ರಾತ್ರಿಯಲ್ಲಿ ಹಳ್ಳಿಗಳಿಂದ ಯಾರಾದರೂ ಬಡಪಾಯಿಗಳು ಅಸೌಖ್ಯ ತಡೆಯಲಾರದೆ ಬಂದು “ಒಮ್ಮೆ ಬಂದು ನೋಡಿ ಡಾಕ್ಟ್ರೆ ಎಂದು ದುಂಬಾಲು ಬಿದ್ದಾಗ ಪ್ರಸಾದ್ ಅವರೊಂದಿಗೆ ಹೊರಟುಬಿಡುತ್ತಿದ್ದರು. ವಾಹನ ಹೋಗದಲ್ಲಿಗೆ ನಡೆದೇ ಹೋಗಬೇಕಾದ್ದರಿಂದ  ಹೋಗಿ ಬರುವಾಗ ಮೂರು ನಾಲ್ಕು ಘಂಟೆಯಾಗುವುದೂ ಇತ್ತು. ಆಗೆಲ್ಲ ಗಳಿಗೆಗೊಮ್ಮೆ ಬಂದು ನನಗೆ ಹೆದರಬೇಡವೆಂದು ಧೈರ್ಯ ಹೇಳುತ್ತಿದ್ದ ನೆಬಿಸಳ ಅಕ್ಕರೆಯನ್ನು ಈ ಸೌಹಾರ್ದ ಕಥನದೊಳಗೆ ಏನಂತ ಹೇಳುವುದು? ಇಂದಿಗೂ ರಂಝಾನ್ ಉಪವಾಸದ ಸಂಜೆಗಳಲ್ಲಿ ನೆಬಿಸುಮ್ಮ ಮತ್ತವಳ ಹೆಣ್ಣು ಮಕ್ಕಳು, ಅಕ್ಕ-ತಂಗಿಯರು ತರುತ್ತಿದ್ದ ಶರಬತ್ತಿನ ರುಚಿ ನಾಲಿಗೆಗೆ ನೆನಪಾಗುತ್ತದೆ. ಚೌತಿ, ದೀಪಾವಳಿ ದಿನಗಳಲ್ಲಿ  ಸಾಂಪ್ರದಾಯಿಕ ಆಚರಣೆ ಪ್ರಸಾದ್ ಕುಟುಂಬದಲ್ಲಿ ಅಷ್ಟಾಗಿ ಇಲ್ಲದಿದ್ದರೂ ಸಂಜೆ ಬರುವ ಈ ನನ್ನ ಗುಂಪಿಗಾಗಿ ಸಿಹಿಯಂತು ಮಾಡುತ್ತಿದ್ದೆ.  ನಮ್ಮನೆಗೆ ಟಿವಿ ಬಂದ ದಿನದ್ದೂ ಒಂದು ಕಥೆಯೇ. ಆ ವಠಾರಕ್ಕೆ ಅದು ಹೊಸತು. ಅವತ್ತು ಸಾಯಂಕಾಲ  ಕಿಟಕಿಯಲ್ಲಿ ಹೆಣ್ಣು ಮಕ್ಕಳ ಗುಂಪು ಇಣುಕಿ ನನ್ನ ಕರೆಯಿತು. ಟಿವಿ ಸ್ಕ್ರೀನ್ ಮುಚ್ಚಿಟ್ಟಿದ್ದೆ. ಅದು ಕಾಣ್ಲಿಕ್ಕಿರುದಲ್ವಾ ಅಕ್ಕಾ ಅಂತ ನಗ್ತಾ ಕೇಳಿದ್ದಳು ನಸೀಮಾ. ಹೀಗೆ ಅಂದಿನಿಂದ ಸಂಜೆ ಬಳಗದ ಎಲ್ಲಾ ಮನೆಯ ಹೆಣ್ಣು ಮಕ್ಕಳು, ಪುಟ್ಟ ಹುಡುಗರು ನಮ್ಮ ಪುಟ್ಟ ಜಗಲಿಯಲ್ಲಿ ಸೇರಿ ಬಿಡುತ್ತಿದ್ದರು. ಹಾಗೆ ಮಲೆಯಾಳಂ ಚಾನೆಲ್ ರುಚಿ ಹಿಡಿಸಿಬಿಟ್ಟರು ನಂಗೆ. ಪ್ರಸಾದ್ ತನ್ನ ಗದಗಿನ ಓದಿನ ದಿನಗಳನ್ನಂತು ಇವತ್ತಿಗೂ ಮತ್ತೆ ಮತ್ತೆ ಮೆಲುಕು ಹಾಕುತ್ತಾನೆ. ಅದು 1992ರ ದೇಶ ಕಂಡ ಅತ್ಯಂತ ವಿನಾಶಕಾರಿ  ಆತಂಕದ ದಿನಗಳು. ಬಾಬರಿ ಮಸೀದಿ ಬೆಂಕಿಯಲ್ಲಿ ಜನ ಸಾಮಾನ್ಯರು ಬೇಯುತ್ತಿದ್ದ ಆ ದಿನಗಳಲ್ಲಿ ಪ್ರಸಾದ್ ಹಾಗು ಆತನ ಸಹವರ್ತಿಗಳು ವಾಸವಾಗಿದ್ದ ಕೋಣೆಯ ಓನರ್ ಮೊಹಮ್ಮದ್ ಸಾಬರ ಮನೆ ಮಂದಿ ಇವರನ್ನು ಓಣಿಯಲ್ಲಿ ಓಡಾಡದಂತೆ ಮನೆಯೊಳಗೇ ಜೋಪಾನ ಮಾಡಿ ಆಹಾರ ಒದಗಿಸಿ ಕಾಪಾಡಿದ ಪರಿಯನ್ನು ಪ್ರಸಾದ್  ಹೇಳುತ್ತಿದ್ದರೆ ಇದು ಜನ ಸಾಮಾನ್ಯರ ನಿಜ ಬಹುತ್ವ ಭಾರತ ಅನಿಸಿ ಎದೆ ಒದ್ದೆಯಾಗುತ್ತದೆ. ಇಂದಿಗು ಇಂತಹ ಘಟನೆಗಳು ಸಾಮಾನ್ಯ ಜನಜೀವನದಲ್ಲಿ ಪರಸ್ಪರ ಅನುಭವಕ್ಕೆ ಬರುತ್ತಿದೆ. ಅದೇ 92ರ ಆ ದಿನಗಳಲ್ಲಿ ಸೀತಾಂಗೋಳಿ ಸಮೀಪದಲ್ಲಿ ನಡೆದ ಒಂದು ದುರ್ಘಟನೆಯಲ್ಲಿ ಅಂಚೆಪೇದೆ ದುರಂತ ಸಾವಿಗೆ ಬಲಿಯಾದದ್ದನ್ನು ನೆಬಿಸಳೇ ನನಗೆ ವಿವರಿಸಿ ಕಣ್ಣಲ್ಲಿ ನೀರು ತುಂಬಿಕೊಂಡಿದ್ದಳು.  ಅದೇ ಸಮಯದಲ್ಲಿ ಇಂತಹುದೇ ದುರಂತದಲ್ಲಿ ಗಂಡನನ್ನು ಕಳೆದುಕೊಂಡು ಊರಿಗೆ ಬಂದ ಅವಳ ಸಂಬಂಧಿಕರ ಮಗಳ ಬಗ್ಗೆಯೂ ಹೇಳಿದಳು. 
