Friday, May 20, 2022

ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿರುವ ಜಿ. ಎಸ್. ಜಯದೇವ

ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ ಮತ್ತು ರುದ್ರಾಣಿಯವರ ಮಗನಾಗಿ 1951ರಲ್ಲಿ ಜನಿಸಿದ ಜಿ. ಎಸ್. ಜಯದೇವ ಅವರು ಪ್ರಚಾರಗಳಿಂದ ದೂರವಿರುವ ಸಾಮಾಜಿಕ ಕಾರ್ಯಕರ್ತರು. ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಮೈಸೂರಿನ ಪ್ರತಿಷ್ಠಿತ ಜೆ.ಎಸ್.ಎಸ್. ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸವನ್ನು ನಿರ್ವಹಿಸಿದವರು. ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರಾದ ಡಾ. ಸುದರ್ಶನ ಅವರ ಸಂಪರ್ಕಕ್ಕೆ ಬಂದ ಅವರು ತಮ್ಮ ಉದ್ಯೋಗವನ್ನು ತ್ಯಜಿಸಿ, ಗಿರಿಜನರ ಮತ್ತು ದೀನದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡರು. ಮೈಸೂರಿನ ಸುತ್ತಮುತ್ತಲ ಗಿರಿಜನರೊಡನೆ ಸಂಪರ್ಕವನ್ನಿಟ್ಟುಕೊಂಡು ಅವರ ಸಂಕಷ್ಟಗಳನ್ನು ಅರಿತರು. ಚಾಮರಾಜನಗರದ ಅನೇಕ ಸರಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಅಲ್ಲಿನ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಿದರು.

ಅನಾಥ ಮಕ್ಕಳ ದುಃಖಕ್ಕೆ ಮರುಗಿದ ಅವರು ಮಕ್ಕಳಿಗಾಗಿ ದೀನ ಬಂಧು ಮಕ್ಕಳ ಮನೆ ಎಂಬ ಅನಾಥಾಶ್ರಮವನ್ನು ತೆರೆದರು. ಬಾಡಿಗೆ ಕಟ್ಟಡದಲ್ಲಿ ಮಕ್ಕಳನ್ನು ಪೋಷಿಸುತ್ತಾ, ಅವರ ಸಮಗ್ರ ಕಲ್ಯಾಣಕ್ಕಾಗಿ ದೀನಬಂಧು ಟ್ರಸ್ಟ್ ಶ್ರಮಿಸುತ್ತಿದೆ. ಚಾಮರಾಜನಗರದಲ್ಲಿಂದು ಇಂತಹ ನಾಲ್ಕು ಮಕ್ಕಳ ಮನೆಗಳಿದ್ದು, ಪ್ರತಿ ಮನೆಯಲ್ಲಿಯೂ ಹನ್ನೆರಡು ಮಕ್ಕಳು ಮದರ್ ಅಥವಾ ಫಾದರ್ ಎಂಬ ಪೋಷಕರೊಂದಿಗೆ ವಾಸಿಸುತ್ತಾರೆ. ಈ ಮಕ್ಕಳ ಸೃಜನಶೀಲ ಶಿಕ್ಷಣಕ್ಕಾಗಿ ಅವರು ರಾಮಸಮುದ್ರದಲ್ಲಿ ಒಂದು ಶಾಲೆಯನ್ನು ಕೂಡಾ ತೆರೆದಿದ್ದಾರೆ.

ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸ್ವಯಂಉದ್ಯೋಗ ಕಲಿಕೆಗಾಗಿ ಅವರು ಹೆಣ್ಣುಮಕ್ಕಳ ಹಸಿರುಮನೆ ಶಿಕ್ಷಣ ಕಾರ್ಯಕ್ರಮ ಎಂಬ ಯೋಜನೆಯನ್ನು ರೂಪಿಸಿದ್ದಾರೆ. ಪರಿಸರದ ಬಗ್ಗೆಯೂ ಅವರದು ಕೊನೆಯಿಲ್ಲದ ಕಾಳಜಿ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಡೆಸಿದ ಬಿಳಿಗಿರಿರಂಗನ ಬೆಟ್ಟದ ಜೀವವೈವಿಧ್ಯಗಳ  ದಾಖಲಾತಿ ಕಾರ್ಯಕ್ರಮದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಮೈಸೂರಿನ ಶಕ್ತಿಧಾಮ ಎಂಬ ಮಹಿಳೆಯರ ಪುನರ್ವಸತಿ ಕೇಂದ್ರದ ಕಾರ್ಯನಿರ್ವಾಹಕ ಧರ್ಮದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ವಿವೇಕಾನಂದ ಪೀಠದ ಸಂದರ್ಶಕ ಪ್ರಾಧ್ಯಾಪಕರೂ ಹೌದು.

ಪ್ರಸಿದ್ಧ ಕವಿಯ ಪುತ್ರನಾದ ಜಯದೇವ ಅವರು ಉತ್ತಮ ಲೇಖಕರೂ ಹೌದು. ಶಕ್ತಿಧಾಮದ ಸತ್ಯ ಕಥೆಗಳು, ಮಕ್ಕಳ ಬೆಳವಣಿಗೆ ಮತ್ತು ನಾವು, ಹಳ್ಳಿಹಾದಿ ಇವು ಅವರು ರಚಿಸಿದ ಕೃತಿಗಳು. ಗಾಂಧೀಜಿಯವರ ಗ್ರಾಮಭಾರತದ ಕನಸನ್ನು ನನಸಾಗಿಸಲು ಶ್ರಮಿಸುತ್ತಿರುವ ಅವರಿಗೆ 2019ರಲ್ಲಿ ಪ್ರತಿ಼ಷ್ಠಿತ ಮಹಾತ್ಮಗಾಂಧಿ ಸೇವಾರತ್ನ ಪ್ರಶಸ್ತಿ ದೊರಕಿದೆ. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳು ಅರ್ಹವಾಗಿಯೇ ಸಂದಿವೆ. 

Thursday, May 19, 2022

ಹಳ್ಳಿಗಳ ಆತ್ಮಕಥನ ಬರೆಯುತ್ತಿರುವ ಪಿ. ಸಾಯಿನಾಥ

ಮಾಧ್ಯಮವೆಂದರೆ ಟಿ. ಆರ್. ಪಿ. ಎಂದು ಎಲ್ಲರೂ ನಂಬುತ್ತಿರುವಾಗ ಇವರು ಮಾಧ್ಯಮವೆಂದರೆ ಬಹುಜನರ ನೈಜಬದುಕನ್ನು ಅರ್ಥಮಾಡಿಕೊಳ್ಳುವುದು ಎಂದರು. ರಾಜಕಾರಣಿಗಳ ವಿಚಾರಗಳನ್ನು, ವಿವರಗಳನ್ನು ಜನರಿಗೆ ತಿಳಿಸುವುದೇ ಪತ್ರಿಕೋದ್ಯಮ ಎಂದಾಗ ಇವರು ಭಾರತದ ಅದ್ಯಾವುದೋ ಹಳ್ಳಿಯ ಮೂಲೆಯ ಜನರ ತಲ್ಲಣವನ್ನು ರಾಜಕಾರಣಿಗಳಿಗೆ ಕೇಳಿಸುವ ಧಾವಂತದಲ್ಲಿದ್ದರು. ಪ್ರಸಿದ್ಧ ಪತ್ರಕರ್ತರೆಲ್ಲಾ ನಗರದಲ್ಲಿ ಸ್ಥಿರವಾಗಲು ಯತ್ನಿಸುತ್ತಿರುವಾಗ ಇವರು ನಗರಕ್ಕೆ ಬೆನ್ನು ತಿರುಗಿಸಿ ಗ್ರಾಮಭಾರತದೆಡೆಗೆ ಮುಖಮಾಡಿದರು. ಬರವೆಂದರೆ ಜನರಿಗೆ ಕಷ್ಟ ಎಂದು ಹಾಡಿದ ರಾಗವನ್ನೇ ವರದಿಗಾರರು ಹಾಡುತ್ತಿದ್ದಾಗ ಬರದ ನಾಡಿನ ಬಹು ಆಯಾಮಗಳನ್ನು ಸಂಗ್ರಹಿಸಿ  'ಬರ ಅಂದ್ರೆ ಎಲ್ಲರಿಗೂ ಇಷ್ಟ' ಎಂಬ ಅದ್ಭುತ ಪುಸ್ತಕವನ್ನು ಬರೆದು ಎಲ್ಲರ ಹುಬ್ಬೇರುವಂತೆ ಮಾಡಿದರು. ಪಿ. ಸಾಯಿನಾಥ ಎಂಬ ಪತ್ರಕರ್ತರೊಬ್ಬರ ಸಾಹಸಯಾನವಿದು.

