Saturday, December 03, 2022

ಹೊಸ ಕವಿತೆಗಳು

"ಮೈಸುಡುವ ಜ್ವರ, ಸಣ್ಣಗೆ ಚಳಿ
ಸ್ವರ ಬದಲಾಗಿದೆ" ಎಂದೆ ಫೋನಿನಲ್ಲಿ
"ಪ್ರೇಮದ ಅಮಲೇರಿದರೆ ಹಾಗೆ ಕಣೇ
ಒಳಗಿನ ಕಾವು ಸುಡುವುದು, ಹೊರಮೈಗೆ ನಡುಕ"
ಎಂದು ಪೋಲಿ ಮಾತಾಡಿ ನಕ್ಕುಬಿಟ್ಟ
ಕೋಪದಲಿ ಫೋನು ಕುಕ್ಕಿ, ಮೈತುಂಬ ಹಚ್ಚಡ
ಹೊದ್ದು ಮಲಗಿದರೆ ಹೊರಳಿಕೆ ತುಂಬ ಅವನೆ
ದೂಡಿದಷ್ಟೂ ಮೈಗೆ ಅಂಟಿಕೊಳ್ಳುತ್ತಾನೆ
ಡೋಲೋ 650ಯ ಅಮಲಿಗೆ ಅರೆಬರೆ ನಿದ್ದೆ-
ಯೊಳಗೂ ಅವನದೇ ಕನಸು, ಹಾಳಾದವನು!
ಕಷ್ಟದಲಿ ಕಣ್ತೆರೆದು ಪುಸ್ತಕವ ಬಿಡಿಸಿದರೆ...
"ಎಲ್ಲೋ ಬಡಿದ ಚಿಟ್ಟೆಯ ರೆಕ್ಕೆಗಳು 
ಇನ್ನೆಲ್ಲೋ ಬಿರುಗಾಳಿಯೆಬ್ಬಿಸುತ್ತವೆ" 
ಪತಂಗ ಪರಿಣಾಮ, ಮನದೊಳಗೆ ನೂರು ತರಂಗ
ಮಾಗಿಯ ಚಳಿ, ಹೂವರಳಿಸಿದ ವಸಂತ
ಮತ್ತೆ ಫೋನು ಕಿವಿಗಿಟ್ಟರೆ ಅತ್ತಲಿಂದ ದನಿ
"ದೇಹಕ್ಕೂ ಅದರದೇ ಭಾಷೆಯಿದೆ ಗೆಳತಿ
ತೀರ ಬುದ್ದಿವಂತರಿಗೆ ತಿಳಿಯುವಾಗ ತಡವಾಗುತ್ತದೆ"
ಕವಿತೆಯೀಗ ತಾಪವಿಳಿಸುವ ಡೋಲೋ-650


ಮುದ್ದು, ಚಿನ್ನಾ,
ಒಲವೇ, ಜೀವವೇ,
ಉಸಿರೇ...
ಎಂದೆಲ್ಲ ಕರೆದ ಮೇಲೂ
ಮತ್ತೆ ಉಳಿಯುವುದಲ್ಲ
ಎದೆಯಾಳದಲೇನೋ?
ಆ ಶೂನ್ಯವ ತುಂಬಲು
ಏನಾದರೂ ಕಳಿಸು

ಜತೆಗಿದ್ದಷ್ಟೂ ಹೊತ್ತು
ಸುಳ್ಳೇಕೆ ಹೇಳುವುದು
ಜತೆಗಿಲ್ಲದ ಹೊತ್ತೂ
ಒಬ್ಬರನಿಬ್ಬರು ಬಿಟ್ಟಿರದಂತೆ
ಹೆಣೆದುಕೊಂಡೇ ಇದ್ದರೂ
ಮತ್ತೂ ಹತ್ತಿರಾಗಬೇಕು
ಅನಿಸುವುದಕೆ ಕಾರಣವ ಹೇಳಿಬಿಡು

ನೆನೆದಾಗಲೆಲ್ಲ
ಸುಳಿದಾಗಲೆಲ್ಲ
ಸುಮ್ಮನೆ ಕುಳಿತಾಗಲೆಲ್ಲ
ಮೈಮನಗಳ ತುಂಬಾ 
ಅದೆಂಥದ್ದೋ ಹೇಳಲಾಗದ
ತಲ್ಲಣವೊಂದು ಉಸಿರಂತೆ
ಹರಿದಾಡುವುದಲ್ಲ
ಅದಕೊಂದು ಉಪಶಮನದ
ದಾರಿಯ ತೋರಿಬಿಡು

Wednesday, November 09, 2022

ನೆರುಡಾ

೧.ದಿನವೂ ಆಡುವೆ ನೀನು

ನೀನಿಲ್ಲಿರುವೆ,
ಓಹ್! ನನ್ನೆದೆಯಾಳದಲಿ
ಒಂದರೆಕ್ಷಣವೂ ಅಗಲದೇ ನನ್ನ

ಒಮ್ಮೊಮ್ನೆ ಬಿಗಿದಪ್ಪುವೆ ನನ್ನ ಬೆದರಿದವಳಂತೆ
ತಬ್ಬಿಹಿಡಿದ ಮೇಲೂ ಕೆಲವೊಮ್ಮೆ
ಭಯದ ನೆರಳು ಸುಳಿಯುತ್ತದೆ ನಿನ್ನ ಕಣ್ಣಿನೊಳಗೆ

ಈಗ, ಈಗಲೂ ಗೆಳತಿ
ನೀ ನನಗೆಂದು ತರುವೆ ಮಕರಂದಭರಿತ ಹೂಗಳನ್ನು
ನಿನ್ನೆದೆಯ ಆಘ್ರಾಣಿಸಿದಾಗಲೆಲ್ಲ
ಮತ್ತದೇ ಅಮಲೇರಿಸುವ ಘಮಲು

ತಣ್ಣಗೆ ಕೊರೆವ ಗಾಳಿ ಕೊಲ್ಲುತ್ತದೆ ಚಿಟ್ಟೆಗಳನ್ನು
ಆಗಲೂ ನಿನ್ನ ಪ್ರೀತಿಸುತ್ತೇನೆ ನಾನು
ನಿನ್ನ ತುಟಿಗಳ ಹಣ್ಣು ಕಚ್ಚಿದಾಗಲೆಲ್ಲ
ನನ್ನೊಳಗೆ ಆನಂದದ ಅಲೆಗಳ ಸೊಲ್ಲು

ನನ್ನೊಳಗೆ ಬೆರೆಯಲು ಅದೆಷ್ಟು ಪ್ರಯಾಸ ನಿನಗೆ!
ನನ್ನ ವ್ಯಗ್ರತೆ, ಆತ್ಮಕ್ಕಂಟಿದ ಏಕಾಂತ ಎಲ್ಲವನೂ 
ಹೆಸರಿನಿಂದ ಬೇರ್ಪಡಿಸುವೆ ನೀನು
ಬೆಳಗಿನ ತಾರೆಗಳು ನಮ್ಮ ಕಣ್ಣ ಚುಂಬಿಸಿ ಉರಿದು ಹೋಗುತ್ತವೆ
ಮಂದಬಿಸಿಲು ಗಾಳಿ ಪಂಖವನು ತಿರುಗಿಸುವುದು ನವಿರಾಗಿ

ನನ್ನ ಪದಗಳು ಮಳೆಯಾಗಿ ಸುರಿದು ತೋಯಿಸುವುದು ನಿನ್ನ
ಸೂರ್ಯನ ಕಾಂತಿಯ ಎರಕಹೊಯ್ದ ನಿನ್ನ ದೇಹವನು ಚುಂಬಿಸುವಾಗ
ನನ್ನಿಡೀ ಪ್ರಪಂಚವನು ಆಳುವವಳು ನೀನು
ಇದ ಬಿಟ್ಟು ಬೇರೇನು ಹೇಳಬಲ್ಲೆ ನಾನು?

ದೂರದ ಬೆಟ್ಟದಿಂದ ನಿನಗಾಗಿ ತರುವೆ
ಸಂತಸದ ಹೂಗಳನು, ನೀಲಪುಷ್ಪಗಳನು
ಮತ್ತು ಬುಟ್ಟಿ ತುಂಬಾ ಸವಿಮುತ್ತುಗಳನು
ನೋಡಲ್ಲಿ, ಚೆರ್ರಿತೋಟಕೆ ಏನೆಲ್ಲ ತಂದಿರುವ ವಸಂತ!
ಅವೆಲ್ಲವನೂ ನಿನಗಾಗಿ ತಂದೇತರುವೆ ನಾನು

         -ನೆರುಡಾ

೨. ನೀ ನನ್ನ ಮರೆತರೆ...

ಎಂದಾದರೊಂದು ದಿನ ನೀ ನನ್ನ ಮರೆತರೆ...
ನಿನಗಿದು ತಿಳಿದಿರಬೇಕೆಂದು ನಾ ಬಯಸುವೆ

ನಿನಗೆ ತಿಳಿದೇ ಇದೆ
ಸ್ಪಟಿಕದಂತೆ ಶುಭ್ರವಾಗಿ ಹೊಳೆಯುವ ಚಂದ್ರ
ಚಿಗುರಿದ ಕೆಂಪು ಟೊಂಗೆಯನ್ನೇರಿ ಕಿಟಕಿಯಲ್ಲಿಣುಕುವ ವಸಂತ
ಅಗ್ಗಷ್ಟಿಕೆಯ ಬೆಂಕಿಯ ಬೆಚ್ಚಗಿನ ಸ್ಪರ್ಶ
ನೆರಿಗೆಗೊಂಡ ಮರದ ಕಾಂಡದ ದೊರಗು
ಎಲ್ಲವೂ ನನ್ನ ನಿನ್ನೆಡೆಗೆ ಒಯ್ಯುತ್ತವೆ
ಸುತ್ತ ಸುಳಿದ ಸುಗಂಧ, ಬೆಳಕು, ಲೋಹದ ಹೊಳಪು
ಎಲ್ಲವೂ ಪುಟ್ಟ ದೋಣಿಗಳಾಗಿ ನನ್ನ
ಕರೆದೊಯ್ಯುತ್ತವೆ
ನೀನು ಕಾಯುತ್ತಿರುವ ದ್ವೀಪಗಳ ಕಡೆಗೆ

ಹೀಗೆಲ್ಲ ಇರುವಾಗಲೂ
ನಿನ್ನ ಪ್ರೀತಿ ನಿಧಾನವಾಗಿ ಕರಗಿಹೋದರೆ
ನಾನೂ ನಿನ್ನ ಪ್ರೀತಿಸುವುದ ನಿಲ್ಲಿಸಿಬಿಡುವೆ

ಇದ್ದಕ್ಕಿದ್ದಂತೆ ನೀ ನನ್ನ ಮರೆತೇಬಿಟ್ಟರೆ
ಮತ್ತೆ ನನ್ನ ಹುಡುಕಬೇಡ ಇನ್ನೆಲ್ಲಿಯೂ
ನಾನೂ ನಿನ್ನ ಮರೆತುಬಿಡುವೆ

        -ನೆರುಡಾ ಕವನ

೩. ನಿನ್ನ ನೆನಪಿಸಿಕೊಳ್ಳುವೆ ನೀನಿರುವಂತೆಯೆ

ನಿನ್ನ ನೆನಪಿಸಿಕೊಳ್ಳುತ್ತೇನೆ
ಕಳೆದ ವಸಂತದಲಿ ನೀನಿರುವಂತೆಯೆ
ಬೂದು ಬಣ್ಣದ ಟೋಪಿ, ಸ್ಥಿರವಾದ ಹೃದಯ
ಕಣ್ಣಿನಲ್ಲಿ ಉರಿಯುವ ಸಂಧ್ಯಾಕಾಲದ ಬೆಳಕಿನ ಹೊಳಪು
ನಿನ್ನಾತ್ಮದ ಜಲದ ಮೇಲೆ ಉದುರುತ್ತಿರುವ ಎಲೆಗಳು
ಎಲ್ಲವನ್ನೂ ನೆನಪಿಸಿಕೊಳ್ಳುತ್ತಿರುವೆ ಇರುವಂತೆಯೇ

ಬಳ್ಳಿಯಂತೆ ನನ್ನ ತೋಳನ್ನು ಬಳಸುವೆ ನೀನು
ಎಲೆಗಳಿಗೆಲ್ಲ ನಿನ್ನದೇ ದನಿಯ ಮೆಲುಕು
ಶಾಂತವಾದ ಪ್ರೀತಿಯ ಪಿಸುಮಾತುಗಳು
ವಿಸ್ಮಯದ ದೀಪೋತ್ಸವದಲ್ಲಿ ಉರಿಯುವ ನನ್ನ ಬಯಕೆಗಳು
ನನ್ನಾತ್ಮವನು ಸೂರೆಗೈಯ್ಯುವ ನೀಲಪುಷ್ಪಗಳ ಬೆರಗು!

ನಿನ್ನ ಕಣ್ಣುಗಳು ಪ್ರಯಾಣ ಹೊರಟಿದ್ದವು
ದೂರದಲ್ಲಿರುವ ವಸಂತನನು ಅರಸಿ
ಬೂದು ಬಣ್ಣದ ಟೋಪಿ, ಹಕ್ಕಿಗಳ ಚಿಲಿಪಿಲಿ
ನನ್ನಾತ್ಮ ನಿನ್ನೆದೆಗೆ ವಲಸೆ ಹೊರಟಿತ್ತು
ಮುತ್ತುಗಳು ಉರುಳುತ್ತಿದ್ದವು ಕೆಂಡಗಳಂತೆ ಬಿಸಿಯಾಗಿ

ನಾವೆಯ ಮೇಲಿನ ಆಕಾಶ, ಬೆಟ್ಟದಾಚೆಯ ಬಯಲು
ನಿನ್ನ ನೆನಪೆಂದರೆ ಬೆಳಕು, ಧೂಮ, ಶಾಂತ ಕೊಳ!
ನಿನ್ನ ಕಣ್ಣಿನಾಚೆಗೆ, ಬಹಳ ದೂರ, ಸಂಜೆ ಹೊಳೆಯುತ್ತಿತ್ತು
ವಸಂತ ಉದುರಿಸಿದ ಎಲೆಗಳು ನಿನ್ನಾತ್ಮದಲಿ ತಿರುಗುತ್ತಿದ್ದವು

            -ನೆರುಡಾ
೪.ಮಧ್ಯಾಹ್ನದ ಪರವಶತೆ

ಮಧ್ಯಾಹ್ನದ ಪರವಶತೆಯಲ್ಲಿ ನಾನು
ನನ್ನ ಬೇಸರದ ಬಲೆಯನ್ನು
ನಿನ್ನ ಕಣ್ಣ ಸಾಗರದಲ್ಲಿ ಹರಡುತ್ತೇನೆ
ಧಗಧಗಿಸುವ ಜ್ವಾಲೆಯಲ್ಲಿ ನನ್ನ ಏಕಾಂತ-
ವು ಲಂಬಿಸುತ್ತದೆ; ಉರಿಯುತ್ತದೆ

ಗೈರುಹಾಜರಾದ ನಿನ್ನ ಕಣ್ಣುಗಳಿಗೆ
ಕೆಂಪು ಸಂದೇಶವನ್ನುಕಳಿಸುತ್ತೇನೆ
ದೀಪಸ್ತಂಭದ ಬಳಿಯ ಸಾಗರದಂತೆ
ಅವು ಸುತ್ತ ಸುಳಿಯುತ್ತವೆ

ದೂರದಲ್ಲೆಲ್ಲೋ ಇರುವ ನನ್ನ ಜೀವವೇ,
ಬರಿಯ ಕತ್ತಲೆಯನ್ನಷ್ಟೇ ಉಳಿಸುವೆ ನೀನು
ನಿನ್ನ ನೆನೆದಾಗಲೆಲ್ಲ ಕರಾವಳಿಯ
ತೀರದಂತೆ ಅಲೆಗಳೇಳುತ್ತವೆ ನನ್ನೊಳಗೆ

ಮಧ್ಯಾಹ್ನದ ಪರವಶತೆಯಲ್ಲಿ ನಾನು
ನನ್ನ ಬೇಸರದ ಬಲೆಯನ್ನು ಸಾಗರಕ್ಕಸೆಯುತ್ತೇನೆ
ಅದು ನಿನ್ನ ಕಣ್ಣೊಳಗಿನ ಸಾಗರವನ್ನು ಹಿಮ್ಮೆಟ್ಟಿಸುತ್ತದೆ

ನಿನ್ನ ನಾ ಪ್ರೀತಿಸುವಾಗ ಹಕ್ಕಿ
ಮೊದಲ ತಾರೆಯನ್ನು ಕುಕ್ಕುತ್ತದೆ
ಆಗದು ನನ್ನಾತ್ಮದಂತೆ ಪ್ರಜ್ವಲಿಸುತ್ತದೆ
ನೆರಳನಾವರಿಸುವ ರಾತ್ರಿಯು
ನೆಲದ ಮೇಲೆ ನೀಲಿಯ ಎಳೆಯ ಚೆಲ್ಲುತ್ತದೆ

       -ನೆರುಡಾ

೫. ಬಿಳಿಯ ಜೇನುಹುಳ

ಓ ನನ್ನ ಬಿಳಿಯ ಜೇನುಹುಳವೇ,
ಜೇನುತುಪ್ಪವ ಹೀರಿ ನೀ ನನ್ನಾತ್ಮದೊಳಗೆ ಝೇಂಕರಿಸುತ್ತಿರುವೆ
ಮೆಲ್ಲನೆ ಸುತ್ತುವ ಹೊಗೆಯ ಸುರುಳಿಯಲ್ಲಿ ಚಲಿಸುತ್ತಿರವೆ

ನಾನು ಎಲ್ಲ ಭರವಸೆಗಳನ್ನೂ ಕಳಕೊಂಡವನು
ನನ್ನ ಮಾತುಗಳು ಪ್ರತಿಧ್ವನಿಸುವುದಿಲ್ಲ
ಎಲ್ಲವನ್ನೂ ಕಳಕೊಂಡವನು ಮತ್ತು
ಎಲ್ಲವನ್ನೂ ಹೊಂದಿರುವವನು!

ಓ ನನ್ನ ಅಂತಿಮ ಆಸೆಯ ಭದ್ರ ಎಳೆಯೇ,
ನಿನ್ನಲ್ಲಿ ನನ್ನ ಕೊನೆಯ ಭರವಸೆಯಿದೆ
ಬದುಕೆಂಬ ಬಂಜರು ಭೂಮಿಯಲ್ಲಿ ನೀನು ಅಂತಿಮ ಗುಲಾಬಿ

ಓ ನನ್ನ ಮೌನ ಸಂಗಾತಿಯೇ,
ನಿನ್ನ ಭಾರವಾದ ರೆಪ್ಪೆಗಳು ಮುಚ್ಚಲಿ
ಅಲ್ಲಿ ರಾತ್ರಿಯು ಸುಳಿಯುತ್ತದೆ
ಓಹ್! ನಿನ್ನ ದೇಹ, ಬೆದರಿದ ಪ್ರತಿಮೆ, ಬೆತ್ತಲು!
ರಾತ್ರಿಯನು ಮುಳುಗಿಸಿಕೊಂಡ ವಿಶಾಲ ಕಣ್ಣುಗಳು
ಹೂವುಗಳಂತೆ ತಂಪಾದ ತೋಳುಗಳು, ಗುಲಾಬಿಯ ಮಡಿಲು
ನಿನ್ನ ಮೊಲೆಗಳು ಬಿಳಿಯ ಬಸವನ ಹುಳಗಳು
ನೆರಳಿನ ಚಿಟ್ಟೆ ಕಿಬ್ಬೊಟ್ಟೆಯಲಿ ನಿರಾಳವಾಗಿ ನಿದ್ರಿಸುವುದು

ಓಹ್! ನನ್ನ ಮೌನ ಸಂಗಾತಿಯೇ,
ನೀನಿಲ್ಲದ ಏಕಾಂತವಿಲ್ಲಿ ಹರಡಿಕೊಂಡಿದೆ
ಮಳೆ ಸುರಿಯುತ್ತಿದೆ, ಸಮುದ್ರದ ಗಾಳಿ ದಾರಿ ತಪ್ಪಿದೆ
ಅಗೋ, ಕಡಲ ಹಕ್ಕಿಗಳ ಬೇಟೆಯಾಡುತ್ತಿದೆ
ಒದ್ದೆ ಬೀದಿಯ ತುಂಬಾ ನೀರು ಬರಿಗಾಲಿನಲ್ಲಿ ನಡೆಯುತ್ತಿದೆ
ಮರದ ಎಲೆಗಳು ಅನಾರೋಗ್ಯದ ದೂರು ದಾಖಲಿಸಿವೆ

ಓ ನನ್ನ ಬಿಳಿಯ ಜೇನುಹುಳವೇ,
ನೀ ದೂರವಾದರೂ, ನನ್ನಾತ್ಮದಲಿ ಝೇಂಕರಿಸುತ್ತಲೇ ಇರುವೆ
ನಿಧಾನವಾಗಿ, ಮೌನವಾಗಿ...
                  -ನೆರುಡಾ

೬. ದ್ವೀಪದಲ್ಲೊಂದು ಇರುಳು

ಇಡೀ ಇರುಳು ನಿನ್ನೊಂದಿಗೆ ನಿದ್ರಿಸಿದೆ
ಕಪ್ಪು ಭೂಮಿ ಜೀವ-ಮರಣಗಳ
ನಡುವೆ ಸುತ್ತುತ್ತಲೇ ಇತ್ತು

ಹಗಲು ನೆರಳಿನಲಿ ಒಟ್ಟಿಗೆ ನಡೆಯುವಾಗ
ನನ್ನ ಕೈಗಳು ನಿನ್ನ ನಡು ಬಳಸಿದವು
ರಾತ್ರಿಯಾಗಲೀ, ಹಗಲಾಗಲೀ
ನಮ್ಮನ್ನಿನ್ನು ಅಗಲಿಸಲಾರವು

