Thursday, June 07, 2018

ಹೊಳೆ - ಹಣ

ಬ್ಲಾಗ್ನಲ್ಲಿ ಬರೆಯದೇ ಅದೆಷ್ಟೋ ದಿನಗಳು ಕಳೆದುಹೋದವು. ಹೊಳೆಕೆರೆಯ ಹೊಳೆ ಇನ್ನೂ ನನ್ನೊಳಗೆ ಹರಿಯುತ್ತಲೇ ಇದೆ. ಹೊಳೆಯದೊಂದು ಕಥೆ ನಿಮಗಾಗಿ.

ಆಗ ನಾನಿನ್ನೂ ತೀರಾ ಸಣ್ಣವಳು. ಮೂರನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಶಾಲೆಯಿಂದ ಚಿತ್ರಾಪುರ ಮಠಕ್ಕೆ ಪ್ರವಾಸ ನಿಗದಿಯಾಗಿತ್ತು. ಹೋಗಲು ನನಗೆ ಮನೆಯಿಂದ ಅನುಮತಿ ಸಿಕ್ಕಿತ್ತು. ಆಗೆಲ್ಲ ಪ್ರವಾಸ ನಿಗದಿಯಾಯಿತೆಂದರೆ ಒಂದಿಡೀ ತಿಂಗಳು ನಾವು ಪ್ರವಾಸದ ಚೀಟಿ ತಯಾರಿಸುತ್ತಿದ್ದೆವು. ಅಂದರೆ ಹೀಗೆ. " ಆಡುಕಳ ಶಾಲಾ ಮಕ್ಕಳ ಚಿತ್ರಾಪುರ ಪ್ರವಾಸಕ್ಕೆ
ಜಯವಾಗಲಿ" ಅಂತ ಒಂದು ಬಗೆಯ ಚೀಟಿಯಾದರೆ, ಇನ್ನೊಂದು ಜಯವಾಯಿತು ಎಂಬ ಚೀಟಿ. ಮೊದಲನೆಯದನ್ನು ಹೋಗುವಾಗ ದಾರಿಯುದ್ದಕ್ಕೂ ಬಿಸಾಡಿದರೆ, ಎರಡನೆಯದನ್ನು ಬರುವಾಗ ಬಸ್ಸಿನ ಕಿಟಕಿಯಿಂದ ಹೊರಗೆ ಬಿಸಾಡುವುದು. ದಾರಿಯುದ್ದಕ್ಕೂ ಅದನ್ನು ಹೆಕ್ಕಿ ಓದುವವರಿಗೆ ನಮ್ಮ ಪ್ರವಾಸದ ವಿಷಯ ಗೊತ್ತಾಗಬೇಕೆಂಬುದು ನಮ್ಮ ಇಂಗಿತ. ಹಾಗೆ ನಾನೂ ಕೂಡ ನೂರಾರು ಚೀಟಿಗಳನ್ನು ತಯಾರಿಸಿ ನನ್ನ ಸ್ಕರ್ಟ ನ ಕಿಸೆಯಲ್ಲಿ ತುಂಬಿಸಿಕೊಂಡಿದ್ದೆ.

ಪ್ರವಾಸದ ಮೊದಲ ದಿನ ರಾತ್ರಿ ನಿದ್ರೆಯೇ ಮಾಡಿರಲಿಲ್ಲ.  ಬೆಳಗಾಗುವುದರೊಳಗೆ ಎದ್ದು ತಯಾರಾಗಿ, ಬೆಳಕು ಹರಿಯುವುದನ್ನೇ ಕಾಯುತ್ತಾ ಕುಳಿತಿದ್ದೆ. ನಾನು ಹೊರಡುವಾಗ ಅಪ್ಪ ನನ್ನ ಕೈಯಲ್ಲಿ ಕೆಲವು ನಾಣ್ಯಗಳನ್ನು ಕೊಟ್ಟರು.  ಹೇಗೂ ಕಿಸೆಯಲ್ಲಿ ಚೀಟಿಯಿತ್ತಲ್ಲ, ಹಾಗಾಗಿ ಅದನ್ನು ಕೈಯಲ್ಲಿ ಹಿಡಿದು ಹೊರಟೆ. (ಆಗೆಲ್ಲ ಸ್ಕೂಲ್ ಬ್ಯಾಗ್ ಎಂಬುದು ಬಹಳ ದುಬಾರಿಯಾಗಿದ್ದು, ನಮಗೆಲ್ಲ ಹತ್ತನೇ ತರಗತಿಯವರೆಗೆ ಚೀಲವೇ ಇರಲಿಲ್ಲ. ಅದರ ಬದಲು ಒಂದು ದಪ್ಪ ಇಲಾಸ್ಟಿಕ್ ಇರುತ್ತಿತ್ತು.  ಅದನ್ನು ಪುಸ್ತಕಕಗಳಿಗೆ ಹಾಕಿಕೊಂಡು ಹೋಗುತ್ತಿದ್ದೆವು.)

ನಮ್ಮೂರಿಂದ ಎಲ್ಲಿಗೆ ಹೊರಡಬೇಕೆಂದರೂ ಹೊಳೆ ದಾಟಲೇಬೇಕು. ನಾನು ಒಂದು ಕೈಯಲ್ಲಿ ನನ್ನ ಸ್ಕರ್ಟನ್ನು ಮೇಲಕ್ಕೆತ್ತಿಕೊಂಡು, ನಡುಹೊಳೆಗೆ ಬರುತ್ತಿದ್ದಂತೆ ಕೈಯಲ್ಲಿರುವ ಎಲ್ಲಾ ನಾಣ್ಯಗಳು ಹೊಳೆಯ ಪಾಲಾದವು. ನೀರು ತಿಳಿಯಾಗಿದ್ದರಿಂದ ನಾಣ್ಯಗಳು ಕಾಣುತ್ತಿದ್ದವು.  ಆದರೆ ಅವುಗಳನ್ನು ಹೆಕ್ಕಬೇಕೆಂದರೆ ನೀರಿನಲ್ಲಿ ಪೂರ್ಣವಾಗಿ ಮುಳುಗಬೇಕಿತ್ತು. ಆಗ ನಾನು ಪೂರ್ತಿಯಾಗಿ ಒದ್ದೆಯಾಗುತ್ತಿದ್ದೆ. ಮತ್ತೆ ಹಿಂದಿರುಗಿ ಮನೆಗೆ ಹೋದರೂ ಇನ್ನೊಂದು ಹೊಸ ಅಂಗಿ ಮನೆಯಲ್ಲಿಲ್ಲ. ಒಂದುಕ್ಷಣ ಯೋಚಿಸಿ, ಮತ್ತೆ ಸರಕ್ಕನೆ ಮುಳುಗಿ ನಾಣ್ಯವನ್ನು ಹೆಕ್ಕಿಕೊಂಡೆ. ಆದರೆ ಇವೆಲ್ಲದರ ಮಧ್ಯೆ ನನ್ನ ಪ್ರವಾಸದ ಚೀಟಿಗಳು ಒದ್ದೆಯಾದದ್ದು ನೆನಪಿಗೆ ಬಂದಿರಲಿಲ್ಲ.

ಮುಂದಿನದೆಲ್ಲವನ್ನು ನಿಮ್ಮ ಊಹೆಗೇ ಬಿಡುವುದೊಳಿತು.

Sunday, April 15, 2018

ರಜಾ ಮಜಾ

ಬೇಸಿಗೆ ರಜೆಯ ಜೊತೆಗೆ ಬಂದಿತು ನಟನಾ ಶಿಬಿರ
ನಟನೆಯ ಪಾಠದ ಜೊತೆಗೆ ವಿಧ ವಿಧ ಕಲೆಯ ವಿವರ
ನಗುವಾ, ನಗಿಸುವ, ಕುಣಿವಾ, ಕುಣಿಸುವ
ಚೆಂದದ ಬಾಲ್ಯದ ಶಿಬಿರ

ಬಾಲ್ಯದ ಬಣ್ಣದ ಮೇಳ
ನಮ್ಮಯ ಹೆಜ್ಜೆಯ ತಾಳ
ಧೀಂಕಿಟ ತರಿಕಿಟ ಕುಣಿತ
ಗೆರೆಗಳ ಜೊತೆಗಿನ ಆಟ
ನೋಡುತ, ಕುಣಿಯುತ್ತ, ನಲಿಯುತ, ಕಲಿಯುವ
ರಜಾಮಜಾದ ಕೂಟ

ಶಾಲೆಯ ಪಾಠದ ದಣಿವು
ಮರೆಯಲು ಬಯಸಿದೆ ಮನವು
ನೋಡುತ ಜಗದಾ ಚೆಲುವು
ಹೀರುವ ಕಾವ್ಯದ ಕಸುವು
ಚಿತ್ರವ ಬಿಡಿಸುವ, ರಂಗನು ಬೆರಸುವ
ಬೆರಳೇ ಆಗಲಿ ಕುಂಚ

ನಮ್ಮಯ ಕಲ್ಪನೆಗಳಿಗೆ
ವಿಶ್ವವು ಕೂಡಾ ಕಿರಿದೆ
ಮನಸಿನ ಭಾಷೆಯ ಪರಿಗೆ
ಸೋಲುವ ಭಾವದ ಸಿರಿಗೆ
ಅವರಿವರೆನ್ನದೆ ಎಲ್ಲರೂ ನಮ್ಮವರೆನ್ನುವ ಸುಂದರ ಗಳಿಗೆ

Wednesday, April 04, 2018

ಶಿಬಿರ ಗೀತೆ


ಧೀಂ ತನನನ ದಿತ್ತೋಂ ತಾರಾ
ಧೀಂ ತನನನ ದಿತ್ತೋಂ ತಾರಾ
............................ಬಣ್ಣದ ಹೆಜ್ಜೆ

ಬಾಲ್ಯಕ್ಕೆ ರಂಗನು ತುಂಬುವ ಬಣ್ಣದ ಹೆಜ್ಜೆ
ಭಾವಕ್ಕೆ ಗುಂಗನು ಬೆರೆಸುವ ಬಣ್ಣದ ಹೆಜ್ಜೆ
ಬದುಕಿನ ಕನಸನು ಹೆಣೆಯುವ ಬಣ್ಣದ ಹೆಜ್ಜೆ
ಬಯಕೆಗೆ ಭರವಸೆ ಬೆರೆಸುವ ಬಣ್ಣದ ಹೆಜ್ಜೆ
ಝೇಂಕರಿಸುವ ಪ್ರೀತಿಯ ಗೆಜ್ಜೆ
ಧೀಂತರಿಕಿಟ ಕುಣಿಯುವ ಹೆಜ್ಜೆ
ಕುಣಿತದ ತುಂಬ ಹಾಡಿನ ಲಜ್ಜೆ
ಧೀಂ ಧೀಂ ತನನ ತಾನಾ........

ಕನಸಿಗೆ ಸೀಮೆಯೂ ಅಲ್ಲ ಆಕಾಶ
ಅದರಾಚೆಗೂ ಹಬ್ಬಿದೆ ನೋಡು ಅವಕಾಶ
ಹಾರಾಡಲು ನೀಡಿ ನಮಗೆ ಕನಸಿನ ರೆಕ್ಕೆ
ಹಾರುವುದನು ಕಲಿಸುತಿದೆ ಬಣ್ಣದ ಹೆಜ್ಜೆ
ಹಕ್ಕಿಯಂತೆ ಹಾರುವ ನಾವು
ಚುಕ್ಕಿಗಳನು ಎಣಿಸುವ ನಾವು
ಗಡಿರೇಖೆಗಳ ಒರೆಸುವ ನಾವು
ಧೀಂ ಧೀಂ ತನನ ತಾನಾ....

ಗೆರೆಗಳನು ಬರೆಯಲು ಕಲಿಸುವ ಬಣ್ಣದ ಹೆಜ್ಜೆ
ಗಡಿಗಳನು ಮೀರಲು ತಿಳಿಸುವ ಬಣ್ಣದ ಹೆಜ್ಜೆ
ಮನಸನ್ನು ಅರಿಯಲು ಕಲಿಸುವ ಬಣ್ಣದ ಹೆಜ್ಜೆ
ಅನಿಸಿಕೆಗೆ ಭಾಷೆಯ ಬೆರೆಸುವ ಬಣ್ಣದ ಹೆಜ್ಜೆ
ಬಾಲ್ಯಕ್ಕೆ ಬೆರಗನು ತುಂಬುವ
ಬರಹಕ್ಕೆ ಭಾವವ ಬೆರೆಸುವ
ಬೇಲಿಯ ಹಂಗನು ತೊರೆಯುವ
ಧೀಂ ಧೀಂ ತನನ ತಾನಾ

Tuesday, April 03, 2018

ಗೋವರ್ಧನ ಗಿರಿಧಾರಿ

ಮಕ್ಕಳು: ಕಥೆ ಮುಗಿದೋಯ್ತಾ? ನಾವು ಹೇಳೋ ಕತೆ ಮುಗೀತು. ಆದ್ರೆ ನೀವು ಬೇಜಾರು ಮಾಡ್ಕೊಳ್ಳೋದೇನೂ ಬೇಕಾಗಿಲ್ಲ. ಇಲ್ಲೇ ಕಾಣ್ತಾ ಇದೆ  ನೋಡಿ, ಗೋವರ್ಧನಗಿರಿ. ಅಲ್ಲಿರೋ ಅಜ್ಜನ್ನ ಕೇಳಿದ್ರೆ ಇನ್ನು ಚೆಂದದ ಕತೆಯನ್ನ ಹೇಳ್ತಾನೆ.

(ಅಜ್ಜ ಮರದಡಿಯಲ್ಲಿ ಕುಳಿತಿರುವನು)
ಮಕ್ಕಳು: ಅಜ್ಜಾ, ಅಜ್ಜಾ ನಮಗೆ ಕೃಷ್ಣನ ಕತೆ ಹೇಳಿ.

ಅಜ್ಜ: ಹಾಂ, ಹೇಳೋಣಂತೆ. ಆದರೆ ಹೇಳಿ, ನಿಮ್ಮ ಕೃಷ್ಣ ಈಗ ಎಲ್ಲಿದ್ದಾನೆ ಅಂತ.

ಮಗು: ಅಜ್ಜಾ,  ಅವ ಈಗ ಅದೇ ಆ ಅಕ್ರೂರ ಅಂತ ಬಂದಿದ್ನಲ್ಲ ಅವನ ಜೊತೆ ಮಧುರೆಗೆ ಹೊರಟಿದ್ದಾನೆ ..

ಅಜ್ಜ: ಮಧುರೆಯ ಕತೆ ನಂಗೆಲ್ಲಿ ಗೊತ್ತು? ಯಾರ್ಯಾರೋ ಹೇಳಿದ್ದನ್ನು ಕೇಳಿ ಹೇಳಬಹುದಷ್ಟೆ. ಅದರಲ್ಲಿ ಸತ್ಯ ಎಷ್ಟು, ಮಿಥ್ಯೆ ಎಷ್ಟು ಒಂದೂ ಗೊತ್ತಿಲ್ಲ. ಆದರೆ ನಾನು ನಿಮಗೆ ಗೋಕುಲದಲ್ಲಿ ನಡೆದ ಒಂದು ಚೆಂದದ ಕಥೆನಾ ಹೇಳ್ತೇನೆ.

ಆಗ ಕೃಷ್ಣ ಚಿಗುರು ಮೀಸೆ ಹುಡುಗ ನೋಡಿ. ಅವನು ಬೀದೀಲಿ ಹೊರಟ ಅಂದ್ರೆ ಅವನ ಹಿಂದೆ ಗೋಪಾಲಕರು, ಗೋಪಿಕೆಯರ ದಂಡೆಯ ಹೊರಟ್ತಿತ್ತು.

(ಕೃಷ್ಣ , ಬಲರಾಮ. ಮತ್ತು ಗೋಪಿಕೆಯರ ಹಿಂಡು ಹೊರಡುವುದು)

ನಂದಗೋಪ: ಇದೇನು ಕೃಷ್ಣ, ಇಂದ್ರನ ಉತ್ಸವಕ್ಕೆ ಒಂದು ವಾರ ಮಾತ್ರ ಇದೆ. ನೀವು ನೋಡಿದರೆ ಹೀಗೆ ನಿರಾಳವಾಗಿ ತಿರುಗುತ್ತಾ ಇರುವಿರಿ?  ತಯಾರಿ ಮಾಡಬಾರದೇನು?

ಕೃಷ್ಣ: ಅಪ್ಪಾ, ಉತ್ಸವದ ಉಸ್ತುವಾರಿಗೆ ಸಣ್ಣ ಇದ್ದಾನಲ್ಲಾ.  ನಮಗೇನು ಕೆಲಸ ಅಲ್ಲಿ?

ನಂ: ಅರೆ ಕೃಷ್ಣ! ಏನಿದು ನಿನ್ನ ಮಾತು? ಕಳೆದಸಲ ಉತ್ಸವದ ಮುಂದಾಳು ಬಲರಾಮನಾಗಿದ್ದ. ಈ ಸಲದ ಸರದಿ ನಿನ್ನದಲ್ಕವೇನು?

ಕೃಷ್ಣ: ನನಗೆ ಇದೆಲ್ಲಾ ಆಗಿಬರದು ತಂದೆ. ನಾನು ಅದರಲ್ಲಿ ಭಾಗಿಯಾಗಲಾರೆ.

ನಂ: ಹಾಗಂದರೇನು? ನಾನೂ ನೋಡ್ತಿದ್ದೇನೆ ನೀನು ಇತ್ತೀಚೆಗೆ ತುಂಬಾ ಸೋಮಾರಿಯಾಗಿರುವೆ. ಗೋಪರನ್ನು ಸೇರಿಸಿಕೊಳ್ಳೋದು, ಬೀದಿ ಬೀದಿ ಅಲೆಯೋದು.  ಅದೆಲ್ಲಾ ನಿಲ್ಲಿಸು. ನಿನ್ನ ಪಟಾಲಂನವರಿಗೆಲ್ಲ ಹೇಳು ಇಂದ್ರೋತ್ಸವದ ತಯಾರಿ ನಡೆಸಲು.

ಕೃ: ಅಪ್ಪಾ, ನಾನೊಂದು ಮಾತು ಕೇಳಲೇನು?

ನಂ: ಕೇಳು.

ಕೃ: ನಾವು ಇಂದ್ರನನ್ನು ಯಾಕೆ ಪೂಜಿಸಬೇಕು?

ನಂ: ಹಾಗಂದರೇನು ಮಗು? ಇಂದ್ರ ನಮ್ಮ ದೇವರು. ಅದಕ್ಕೇ ಪೂಜಿಸಬೇಕು.

ನಂ: ಇಂದ್ರನೇ ಯಾಕೆ?

Monday, April 02, 2018

ಬೆಂಗಳೂರೆಂಬ ಮಾಯಾನಗರಿಯೂ ಮತ್ತು ನಾಟಕವೆಂಬ ಹಳ್ಳಿಗಾಡೂ....

ಇಪ್ಪತ್ತು ವರ್ಷಗಳ ಹಿಂದೆ ಎಂ. ಎಸ್ಸಿ. ಪರೀಕ್ಷೆ ಬರೆಯುವ ಸಲುವಾಗಿ ಬೆಂಗಳೂರಿಗೆ ಪ್ರಥಮವಾಗಿ ನಾನು ಕಾಲಿಟ್ಟಿದ್ದೆ. ಆಗ ಬೆಂಗಳೂರೆಂದರೆ ನನಗೆ ಅತೀವವಾದ ಭಯವಿತ್ತು. ಅನೇಕ ಚಲನಚಿತ್ರಗಳಲ್ಲಿ ( ಅದರಲ್ಲಿಯೂ ದೇವರಾಜ್ ಅಭಿನಯದ ಹುಲಿಯ ಚಿತ್ರ), ದಿನಪತ್ರಿಕೆಗಳಲ್ಲಿ, ಕ್ರೈಮ್ ನ್ಯೂಸ್ ಗಳಲ್ಲಿ ಬೆಂಗಳೂರಿನ ಕಥೆ ಕೇಳಿದ್ದ ನಾನು ಇದೊಂದು ರೌರವ ನರಕವೇ ಸರಿ ಎಂಬ ತೀರ್ಮಾನಕ್ಕೆ ಬಂದಿದ್ದೆ. ಅದು ಯಾ ಪಾಟಿ ಬೇರೂರಿತ್ತೆಂದರೆ ಬೆಂಗಳೂರಿನ ರಸ್ತೆಯಲ್ಲಿ ನಡೆಯುವಾಗ ಯಾವುದಾದರೂ ಕಾರಿನವರು ಸರಕ್ಕನೆ ನನ್ನನ್ನು ಸೆಳೆದೊಯ್ಯಬಹುದೆಂದೂ, ಬೆಂಗಳೂರಿನ ರಿಕ್ಷಾದವರು ನಿರ್ಜನ ಪ್ರದೇಶಕ್ಕೇ ಕರೆದೊಯ್ಯುತ್ತಿದ್ದಾರೆಂದು, ಹತ್ತಿರ ಹಾದುಹೋಗುವ ಸ್ಕೂಟರ್ ನವರೆಲ್ಲಾ ಸರಗಳ್ಳರೇ ಇರಬೇಕೆಂದು ನನಗೆ ಅನಿಸುತ್ತಿತ್ತು.  ಯಾರಲ್ಲಾದರೂ ದಾರಿ ಕೇಳಿದರೆ ಸುಳ್ಳೇ ಹೇಳುತ್ತಿದ್ದಾರೆಂದು, ಹಿಂದೆ ಯಾರಾದರೂ ಬರುತ್ತಿದ್ದರೆ ನನ್ನನ್ನೇ ಗುರಿಯಾಗಿಸಿ ಬರುತ್ತಿದ್ದಾರೆಂದೂ, ಬಸ್ ನಲ್ಲಿ ಯಾರಾದರೂ ಸೀಟು ಬಿಟ್ಟುಕೊಟ್ಟರೆ ಮೂಗಿಗೆ ಕರ್ಚೀಫ್ ಸೋಕಿಸಿ ಎಚ್ಚರ ತಪ್ಪಿಸಿವರೆಂದೂ........ ಹೀಗೆ ಏನೆಲ್ಲ ಕೆಟ್ಟದಿದೆಯೋ ಎಲ್ಲವನ್ನೂ ಬೆಂಗಳೂರಿಗೆ ಆರೋಪಿಸಿ ಇಲ್ಲಿಯ ತಂಪು ಹವೆಯಲ್ಲೂ ನಾನು ಬೆವರುತ್ತಿದ್ದೆ. ಮೊದಮೊದಲೆಲ್ಲ ಇವರ ಕೈಹಿಡಿದೇ ಎಲ್ಲ ಕಡೆ ಹೋಗುತ್ತಿದ್ದೆ. ಸಿಟಿ ಬಸ್ ನಲ್ಲಿ ನಾನು ಮುಂದೆ, ಇವರು ಹಿಂದಿನ ಬಾಗಿಲಿನಲ್ಲಿ ಹತ್ತಬೇಕಾದಾಗ ಎಷ್ಟು ಹೆದರಿಕೆಯಾಗುತ್ತಿತ್ತೆಂದರೆ ಬಸ್ ನಲ್ಲಿ ಇವರ ಮುಖ ಕಂಡಮೇಲಷ್ಟೇ ಮನಸ್ಸು ನಿರಾಳವಾಗುತ್ತಿತ್ತು. ಇನ್ನು ರಸ್ತೆ ದಾಟುವ ಪಾಡಂತೂ ಕೇಳಲೇಬೇಡಿ. " ನೀನು ಹೀಗೇ ನಿಂತರೆ ಒಂದು ವರ್ಷವಾದರೂ ರೋಡ್ ದಾಟಲಾಗದು" ಎಂದಿವರು ನನ್ನನ್ನು ಅಕ್ಷರಶಃ ಎಳೆದುಕೊಂಡೇ ರಸ್ತೆ ದಾಟುತ್ತಿದ್ದರು. ಆದರೂ ವಾಹನಗಳ ನಡುವೆ ನಡುರಸ್ತೆಯಲ್ಲಿ ನಿಂತಾಗ ನನಗರಿವಿಲ್ಲದೇ ಕಿರುಚಿ, ಇವರಿಗೆ ಅವಮಾನವಾಗುವಂತೆ ಮಾಡುತ್ತಿದ್ದೆ. ಬೆಂಗಳೂರಿಗೆ ಹೊರಡಲು ತಿಂಗಳಿದೆ ಎನ್ನುವಾಗಲೇ ನನಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ನನ್ನನ್ನು ಪರೀಕ್ಷಾಕೇಂದ್ರಕ್ಕೆ ಮುಟ್ಟಿಸುವುದಷ್ಟೇ ಅಲ್ಲ, ನಾನು ಪರೀಕ್ಷೆ ಬರೆದು ಹೊರಬರುವತನಕವೂ ಇವರು ಅಲ್ಲೇ ಕುಳಿತು ಕಾಯಬೇಕಿತ್ತು. ಪರೀಕ್ಷೆ ನನಗಾದರೂ ತಾಳ್ಮೆಯ ಪರೀಕ್ಷೆ ಇವರಿಗಾಗುತ್ತಿತ್ತು.

ಕಾಲೇಜಿಗೆ ಪದೋನ್ನತಿಯಾಗಿ ಮೌಲ್ಯಮಾಪನಕ್ಕೆಂದು ಬೆಂಗಳೂರಿಗೆ ಬರಬೇಕಾದಾಗ ಇವರು, "ಇದು ಇನ್ನು  ಪ್ರತಿ ವರ್ಷದ ಹಾಡು. ಅದಕ್ಕೆಲ್ಲಾ ನಿನ್ನ ಜೊತೆ ಬರಕ್ಕಾಗಲ್ಲ. ಒಬ್ಬಳೇ ಹೋಗಿಬರೋದನ್ನ ರೂಢಿಮಾಡಿಕೋ " ಎಂದು ಒಂದೇ ಟಿಕೆಟ್ ತೆಗೆದು ಕೈಗಿಟ್ಟಾಗ ಕಕ್ಕಾಬಿಕ್ಕಿಯಾಗಿದ್ದೆ. ಇವರಿಗೆ ಗೊತ್ತಿಲ್ಲದಂತೆ ಬೆಂಗಳೂರಿನಲ್ಲಿರುವ ಶಿಷ್ಯೋತ್ತಮನಿಗೆ ಕರೆಮಾಡಿ, ನನ್ನನ್ನು ಸ್ವಾಗತಿಸಲು ವಿನಂತಿಸಿಕೊಂಡಿದ್ದೆ. ಅವನು ಬಸ್ಸು ಬೆಂಗಳೂರಿಗೆ ಪ್ರವೇಶಿಸುತ್ತಿದ್ದಂತೆಯೇ ಕರೆಮಾಡಿ, ತಾನು ಮೆಜೆಸ್ಟಿಕ್ ನಿಲ್ದಾಣದಲ್ಲಿರುವುದಾಗಿ ಹೇಳಿದ್ದ. ರಾತ್ರಿ ಬಸ್ಸಿನಲ್ಲಿ ಕ್ಷಣ ಮಾತ್ರವೂ ನಿದ್ರಿಸದೇ, ಬೆಳಗಿನ ನಾಲ್ಕು ಗಂಟೆಗೆ ಬೆಂಗಳೂರು ಬಂದೇಬಿಟ್ಟಿತೆನಿಸಿ, ಅವನಿಗೆ ಕರೆಮಾಡಿ ಎಬ್ಬಿಸಿದ್ದೆ. ಮೊದಲ ಸಿಟಿಬಸ್ ಇರುವುದೇ ಆರರ ನಂತರ ಎಂದು ಹೇಳಿ ಅವ ಮತ್ತೆ ಮುಸುಕೆಳೆದು ಮಲಗಿದ್ದನೇನೋ? ಎರಡುದಿನ ರಜೆ ಮಾಡಿ ನನ್ನೊಂದಿಗೆ ತಿರುಗಿದ ಆತ ಇನ್ನು ನಿಮ್ಮ ತಲೆಗೆ ನಿಮ್ಮದೇ ಕೈ ಎಂದು ಮಾಯವಾಗಿದ್ದ. ನಾನು ಒಬ್ಬಳೇ ಮಾಯಾನಗರಿಯಲ್ಲಿ ಮೊದಲ ಹೆಜ್ಜೆಯಿಡುವ ಮಗುವಿನಂತೆ ನಿಧಾನಕ್ಕೆ ನಡೆಯತೊಡಗಿದ್ದೆ. ರಸ್ತೆ ದಾಟಲು ಪರದಾಡುವ ನನ್ನನ್ನು ಕಂಡು ಟ್ರಾಫಿಕ್ ಪೋಲೀಸರು ಸಹಾಯ ಮಾಡಿದ್ದಿದೆ. ದಾರಿ ಕೇಳಿದರೆ ಸಾವಧಾನವಾಗಿ ವಿವರಿಸುವ ಜನರು, ಬಸ್ ಕೇಳಿದರೆ ಹತ್ತಿಸಿಯೇ ಹೋಗುವವರು, ಮಾರುಮಾರಿಗೆ ಬೇಕಾದ್ದನ್ನು ಮಾರುವವರು........ಹೀಗೆ ಎಲ್ಲರೊಂದಾಗಿ ನನ್ನ ಬೆಂಗಳೂರಿನ ಭಯವನ್ನು ತೊಡೆದರು.

ಇಷ್ಟಾದರೂ ಬೆಂಗಳೂರು ಕಚೇರಿ ಕೆಲಸಕ್ಕೆಂದು ಬರುವ ಅನಿವಾರ್ಯವಾಯಿತೇ ಹೊರತು ಪ್ರವಾಸದ ಖುಶಿನೀಡುವ ತಾಣವಾಗಲಿಲ್ಲ. ನೋಡಿ ಮುಗಿಸಬೇಕಾದ ಫೈಲ್ ಆಯಿತೇ ವಿನಃ ಆಸೆಪಟ್ಟು ಓದುವ ಪುಸ್ತಕವಾಗಲಿಲ್ಲ. ಹೀಗೇ ಅನಿವಾರ್ಯವಾಗಿ ಬರುವುದು, ಕೆಲಸ ಮುಗಿದೊಡನೆ ಓಡುವುದು ಕಳೆದ ಐದಾರು ವರ್ಷಗಳಿಂದ ನಡೆದೇ ಇತ್ತು. ಆದರೆ ಕಳೆದ ವರ್ಷ ಶ್ರೀಪಾದ ರಂಗೋತ್ಸವಕ್ಕೆಂದು ಬೆಂಗಳೂರಿಗೆ ಬಂದಾಗ ನಿಜಕ್ಕೂ ಬೆಂಗಳೂರು ಆಪ್ಯಾಯಮಾನ ಎನಿಸತೊಡಗಿತು. ಎಲ್ಲ ರಂಗಸ್ನೇಹಿತರ ಭೇಟಿ, ಓಲಾ ಕ್ಯಾಬ್  ಬುಕ್ ಮಾಡಿ ಎಲ್ಲೆಂದರಲ್ಲಿ ಓಡಾಡಬಹುದಾದ ಸ್ವಚ್ಛಂದತೆ,  ಸಂಜೆಯಾದೊಡನೆ ರಂಗಶಂಕರದಲ್ಲಿ ತೆರೆದುಕೊಳ್ಳುವ ರಂಗ ಜಗತ್ತು ಬೆಂಗಳೂರಿನ ನೆನಪಿಗೆ ಬಣ್ಣ ಮೆತ್ತತೊಡಗಿದ್ದವು. ಮಕ್ಕಳಿಗಂತೂ ಬೆಂಗಳೂರೆಂದರೆ ರಂಗಶಂಕರ ಎಂಬಂತ ಗಾಢ ನೆನಪನ್ನು ಅದು ಉಳಿಸಿತು. ನಾನು ಕೇಳಿದ್ದಕ್ಕಿಂತ ಭಿನ್ನವಾದುದು ಕೂಡ ಬೆಂಗಳೂರಿನಲ್ಲಿದೆ ಎಂದು ನನಗನಿಸತೊಡಗಿತು.

