Saturday, December 03, 2022

ಹೊಸ ಕವಿತೆಗಳು

"ಮೈಸುಡುವ ಜ್ವರ, ಸಣ್ಣಗೆ ಚಳಿ
ಸ್ವರ ಬದಲಾಗಿದೆ" ಎಂದೆ ಫೋನಿನಲ್ಲಿ
"ಪ್ರೇಮದ ಅಮಲೇರಿದರೆ ಹಾಗೆ ಕಣೇ
ಒಳಗಿನ ಕಾವು ಸುಡುವುದು, ಹೊರಮೈಗೆ ನಡುಕ"
ಎಂದು ಪೋಲಿ ಮಾತಾಡಿ ನಕ್ಕುಬಿಟ್ಟ
ಕೋಪದಲಿ ಫೋನು ಕುಕ್ಕಿ, ಮೈತುಂಬ ಹಚ್ಚಡ
ಹೊದ್ದು ಮಲಗಿದರೆ ಹೊರಳಿಕೆ ತುಂಬ ಅವನೆ
ದೂಡಿದಷ್ಟೂ ಮೈಗೆ ಅಂಟಿಕೊಳ್ಳುತ್ತಾನೆ
ಡೋಲೋ 650ಯ ಅಮಲಿಗೆ ಅರೆಬರೆ ನಿದ್ದೆ-
ಯೊಳಗೂ ಅವನದೇ ಕನಸು, ಹಾಳಾದವನು!
ಕಷ್ಟದಲಿ ಕಣ್ತೆರೆದು ಪುಸ್ತಕವ ಬಿಡಿಸಿದರೆ...
"ಎಲ್ಲೋ ಬಡಿದ ಚಿಟ್ಟೆಯ ರೆಕ್ಕೆಗಳು 
ಇನ್ನೆಲ್ಲೋ ಬಿರುಗಾಳಿಯೆಬ್ಬಿಸುತ್ತವೆ" 
ಪತಂಗ ಪರಿಣಾಮ, ಮನದೊಳಗೆ ನೂರು ತರಂಗ
ಮಾಗಿಯ ಚಳಿ, ಹೂವರಳಿಸಿದ ವಸಂತ
ಮತ್ತೆ ಫೋನು ಕಿವಿಗಿಟ್ಟರೆ ಅತ್ತಲಿಂದ ದನಿ
"ದೇಹಕ್ಕೂ ಅದರದೇ ಭಾಷೆಯಿದೆ ಗೆಳತಿ
ತೀರ ಬುದ್ದಿವಂತರಿಗೆ ತಿಳಿಯುವಾಗ ತಡವಾಗುತ್ತದೆ"
ಕವಿತೆಯೀಗ ತಾಪವಿಳಿಸುವ ಡೋಲೋ-650


ಮುದ್ದು, ಚಿನ್ನಾ,
ಒಲವೇ, ಜೀವವೇ,
ಉಸಿರೇ...
ಎಂದೆಲ್ಲ ಕರೆದ ಮೇಲೂ
ಮತ್ತೆ ಉಳಿಯುವುದಲ್ಲ
ಎದೆಯಾಳದಲೇನೋ?
ಆ ಶೂನ್ಯವ ತುಂಬಲು
ಏನಾದರೂ ಕಳಿಸು

ಜತೆಗಿದ್ದಷ್ಟೂ ಹೊತ್ತು
ಸುಳ್ಳೇಕೆ ಹೇಳುವುದು
ಜತೆಗಿಲ್ಲದ ಹೊತ್ತೂ
ಒಬ್ಬರನಿಬ್ಬರು ಬಿಟ್ಟಿರದಂತೆ
ಹೆಣೆದುಕೊಂಡೇ ಇದ್ದರೂ
ಮತ್ತೂ ಹತ್ತಿರಾಗಬೇಕು
ಅನಿಸುವುದಕೆ ಕಾರಣವ ಹೇಳಿಬಿಡು

ನೆನೆದಾಗಲೆಲ್ಲ
ಸುಳಿದಾಗಲೆಲ್ಲ
ಸುಮ್ಮನೆ ಕುಳಿತಾಗಲೆಲ್ಲ
ಮೈಮನಗಳ ತುಂಬಾ 
ಅದೆಂಥದ್ದೋ ಹೇಳಲಾಗದ
ತಲ್ಲಣವೊಂದು ಉಸಿರಂತೆ
ಹರಿದಾಡುವುದಲ್ಲ
ಅದಕೊಂದು ಉಪಶಮನದ
ದಾರಿಯ ತೋರಿಬಿಡು