          ‌‌ ‌    -ನೆರುಡಾ

೭. ಟೊಮ್ಯಾಟೋ ಪ್ರಗಾಥ

ಬೀದಿ
ಟೊಮ್ಯಾಟೋಗಳಿಂದ
ತುಂಬಿದೆ
ಬೇಸಿಗೆಯ
ಮಧ್ಯಾಹ್ನ,
ಬೆಳಕು
ಟೊಮ್ಯಾಟೋದಂತೆ
ಕತ್ತರಿಸಲ್ಪಟ್ಟಿದೆ
ಬೆಳಕಿನ 
ರಸ
ಹರಿದಿದೆ
ಬೀದಿತುಂಬಾ


ಡಿಸೆಂಬರ್ 
ಟೊಮ್ಯಾಟೋಗೆ
ತಡೆರಹಿತ ಮಾಸ
ಅಡುಗೆ ಮನೆಗೆ
ಅದರ ನೇರ ದಾಳಿ
ಊಟದ ಟೇಬಲ್ಲಿನಲ್ಲಿ
ಅದರದೇ ಪಾರುಪತ್ಯ
ಗ್ಲಾಸಿನಲ್ಲಿ,
ಪಾತ್ರೆಯಲ್ಲಿ,
ಬೆಣ್ಣೆಯ ಖಾದ್ಯಗಳಲ್ಲಿ
ಎಲ್ಲ ಬಗೆಯ ಅಡುಗೆಯಲ್ಲಿ
ಮೇಲ್ಮೆ ಮೆರೆಯುತ್ತದೆ

ಈಗ
ಟೊಮ್ಯಾಟೋ
ಚೆಲ್ಲುತ್ತಿದೆ
ತನ್ನದೇ ಬೆಳಕು
ಇದು ಟೊಮ್ಯಾಟೋ
-ದ ಪ್ರಗಾಥ

        -ನೆರುಡಾ
೮. ಈ ಇರುಳು ನಾನು ಕಡುದುಃಖದ ಸಾಲುಗಳನ್ನು ಬರೆಯಬಲ್ಲೆ

ಈ ಇರುಳು ನಾನು ಕಡುದುಃಖದ ಸಾಲುಗಳನ್ನು ಬರೆಯಬಲ್ಲೆ
ಹೀಗೆಲ್ಲ ಬರೆಯಬಲ್ಲೆ
"ರಾತ್ರಿಯು ಛಿದ್ರಗೊಂಡಿದೆ, ನೀಲಿತಾರೆಗಳು ದೂರದಲ್ಲಿ ನಡುಗುತ್ತಿವೆ"
ಆಗಸದ ತುಂಬ ರಾತ್ರಿಯ ತಂಗಾಳಿ ಸುಳಿಯುತ್ತಿದೆ, ಹಾಡುತ್ತಿದೆ

ಈ ಇರುಳು ನಾನು ಕಡುದುಃಖದ ಸಾಲುಗಳನ್ನು ಬರೆಯಬಲ್ಲೆ
ನಾನವಳನ್ನು ಗಾಢವಾಗಿ ಪ್ರೀತಿಸಿದೆ,
ಕೆಲವೊಮ್ಮೆ ಅವಳೂ ನನ್ನನ್ನು ಪ್ರೀತಿಸಿದಳು
ಅಂಥದೊಂದು ರಾತ್ರಿಯಲ್ಲಿ ನನ್ನ ತೋಳುಗಳಲ್ಲಿ ಅವಳನ್ನು ಬಂಧಿಸಿದೆ
ವಿಶಾಲ ಆಗಸದಡಿಯಲ್ಲಿ ಅವಳನ್ನು ಮತ್ತೆ, ಮತ್ತೆ ಚುಂಬಿಸಿದೆ

ಅವಳು ಕೆಲವೊಮ್ಮೆ ನನ್ನನ್ನು ಪ್ರೀತಿಸಿದಳು
ನಾನು ಅವಳನ್ನು ಸದಾ ಪ್ರೀತಿಸಿದೆ
ಅವಳ ವಿಶಾಲ, ನಿಶ್ಚಲ ಕಣ್ಣುಗಳನ್ನು
ಪ್ರೀತಿಸದಿರಲು ಹೇಗೆ ತಾನೇ ಸಾಧ್ಯ?

                      -ನೆರುಡಾ

೯. ನಾಯಿಯ ಸಾವು

ನನ್ನ ನಾಯಿ ಸತ್ತಿದೆ

ತೋಟದಲ್ಲಿರುವ ತುಕ್ಕುಹಿಡಿದ ಯಂತ್ರದ
ಪಕ್ಕದಲ್ಲಿಯೇ ಅದನ್ನು ಹೂಳಿರುವೆ

ಕೆಲ ದಿನಗಳ ಬಳಿಕ ಅವನನ್ನು ಭೇಟಿಯಾಗುತ್ತೇನೆ
ನನಗಿಂತ ಚೂರು ಬೇಗ ಹೊರಟಿದ್ದಾನೆ ಅವನು
ಬೆಚ್ಚಗಿನ ಕೋಟು, ಬೇಡದ ನಡವಳಿಕೆಗಳು,
ತಣ್ಣನೆಯ ಅವನ ಮೂಗು
ಎಲ್ಲವೂ ಹೊರಟಿವೆ ಅವನ ಜತೆಗೆ

ನಾನು ಭೌತಿಕವಾದಿ, ನಂಬಲಾರೆ ಸ್ವರ್ಗ-ನರಕಗಳ ಕಲ್ಪನೆಯನ್ನು
ಆದರೆ, ನಾನಿನ್ನೂ ಪ್ರವೇಶಿಸಿರದ ಸ್ವರ್ಗವೊಂದನ್ನು ನಂಬುತ್ತೇನೆ ಇನ್ನೂ


ಅದು ನಾಯಿಗಳ ಲೋಕದ ಸ್ವರ್ಗ
ಅಲ್ಲಿ ಅವನು ಬಾಲವಲ್ಲಾಡಿಸುತ್ತಾ ಕಾಯುತ್ತಿರುತ್ತಾನೆ
ಸ್ನೇಹಪೂರ್ವಕವಾಗಿ ನನ್ನನ್ನು

ಹೇ, ಎಂದಿಗೂ ನನ್ನ ಸೇವಕನಾಗಿರದ
ಒಳ್ಳೆಯ ಸಂಗಾತಿಯನ್ನು ಕಳಕೊಂಡಿರುವೆ ನಾನು
ಆದರೆ, ಭೂಮಿಯ ಮೇಲೆ ನಿಂತು
ಅವನ ಅಗಲಿಕೆಯ ಬಗ್ಗೆ ದಃಖಿಸಲಾರೆನು

             - ನೆರುಡಾ



೧೦.
ನಾನು ನಿನ್ನ ಪಾದಗಳನ್ನು ಚುಂಬಿಸುತ್ತೇನೆ
ಯಾಕೆಂದರೆ ಅವು ನಡೆಯುತ್ತವೆ
ನೆಲದ ಮೇಲೆ, ಗಾಳಿಯ ಮೇಲೆ,
ನೀರಿನ ಮೇಲೆ
ನನ್ನ ತಲುಪುವವರೆಗೂ.....

                   -ನೆರುಡಾ

೧೧.
ನೆರುಡಾ ಕವನ

ಕವಿತೆ

ಅದೊಂದು ದಿನ,
ಕವಿತೆ ನನ್ನ ಹುಡುಕಿ ಬಂತು
ಇಂದಿಗೂ ತಿಳಿದಿಲ್ಲ
ಎಲ್ಲಿಂದ ಬಂತು?

ಶಿಶಿರದ ತಂಪಿನಿಂದಲೋ, 
ನದಿಯ ಹರಿವಿನಿಂದಲೋ
ಎಲ್ಲಿ, ಹೇಗೆ, ಯಾಕೆ ಬಂತು?

ಶಬ್ದವಿರಲಿಲ್ಲ, ಪದಗಳಿರಲಿಲ್ಲ
ಮೌನವೂ ಅಲ್ಲ!
ನಡುಬೀದಿಯಲಿ ಏಕಾಂಗಿ ನಿಂತು
ನನ್ನ ಕರೆಯಿತು!

ನೀರವ ರಾತ್ರಿಯ ಪ್ರಹರದಂತೆ,
ಉರಿವ ಜ್ವಾಲೆಯ ಕುರುಹಿನಂತೆ
ಥಟ್ಟನೆ ನನ್ನೆದುರು ಹರಿದು ಬಂತು

ನನ್ನಾತ್ಮದ ಬಾಗಿಲನು ತಟ್ಟಿತು

ಮಾತು ಬಾರದಾಯ್ತು, 
ಹೆಸರು ಮರೆತುಹೋಯ್ತು
ಮೈಯ್ಯ ತಾಪವೇರಿ ನಡುಗಿದೆ
ಉರಿವ ಕುರುಹ ಅರಿಯತೊಡಗಿದೆ
ನನ್ನ ಮೊದಲ ಸಾಲು ಬರೆದೆ

ಮಸುಕಾದ ಸಾಲು, 
ಅರ್ಥಗಳ ಹಂಗಿಲ್ಲದ, ಶುದ್ಧ ಮೂರ್ಖತನದ
ಏನೂ ತಿಳಿಯೆನೆಂಬ ಮುಗ್ಧ ಅರಿವಿನ ಸಾಲು

ಅರೆ! ಏನಾಶ್ಚರ್ಯ!

ಸ್ವರ್ಗ ನನ್ನೆದುರು ತೆರೆದುಕೊಂಡಿತು
ಗ್ರಹ, ತಾರೆಗಳು ಉರುಳತೊಡಗಿದವು
ಕತ್ತಲೆಯು ಹರಿಯತೊಡಗಿತು
ನಿಗೂಢ ಶರಗಳು ಬೆಳಕು, ಹೂಗಳ
ಭೂಮಿಗೆ ಸುರಿಯತೊಡಗಿದವು

ತಾರೆಗಳ ತೋಟದಲ್ಲಿ ತೇಲಿದೆ ನಾನು
ಹೃದಯ ಹಗುರಾಗಿ ಗಾಳಿಗೂಡಿತು
ಹೀಗೆ, ಹೀಗೆ....
ಅದೊಂದು ದಿನ ಕವಿತೆ ಬಂತು

೧೨.

ನಾವು ಇದನ್ನೂ ಕಳಕೊಂಡಿದ್ದೇವೆ

ನಾವು ಈ ಮುಸ್ಸಂಜೆಯನ್ನೂ ಕಳಕೊಂಡಿದ್ದೇವೆ
ನೀಲಿ ರಾತ್ರಿಯು ಈ ಜಗವ ಕವಿಯುವ 
ಮೊದಲ ಜಾವದಲಿ ನಾವು ಕೈಯ್ಯಲ್ಲಿ ಕೈಯಿಟ್ಟು
ನಡೆಯುವ ದೃಶ್ಯವನ್ನು ಇಂದು ಯಾರೂ ನೋಡಲಿಲ್ಲ

ಕಿಟಕಿಯಿಂದ ನೋಡಿದೆ, ಆ ಬೆಟ್ಟದ 
ತುದಿಯಲ್ಲಿ ಸೂರ್ಯಾಸ್ತದ ಹಬ್ಬ!
ಕೆಲವೊಮ್ಮೆ ಸೂರ್ಯನ ತುಣುಕೊಂದು
ನಮ್ಮ ಬೆರಳುಗಳ ನಡುವೆ ಉರಿದುಹೋಗುತ್ತದೆ
ನಾನು ನಿನ್ನನ್ನು ನೆನೆಯುತ್ತೇನೆ
ನಿನಗೆ ತಿಳಿದಿರುವ ನನ್ನ ನೋವು
ಆತ್ಮದಲಿ ಮಿಸುಕಾಡಿ ಮುದುಡಿಸುತ್ತದೆ

ಎಲ್ಲಿರುವೆ ಹೇಳು ನೀನು? ಯಾರಿದ್ದಾರೆ ನಿನ್ನೊಂದಿಗೆ?
ಏನು ಹೇಳಲಿ? ನಾನು ಬೇಸರದಲ್ಲಿರುವಾಗ
ನೀನು ಅಲ್ಲೆಲ್ಲೋ ಇರುವಾಗ..
ಪ್ರೀತಿಯ ಪೂರ್ಣತೆಯೊಂದು ನನ್ನಲ್ಲಿ ಮೂಡುವುದಾದರೂ ಯಾಕೆ?
ಮುಸ್ಸಂಜೆಯ ಪುಸ್ತಕದ ಪುಟಗಳಿಂದು ಮಗುಚಿಬಿದ್ದಿವೆ
ಯಾವಾಗಲೂ, ಯಾವಾಗಲೂ ನೀನು
ಮುಸ್ಸಂಜೆಯ ಪ್ರತಿಮೆಗಳನ್ನು ಅಳಿಸಿಹಾಕುವ
ಸಂಜೆಗಳ ಮೂಲಕ ಹಿಮ್ಮೆಟ್ಟಿಸಿಬಿಡುವೆ

        -ನೆರುಡ
೧೩.

ನಿನ್ನ ಎದೆಯೊಂದೇ ಸಾಕು

ನಿನ್ನ ಎದೆಯೊಂದೇ ಸಾಕು ಙ್ನ ಹೃದಯಕ್ಕೆ
ನಿನ್ನ ಸ್ವಾತಂತ್ರ್ಯಕ್ಕೆ ನಾ ಕಟ್ಟಿದ ರೆಕ್ಕೆಗಳವು
ನಿನ್ನ ಆತ್ಮದ ಆಚೆಗೆ ನಿದ್ರಿಸಿರುವ ಎಲ್ಲಕ್ಕೂ
ನನ್ನ ಬಾಯಿಯಿಂದಲೇ ಸ್ವರ್ಗಕ್ಕೆ ದಾರಿ

ನಿನ್ನಲ್ಲಿ ಪ್ರತಿದಿನದ ಭ್ರಮೆಯಿದೆ
ನೀನು ಬರುವೆ ಹೂವಿನೊಳಗವತರಿಸುವ ಮಕರಂದದಂತೆ
ನಿನ್ನ ಗೈರುಹಾಜರಿ ಇಡಿಯ ದಿಗಂತವನು ಬರಿದಾಗಿಸುವುದು
ಶಾಶ್ವತವಾಗಿರುವೆ ನೀನು ಅಲೆಯಂತೆ ಹಾರಾಟದಲಿ
ಆಲದಂತೆ, ಅರಳಿಯಂತೆ ಹಾಡುವೆ ನೀನು ಗಾಳಿಯಲಿ
ಆ ಮರಗಳಂತೆ ನೀನು ಎತ್ತರ ಮತ್ತು ಮೌನಿ
ನೀನು ಇದ್ದಕ್ಕಿದ್ದಂತೆ ದುಃಖಿಯಾಗಿಬಿಡುವೆ
 ಸಮುದ್ರಯಾನಿಯಂತೆ ಕೆಲವೊಮ್ಮೆ
ಹಳೆಯ ರಸ್ತೆಗಳಂತೆ ಬೇಕಾದುದೆಲ್ಲವನ್ನೂ ರಾಶಿಯೊಟ್ಟುವೆ
ತುಂಬಿಹೋಗುವೆ ನೀನು ಪ್ರತಿಧ್ವನಿಗಳು ಮತ್ರು ವಿಭ್ರಾಂತಿಗಳಿಂದ
ನಾನು ಎಚ್ಚರಗೊಳ್ಳುತ್ತೇನೆ, ನಿನ್ನಾತ್ಮದಲಿ ಮಲಗಿರುವ 
ಹಕ್ಕಿಗಳು ಎಚ್ಚೆತ್ತು ವಲಸೆ ಹೋಗುವಾಗ

೧೪.
ಹೆಣ್ಣಿನ ದೇಹ

ಹೆಣ್ಣಿನ ದೇಹ
ಬಿಳಿಯ ಬೆಟ್ಟಗಳು, ಬಿಳಿಯ ತೊಡೆಗಳು
ಶರಣಾಗಿ ಬಿದ್ದಿರುವ ಜಗತ್ತಿನಂತೆ ನೀನು
ನನ್ನೊಳಗಿರುವ ಒರಟು ರೈತ ನಿನ್ನನ್ನು ಅಗೆಯುತ್ತಾನೆ
ಭೂಮಿಯಾಳದಿಂದ ಮಗುವೊಂದು ಪುಟಿಯುವಂತೆ ಮಾಡುತ್ತಾನೆ
ನಾನು ಸುರಂಗದಂತೆಯೇ ಏಕಾಂಗಿ
ನನ್ನೆದೆಯಿಂದ ಪಕ್ಷಿಗಳು ಹಾರಿಹೋಗಿವೆ
ರಾತ್ರಿಯು ಆಕ್ರಮಿಸಿ, ಆವರಿಸಿದೆ
ಬದುಕಲು ನಿನ್ನನ್ನು ಆಯುಧವಾಗಿ ರೂಪಿಸಿರುವೆ
ನೀ ನನ್ನ ಬತ್ತಳಿಕೆಯೊಳಗಿರುವ ಬಾಣ
ನನ್ನ ಜೋಳಿಗೆಯಲ್ಲಿ ರಕ್ಷಣೆಗಿರುವ ಕಲ್ಲು
ಪ್ರತೀಕಾರದ ಗಂಟೆ ಮೊಳಗುತ್ತಿದೆ, ನಿನ್ನನ್ನು ಪ್ರೀತಿಸುತ್ತೇನೆ
ಚರ್ಮದಿಂದ ಮಾಡಿದ ನಿನ್ನ ದೇಹವನ್ನು, ಪಾಚಿಯಂತಹ ಮೃದುತನವನ್ನು,
ನಿನ್ನೊಳಗಿನ ಅಮಿತ ಉತ್ಸಾಹವನ್ನು,  ಗಟ್ಟಿಯಾದ ಹಾಲನ್ನು
ಓಹ್, ಸ್ತನವೆಂಬ ಹಾಲು ತುಂಬಿದ ಕುಂಭಗಳು!
ಓಹ್, ಅನುಪಸ್ಥಿತಿಯ ನಯನಗಳು!
ಓಹ್, ತೊಡೆಗಳ ನಡುವೆ ಅರಳಿರುವ ಗುಲಾಬಿ ಪಕಳೆಗಳು!
ನಿನ್ನ ದನಿ ಅದೆಷ್ಟು ಮೃದು ಮತ್ತು ವಿಷಾದ!
ಓ, ನನ್ನ ಹೆಣ್ಣಿನ ದೇಹವೇ,
ನಿನ್ನ ಕೃಪೆಯಿಂದಲೇ ನನ್ನ ಬದುಕು
ನನ್ನ ದಾಹ, ಮೇರೆಯಿರದ ಬಯಕೆ, ಬದಲಾಗುತ್ತಲೇ ಇರುವ ದಾರಿಗಳು!
ಅನಂತ ದಾಹವು ಹರಿಯುತ್ತದೆ ಆಳವಾದ ನದಿಯೊಂದಿಗೆ
ನನ್ನ ದಣಿವು, ಕೊನೆಯಿರದ ನೋವುಗಳು ಹರಿಯುತ್ತವೆ ಪ್ರವಾಹದೊಂದಿಗೆ

      -ನೆರುಡ

೧೫.
ಬೆಳಕು ನಿನ್ನನ್ನು ಆವರಿಸುತ್ತದೆ

ಬೆಳಕು ತನ್ನ ಮಾರಣಾಂತಿಕ ಜ್ವಾಲೆಯಿಂದ 
ನಿನ್ನನ್ನು ಆವರಿಸುತ್ತದೆ
ಮಸುಕಾದ ಅದೆಂಥದ್ದೋ ಶೋಕ
ಮುಸ್ಸಂಜೆಯ ಹಳೆಯ ಗಾಲಿಗಳ ಎದುರು
ನಿನ್ನ ಸುತ್ತಲೂ ತಿರುಗುತ್ತದೆ

ಮಾತಿಲ್ಲದಾಗುವೆ ಗೆಳೆಯಾ, 
ಸಾವಿನ ಮನೆಯ ಏಕಾಂತದೊಂದಿಗೆ
ಬೆಂಕಿಯ ಜೀವಂತಿಕೆಯನ್ನು ತುಂಬಿಕೊಂಡು
ಹಾಳುಬಿದ್ದ ದಿನದ ಪೂರ್ಣ ವಾರಸುದಾರನಾಗಿ

ನಿನ್ನ ಕಪ್ಪು ವಸ್ತ್ರದ ಮೇಲೆ
ಹಣ್ಣಿನ ಗುಪ್ಪೆಯೊಂದು ಬೀಳುತ್ತದೆ ಸೂರ್ಯನಾಳದಿಂದ
ರಾತ್ರಿಯ ಬೇರುಗಳು ಬೆಳೆಯತೊಡಗುತ್ತವೆ
ನಿನ್ನಾತ್ಮದಲಿ ಆ ಕ್ಷಣದಿಂದ
ನಿನ್ನೊಳಗಿರುವುದೆಲ್ಲಾ ಪ್ರಕಟಗೊಳ್ಳುತ್ತದೆ
ನೀಲಿ ಮತ್ತು ಮಸುಕಾದ ಶಿಶುಗಳು
ತಮ್ಮ ಪೋಷಣೆಗಳನ್ನು ಪಡಕೊಳ್ಳುತ್ತವೆ

ಕಪ್ಪು ಹಾಗೂ ಹೊನ್ನ ಬಣ್ಣಕ್ಕೆ ತಿರುಗುವ
ಓಹ್, ಭವ್ವ, ಫಲವಂತ, ಚುಂಬಕ ಗುಲಾಮನು
ಉದಯಿಸುತ್ತಾನೆ, ಮುನ್ನಡೆಸುತ್ತಾನೆ, ಸೃಷ್ಟಿಸುತ್ತಾನೆ
ಅದೆಷ್ಟು ಶ್ರೀಮಂತಿಕೆಯ ಸ್ಪರ್ಶದೊಂದಿಗೆ
ಅಲ್ಲಿ ಹೂಗಳು ಅರಳುತ್ತವೆ ಮತ್ತು
ವಿಷಾದವನ್ನು ಹೊರಸೂಸುತ್ತವೆ

      -ನೆರುಡ

೧೬.
ಪೂರ್ಣತೆಯ ಬೆಳಗು

ಬೇಸಿಗೆಯ ಹೃದಯದಲಿ ಮುಂಜಾನೆ ಬಿರುಗಾಳಿಯೆದ್ದಿದೆ
ಬಿಳಿಯ ಮೋಡಗಳ ವಿದಾಯದ ಬಾವುಟವ ಹಿಡಿದ 
ಗಾಳಿಯೆಂಬ ನಾವಿಕ ಕೈಯ್ಯಾಡಿಸುತ್ತಾ ಸಾಗುತ್ತಿದ್ದಾನೆ
ಗಾಳಿಯ ಹೃದಯವು ನಮ್ಮ ಪ್ರೀತಿಯ ಮೌನವನ್ನೂ ಮೀರಿ ಮಿಡಿಯುತ್ತಿವೆ
ದೈವಿಕವಾದ ಸಂಗೀತದ ಮೇಳ ಮರಗಳ ನಡುವೆ ಪ್ರತಿಧ್ವನಿಸುತ್ತದೆ
ಯುದ್ಧ ಮತ್ತು ಹಾಡಿನ ಭಾಷೆಯಲಿ ಅವು ಹಾಡುತ್ತಿವೆ
ಗಾಳಿಯೀಗ ತರಗೆಲೆಗಳನ್ನು ಬರಬರನೆ ಹಾರಿಸುತ್ತದೆ
ಹಾರುವ ಎಲೆಗಳು ಹಕ್ಕಿಗಳ ದಿಕ್ಕು ತಪ್ಪಿಸುತ್ತವೆ
ಹಗುರಾದ ಅವಳ ಒಲವಿನ ಸೆರಗು ಸರಿಯುತ್ತದೆ ಪ್ರಯಾಸವಿಲ್ಲದೇ
ಮುನ್ನುಗ್ಗುವ ಬೇಸಿಗೆಯ ಗಾಳಿಯ ಮೇಲೆ
ಅವಳ ಚುಂಬನದ ಸುರಿಮಳೆ ಮುಗಿಬಿದ್ದು
ಗಾಳಿಯನ್ನು ಹಿಮ್ಮೆಟ್ಟಿಸುತ್ತದೆ

೧೭.
ನಿನ್ನ ನಗು
ನನ್ನ ಅನ್ನವನ್ನು ಕಸಿದುಕೋ
ಬೇಕಾದರೆ ಗಾಳಿಯನ್ನೂ
ಆದರೆ
ನಿನ್ನ ನಗುವನ್ನು ಮಾತ್ರ ಕಸಿಯದಿರು

ಗುಲಾಬಿಯನ್ನು ನನ್ನಿಂದ ದೂರವಾಗಿಸಬೇಡ
ನೀನದನ್ನು ಚಕ್ಕೆಂದು ಚಿವುಟಿದಾಗ
ಖುಶಿಯ ಚಿಲುಮೆ ಚಿಮ್ಮುವುದು
ನಿನ್ನೊಳಗೊಂದು ಬೆಳ್ಳಿಯ ಅಲೆ ಹೊಮ್ಮುವುದು

ನನ್ನ ಜೀವನವೇ ಹೋರಾಟವಾಗಿದೆ
ದಿನವೂ ಸಂಜೆ ದಣಿದು ಮರಳುತ್ತೇನೆ
ಮತ್ತದೇ ಜಾಗ ಬದಲಾಗದು ಏನೂ
ಆದರೆ,
ನಿನ್ನ ನಗೆ ನನ್ನನ್ನು ಆಗಸದಲ್ಲಿ ತೇಲಿಸುವುದು
ಜೀವನದ ಎಲ್ಲ ಬಾಗಿಲುಗಳನ್ನೂ ತೆರೆದು

ನನ್ನ ಜೀವವೇ,
ಕಪ್ಪುಗತ್ತಲೆಯ ಕ್ಷಣಗಳಲ್ಲಿ ನಿನ್ನ ನಗು ವೇ ಬೆಳಕು
ನನ್ನ ರಕ್ತದ ಕಲೆಗಳು ಬೀದಿಯ ಕಲ್ಲುಗಳಿಗಂಟಿವೆ
ನೀನದನು ಕಂಡು ನಕ್ಕುಬಿಡು ಒಮ್ಮೆ
ನಿನ್ನ ನಗು ನನ್ನ ಕೈಯ್ಯ ಹೊಸ ಖಡ್ಗ

ಶರತ್ಕಾಲದಲಿ ನಿನ್ನ ನಗು ಸಾಗರದ
ಅಲೆಗಳ ಬೆಳ್ನೊರೆಯಂತೆ ಹೆಚ್ಚುವುದು
ಓ ನನ್ನ ಜೀವವೇ,
ವಸಂತದ ನಿನ್ನ ನಗು ನಾ ಬಯಸುವ ಹೂವಂತಿರುವುದು
ನೀಲಿ ಹೂ, ಕೆಂಪು ಗುಲಾಬಿ
ನನ್ನ ದೇಶವನು ಮತ್ತೆ ಅನುರಣಿಸುವುದು

ನಕ್ಕುಬಿಡು ನೀನು, ಹಗಲು, ರಾತ್ರಿ
ಚಂದ್ರನವರೆಗೂ...
ದ್ವೀಪದ ಬೀದಿಯ ತಿರುವುಗಳಲ್ಲಿ
ಕಣ್ತೆರೆದರೂ, ಕಣ್ಮುಚ್ಚಿದರೂ...
ಹೋದಲ್ಲಿ, ಬಂದಲ್ಲಿ......
ನಕ್ಕುಬಿಡು ನೀನು
ತೆಗೆದುಕೋ ನನ್ನ ಅನ್ನವನ್ನು, ನೀರನ್ನು, ಗಾಳಿಯನ್ನೂ,ಬೆಳಕನ್ನು, ಎಲ್ಲವನ್ನೂ...
ಆದರೆ, ನಿನ್ನ ನಗುವನ್ನಲ್ಲ
ನಗುವಿಲ್ಲದೇ ನನಗೆ ಜೀವವಿಲ್ಲ

      -ನೆರುಡ

೧೮.
ದೂರ ಹೋಗಬೇಡ

ದೂರ ಹೋಗಬೇಡ, ಒಂದು ದಿನವೂ
ಯಾಕೆಂದರೆ.
ಯಾಕೆಂದರೆ .... ಹೇಗೆ ಹೇಳುವುದೆಂದು ತಿಳಿಯದು ನನಗೆ
ನಿನ್ನ ಕಾಯುವಾಗ ದಿನವು ದೀರ್ಘವಾಗುತ್ತದೆ
ಖಾಲಿಯಾಗಿರುವ ರೈಲುನಿಲ್ದಾಣದಂತೆ ಮನಸ್ಸು ಶೂನ್ಯವಾಗುತ್ತದೆ, ನಿದ್ರಿಸುತ್ತದೆ

ನನ್ನ ಅಗಲಬೇಡ, ಒಂದು ಗಂಟೆಯೂ
ಯಾಕೆಂದರೆ,
ವೇದನೆಯ ಹನಿಗಳು ನನ್ನೊಳಗೆ ಹರಿಯುತ್ತವೆ
ನೆಲೆಯ ಹುಡುಕಿ ಅಲೆವ ಧೂಮಗಳು
ನನ್ನೆದೆಯೊಳಗೆ ಸೇರುತ್ತವೆ, ಉಸಿರುಗಟ್ಟಿಸುತ್ತವೆ

ಓಹ್! ನಿನ್ನ ನೆರಳು ಮರಳಿನ ದಡದಲ್ಲಿ ಕರಗದಿರಲಿ
ನಿನ್ನ ಕಣ್ರೆಪ್ಪೆಗಳು ಶೂನ್ಯವನೆಂದೂ ದಿಟ್ಟಿಸದಿರಲಿ
ನನ್ನ ಒಲವೇ,
ನನ್ನನ್ನೊಂದು ನಿಮಿಷವೂ ಅಗಲಬೇಡ

ಯಾಕೆಂದರೆ,
ನೀನು ದೂರವಾದ ಗಳಿಗೆಯಲೆಲ್ಲಾ 
ನಾನು ಭೂಮಿಯ ತುಂಬಾ ಅಂಡಲೆಯುತ್ತೇನೆ
ಕೇಳುತ್ತೇನೆ, ಮರಳುವಿಯಾ?
ಅಥವಾ ಹೀಗೆ ನನ್ನನ್ನು ಸಾಯಲು ಬಿಡುವೆಯಾ?

          -ನೆರುಡಾ

೧೯.
ಪ್ರಶ್ನೆಗಳ ಪುಸ್ತಕ

ಗುಲಾಬಿ ಹೂ ಬೆತ್ತಲಾಗಿದೆಯೆ?
ಅಥವಾ 
ತನಗಿರುವ ಒಂದೇ ಉಡುಗೆಯನ್ನು ಸದಾ ಧರಿಸುವುದೆ?

ಮರಗಳು ತಮ್ಮ ಬೇರುಗಳ 
ವೈಭವವನ್ನು ಯಾಕೆ ಅಡಗಿಸಿಡುತ್ತವೆ?

ಕಳೆದು ಹೋದ ವಾಹನಗಳು ತಮ್ಮ
ದುಗುಡಗಳನ್ನು ಯಾರಲ್ಲಿ ಹೇಳಬೇಕು?

ಮಳೆಯಲ್ಲಿ ರೈಲು ಅಚಾನಕ್ಕಾಗಿ
ನಿಂತು ಬಿಡುವುದಕ್ಕಿಂತ ಬೇಸರದ ವಿಷಯ ಇನ್ನೊಂದಿದೆಯೆ?

         -ನೆರುಡಾ

೨೦.
ನಾ ನಿನ್ನ ಪ್ರೀತಿಸುವುದಿಲ್ಲ, ಗಾಢವಾಗಿ ಪ್ರೀತಿಸದ ಹೊರತು...

ನಾ ನಿನ್ನ ಪ್ರೀತಿಸುವುದಿಲ್ಲ
ಗಾಢವಾಗಿ ನಿನ್ನ ಪ್ರೀತಿಸದ ಹೊರತು
ಪ್ರೀತಿಸುವುದರಿಂದ ಪ್ರೀತಿಸದಿರುವೆಡೆಗೆ ಸಾಗುತ್ತಿರುವೆ ನಾನು
ನಿನ್ನ ಹಾದಿ ಕಾಯುವುದರಿಂದ ಕಾಯದಿರುವೆಡೆಗೆ
ನನ್ನ ಹೃದಯವೀಗ ತಂಪಿನಿಂದ ಬೆಂಕಿಯ ಕಡೆ ಸಾಗುತ್ತಿದೆ

ನಾ ನಿನ್ನ ಇಷ್ಟು ಮಾತ್ರಕ್ಕೆ ಪ್ರೀತಿಸುವೆ
ಯಾಕೆಂದರೆ ನಿನ್ನನ್ನು ಮಾತ್ರವೇ ಪ್ರೀತಿಸುವೆ
ನಿನ್ನನ್ನು ಆಳವಾಗಿ ದ್ವೇಷಿಸುವೆ, ದ್ಷೇಷಿಸುತ್ತಿರುವೆ
ನಿನಗೆ ಬಾಗುತ್ತೇನೆ, ಬದಲಾಗುತ್ತಿರುವ ನನ್ನ ಪ್ರೀತಿಗೆ ಇಲ್ಲಿದೆ ಪುರಾವೆ
ನಿನ್ನನ್ನು ನೋಡದೇ ಕುರುಡಾಗಿ ಪ್ರೀತಿಸುವೆ

ಜನವರಿಯ ಬೆಳಕು ನನ್ನ ಹೃದಯವನ್ನು
ತನ್ನ ಕ್ರೂರ ಕಿರಣಗಳಿಂದ ಸುಡುತ್ತಿದೆ
ಶಾಂತಿಯ ಕೀಲಿಕೈಯನ್ನು ನಿಷ್ಕರುಣೆಯಿಂದ ಕದ್ದೊಯ್ದಿದೆ

ಕಥೆಯ ಈ ಭಾಗದಲ್ಲಿ ನಾನು ಸಾಯುತ್ತೇನೆ,
ನಾನೊಬ್ಬನೇ ಸಾಯುತ್ತೇನೆ, ಪ್ರೀತಿಗಾಗಿ
ಯಾಕೆಂದರೆ ನಾ ನಿನ್ನ ಪ್ರೀತಿಸುತ್ತೇನೆ
ಯಾ...ಕೆಂ...ದ..ರೆ...
ನಾನು ನಿನ್ನ ಪ್ರೀತಿಸುತ್ತೇನೆ
ಪ್ರೀತಿಯ ಬೆಂಕಿ ನನ್ನ ರಕ್ತದಲ್ಲಿದೆ

           - ನೆರುಡಾ

೨೧.
ಪ್ರೇಮ

ನಿನ್ನಿಂದಾಗಿಯೇ
ನಳನಳಿಸುವ ಹೂದೋಟದಲಿ
ವಸಂತ ಸೂಸುವ ಸುಗಂಧವೂ ನನ್ನ ನೋಯಿಸುತ್ತಿದೆ
ನಿನ್ನ ಮುಖ ನನಗೆ ಮರೆತುಹೋಗಿದೆ
ನಿನ್ನ ಕೈಗಳನ್ನೂ ನಾನು ನೆನಪಿಟ್ಟುಕೊಂಡಿಲ್ಲ
ನಿನ್ನ ತುಟಿಗಳ ಬಿಸುಪು ಹೇಗಿತ್ತು?

ನಿನ್ನಿಂದಾಗಿಯೇ
ನಾನು ಬಿಳಿಯ ಪ್ರತಿಮೆಗಳನ್ನು ಪ್ರೀತಿಸುತ್ತೇನೆ
ಉದ್ಯಾನದಲ್ಲಿ ನಿದ್ದೆಗಣ್ಣಿನಲ್ಲಿರುವ ಪ್ರತಿಮೆಯನ್ನು
ಆ ಬಿಳಿಯ ಪ್ರತಿಮೆಗಿಲ್ಲ ದನಿ, ದೃಷ್ಟಿ ಯಾವುದೂ

ನಾನು ನಿನ್ನ ದನಿಯನ್ನು ಮರೆತಿರುವೆ
ನಿನ್ನ ಖುಶಿಯ ಕೇಕೆಯನ್ನೂ ಮರೆತಿರುವೆ
ನಿನ್ನ ಕಣ್ಣುಗಳನ್ನೂ ಮರೆತಿರುವೆ ನಾನು

ಸುಗಂಧಕ್ಕೆ ಹೂವಿನೊಂದಿಗಿರುವ ಅನುಬಂಧ
ನಿನ್ನ ಅಸ್ಪಷ್ಟ ನೆನಪುಗಳೊಂದಿಗೆ ಬಂಧಿಯಾಗಿದೆ
ಅದೊಂದು ಗಾಯದ ಹಾಗೆ
ನಿನ್ನ ಸ್ಪರ್ಶ ಗುಣಪಡಿಸಲಾಗದ ಹಾನಿ ಮಾಡಿಯಾಗಿದೆ

ನಿನ್ನ ಮುದ್ದು ನನ್ನ ಆವರಿಸುತ್ತದೆ; ಆರೋಹಣದಂತೆ
ವಿಷಣ್ಣತೆಯ ಗೋಡೆಯ ಮೇಲೆ ಹಬ್ಬಿದ ಹೂ ಬಳ್ಳಿಯಂತೆ

ನಾನು ನಿನ್ನ ಮರೆತಿರುವೆ
ಆದರೂ...
ಪ್ರತಿ ಕಿಟಕಿಯಲ್ಲೂ ನೀನೇ ಕಾಣಿತಿರುವೆ

ನಿನ್ನಿಂದಾಗಿಯೇ
ಗಾಢ ಸುಗಂಧವೂ ನನ್ನನ್ನು ಗಾಸಿಗೊಳಿಸುತ್ತಿದೆ
ಆಸೆಗಳು ಮತ್ತೆ ತಳಗಟ್ಟುತ್ತಿವೆ
ಗುಂಡಿಕ್ಕುವ ನಕ್ಷತ್ರಗಳು ಮತ್ತು ಬೀಳುತ್ತಿರುವ ಉಲ್ಕೆಗಳು

               -ನೆರುಡ

೨೨.
ಹಕ್ಕಿ

ದಿನದ ಅಮೂಲ್ಯ ಉಡುಗೊರೆಯು
ಹಕ್ಕಿಯಿಂದ ಹಕ್ಕಿಗೆ ವರ್ಗಾವಣೆಗೊಂಡಿತು
ದಿನವು ಕೊಳಲಿನಿಂದ ಕೊಳಲಿಗೆ ವರ್ಗಾವಣೆಗೊಂಡಿತು
ಹಸಿರುಡುಗೆ ತೊಟ್ಟು ವಿಮಾನವೇರಿ ಹೊರಟಿತು
ಹಕ್ಕಿಗಳು ಗರಿಗೆದರಿ ಹಾರುವ ನೀಲಿಯಾಗಸಕ್ಕೆ
ತೆರೆದ ಸುರಂಗದ ಮಾರ್ಗವಾಗಿ
ಅಲ್ಲು, ಆಗ ಇರುಳು ಬಂತು

ನಾನು ಹಲವು ಪ್ರಯಾಣಗಳಿಂದ ಹಿಂದಿರುಗುವಾಗ
ಸ್ತಬ್ಧನಾಗುತ್ತೇನೆ, ಸೂರ್ಯ ಮತ್ತು ಭುವಿಯ
ನಡುವೆ ಹಬ್ಬಿರುವ ಹಸಿರಿನಲ್ಲಿ
ಅಲ್ಲಿಂದಲೇ ನೋಡುತ್ತೇನೆ
ರೆಕ್ಕೆಗಳು ಕೆಲಸ ಮಾಡುವ ರೀತಿಯನ್ನು
ಹಕ್ಕಿರೆಕ್ಕೆಗಳು ಸುಗಂಧವನ್ನು ಹರಡುವ ಪರಿಯನ್ನು
ಕೆಳಗೆ ಹಬ್ಬಿರುವ ಹಾದಿಯನ್ನು
ಮೋಹಕ ವಸಂತವನ್ನು, ಮನೆಯ ಮಾಡಿನ ಅಂಚನ್ನು
ವ್ಯಾಪಾರದಲ್ಲಿ ವ್ಯಸ್ತರಾದ ಮೀನುಗಾರರನ್ನು
ಉಕ್ಕುವ ನೊರೆಯ ಚಿಲುಮೆಯನ್ನು
ನನ್ನ ಹಸಿರು ಆಕಾಶದಿಂದಲೇ ನೋಡುವೆ


ಅವರ ಕೆಲಸದ ನಿಮಗ್ನತೆಯನ್ನು
ಹಾರುವ ಸನ್ನಾಹದಲ್ಲಿರುವ ಪುಟ್ಟ ಹಕ್ಕಿಯ ಉತ್ಸುಕತೆಯನ್ನು
ಮಕರಂದದಾಚೆಗೆ ಅದು ಚಿಮ್ಮಿಸುವ ನೀರ ಹನಿಯನ್ನು
ವರ್ಣಿಸಲು ನನ್ನಲ್ಲೀಗ ಬೇರೆ ಅಲ್ಷರಗಳಿಲ್ಲ

          -ನೆರುಡ

೨೩.
ಸೂರ್ಯಾಸ್ತದ ಸಮಯದಲ್ಲಿ ನನ್ನಾತ್ಮವು ಖಾಲಿ ನಿಚ್ಚಣಿಕೆಯಂತೆ....