ಇವೆಲ್ಲ ಮತ್ತೆ ಈಗ ಯಾಕೆ ನೆನಪಾಯಿತೆಂದರೆ ಒಂದು ವಾರದಿಂದ ಪುನಃ ಮತ್ತೆ ಬೆಂಗಳೂರಿನಲ್ಲಿದ್ದೇನೆ. ಇಂದು ಸಂಜೆ ಅನುಷ್  ಕಲಾಕ್ಷೇತ್ರದಲ್ಲಿ ವಾಲಿವಧೆ  ನಾಟಕವಿದೆ. ಬಿಡುವಾಗಿದ್ದರೆ ಬನ್ನಿ ಎಂದು ಸಂದೇಶ ರವಾನಿಸಿದ್ದ.  ಬಿಟ್ಟೂ ಬಿಡದೇ ಸುರಿವ ಮಳೆಯನ್ನೂ ಲೆಕ್ಕಿಸದೇ ಓಲಾದಲ್ಲಿ ಓಲಾಡುತ್ತಾ ಗೆಳತಿಯೊಂದಿಗೆ ಕಲಾಕ್ಷೇತ್ರಕ್ಕೆ ದೌಡಾಯಿಸಿದರೆ  ಹಿರಿಯ ಸಾಹಿತಿ ಕಂಬಾರರು ನಾಟಕೋತ್ಸವವನ್ನು ಉದ್ಘಾಟಿಸುತ್ತಿದ್ದರು. ಶೇಷಗಿರಿಯ ಕಲಾತಂಡದವರು ಕುವೆಂಪು ವಿರಚಿತ ವಾಲಿವಧೆಯನ್ನು ಭೇಷ್ ಎನ್ನುವಂತೆ ಪ್ರದರ್ಶಿಸಿದರು. ನಿರ್ದೇಶಕ ಎಂ. ಗಣೇಶ ಯಕ್ಷಗಾನದ ಮಟ್ಟುಗಳನ್ನು ಲೀಲಾಜಾಲವಾಗಿ ಉರುಳಿಸುತ್ತಿದ್ದರೆ ಪ್ರೇಕ್ಷಕರು ದಣಿವರಿಯದಂತೆ ಚಪ್ಪಾಳೆ,  ಶಿಳ್ಳೆ ಹೊಡೆಯುತ್ತಿದ್ದರು. ಹಳ್ಳಿ ಹುಡುಗರ ನಟನೆಯನ್ನು ಮನದುಂಬಿಕೊಳ್ಳುವ ಬೆಂಗಳೂರಿಗರನ್ನು ನೋಡುತ್ತಾ, ನೋಡುತ್ತಾ ಕ್ರಮೇಣ ನನಗೆ ದೇಶಕಾಲದ ತೆರೆಯೇ  ಅಳಿಸಿಹೋಗಿ ಇಲ್ಲೆಲ್ಲೋ ನನ್ನ ಹಳ್ಳಿಯಲ್ಲಿಯೇ ಇರುವೆನೆನಿಸಿ, ಸುತ್ತ ಕುಳಿತವರೆಲ್ಲ ನಮ್ಮಂತೆಯೇ ಸಂವೇದನೆಯುಳ್ಳ ಮನುಷ್ಯರಂತೆ ಕಂಡು ಬೆಂಗಳೂರಿನ ಬಗೆಗಿನ ಭಯವೆಲ್ಲ ಕರಗಿಹೋಯಿತು. ಬೆಂಗಳೂರಿನ ಬಗೆಗಿರುವ ಕೆಟ್ಟ ಭಾವನೆಯನ್ನೆಲ್ಲ ಭೋರೆಂದು ಸುರಿದ ಮಳೆ ಕೊಚ್ಚಿಹೋಯಿತು. ನಾಟಕ ಮುಗಿದು ಅನುಷ್, ಮುನ್ನಾ,  ಪ್ರಥ್ವಿನ್ ಎಲ್ಲರ ಕೈಕುಲುಕಿ ವಾಪಸಾಗುವಾಗ ಗೆಳತಿ ಹೇಳಿದಳು, "ಇನ್ನು ಪ್ರತಿಸಲ ಬಂದಾಗಲೂ ಹೀಗೇ ನಾಟಕ ನೋಡೋಣ" ಎಂದು.

ಹೌದಲ್ಲಾ,  ನಾನೀಗ ಮುಂದಿನ ಬೆಂಗಳೂರು ಭೇಟಿಗೆ ಕಾಯುತ್ತಿದ್ದೇನೆ. ಹಗಲಿಡೀ ಮೌಲ್ಯಮಾಪನ ಕಾರ್ಯ ಮಾಡಿ, ಸಂಜೆಯಾಗುತ್ತಿದ್ದಂತೇ ಓಲಾದಲ್ಲಿ ನಾಟಕ ಹುಡುಕಿ ಹೋಗಬೇಕು.  ರಂಗಶಂಕರದಲ್ಲಿ ಮತ್ತೆ ನಾಟಕ ನೋಡಬೇಕು.  ಬದುಕಿಗೆ ಮತ್ತಿಷ್ಟು ರಂಗು ಮೆತ್ತಿಕೊಳ್ಳಬೇಕು ಎಂಬೆಲ್ಲಾ ಕನಸು ಮೂಡಿಸಿದ ಇಂದಿನ ಪ್ರದರ್ಶನಕ್ಕೆ ನಾನು ಚಿರಋಣಿ. ಹಳ್ಳಿಗಾಡಿನ ಸೊಬಗ ಬೆಂಗಳೂರಿಗೆ ಬಳಿದ ನಾಟಕವೆಂಬ ಮಾಯೆಗೆ ಶರಣೆಂಬೆ. ಮುಂದಿನ ಬೆಂಗಳೂರು ಭೇಟಿಗೆ ಕಾಯುತ್ತಿರುವೆ.

Wednesday, March 28, 2018

ದೇಹಭಾಷೆ

ಪುಟ್ಟ ಹುಡುಗ ಚೌಕಿಮನೆಯಲ್ಲಿ ಯಕ್ಷಗಾನದ ವೇಷ ಕಟ್ಟುತ್ತಿದ್ದಾನೆ. ಅವನದು ಆ ದಿನ ಸ್ತ್ರೀ ಪಾತ್ರ. ಎದೆಗೆ ಕಂಚುಕ ಬಿಗಿದು ರವಿಕೆ ಹಾಕಿಯಾಗಿದೆ. ಕಪ್ಪು ಪೈಜಾಮ ತೊಟ್ಟು ಅದರ ಮೇಲೊಂದು ದಪ್ಪದ ಬಟ್ಟೆಯನ್ನು ನಡುವಿಗೆ ಸುತ್ತಲಾಗಿದೆ. ಸ್ತ್ರೀ ವೇಷದ ಕಿರೀಟ ತಲೆಯಲ್ಲಿದೆ. ಜಡೆ ಬೆನ್ನ ಹಿಂದೆ ತೂಗಾಡುತ್ತಿದೆ. ಸೀರೆಯೊಂದನ್ನು ನೆರಿಗೆಯಿಟ್ಟು ಸುತ್ತಬೇಕಷ್ಟೇ. ಯಾರೋ ಹೇಳಿದರು, " ಹೊರಗೆ ಅತಿಥಿಗಳು ಬಂದಿರುವರಂತೆ. ಒಮ್ಮೆ ಎಲ್ಲರೂ ಬಂದು ಮಾತಾಡಿಸಬೇಕಂತೆ."

ಎಲ್ಲರೊಂದಿಗೆ ಇವನೂ ತಕ್ಷಣ ಎದ್ದು ಕುಣಿಯುತ್ತಾ ಹೊರಟ. ವೇಷ ಕಟ್ಟುತ್ತಿದ್ದವ ಕರೆದು ಹೇಳಿದ,"ಏಯ್, ಎದೆಗೊಂದು ಮೇಲುವಸ್ತ್ರ ಹೊದೆದು ಹೋಗು" ಹುಡುಗನಿಗಾಗ ಎಚ್ಚರವಾಯ್ತು, " ಓಹೋ, ನಾನೀಗ ಹುಡುಗಿ" ಎಂದು. ತನ್ನ ಎದೆಯನ್ನೊಮ್ಮೆ ನೋಡಿ, ಮೇಲುವಸ್ತ್ರ ಹೊದೆದು ಹೊರಗೆ ಹೋದ!

Saturday, March 24, 2018

ಮಿಂಚಿದ ಮೂಗುಬೊಟ್ಟು

ಅದು ಬಾಲ್ಯಕಾಲದಲ್ಲಿ ಕಂಡ ಒಂದು ಅಚ್ಚಳಿಯದ ದೃಶ್ಯ. ಆಗೆಲ್ಲ ನಮ್ಮೂರಿಗೆ ಬರುವ ಹೆಂಚುಮಣ್ಣಿನ ಲಾರಿಗಳೇ ನಮ್ಮ ಸಂಪರ್ಕಸಾಧನಗಳಾಗಿದ್ದವು. ಹೀಗೆ ಒಮ್ಮೆ ಲಾರಿಯಲ್ಲಿ ಹೋಗುವಾಗ ರಸ್ತೆಯಂಚಿನ ಬಯಲಿನಲ್ಲಿ ಸಾಲುಸಾಲು ಜನರು ಸೇರಿದ್ದರು.  ನಮ್ಮ ಡ್ರೈವರ್ ಕೂಡಾ ಏನಾಗಿದೆಯೆಂದು ನೋಡಲು ಲಾರಿ ನಿಲ್ಲಿಸಿದ.  ಕುಡುಕ ಗಂಡನೊಬ್ಬ ಹೆಂಡತಿಯನ್ನು ಅಟ್ಟಾಡಿಸಿ ಹೊಡೆಯುತ್ತಿದ್ದ. ಅವಳ ಅತ್ತೆಯಿರಬೇಕು ಗುಡಿಸಲ ಪಕ್ಕ ನಿಂತವಳು. ಮತ್ತಿಷ್ಟು ಹೊಡೆಯುವಂತೆ ಪ್ರಚೋದಿಸುತ್ತಿದ್ದಳು. ಅವನು ಅವಳ ತಲೆಗೂದಲು ಹಿಡಿದು ಜಗ್ಗಾಡುತ್ತಾ, ಹಿಗ್ಗಾಮುಗ್ಗಾ ಬಾರಿಸುತ್ತಿದ್ದ. ಸೇರಿದವರೆಲ್ಲ. ಮುಸಿ ಮುಸಿ ನಗುತ್ತಾ, ' ಕುಡಿತ ಹೆಚ್ಚಾದರೆ ಹೀಗೆ 'ಎನ್ನುತ್ತಾ ಸಾಗುತ್ತಿದ್ದರು.