ಇವತ್ತು ಮಗ ದೂರದ ಜರ್ಮನಿಯಲ್ಲಿ ಭೌತ ಶಾಸ್ತ್ರದ ವಿದ್ಯಾರ್ಥಿಯಾಗಿ ಪದವಿ ಓದುತ್ತಿದ್ದಾನೆ. ಎಂಟು ತಿಂಗಳ ಹಿಂದೆ ಇಲ್ಲಿಂದ ಒಬ್ಬನೇ ಹೋಗಿ ಅಲ್ಲಿ ವಿಮಾನ ನಿಲ್ದಾಣದಲ್ಲಿಳಿದು ಉಳಿದುಕೊಳ್ಳಬೇಕಾದ ಹಾಸ್ಟೆಲ್ಲಿಗೆ ಹೋಗಲು ಲಗೇಜುಗಳೊಂದಿಗೆ ಬಸ್ ಹಿಡಿಯುವ ಜಾಗ ಗೊತ್ತಿಲ್ಲದೆ ರಸ್ತೆಯಲ್ಲಿ ಪರದಾಡುತ್ತಿದ್ದವನನ್ನು ನೀನು ಇಂಡಿಯಾದಿಂದ ಬಂದವನಾ ಎಂದು ಮಾತಾಡಿಸಿ ಸ್ವತಃ ತಾನೇ ನಿಂತು ಆ ಸ್ಥಳಕ್ಕೆ ಹೋಗುವ ಬಸ್ ಹತ್ತಿಸಿದವನು ಗುರುತು ಪರಿಚಯವಿಲ್ಲದ ಅಫ್ಘಾನಿಸ್ತಾನಿ. ಈ ಆತಂಕದ ದಿನಗಳಲ್ಲಿ ಅಲ್ಲೇ ಉಳಿದಿರುವ ಅವನ ಅನುಭವ ಹೇಗಿದೆಯೆಂದರೆ ಅವನುಳಿದುಕೊಂಡಿರುವ ಕೋಣೆಯ ಆಸುಪಾಸಿನ ಅಫ್ಗಾನಿಸ್ತಾನಿ, ಪಾಕಿಸ್ತಾನಿ, ಅರಬ್ಬಿ, ಟರ್ಕಿ, ಇತ್ಲಾಗಿ ತಮಿಳ, ಬೆಂಗಾಲಿ - ಇವರಿಗೆಲ್ಲ ಪರಸ್ಪರರು ಸ್ವಂತ ಊರಿನವರೇ. ಪರಸ್ಪರರು ಹಂಚಿಕೊಂಡು ಚಹಾ ಕುಡಿಯುವವರೇ. ಇದನ್ನೆಲ್ಲ ಸೌಹಾರ್ಧ ಕಥನದೊಳಗೆ ಹೇಳುವುದಾದರೆ ಇನ್ನೆಷ್ಟು ದೀರ್ಘವಾದೀತು..
**  ** 
ಅನುಪಮಾ ಪ್ರಸಾದ್.

37.
( ಇದು ಸೌಹಾರ್ದ ಕಥನವೂ ಹೌದು...ರಮ್ಜಾನ್ ಶುಭಾಶಯವೂ ಹೌದು)
ಇದು ಮುವತ್ತು ವರ್ಷಗಳ ಹಿಂದಿನ ಘಟನೆ.

#ರಮ್ಜಾನ್_ಹಬ್ಬದಂದು_ಅಬ್ದುಲ್_ಸಾಹೇಬರಿತ್ತ #ಹತ್ತು_ರೂಪಾಯಿ!

ನಮ್ಮೂರು ಹಾಲಾಡಿ. ಹಾಲಾಡಿಯ ಸಂತೆ ಮಾರ್ಕೆಟ್ ಬಳಿ ಇದ್ದ ಎರಡು ಅಂಗಡಿಗಳ ಪೈಕಿ ಒಂದು ಜಯಂತ ಕಂಮ್ತಿಯವರ ದಿನಸಿ ಅಂಗಡಿ,ಇನ್ನೊಂದು ಅಬ್ದುಲ್ ಸಾಹೇಬರ ಜನತಾ ಸ್ಟೋರ್ಸ್ . ಅಬ್ದುಲ್ ಸಾಹೇಬರದ್ದು ಆಗ ಚಿಮಣಿ ಎಣ್ಣೆ ವ್ಯಾಪಾರ ಜೊತೆಗೆ ಹೊಗೆಸೊಪ್ಪಿನ ವ್ಯಾಪಾರವಿತ್ತು. ಈ ತಂಬಾಕು ವ್ಯಾಪಾರ ಇಂದಿಗೂ ಅವರ ಮಗ ಅಯೂಬ್  ಮುಂದುವರಿಸಿಕೊಂಡು ಬಂದ ವೃತ್ತಿ. ಈಚೆ ಹಾಲಾಡಿಯಲ್ಲಿ ಇರುವ ಏಕೈಕ ಮುಸ್ಲಿಂ ಕುಟುಂಬ ಈ ಅಬ್ದುಲ್ ಸಾಹೇಬರದ್ದು. ಇವರು ಎಲ್ಲಿಂದ ಬಂದವರು? ಇಲ್ಲಿ ಹೇಗೆ ನೆಲೆಯಾದರು ಎಂದು ನಾನರಿಯೆ. ಆದರೆ ಸುಮಾರು ಐವತ್ತು ವರ್ಷಗಳಿಂದ ಅವರು ನಮ್ಮೂರಲ್ಲೇ ನೆಲೆಸಿ ,ಸೌಹಾರ್ದಯುತವಾಗಿ ಎಲ್ಲರೊಂದಿಗೆ ಬದುಕುತ್ತಿರುವುದು ತುಂಬು ಸಂತಸದ ಸಮಾಚಾರ.