ನಾನು ಜೇಬಿನಿಂದ ಲೇಖನಿಯನ್ನು ತೆಗೆದು
ಪರ್ವತಗಳನ್ನು ನಕಲು ಮಾಡುತ್ತೇನೆ
ನದಿಗಳನ್ನು, ಮೋಡಗಳನ್ನೂ ಸಹ
ಹಕ್ಕಿ ಹಾರುವುದನ್ನು, ಜೇಡ ನೇಯುವ ಬಲೆಯನ್ನು
ಎಲ್ಲವನ್ನೂ ನಕಲು ಮಾಡುತ್ತೇನೆ

ನನ್ನ ಮನಸ್ಸು ಬೇರೇನನ್ನೂ ಯೊಇಚಿಸುವುದಿಲ್ಲ
ನಾನು ಗಾಳಿ, ಪರಿಶುದ್ಧ ಗಾಳಿ
ಹಾರುವ ಹಕ್ಕಿಯ ರೆಕ್ಕೆಗಳು ಸವರುವ ಗಾಳಿ
ಎಲೆಗಳು ಅನಿಶ್ಚಿತವಾಗಿ ಬೀಳುವ
ಸರೋವರದ ಮೀನುಗಳು ಸ್ತಬ್ಧವಾಗಿ ನಿಂತಾಗ
ಗೋಳಾಕಾರದಲ್ಲಿ ಮಿನುಗುವ ಕಣ್ಣುಗಳು
ಪ್ರತಿಮೆಯಂತೆ ಚಲಿಸುವ ಮೋಡಗಳು
ಮಳೆಯ ಸಂಕೀರ್ಣ ವ್ಯತ್ಯಾಸಗಳನು
ಸೃಜಿಸುವ ಪರಿಶುದ್ಧ ಗಾಳಿ ನಾನು

ನನ್ನ ಮನಸ್ಸಿನಲ್ಲಿ ಬೇರೇನೂ ಸುಳಿಯುವುದಿಲ್ಲ
ಬೇಸಿಗೆಯ ಪಾರದರ್ಶಕತೆಯನ್ನು ಹೊರತುಪಡಿಸಿ
ನಾನು ಗಾಳಿಯ ಹಾಡನ್ನಷ್ಟೇ ಹಾಡುತ್ತೇನೆ
ಇತಿಹಾಸವು ತನ್ನ ರಥವೇರಿ ಚಲಿಸುತ್ತದೆ
ಶವಗಳನ್ನು, ಪದಕಗಳನ್ನು ಸಂಗ್ರಹಿಸುತ್ತಾ
ಇತಿಹಾಸವು ಮುಂದಕ್ಕೆ ಸಾಗುತ್ತದೆ
ನದಿಯ ಹಾಗೆ ಎಲ್ಲವನ್ನೂ ಸೆಳೆದುಕೊಂಡು
ನಾನು ನಿಲ್ಲುತ್ತೇನೆ ವಸಂತನೊಂದಿಗೆ ಏಕಾಂಗಿಯಾಗಿ

          - ನೆರುಡಾ

೨೪.
ಇಲ್ಲಿ ನಾ ನಿನ್ನ ಪ್ರೀತಿಸುವೆ

ದಟ್ಟವಾದ ಫೈನ್ ಮರಗಳ ನಡುವಿಂದ
ಗಾಳಿ ತನ್ನ ತಾನು ಬಿಡಿಸಿಕೊಂಡು ಬೀಸುತ್ತದೆ
ಅಲೆಮಾರಿ ನೀರಿನ ಮೇಲೆ ಚಂದ್ರ
ರಂಜಕದಂತೆ ಹೊಳೆಯುತ್ತಿದ್ದಾನೆ
ದಿನಗಳು ಏಕತಾನವಾಗಿ, ಒಂದನ್ನೊಂದು ಓಡಿಸಿಕೊಂಡು ಸಾಗುತ್ತವೆ

ಹಿಮವು ನೃತ್ಯ ಚಿತ್ರದಂತೆ ಬಿಚ್ಚಿಕೊಳ್ಳುತ್ತಿದೆ
ಬೆಳ್ಳಕ್ಕಿಗಳು ಪಶ್ಚಿಮದಿಂದ ಜಾರಿ ಬೀಳುತ್ತಿವೆ
ಕೆಲವೊಮ್ಮೆ ನೌಕೆಯ ಪಟವೂ ಜಾರುತ್ತದೆ
ಎತ್ತರೆತ್ತರದಲ್ಲಿರುವ ನಕ್ಷತ್ರಗಳೂ..
ಓಹ್! ಹಡಗಿನ ಕಪ್ಪು ಶಿಲುಬೆ!
ಏಕಾಂಗಿ

ಕೆಲವೊಮ್ಮೆ ನಾನು ನಸುಕಿನಲ್ಲಿಯೇ ಏಳುವೆ
ಆಗೆಲ್ಲ ನನ್ನಾತ್ಮವು ಆರ್ದೃವಾಗಿರುತ್ತದೆ
ದೂರದಲ್ಲಿ ಮೊರೆಯುವ ಸಮುದ್ರ
ಮತ್ತೆ, ಮತ್ತೆ ಕೇಳುವ ಪ್ರತಿಧ್ವನಿ
ಇದು ಬಂದರು

ಇಲ್ಲಿ ನಾ ನಿನ್ನ ಪ್ರೀತಿಸುವೆ
ಇಲ್ಲಿಯೇ ನಾ ನಿನ್ನ ಪ್ರೀತಿಸುವೆ
ದಿಗಂತವು ಸುಮ್ಮನೆ ನಿನ್ನನ್ನು ಮರೆಮಾಡುತ್ತದೆ
ಇಷ್ಟೆಲ್ಲ ತಣ್ಣಗಿನ ವಿದ್ಯಮಾನಗಳ ನಡುವೆಯೂ
ನಾ ನಿನ್ನ ಪ್ರೀತಿಸುವೆ
ನನ್ನ ಮುತ್ತುಗಳು ಒಮ್ಮೊಮ್ಮೆ
ಭಾರವಾದ ಪಾತ್ರೆಯೊಳಗೆ ಜಾರುತ್ತವೆ
ಸಮುದ್ರವನು ದಾಟಿ ಯಾರೂ ಬರದ ದಾರಿ ಸೇರುತ್ತವೆ
ಹಳೆಯ ಲಂಗರಿನಂತೆ ನನ್ನ ಮರೆಯುವುದನ್ನು
ನಾನು ಸುಮ್ಮನೆ ನೋಡುತ್ತೇನೆ

ನಾವೆಗಳು ಲಂಗರು ಹಾಕಿದಾಗ
ಬಿಗಿದ ಹಗ್ಗಗಳು ಬೇಸರಗೊಳ್ಳುತ್ತವೆ
ನನ್ನ ಬದುಕು ದಣಿದಿದೆ ಜೀವವೇ
ಯಾವ ಉದ್ಧೇಶವಿಲ್ಲದೇ ಹಸಿದಿದ್ದೇನೆ
ನೀನು ಅಷ್ಟು ದೂರದಲ್ಲಿರುವೆ
ನನ್ನಲ್ಲಿಲ್ಲದ್ದನ್ನು ನಾನು ಪ್ರೀತಿಸುತ್ತಿರುವೆ

ನನ್ನ ಹೇವರಿಕೆಗಳು ಮುಸ್ಸಂಜೆಯೊಡನೆ ಗುದ್ದಾಡುತ್ತವೆ
ಮತ್ತೆ ಇರುಳು ಆವರಿಸುತ್ತದೆ; ನನಗಾಗಿ ಹಾಡುತ್ತದೆ

ಚಂದಿರ ಕನಸುಗಳ ಗಡಿಯಾರವನ್ನು ತಿರುಗಿಸುತ್ತಾನೆ
ದೂರದ ನಕ್ಷತ್ರವೊಂದು ನಿನ್ನ ವಿಶಾಲ ಕಣ್ಣುಗಳಿಂದ ನನ್ನ ನೋಡುತ್ತದೆ
ನಾ ನಿನ್ನ ಪ್ರೀತಿಸುವಾಗ...
ಗಾಳಿ ಫೈನ್ ಮರದ ಎಲೆಗಳ ತಂತಿಯನು ಮೀಟುತ್ತದೆ
ಎಲೆಗಳು ನಿನ್ನ ಹೆಸರಿನ ಹಾಡು ಹಾಡುತ್ತವೆ

                - ನೆರುಡ

೨೫.
ಹತಾಶೆಯ ಹಾಡು

ಸುತ್ತುವರೆದಿರುವ ರಾತ್ರಿಯಿಂದ ನಿನ್ನ ನೆನಪುಗಳು ಭುಗಿಲೇಳುತ್ತವೆ
ನದಿಯು ತನ್ನ ಮೊಂಡುತನ ಮತ್ತು ದುಃಖದೊಂದಿಗೆ ಸಾಗರವ ಬೆರೆಯುತಿದೆ

ಮುಂಜಾನೆಯ ಹಡಗಿನ ಕಟ್ಟೆಯಂತೆ ನಿರ್ಜನ
ಇದು ಅಗಲುವಿಕೆಯ ಸಮಯ!
ಓಹ್! ಎಷ್ಟೊಂದು ನಿರ್ಜನವಾಗಿದೆ!

ತಂಪು ಹೂಗಳ ಮಳೆ ಸುರಿಯುತ್ತಿದೆ ನನ್ನ ಎದೆಯ ಮೇಲೆ
ಮಂಜಿನ  ಬಂಡೆಯ ಚೂರುಗಳ ರಾಶಿ!
ಓಹ್! ಹಡಗಿನ ಭೀಕರ ಗುಹೆಗಳು!

ನಿನ್ನೊಳಗೆ ಅಡಕವಾಗಿವೆ ಯುದ್ಧ ಮತ್ತು ಜಗಳಗಳು
ನಿನ್ನಿಂದಲೇ ಹಾಡುಹಕ್ಕಿಗಳಿಗೆ ರೆಕ್ಕೆ ಮೂಡುವವು

ನೀನು ಎಲ್ಲವನ್ನೂ ನುಂಗುವೆ ಶೂನ್ಯದಂತೆ,
ಸಾಗರದಂತೆ, ಸಮಯದಂತೆ
ನಿನ್ನೊಳಗೆ ಎಲ್ಲವೂ ಮುಳುಗುತ್ತವೆ!

ಇದು ಆಕ್ರಮಣ ಮತ್ತು ಮುತ್ತುಗಳ ಸಮಯ
ಪದಗಳಿಲ್ಲಿ ದೀಪಸ್ತಂಭದಂತೆಯೇ ಪ್ರಜ್ವಲಿಸುತ್ತವೆ

ಪೈಲೆಟ್ ನ ಭಯ, ಕುರುಡು ಚಾಲಕನ ಕೋಪ,
ಪ್ರೇಮದ ಪ್ರಕ್ಷುಬ್ದ ಕುಡಿತ
ಎಲ್ಲವೂ ನಿನ್ನೊಳಗೆ ಮುಳುಗುತ್ತವೆ!

ಬಾಲ್ಯದ ಮಂಜಿನಲಿ ಆತ್ಮದ ರೆಕ್ಕೆಗಳು ಗಾಯಗೊಂಡಿವೆ
ನನ್ನೊಳಗಿನ ಅನ್ವೇಷಕ ಕಳೆದುಹೋಗಿದ್ದಾನೆ
ನಿನ್ನೊಳಗೆ ಎಲ್ಲವೂ ಮುಳುಗುತ್ತವೆ!

ನೀನು ದುಃಖಿತೆ, ಆಸೆಗಳ ಕನಸು!
ದುಃಖವು ನಿನ್ನನ್ನಿ ದಿಗ್ಭ್ರಮೆಗೊಳಿಸುತ್ತದೆ
ನಿನ್ನಲ್ಲಿ ಎಲ್ಲವೂ ಮುಳುಗುತ್ತದೆ!

ನೆರಳಿನ ಗೋಡೆಯನು ಹಿಂದಿಕ್ಕಿ ನಾನು ಮುನ್ನಡೆಯುತ್ತೇನೆ
ಆಸೆ ಮತ್ತು ಆಟವನು ಮೀರಿ ನಡೆದೆ

ಓ ಜೀವವೇ, ನನ್ನ ಜೀವವೇ,
ಕಳೆದು ಹೋಗಿರುವ ಮುದ್ದು ಜೀವವೇ,
ನಾನು ಪರವಶತೆಯಲ್ಲಿ ನಿನ್ನ ಕರೆಯುತ್ತೇನೆ, ಹಾಡುತ್ತೇನೆ

ಗಾಜಿನಂತೆ ನೀನು ಅಪರಿಮಿತ ನಾಜೂಕುಗಾತಿ
ನನ್ನ ಅನಂತ ಮರೆವು ನಿನ್ನನ್ನು ಛಿದ್ರವಾಗಿಸಿಹುದು

ದ್ವೀಪದ ಕರಾಳ ಏಕಾಂತವೊಂದಿತ್ತು
ಅಲ್ಲಿ, ಓ ನನ್ನ ಜೀವವೇ,
ನಿನ್ನ ತೋಳುಗಳು ನನ್ನ ಬಳಸಿದವು

ಹಸಿದಿದ್ದೆ, ಬಾಯಾರಿದ್ದೆ, ನೀನೊಂದು ಹಣ್ಣು!
ನೋವಿತ್ತು, ಹತಾಶೆಯಿತ್ತು, ನೀನೊಂದು ಪವಾಡ!

ಓ ಜೀವವೇ, ಹೇಗೆ ಅರಿಯಲಿ ನಾನು
ನಿನ್ನಾತ್ಮದ ಭೂಮಿಯಲ್ಲಿ ನಿನ್ನ ತೋಳ ಶಿಲುಬೆಯಲ್ಲಿ
ನಾ ಹೇಗೆ ಸೆರೆಯಾದೆನೆಂದು?

ನನ್ನಾಸೆಗಳು ಅದೆಷ್ಟು ಕ್ಷಣಿಕ, ಅದೆಷ್ಟು ಭಯಾನಕ!
ಎಂಥ ಕ್ರೌರ್ಯ! ! ಎಷ್ಟು ಮಾದಕ! ಎಷ್ಟು ಉದ್ವಿಗ್ನ! ಎಂಥ ಚಪಲ!

ಚುಂಬನಗಳ ಸ್ಮಶಾನದಲ್ಲಿ ನಿನ್ನ ಗೋರಿಯೊಳಗಿನ್ನೂ ಬೆಂಕಿಯಿತ್ತು
ಹಣ್ಣ ಹೊತ್ತ ರೆಂಬೆಗಳು ಉರಿಯುತ್ತಿದ್ದವು,
ಹಕ್ಕಿ ಕುಕ್ಕುತ್ತಲೇ ಇತ್ತು!

ಓಹ್! ತುಟಿಯ ಗಾಯ!
ಓಹ್! ಮೈತುಂಬ ಮುತ್ತು!
ಓಹ್! ಹಸಿದ ಹಲ್ಲುಗಳು!
ಓಹ್! ಬೆಸೆದ ದೇಹಗಳು!

ಓಹ್! ಭರವಸೆ ಮತ್ತು ಬಲದ ಹುಚ್ಚು ಮೇಳೈಸಿ
ನಾವಿಬ್ಬರೂ ಏಕವಾದೆವು, ಹತಾಶೆಗೊಂಡೆವು!

ನೀರಂತೆ, ಹಿಟ್ಟಿನಂತೆ ನಿನ್ನ ಮೃದುತ್ವ
ಮಾತುಗಳು ತುಟಿಯಿಂದ ಜಾರತೊಡಗಿದವು

ನನ್ನ ವಿಧಿ, ನನ್ನ ಹಂಬಲದ ದಾರಿ
ಹಾತೊರೆದೆ ನಡೆಯಲು ನಾನು
ನಿನ್ನೊಳಗೆ ಎಲ್ಲವೂ ಮುಳುಗುವುದು!

ಓಹ್! ಭಗ್ನಾವಶೇಷಗಳ ಕಂದರವೇ
ಎಲ್ಲವೂ ನಿನ್ನೊಳಗೆ ಮುಳುಗಿಹೋಯ್ತು
ನಿನಗೆ ಯಾವ ದುಃಖವೂ ಇರಲಿಲ್ಲ
ದುಃಖದಲಿ ನೀನು ಮುಳುಗಲಿಲ್ಲ

ಅಲೆಅಲೆಯಲ್ಲಿ ನೀನು ಇನ್ನೂ ಕರೆಯುತ್ತಲೇ ಹಾಡುವೆ
ಹಡಗಿನ ಮುಂಚೂಣಿಯಲ್ಲಿರುವ ನಾವಿಕನಂತೆ

ಹಾಡಿನಲ್ಲಿ ಈಗಲೂ ಅರಳುವೆ ನೀನು
ಪ್ರವಾಹದಲ್ಲಿ ಇನ್ನೂ ಹರಿಯುತ್ತಿರುವೆ ನೀನು
ಓಹ್! ಶಿಲಾಖಂಡಗಳ ರಾಶಿಯೇ,
ನೀನೊಂದು ತೆರೆದ ಕಹಿಬಾವಿ!

ಪೇಲವ ಕುರುಡು ಮುಳುಗುಗಾರ, ಅದೃಷ್ಟಹೀನ ಜೀಕುಗಾರ, ಕಳೆದುಹೋದ ಅನ್ವೇಷಕ
ಎಲ್ಲರೂ ನಿನ್ನೊಳಗೆ ಮುಳುಗುತ್ತಾರೆ!

ಇದು ಅಗಲುವ ಸಮಯ, ಕಠಿನ ಶೀತಲ ಸಮಯ
ರಾತ್ರಿಯಿದು ಎಲ್ಲವನೂ ವೇಳಾಪಟ್ಟಿಗೆ ಜೋಡಿಸುತಿದೆ

ಸಮುದ್ರವು ಕುಸ್ತಿಯ ಪಟ್ಟುಗಳಿಂದ ದಡವ ಆಕ್ರಮಿಸುತಿದೆ
ತಂಪು ನಕ್ಷತ್ರಗಳು ಮೇಲೇರುತ್ತಿವೆ, ಕಪ್ಪು ಹಕ್ಕಿಗಳು ವಲಸೆ ಹೋಗುತ್ತವೆ

ಮುಂಜಾವಿನ ಹಡಗುಕಟ್ಟೆಯಂತೆ ನಿರ್ಜನವಾಗಿದೆ
ನಡುಗುವ ನೆರಳು ಕೈಯ್ಯಲ್ಲಿ ತಿರುಗುತ್ತಿದೆ

ಓಹ್! ಎಲ್ಲಕ್ಕಿಂತಲೂ ದೂರ, ದೂರಕ್ಕಿಂತಲೂ ದೂರ...

ಇದು ಅಗಲುವಿಕೆಯ ಸಮಯ
ಕೋಸಿರುವ ಕೈ ಬೇರೆಯಾಗುತ್ತಿದೆ

              - ನೆರುಡಾ
೩೦.
ಭಸ್ಮದ ಯುಗ

ಇದು ಭಸ್ಮದ ಯುಗ
ಸುಟ್ಟ ಮಕ್ಕಳ ಚಿತಾಭಸ್ಮ
ನರಕದ ಹಿಮ ಪ್ರಯೋಗಗಳು
ಏನಾಗುತ್ತಿದೆ! ಎಂಬುದನ್ನೇ ಅರಿಯದೇ
ಕಣ್ಣೀರಿಡುತ್ತಲೇ ಮುಚ್ಚಿದ ಕಣ್ಣುಗಳ ಭಸ್ಮ
ಪುರಾಣ ಕನ್ನಿಕೆಯರ ಚಿತಾಭಸ್ಮ
ಸಣ್ಣ ತಂತಿಗಳಿಂದ ಹೆಣೆದ ಕಿಟಕಿಗಳು
ಕಠೋರ ನೆಲಮಾಳಿಗೆಯ ಚಿತಾಭಸ್ಮ
ಕುಸಿಯುತ್ತಿರುವ ಅಂಗಡಿಗಳು
ಪ್ರಸಿದ್ಧರ ಕೈಯ್ಯ ಚಿತಾಭಸ್ಮ
ಭಸ್ಮದ ಇತಿಹಾಸ ಮರುಕಳಿಸದಿರಲು
ಚಿತಾಭಸ್ಮದ ಇತಿಹಾಸವನ್ನು ಕೊನೆಗಾಣಿಸಲು
ಬರ್ಲಿನ್ ಯುದ್ಧದ ವಿಜಯೋತ್ಸವದಲ್ಲಿ
ಅವರವರ ಆಶ್ ಟ್ರೇಯಲ್ಲಿತ್ತು
ಅವರವರದೇ ಚಿತಾಭಸ್ಮ

       - ನೆರುಡಾ

೩೧.
ಪ್ರೇಮಗೀತೆ

ನಾ ನಿನ್ನ ಪ್ರೀತಿಸುತ್ತೇನೆ,
ನಿನ್ನ ಪ್ರೀತಿಸುತ್ತೇನೆ
ಇದು ನನ್ನೆದೆಯ ಹಾಡು
ಇಲ್ಲಿಂದಲೇ ನನ್ನೆಲ್ಲ ಹುಚ್ಚುಗಳ ಆರಂಭ

ಓ ನನ್ನ ಜೀವವೇ,
ನಾ ನಿನ್ನ ಪ್ರೀತಿಸುವೆ
ನನ್ನ ಕಡುದ್ರಾಕ್ಷಾರಸವೇ,
ನಾ ನಿನ್ನ ಪ್ರೀತಿಸುವೆ
ಮದಿರೆ ಪ್ರೀತಿಯ ಅಮಲೇರಿಸಿದರೆ
ನಿನ್ನ ಕರಗಳಿಂದ ಪಾದಗಳವರೆಗೂ ನನಗೆ ಅಮಲು
ನೀ ಇಹಲೋಕದ ಸುರೆಯ ಸೀಸೆ
ನನ್ನ ಅದೃಷ್ಟದ ಮದಿರೆಯ ಪಾತ್ರೆ

ನಾ ನಿನ್ನ ಪ್ರೀತಿಸುವೆ,
ಹಿಂದೆಯೂ, ಮುಂದೆಯೂ..
ನಿನಗಾಗಿ ಹಾಡುವ ಅಂತ್ಯವಿರದ ಹಾಡು
ನನಗೆ ಸ್ವರವಿಲ್ಲ, ದನಿಯಿಲ್ಲ ಹಾಡಲು

ಸ್ವರ ತಪ್ಪುತಿದೆ ನನ್ನ ಪಿಟೀಲು
ಸ್ವರ ತಪ್ಪಿದ ಪಿಟೀಲು ಘೋಷಿಸುತ್ತದೆ
ನಾ ನಿನ್ನ ಪ್ರೀತಿಸುವೆ
ನಾ ನಿನ್ನ ಪ್ರೀತಿಸುವೆ ನನ್ನ ಯಜಮಾನಿಯೇ,
ನನ್ನ ಪ್ರೀತಿಯ ಹೆಣ್ಣೇ, ಕಪ್ಪು ಚೆಲುವೇ,
ಸ್ಪಟಿಕ ಶುದ್ಧಳೇ, ನನ್ನ ಹೃದಯವೇ,
ನನ್ನ ಹಲ್ಲು, ನನ್ನ ಬೆಳಕೇ,
ನನ್ನ ಚಮಚ, ಮಸುಕು ದಿನಗಳಿಗೆ
ರುಚುಯೇರಿಸುವ ಉಪ್ಪೇ,
ನನ್ನ ಕಿಟಕಿಯಲಿಣುಕುವ ಚಂದ್ರಿಕೆಯೇ,
ನಾ ನಿನ್ನ ಪ್ರೀತಿಸುವೆ

      -ನೆರುಡಾ
೩೨.
ಭೂಮಿಯಿದೆ ನಿನ್ನೊಳಗೆ...