ಭಾರತದ ರಾಷ್ರ್ಟಾಧ್ಯಕ್ಷರಾಗಿದ್ದ ವಿ.ವಿ.ಗಿರಿಯವರ ಮೊಮ್ಮಗನಾದ ಸಾಯಿನಾಥ ಅವರು ಜನಿಸಿದ್ದು 1957ರಲ್ಲಿ, ಮದ್ರಾಸಿನಲ್ಲಿ. ಚೆನ್ನೈನ ಲೊಯೋಲಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ ಅವರು ದೆಹಲಿಯ ಜೆ. ಎನ್ ಯು. ಕಾಲೇಜಿನಲ್ಲಿ ಇತಿಹಾಸವನ್ನು ಅಭ್ಯಾಸ ಮಾಡಿದರು. ಯಾವುದೋ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಳೆದುಹೋಗಬಹುದಾದ ಅವರು ಆಕಸ್ಮಿಕವಾಗಿ ಪತ್ರಿಕೋದ್ಯಮದ ಕಡೆಗೆ ಹೊರಳಿದರು. ಯು.ಎನ್. ಐ. ಸುದ್ಧಿ ಸಂಸ್ತೆ ಹಾಗೂ ದ ಡೈಲಿ ಪತ್ರಿಕೆಯ ವಿದೇಶ ಸಂಪಾದಕರಾಗಿ ಕೆಲಸ ಮಾಡಿದರು. ಗೆಳೆಯ ಸುಧೀಂದ್ರ ಕುಲಕರ್ಣಿಯವರೊಂದಿಗೆ ಸೇರಿ ಜಗತ್ತಿನ ಮಾಧ್ಯಮಗಳ ಹುಳುಕುಗಳನ್ನು ಬಯಲಿಗೆಳೆಯುವ 'ಕೌಂಟರ್ ಮೀಡಿಯಾ' ಎಂಬ ಪತ್ರಿಕೆಯನ್ನೂ ಕೆಲಕಾಲ ಹೊರತಂದರು. 'ಬ್ಲಿಟ್ಸ್' ಪತ್ರಿಕೆಯ ಉಪಸಂಪಾದಕರಾಗಿಯೂ ಕೆಲಸ ನಿರ್ವಹಿಸಿದರು. ಆಗಲೇ ದೇಶದ ಹತ್ತು ರಾಜ್ಯಗಳು ಭೀಕರ ಬರದ ದವಡೆಗೆ ಸಿಕ್ಕಿ ನರಳುತ್ತಿದ್ದವು. ಸಾಯಿನಾಥ ಅವರಿಗೆ ತನ್ನ ಕೆಲಸವಿರುವುದು ಅಂತಹ ಜಾಗದಲ್ಲಿ ಅನಿಸತೊಡಗಿತು. 'ಬ್ಲಿಟ್ಸ್' ಗೆ ರಾಜೀನಾಮೆ ರವಾನಿಸಿ ಹಳ್ಳಿಗಳೆಡೆಗೆ ಹೊರಟೇಬಿಟ್ಟರು. ಹತ್ತು ವರ್ಷಗಳ ಪತ್ರಿಕೋದ್ಯಮದ ಅನುಭವದಲ್ಲಿ ಅವರಿಗೆ ತೀವ್ರವಾಗಿ ಅನಿಸಿದ್ದೆಂದರೆ ಭಾರತದ ಮೂರನೇ ಎರಡರಷ್ಟಿರುವ ಗ್ರಾಮೀಣ ಭಾರತವನ್ನು ಯಾವ ಮಾಧ್ಯಮಗಳೂ ಸ್ಪರ್ಶಿಸುತ್ತಿಲ್ಲವೆಂಬ ಕಹಿಸತ್ಯ. ಟೈಮ್ಸ್ ಆಫ್ ಇಂಡಿಯಾದ ಫೆಲೋಶಿಪ್ ಪಡೆದ ಅವರು ಗ್ರಾಮಭಾರತದಲ್ಲಿ ಸುಮಾರು ಒಂದು ಲಕ್ಷ ಕಿ. ಮೀ. ದೂರವನ್ನು 16 ವಿವಿಧ ಸಾರಿಗೆ ವ್ಯವಸ್ಥೆಯ ಮೂಲಕ ಮತ್ತು 5,000ಕಿ. ಮೀ. ದೂರವನ್ನು ಕಾಲ್ನಡಿಯಿಂದ ಕ್ರಮಿಸಿದರು. ಗ್ರಾಮಭಾರತದ ಆತ್ಮಕಥನವನ್ನು ಹೊರಜಗತ್ತಿಗೆ ಬಗೆದು ತೋರಿದರು. ಅಲ್ಲಿ ವಲಸೆಯ ತಲ್ಲಣಗಳು, ದಲಿತರ ಸಂಕಷ್ಟ, ಆದಿವಾಸಿಗಳ ತಲ್ಲಣ, ಪ್ರಕೃತಿಪ್ರೇಮ, ಕೂಲಿಗಳ ಶೋಷಣೆ, ಹೆಣ್ಣುಗಳ ಗಟ್ಟಿತನ, ಉಳ್ಳವರ ದರ್ಪ, ಆಳುವವರ ವಂಚನೆ ಹೀಗೆ ಚಿತ್ರವಿಚಿತ್ರ ಕಥಾನಕಗಳಿದ್ದವು. ಹಾಗೆ ಬರೆದ ಕಥೆಗಳನ್ನೆಲ್ಲ ಒಂದುಗೂಡಿಸಿ 'ಎವರಿಬಡಿ ಲವ್ಸ್ ಅ ಗುಡ್ ಡ್ರಾಟ್' ಎನ್ನುವ ಪುಸ್ತಕವನ್ನು ಬರೆದರು. ಈ ಅಪೂರ್ವ ಕೆಲಸಕ್ಕಾಗಿ ಅವರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ದೊರೆಯಿತು. ನಲವತ್ತಕ್ಕಿಂತ ಹೆಚ್ಚು ಮುದ್ರಣಗಳನ್ನು ಕಂಡ ಈ ಪುಸ್ತಕ ಭಾರತದ ಹತ್ತಕ್ಕಿಂತಲೂ ಹೆಚ್ಚು ಭಾಷೆಗೆ ಅನುವಾದಗೊಂಡಿದೆ. ಭಾರತದ ನಕಾಶೆಯಲ್ಲಿ ಮಾತ್ರವೇ ಇದ್ದ ಹಳ್ಳಿಗಳಿಗೆ ಪ್ರಧಾನಿಯೂ ಸೇರಿದಂತೆ ರಾಜಕಾರಣಿಗಳು ಭೇಟಿಕೊಡುವಂತಾಯಿತು. ತಮಿಳುನಾಡು, ಓರಿಸ್ಸಾ ಮೊದಲಾದ ರಾಜ್ಯಗಳು ತಮ್ಮ ಆಡಳಿತ ಪಾಲಿಸಿಗಳಲ್ಲಿ ಅವರ ಕ್ಷೇತ್ರಕಾರ್ಯಗಳ ಫಲಿತವನ್ನು ಅಳವಡಿಸಿಕೊಳ್ಳುವಂತಾಯಿತು. ಈ ಪುಸ್ತಕವನ್ನು ಜಿ. ಎನ್. ಮೋಹನ್ ಅವರು 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಸಾಯಿನಾಥ ಕೇವಲ ಹಳ್ಳಿಗಳ ಬಗ್ಗೆ ಮಾತ್ರವೇ ಚಿಂತಿಸಿದವರಲ್ಲ. ಹಳ್ಗಳಿಳಿಂದ ಹೊರತಳ್ಳಲ್ಪಟ್ಟ ದಲಿತರ ಬಗ್ಗೆ 'ದಿ ಹಿಂದೂ' ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಬರೆದರು. ಎಲೈಟ್ ನೋಟದ ನಗರಕೇಂದ್ರಿತ ಪತ್ರಕರ್ತರಿಗೆ ಗ್ರಾಮಭಾರತವನ್ನು ನೋಡಬೇಕಾದ ಪರಿಕ್ರಮಗಳ ಬಗ್ಗೆ ಹೇಳಿಕೊಟ್ಟರು. ಹಾಗೆ ನೋಡುವ ಯುವ ಪತ್ರಕರ್ತರ ಪಡೆಯನ್ನೇ ತನ್ನೊಂದಿಗೆ ಕರೆದೊಯ್ಯತೊಡಗಿದರು. 'ಪತ್ರಿಕೋದ್ಯಮವಿರುವುದು ಜನರಿಗಾಗಿ, ಬಂಡವಾಳಶಾಹಿಗಳಿಗಾಗಿಯಲ್ಲ' ಎಂಬ ಬದ್ಧತೆಯೊಂದಿಗೆ 2014ರಲ್ಲಿ 'ಪೀಪಲ್ ಆರ್ಕೈವ್ ಆಫ್ ರೂರಲ್ ಇಂಡಿಯಾ' ಅಂದರೆ 'ಪರಿ'ಎಂಬ ಮಾಧ್ಯಮಸಂಸ್ತೆಯೊಂದನ್ನು ಹುಟ್ಟುಹಾಕಿದರು. ಗ್ರಾಮೀಣ ಜನರು ಅನುಭವಿಸುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ, ಅಲ್ಲಿನ ಪ್ರಸ್ತುತ ವಿದ್ಯಮಾನಗಳು ಮತ್ತು ಜಾಗತೀಕರಣದ ನಂತರದ ಪರಿಣಾಮಗಳ ಬಗ್ಗೆ ಪರಿ ನಿರಂತರ ಶೋಧಗಳನ್ನು ನಡೆಸುತ್ತಾ, ವರದಿಗಳನ್ನು ಪ್ರಕಟಿಸುತ್ತದೆ. ಜೊತೆಯಲ್ಲಿ ಆದಿವಾಸಿ ಜನಾಂಗ ಮತ್ತು ಜಾನಪದ ಲೋಕದಲ್ಲಿ ಮರೆಯಾಗುತ್ತಿರುವ ಅನೇಕ ಮೌಖಿಕ ಕಥಾನಕಗಳನ್ನು ಸಂಗ್ರಹಿಸಿ, ದಾಖಲಿಸಿಡುವ ಕೆಲಸವನ್ನೂ ಮಾಡುತ್ತಿದೆ. ದೇಶವಿದೇಶಗಳ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಸಾಯಿನಾಥ ಸಾರ್ಥಕ ಪತ್ರಿಕೋದ್ಯಮದ ಪಾಠವನ್ನು ಮಾಡುತ್ತಾರೆ.