ನಮ್ಮ ಮನೆಗೆ ಆಗ ಈ ಹಾಲಾಡಿ ಸಂತೆ ಮಾರ್ಕೆಟ್ ಬಳಿ ಬಸ್ಸಿಳಿದು ಕಾಲುದಾರಿಯಲ್ಲಿ ನಡೆದುಹೋಗಬೇಕಿತ್ತು. ಈ ಅಬ್ದುಲ್ ಸಾಹೇಬರ ಮನೆಯನ್ನು ನೋಡಿದ್ದು ಅಪ್ಪಯ್ಯನ ಸೈಕಲ್ ಏರಿ ಮಣ್ಣರಸ್ತೆಯಲ್ಲಿ ಹಾಲಾಡಿಗೆ ಹೋಗುತ್ತಿದ್ದಾಗ.ಇಡೀ ಊರಿಗೆ ಫೋನ್ ಸಂಪರ್ಕವಿರದ ಕಾಲದಲ್ಲಿ ಈ ಅಬ್ದುಲ್ ಸಾಹೇಬರ ಮನೆಯಲ್ಲಿ  ದೂರವಾಣಿ ಸಂಪರ್ಕ ಬಂದದ್ದು ಒಂದು ದೊಡ್ಡ ಸುದ್ದಿಯಾದ ಕಾಲವದು. ಆಗ ನನಗೆ ಎರಡನೇ ತರಗತಿ. ನಾನು ಎರಡನೇ ತರಗತಿಯಲ್ಲಿ ಓದುತ್ತಿದ್ದ
ಆವತ್ತೊಂದು ದಿನ ಏನಾಯ್ತೆಂದರೆ..

ಅಪ್ಪಯ್ಯ ಏನೋ ಕೆಲಸದ ನಿಮಿತ್ತ ಊರಾಚೆ ಹೋದವರು ಅದ್ಹೇಗೊ ಸೈಕಲ್ ತುಳಿದುಕೊಂಡು ಮನೆಗೆ ಬಂದವರು, ಕುದಿಯುವ ಜ್ವರ ಮತ್ತು ಹೊಟ್ಟೆನೋವಿನಿಂದ ಬಳಲಿ ಬೆಂಡಾಗಿದ್ದರು. ಅಮ್ಮ ನನ್ನನ್ನು ಅಕ್ಕನನ್ನು ಶಾಲೆಗೆ ಕಳುಹಿಸಿ, ಮನೆಕೆಲಸ,ಹಟ್ಟಿ ಕೆಲಸದ ನಡುವೆ ಮಧ್ಯಾಹ್ನದ ಊಟ ತಯಾರಿಸಿ ಅಪ್ಪಯ್ಯನಿಗೆ ಕಾದು ಕುಳಿತ ಹೊತ್ತು ಅಪ್ಪಯ್ಯ ಈ ಸ್ಥಿತಿಯಲ್ಲಿ ಮನೆಗೆ ಬಂದರು. 
ಅಪ್ಪಯ್ಯ ಅಸ್ವಸ್ಥರಾದದ್ದೇ ನಮಗೆ ಹೊಸತು. ಅಮ್ಮ ಅದ್ಹೇಗೊ ಅಪ್ಪಯ್ಯ ನಿಗೆ ಕೊಂಚ ಉಣ್ಣಲು ಒತ್ತಾಯಿಸಿ, ಅವರು ಊಟ ಮಾಡಿ,ಮತ್ತೆ ಮನೆಕೆಲಸ, ದನದ ಚಾಕರಿ,ತೋಟ ಗದ್ದೆಯ ಕೆಲಸಗಳನ್ನು ಸಂಜೆವರೆಗೆ ಮಾಡುತ್ತಾ, ನಡುನಡುವೆ ಅಪ್ಪಯ್ಯನನ್ನು ಉಪಚರಿಸುತ್ತಾ, ತಲೆಬಿಸಿ ಮಾಡಿಕೊಂಡಿದ್ದರು. ನನ್ನ ತಂಗಿಯಂದಿರಿನ್ನೂ ಆಗ ನಾಲ್ಕೈದು ವರ್ಷದ ಮಕ್ಕಳು. ನಾನು ಅಕ್ಕ ಶಾಲೆಯಿಂದ ಮನೆಗೆ ಬಂದಾಗ ಅಪ್ಪಯ್ಯ ಹೊಟ್ಟೆನೋವು ಎಂದು ಮಲಗಿದ್ದನ್ನು ನೋಡಿ ಪೆಚ್ಚಾದೆವು. ನಾವು ಅದುವರೆಗೆ ಅಪ್ಪಯ್ಯ ಹಗಲು ಹೊತ್ತಿನಲ್ಲಿ ಆರಾಮಿರದೆ ಮಲಗಿದ್ದನ್ನೆ ನೋಡಿರಲಿಲ್ಲ.