ಪುಟ್ಟ 
ಗುಲಾಬಿ,
 ಗುಲಾಬಿ ಹೂವೇ,
ಎಷ್ಟು ಚಿಕ್ಕವಳು ನೀ
ಪೂರ್ತಿ ಬೆತ್ತಲ ಹುಡುಗಿ
ಒಮ್ಮೊಮ್ಮೆ ಅನಿಸುವುದು
ನಿನ್ನನ್ನು ಹಿಡಿಯಬಹುದು
ನನ್ನ ಈ ಮುಷ್ಟಿಯೊಳಗೆ,
ಹೀಗೆ ನಿನ್ನನ್ನು ಕೈಯ್ಯಲ್ಲಿ ಹಿಡಿದು,
ನನ್ನ ಬಾಯಿಯವರೆಗೂ ಒಯ್ಯಬಹುದು,
ಆದರೆ
ಒಮ್ಮೆಲೆ
ನನ್ನ ಪಾದ ನಿನ್ನ ಪಾದವನು ಸ್ಪರ್ಶಿಸುವುದು
ನನ್ನ ಬಾಯಿ ನಿನ್ನ ತುಟಿಯನ್ನು,
ನೀನು ದೊಡ್ಡವಳಾಗುತ್ತಿ,
ನಿನ್ನ ತೋಳುಗಳು ಪರ್ವತದಂತೆ ಬೆಳೆಯುತ್ತವೆ
ನಿನ್ನ ಮೊಲೆಗಳು ನನ್ನೆದೆಯ ಮೇಲೆ ಅಲೆದಾಡುತ್ತವೆ,
ನನ್ನ ತೋಳುಗಳು ನಿನ್ನ ತೆಳುವಾದ ಸೊಂಟದ
ಅಮವಾಸ್ಯೆಯ ಗೆರೆಗಳನ್ನು ಬಳಸಲು ಶ್ರಮಿಸುತ್ತವೆ,
ಪ್ರೀತಿಯಲಿನೀನು ಕಡಲ ನೀರಿನಂತೆ ಸಡಿಲಗೊಳ್ಳುವೆ,
ನಾನು ಆಗಸದ ವಿಶಾಲ ಕಣ್ಣುಗಳನು ಅಳೆಯಲು ಸೋಲುತ್ತೇನೆ,
ಭೂಮಿಯನು ಚುಂಬಿಸಲು ನಿನ್ನ ತುಟಿಗಳೆಡೆಗೆ ಬಾಗುತ್ತೇನೆ.

               - ನೆರೂಡ
೩೩.
ವಸಂತ

ಹಕ್ಕಿಯೊಂದು ಹಾರಿಬಂತು
ಬೆಳಕಿಗೆ ಜನ್ಮ ನೀಡಿತು
ಛಕ್ಕೆಂದು ಬೆಳಕಾದ ಬೆರಗಿಗೆ
ನೀರು ಉಕ್ಕಿಬಂತು

ನೀರು - ಬೆಳಕಿನ ನಡುವೆ
ಗಾಳಿ ನಿರುಮ್ಮಳವಾಗಿ ಹರಡಿಕೊಂಡಿತು
ವಸಂತವೊಂದು ಹೀಗೆ ಅನಾವರಣಗೊಂಡಿತು
ಬೀಜಕ್ಕೆ ಬೆಳೆಯುವ ಕನಸು ಮೂಡಿತು
ಬೇರೊಂದು ಬೆಳೆದು ಸುರುಳಿಯಾಯಿತು
ಕೊನೆಗೊಮ್ಮೆ ಪರಾಗದ ಕಣ್ರೆಪ್ಪೆ ತೆರೆಯಿತು

ಇವೆಲ್ಲವೂ ಘಟಿಸಿದ್ದು ಪುಟ್ಟ ಹಕ್ಕಿಯಿಂದ
ಹಸಿರು ಟೊಂಗೆಯ ಮರೆಯಲ್ಲಿ ಹಾಡಿದ ಒಂದು ಹಾಡಿನಿಂದ

      -ನೆರೂಡ

೩೪.

ಕನಸು

ಮರಳು ಹಾಸಿನ ಮೇಲೆ ನಡೆಯುತ್ತಾ
ನಿನ್ನ ಬಿಟ್ಟುಬಿಡಲು ನಿಶ್ಚಯಿಸಿದೆ

ಪಾದಗಳು ಕಪ್ಪು ಮಣ್ಣನ್ನು ತುಳಿಯುತ್ತಿದ್ದವು
ಅದುರುತ್ತಿದ್ದೆವು ಮಣ್ಣು ಮತ್ತು ನಾನು
ಒಮ್ಮೆ ಪೂರ್ತಿ ಮುಳುಗಿದೆ, ಮತ್ತೆ ಹೊರಬಂದೆ
ನಿರ್ಧರಿಸಿದೆ, ನೀ ನನ್ನಿಂದ ಹೊರಬರಲೇಬೇಕು
ಕತ್ತರಿಸಿದ ಕಲ್ಲಿನಂತೆ ನೀ ನನ್ನ ಭಾರಗೊಳಿಸುತ್ತಿರುವೆ
ಆಳಕ್ಕೆ ಇಳಿಸುತ್ತಿರುವೆ
ನಿಧಾನವಾಗಿ ಹೆಜ್ಜೆ, ಹೆಜ್ಜೆಗೂ ನಿನ್ನ
ಕಳಚಿಕೊಳ್ಳುತ್ತಾ ಬಂದೆ
ನಿನ್ನ ಬೇರುಗಳನ್ನು ಕತ್ತರಿಸಿದೆ
ಗಾಳಿಯಲಿ ಒಂಟಿಯಾಗಿ ತೇಲಿಬಿಟ್ಟೆ

ಆಹ್! ಆ ಗಳಿಗೆಯಲಿ ನನ್ನೊಲವೇ,
ಭಯಾನಕ ರೆಕ್ಕೆಯ ಹೊತ್ತ ಕನಸೊಂದು
ನಿನ್ನನ್ನು ಆವರಿಸುತ್ತಲಿತ್ತು!

ನೀನು ಮಣ್ಣಿನಾಳದಲಿ ಹೂತುಹೋಗುತ್ತಿದ್ದೆ
ನನ್ನ ಕೂಗಿ ಕರೆದೆ, ಓಗೊಡದುಳಿದೆ
ನೆಲದಾಳದಲಿ ಪೂರ್ಣವಾಗಿ ಹೋಳಿಹೋಗುವವರೆಗೂ
ರಕ್ಷಣೆಯ ಗೋಜಿಲ್ಲದೇ ನೀ ನಿಶ್ಚಲವಾಗಿದ್ದೆ

ನಂತರ
ನನ್ನ ನಿರ್ಧಾರವು ನಿನ್ನ ಕನಸುಗಳ ಪ್ರತಿಭಟಿಸಿತು
ಹೃದಯಗಳ ಸೀಳಿದ ಗಾಯಗಳನು ಇಲ್ಲವಾಗಿಸಿತು
ಕೊಳೆಗಳ ತೊಳೆದು ಶುದ್ಧರಾದೆವು ನಾವು
ಬೆತ್ತಲೆಯಾಗಿ, ಕನಸುಗಳ, ಮರಳ ಗೊಡವೆಯಿಲ್ಲದೇ ಪ್ರೀತಿಸಿದೆವು
ಪೂರ್ಣವಾಗಿ, ಹೊಳಪಿನಿಂದ, ಉರಿವ ಬೆಂಕಿಯಾಗಿ

        -ನೆರೂಡ

೩೫.

ಮಗ

ಮುದ್ದು ಮಗನೇ, ನಿನಗೆ ತಿಳಿದಿದೆಯೇನು?
ನಿನಗೆ ತಿಳಿದಿದೆಯೇನು ಎಲ್ಲಿಂದ ನೀ ಬಂದೆಯೆಂದು?

ಹಸಿದ, ಬಿಳಿಯ ಹಂಸಗಳಿರುವ
ಕೊಳವೊಂದರಿಂದ ಬಂದೆ ನೀನು

ಶೀತ ಸರೋವರದ ದಡದಲ್ಲಿ
ಅವಳು ಮತ್ತು ನಾನು ಬೆಂಕಿಯುರಿಸಿದೆವು
ಪರಸ್ಪರ ಆತ್ಮಗಳನು ಚುಂಬಿಸಿ
ಅದುರಿದ ತುಟಿಯನ್ನು ಸವರಿದೆವು
ಎಲ್ಲವನೂ ಬೆಂಕಿಗೆಸೆದುಬಿಟ್ಟೆವು
ಜೀವನವನ್ನು ಸುಟ್ಟುರಿಸಿದೆವು

ಹೀಗೆ ನೀನು ಈ ಜಗಕೆ ಬಂದೆ

ನಿನ್ನ ನೋಡಲೆಂದು, 
ನನ್ನ ನೋಡಲೆಂದು
ಸಾಗರಗಳ ದಾಟಿ ಬಂದಳು
ಅವಳು ಒಂದು ದಿನ
ಅವಳ ಸಪೂರ ಸೊಂಟವನು ಬಳಸಿ
ಭೂಮಿಯ ತುಂಬ ನಡೆದೆ
ಯುದ್ಧಗಳು, ಪರ್ವತಗಳು
ಮರಳು, ಮುಳ್ಳುಗಳೊಂದಿಗೆ...

ಹೀಗೆ ನೀನು ಈ ಜಗಕೆ  ಬಂದೆ

ಅದೆಷ್ಟೋ ಜಾಗಗಳಿಂದ ಬಂದಿರುವೆ ನೀನು
ನೀರಿನಿಂದ, ಭೂಮಿಯಿಂದ
ಬೆಂಕಿಯಿಂದ, ಮಂಜಿನಿಂದ
ದೂರದೂರದಿಂದ ಪಯಣಿಸಿ
ವಿಪರೀತ ಪ್ರೀತಿಯಿಂದ ಬಂಧಿಯಾದ
ನಮ್ಮಿಬ್ಬರೆಡೆಗೆ ನಡೆದು ಬಂದಿರುವೆ
ಅದಕ್ಕೆಂದೇ ನಿನ್ನಿಂದ ಕೇಳಬಯಸುತ್ತೇವೆ
ಏನು ಹೇಳಬಯಸುವೆ ನಮಗೆ?
ನಾವು ನೀಡಿದ ಇಡಿಯ ಪ್ರಪಂಚದಿಂದ
ನಮಗಿಂತಲೂ ಹೆಚ್ಚು ನೀನು ಅರಿತಿರುವೆ

ದೊಡ್ಡ ಚಂಡಮಾರುತದಂತೆ
ಜೀವನವೆಂಬ ಮರವನ್ನು ಅಲುಗಾಡಿಸಿದ್ದೇವೆ
ಬೇರಿನಾಳದವರೆಗೂ ಕಂಪನವ ಹರಡಿದ್ದೇವೆ
ಆ ಮರದ ತುತ್ತತುದಿಯ ಕೊಂಬೆಯ
ಎಲೆಯ ಮೇಲೆ ಈಗ ನೀನಿರುವೆ
ನಿನ್ನಿಂದಾಗಿ ನಾವೂ ಆ ಎತ್ತರಕ್ಕೇರಿದ್ದೇವೆ

             -ನೆರೂಡ

Sunday, October 02, 2022

ಗಾಂಧೀಜಿಯವರ ಬಗ್ಗೆ ಅಭಿಪ್ರಾಯಗಳು

"ಗಾಂಧೀಜಿಯವರ ಸಮಸ್ಯೆ ಎಂದರೆ ಅವರು ಪೂರ್ಣ ಸತ್ಯವನ್ನು ಹೇಳುತ್ತಾರೆ. ಅದನ್ನು ತಡೆದುಕೊಳ್ಳುವ ಶಕ್ತಿ ಸಮಾಜಕ್ಕೆ ಇಲ್ಲ."- ಡಾ.ಬಿ.ಆರ್.ಅಂಬೇಡ್ಕರ್

" ದಿನದಲಿತರ ಗುಡಿಸಲುಗಳ ಮುಂದೆ ತಲೆಬಾಗಿ ನಿಂತ ಮಹಾತ್ಮನೀತ." - ರವೀಂದ್ರನಾಥ ಠಾಗೋರ್

"ಹೆಣ್ಣು ಮತ್ತು ದೇವರು ನನ್ನ ಬದುಕಿನ ಎರಡು ಮುಖ್ಯ ಕಾಳಜಿಗಳಾಗಿದ್ದವು. ನನಗೆ ಹೆಣ್ಣು ಸಿಗಲಿಲ್ಲ, ದೇವರು ಸಿಗಲಿಲ್ಲ. ಆದರೆ ಹೆಣ್ಣು ಮತ್ತು ದೇವರು ಈ ಇಬ್ಬರ ಸೆಳಕುಗಳ ಸಂಗಮವನ್ನು ನಾನು ಮಹಾತ್ಮ ಗಾಂಧೀಜಿಯವರಲ್ಲಿ ಕಂಡೆ."- ಡಾ.ರಾಮ ಮನೋಹರ ಲೋಹಿಯಾ

" ಬಹುಶಃ ಬುದ್ದನ ನಂತರ ಜಗತ್ತು ಕಂಡ ಅಪೂರ್ವ ವ್ಯಕ್ತಿ ಗಾಂಧಿ." - ಜಾನ್ ಗುಂಥರ್

"ಇಂತಹ ಒಂದು ಚೈತನ್ಯ ದೇಹಧಾರಿಯಾಗಿ ಈ ಭೂಮಿಯ ಮೇಲೆ ನಡೆದಾಡಿತ್ತು ಎಂದು ಮುಂದಿನ ಜನಾಂಗ ನಂಬಲಾರದಂತಹ ವ್ಯಕ್ತಿ ಗಾಂಧಿ." - ಆಲ್ಬರ್ಟ್‌ ಐನ್ ಸ್ಟೀನ್

"ಸಮುದ್ರದ ಒಂದು ಹಿಡಿ ಉಪ್ಪು ತೆಗೆದು ಗಾಂಧಿ ಬ್ರಿಟಿಷರಿಗೆ ಹಾಕಿದ ಸವಾಲು, ಮಹರ್ ಸರೋವರದಿಂದ ಒಂದು ಬೊಗಸೆ ನೀರಿನ್ನು ಎತ್ತಿದ ಅಂಬೇಡ್ಕರ್ ಈ ಇಡೀ ಹಿಂದೂ ಸಮಾಜಕ್ಕೆ ಹಾಕಿದ ಸವಾಲು."- ಜಿ.ಕೆ.ಗೋವಿಂದರಾಯ

"ಬ್ರಿಟಿಷರ ಸಿಂಹ ಕೂಡ ಗಾಂಧಿಯ ಮೇಕೆಯನ್ನು ಕಂಡು ಓಡಿಹೋಗುವುದು."- ಮಿಕೇಲ್ ನೋಯ್ಮಾ(ಅರಬ್ ಕವಿ)

" ಗಾಂಧಿಯವರ ಬದುಕಿನ ಅರ್ಥ ತಿಳಿಯಲು ಅವರ ಜೀವನ ಹಾಗೂ ಕಾರ್ಯಕ್ರಮಗಳಿಗೆ ಹೋಗಬೇಕೆ ಹೊರತು, ಅವರ ಮಾತು ಹಾಗೂ ಬರವಣಿಗೆಗಳಿಗಲ್ಲ."- ಲೋಹಿಯಾ

"ಗಾಂಧೀಜಿಯವರ ಜೀವನ ಹಾಗೂ ಗುರಿಗಳನ್ನು ಸಮಾಜವಾದದ ವಸ್ತ್ರದೊಡನೆ ನೇಯ್ದರೆ ನವೀನ ಸಮಾಜವೊಂದು ನಿರ್ಮಾಣವಾದೀತು."- ಲೋಹಿಯಾ

" ಗಾಂಧಿಯವರು ಬರೆದ ಒಂದೇ ಒಂದು ತತ್ವ ಅಥವಾ ತರ್ಕಬದ್ಧವಾದ ಪ್ರಣಾಳಿಕೆ ಎಂದರೆ, ಯಾರಾದರೂ ಅಪರೂಪವಾಗಿ ಓದುವ 'ಹಿಂದ್ ಸ್ವರಾಜ್' ಒಂದೇ. ಗಾಂಧಿಯವರು ಭಾರತೀಯರನ್ನು ಹಾಗೂ ಜಗತ್ತನ್ನು ಪ್ರಭಾವಿತಗೊಳಿಸುವುದು ತಮ್ಮ ವ್ಯವಸ್ಥಿತ ಬರವಣಿಗಳಿಂದ ಅಲ್ಲವೇ ಅಲ್ಲ! ಅವರ ಜೀವನ ವಿಧಾನ ಮತ್ತು ಕಾರ್ಯಗಳಿಂದ ಮಾತ್ರ."- ಲೋಹಿಯಾ

"ಅಣುಬಾಂಬ್ ಮತ್ತು ಗಾಂಧೀಜಿ ಈ ಶತಮಾನದ ಎರಡು ಅಧ್ಬುತಗಳು. ಅಣುಬಾಂಬ್ ಒಂದು ನಾಗರಿಕತೆಯ ಅವನತಿಗೆ ಪ್ರತೀಕವಾದರೆ, ಗಾಂಧೀಜಿ ಅಲ್ಲೇ ಹೊಸ ಚಿಗುರು ಕಾಣಿಸಿಕೊಂಡಿರುವುದರ ಸಂಕೇತ."- ಲೋಹಿಯಾ

" ಮಾನವ ಸಂಕುಲದ ಅಭ್ಯುದಯವಾಗಬೇಕೆಂದರೆ ಅಲ್ಲಿ ಗಾಂಧಿ ಇರಲೇಬೇಕು. ಮಾನವೀಯತೆಯ ಬೆಳಕಿನಲ್ಲಿ ವಿಶ್ವಶಾಂತಿ ಮತ್ತು ಸೌಹಾರ್ದಯುತ ಬಾಳ್ವೆಯನ್ನು ಅವರು ಕೇವಲ ಪ್ರತಿಪಾದಿಸಲಿಲ್ಲ, ಅದರಂತೆ ಬಾಳಿ ತೋರಿಸಿ, ಜಯ ಗಳಿಸಿದರು. ಅವರನ್ನು ಕಡೆಗಣಿಸುವುದೆಂದರೆ ನಮ್ಮ ಬದುಕನ್ನು ಗಂಡಾಂತರಕೊಡ್ಡಿದಂತೆ."- ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

"ಬುದ್ಧನ ನಂತರ ಭಾರತವು ಯಾವ ವ್ಯಕ್ತಿಯನ್ನೂ ಇಷ್ಟು ದೈವೀಕವಾಗಿ ಕಂಡಿರಲಿಲ್ಲ. ಸರಳ ಬದುಕು, ಶತ್ರುಗಳನ್ನೂ ಆದರಿಸುವ, ವಿಷಯಾಸಕ್ತರಲ್ಲದ, ಅಪರಿಗ್ರಹಿ ಈ ಗಾಂಧಿ. ತನ್ನ ತತ್ವ ಸಿದ್ದಾಂತ, ಬಾಳ್ವೆಯ ಮೂಲಕ ಇಡೀ ವಿಶ್ವವನ್ನೇ ಬೆರಗಾಗಿಸಿದ ಶಾಂತಿಯುತ ಕ್ರಾಂತಿಕಾರಿ ಸಂತ."- ವಿಲ್ ಡ್ಯೂರಾಂಡ್ (ಅಮೇರಿಕನ್ ಲೇಖಕ, ಇತಿಹಾಸಕಾರ, ತತ್ವಜ್ಞಾನಿ)

" ಮಹಾತ್ಮಾ ಗಾಂಧಿ ಒಬ್ಬ ಮಹಾನ್ ವ್ಯಕ್ತಿ. ಅವರಿಗೆ ಮನುಷ್ಯರ ಗುಣಾಣುಗುಣಗಳ ಆಮೂಲಾಗ್ರ ತಿಳವಳಿಕೆ ಇದ್ದಿತು. ಅವರು ವ್ಯಕ್ತಿಗಳ ಸಕಾರಾತ್ಮಕ ಗುಣಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಮೂಲಕ ಸಮಾಜದಲ್ಲಿನ ನಕಾರಾತ್ಮಕ ಆಲೋಚನೆಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದರು. ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ಅವರ ಜೀವನಕ್ರಮದಿಂದ ಸ್ಪೂರ್ತಿ ಪಡೆದಿದ್ದೇನೆ."- ದಲಾಯ್ ಲಾಮಾ(ಟಬೆಟಿಯನ್ನರ ಧರ್ಮಗುರು)

"ನನಗೆ ನಿಮ್ಮ ಕುರಿತು ಅದೆಂಥದೋ ಒಂದು ವಿಶೇಷ ಸೆಳೆತ. ನಿಮ್ಮ ನಿಲುವು, ಆದರ್ಶ, ಮಾತುಗಾರಿಕೆ, ಜೀವನ ಶೈಲಿ ನಮ್ಮನ್ನು ಆಪ್ತರನ್ನಾಗಿಸುವುದಲ್ಲದೆ, ನಾವು ಈ ವಿಶ್ವದ ಚಿಕ್ಕ ಕುಟುಂಬದಲ್ಲಿದ್ದೇವೆ ಎಂಬ ಆಪ್ಯಾಯ ಭಾವನೆ ಆವರಿಸಲು ಕಾರಣರಾಗಿದ್ದೀರಿ." - ಜಾರ್ಜ್ ಬರ್ನಾರ್ಡ್ ಷಾ

Wednesday, September 14, 2022

ಕವಿತೆ

ಮುತ್ತುಗಳ ಲೆಕ್ಕವಿಡಬೇಡ
ಮೆತ್ತಗೆ ನೀನುಸಿರದ ಮಾತು
ಮತ್ತೆ ಮತ್ತೆ ಮಾರ್ದನಿಸುತ್ತದೆ
ಅಂದು ನಾವು ಸೇರಿದ ಇರುಳು
ಬಾನಿಗೂ ಉಬ್ಬರ!
ಗುಡುಗು, ಮಿಂಚು ಮೌನ 
ಮೀರುವ ಅಬ್ಬರದ ನಡುವೆ
ಸುರಿವ ಮಳೆಹನಿಯಂತೆ ಮುತ್ತು
ಧಾರೆಯಾಗಿ ಸುರಿಯುತ್ತಲಿತ್ತು
ಲೆಕ್ಕ ಮೀರಿತು ಎಂದವಳಿಗೆ
ಮತ್ತದೇ ಉತ್ತರ ಲೆಕ್ಕವಿಡಬೇಡ
ಮುಟ್ಟುವುದು, ಬೆತ್ತಲಾಗುವುದು
ಲೆಕ್ಕವನು ಮೀರಿದ್ದು 
ಆತ್ಮದ ಬೆಸುಗೆಗಲ್ಲದೇ ದೇಹ
ಬೆಸೆದುಕೊಳ್ಳುವುದೆ? ನಿನ್ನ
ಒಡಲೊಳಗೆ ನಾನು ನದಿಯಂತೆ
ಹರಿದಾಗ ಕ್ಷಣಕ್ಷಣವೂ ತುಂಬಿ
ಕೊಂಡೆ ಆಳ ಅಗಾಧಗಳನು
ಹೊರಲೋಕದ ಗೊಡವೆ ಮೀರಿದ
ಆ ರಾತ್ರಿಯಲಿ ದಿಗ್ಗನೆ ಬೆಳಕು
ಮನದೊಳಗೆ ಹೊತ್ತಿ ಬೆರಳು
ಹೊಸಪದವೊಂದನು ಟಂಕಿಸಿತು
ಬೆಳಕಿನ ರಾತ್ರಿ

Friday, May 20, 2022

ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿರುವ ಜಿ. ಎಸ್. ಜಯದೇವ

ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ ಮತ್ತು ರುದ್ರಾಣಿಯವರ ಮಗನಾಗಿ 1951ರಲ್ಲಿ ಜನಿಸಿದ ಜಿ. ಎಸ್. ಜಯದೇವ ಅವರು ಪ್ರಚಾರಗಳಿಂದ ದೂರವಿರುವ ಸಾಮಾಜಿಕ ಕಾರ್ಯಕರ್ತರು. ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಮೈಸೂರಿನ ಪ್ರತಿಷ್ಠಿತ ಜೆ.ಎಸ್.ಎಸ್. ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸವನ್ನು ನಿರ್ವಹಿಸಿದವರು. ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರಾದ ಡಾ. ಸುದರ್ಶನ ಅವರ ಸಂಪರ್ಕಕ್ಕೆ ಬಂದ ಅವರು ತಮ್ಮ ಉದ್ಯೋಗವನ್ನು ತ್ಯಜಿಸಿ, ಗಿರಿಜನರ ಮತ್ತು ದೀನದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡರು. ಮೈಸೂರಿನ ಸುತ್ತಮುತ್ತಲ ಗಿರಿಜನರೊಡನೆ ಸಂಪರ್ಕವನ್ನಿಟ್ಟುಕೊಂಡು ಅವರ ಸಂಕಷ್ಟಗಳನ್ನು ಅರಿತರು. ಚಾಮರಾಜನಗರದ ಅನೇಕ ಸರಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಅಲ್ಲಿನ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಿದರು.

