ಕೋವಿಯ ವಿರುದ್ಧ ಪದ
ಆ ದಿನ ತರಗತಿಯಲ್ಲಿ ವಿರುದ್ಧ ಪದಗಳ ಆಟ ಆಡಿದೆವು
ಎಮಿಲಿ ಡಿಕನ್ಸನ್ ನ ವಾಕ್ಯವೊಂದು ಅದಕೆ ಸರಕಾಯಿತು
"ನನ್ನ ಬದುಕು ಗುಂಡು ತುಂಬಿದ ಕೋವಿಯೆದುರಿಗಿತ್ತು"
ವಾಕ್ಯದ ಪದಗಳೊಂದಿಗೆ ಆಟ ಶುರುವಾಯಿತು
ನನ್ನ - ನಿನ್ನ
ಬದುಕು - ಸಾವು
ತುಂಬಿದ - ಖಾಲಿಯಾದ
ಕೋವಿ......
ಕೋವಿ????????
ಮಿಂಚಿನ ನಂತರದ ಮೌನ
ಮತ್ತೆ ಸಿಡಿಲಿನಂತೆ ಆರ್ಭಟ
ಪದಗಳ ಮಳೆ ಸುರಿಯತೊಡಗಿತು
ಹೂವು,
ಅಲ್ಲ ಪುಸ್ತಕ
ಮೂರ್ಖ.... ಒಂದು ಪುಟ್ಟ ದಿಂಬು
ಅಥವಾ ಒಂದು ಪ್ರೀತಿಯ ಅಪ್ಪುಗೆ
ಪುಸ್ತಕವಂತೂ ಅಲ್ಲವೇ ಅಲ್ಲ
ಹೀಗೆ ಪದಗಳು ಉದುರಿದವು
ಯಾರ ಮಾತೂ ಯಾರಿಗೂ ಕೇಳದಾಯಿತು
ಅವರವರ ಉತ್ತರವೇ ಅವರಿಗೆ ಸರಿಯೆನಿಸಿತ್ತು
ಪ್ರಾರ್ಥನೆ, ಮದುವೆಯ ಉಂಗುರದಂಥ ಉಡುಗೊರೆ,
ಮುಗ್ದ ಮಗುವಿನ ನಗೆ, ಸೂಲಗಿತ್ತಿಯ ಕರುಣೆ,
ಪಿಸುಮಾತು, ನಕ್ಷತ್ರ,
ಕೈಯ್ಯೊತ್ತಿ ಕಿವಿಯೊಳಗುಸಿರಿದ ಮಾತು
ಸಿನಿಕತೆಯ ಮಾತನಾಡಬೇಡಿ,
ಚುನಾವಣೆಗೆ ಗೆಲ್ಲಬೇಕಿದೆಯೇನು ನಿಮಗೆ?
ಕೋವಿಯ ವಿರುದ್ಧಪದ ಮುದ್ದು ಗೊಂಬೆ,
ಅಲ್ಲ ಖಡ್ಗ, ಅಲ್ಲಲ್ಲ ಒಂದು ಸಿಹಿಯಾದ ಹಣ್ಣು
ಅಲ್ಲವೇ ಅಲ್ಲ ಹೂವೇ ಸರಿ
ಒಂದು ಬಿಳಿಯ ಹೂವು
ಹೀಗೆ ಜಗಳದಲ್ಲಿ ಗಂಟೆಯಾಯಿತು
ಮಕ್ಕಳು ಹೇಳಿದ್ದೆಲ್ಲ ಕರಿಹಲಗೆಯಲ್ಲಿ ದಾಖಲಾಗಿತ್ತು
ಒರೆಸಹೋದರೆ ಕಿರುಚಿದಳು ಹುಡುಗಿ
ತೀರಮಾನವಾಗಿಲ್ಲ, ಕೊಂಚ ನಿಲ್ಲಿ
ಪದಗಳನು ಬಿಟ್ಟು ಹೊರಟೆ ಹೊರಗೆ
ಮಾಯವಾಗಿತ್ತು ಎಲ್ಲರ ಮುಖದ ಮುಗುಳುನಗೆ
ಮರುದಿನ....
ತರಗತಿಯಲ್ಲೇ ಅನೇಕ ಪಕ್ಷ
ಹೂವು, ಮುದ್ದು ಬೆಕ್ಕಿನ ಮರಿ,
ಮಂಜುಗಡ್ಡೆಯ ಚಂಡು....
ಗುಂಪಗೆ ಸೇರದವರು ಕೋವಿಯ ವಿರುದ್ಧ
ಕವನ ಬರೆಯುತ್ತಿದ್ದರು ಹೀಗೆ
ಅದೊಂದು ಅಮೂಲ್ಯ ರತ್ನ, ಚಂದದ ನೃತ್ಯ
ಅದು ಫ್ರಾನ್ಸಿನ ವಸ್ತು ಸಂಗ್ರಹಾಲಯ
ಸಂಗೀತದ ಲಯ, ಕೇಳುವ ಹೃದಯ
ಮತ್ತೆ ಜಗಳ, ಮತ್ತೆರಡು ಪಕ್ಷಗಳ ಉದಯ
ಸಹಿಸಲಾರದೇ ಹೇಳಿದೆ ನಾನು
ನೀವೆಲ್ಲರು ಹೇಳುವುದೂ ಸರಿಯಿದೆ
ಕೋವಿಯ ವಿರುದ್ಧ ಪದ
ಉಳಿದೆಲ್ಲ ಪದ, ಉಳಿಯದ ಪದ
ಪದಗಳ ನಡುವಿನ ಖಾಲಿ ಜಾಗ,
ಈ ಕೋಣೆ, ಕೋಣೆಯಾಚೆಗಿನ ಆಕಾಶ,
ಓಣಿ, ಊರು, ಪೇಟೆ, ಬೀದಿ, ಅವಕಾಶ
ಆಸ್ಪತ್ರೆಯಲಿ ಕಾಯುವ ಕಣ್ಣು,
ಅಂಚೆಕಚೇರಿಯ ತೆರೆಯದ ಪತ್ರ,
ಹೀಗೆ ಎಲ್ಲವೂ.... ಎಲ್ಲರೂ...
ಕೋವಿಯ ವಿರುದ್ಧ ಪದ
ಜೀವಂತಿಕೆಯಿರುವ ಎಲ್ಲವೂ......
No comments:
Post a Comment