ಕರುಳು ಕಿವುಚುವ ಅವಳ ಕೂಗು ಎಷ್ಟೋ ದಿನ ನನ್ನನ್ನು ಕಲಕಿಬಿಟ್ಟಿತ್ತು. ಶಾಲೆಯಲ್ಲಿ ಬಂದು ಗೆಳತಿಗೆ ಹೇಳಿದಾಗ ಅವಳು ಆ ಊರಿಗೆ ಮದುವೆಯಾಗಿ ಹೋದ ತನ್ನ ಅಕ್ಕನಿರಬಹುದೆ  ಎಂದು ಯೋಚಿಸಿ ಕಣ್ಣೀರಾಗಿದ್ದಳು. ಆಗೆಲ್ಲ ನಮ್ಮ ಹಳ್ಳಿಯಲ್ಲಿ ಹೇಗಿತ್ತೆಂದರೆ ಮದುವೆಯಾಗಿ ವರ್ಷದೊಳಗೆ ಹೆಂಡತಿಗೆ ಹೊಡೆಯದಿದ್ದರೆ ಅವನು ಗಂಡಸೇ ಅಲ್ಲ ಎಂಬಂತೆ. ಹಾಗಾಗಿ ಮದುವೆಯಾಗಿ ತಿಂಗಳೊಳಗೇ ಕುಡಿದು ಬಂದು ಹೆಂಡತಿಗೊಮ್ಮೆ ಬಾರಿಸಿ, ತಮ್ಮ ಗಂಡಸ್ತನವನ್ನು ಸಾಬೀತುಗೊಳಿಸುತ್ತಿದ್ದರು.

ಪಟ್ಟಣದ ಶೋಕಿಯ ಜಗತ್ತಿಗೆ ಬಂದಮೇಲೆ ಅದೆಲ್ಲವೂ ಮನಸ್ಸಿನಾಳದಲ್ಲೆಲ್ಲೋ ತಳ್ಳಲ್ಪಟ್ಟ ನೆನಪುಗಳಾಗಿದ್ದವು. ಮೊನ್ನೆ ಮೊಗಳ್ಳಿಯವರ 'ಮೂಗುಬೊಟ್ಟು' ಕಥೆ ಓದಿದಾಗ ಮತ್ತೆ ಎಲ್ಲವೂ ತಾ ಮುಂದೆ, ತಾ ಮುಂದೆ ಎಂದು ಒತ್ತರಿಸಿ ಬಂದವು.
ಕುಡುಕ ಗಂಡನ ಪೌರುಷತ್ವದ ದಬ್ಬಾಳಿಕೆಗೆ ನಲುಗಿದ ತಾಯಿಯೊಬ್ಬಳು ತಾನಾಡಬೇಕಾದ ಒಂದು ಮಾತನ್ನು ಕೊನೆಗೂ ಆಡಲಾರದೆ ಮರೆಯಾಗುವ ಸಂಕಟದ ಕಥೆಯಿದು.  ಅದೆಲ್ಲವನ್ನೂ ಹೇಳುವ ಆ ಮುಗ್ಧ ಮಗುವಿನ ಅಸಹಾಯಕ ಸ್ಥಿತಿ ಓದುಗರೆದೆಯನ್ನು ಮರಮರನೆ ಕಲುಕಿಬಿಡುತ್ತದೆ. ಮಾತೇ ಆಡಲಾಗದ ಆ ಹೆಂಗಳೆಯರ ಮಾತು ಓದುಗರ ಗಂಟಲಿನವರೆಗೆ ಬಂದು ಹೊರಬರಲಾರದೇ ಚಡಪಡಿಸುತ್ತದೆ. ಅವರಾಡದ ಎಷ್ಟು ಮಾತುಗಳನ್ನಿಂದು ನಾವು ಆಡಬೇಕಿದೆ ಎಂಬುದನ್ನು ಸೂಚಿಸುತ್ತದೆ. ಓದಿ ಎರಡು ದಿನ ಏನನ್ನೂ ಬರೆಯಲಾರದಷ್ಟು ನನ್ನನ್ನು ಕಾಡಿತು. ಇನ್ನೂ ಹಳ್ಳಿಗಳಲ್ಲಿ ಹೆಣ್ಣಿನ ಸ್ಥಿತಿ ಹಾಗೆಯೇ ಇದೆಯೋ ಏನೋ ಯಾರಿಗೆ ಗೊತ್ತು?

ಕುಡಿದು ಬರುವ ಗಂಡನ ಹೊಡೆತ ತಾಳಲಾರದೇ ಇಡೀ ರಾತ್ರಿ ಬಯಲಲ್ಲಿ ಕಳೆವ ಹೆಂಗಸರು, ಮಕ್ಕಳನ್ನೆಲ್ಲಿ ಕೊಂದಾನೆಂದು ರಾತ್ರಿಯಿಡೀ ಎಚ್ಚರವಿದ್ದು ಕಾಯುವ ತಾಯಂದಿರು, ಕಟ್ಟಿದ ತಾಳಿಯನ್ನೂ ಗಂಡನ ಕುಡಿತಕ್ಕೆಂದು ಬಿಚ್ಚಿಕೊಡುವ ಪತಿವ್ರತೆಯರು....... ಇಷ್ಟಾದರೂ ಅನಾರೋಗ್ಯ, ಆಪತ್ತು ಬಂದರೆ ಗಂಡನ ಸೇವೆಗೆ ಟೊಂಕಕಟ್ಟಿ ನಿಲ್ಲುವ ಗರತಿಯರು..... ಎಲ್ಲರನ್ನೂ ಹಳ್ಳಿಯಲ್ಲಿ ಕಂಡು ನೊಂದಿರುವೆ. ಕುಡಿಯದವರೂ ಇದಕ್ಕೆ ಹೊರತೇನಲ್ಲ. ತನ್ನ ಮೊಣಕಾಲುದ್ದದ ಜಡೆಯನ್ನು ಗಂಡ ಬಾಯ್ಗತ್ತಿಯಿಂದ ಕೊಯ್ದುಬಿಟ್ಟ ಎನ್ನಲಾಗದೇ ಟೈಪಾಯ್ಡ್ ಬಂದು ಕೂದಲುದುರಿ ಮತ್ತೆ ಬರುತ್ತಿದೆ ಎಂದು ಕತೆಕಟ್ಟಿ ಹೇಳುತ್ತಿದ್ದ ಚಿಕ್ಕಮ್ಮನ ಮುಖ ಕಣ್ಣೆದುರು ಬಂದು ಕಾಡುತ್ತದೆ.

ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ಕನಿಷ್ಠ ದೈಹಿಕ ಹಿಂಸೆಯಿಂದಲಾದರೂ ಸ್ವಲ್ಪಮಟ್ಟಿಗೆ ಹೆಣ್ಣನ್ನು ರಕ್ಷಿಸಿದೆ ಅನಿಸುತ್ತದೆ. ಸತ್ಯವಾಗಲಿ ಎಂದೇ ಮನಸ್ಸು ಬಯಸುತ್ತದೆ. ಕಂಡುಂಡ ನೋವುಗಳಷ್ಟೇ ಇಂತಹ ಗಾಢವಾದ ಕತೆಯಾಗಲು ಸಾಧ್ಯವೇನೋ?

Friday, March 23, 2018

ಕಣಿವೆ ಹಾಡು - 4

ಚುಕು -ಬುಕು, ಚುಕು-ಬುಕು
ಚುಕು- ಬುಕು, ಚುಕು - ಬುಕು

ಓಡೋ ರೈಲುಗಾಡಿ
ಬರುವೆ ನಿನ್ನ ಜೋಡಿ
ಸಾಗೋಣ ದೂರ ದೂರ
ಸೇರೋಣ ದೂರದೂರ

ರಂಗು ರಂಗವೇರಿ
ಹಾಡ ಗುಂಗು ಏರಿ
ಜಗವೇ ಹಾಡುವಂತೆ
ಹಾಡುವೆನು ಮರೆತು ಚಿಂತೆ

Thursday, March 22, 2018

ಕಣಿವೆಯ ಹಾಡು -3

ಯುದ್ಧ - ಗಿದ್ದ ಗೆದ್ದೋನಲ್ಲ
ಈ ಸೈನಿಕ
ಬಿತ್ತಿದ ಕುಂಬಳ ಬೀಜವ ತುಂಬ
ಈ ಸೈನಿಕ

ಕೋವಿಯ ಹಿಡಿದು ಖೈದಿಯ ಕಾಯ್ದ
ಈ ಸೈನಿಕ
ಖೈದಿಯ ಹಾಡನು ಕಲಿತೆ ಬಿಟ್ಟ
ಈ ಸೈನಿಕ
ಕದ್ದೋಡಲು ಹೊರಟ ಖೈದಿಗಳನೆಲ್ಲ
ಸದ್ದಿಲೆ ಕರೆದಾತ
ಇವನೊಂದಿಗೆ ಕುಣಿದರು ಇವನೀಗ
ಅವರ ಸ್ನೇಹಿತ

ಬಿತ್ತಿದ ಬೀಜ ಮೊಳಕೆಯೊಡೆದು
ಬಳ್ಳಿ ಹಬ್ಬಿತು
ಪ್ರೀತಿಯ ಹಾಡು ಎದೆಗೆ ಇಳಿದು
ಭಾವ ಅರಳಿತು
ಬಳ್ಳಿಯ ತುಂಬಾ ದೊಡ್ಡ ದೊಡ್ಡ
ಸಿಹಿಯಾದ ಕುಂಬಳ
ಯುದ್ಧದ ಮಾತು ಮರೆತೇ ಹೋಯ್ತು
ಅಜ್ಜ ಈಗ ಕೃಷಿಕ