ಅನಾಥ ಮಕ್ಕಳ ದುಃಖಕ್ಕೆ ಮರುಗಿದ ಅವರು ಮಕ್ಕಳಿಗಾಗಿ ದೀನ ಬಂಧು ಮಕ್ಕಳ ಮನೆ ಎಂಬ ಅನಾಥಾಶ್ರಮವನ್ನು ತೆರೆದರು. ಬಾಡಿಗೆ ಕಟ್ಟಡದಲ್ಲಿ ಮಕ್ಕಳನ್ನು ಪೋಷಿಸುತ್ತಾ, ಅವರ ಸಮಗ್ರ ಕಲ್ಯಾಣಕ್ಕಾಗಿ ದೀನಬಂಧು ಟ್ರಸ್ಟ್ ಶ್ರಮಿಸುತ್ತಿದೆ. ಚಾಮರಾಜನಗರದಲ್ಲಿಂದು ಇಂತಹ ನಾಲ್ಕು ಮಕ್ಕಳ ಮನೆಗಳಿದ್ದು, ಪ್ರತಿ ಮನೆಯಲ್ಲಿಯೂ ಹನ್ನೆರಡು ಮಕ್ಕಳು ಮದರ್ ಅಥವಾ ಫಾದರ್ ಎಂಬ ಪೋಷಕರೊಂದಿಗೆ ವಾಸಿಸುತ್ತಾರೆ. ಈ ಮಕ್ಕಳ ಸೃಜನಶೀಲ ಶಿಕ್ಷಣಕ್ಕಾಗಿ ಅವರು ರಾಮಸಮುದ್ರದಲ್ಲಿ ಒಂದು ಶಾಲೆಯನ್ನು ಕೂಡಾ ತೆರೆದಿದ್ದಾರೆ.

ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸ್ವಯಂಉದ್ಯೋಗ ಕಲಿಕೆಗಾಗಿ ಅವರು ಹೆಣ್ಣುಮಕ್ಕಳ ಹಸಿರುಮನೆ ಶಿಕ್ಷಣ ಕಾರ್ಯಕ್ರಮ ಎಂಬ ಯೋಜನೆಯನ್ನು ರೂಪಿಸಿದ್ದಾರೆ. ಪರಿಸರದ ಬಗ್ಗೆಯೂ ಅವರದು ಕೊನೆಯಿಲ್ಲದ ಕಾಳಜಿ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಡೆಸಿದ ಬಿಳಿಗಿರಿರಂಗನ ಬೆಟ್ಟದ ಜೀವವೈವಿಧ್ಯಗಳ  ದಾಖಲಾತಿ ಕಾರ್ಯಕ್ರಮದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಮೈಸೂರಿನ ಶಕ್ತಿಧಾಮ ಎಂಬ ಮಹಿಳೆಯರ ಪುನರ್ವಸತಿ ಕೇಂದ್ರದ ಕಾರ್ಯನಿರ್ವಾಹಕ ಧರ್ಮದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ವಿವೇಕಾನಂದ ಪೀಠದ ಸಂದರ್ಶಕ ಪ್ರಾಧ್ಯಾಪಕರೂ ಹೌದು.

ಪ್ರಸಿದ್ಧ ಕವಿಯ ಪುತ್ರನಾದ ಜಯದೇವ ಅವರು ಉತ್ತಮ ಲೇಖಕರೂ ಹೌದು. ಶಕ್ತಿಧಾಮದ ಸತ್ಯ ಕಥೆಗಳು, ಮಕ್ಕಳ ಬೆಳವಣಿಗೆ ಮತ್ತು ನಾವು, ಹಳ್ಳಿಹಾದಿ ಇವು ಅವರು ರಚಿಸಿದ ಕೃತಿಗಳು. ಗಾಂಧೀಜಿಯವರ ಗ್ರಾಮಭಾರತದ ಕನಸನ್ನು ನನಸಾಗಿಸಲು ಶ್ರಮಿಸುತ್ತಿರುವ ಅವರಿಗೆ 2019ರಲ್ಲಿ ಪ್ರತಿ಼ಷ್ಠಿತ ಮಹಾತ್ಮಗಾಂಧಿ ಸೇವಾರತ್ನ ಪ್ರಶಸ್ತಿ ದೊರಕಿದೆ. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳು ಅರ್ಹವಾಗಿಯೇ ಸಂದಿವೆ. 

Thursday, May 19, 2022

ಹಳ್ಳಿಗಳ ಆತ್ಮಕಥನ ಬರೆಯುತ್ತಿರುವ ಪಿ. ಸಾಯಿನಾಥ

ಮಾಧ್ಯಮವೆಂದರೆ ಟಿ. ಆರ್. ಪಿ. ಎಂದು ಎಲ್ಲರೂ ನಂಬುತ್ತಿರುವಾಗ ಇವರು ಮಾಧ್ಯಮವೆಂದರೆ ಬಹುಜನರ ನೈಜಬದುಕನ್ನು ಅರ್ಥಮಾಡಿಕೊಳ್ಳುವುದು ಎಂದರು. ರಾಜಕಾರಣಿಗಳ ವಿಚಾರಗಳನ್ನು, ವಿವರಗಳನ್ನು ಜನರಿಗೆ ತಿಳಿಸುವುದೇ ಪತ್ರಿಕೋದ್ಯಮ ಎಂದಾಗ ಇವರು ಭಾರತದ ಅದ್ಯಾವುದೋ ಹಳ್ಳಿಯ ಮೂಲೆಯ ಜನರ ತಲ್ಲಣವನ್ನು ರಾಜಕಾರಣಿಗಳಿಗೆ ಕೇಳಿಸುವ ಧಾವಂತದಲ್ಲಿದ್ದರು. ಪ್ರಸಿದ್ಧ ಪತ್ರಕರ್ತರೆಲ್ಲಾ ನಗರದಲ್ಲಿ ಸ್ಥಿರವಾಗಲು ಯತ್ನಿಸುತ್ತಿರುವಾಗ ಇವರು ನಗರಕ್ಕೆ ಬೆನ್ನು ತಿರುಗಿಸಿ ಗ್ರಾಮಭಾರತದೆಡೆಗೆ ಮುಖಮಾಡಿದರು. ಬರವೆಂದರೆ ಜನರಿಗೆ ಕಷ್ಟ ಎಂದು ಹಾಡಿದ ರಾಗವನ್ನೇ ವರದಿಗಾರರು ಹಾಡುತ್ತಿದ್ದಾಗ ಬರದ ನಾಡಿನ ಬಹು ಆಯಾಮಗಳನ್ನು ಸಂಗ್ರಹಿಸಿ  'ಬರ ಅಂದ್ರೆ ಎಲ್ಲರಿಗೂ ಇಷ್ಟ' ಎಂಬ ಅದ್ಭುತ ಪುಸ್ತಕವನ್ನು ಬರೆದು ಎಲ್ಲರ ಹುಬ್ಬೇರುವಂತೆ ಮಾಡಿದರು. ಪಿ. ಸಾಯಿನಾಥ ಎಂಬ ಪತ್ರಕರ್ತರೊಬ್ಬರ ಸಾಹಸಯಾನವಿದು.

ಭಾರತದ ರಾಷ್ರ್ಟಾಧ್ಯಕ್ಷರಾಗಿದ್ದ ವಿ.ವಿ.ಗಿರಿಯವರ ಮೊಮ್ಮಗನಾದ ಸಾಯಿನಾಥ ಅವರು ಜನಿಸಿದ್ದು 1957ರಲ್ಲಿ, ಮದ್ರಾಸಿನಲ್ಲಿ. ಚೆನ್ನೈನ ಲೊಯೋಲಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ ಅವರು ದೆಹಲಿಯ ಜೆ. ಎನ್ ಯು. ಕಾಲೇಜಿನಲ್ಲಿ ಇತಿಹಾಸವನ್ನು ಅಭ್ಯಾಸ ಮಾಡಿದರು. ಯಾವುದೋ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಳೆದುಹೋಗಬಹುದಾದ ಅವರು ಆಕಸ್ಮಿಕವಾಗಿ ಪತ್ರಿಕೋದ್ಯಮದ ಕಡೆಗೆ ಹೊರಳಿದರು. ಯು.ಎನ್. ಐ. ಸುದ್ಧಿ ಸಂಸ್ತೆ ಹಾಗೂ ದ ಡೈಲಿ ಪತ್ರಿಕೆಯ ವಿದೇಶ ಸಂಪಾದಕರಾಗಿ ಕೆಲಸ ಮಾಡಿದರು. ಗೆಳೆಯ ಸುಧೀಂದ್ರ ಕುಲಕರ್ಣಿಯವರೊಂದಿಗೆ ಸೇರಿ ಜಗತ್ತಿನ ಮಾಧ್ಯಮಗಳ ಹುಳುಕುಗಳನ್ನು ಬಯಲಿಗೆಳೆಯುವ 'ಕೌಂಟರ್ ಮೀಡಿಯಾ' ಎಂಬ ಪತ್ರಿಕೆಯನ್ನೂ ಕೆಲಕಾಲ ಹೊರತಂದರು. 'ಬ್ಲಿಟ್ಸ್' ಪತ್ರಿಕೆಯ ಉಪಸಂಪಾದಕರಾಗಿಯೂ ಕೆಲಸ ನಿರ್ವಹಿಸಿದರು. ಆಗಲೇ ದೇಶದ ಹತ್ತು ರಾಜ್ಯಗಳು ಭೀಕರ ಬರದ ದವಡೆಗೆ ಸಿಕ್ಕಿ ನರಳುತ್ತಿದ್ದವು. ಸಾಯಿನಾಥ ಅವರಿಗೆ ತನ್ನ ಕೆಲಸವಿರುವುದು ಅಂತಹ ಜಾಗದಲ್ಲಿ ಅನಿಸತೊಡಗಿತು. 'ಬ್ಲಿಟ್ಸ್' ಗೆ ರಾಜೀನಾಮೆ ರವಾನಿಸಿ ಹಳ್ಳಿಗಳೆಡೆಗೆ ಹೊರಟೇಬಿಟ್ಟರು. ಹತ್ತು ವರ್ಷಗಳ ಪತ್ರಿಕೋದ್ಯಮದ ಅನುಭವದಲ್ಲಿ ಅವರಿಗೆ ತೀವ್ರವಾಗಿ ಅನಿಸಿದ್ದೆಂದರೆ ಭಾರತದ ಮೂರನೇ ಎರಡರಷ್ಟಿರುವ ಗ್ರಾಮೀಣ ಭಾರತವನ್ನು ಯಾವ ಮಾಧ್ಯಮಗಳೂ ಸ್ಪರ್ಶಿಸುತ್ತಿಲ್ಲವೆಂಬ ಕಹಿಸತ್ಯ. ಟೈಮ್ಸ್ ಆಫ್ ಇಂಡಿಯಾದ ಫೆಲೋಶಿಪ್ ಪಡೆದ ಅವರು ಗ್ರಾಮಭಾರತದಲ್ಲಿ ಸುಮಾರು ಒಂದು ಲಕ್ಷ ಕಿ. ಮೀ. ದೂರವನ್ನು 16 ವಿವಿಧ ಸಾರಿಗೆ ವ್ಯವಸ್ಥೆಯ ಮೂಲಕ ಮತ್ತು 5,000ಕಿ. ಮೀ. ದೂರವನ್ನು ಕಾಲ್ನಡಿಯಿಂದ ಕ್ರಮಿಸಿದರು. ಗ್ರಾಮಭಾರತದ ಆತ್ಮಕಥನವನ್ನು ಹೊರಜಗತ್ತಿಗೆ ಬಗೆದು ತೋರಿದರು. ಅಲ್ಲಿ ವಲಸೆಯ ತಲ್ಲಣಗಳು, ದಲಿತರ ಸಂಕಷ್ಟ, ಆದಿವಾಸಿಗಳ ತಲ್ಲಣ, ಪ್ರಕೃತಿಪ್ರೇಮ, ಕೂಲಿಗಳ ಶೋಷಣೆ, ಹೆಣ್ಣುಗಳ ಗಟ್ಟಿತನ, ಉಳ್ಳವರ ದರ್ಪ, ಆಳುವವರ ವಂಚನೆ ಹೀಗೆ ಚಿತ್ರವಿಚಿತ್ರ ಕಥಾನಕಗಳಿದ್ದವು. ಹಾಗೆ ಬರೆದ ಕಥೆಗಳನ್ನೆಲ್ಲ ಒಂದುಗೂಡಿಸಿ 'ಎವರಿಬಡಿ ಲವ್ಸ್ ಅ ಗುಡ್ ಡ್ರಾಟ್' ಎನ್ನುವ ಪುಸ್ತಕವನ್ನು ಬರೆದರು. ಈ ಅಪೂರ್ವ ಕೆಲಸಕ್ಕಾಗಿ ಅವರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ದೊರೆಯಿತು. ನಲವತ್ತಕ್ಕಿಂತ ಹೆಚ್ಚು ಮುದ್ರಣಗಳನ್ನು ಕಂಡ ಈ ಪುಸ್ತಕ ಭಾರತದ ಹತ್ತಕ್ಕಿಂತಲೂ ಹೆಚ್ಚು ಭಾಷೆಗೆ ಅನುವಾದಗೊಂಡಿದೆ. ಭಾರತದ ನಕಾಶೆಯಲ್ಲಿ ಮಾತ್ರವೇ ಇದ್ದ ಹಳ್ಳಿಗಳಿಗೆ ಪ್ರಧಾನಿಯೂ ಸೇರಿದಂತೆ ರಾಜಕಾರಣಿಗಳು ಭೇಟಿಕೊಡುವಂತಾಯಿತು. ತಮಿಳುನಾಡು, ಓರಿಸ್ಸಾ ಮೊದಲಾದ ರಾಜ್ಯಗಳು ತಮ್ಮ ಆಡಳಿತ ಪಾಲಿಸಿಗಳಲ್ಲಿ ಅವರ ಕ್ಷೇತ್ರಕಾರ್ಯಗಳ ಫಲಿತವನ್ನು ಅಳವಡಿಸಿಕೊಳ್ಳುವಂತಾಯಿತು. ಈ ಪುಸ್ತಕವನ್ನು ಜಿ. ಎನ್. ಮೋಹನ್ ಅವರು 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಸಾಯಿನಾಥ ಕೇವಲ ಹಳ್ಳಿಗಳ ಬಗ್ಗೆ ಮಾತ್ರವೇ ಚಿಂತಿಸಿದವರಲ್ಲ. ಹಳ್ಗಳಿಳಿಂದ ಹೊರತಳ್ಳಲ್ಪಟ್ಟ ದಲಿತರ ಬಗ್ಗೆ 'ದಿ ಹಿಂದೂ' ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಬರೆದರು. ಎಲೈಟ್ ನೋಟದ ನಗರಕೇಂದ್ರಿತ ಪತ್ರಕರ್ತರಿಗೆ ಗ್ರಾಮಭಾರತವನ್ನು ನೋಡಬೇಕಾದ ಪರಿಕ್ರಮಗಳ ಬಗ್ಗೆ ಹೇಳಿಕೊಟ್ಟರು. ಹಾಗೆ ನೋಡುವ ಯುವ ಪತ್ರಕರ್ತರ ಪಡೆಯನ್ನೇ ತನ್ನೊಂದಿಗೆ ಕರೆದೊಯ್ಯತೊಡಗಿದರು. 'ಪತ್ರಿಕೋದ್ಯಮವಿರುವುದು ಜನರಿಗಾಗಿ, ಬಂಡವಾಳಶಾಹಿಗಳಿಗಾಗಿಯಲ್ಲ' ಎಂಬ ಬದ್ಧತೆಯೊಂದಿಗೆ 2014ರಲ್ಲಿ 'ಪೀಪಲ್ ಆರ್ಕೈವ್ ಆಫ್ ರೂರಲ್ ಇಂಡಿಯಾ' ಅಂದರೆ 'ಪರಿ'ಎಂಬ ಮಾಧ್ಯಮಸಂಸ್ತೆಯೊಂದನ್ನು ಹುಟ್ಟುಹಾಕಿದರು. ಗ್ರಾಮೀಣ ಜನರು ಅನುಭವಿಸುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ, ಅಲ್ಲಿನ ಪ್ರಸ್ತುತ ವಿದ್ಯಮಾನಗಳು ಮತ್ತು ಜಾಗತೀಕರಣದ ನಂತರದ ಪರಿಣಾಮಗಳ ಬಗ್ಗೆ ಪರಿ ನಿರಂತರ ಶೋಧಗಳನ್ನು ನಡೆಸುತ್ತಾ, ವರದಿಗಳನ್ನು ಪ್ರಕಟಿಸುತ್ತದೆ. ಜೊತೆಯಲ್ಲಿ ಆದಿವಾಸಿ ಜನಾಂಗ ಮತ್ತು ಜಾನಪದ ಲೋಕದಲ್ಲಿ ಮರೆಯಾಗುತ್ತಿರುವ ಅನೇಕ ಮೌಖಿಕ ಕಥಾನಕಗಳನ್ನು ಸಂಗ್ರಹಿಸಿ, ದಾಖಲಿಸಿಡುವ ಕೆಲಸವನ್ನೂ ಮಾಡುತ್ತಿದೆ. ದೇಶವಿದೇಶಗಳ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಸಾಯಿನಾಥ ಸಾರ್ಥಕ ಪತ್ರಿಕೋದ್ಯಮದ ಪಾಠವನ್ನು ಮಾಡುತ್ತಾರೆ.

ಪತ್ರಕರ್ತರಾದವರು ಸರಕಾರದ ಕಾರ್ಯಗಳ ವಿಮರ್ಶಕರೂ ಆಗಿರುವುದರಿಂದ ಸರಕಾರ ಕೊಡುವ ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸಬಾರದೆಂಬುದು ಸಾಯಿನಾಥ ಅವರ ಅಭಿಪ್ರಾಯ. ಹಾಗಾಗಿ ಪ್ರತಿಷ್ಠಿತ ಪದ್ಮಭೂಷಣವೂ ಸೇರಿದಂತೆ ಎಲ್ಲ ರಾಜ್ಯ ಮತ್ತು ರಾಷ್ರ್ಟಮಟ್ಟದ ಪ್ರಶಸ್ತಿಗಳನ್ನವರು ನಿರಾಕರಿಸಿದ್ದಾರೆ. ಅವರ ಕಾರ್ಯಯೋಜನೆಗಳಿಗೆ ಸರಕಾರ ಅಥವಾ ಬಂಡವಾಳಗಾರರಿಂದ ನೇರ ಹಣಸಹಾಯವನ್ನೂ ಅವರು ಪಡೆಯುವುದಿಲ್ಲ. ಆದರೆ ಗ್ರಾಮೀಣ ಪ್ರದೇಶದ ವರದಿಗಳ ಬಗೆಗೇ ಅವರಿಗೆ 13ಪ್ರತಿಷ್ಠಿತ ಪ್ರಶಸ್ತಿಗಳು ದೊರಕಿವೆ. 2021ರ ಪುಕವೋಕಾ ಗ್ರ್ಯಾಂಡ್ ಫ್ರೈಜ್ ಅವರಿಗೆ ಸಂದಿದೆ. ಪತ್ರಿಕೋದ್ಯಮ ವಿಭಾಗದಿಂದ ಈ ಪ್ರಶಸ್ತಿ ಪಡೆದ ಮೊದಲಿಗರು ಅವರು. ಯುರೋಪಿಯನ್ ಕಮೀಷನ್ ನೀಡುವ ಲಾರೆಂಜೋ ನೆಟಾಲಿ ಫ್ರೈಜ್ ಪಡೆದ ಮೊದಲ ಭಾರತೀಯರೂ ಹೌದು. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ 2009ರಲ್ಲಿ ಅವರನ್ನು ವರ್ಷದ ಪತ್ರಕರ್ತ ಪ್ರಶಸ್ತಿ ನೀಡಿ ಗೌರವಿಸಿದೆ. ಅವರೊಬ್ನ ಉತ್ತಮ ಛಾಯಾಗ್ರಾಹಕರೂ ಹೌದು. ತಮ್ಮ ಕ್ಯಾಮರಾವನ್ನು ಹಳ್ಳಿಗಾಡಿನ ಹೆಂಗಸರ ಕೊರಳಲ್ಲಿ ನೇತಾಡಿಸಿ ಅವರ ಕಣ್ಣಿನಿಂದಲೂ ಚಿತ್ರಗಳನ್ನವರು ಸಂಗ್ರಹಿಸಿದ್ದಾರೆ. ಅವರ 'ವಿಸಿಬಲ್ ವರ್ಕ್, ಇನವಿಸಿಬಲ್ ವುಮೆನ್ ಎಂಡ್ ವರ್ಕ ಇನ್ ರೂರಲ್ ಇಂಡಿಯಾ' ಎಂಬ ಚಿತ್ರಗ್ಯಾಲರಿಯನ್ನು ಆರು ಲಕ್ಷ ಭಾರತೀಯರು ವೀಕ್ಷಿಸಿದ್ದಾರೆ. ಕೆನಡಾದ ಡಾಕ್ಯುಮೆಂಟರಿ ನಿರ್ದೇಶಕ ಜಿಯೋ ಮೌಲಿನ್ಸ್ ಅವರ ಬಗ್ಗೆ ನಿರ್ಮಿಸಿದ ಸಾಕ್ಷಚಿತ್ರವು ಅಂತರಾಷ್ಟ್ರೀಯ ಪಿಲ್ಮ ಫೆಸ್ಟಿವಲ್ ನಲ್ಲಿ ಪ್ರಥಮ ಬಹುಮಾನ ಗಳಿಸಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ  ಭಾರತೀಯ   ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರನ್ನು 'ಸ್ತ್ರೀಲೋಕ ಮತ್ತು ಹಸಿವಿನ ಜಗತ್ತಿನ ಶ್ರೇಷ್ಠ ಪರಿಣಿತ' ಎಂದು ಬಣ್ಣಿಸಿದ್ದಾರೆ. 