ಸಂಜೆಯಾಯಿತು ಅಪ್ಪಯ್ಯನ ಹೊಟ್ಟೆ ನೋವು ತಾರಕ್ಕೇರಿತು. ಅಮ್ಮ ಅದೇನೇನೊ ಔಷಧ, ಕಷಾಯ ಎಲ್ಲಾ ಕೊಟ್ಟರೂ, ಅಪ್ಪಯ್ಯನ ಹೊಟ್ಟೆನೋವು ಕಡಿಮೆ ಆಗಲಿಲ್ಲ. ರಾತ್ರಿ ನಮಗೆಲ್ಲ ಊಟ ಹಾಕಿ ಅಪ್ಪಯ್ಯ ನಿಗೂ ಒತ್ತಾಯಿಸಿ ಉಣಿಸಿದ ಅಮ್ಮ ನಮಗೆಲ್ಲ ಚಾಪೆ ಹಾಸಿಕೊಟ್ಟು ಮಲಗಲು ಹೇಳಿದರು. ಅಪ್ಪಯ್ಯನ ಚಾಕರಿಯಲ್ಲಿ ರಾತ್ರಿ ಬೆಳಗು ಮಾಡಿದರು. ಆ ರಾತ್ರಿ ಇಡೀ ಅಮ್ಮನಿಗೆ ನಿದ್ರೆಯಿಲ್ಲ ,ಅಪ್ಪನಿಗೂ..
ಅಪ್ಪಯ್ಯ ನ ಹೊಟ್ಟೆನೋವು ಮತ್ತಷ್ಟು ಉಲ್ಬಣಿಸಿತು. ಆದರೆ ಅಮ್ಮನಿಗೆ ನಮ್ಮ ನಾಲ್ವರಿಗೆ ಬೆಳಗಿನ ಗಂಜಿ, ದನಗಳ ಚಾಕರಿಯ ಕಾಯಕ ಮಾಡದೇ ಅಪ್ಪಯ್ಯನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಸಾಧ್ಯವಿರಲಿಲ್ಲ. ಅಲ್ಲದೇ ಆಗ ಫೋನ್, ಆಟೋ ಒಂದೂ ಎಣಿಸಿದಾಕ್ಷಣ ಸಿಗುವ ಕಾಲವೂ ಅಲ್ಲ. 
ಪುಣ್ಯಕ್ಕೆ ಆ ದಿನ ನನಗೂ ಅಕ್ಕನಿಗೂ ಶಾಲೆಗೆ ರಜೆಯಿತ್ತು. ಅಮ್ಮ ನನ್ನ ಬಳಿ ಅವರ ಅಣ್ಣನ ಮನೆಯ ( ಕೋಟೇಶ್ವರದ ಶಿವಪುರ ಕ್ಲಿನಿಕ್ನ ಡಾಕ್ಟರ್  ಪದ್ಮನಾಭ ಆಚಾರ್ಯ)  ಫೋನ್ ನಂಬರ್ ಬರೆದುಕೊಟ್ಟು , ಕಾಣ್ ಮಗಾ ಕೋಟೇಶ್ವರ ಡಾಕ್ಟರ್ ಮಾವನಿಗೆ ಫೋನ್ ಮಾಡಿ ,ಅಪ್ಪಯ್ಯನಿಗೆ ಹೊಟ್ಟೆನೋವು ಎಂದು ವಿಷಯ ತಿಳಿಸಿ, ಕೂಡಲೇ ನಮ್ ಮನೆಗೆ ಬರಲು ಹೇಳಬೇಕು. ಹಾಲಾಡಿ ಅಬ್ದುಲ್ ಸಾಹೇಬ್ರ ಮನೆಗ್ ಹೋಯ್ ಫೋನ್ ಮಾಡಿ ಬಾ ಎಂದು ಫೋನಿನ ಚಾರ್ಜ್ ಎಂದು ಒಂದು ರೂಪಾಯಿ ಕೊಟ್ಟು ಕಳುಹಿಸಿದರು.