ಲೆಪ್ಟು- ರೈಟು, ಲೆಪ್ಟು- ರೈಟು
ಬಳ್ಳಿಗೆ ಆದೇಶ
ಅರೆರೆ ಬಳ್ಳಿಯು ಪಾಲಿಸುತ್ತಿದೆ
ಅಜ್ಜನ ಆದೇಶ
ಕುಂಬಳ ಬೆಳೆದು ಕಾಯುವೆ ನಾನು
ನನ್ನಯ ದೇಶ
ಕುಂಬಳದಂತೆ ಸಿಹಿಯನು ಹಂಚಿ ಸಾರುವೆ
ಶಾಂತಿಯ ಸಂದೇಶ

ಕಣಿವೆಯ ಹಾಡು- 2

ಕಣ್ಣ ಕವಿಯುವಂಥ ಕನಸು
ಮುಂದಿದೆ
ಕಾಯುತಿಹುದೆನ್ನ ಮನಸು

ಹಕ್ಕಿಯಂತೆ ಹಾರುವಾಸೆ
ಬೇಕು ಎರಡು ರೆಕ್ಕೆ
ದಿಗಂತದಾಚೆ ತೇಲುವಾಸೆ
ಮುಟ್ಟಿ ತಾರೆ ಚುಕ್ಕೆ

ಪುಟ್ಟ ಕಣಿವೆಯೂರಿನ
ದಿಟ್ಟ ಹುಡುಗಿ ನಾನು
ದೊಡ್ಡ ಕನಸು ನನ್ನದಿದೆ
ಮುಟ್ಟಬೇಕು ಅದನು

(Fast rhythm)
ಹಾಡಿ ಎಲ್ಲ ಹಾಡಿ
ನನ್ನ ಹಾಡು ಹಾಡಿ
ತೆರೆದು ಎದೆಯ ಕದವ
ಕನಸ ಕಸಿಯ ಮಾಡಿ
ಬಿತ್ತಿದಂತ ಬಿತ್ತವದು
ಮೊಳಕೆ ಚಿಗುರು ಉಸಿರು
ಅರಳಲಿ ಬಿಡಿ
ಎದೆಯ ತುಂಬಾ
ಹೂವು ಹಣ್ಣು ಹಸಿರು
ಹಾಡಿ ಎಲ್ಲ ಹಾಡಿ
ನಿಮ್ಮ ಎದೆಯ ಹಾಡು
ಹಾಡಿ ಎಲ್ಲ ಹಾಡಿ
ನಿಮ್ಮ ಕನಸ ಪಾಡು
ಹಾಡಿ ಎಲ್ಲ ಹಾಡಿ
ಸಂಕೋಚವನು ತೊರೆದು
ಹಾಡಿ ಎಲ್ಲ ಹಾಡಿ
ಸಂಕೋಲೆಗಳ ಕಳೆದು

Wednesday, March 21, 2018

ಕಣಿವೆಯ ಹಾಡು

ಶುಭವಿದಾಯ ನಿನಗೆ ಕಣಿವೆಯೆ
ಹೋಗಿಬರುವೆ ಹರಸು ನನ್ನ ಬಾಲ್ಯದೊಲುಮೆಯೆ

ನಿನ್ನ ಚಿಗುರು ನವಿರು ನನ್ನ
ಕೊರಳಲಡಗಿದೆ
ನಿನ್ನ ಹಕ್ಕಿ ರೆಕ್ಕೆಯ ಕೊಡು
ಹಾರಬೇಕಿದೆ
ದೂರತೀರದ ಆಚೆಯೆಲ್ಲೋ
ನನ್ನ ಬದುಕಿದೆ
ಹುಡುಕಿ ಹೊರಟ ನನಗೆ ನಿನ್ನ
ಒಲವು ಬೇಕಿದೆ

ನಿನ್ನ ಚೆಲುವು ಪ್ರೀತಿಯೊಲವು
ಮರೆಯಲಾರೆನು
ನಿನ್ನ ಸೀಮಿತ ಪರಿಧಿಯಲ್ಲಿ
ಬಾಳಲಾರೆನು
ದೂರ ಹೋದರೇನು ನಾನು
ಬೇರು ಇಲ್ಲಿದೆ
ನೀರನೆರೆವ ನಿನ್ನ ದಯೆಯು
ಎದೆಯ ತುಂಬಿದೆ

ನಿನ್ನ ಹಸಿರು, ಹೂವು, ಚಿಗುರು
ಎದೆಯ ಚಿತ್ರವಾಗಿದೆ
ನಿನ್ನಗಾಧ ಮೌನ ಮನದ
ಭಿತ್ತಿಯಾಗಿದೆ
ನೀ ನೀಡಿದ ದಿವ್ಯದೃಷ್ಟಿಯು
ಪುಷ್ಟಿಯಾಗಿದೆ
ನಿನ್ನ ಎದೆಯ ಹಾಡು ನನ್ನ
ಕಂಠ ತುಂಬಿದೆ

Monday, March 12, 2018

ಕಾಡುವ ಪಾದಗಳ ನೆನಪು

ಇಂದಿಡೀ ಕಿತ್ತುಹೋದ ಆ ತಾಯಿಯ ಪಾದಗಳೇ ಕಾಡಿದವು. ಒಂದು ಟೊಮ್ಯಾಟೊ ಗಿಡ ನೆಟ್ಟು ಎರಡು ತಿಂಗಳ ಮೇಲಾಯ್ತು. ಪ್ರತಿದಿನ ನೀರು, ವಾರಕ್ಕೊಮ್ಮೆ ಗೊಬ್ಬರಗಳ ಸೇವೆಯೂ ನಡೆಯಿತು. ಅಂತೂ ಬೆಟ್ಟದ ನೆಲ್ಲಿ ಗಾತ್ರದ ನಾಲ್ಕಾರು ಟೊಮ್ಯಾಟೋಗಳು ಈಗ ನೇತಾಡುತ್ತಿವೆ. ಮೊನ್ನೆ ಸಂತೆಯಲ್ಲಿ ಇಪ್ಪತ್ತು ರೂಪಾಯಿಗೆ ಮೂರುಕಿಲೋ ಟೊಮ್ಯಾಟೊ ಸಿಗುತ್ತಿತ್ತು. ಆ ಮೂರು ಕಿಲೋ ಟೊಮ್ಯಾಟೋಗೆ ರೈತನಿಗೆ ಸಿಕ್ಕಿದ್ದು ಹೆಚ್ಚೆಂದರೆ ಹತ್ತು ರೂಪಾಯಿಯಿದ್ದೀತು! ಆ ಹತ್ತು ರೂಪಾಯಿಗಾಗಿ ಅವನು ಪಟ್ಟ ಶ್ರಮವೆಷ್ಟಿದ್ದೀತು? ರೈತರ ಬವಣೆಗೆ ಕೊನೆಯೇ ಇಲ್ಲವೆನಿಸುತ್ತದೆ. ಎರಡು ತುತ್ತಿನಲ್ಲಿ ತಿನ್ನಬಹುದಾದ ಚಾಕಲೇಟ್ ಗೆ ಕಣ್ಮುಚ್ಚಿ ಐವತ್ತು ರೂಪಾಯಿ ಕೊಡುವ ನಾವು, ತರಕಾರಿಯವಳ ಕೂಡ ಒಂದು ರೂಪಾಯಿಗೂ ಚೌಕಾಶಿ ಮಾಡುತ್ತೇವೆ. ಆ ಪಾದಗಳಿಗೆ ಇನ್ನಾದರೂ ನ್ಯಾಯ ಸಿಗಲಿ. ಅನ್ನವಿಕ್ಕುವ ಜೀವಗಳು ನೆಮ್ಮೆಯಲ್ಲಿರಲಿ.

ನನಗೆ ಆ ಪಾದಗಳು ಮತ್ತೆ ನನ್ನಮ್ಮನನ್ನು ನೆನಪಿಸಿದವು. ಆ ದಿನ ಅಪ್ಪ, ಅಮ್ಮನಿಗೆ ದೊಡ್ಡ ಜಗಳವಾಗಿತ್ತು. ಅಂದರೆ ಸಣ್ಣ ಜಗಳಗಳು ದಿನವೂ ಸಾಮಾನ್ಯ ಎಂದರ್ಥ. ಜಗಳದ ಕೊನೆಯಲ್ಲಿ ಅಮ್ಮ ಮನೆಯಲ್ಲಿರಲೇಬೇಕೆಂದರೆ ದನ ಕಾಯ್ದುಕೊಂಡು ಇರಬೇಕು ಎಂದು ತೀರ್ಮಾನವಾಯಿತು. ಅಮ್ಮನೂ ಹಟದಿಂದ ಆಯಿತೆಂದು ಒಪ್ಪಿಯೇಬಿಟ್ಟಳು. ಹತ್ತಾರು ದನಗಳನ್ನು ಮೇಯಿಸಲು ಬೆಳಿಗ್ಗೆ ಕಾಡಿಗೆ ಹೋದರೆ ಸಂಜೆ ಬರುತ್ತಿದ್ದಳು. ಅಮ್ಮ ಕಾಲಿಗೆ ಚಪ್ಪಲಿ ಧರಿಸುತ್ತಿರಲಿಲ್ಲ. ಹೆಂಗಸರೆಲ್ಲ ಚಪ್ಪಲಿ ಧರಿಸುವ ಕ್ರಮವೂ ಅಲ್ಲಿರಲಿಲ್ಲ.  ಹೇಳಿ ಕೇಳಿ ಕಾಡಿನಲ್ಲಿ ಮುಳ್ಳುಗಳ ರಾಶಿ. ದಿನವೂ ಮನೆಗೆ ಬಂದು ಮುಳ್ಳು ತೆಗೆಯುವ ನೆವದಲ್ಲಿ ಸೂಜಿ ಚುಚ್ಚಿ ಮತ್ತೊಂದಿಷ್ಟು ಗಾಯ ಮಾಡಿಕೊಂಡಿದ್ದಳು. ಕುಂಟುತ್ತಾ ನಡೆಯುವ ಅವಳನ್ನು ಅಸಹಾಯಕತೆಯಿಂದ ನೋಡುವುದಷ್ಟೇ ನಮ್ಮ ಕೆಲಸವಾಗಿತ್ತು.  ಅಂತೂ ವಾರದೊಳಗೆ ರಾಜಿಯಾಗಿ ಅಮ್ಮ ಮನೆಯೊಳಗೆ ಬಂದರೋ ಮುಳ್ಳಿನ ಗಾಯಗಳು ಕೀವಾಗಿ ಮಾಯಲು ಎಷ್ಟೋ ದಿನಗಳನ್ನು ತೆಗೆದುಕೊಂಡಿದ್ದವು. ಅಮ್ಮನಿಗೂ,ಆ ತಾಯಿಗೂ ಒಂದು ಜೊತೆ ಹೊಸ ಚಪ್ಪಲಿಗಳನ್ನು ಕೊಡಿಸಬೇಕಿತ್ತು.