ಇಡಿಯ ಜಗತ್ತು ಕೊರೊನಾವೆಂಬ ಸಾಂಕ್ರಾಮಿಕಕ್ಕೆ ಬಲಿಯಾದಾಗಲೂ ಸಾಯಿನಾಥರ ಲೇಖನಿ ಮತ್ತು ಕ್ಯಾಮರಾ ಕ್ವಾರೈಂಟೈನ್ ನಲ್ಲಿರಲಿಲ್ಲ. ಸರಕಾರ ಮತ್ತು ಆಡಳಿತ ಯಂತ್ರಗಳು ಕೊರೊನಾ ನಿಯಂತ್ರಣದಲ್ಲಿ ತೋರಿದ ಲಕ್ಷ, ನಿರ್ಲಕ್ಷ ಎಲ್ಲವನ್ನೂ ಅವರು ನಿರಂತರವಾಗಿ ದಾಖಲಿಸಿದ್ದಾರೆ. ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಹಿಡಿದು ಪರಿಹಾರ ನೀಡಿಕೆಯಲ್ಲಿನ ತಾರತಮ್ಯದವರೆಗೆ ಎಲ್ಲವನ್ನೂ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ದೇಶದಲ್ಲಿ ತನಿಖಾ ಪತ್ರಿಕೋದ್ಯಮ ಹಳ್ಳಹಿಡಿದಿದೆ ಎಂಬ ಮುಖ್ಯನ್ಯಾಯಾಧೀಶರ ಭಾಷಣಕ್ಕೆ ಅವರು ನೀಡಿದ ಪ್ರತಿಕ್ರಿಯೆ ಪ್ರಸ್ತುತ ಭಾರತದ ಮಾಧ್ಯಮಲೋಕದ ನೈಜಚಿತ್ರಣವೂ ಹೌದೂ. ಬಂಡವಾಳಶಾಹಿಗಳ ಹಿಡಿತ, ಆಡಳಿತಾರೂಢ ಪಕ್ಷಗಳ ಬೆದರಿಕೆ ಮತ್ತು ಬದ್ಧತೆಯ ಕೊರತೆ ಹೇಗೆ ಎಲ್ಲರನ್ನೂ ಜನಪ್ರಿಯ ಪತ್ರಿಕೋದ್ಯಮದ ಕಡೆಗೆ ಸೆಳೆಯುತ್ತಿದೆ ಎಂಬುದನ್ನವರು ಕೂಲಂಕುಷವಾಗಿ ವಿವರಿಸಿದ್ದಾರೆ. ಭಾರತವು ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ವಿಶ್ವದ ಯಾದಿಯಲ್ಲಿ 142ನೇ ಸ್ಥಾನದಲ್ಲಿದೆ ಎಂಬುದು ನಿಜಕ್ಕೂ ಆತಂಕಕಾರಿ. 

ಯಾವುದೇ ಘಟನೆಯನ್ನು ವರದಿಗಾರನೊಬ್ಬ ನೋಡಬೇಕಾಗಿದ್ದು ಒಂದು ಪ್ರಕರಣವಾಗಿಯಲ್ಲ, ಬದಲಾಗಿ ಒಮನದು ಪ್ರಕ್ರಿಯೆಯಾಗಿ, ಯಾಕೆಂದರೆ ಇಲ್ಲಿರುವುದು ಕೇವಲ ಸಂಖ್ಯೆಯಲ್ಲ, ಮನುಷ್ಯರು ಮಬ ಸೂಕ್ಮಗ್ರಹಿಕೆಯನ್ನು ಪತ್ರಿಕೋದ್ಯಮಕ್ಕೆ ನೀಡಿದ ಸಾಯಿನಾಥ ಉತ್ತಮ ವಾಗ್ಮಿಯೂ ಹೌದು. ಸಾಕ್ಷಾಧಾರಗಳ ಸಹಿತವಾಗಿ, ಸಚಿತ್ರವಾಗಿ ಅವರು ಗ್ರಾಮ್ಯಭಾರತದ ಕಥಾನಕಗಳನ್ನು ತಮ್ಮ ಲಘುಹಾಸ್ಯ ಮತ್ತು ಲೇವಡಿಯ ಧಾಟಿಯಲ್ಲಿ ಹೇಳುತ್ತಾ ಹೋದರೆ ಗಂಟೆಗಳೇನು? ದಿನಗಳು ಸರಿದದ್ದೂ ಗೊತ್ತಾಗದು. ಕೇಡಿಗಳೇ ಹಿರೋಗಳಾಗುತ್ತಿರುವ ಈ ಕಾಲದಲ್ಲೂ ಸಾಯಿನಾಥ ಹಲವರ ಹೀರೋ ಆಗಿರುವುದಂತೂ ಸುಳ್ಳಲ್ಲ. 


Saturday, May 14, 2022

ಅಲೆಗಳು ಶಾಂತವಾಗುವುದಿಲ್ಲ....

ಅವರ ನೆನಪಿಗೆಂದು ನಾವೆಲ್ಲರೂ ಸೇರುವ ಮೊದಲ ದಿನವೇ ಅನಿರೀಕ್ಷಿತ ಮಳೆ ಬಂದು ನೆಲ ತೇವಗೊಂಡಿತ್ತು, ಅಲ್ಲಿ ನೆರೆದ ಎಲ್ಲರ ಮನಸ್ಸಿನಂತೆ. ಹೌದು, ವಿಠ್ಠಲ ಭಂಡಾರಿ ಎಂಬ ತಾಯ ಮಮತೆಯ ಜೀವ ಸರಿದುಹೋಗಿ ವರ್ಷವೇ ಆಗಿಹೋಯಿತು. ವಿಶೇಷ ಕರೆಗಳಿಲ್ಲದೆಯೂ ನಾಡಿನ ಮೂಲೆಮೂಲೆಗಳಿಂದ ಗೆಳೆಯರು, ಹಿತೈಷಿಗಳು, ವಿದ್ಯಾರ್ಥಿಗಳು, ಚಳುವಳಿಯ ಜತೆಗಾರರು ಕೆರೆಕೋಣವೆಂಬ ಅವರ ಹಳ್ಳಿಯನ್ನು ಹುಡುಕಿಕೊಂಡು ಬಂದರು. ಅಮೂಲ್ಯವಾದ ಭಿತ್ತವೊಂದನ್ನು ಬಿತ್ತಿರುವೆವೋ ಎಂಬಷ್ಟು ಅಕ್ಕರೆಯಿಂದ ಅವರನ್ನು ಮಲಗಿಸಿದ ತಾವಿನ ಸುತ್ತ ನೆರೆದರು. ಪುಟ್ಟ ಮಗುವೊಂದು ಬಿಕ್ಕಳಿಸಿ ಅತ್ತದ್ದೇ ನೆಪವಾಗಿ ಎಲ್ಲರ ದುಃಖದ ಕಟ್ಟೆಯೊಡೆಯಿತು. ನೆರೆದವರೆಲ್ಲ ತಡೆತಡೆದು ಉಸಿರು ಬಿಡುತ್ತಿದ್ದುದು ನಾಲ್ಕಾರು ಮೆಟ್ಟಿಲೇರಿದ ಆಯಾಸಕ್ಕಂತೂ ಇರಲಿಕ್ಕಿಲ್ಲ. ಅಲ್ಲಿ ಚಿರನಿದ್ದೆಯಲಿ ಮಲಗಿದ ಜೀವವೇ ಹಾಗಿತ್ತು. ಸದಾ ಮುಖದ ತುಂಬ ನಗು, ಕನಸು ತುಂಬಿದ ಕಂಗಳು, ಮಮತೆಭರಿತ ನೋಟ, ಆರಡಿಯ ಸುರಸುಂದರಾಂಗ ಆಳು ಅವರು. ಕೊರೊನಾದ ಅಲೆಗೆ ಬಲಿಯಾದಾಗ ಕುಟುಂಬದವರ ಹೆಗಲು ನೇವರಿಸುವ ಅವಕಾಶವೂ ಇರಲಿಲ್ಲ. ಹಾಗಾಗಿ ಒದ್ದೆ ಮನಸ್ಸಿನೊಂದಿಗೆ ಎಲ್ಲರೂ ತೇವಗೊಂಡ ಅವರ ಸಮಾಧಿಯ ಬಳಿ ಸೇರಿದ್ದರು. ಚಿಗುರೊಡೆದು ನಿಂತ ಪಾರಿಜಾತ ಇದ್ಯಾವುದರ ಗೊಡವೆಯಿಲ್ಲದೇ ತಲೆಯಲ್ಲಾಡಿಸುತ್ತಿತ್ತು.

ನಾನು ಎಷ್ಟೊಂದು ಜನರ ವಿದಾಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವೆ. ಆದರೆ ಈ ರೀತಿಯ ಆಪ್ತ, ಆರ್ದೃ ಕಾರ್ಯಕ್ರಮವನ್ನು ನೋಡಿಲ್ಲ. ಬೆಳಗಿನಿಂದ ಎಲ್ಲರ ಮಾತುಗಳನ್ನು ಕೇಳಿ ತೇವಗೊಂಡಿರುವೆ. ಓರ್ವ ಅಧ್ಯಾಪಕನಾಗಿ ಇಷ್ಟೆಲ್ಲವನ್ನೂ ಮಾಡಬಹುದೆನ್ನುವ ವಿಚಾರ ಅಧ್ಯಾಪಕನಾದ ನನ್ನನ್ನೂ ನಾಚುವಂತೆ ಮಾಡುತ್ತಿದ್ದೆ. ನನ್ನೊಂದಿಗೆ ನಾಡು, ಕಾಡು ಎಂದು ಸುತ್ತುತ್ತಿದ್ದ ಈ ಹುಡುಗ ಹೀಗೆಲ್ಲಾ ಇದ್ದನೆ? ಎಂದು ಕಣ್ಣರಳಿಸುತ್ತಲೇ ಕಣ್ಣೊರೆಸಿಕೊಂಡರು ರಹಮತ್ ತರಿಕೆರೆಯವರು. ಗಾಂಧಿಯಂತವರನ್ನು ಮನೆಮನೆಗೆ ಕೊಂಡೊಯ್ದು ರಾಷ್ಟ್ರೀಯ ನಾಯಕರನ್ನಾಗಿ ರೂಪಿಸಿದವರು ಸಾಮಾಜಿಕ ಕಾರ್ಯಕರ್ತರು. ಸಣ್ಣ ಗುಂಪುಗಳಲ್ಲಿ ಮೂಡಿಸುವ ಅರಿವು ಮಾತ್ರವೇ ದೊಡ್ಡ ಬದಲಾವಣೆಯನ್ನು ತರಬಲ್ಲುದು. ಅಂಥದೊಂದು ಕಾರ್ಯವನ್ನು ದಣಿವರಿಯದೇ ಮಾಡುತ್ತಿದ್ದವರು ವಿಠ್ಠಲ ಎಂದವರು ರಾಜೇಂದ್ರ ಚೆನ್ನಿಯವರು. ನಿಂತ ನೆಲದಲ್ಲಿ ಬೇರುಬಿಟ್ಟು ತನ್ನ ಸುತ್ತಲಿನವರನ್ನು ಪ್ರಭಾವಿಸುತ್ತಲೇ ಜಗದ ಆಗುಹೋಗುಗಳಿಗೆ ಸ್ಪಂದಿಸುವ ಕೆಲವೇ ಮಾದರಿಗಳು ನಮ್ಮಲ್ಲಿವೆ. ಆರ್. ವಿ. ಯವರಿಂದ ಆರಂಭಗೊಂಡು, ವಿಠಲನಿಂದ ಮುಂದುವರೆದ ಈ ವಿಶೇಷ ಮಾದರಿಯನ್ನು 'ಕೆರೆಕೋಣ ಮಾದರಿ' ಎಂದು ಹೆಸರಿಸಿದವರು ವಸಂತರಾಜ್ ಅವರು. ಆರ್. ವಿ. ಯವರೊಂದಿಗೆ ಗಹನವಾದ ವಿಷಯಗಳನ್ನು ಚರ್ಚಿಸುತ್ತಿದ್ದಾಗ ಬದಿಯಲ್ಲಿ ನಿಂತು ಕೇಳುತ್ತಿದ್ದ ಈ ವಿಠ್ಠಲನೆಂಬ ಹುಡುಗ ಮುಂದೆ ಸಾಮಾಜಿಕ ಕಾರ್ಯಕರ್ತನಾಗಿ ಬೆಳೆದನಲ್ಲದೇ ಯಾವುದೇ ವಿದ್ಯಮಾನಗಳಿಗೂ ಬೈಸೈಡರ್ ಆಗಲು ಸಂಪೂರ್ಣ ನಿರಾಕರಿಸಿ ಬೆರಗು ಹುಟ್ಟಿಸಿದ. ಜಗದ ಆಗುಹೋಗುಗಳಿಗೆ ಆ ಗಳಿಗೆಯಲ್ಲಿ ಪ್ರತಿಕ್ರಿಯಿಸುತ್ತಿದ್ದ ವಿಠ್ಠಲ ತನ್ನ ಸಣ್ಣ ತುಂಟತನದಿಂದ ಎಂಥವರನ್ನೂ ನಿಭಾಯಿಸುತ್ತಿದ್ದ ಎಂದು ನೆನಪಿಸಿಕೊಂಡವರು ಡಾ. ಎಂ. ಜಿ. ಹೆಗಡೆಯವರು. 

ಎಷ್ಟೊಂದು ಅಕ್ಕರೆಯ, ಪ್ರೀತಿಯ, ಹೆಮ್ಮೆಯ ನುಡಿಗಳು ಅವರ ಬಗ್ಗೆ. ಎಲ್ಲವನ್ನೂ ಸೇರಿಸಿ ಪ್ರೀತಿ ಪದಗಳ ಸಹಯಾನಿ ವಿಠ್ಠಲ ಎಂಬ ಪುಸ್ತಕ ರೂಪುಗೊಂಡ ಬಗೆಯನ್ನು ಬಿಚ್ಚಿಟ್ಟರು ಸಂಪಾದಕ ಮಂಡಲಿಯ ಮೀನಾಕ್ಷಿ ಬಾಳಿಯವರು. ಸೇರಿದ ಎಲ್ಲರದ್ದೂ ಒಂದೇ ಮಾತು, ವಿಠ್ಠಲ ನನ್ನನ್ನು ಮಾತ್ರವೇ ಅಷ್ಟೊಂದು ಹಚ್ಚಿಕೊಂಡಿದ್ದ ಎಂದೇ ನಾನು ತಿಳಿದಿದ್ದೆ ಎಂದು. ತನ್ನ ಸ್ನೇಹವಲಯಕ್ಕೆ ಬಂದವರನ್ನೆಲ್ಲಾ ಚುಂಬಕದಂತೆ ಅಂಟಿಕೊಳ್ಳುವ ಗುಣ ಅವರಿಗೆ ಜನ್ಮದಾತವೇನೊ? ಎಷ್ಟಾದರೂ ಪ್ರೀತಿಯ ಕಾಳನು ಹಂಚ ಬಯಸುವೆವು, ಜಾಗ ಕೊಡುವಿರೇನು? ಎಂದ ತಂದೆಯ ಮಗನಲ್ಲವೆ ಅವರು? ಬದುಕಿನ ಅರ್ಧ ದಾರಿಯನ್ನಷ್ಟೇ ನಡೆದಿದ್ದರು, ಎಲ್ಲ ಕೆಲಸಗಳೂ ಅರ್ಧದಲ್ಲೇ ನಿಂತಿದ್ದವು. ಇದ್ದಷ್ಟನ್ನು ಒಟ್ಟುಗೂಡಿಸಿ, ಒಪ್ಪವಾಗಿಸಿ ಮತ್ತೆರಡು ಪುಸ್ತಕಗಳನ್ನು ತಂದೇಬಿಟ್ಡರು ಸಂಗಾತಿ ಯಮುನಾ. ಇನ್ನೂ ಎಷ್ಟೋ ಪುಸ್ತಕಗಳಿಗಾಗುವಷ್ಟು ಚರಮಗೀತೆಗಳು ಬರುತ್ತಲೇ ಇವೆಯೆಂದು ಹನಿಗಣ್ಣಾದರು ಮನೆಯವರು. ಅವರೇ ಬರೆದ ಅಣ್ಣನ ನೆನಪುಗಳನ್ನು ಮತ್ತೆ, ಮತ್ತೆ ಮೆಲುಕಾಡಿದರು. ಹೌದು, ಇದ್ದಾಗ ಇರವೇ ಅರಿವಾಗದಂತೆ ತೆರೆಮರೆಯಲ್ಲಿಯೇ ಕೆಲಸ ಮಾಡಿದ ಭಂಡಾರಿಯವರ ಅಗಲಿಕೆ ಸೃಷ್ಟಿಸಿದ ಶೂನ್ಯ ಬಹಳ ವಿಸ್ತಾರವಾದದ್ದು. ಅವರನ್ನು ಮನೆಯವರಿಗೆ ಮಾತ್ರ ಬಿಡದೇ ಬೇರೆ ಬೇರೆ ಪ್ರದೇಶ ಮತ್ತು ಸಂಘಟನೆಯವರು ಅಡಾಪ್ಟ್ ಮಾಡಿಕೊಂಡು ಅವರ ಹೆಸರಿನಲ್ಲಿ ಮತ್ತೆ, ಮತ್ತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಇದ್ದಾರೆ. ವಿಠ್ಠಲ್ ಇದ್ದುದೇ ಹಾಗೆ, ಸ್ವಂತದ ಮನೆಯನ್ನು ಎಲ್ಲರ ಮನೆಯಾಗಿಸುವ ಪಯಣ ಅವರದ್ದು. ಆರ್. ವಿ.ಯವರ ಮನೆ ಮಹಾಮನೆಯಾದ ಕಥೆಯಿದು. ಕಲ್ಯಾಣದೆಡೆಗಿನ ಪಯಣ ನನ್ನ ಗೆಳೆಯನದು ಎಂದವರು ಡಾ. ಶ್ರೀಪಾದ ಭಟ್.

ವೈಚಾರಿಕತೆಯನ್ನು ಪ್ರತಿಪಾದಿಸುವ ಮೇಸ್ಟ್ರುಗಳ ಬಳಿ ವಿದ್ಯಾರ್ಥಿಗಳೇ ಸುಳಿಯದ ಮತ್ತು ವಿದ್ಯಾರ್ಥಿಗಳ ಧಾಳಿಯಿಂದ ಅವರನ್ನು ಪಾರುಮಾಡಲು ಚಳುವಳಿಕಾರರೇ ಧಾವಿಸಬೇಕಾದ ಕಾಲದಲ್ಲಿ ತನ್ನ ಸುತ್ತ ಸದಾ ವಿದ್ಯಾರ್ಥಿಗಳ ದಂಡನ್ನೇ ಇಟ್ಟುಕೊಳ್ಳುತ್ತಿದ್ದ ವಿಠ್ಠಲ ಈ ಕಾಲದ ಅಚ್ಛರಿ ಎಂದವರು ಗೆಳೆಯ ಮುನೀರ್ ಕಾಟಿಪಳ್ಳ. ಸರ್ ಗೆ ನಾವು ವಿದ್ಯಾರ್ಥಿಗಳು ಮಾತ್ರವಲ್ಲ, ಮಕ್ಕಳೂ ಹೌದು. ಅವರ ಪ್ರೀತಿ ಮರೆಯಲಾಗದ್ದು ಎಂದು ದನಿಗೂಡಿಸಿದವರು ಚಿಗುರು ಬಳಗದ ಅವಿನಾಶ್. ರಂಗಕರ್ಮಿಗಳು, ಚಳುವಳಿಯ ಸಂಗಾತಿಗಳು, ಪ್ರಾದ್ಯಾಪಕ ಮಿತ್ರರು, ಸಮುದಾಯದ ಗೆಳೆಯ, ಗೆಳತಿಯರು ಎಲ್ಲರದ್ದೂ ಒಂದೇ ಮಾತು. ವಿಠ್ಠಲ ದಣಿವರಿಯದ ಸಂಘಟಕ, ಎಂಥಹ ಕಠಿಣ ಸನ್ನಿವೇಶದಲ್ಲೂ ಸಹನೆಯನ್ನು ಕಳಕೊಳ್ಳದ ಸಹಿಷ್ಣು, ಚಂದದ ವೇದಿಕೆಯನ್ನು ಸ್ನೇಹಿತರಿಗೆ ಬಿಟ್ಟು, ಚಿತ್ರ ಸೆರೆಹಿಡಿವ ಕುತೂಹಲದ ಕಣ್ಣಿನ ಮಗು.