ಸರಿ ಎಂದು ಗೋಣಾಡಿಸಿ ಬೆಳಿಗ್ಗೆ ಹನ್ನೊಂದು ಗಂಟೆಗೆ  ರಸ್ತೆಯ ಮೇಲೆ ಒಬ್ಬಳೇ ನಡೆದುಕೊಂಡು ಸಾಹೇಬರ ಮನೆ ತಲುಪುವಾಗ ಮಧ್ಯಾಹ್ನ ಹನ್ನೆರಡು ಗಂಟೆ.
ಸಾಹೇಬರ ಮನೆ ತುಂಬಾ ಜನ . ಅವರ ಮನೆಯಲ್ಲಿ ಅದೇನೊ ಘಮ ಘಮ ಊಟದ ಪರಿಮಳ. ನಾನು ಅಂಗಳದಲ್ಲಿ ನಿಂತು, ಅಪ್ಪಯ್ಯ ನ ಹೆಸರು,ಬಂದ ಕಾರಣ ಹೇಳಿದೆ. ಅಮ್ಮ ಕೊಟ್ಟ ಫೋನ್ ‌ನಂಬರ್ ಮತ್ತು ಒಂದು ರೂಪಾಯಿ ಸಾಹೇಬರ ಕೈಗಿತ್ತೆ. 
ಸಾಹೇಬರು ಆ ನಂಬರಿಗೆ ಫೋನ್ ಮಾಡಿದರೆ ಫೋನ್ ಹೋಗುವುದೇ ಇಲ್ಲ. ಪ್ರಯತ್ನಿಸಿ ಪ್ರಯತ್ನಿಸಿ ಸೋತು ಸುಣ್ಣವಾದ ಸಾಹೇಬರು ನನ್ನ ಬಳಿ ,ಮಗಾ...ಈ ನಂಬ್ರವೇ ಸಮ ಇಲ್ಯೆನೊ. 
ಮಧ್ಯಾಹ್ನ ಬೇರೆ ಆಯ್ತ್. ಈಗ ಹನ್ನೆರಡುಮುಕ್ಕಾಲಿಗೆ ಕೋಟೇಶ್ವರಕ್ ಹೋಪು ಬಸ್ ಒಂದ್ ಇತ್. ನೀ ಬಸ್ ಹತ್ಕಂಡ್ ಹೋಯ್ ಡಾಕ್ಟರ್ ಮಾವನ್ ಕರ್ಕಂಡ್ ಬಾ ಅಕಾ. ಪಾಪ ಅಪ್ಪಯ್ಯನಿಗೆ ಅದೆಷ್ಟು  ನೋವಿತ್ತೊ...ಜಾಗೃತೆಯಂಗ್ ಹೋಯ್ಕ್..ಕೋಟೇಶ್ವರದಂಗ್ ಬಸ್ಸ್ ಇಳ್ದ್ ಮಾವಯ್ಯನ ಮನೆಗ್ ಹೋಪ್ಕ್ ನಿಂಗ್  ಗೊತಾತ್ತಾ? ಅಂದ್ ಕೇಂಡ್ರ್. ಹೌದ್ ನಂಗ್ ಬಸ್ಸಿಳ್ದ್ ಮಾವಯ್ಯನ ಮನೆಗ್ ಹೋಪ್ಕ್ ಗೊತಾತ್ ಅಂದ್ ಹೇಳ್ತಾ ಅಳುತ್ತಾ ನಿಂತೆ.
ಸಾಹೇಬರ ಹೆಂಡತಿ ಒಳಗಿದ್ದವರು ಅಲ್ಲಿಂದಲೇ, ಪಾಪ ಮಗು ಈ ರಣಬಿಸ್ಲಲ್ ನೆಡ್ಕಂಡ್ ಬಂದಿತ್. ಬಾಯಾರಿಕೆ ಆಯ್ತೊ,ಹಸಿವೆ ಆತಿತ್ತೊ ಎಂತದೋ...ಈ ಬಾಳೆಹಣ್ ಕೊಟ್ ತಿಂಬ್ಕ್ ಹೇಳಿ ಅಂದರು. ಸಾಹೇಬರು ಎರಡು ಬಾಳೆಹಣ್ಣು ಕೊಟ್ಟರು. ಸುಮ್ಮನೆ ಹಿಡಿದು ನಿಂತೆ. ಹಣ್ ತಿನ್ಲಕ್ ಮಗಾ. ಯಾರೆಂತ ಹೇಳುದಿಲ್ಲೆ..ಅಪ್ಪಯ್ಯ ಬಯ್ಯುದಿಲ್ಲೆ ಅಂದ್ರ್. ಒಂದು ಹಣ್ಣು  ಸಾಕೆಂದು ತಿಂದೆ. 