ಪತ್ರಕರ್ತರಾದವರು ಸರಕಾರದ ಕಾರ್ಯಗಳ ವಿಮರ್ಶಕರೂ ಆಗಿರುವುದರಿಂದ ಸರಕಾರ ಕೊಡುವ ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸಬಾರದೆಂಬುದು ಸಾಯಿನಾಥ ಅವರ ಅಭಿಪ್ರಾಯ. ಹಾಗಾಗಿ ಪ್ರತಿಷ್ಠಿತ ಪದ್ಮಭೂಷಣವೂ ಸೇರಿದಂತೆ ಎಲ್ಲ ರಾಜ್ಯ ಮತ್ತು ರಾಷ್ರ್ಟಮಟ್ಟದ ಪ್ರಶಸ್ತಿಗಳನ್ನವರು ನಿರಾಕರಿಸಿದ್ದಾರೆ. ಅವರ ಕಾರ್ಯಯೋಜನೆಗಳಿಗೆ ಸರಕಾರ ಅಥವಾ ಬಂಡವಾಳಗಾರರಿಂದ ನೇರ ಹಣಸಹಾಯವನ್ನೂ ಅವರು ಪಡೆಯುವುದಿಲ್ಲ. ಆದರೆ ಗ್ರಾಮೀಣ ಪ್ರದೇಶದ ವರದಿಗಳ ಬಗೆಗೇ ಅವರಿಗೆ 13ಪ್ರತಿಷ್ಠಿತ ಪ್ರಶಸ್ತಿಗಳು ದೊರಕಿವೆ. 2021ರ ಪುಕವೋಕಾ ಗ್ರ್ಯಾಂಡ್ ಫ್ರೈಜ್ ಅವರಿಗೆ ಸಂದಿದೆ. ಪತ್ರಿಕೋದ್ಯಮ ವಿಭಾಗದಿಂದ ಈ ಪ್ರಶಸ್ತಿ ಪಡೆದ ಮೊದಲಿಗರು ಅವರು. ಯುರೋಪಿಯನ್ ಕಮೀಷನ್ ನೀಡುವ ಲಾರೆಂಜೋ ನೆಟಾಲಿ ಫ್ರೈಜ್ ಪಡೆದ ಮೊದಲ ಭಾರತೀಯರೂ ಹೌದು. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ 2009ರಲ್ಲಿ ಅವರನ್ನು ವರ್ಷದ ಪತ್ರಕರ್ತ ಪ್ರಶಸ್ತಿ ನೀಡಿ ಗೌರವಿಸಿದೆ. ಅವರೊಬ್ನ ಉತ್ತಮ ಛಾಯಾಗ್ರಾಹಕರೂ ಹೌದು. ತಮ್ಮ ಕ್ಯಾಮರಾವನ್ನು ಹಳ್ಳಿಗಾಡಿನ ಹೆಂಗಸರ ಕೊರಳಲ್ಲಿ ನೇತಾಡಿಸಿ ಅವರ ಕಣ್ಣಿನಿಂದಲೂ ಚಿತ್ರಗಳನ್ನವರು ಸಂಗ್ರಹಿಸಿದ್ದಾರೆ. ಅವರ 'ವಿಸಿಬಲ್ ವರ್ಕ್, ಇನವಿಸಿಬಲ್ ವುಮೆನ್ ಎಂಡ್ ವರ್ಕ ಇನ್ ರೂರಲ್ ಇಂಡಿಯಾ' ಎಂಬ ಚಿತ್ರಗ್ಯಾಲರಿಯನ್ನು ಆರು ಲಕ್ಷ ಭಾರತೀಯರು ವೀಕ್ಷಿಸಿದ್ದಾರೆ. ಕೆನಡಾದ ಡಾಕ್ಯುಮೆಂಟರಿ ನಿರ್ದೇಶಕ ಜಿಯೋ ಮೌಲಿನ್ಸ್ ಅವರ ಬಗ್ಗೆ ನಿರ್ಮಿಸಿದ ಸಾಕ್ಷಚಿತ್ರವು ಅಂತರಾಷ್ಟ್ರೀಯ ಪಿಲ್ಮ ಫೆಸ್ಟಿವಲ್ ನಲ್ಲಿ ಪ್ರಥಮ ಬಹುಮಾನ ಗಳಿಸಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ  ಭಾರತೀಯ   ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರನ್ನು 'ಸ್ತ್ರೀಲೋಕ ಮತ್ತು ಹಸಿವಿನ ಜಗತ್ತಿನ ಶ್ರೇಷ್ಠ ಪರಿಣಿತ' ಎಂದು ಬಣ್ಣಿಸಿದ್ದಾರೆ. 

ಇಡಿಯ ಜಗತ್ತು ಕೊರೊನಾವೆಂಬ ಸಾಂಕ್ರಾಮಿಕಕ್ಕೆ ಬಲಿಯಾದಾಗಲೂ ಸಾಯಿನಾಥರ ಲೇಖನಿ ಮತ್ತು ಕ್ಯಾಮರಾ ಕ್ವಾರೈಂಟೈನ್ ನಲ್ಲಿರಲಿಲ್ಲ. ಸರಕಾರ ಮತ್ತು ಆಡಳಿತ ಯಂತ್ರಗಳು ಕೊರೊನಾ ನಿಯಂತ್ರಣದಲ್ಲಿ ತೋರಿದ ಲಕ್ಷ, ನಿರ್ಲಕ್ಷ ಎಲ್ಲವನ್ನೂ ಅವರು ನಿರಂತರವಾಗಿ ದಾಖಲಿಸಿದ್ದಾರೆ. ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಹಿಡಿದು ಪರಿಹಾರ ನೀಡಿಕೆಯಲ್ಲಿನ ತಾರತಮ್ಯದವರೆಗೆ ಎಲ್ಲವನ್ನೂ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ದೇಶದಲ್ಲಿ ತನಿಖಾ ಪತ್ರಿಕೋದ್ಯಮ ಹಳ್ಳಹಿಡಿದಿದೆ ಎಂಬ ಮುಖ್ಯನ್ಯಾಯಾಧೀಶರ ಭಾಷಣಕ್ಕೆ ಅವರು ನೀಡಿದ ಪ್ರತಿಕ್ರಿಯೆ ಪ್ರಸ್ತುತ ಭಾರತದ ಮಾಧ್ಯಮಲೋಕದ ನೈಜಚಿತ್ರಣವೂ ಹೌದೂ. ಬಂಡವಾಳಶಾಹಿಗಳ ಹಿಡಿತ, ಆಡಳಿತಾರೂಢ ಪಕ್ಷಗಳ ಬೆದರಿಕೆ ಮತ್ತು ಬದ್ಧತೆಯ ಕೊರತೆ ಹೇಗೆ ಎಲ್ಲರನ್ನೂ ಜನಪ್ರಿಯ ಪತ್ರಿಕೋದ್ಯಮದ ಕಡೆಗೆ ಸೆಳೆಯುತ್ತಿದೆ ಎಂಬುದನ್ನವರು ಕೂಲಂಕುಷವಾಗಿ ವಿವರಿಸಿದ್ದಾರೆ. ಭಾರತವು ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ವಿಶ್ವದ ಯಾದಿಯಲ್ಲಿ 142ನೇ ಸ್ಥಾನದಲ್ಲಿದೆ ಎಂಬುದು ನಿಜಕ್ಕೂ ಆತಂಕಕಾರಿ. 

ಯಾವುದೇ ಘಟನೆಯನ್ನು ವರದಿಗಾರನೊಬ್ಬ ನೋಡಬೇಕಾಗಿದ್ದು ಒಂದು ಪ್ರಕರಣವಾಗಿಯಲ್ಲ, ಬದಲಾಗಿ ಒಮನದು ಪ್ರಕ್ರಿಯೆಯಾಗಿ, ಯಾಕೆಂದರೆ ಇಲ್ಲಿರುವುದು ಕೇವಲ ಸಂಖ್ಯೆಯಲ್ಲ, ಮನುಷ್ಯರು ಮಬ ಸೂಕ್ಮಗ್ರಹಿಕೆಯನ್ನು ಪತ್ರಿಕೋದ್ಯಮಕ್ಕೆ ನೀಡಿದ ಸಾಯಿನಾಥ ಉತ್ತಮ ವಾಗ್ಮಿಯೂ ಹೌದು. ಸಾಕ್ಷಾಧಾರಗಳ ಸಹಿತವಾಗಿ, ಸಚಿತ್ರವಾಗಿ ಅವರು ಗ್ರಾಮ್ಯಭಾರತದ ಕಥಾನಕಗಳನ್ನು ತಮ್ಮ ಲಘುಹಾಸ್ಯ ಮತ್ತು ಲೇವಡಿಯ ಧಾಟಿಯಲ್ಲಿ ಹೇಳುತ್ತಾ ಹೋದರೆ ಗಂಟೆಗಳೇನು? ದಿನಗಳು ಸರಿದದ್ದೂ ಗೊತ್ತಾಗದು. ಕೇಡಿಗಳೇ ಹಿರೋಗಳಾಗುತ್ತಿರುವ ಈ ಕಾಲದಲ್ಲೂ ಸಾಯಿನಾಥ ಹಲವರ ಹೀರೋ ಆಗಿರುವುದಂತೂ ಸುಳ್ಳಲ್ಲ. 


Saturday, May 14, 2022

ಅಲೆಗಳು ಶಾಂತವಾಗುವುದಿಲ್ಲ....

ಅವರ ನೆನಪಿಗೆಂದು ನಾವೆಲ್ಲರೂ ಸೇರುವ ಮೊದಲ ದಿನವೇ ಅನಿರೀಕ್ಷಿತ ಮಳೆ ಬಂದು ನೆಲ ತೇವಗೊಂಡಿತ್ತು, ಅಲ್ಲಿ ನೆರೆದ ಎಲ್ಲರ ಮನಸ್ಸಿನಂತೆ. ಹೌದು, ವಿಠ್ಠಲ ಭಂಡಾರಿ ಎಂಬ ತಾಯ ಮಮತೆಯ ಜೀವ ಸರಿದುಹೋಗಿ ವರ್ಷವೇ ಆಗಿಹೋಯಿತು. ವಿಶೇಷ ಕರೆಗಳಿಲ್ಲದೆಯೂ ನಾಡಿನ ಮೂಲೆಮೂಲೆಗಳಿಂದ ಗೆಳೆಯರು, ಹಿತೈಷಿಗಳು, ವಿದ್ಯಾರ್ಥಿಗಳು, ಚಳುವಳಿಯ ಜತೆಗಾರರು ಕೆರೆಕೋಣವೆಂಬ ಅವರ ಹಳ್ಳಿಯನ್ನು ಹುಡುಕಿಕೊಂಡು ಬಂದರು. ಅಮೂಲ್ಯವಾದ ಭಿತ್ತವೊಂದನ್ನು ಬಿತ್ತಿರುವೆವೋ ಎಂಬಷ್ಟು ಅಕ್ಕರೆಯಿಂದ ಅವರನ್ನು ಮಲಗಿಸಿದ ತಾವಿನ ಸುತ್ತ ನೆರೆದರು. ಪುಟ್ಟ ಮಗುವೊಂದು ಬಿಕ್ಕಳಿಸಿ ಅತ್ತದ್ದೇ ನೆಪವಾಗಿ ಎಲ್ಲರ ದುಃಖದ ಕಟ್ಟೆಯೊಡೆಯಿತು. ನೆರೆದವರೆಲ್ಲ ತಡೆತಡೆದು ಉಸಿರು ಬಿಡುತ್ತಿದ್ದುದು ನಾಲ್ಕಾರು ಮೆಟ್ಟಿಲೇರಿದ ಆಯಾಸಕ್ಕಂತೂ ಇರಲಿಕ್ಕಿಲ್ಲ. ಅಲ್ಲಿ ಚಿರನಿದ್ದೆಯಲಿ ಮಲಗಿದ ಜೀವವೇ ಹಾಗಿತ್ತು. ಸದಾ ಮುಖದ ತುಂಬ ನಗು, ಕನಸು ತುಂಬಿದ ಕಂಗಳು, ಮಮತೆಭರಿತ ನೋಟ, ಆರಡಿಯ ಸುರಸುಂದರಾಂಗ ಆಳು ಅವರು. ಕೊರೊನಾದ ಅಲೆಗೆ ಬಲಿಯಾದಾಗ ಕುಟುಂಬದವರ ಹೆಗಲು ನೇವರಿಸುವ ಅವಕಾಶವೂ ಇರಲಿಲ್ಲ. ಹಾಗಾಗಿ ಒದ್ದೆ ಮನಸ್ಸಿನೊಂದಿಗೆ ಎಲ್ಲರೂ ತೇವಗೊಂಡ ಅವರ ಸಮಾಧಿಯ ಬಳಿ ಸೇರಿದ್ದರು. ಚಿಗುರೊಡೆದು ನಿಂತ ಪಾರಿಜಾತ ಇದ್ಯಾವುದರ ಗೊಡವೆಯಿಲ್ಲದೇ ತಲೆಯಲ್ಲಾಡಿಸುತ್ತಿತ್ತು.