ಅಂದೂ ತೋಟದ ತುಂಬಾ ಅರಳಿದ ಹೂವುಗಳು, ಮೈತುಂಬಾ ಹಣ್ಣೇರಿಸಿಕೊಂಡು ಕೆಂಪಾದ ನಕ್ಷತ್ರ ಹಣ್ಣಿನ ಮರ, ಅಲಂಕೃತಗೊಂಡ ಸಭಾಮಂಟಪ, ಸ್ವಾಗತ ಕೋರುವ ಪುಸ್ತಕದಂಗಡಿ..... ಎಲ್ಲವೂ ವರ್ಷದಂತೆಯೆ ಇದ್ದವು. ಆದರೆ ಅಲ್ಲಿಂದಿಲ್ಲಿಗೆ ಲುಂಗಿಯುಟ್ಟು ದಾಪುಗಾಲಿನಲ್ಲಿ ಓಡುವ, ಚಹಾ, ಊಟ, ವೇದಿಕೆ, ಹಾಡು, ಸ್ವಾಗತ ಎಂದು ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುವ, ಇಷ್ಟೆಲ್ಲದರ ನಡುವೆಯೂ ಅಲ್ಲಿದ್ದ ಪುಟ್ಟ ಮಕ್ಕಳೊಡನೆ ಚೇಷ್ಟೆಯಾಡುವ, ಬಾಚದ ಕೂದಲನ್ನು ಒಂದಿಷ್ಟು ಸವರುವ ತನ್ನ ಸಂಗಾತಿಯೆಡೆಗೊಂದು ಪ್ರೇಮದ ನೋಟ ಬೀರುವ ಅವರ ಅನುಪಸ್ಥಿತಿ ಎಲ್ಲರ ಒಡಲನ್ನು ಬಿಸಿಯಾಗಿಸಿತ್ತು. ಎಲ್ಲವೂ ಒಪ್ಪ ಓರಣವಾಗಿ ನಡೆಯಿತು. ಊಟ, ತಿಂಡಿ, ಭಾಷಣ, ಸನ್ಮಾನ, ಹಾಡು...... ಎಲ್ಲದಕ್ಕೂ ಪುಟವಿಟ್ಟಂತೆ ದಿನದ ಕೊನೆಯಲ್ಲೊಂದು ತಾಳಮದ್ದಲೆ. ಮನೆಯವರು, ಸ್ನೇಹಿತರು ಅವರ ನೆನಪಿಗೆಂದು ತಾವೇ ಕುಳಿತು ಅರ್ಥ ಹೇಳಿದರು. ಚಿಂತನದ ಕಲಾವಿದರು ವಾರವೊಂದರಲ್ಲಿ ಚಂದದ ನಾಟಕ ಕಟ್ಟಿ ಆಡಿದರು. ಎಲ್ಲರಿಗೂ ಅವರು ತಮ್ಮೊಳಗಿದ್ದಾರೆಂದು ಸಾಬೀತುಪಡಿಸಿಕೊಳ್ಳುವ ತುಡಿತ...

ಟೆರಿ ಪ್ರೆಚೆಟ್ ಹೇಳುತ್ತಾರೆ, ವ್ಯಕ್ತಿಯೊಬ್ಬ ಹುಟ್ಟುಹಾಕಿದ ಅಲೆಗಳು ಶಾಂತವಾಗುವವರೆಗೂ ಅವನಿಗೆ ಸಾವಿಲ್ಲ. ನಾವು ಹೇಳುತ್ತೇವೆ, ಸರ್, ನೀವು ನಮ್ಮೊಳಗೆ ಹುಟ್ಟುಹಾಕಿದ ಅಲೆಗಳು ಎಂದಿಗೂ ಶಾಂತವಾಗುವುದಿಲ್ಲ.

ಸಹಯಾನದ ಅಂಗಳದಲ್ಲಿ ಆಡಿ, ಬೆಳೆದ ಕಿಶೋರನೊಬ್ಬನ ಎದೆಯಾಳದ ಮಾತು ಇದು. ನಮ್ಮೆಲ್ಲರದೂ ಹೌದು....ಅವರೊಂದು ಪ್ರೀತಿಯ ಕೊಳ. ಆವಿಯಾಗುತ್ತಲೇ ಇರುತ್ತಾರೆ, ಮತ್ತೆ ಮಳೆಯಾಗಿ ಸುರಿಯುತ್ತಾರೆ. ತೇವಗೊಳ್ಳುತ್ತೇವೆ ಪ್ರತಿ ಮಳೆಗೂ ನಾವು..

                            -ಸುಧಾ ಆಡುಕಳ

                                   -

                 

Sunday, March 27, 2022

ಕವಿತೆ

ಮಕ್ಕಳ ರವೀಂದ್ರ ನಾಟಕಕ್ಕಾಗಿ ಗುರುದೇವ ರವೀಂದ್ರರ
"ಶೂ ಕಂಡುಹಿಡಿದ ಕಥೆ" ಎಂಬ ಕವನವನ್ನು ಅಳವಡಿಸಿಕೊಂಡಿದ್ದೆವು. ಅದು ಅಲ್ಲಿ ಮಕ್ಕಳಿಗೆ ಹಿತವಾಗುವ ಹಾಸ್ಯದ ಶೈಲಿಯಲ್ಲಿ ದೃಶ್ಯೀಕರಣಗೊಂಡಿತ್ತು.  ಅದನ್ನು ಯಥಾವತ್ತಾಗಿ ಕವನವಾಗಿಸಲು ಮಾಡಿದ ವಿನಮ್ರ ಪ್ರಯತ್ನವಿದು. ಸುಖಾಂತ ಚೌಧರಿಯವರ ಇಂಗ್ಲಿಷ್ ಅನುವಾದದಿಂದ ಆಯ್ದುಕೊಂಡ ಸಾಲುಗಳು.

ಶೂ ಕಂಡುಹಿಡಿದ ಕಥೆ

"ಇದೇನಿದು ಗೋಬು" ಅಬ್ಬರಿಸಿದ ರಾಜ ಹೋಬು
"ನನ್ನ ಪಾದಗಳ್ಯಾಕೆ ಧೂಳಾಗಿವೆ?
ನಿನ್ನೆಯಿಂದ ಅದನ್ನೇ ಯೋಚಿಸಿದೆ
ಸಂಬಳ ಬೇಕು ನಿಮಗೆ ರಾಶಿ, ರಾಶಿ
ಕಾಳಜಿ ಬೇಡವೇನು ರಾಜನಿಗಾಗಿ?
ನನ್ನ ಭೂಮಿಯ ಧೂಳೇ ನನ್ನ ಕಾಲಿಗೆ ತಾಗಿ
ನಿದ್ದೆಗೆಡಿಸಿದೆ ನೋಡಿ ರಾತ್ರಿಯಿಡೀ
ರಾಜನ ಆಜ್ಞೆಯಿದು ಕೇಳಿ, ಪರಿಹಾರ ಮಾಡಿ
ಇಲ್ಲವಾದರೆ ಪ್ರಾಣ ಉಳಿಯಲಾರದು ನೋಡಿ'

ಗೋಬುವಿನ ಗಂಟಲಾರಿತು,
ಮೈಯಿಡೀ ಬೆವರಿತು
ಪಂಡಿತರ ಮುಖ ಬಾಡಿತು
ಪ್ರಮುಖರ ನಿದ್ದೆ ಹಾರಿತು
ಅಡುಗೆಮನೆಯ ಬೆಂಕಿ ಆರಿತು
ಹಸಿವೆ ಇಲ್ಲದಾಯಿತು
ಒದ್ದೆಯಾದ ಬಿಳಿಯ ಗಡ್ಡ
ದುಃಖಬೆರೆತ ಕಣ್ಣ ನೋಟ
ಗೋಬು ಕೊನೆಗೂ ಹೇಳಿದ
" ಧೂಳು ನಿಮ್ಮ ಪಾದದಲ್ಲಿ ಇರಲಿ ದೊರೆ
ಪಾದಧೂಳಿ ಕರುಣಿಸಿ ನಮ್ಮನೆಲ್ಲಾ ಪೊರೆ"

ಗೋಬುವಿನ ಮಾತಿಗೆ ದೊರೆ ಭಾವಪರವಶ
ಮರುಕ್ಷಣವೇ ವಾಸ್ತವಕೆ ಇಳಿದು ಮತ್ತೆ ಹೇಳಿದ
"ಪಾದಕೆಲ್ಲ ಧೂಳು ತಾಗಿ ತುರಿಕೆ ಹತ್ತಿದೆ
ಮೊದಲು ಈ ಧೂಳಿನಿಂದ ಮುಕ್ತಿ ಬೇಕಿದೆ
ಧೂಳು ಮೊದಲು ನಿವಾರಿಸಿ, ಮತ್ತೆ ಬೇರೆ ಯೋಚಿಸಿ
ಎಲ್ಲಿ ಹೋದರು ನಮ್ಮ ಆಸ್ಥಾನ ವಿಜ್ಞಾನಿಗಳು?
ಹೆಸರಿಗಿಂತ ಉದ್ದ, ಉದ್ದ ಡಿಗ್ರೀ ಪಡೆದವರು
ಧೂಳಿನಿಂದ ಮುಕ್ತಿ ದೊರೆತರೇ ಸರಿ
ಇಲ್ಲವಾದರೆ ನಿಮ್ಮ ಸಂಬಳಕ್ಕೆ ಕತ್ತರಿ"

ಜ್ಣಾನಿ ವಿಜ್ಞಾನಿಗಳ ಸಮ್ಮೇಳನ
ಕನ್ನಡಕಧಾರಿಗಳ ವಿಚಾರ ಮಂಥನ
ಹತ್ತೊಂಭತ್ತು ನಶ್ಯ ಡಬ್ನ ಖಾಲಿಯಾಯಿತು
ಬರೆಯಲಿಟ್ಟ ಹಾಳೆ ಖಾಲಿಯುಳಿಯಿತು
ಚರ್ಚಿಸಿ, ಯೋಚಿಸಿ, ವಿಚಾರಿಸಿ....
ಬರೆದರೊಂದು ವಾಕ್ಯವ
"ಧೂಳಿಲ್ಲದಿದ್ದರೆ ಬೆಳೆಯೆಲ್ಲಿ?"
ರಾಜನದನು ಓದಿದ, ಕೋಪದಿಂದ ಕಿರುಚಿದ
"ಎಲ್ಲಿ ನಮ್ಮ ಪಂಡಿತರು? ಸರ್ವ ಶಾಸ್ತ್ರ ಕೋವಿದರು?"

ಪಂಡಿತರು ನಡುಗಿದರು, ಕಸಬರಿಗೆ ತರಿಸಿದರು
ಒಂದೆ , ಎರಡೆ, ಮೂರೆ? ಹದಿನೇಳುವರೆ ಸಾವಿರ
ಇಡಿಯ ರಾಕ್ಯ ಗುಡಿಸಿದರು, ಧೂಳ ಮೋಡ ಎಬ್ಬಿಸಿದರು
ಸೂರ್ಯ ಮೋಡದಲ್ಲಿ ಕರಗಿ, ಕಣ್ಣು ಬಿಡದೆ ಜನರು ಹೆದರಿ
ರಾಜನನೆಯವರೆಗೂ ಧೂಳು ತುಂಬಿತು
ಕೆಮ್ಮಿನ ಶಬ್ದ ಇಡಿಯ ನಾಡ ತುಂಬಿತು
ರಾಜ ಕೆಮ್ಮತ್ತ ನುಡಿದ, "ಮೂರ್ಖ ಜನಗಳೆ,
ಧೂಳು ತೊಲಗಿಸಿರೆಂದರೆ ಮತ್ತಿಷ್ಟು ತುಂಬಿಸಿದಿರಿ
ತಕ್ಷಣವೇ ಧೂಳು ಹೋಗಲಿಲ್ಲವೆಂದರೆ
ನಿಮ್ಮ ತಲೆಯು ಇದ್ದ ಜಾಗದಲ್ಲಿರದು ಖರೆ"

ಇಪ್ಪತ್ತೊಂದು ಲಕ್ಷ ಜನರ ಕರೆದು ತಂದರು
ಹಳ್ಳ, ಕೊಳ್ಳ, ನದಿಗಳಿಂದ ನೀರು ತಂದರು
ಕೆರೆ, ಬಾವಿ, ಸರೋವರಗಳಿಂದ ನೀರು ತಂದರು
ಬೀದಿ, ಬೀದಿಗಳನ್ನೆಲ್ಲ ತಿಕ್ಕಿ ತೊಳೆದರು
ನೀರ ಜೀವಿಗಳೆಲ್ಲ ತೆವಳತೊಡಗಿದವು
ಊರ ಜನರೆಲ್ಲ ಈಜತೊಡಗಿದರು
ಅಂಗಡಿ ಮುಂಗಟ್ಟುಗಳು ತೇಲಿ ಹೋದವು
ಅರಮನೆಯ ಅಂಗಳದಿ ನೆರೆಯು ಬಂದಿತು
ರಾಜ ಕ್ರೋಧದಿಂದ ಹೊರಗೆ ಬಂದು ಕೂಗಿದ
"ಧೂಳು ತೆಗೆಯಿರೆಂದರೆ ಕೆಸರು ತುಂಬಿಸಿದಿರಿ
ಸಮಸ್ಯೆ ಬಗೆಹರಿಯದಿರೆ ಶಿರವ ಕೊಡಲು ಸಿದ್ಧರಿರಿ"

ಎಲ್ಲಾ ಹತಾಶೆಯಲ್ಲಿ ಮತ್ತೆ ಸೇರಿದರು
ಜೀವವುಳಿಸಿಕೊಳ್ಳಲು ಉಪಾಯ ಯೋಚಿಸಿದರು
ನೆಲಕೆ ಹೊದಿಕೆ ಹೊದಿಸಿಬಿಡುವುದೊಂದೆ ದಾರಿ ಉಳಿದಿದೆ
ಚಮ್ಮಾರನೊಬ್ಬನ ಕೆಲಸದಲ್ಲಿ ನಮ್ಮ ಜೀವ ಅಡಗಿದೆ
ಹುಡುಕಲೆಂದು ಹೊರಟರು ಚಮ್ಮಾರರ ಬೀದಿಗೆ
ಎಲ್ಲ ಓಡಿಬಿಟ್ಟಿದ್ದರು ಇವರು ಬರುವ ಸುದ್ದಿಗೆ
ನಡೆಯಲಾರದ ಮುದಿಯ ಚಮ್ಮಾರರ ನಾಯಕ
ಕುಳಿತಲ್ಲೇ ಕೇಳಿದ, "ಏನು ನಿಮ್ಮ ಮಾಯಕ?"
ಹೊತ್ತು ತಂದರವನನು ರಾಜನಾಸ್ಥಾನಕೆ
ಇವನೆ ಸರಿ ಹೊದಿಸಲು ಚರ್ಮ ಇಡಿಯ ರಾಜ್ಯಕೆ
ರಾಜ ಅಜ್ಞಾಪಿಸಲು ಅಣಿಯಾಗಿ ನಿಂತ
ಚಮ್ಮಾರ ಕೈ ಮುಗಿದು ನಿಡಿದ ಮಾತ
"ಇಡಿಯ ರಾಜ್ಯಕ್ಯಾಕೆ ಹೊದಿಕೆ ನಿಮ್ಮ ಕಾಲ ಮುಚ್ಚಿಕೊಳ್ಳಿ"
ಮಂತ್ರಿ ಮುನಿದು ನುಡಿದ," ನಿನ್ನ ಬಾಯ ಮುಚ್ಚಿಕೋ.
ರಾಜ ತನ್ನ ಕಾಲ ಮುಚ್ಚಿಕೊಳ್ಳಬೇಕೆ ಮೂರ್ಖನೆ?"
ರಾಜ ತಡೆದ ಗೋಬುವನ್ನು ತನ್ನ ಕಾಲು ನೀಡಿದ
"ನೀನೆ ಮುಚ್ಚು ನೋಡಿಬಿಡುವ" ಎಂದು ಆಜ್ಞೆ ನೀಡಿದ
ಹತಿಯಾರ ತೆಗೆದ ಚಮ್ಮಾರ ಪಾದರಕ್ಷೆಯೊಂದ ಮಾಡಿದ
ಧರಿಸಿ ನಡೆದ ರಾಜ ಅವಗೆ ಉಡುಗೊರೆಯ ನೀಡಿದ
"ನಿಮ್ಮದೆಲ್ಲ ಎಂಥ ಜ್ಞಾನ? ನೋಡಿ ಈ ಜ್ಞಾನಿಯ
ಜೀವನದ ಜ್ಞಾನ ಅರೆದು ಕುಡಿದ ನಿಜ ಅನುಭಾವಿಯ"
ಇಡಿಯ ರಾಜ ಗಡಣ ತನ್ನ ತಲೆಯ ತಗ್ಗಿಸಿತು
ಚಮ್ಮಾರನಿಂದ ಒಂದು ಇಡಿಯ ರಾಜ್ಯ ಉಳಿಯಿತು

ಮಹಾವಲಸೆ

ಕಪ್ಪುರಸ್ತೆಯ ಮೇಲೆ ಬಿಳಿಯ ಪಟ್ಟಿಗಳು
ಮೊನ್ನೆ ಕನಸಲ್ಲಿ ತೇಲುತ್ತ ಬಂದವು
ಎಂಭತ್ತರ ವೇಗದಲಿ ಸಾಗುತ್ತಿತ್ತು ಕಾರು
ಸುತ್ತ ಗಿಡಮರಗಳಿಗೆ ಬಂದಿತ್ತು ಕಾಲು
ಅರೆರೆ! ಇದ್ದಕ್ಕಿದ್ದಂತೆ ಕೆಂಪು ಪಟ್ಟಿಗಳು
ಹಾದಿಯುದ್ದಕ್ಕು ನನ್ನ ಬೆಚ್ಚಿಬೀಳಿಸಿದವು
ಗಕ್ಕನೆ ತಡೆಯೊತ್ತಿ ಕಾರಿನಿಂದಿಳಿದು
ನೆಲವ ಸವರಲು ಬೆರಳಿಗಂಟಿದವು ನೆನಹು
ಕಣಕಣವು ಕಥೆಯಾಗಿ ಕಣ್ಮುಂದೆ ಹರಡಿ
ರಣಬಿಸಿಲಿನಲಿ ಜೆಲ್ಲಿ ಹೊರುತ್ತಿದ್ದಳು ತಾಯಿ
ಬದುಕಿಗೆ ಬೀಗಮುದ್ರೆ ಬಿದ್ದ ಹೊತ್ತಿನಲಿ
ಮನೆ ಸೇರಲು ನಡೆದಳು ಅದೇ ದಾರಿಯಲಿ
ತುಂಬಿದಾ ಬಸುರಿ ರಸ್ತೆಯಂಚಿನಲಿ ಹಡೆದು
ಶಿಶುವೆತ್ತಿ ನಡೆದಳು ಒಡಲ ರಕ್ತವನೆ ಬಸಿದು
ಸುರಿವ ಮಳೆ ತೊಳೆಯಬಹುದು ಕಲೆಯನ್ನು
ಮರೆಯಬಹುದೆ ಚರಿತ್ರೆ ಈ ಮಹಾವಲಸೆಯನು?


ಕೃಷ್ಣನೊಂದಿಗೆ ಮಾತುಕತೆ


ಕೃಷ್ಣನೊಂದಿಗೆ ಮಾತುಕತೆಯೆಂದರೆ 

ನಿನ್ನೊಂದಿಗಿನ ಸಲ್ಲಾಪದಂತೆ

ಮಧುರವಾಗಿ ನುಡಿಯುವ ಮೋಹನ

ಮುರಲಿಯ ತುಟಿಗಿಟ್ಟರೆ

ನಿಂತ ನೆಲವೇ ನಂದನವನ

ಮೆಲ್ಲನೆ ಕೈಗೆ ಕೈಯ್ಯ ಸೋಕಿಸಿದರೆ

ಎದುರಲ್ಲೇ ಬೃಂದಾವನ

ಮಡಿಲಲ್ಲಿ ಮಲಗಿ ಕಣ್ಮುಚ್ಚಿದರೆ

ನವಿಲುಗರಿಯ ಕನಸು ಕಣ್ಣ ತುಂಬಾ

ಎದೆಯ ಸೆರಗು ಹಾರಿದರೆ

ನಿನ್ನ ಅಕ್ಷಯ ನೆನಪು

ಗೊಂಬೆಯಾದವರ ನಡುವೆ

ಜೀವ ಪಡೆದ ಕೃಷ್ಣ 

ಕೃಷ್ಣೆಯರ ಅಣಕ

ಬಾಯಿಗಿಟ್ಟ ವ್ಯಂಜನಕ್ಕೆ

ಸುಧಾಮನ ಅವಲಕ್ಕಿಯ ಘಮ

ಎಂದೂ ಮುಗಿಯದ ಅಕ್ಷಯ ಪಾತ್ರೆ

ಥೇಟ್ ನಿನ್ನ ಪ್ರೀತಿಯ ಹರಿವಿನ ಥರ

ನಿನ್ನ ಸಂಗಾತವನು ಪ್ರಾಣದಂತೆ

ಎದೆಯಲ್ಲಿ ಬಚ್ಚಿಡುವ ಧಾವಂತ

ಪಾಂಡವರ ಕಾಯುವ ಹಠದಂತೆ

ಕರೆದಲ್ಲಿ ಬರುವ ಪಾರ್ಥನ

ಮಡದಿಯೆಡೆಗವ ಎಂಬ ನಂಬುಗೆ

ನಿನ್ನ ಬರವಿಗೊಂದು ಇಂಬು

ಎಲ್ಲ ಜಂಜಡಗಳು ಕಳೆದಮೇಲೂ

ಅಂಗಾಲ ಚುಚ್ಚುವ ಮುಳ್ಳಂತ

ನಿನ್ನ ನೆನಪು ಬೇಡ ಅವನಿಗೆ

ಬಿಟ್ಟ ಬಾಣದಂತೇ ಕಾಡುವುದೇಕೋ?