ಬಸ್ಸು ಬಪ್ ಟೈಮ್ ಆಯ್ತ್ ಈಗ. ಮಗಾ... ಕೋಟೇಶ್ವರಕ್ಕೆ ಹೋಯ್ ಬಾ ಎಂದ ಸಾಹೇಬರು,ಅವರ ಕಿಸೆಯಲ್ಲಿದ್ದ ಐದು ರೂಪಾಯಿಯ ಎರಡು ನೋಟನ್ನು ನನ್ನ ಕೈಗೆ ತುರುಕಿ ,ನಾನು ಅವರಿಗಿತ್ತ ಒಂದು ರೂಪಾಯಿಯನ್ನು ಕೈಯೊಳಗಿಟ್ಟು ಬಸ್ ಟಿಕೆಟ್ ಮಾಡುಕೆ ಮಗಾ...ಈ ದುಡ್ ಜಾಗೃತೆ ಇಟ್ಕೊ ಎಂದು, ಅವರ ಮನೆಯಲ್ಲಿ ಇದ್ದ ಯಾರೋ ಒಬ್ಬ ಹುಡುಗನ ಬಳಿ ನನ್ನನ್ನು ಬಸ್ಸು ಹತ್ತಿಸಿ ಬರಲು ಕಳುಹಿಸಿದರು. 
ನಾನು ನನಗೆ ಟಿಕೆಟ್ ಮಾಡುದಿಲ್ಲ ಬಸ್ಸಿನಲ್ಲಿ ಎಂದರೂ, ದುಡ್ ಇಲ್ದೆ ಬಸ್ ಹತ್ತುಕಾಗ, ನಾ ನಿನ್ ಅಪ್ಪಯ್ಯ ನಮ್ ಅಂಗಡಿಗ್ ಬಂದಲ್ ಅವ್ರ್  ಹತ್ರ ಈ ದುಡ್ ವಾಪಾಸ್ ತಕಂತೆ ಎಂದು ಕಳುಹಿಸಿದರು.
ಬಸ್ಸ್  ಹತ್ತಿ ಕೋಟೇಶ್ವರಕ್ಕೆ ಹೋಗಿ ಡಾಕ್ಟರ್ ಮಾವಯ್ಯನಿಗೆ ವಿಷಯ ತಿಳಿಸಿ,ಅವರೊಂದಿಗೆ ವಾಪಾಸ್ ಮನೆಗೆ ಬರುವಾಗ ಸಂಜೆ ನಾಲ್ಕೋ ಐದೋ ಗಂಟೆ. ಅಮ್ಮನಿಗೆ ಒಂದೆಡೆ ಅಪ್ಪಯ್ಯ ನ ಚಿಂತೆ,ಮತ್ತೊಂದೆಡೆ ನನ್ನ ಚಿಂತೆ. ಅಂತೂ ಅಪ್ಪಯ್ಯನಿಗೆ ಚಿಕಿತ್ಸೆ ಕೊಟ್ಟು ಅಪ್ಪಯ್ಯ ಹುಷಾರಾದರು. ನಾನು ಸಾಹೇಬರು ಕೊಟ್ಟ ಹತ್ತು ರೂಪಾಯಿ ಮತ್ತು ನಡೆದ ವೃತ್ತಾಂತವನ್ನೆಲ್ಲ ಮನೆಯಲ್ಲಿ ಹೇಳಿದ್ದೆ.