ನಾನು ಎಷ್ಟೊಂದು ಜನರ ವಿದಾಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವೆ. ಆದರೆ ಈ ರೀತಿಯ ಆಪ್ತ, ಆರ್ದೃ ಕಾರ್ಯಕ್ರಮವನ್ನು ನೋಡಿಲ್ಲ. ಬೆಳಗಿನಿಂದ ಎಲ್ಲರ ಮಾತುಗಳನ್ನು ಕೇಳಿ ತೇವಗೊಂಡಿರುವೆ. ಓರ್ವ ಅಧ್ಯಾಪಕನಾಗಿ ಇಷ್ಟೆಲ್ಲವನ್ನೂ ಮಾಡಬಹುದೆನ್ನುವ ವಿಚಾರ ಅಧ್ಯಾಪಕನಾದ ನನ್ನನ್ನೂ ನಾಚುವಂತೆ ಮಾಡುತ್ತಿದ್ದೆ. ನನ್ನೊಂದಿಗೆ ನಾಡು, ಕಾಡು ಎಂದು ಸುತ್ತುತ್ತಿದ್ದ ಈ ಹುಡುಗ ಹೀಗೆಲ್ಲಾ ಇದ್ದನೆ? ಎಂದು ಕಣ್ಣರಳಿಸುತ್ತಲೇ ಕಣ್ಣೊರೆಸಿಕೊಂಡರು ರಹಮತ್ ತರಿಕೆರೆಯವರು. ಗಾಂಧಿಯಂತವರನ್ನು ಮನೆಮನೆಗೆ ಕೊಂಡೊಯ್ದು ರಾಷ್ಟ್ರೀಯ ನಾಯಕರನ್ನಾಗಿ ರೂಪಿಸಿದವರು ಸಾಮಾಜಿಕ ಕಾರ್ಯಕರ್ತರು. ಸಣ್ಣ ಗುಂಪುಗಳಲ್ಲಿ ಮೂಡಿಸುವ ಅರಿವು ಮಾತ್ರವೇ ದೊಡ್ಡ ಬದಲಾವಣೆಯನ್ನು ತರಬಲ್ಲುದು. ಅಂಥದೊಂದು ಕಾರ್ಯವನ್ನು ದಣಿವರಿಯದೇ ಮಾಡುತ್ತಿದ್ದವರು ವಿಠ್ಠಲ ಎಂದವರು ರಾಜೇಂದ್ರ ಚೆನ್ನಿಯವರು. ನಿಂತ ನೆಲದಲ್ಲಿ ಬೇರುಬಿಟ್ಟು ತನ್ನ ಸುತ್ತಲಿನವರನ್ನು ಪ್ರಭಾವಿಸುತ್ತಲೇ ಜಗದ ಆಗುಹೋಗುಗಳಿಗೆ ಸ್ಪಂದಿಸುವ ಕೆಲವೇ ಮಾದರಿಗಳು ನಮ್ಮಲ್ಲಿವೆ. ಆರ್. ವಿ. ಯವರಿಂದ ಆರಂಭಗೊಂಡು, ವಿಠಲನಿಂದ ಮುಂದುವರೆದ ಈ ವಿಶೇಷ ಮಾದರಿಯನ್ನು 'ಕೆರೆಕೋಣ ಮಾದರಿ' ಎಂದು ಹೆಸರಿಸಿದವರು ವಸಂತರಾಜ್ ಅವರು. ಆರ್. ವಿ. ಯವರೊಂದಿಗೆ ಗಹನವಾದ ವಿಷಯಗಳನ್ನು ಚರ್ಚಿಸುತ್ತಿದ್ದಾಗ ಬದಿಯಲ್ಲಿ ನಿಂತು ಕೇಳುತ್ತಿದ್ದ ಈ ವಿಠ್ಠಲನೆಂಬ ಹುಡುಗ ಮುಂದೆ ಸಾಮಾಜಿಕ ಕಾರ್ಯಕರ್ತನಾಗಿ ಬೆಳೆದನಲ್ಲದೇ ಯಾವುದೇ ವಿದ್ಯಮಾನಗಳಿಗೂ ಬೈಸೈಡರ್ ಆಗಲು ಸಂಪೂರ್ಣ ನಿರಾಕರಿಸಿ ಬೆರಗು ಹುಟ್ಟಿಸಿದ. ಜಗದ ಆಗುಹೋಗುಗಳಿಗೆ ಆ ಗಳಿಗೆಯಲ್ಲಿ ಪ್ರತಿಕ್ರಿಯಿಸುತ್ತಿದ್ದ ವಿಠ್ಠಲ ತನ್ನ ಸಣ್ಣ ತುಂಟತನದಿಂದ ಎಂಥವರನ್ನೂ ನಿಭಾಯಿಸುತ್ತಿದ್ದ ಎಂದು ನೆನಪಿಸಿಕೊಂಡವರು ಡಾ. ಎಂ. ಜಿ. ಹೆಗಡೆಯವರು. 

