Tuesday, February 27, 2018

ದೇವಿ ಬಂದಾಳೋ ಕಾಣಿರೆ


ಸರದಿ ಸಾಲಲ್ಲಿ ನಿಂತು ಯಾವ ದೇವರ ದರ್ಶನ ಮಾಡಿದರೂ ಮನದೊಳಗೊಂದು ನವಿರಾದ ಸಂತೋಷ ಒಡಮೂಡುವುದೇ ಇಲ್ಲ. ನಾವೇ ತಂದು ಪ್ರತಿಷ್ಠಾಪಿಸಿ ಪೂಜಿಸಿ ಕಳಿಸುವ ಗಣಪನೂ ನಮ್ಮವನು ಎನಿಸದೇ ಕೆಲವೊಮ್ಮೆ ಕಳವಳಗೊಳ್ಳುವುದಿದೆ. ಹಾಗೆಂದು ದೇವರೆಂದರೆ ಭಕ್ತಿ ಉಕ್ಕೇರಿ ಬಂದು ಶರಣಾಗತಭಾವ ಆವರಿಸುವಂತಹ ಭಕ್ತ ಸಂಕುಲಕ್ಕಂತೂ ನಾವು ಸೇರಿದವರಲ್ಲ. ಆದರೂ ದೇವರೆಂಬ ಶಕ್ತಿಯೊಂದಿಗಿನ ಆ ಅನುಸಂಧಾನ ನಮಗಿಷ್ಟವಾದ ವ್ಯಕ್ತಿಯೊಬ್ಬರ ಭೇಟಿ ನೀಡುವ ಸಾಂತ್ವನವನ್ನಾದರೂ ನೀಡಬೇಕೆಂದು ನಾನು ಆಶಿಸುತ್ತೇನೆ. ಆದರೆ ಆ ಥರದ ಎಲ್ಲಾ ಗಳಿಗೆಗಳೂ ಕೊರತೆಯ ಕ್ಷಣಗಳಾಗಿ ಕಾಡುವುದೇಕೆ ಎಂದು ಯೋಚಿಸುತ್ತಿರುತ್ತೇನೆ.
ಆಗೆಲ್ಲ ನನಗೆ ಸಿಗುವ ಉತ್ತರವೆಂದರೆ ನನ್ನೂರ ದೇವಿಯರು ತೋರುತ್ತಿದ್ದ ಜೀವಂತಿಕೆ ಎಂದು ನನಗನಿಸುತ್ತದೆ. ಮಳೆಗಾಲ ಮುಗಿಯುವುದನ್ನೇ ಕಾಯುತ್ತಿದ್ದ ನಮ್ಮೂರ ಮಾರಿ ಮೂಲ ಮೂರ್ತಿಯನ್ನು ಗುಡಿಯಲ್ಲಿ ಕಾಯಲಿಟ್ಟು ತಾನು ಪಲ್ಲಕ್ಕಿಯೇರಿ ಸವಾರಿ ಹೊರಡುತ್ತಿದ್ದಳು. ಊರು, ಪರವೂರು ಎಂದೆಲ್ಲ ತಿರುಗುವ ಮಾರಿ ವರ್ಷಕ್ಕೊಮ್ಮೆ ನಮ್ಮೂರ ಮನೆಮನೆಗು ಭೇಟಿ ನೀಡುತ್ತಿದ್ದಳು. ಆಗೆಲ್ಲ ಈ ಮಡಿ ಹುಡಿ ಲೆಕ್ಕಕ್ಕೆ ಬಾರದೇ ಬರಿಯ ಅವಳ ತುಂಟಾಟಗಳೇ ