ಕಗ್ಗತ್ತಲ ಕಾಲದಲಿ ಹಾಡುವುದು ಉಂಟೆ?
ಹೌದು, ಹಾಡುವುದು ಉಂಟು
ಕಗ್ಗತ್ತಲ ಕಾಲದ ಕುರಿತು
ಎನ್ನುತ್ತಾನೆ ಬ್ರೆಕ್ಟ್. ಜರ್ಮನಿಯ ಸರ್ವಾಧಿಕಾರಿಗಳ ವಿರುದ್ಧ ಎಂತೋ ಅಂತೆಯೇ ಕಮ್ಯುನಿಸ್ಟಗಳನ್ನೂ ಲೇವಡಿ ಮಾಡದೇ ಬಿಟ್ಟವನಲ್ಲ ಅವನು. ನಾಟಕದಲ್ಲಿ ಎಪಿಕ್ ಥಿಯೇಟರ್ ಎಂಬ ಹೊಸಪ್ರಕಾರವನ್ನೇ ಸೃಸ್ಟಿಸಿದವನು. ಇಂದಿಗೂ ಅವನ ಕವಿತೆಗಳನ್ನು, ಬರಹಗಳನ್ನು ಓದಿದರೆ ವರ್ತಮಾನದಲ್ಲಿಯೇ ನಿಂತು ಮಾತನಾಡುತ್ತಿದ್ದಾನೆ ಎಂಬಷ್ಟು ಸಾರ್ವಕಾಲಿಕ ಕವಿ ಬ್ರೆಕ್ಟ್. ಬ್ರೆಕ್ಟ್ನ ಕವಿತೆಗಳನ್ನಿಟ್ಟುಕೊಂಡು ಹೆಣೆದ ರಂಗಪ್ರಸ್ತುತಿಯನ್ನು ನೋಡುವ ಅವಕಾಶವೊಂದನ್ನು ಕುಂದಾಪುರ ಸಮುದಾಯವು ಒದಗಿಸಿಕೊಟ್ಟಿತು. ಡಾ. ವೆಂಕಟೇಶ ಅವರು ಬ್ರೆಕ್ಟ್ ಕವಿತೆಗಳನ್ನು ಆಳವಾಗಿ ಅಭ್ಯಸಿಸಿದವರು. ಅವರ ಸಂಶೋಧನಾ ಪ್ರಬಂಧವೂ ಬ್ರೆಕ್ಟ್ ಸಾಹಿತ್ಯವನ್ನು ಕುರಿತಾದದ್ದು. ಹಾಗಾಗಿಯೇ ಬ್ರೆಕ್ಟ್ ಕವಿತೆಗಳ ಸಾಗರದಿಂದ ವರ್ತಮಾನಕ್ಕೆ ಸಲ್ಲಬೇಕಾದ ಸೊಲ್ಲುಗಳನ್ನು ಆಯ್ದು ಪೋಣಿಸಲು ಅವರಿಗೆ ಸಾಧ್ಯವಾಗಿದೆ. ಅವರು ಆಯ್ದುಕೊಂಡ ಘನಪಾಠವನ್ನು ಕಟ್ಟಕಡೆಯ ಪ್ರೇಕ್ಷಕನಿಗೂ ಮುಟ್ಡಿಸಿಯೇ ತೀರಬೇಕೆಂಬ ಕಾಳಜಿಯಿಂದ ಒಂದಕ್ಷರವನ್ನೂ ಕಡೆಗಾಣಿಸದೇ ನುಡಿದವರು ಉದಯ ಅಂಕರವಳ್ಳಿ. ಬ್ರೆಕ್ಟ್ ನ ಜೀವನ ಮತ್ತು ಕವಿತೆಗಳ ಕೊಲಾಜ್ ನ್ನು ರಂಗಭಾಷೆಯಲ್ಲಿ ತೆರೆದಿಡುವುದು ಸುಲಭದ ಕೆಲಸವೇನೂ ಅಲ್ಲ. ಬ್ರೆಕ್ಟ್ ನ ದೈಹಿಕ ಭಾಷೆ ಮಾತ್ರವಲ್ಲ, ಕಾವ್ಯದ ಘಮವನ್ನೂ ಒಳಗೆ ಇಳಿಸಿಕೊಂಡಾಗ ಮಾತ್ರ ಈ ನಟನೆ ಸಾಧ್ಯ. ಉದಯ್ ಅವರ ಪರಿಶ್ರಮ ಪ್ರದರ್ಶನದುದ್ದಕ್ಕೂ ಕಾಣಿಸುತ್ತದೆ. ಬೆಳಕಿನ ವಿನ್ಯಾಸದಲ್ಕಾದ ತಾಂತ್ರಿಕ ತೊಡಕುಗಳು ಅವರನ್ನು ಹೆಚ್ಚೇನೂ ಬಾಧಿಸದಿರುವುದು ಈ ಕಾರಣಕ್ಕೆ. ಇಂಗ್ಲಿಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮವನ್ನು ಓದುವ ಇಂದಿನ ಯುವಜನಾಂಗ ನೋಡಲೇಬೇಕಾದ ರಂಗಪ್ರಸ್ತುತಿಯಿದು. ಸಾಮಾನ್ಯ ಪ್ರೇಕ್ಷಕರನ್ನೂ ಒಳಗೊಳ್ಳುವ ನಾಟಕವಿದು. ಆದಾಗ್ಯೂ ಬ್ರೆಕ್ಟ್ ಕೇವಲ ಕಟುವಿಮರ್ಶಕ ಮಾತ್ರವಲ್ಲ, ಅವನೊಳಗೊಬ್ಬ ವಿಡಂಬನೆಯ ವಿಟಿ ಕೂಡಾ ಇದ್ದ. ಅಂತಹ ಒಂದೆರಡು ಸನ್ನಿವೇಶಗಳನ್ನು ನಡುವೆ ಸೇರಿಸಿಕೊಂಡರೆ ಹಾಸ್ಯ ನಟನೆಯಲ್ಲಿ ಸೈ ಎನಿಸಿಕೊಂಡ ಉದಯ್ ಸ್ವಲ್ಪ ಉಸಿರೆಳೆದುಕೊಳ್ಳಬಹುದು, ಪ್ರೇಕ್ಷಕರೂ ಕೊಂಚ ನಿರಾಳತೆಯಿಂದ ಇನ್ನೊಂದು ಘನಪಾಠಕ್ಕೆ ಅಣಿಗೊಳ್ಳಬಹುದು ಅನಿಸಿತು. ಸಂಗೀತ ಸ್ವಲ್ಪ ಲೌಡ್ ಅನಿಸಿತು. ಮೊದಲ ಪ್ರಯೋಗವಾದ್ದರಿಂದ ಮುಂದೆ ಖಂಡಿತಕ್ಕೂ ಮಾರ್ಪಾಡಾದೀತು.
ಇಂಥದೊಂದು ಚಂದದ ಮತ್ತು ಸಾಂದರ್ಭಿಕವಾದ ರಂಗಪ್ರಸ್ತುತಿಯನ್ನು ನೋಡುವ ಅವಕಾಶ ಕಲ್ಪಿಸಿದ ಕುಂದಾಪುರ ಸಮುದಾಯಕ್ಕೆ, ಬ್ರೆಕ್ಟನನ್ನು ರಂಗಕ್ಕಿಳಿಸುವ ಸಾಹಸಕ್ಕೆ ಮುಂದಾದ ಇಡಿಯ ನಾಟಕ ತಂಡಕ್ಕೆ, ನಿದ್ದೆಯಿಂದೆಬ್ಬಿಸಿ ನಾಟಕಕ್ಕೆ ಕರೆದುಕೊಂಡು ಹೋದ ಶ್ರೀಪಾದಣ್ಣನಿಗೆ ರಾಶೀ ಪ್ರೀತಿ.
No comments:
Post a Comment