ಅಪ್ಪಯ್ಯ ಆರೋಗ್ಯವಂತರಾಗಿ ಮತ್ತೆ ಸೈಕಲ್ ತುಳಿದುಕೊಂಡು ಹಾಲಾಡಿಗೆ ಹೋದಾಗ,ಸಾಹೇಬರಿಗೆ ಆ ಹತ್ತು ರೂಪಾಯಿ ಕೊಡಲು ಅವರ ಬಳಿ ಹೋದಾಗ, ಅಬ್ದುಲ್ ಸಾಹೇಬರು ಅಪ್ಪಯ್ಯನ ಬಳಿ ,ಅಯ್ಯೋ ಮಿತ್ಯಾಂತ್ರೆ....ಆ ಮಗು ನಮ್ ಮನೆಗ್ ಬಂದ್ ದಿನ ರಂಜಾನ್ ಹಬ್ಬ ಮರ್ರೆ. ಆ ದಿನ  ನಮ್ ಮನಿಗ್ ಉಪ್ಕಾರ ಕೇಳಿ ಬಂದ್ ಮಗಿಗ್ ಕೊಟ್ ದುಡ್ ಅದ್. ಅದನ್ನು ವಾಪಾಸ್ ತಕಂಬ್ದಾ? ಅಯ್ಯಾ....ನನ್ ಜೀವನಲ್ ದೇವರು ನಿಮ್ಮಂತವರಿಗೆ ಉಪ್ಕಾರ ಮಾಡುಕ್ ಕೊಟ್ ಅವಕಾಶ ಅದ್. ದಯವಿಟ್ಟು ಹತ್ರುಪಾಯಿ ವಾಪಾಸ್ ಕೊಡ್ಬೇಡಿ. ಮಕ್ಕಳಿಗೆ ಬರಿಯುಕ್ ಕಡ್ಡಿ, ಪೆನ್ಸಿಲ್ ತಕಂಡ್ ಹೋಯ್ ಕೊಡಿ ಎಂದು ಅಪ್ಪಯ್ಯನ್  ಹಣ ಪಡೆಯದೆ ವಾಪಾಸ್ ಕಳುಹಿಸಿದರು.
ಇದು ರಂಜಾನ್ ಬಂದಾಗಲೆಲ್ಲ ನನಗೆ ನೆನಪಾಗುವ ಘಟನೆ. ಈ ಅಬ್ದುಲ್ ಸಾಹೇಬರ ಮಗಳು ರೋಶನ್ ಮೇಡಂ ನನ್ನ ಗಣಿತ ಟೀಚರ್, ಇನ್ನೊಬ್ನ ಮಗಳು ಸಾಯಿರಾಬಾನು ಕೂಡ ನನ್ನ ಆತ್ಮೀಯಳು. ಮತ್ತೊಬ್ಬ ಮಗಳು ಜಮೀಲಾಬಾನು ನಾನು ಒಟ್ಟಿಗೆ ಪದವಿ ಪಡೆದವರು. ರೋಶನ್ ಮೇಡಂ ಮಗ ನನ್ನ ವಿದ್ಯಾರ್ಥಿ ಆಗಿದ್ದವ. 
ಈಗ ಅಬ್ದುಲ್ ಸಾಹೇಬರಿಲ್ಲ. ಸಾಹೇಬರ ಮಗ ಅಯುಬ್ ಖಾನ್ ರು  ನಮ್ ಮನೆಯವ ಆಪ್ತರಲ್ಲಿ ಒಬ್ಬರು ಹಾಗೂ ನನ್ನ ಬಳಿ ಸ್ವಲ್ಪ ಸಮಯ  ಕಂಪ್ಯೂಟರ್ ಕಲಿತವರು.
 ಅಯುಬ್ ಮತ್ತು ಅವರ ಮನೆಯವರಿಗೆಲ್ಲ ಈ ಘಟನೆ ನೆನಪಿದೆಯೊ ಇಲ್ವೊ...ನನಗಂತೂ ಇದೊಂದು ಬಾಲ್ಯದಲ್ಲಿ ಅಚ್ಚಾದ ನೆನಪಿನ ಮಾಲೆಯ ಬಾಡದ ಹೂವು.
ಈ ರಮ್ಜಾನ್ ಹಬ್ಬದ ಸಂದರ್ಭದಲ್ಲಿ ಈ ಘಟನೆ ಮತ್ತೆ ನೆನಪಾಗಿದೆ. ಇದೇ  ಬರುವ ಸೋಮವಾರ ಮತ್ತೆ ರಮ್ಜಾನ್ ಬಂದಿದೆ. ಅಯುಬ್ ಬಾಯಿ ನಿಮಗೂ ನಿಮ್ ಮನೆಯವರೆಲ್ಲರಿಗೂ, ನಿಮ್ಮ ಬಂಧುಗಳಿಗೂ ಮುಂಗಡವಾಗಿ ರಮ್ಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.

ಪೂರ್ಣಿಮಾ ಕಮಲಶಿಲೆ.