ಎಷ್ಟೊಂದು ಅಕ್ಕರೆಯ, ಪ್ರೀತಿಯ, ಹೆಮ್ಮೆಯ ನುಡಿಗಳು ಅವರ ಬಗ್ಗೆ. ಎಲ್ಲವನ್ನೂ ಸೇರಿಸಿ ಪ್ರೀತಿ ಪದಗಳ ಸಹಯಾನಿ ವಿಠ್ಠಲ ಎಂಬ ಪುಸ್ತಕ ರೂಪುಗೊಂಡ ಬಗೆಯನ್ನು ಬಿಚ್ಚಿಟ್ಟರು ಸಂಪಾದಕ ಮಂಡಲಿಯ ಮೀನಾಕ್ಷಿ ಬಾಳಿಯವರು. ಸೇರಿದ ಎಲ್ಲರದ್ದೂ ಒಂದೇ ಮಾತು, ವಿಠ್ಠಲ ನನ್ನನ್ನು ಮಾತ್ರವೇ ಅಷ್ಟೊಂದು ಹಚ್ಚಿಕೊಂಡಿದ್ದ ಎಂದೇ ನಾನು ತಿಳಿದಿದ್ದೆ ಎಂದು. ತನ್ನ ಸ್ನೇಹವಲಯಕ್ಕೆ ಬಂದವರನ್ನೆಲ್ಲಾ ಚುಂಬಕದಂತೆ ಅಂಟಿಕೊಳ್ಳುವ ಗುಣ ಅವರಿಗೆ ಜನ್ಮದಾತವೇನೊ? ಎಷ್ಟಾದರೂ ಪ್ರೀತಿಯ ಕಾಳನು ಹಂಚ ಬಯಸುವೆವು, ಜಾಗ ಕೊಡುವಿರೇನು? ಎಂದ ತಂದೆಯ ಮಗನಲ್ಲವೆ ಅವರು? ಬದುಕಿನ ಅರ್ಧ ದಾರಿಯನ್ನಷ್ಟೇ ನಡೆದಿದ್ದರು, ಎಲ್ಲ ಕೆಲಸಗಳೂ ಅರ್ಧದಲ್ಲೇ ನಿಂತಿದ್ದವು. ಇದ್ದಷ್ಟನ್ನು ಒಟ್ಟುಗೂಡಿಸಿ, ಒಪ್ಪವಾಗಿಸಿ ಮತ್ತೆರಡು ಪುಸ್ತಕಗಳನ್ನು ತಂದೇಬಿಟ್ಡರು ಸಂಗಾತಿ ಯಮುನಾ. ಇನ್ನೂ ಎಷ್ಟೋ ಪುಸ್ತಕಗಳಿಗಾಗುವಷ್ಟು ಚರಮಗೀತೆಗಳು ಬರುತ್ತಲೇ ಇವೆಯೆಂದು ಹನಿಗಣ್ಣಾದರು ಮನೆಯವರು. ಅವರೇ ಬರೆದ ಅಣ್ಣನ ನೆನಪುಗಳನ್ನು ಮತ್ತೆ, ಮತ್ತೆ ಮೆಲುಕಾಡಿದರು. ಹೌದು, ಇದ್ದಾಗ ಇರವೇ ಅರಿವಾಗದಂತೆ ತೆರೆಮರೆಯಲ್ಲಿಯೇ ಕೆಲಸ ಮಾಡಿದ ಭಂಡಾರಿಯವರ ಅಗಲಿಕೆ ಸೃಷ್ಟಿಸಿದ ಶೂನ್ಯ ಬಹಳ ವಿಸ್ತಾರವಾದದ್ದು. ಅವರನ್ನು ಮನೆಯವರಿಗೆ ಮಾತ್ರ ಬಿಡದೇ ಬೇರೆ ಬೇರೆ ಪ್ರದೇಶ ಮತ್ತು ಸಂಘಟನೆಯವರು ಅಡಾಪ್ಟ್ ಮಾಡಿಕೊಂಡು ಅವರ ಹೆಸರಿನಲ್ಲಿ ಮತ್ತೆ, ಮತ್ತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಇದ್ದಾರೆ. ವಿಠ್ಠಲ್ ಇದ್ದುದೇ ಹಾಗೆ, ಸ್ವಂತದ ಮನೆಯನ್ನು ಎಲ್ಲರ ಮನೆಯಾಗಿಸುವ ಪಯಣ ಅವರದ್ದು. ಆರ್. ವಿ.ಯವರ ಮನೆ ಮಹಾಮನೆಯಾದ ಕಥೆಯಿದು. ಕಲ್ಯಾಣದೆಡೆಗಿನ ಪಯಣ ನನ್ನ ಗೆಳೆಯನದು ಎಂದವರು ಡಾ. ಶ್ರೀಪಾದ ಭಟ್.