Sunday, March 11, 2018

ವಾವ್! ಅಕ್ಕ ಮತ್ತೆ ಬರೆಯುತ್ತಿದ್ದಾಳೆ

ನಾನಾಗ ಪುಟ್ಟ ಹುಡುಗಿ. ನನಗೊಬ್ಬಳು ಪುಟ್ಟ ಗೆಳತಿ. ಇಬ್ಬರಿಗೂ ಅದೆಂಥದ್ದೋ ಸೆಳೆತ. ನಮ್ಮ ಅಂದಿನ ದಿನಚರಿಯೆಂದರೆ ಪ್ರತಿದಿನ ನಾವಿಬ್ಬರೂ ಹೊಸದೊಂದು ಕವನ ಬರೆಯುತ್ತಿದ್ದೆವು. ಮತ್ತೆ ಬೆಳಿಗ್ಗೆ ಸಿಕ್ಕಿದಾಗ ನಮ್ಮ ಕವನಗಳನ್ನು ಪರಸ್ಪರ ಬದಲಾಯಿಸಿ ಓದುತ್ತಿದ್ದೆವು.

ಅವಳ ಅಕ್ಕಂದಿರೆಲ್ಲ ಕಾಲೇಜಿನಲ್ಲಿ ಓದುತ್ತಿದ್ದರು.  ಬಹಳ ಜಾಣೆಯರೂ ಹೌದು. ಹಾಗಾಗಿ ಅವಳಿಗೆ ಸಮಕಾಲೀನ ಸಾಹಿತ್ಯದ ಸಾಂಗತ್ಯವಿತ್ತೇನೊ? ಅವಳು ತನ್ನ ಕವನಕ್ಕೆ ತಲೆಬರಹ ಕೊಟ್ಟು ವಾಸ್ತವಿಕ ವಿಷಯದ ಬಗ್ಗೆ ಬರೆಯುತ್ತಿದ್ದಳು. ನನಗೋ ಅಪ್ಪನ ಯಕ್ಷಗಾನದ ಪದ್ಯ ಮತ್ತು ಅಮ್ಮನ ದೇವರನಾಮ ಬಿಟ್ಟರೆ ಬೇರೆ ಗೊತ್ತಿರಲಿಲ್ಲ. ಹಾಗಾಗಿ ಅಂಕಿತವನ್ನಿಟ್ಟುಕೊಂಡು ಹಾಡು ಬರೆಯುತ್ತಿದ್ದೆ.  ನನ್ನನ್ನು ಬಹಳ ಪ್ರೀತಿಸುತ್ತಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಹೆಸರನ್ನೇ ನನ್ನ ಅಂಕಿತವಾಗಿಸಿಕೊಂಡಿದ್ದೆ. ಹಾಗಾಗಿ ಕೃಷ್ಣಾನಂದ ಎಂಬುದು ನನ್ನ ಅಂಕಿತವಾಗಿತ್ತು. ಒಮ್ಮೆ ನಾವಿಬ್ಬರೂ ತಲೆಬರಹ ಮೇಲೋ, ಅಂಕಿತ ಮೇಲೋ ಎಂಬ ಬಗ್ಗೆಯೇ ಸುಮಾರು ಕವನಗಳನ್ನು ಬರೆದ ನೆನಪು.

ಸಾಧಾರಣವಾಗಿ ನನ್ನ ಕವನಗಳು ಹೀಗಿರುತ್ತಿದ್ದವು.
ಎಂದೂ ನನ್ನ ಮನದಲಿ
ನಿನ್ನಿರವೇ ಇರಲಿ
ಹೃದಯದಾಳದಲ್ಲಿ ನಿನ್ನ
ದಿವ್ಯರೂಪವಿರಲಿ

ನನ್ನ ಮನದ ಭಾವ ನೀ
ಮೀಟುವ ವೀಣೆಯಾಗಿರಲಿ
ನೋವು ನಲಿವು ಎಲ್ಲವೂ
ನಿನ್ನ ಕೃಪೆಯಾಗಿರಲಿ

ನನ್ನ ಕೀರ್ತಿ ಅಪಮಾನವು
ಎಂದೂ ನಿನ್ನದಾಗಿರಲಿ
ಸ್ವಾಮಿ ಕೃಷ್ಣಾನಂದನನ್ನು
ನಿರುತ ನೆನೆಯುತಿರಲಿ

ಹೀಗೆ ನಾನು ಬೇಸರವಾದರೆ, ದುಃಖವಾದರೆ ಕವನ ಬರೆಯುತ್ತಾ ನನ್ನನ್ನು ನಾನು ಮಹಾನ್ ಕವಿ ಎಂದುಕೊಂಡಿದ್ದೆ.  ಒಂದು ದಿನ ಪೇಟೆಯ ಶಾಲೆಗೆ ಹೋಗುವ ಅಕ್ಕ ಮನೆಗೆ ಬಂದಿದ್ದಳು. ನನಗೆ ಆ ದಿನ ಏನೋ ವಿಷಯಕ್ಕೆ ಬೇಸರವಾಗಿತ್ತು.  ಯಥಾಪ್ರಕಾರ ನಾನು
ಎಂದಿಗೆ ಒಯ್ಯುವೆಯೋ ಹರಿಯೆ
ಬಂಧನದಲಿ ಸಿಕ್ಕಿ ಬಳಲಿ ನಾ ಬೆಂಡಾದೆ

ಎಂದು ಹರಿಯೊಂದಿಗೆ ಗೋಳು ತೋಡಿಕೊಳ್ಳುವ ಪದ್ಯ ಬರೆದಿದ್ದೆ. ಅಕ್ಕ ನನ್ನ ಪದ್ಯವನ್ನು ಕದ್ದು ಓದಿದಳು. ಮತ್ತೆ ನನ್ನನ್ನು ಕರೆದು ಹೇಳಿದಳು, " ಕವನ ಅಂದರೆ ಹಾಗಲ್ಲ.  ಅದೆಲ್ಲ ಹಿಂದಿನ ಕಾಲದ ಭಜನೆಗಳು. ನೀನು ನಿನ್ನ ಪಾಠ ಪುಸ್ತಕದಲ್ಲಿಬರುತ್ತದೆಯಲ್ಲ, ಆ ಥರದ ಪದ್ಯ ಬರೆಯಬೇಕು. ಹೀಗಿದ್ದದ್ದೆಲ್ಲಾ ಎಷ್ಟು ಬೇಕಾದರೂ ಬರೆಯಬಹುದು."

ನನಗೆಷ್ಟು ಅರ್ಥವಾಯಿತೋ ಗೊತ್ತಿಲ್ಲ.  ಆದರೆ ಬೇರೆಯೇ ಒಂದು ಬರೆಯುವ ರೀತಿಯಿದೆ ಎಂಬುದಂತೂ ತಿಳಿಯಿತು. ನಂತರ ನಾನು, ನನ್ನ ಗೆಳತಿ ಕಾರಣಾಂತರಗಳಿಂದ ಬೇರೆ ಬೇರೆ ಶಾಲೆಗಳಿಗೆ ಹೋದೆವು. ಆದರೇನಂತೆ? ಪ್ರತಿ ವಾರ ನಮ್ಮ ಕವನಗಳನ್ನು ಹೊತ್ತ ಪತ್ರಗಳು ವಿನಿಮಯವಾಗುತ್ತಿದ್ದವು. ಕೊನೆಯ ಪತ್ರದಲ್ಲಿ ಅವಳು ತಾನು ' ಸಮರ ಸಾಹಸಿಗೆ ಹುಲ್ಲು ಹಾಸಿಗೆ' ಎಂಬ ನೀಳ್ಗವಿತೆ ಬರೆಯುತ್ತಿರುವುದಾಗಿ ಹೇಳಿದ್ದಳು. ಕಾಲೇಜಿನಲ್ಲಿ ತೆಗೆದುಕೊಂಡ ವಿಜ್ಞಾನದ ಹೆದರಿಕೆ ಮತ್ತೆ ನಮ್ಮ ಬರವಣಿಗೆಯನ್ನು ಬರಿದಾಗಿಸಿತು. ಪತ್ರಗಳೂ ಕ್ಷೀಣಿಸಿದವು. ಆ ಕಾಲದ ಪತ್ರಗಳನ್ನು ಮನೆಯೇ ಇರದ ನಾನು ಕಾಯ್ದಿಟ್ಟುಕೊಳ್ಳಲಾಗಲಿಲ್ಲ. ಅವಳೆಲ್ಲಾದರೂ ಇಟ್ಟುಕೊಂಡಿದ್ದಾಳೋ ಗೊತ್ತಿಲ್ಲ.  ಅವಳೆಲ್ಲಿರುವಳೆಂಬುದೂ ತಿಳಿದಿಲ್ಲ.

ಅಕ್ಕ ಪಕ್ಕಾ ಸಾಹಿತ್ಯದ ವಿದ್ಯಾರ್ಥಿ.  ಅವಧಾನಿಯಂತಹ ಪ್ರಸಿದ್ಧರ ಶಿಷ್ಯೆ. ಅವಳು ಡಿಗ್ರಿ ಮೊದಲ ವರ್ಷದವಳಿದ್ದಾಗಲೇ ಬೇಂದ್ರೆಯವರ ಸಖೀಗೀತಕ್ಕೆ ಭಾಷ್ಯ ಬರೆದು ಗುರುಗಳಿಂದ ಭೇಷ್ ಎನಿಸಿಕೊಂಡಿದ್ದಳು. ಪ್ರಾಣಿಬಲಿಯ ಕುರಿತು ಅವಳು ಬರೆದ ಮಾರಿಬಲಿ ಕತೆ ಕಾಲೇಜಿನಲ್ಲಿ ಹೊಸ ಸಂಚಲನ. ಮೂಡಿಸಿತ್ತು. ಆದರೆ ಅದೇ ವರ್ಷ ನಡೆದ ಮದುವೆ ಅವಳ ಕನಸನ್ನೆಲ್ಲಾ ಬಲಿತೆಗೆದುಕೊಂಡಿತು. ಇಪ್ಪತ್ತೈದು ವರ್ಷ ಅವಳು ಸವೆಸಿದ ಬದುಕು ಹತ್ತಾರು  ಕಾದಂಬರಿಗೆ ಸಾಕಾದೀತು!

ಈಗ ಅಕ್ಕ ಮತ್ತೆ ನೆಲೆಗೊಂಡಿದ್ದಾಳೆ. ಸ್ಮಾರ್ಟ್ ಫೋನ್ ಬಂದಮೇಲೆ ಸಣ್ಣಕ್ಕೆ ಸಾಹಿತ್ಯದ ರಚನೆ ಆರಂಭಿಸಿದ್ದಾಳೆ. ಹೇಗೆ ಬರೆಯೋದು? ನಂಗೊಂಚೂರು ಹೇಳೆ ಎಂದವಳು ಕೇಳುವಾಗ ಮತ್ತೆ ನನಗೆ ಬರೆಯುವುದನ್ನು ಕಲಿಸಿದ ಅಕ್ಕ ಕಣ್ಮುಂದೆ ಬಂದಳು. ನೆಲಮಟ್ಟದ ಬದುಕನ್ನು ಕಂಡ, ಬದುಕಿನ ಎಲ್ಲ ಕಷ್ಟಗಳನ್ನು ಉಂಡ ಅವಳು ಬರೆದಳೆಂದರೆ...... ಎಲ್ಲರ ಮಾರಿಬಲಿಯಾಗುವುದಂತೂ ಖಂಡಿತ! ನನಗೋ ಹೇಳತೀರದ ಹಿಗ್ಗು.....
ವಾವ್! ಅಕ್ಕ ಮತ್ತೆ ಬರೀತಿದ್ದಾಳೆ!

Friday, March 09, 2018

ಆ ಹುಡುಗ ನನಗಾಗಿ ದಿನವೂ ಹಾಡುತ್ತಾನೆ

ಮಗ ಸಂಗೀತ ಕಲಿಯಲು ಆರಂಭಿಸಿದ ನಂತರ ಸಂಗೀತ ಕೇಳುವುದೊಂದು ಗೀಳಾಗಿ ಹೋಯ್ತು. ಮೊದಲೆಲ್ಲ ಕೆಲಸ ಮಾಡುವಾಗ ಹಾಡುತ್ತಲೇ ಮಾಡುತ್ತಿದ್ದೆ. ಅರೆಯುವ ಕಲ್ಲಲ್ಲಿ ಬೀಸುವಾಗ, ಬಹಳ ಹೊತ್ತು ನಿಂತು ಬಟ್ಟೆ ಒಗೆಯುವಾಗ, ರಾಶಿಗಟ್ಟಲೆ ಪಾತ್ರೆ ತೊಳೆಯುವಾಗಲೆಲ್ಲ ಹಾಡಿನ ಜೊತೆ ಬೇಕಾಗುತ್ತಿತ್ತು. ಈಗ ಅಂತಹ ಸುದೀರ್ಘ ಕೆಲಸಗಳೇ ಕಣ್ಮರೆಯಾಗಿ ಹಾಡೂ ನನ್ನ ಕೈಬಿಟ್ಟು ಹೋಗಿತ್ತು. ಸಂಗೀತ ಕಲಿಯುವ ಮಗ ಮತ್ತೆ ನನಗೆ ಹಾಡಿನ ಗೀಳು ಹತ್ತಿಸಿದ. ಊಟ, ತಿಂಡಿ ಮಾಡುವಾಗ, ಏಕಾಂತದಲ್ಲಿರುವಾಗ, ಓದುವಾಗಲೆಲ್ಲ ನಾವು ಹಾಡು ಕೇಳುತ್ತಲೇ ಇರುತ್ತೇವೆ. ಹಾಗೆ ಕೇಳಲು ನಾವು ಯು ಟ್ಯೂಬ್ ನ ಮೊರೆಹೋಗುತ್ತೇವೆ. ಹಿಂದಿಯ ಝೀ ಸರೆಗಮಪ ಎಪಿಸೋಡುಗಳಿಗೆ ಹೋದರೆ ಮಕ್ಕಳು ಹಾಡುವ ಚೆಂದದ ಹಾಡುಗಳನ್ನು ಕೇಳಬಹುದು.

ಹೀಗೆ ಒಮ್ಮೆ ಹಾಡಿಗಾಗಿ ತಡಕಾಡುತ್ತಿರುವಾಗ ಸಿಕ್ಕಿದವನೇ ಅಝ್ಮತ್ ಹುಸೇನ್ ಎಂಬ ಪುಟ್ಟ ಬಾಲಕ. ಕೇವಲ ಹತ್ತು ವರ್ಷದವನಿದ್ದಾಲೇ ೨೦೧೧ ರ ಎಪಿಸೋಡಿನಲ್ಲಿ ಚಾಂಪಿಯನ್ ಆದವ. ಅವನ ಹಾಡುಗಳು ಅದೆಷ್ಟುಮೋಹಕವೆಂದರೆ ಕೇಳುತ್ತಿರುವಂತೆಯೇ ಹಾಡಿನೊಳಗೆ ನಾವು ಸೇರಿಹೋಗುತ್ತೇವೆ. ಗವಾಯಿಗಳ ಶೈಲಿಯಲ್ಲಿ ಅವನು ಉರ್ದುಮಿಶ್ರಿತ ಉಚ್ಛಾರದೊಂದಿಗೆ ಹಾಡತೊಡಗಿದನೆಂದರೆ...... ವಾಹ್! ಎಂತಹ ಕಲ್ಲೆದೆಯೂ ಕರಗಿ ಆರ್ದೃವಾಗುತ್ತದೆ. ಅವನ ಹಾಡುಗಳನ್ನು ಪದೇ ಪದೇ ಕೇಳಿದರೂ ಯಾಕೋ ಬೇಸರವೆನಿಸುವುದೇ ಇಲ್ಲ. ನೈನೋಮೆ ಮನ ....
ಎಂಬ ಅವನ ಹಾಡನ್ನು ನೂರಕ್ಕೂ ಹೆಚ್ಚಿಸಲು ಕೇಳಿರುವೆ. ಸಂಗೀತ ಅವನಿಗೆ ಕಲಿತು ಬಂದಿರುವುದಲ್ಲ. ಅದು ಅವನೊಳಗೇ ಇದೆ. ತಡೆಯಿರದ ಸುಧೆಯಾಗಿ ಹರಿಯುತ್ತದೆ.

ಅವನ ಕೌಟುಂಬಿಕ ಹಿನ್ನೆಲೆಯನ್ನು ನೋಡಿದರೆ ಅಯ್ಯೋ ಅನಿಸುತ್ತಿತ್ತು. ಫೀಸು ಕಟ್ಟಲು ಹಣವಿಲ್ಲವೆಂದು ಅವನು ಶಾಲೆಯನ್ನೇ ತೊರೆದಿದ್ದ. ಹಾಡುಗಳನ್ನೆಲ್ಲ ಅವನು ಕೇಳಿಯೇ ಕಲಿಸುವುದು. ಜೊತೆಯಲ್ಲಿ ಕುಶಲ ಹಾರ್ಮೋನಿಯಂ ವಾದಕನೂ ಹೌದು. ಗುರು ಕೈಲಾಶ್ ಖೇರ್ ಅವನ ಬಗ್ಗೊಮ್ಮೆ ಹೀಗೆ ಹೇಳಿದ್ದರು, " ಈ ಖಾನ್ ಸಾಬ್ ಇದ್ದಾನಲ್ಲಾ. ಹೀಗೆ ಸ್ವರಗಳ ಸಮುದ್ರದಲ್ಲಿ ನಿರಾಳವಾಗಿ ಮುಳುಗಿಬಿಡುತ್ತಾನೆ ಮತ್ತು ಗುಳುಗುಳು ಎನ್ನುತ್ತಾ ಆಳದಿಂದ ಒಂದು ಅದ್ಭುತ ಮುತ್ತನ್ನು ಆರಿಸಿ ತರುತ್ತಾನೆ " ಎಂದು. ನನಗೆ ಅವನ ಹಾಡು ಕೇಳುತ್ತಾ, ಕೇಳುತ್ತಾ ತೀರ ಬಡತನದ ಹಿನ್ನೆಲೆಯ ಅವನು ಸಂಗೀತ ಕಲಿಕೆಯನ್ನು ಮುಂದುವರೆಸಿರಬಹುದೇ? ಇಲ್ಲವೆ? ಸಂಗೀತದಿಂದ ದೂರವಾದರೆ ಅವನೆಷ್ಟು ಅಪೂರ್ಣ ಮತ್ತು ವಿಕಾರ ವ್ಯಕ್ತಿತ್ವದವನಾಗಬಹುದು ಎಂದೆಲ್ಲಾ ಚಿಂತೆಯಾಗತೊಡಗಿತು. ಮಗ ನನ್ನ ಮಾತನ್ನು ಕೇಳಿ ಹಾಡು ಕೇಳುವುದನ್ನು ಬಿಟ್ಟು ಅವನ ಬಗೆಗೆ ಯೋಚಿಸೋದು ತೀರ ಅತಿಯಾಯ್ತು ಎನ್ನುತ್ತಿದ್ದ. ನಾನವನಿಗೆ ಬಡತನದ ಹಿನ್ನೆಲೆಯ ಮುಸ್ಲಿಂ ಕುಟುಂಬದ ಸ್ಥಿತಿಗತಿ ಮತ್ತು ಅವರನ್ನು ಗುರಿಯಾಗಿಸಿಕೊಂಡ ಕಂದಾಚಾರಗಳ ಬಗೆಗೆ ತಿಳಿಸಿದಾಗ ಅವನಿಗೂ ಹೌದೆನ್ನಿಸಿತ್ತು. ಅಂತೂ ಮತ್ತೆ ಯೂ ಟ್ಯೂಬ್‌ ನ್ನು ಜಾಲಾಡಿ ಅವನು ಈಗಲೂ ಹಾಡುತ್ತಿರುವ ವೀಡಿಯೋ ತೋರಿಸಿದ. ಆದರೂ ಬಾಲ್ಯದ ಆ ಗಟ್ಟಿತನ ಈಗಿಲ್ಲ ಅನಿಸಿತು. ಏನೇ ಇರಲಿ ಹಾಡುತ್ತಿದ್ದಾನೆ ಎಂಬುದೊಂದು ನೆಮ್ಮದಿ ನಮಗೆ.

ಮತ್ತೀಗ ಪುಟ್ಟ ಅಝ್ಮತ್ ನನಗೆ ಬೇಕಾದಾಗಲೆಲ್ಲ ನಮ್ಮ ನಡುಮನೆಯಲ್ಲಿ ಕುಳಿತು ಎದೆತುಂಬಿ ಹಾಡುತ್ತಾನೆ  ಮತ್ತು ನಾವದನ್ನು ಕೇಳಿ ನಿರುಮ್ಮಳವಾಗುತ್ತೇವೆ. ಯಾವ ಜನ್ಮದ ಬಂಧವೇನೋ ಇದು? ಆ ಕಿಶೋರನಿಗಿದು ತಲುಪಿದರೆ ಎಷ್ಟು ಖುಶಿಪಟ್ಟಾನು ಅಲ್ಲವೆ?