ವೈಚಾರಿಕತೆಯನ್ನು ಪ್ರತಿಪಾದಿಸುವ ಮೇಸ್ಟ್ರುಗಳ ಬಳಿ ವಿದ್ಯಾರ್ಥಿಗಳೇ ಸುಳಿಯದ ಮತ್ತು ವಿದ್ಯಾರ್ಥಿಗಳ ಧಾಳಿಯಿಂದ ಅವರನ್ನು ಪಾರುಮಾಡಲು ಚಳುವಳಿಕಾರರೇ ಧಾವಿಸಬೇಕಾದ ಕಾಲದಲ್ಲಿ ತನ್ನ ಸುತ್ತ ಸದಾ ವಿದ್ಯಾರ್ಥಿಗಳ ದಂಡನ್ನೇ ಇಟ್ಟುಕೊಳ್ಳುತ್ತಿದ್ದ ವಿಠ್ಠಲ ಈ ಕಾಲದ ಅಚ್ಛರಿ ಎಂದವರು ಗೆಳೆಯ ಮುನೀರ್ ಕಾಟಿಪಳ್ಳ. ಸರ್ ಗೆ ನಾವು ವಿದ್ಯಾರ್ಥಿಗಳು ಮಾತ್ರವಲ್ಲ, ಮಕ್ಕಳೂ ಹೌದು. ಅವರ ಪ್ರೀತಿ ಮರೆಯಲಾಗದ್ದು ಎಂದು ದನಿಗೂಡಿಸಿದವರು ಚಿಗುರು ಬಳಗದ ಅವಿನಾಶ್. ರಂಗಕರ್ಮಿಗಳು, ಚಳುವಳಿಯ ಸಂಗಾತಿಗಳು, ಪ್ರಾದ್ಯಾಪಕ ಮಿತ್ರರು, ಸಮುದಾಯದ ಗೆಳೆಯ, ಗೆಳತಿಯರು ಎಲ್ಲರದ್ದೂ ಒಂದೇ ಮಾತು. ವಿಠ್ಠಲ ದಣಿವರಿಯದ ಸಂಘಟಕ, ಎಂಥಹ ಕಠಿಣ ಸನ್ನಿವೇಶದಲ್ಲೂ ಸಹನೆಯನ್ನು ಕಳಕೊಳ್ಳದ ಸಹಿಷ್ಣು, ಚಂದದ ವೇದಿಕೆಯನ್ನು ಸ್ನೇಹಿತರಿಗೆ ಬಿಟ್ಟು, ಚಿತ್ರ ಸೆರೆಹಿಡಿವ ಕುತೂಹಲದ ಕಣ್ಣಿನ ಮಗು.

ಅಂದೂ ತೋಟದ ತುಂಬಾ ಅರಳಿದ ಹೂವುಗಳು, ಮೈತುಂಬಾ ಹಣ್ಣೇರಿಸಿಕೊಂಡು ಕೆಂಪಾದ ನಕ್ಷತ್ರ ಹಣ್ಣಿನ ಮರ, ಅಲಂಕೃತಗೊಂಡ ಸಭಾಮಂಟಪ, ಸ್ವಾಗತ ಕೋರುವ ಪುಸ್ತಕದಂಗಡಿ..... ಎಲ್ಲವೂ ವರ್ಷದಂತೆಯೆ ಇದ್ದವು. ಆದರೆ ಅಲ್ಲಿಂದಿಲ್ಲಿಗೆ ಲುಂಗಿಯುಟ್ಟು ದಾಪುಗಾಲಿನಲ್ಲಿ ಓಡುವ, ಚಹಾ, ಊಟ, ವೇದಿಕೆ, ಹಾಡು, ಸ್ವಾಗತ ಎಂದು ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುವ, ಇಷ್ಟೆಲ್ಲದರ ನಡುವೆಯೂ ಅಲ್ಲಿದ್ದ ಪುಟ್ಟ ಮಕ್ಕಳೊಡನೆ ಚೇಷ್ಟೆಯಾಡುವ, ಬಾಚದ ಕೂದಲನ್ನು ಒಂದಿಷ್ಟು ಸವರುವ ತನ್ನ ಸಂಗಾತಿಯೆಡೆಗೊಂದು ಪ್ರೇಮದ ನೋಟ ಬೀರುವ ಅವರ ಅನುಪಸ್ಥಿತಿ ಎಲ್ಲರ ಒಡಲನ್ನು ಬಿಸಿಯಾಗಿಸಿತ್ತು. ಎಲ್ಲವೂ ಒಪ್ಪ ಓರಣವಾಗಿ ನಡೆಯಿತು. ಊಟ, ತಿಂಡಿ, ಭಾಷಣ, ಸನ್ಮಾನ, ಹಾಡು...... ಎಲ್ಲದಕ್ಕೂ ಪುಟವಿಟ್ಟಂತೆ ದಿನದ ಕೊನೆಯಲ್ಲೊಂದು ತಾಳಮದ್ದಲೆ. ಮನೆಯವರು, ಸ್ನೇಹಿತರು ಅವರ ನೆನಪಿಗೆಂದು ತಾವೇ ಕುಳಿತು ಅರ್ಥ ಹೇಳಿದರು. ಚಿಂತನದ ಕಲಾವಿದರು ವಾರವೊಂದರಲ್ಲಿ ಚಂದದ ನಾಟಕ ಕಟ್ಟಿ ಆಡಿದರು. ಎಲ್ಲರಿಗೂ ಅವರು ತಮ್ಮೊಳಗಿದ್ದಾರೆಂದು ಸಾಬೀತುಪಡಿಸಿಕೊಳ್ಳುವ ತುಡಿತ...

ಟೆರಿ ಪ್ರೆಚೆಟ್ ಹೇಳುತ್ತಾರೆ, ವ್ಯಕ್ತಿಯೊಬ್ಬ ಹುಟ್ಟುಹಾಕಿದ ಅಲೆಗಳು ಶಾಂತವಾಗುವವರೆಗೂ ಅವನಿಗೆ ಸಾವಿಲ್ಲ. ನಾವು ಹೇಳುತ್ತೇವೆ, ಸರ್, ನೀವು ನಮ್ಮೊಳಗೆ ಹುಟ್ಟುಹಾಕಿದ ಅಲೆಗಳು ಎಂದಿಗೂ ಶಾಂತವಾಗುವುದಿಲ್ಲ.

ಸಹಯಾನದ ಅಂಗಳದಲ್ಲಿ ಆಡಿ, ಬೆಳೆದ ಕಿಶೋರನೊಬ್ಬನ ಎದೆಯಾಳದ ಮಾತು ಇದು. ನಮ್ಮೆಲ್ಲರದೂ ಹೌದು....ಅವರೊಂದು ಪ್ರೀತಿಯ ಕೊಳ. ಆವಿಯಾಗುತ್ತಲೇ ಇರುತ್ತಾರೆ, ಮತ್ತೆ ಮಳೆಯಾಗಿ ಸುರಿಯುತ್ತಾರೆ. ತೇವಗೊಳ್ಳುತ್ತೇವೆ ಪ್ರತಿ ಮಳೆಗೂ ನಾವು..

                            -ಸುಧಾ ಆಡುಕಳ

                                   -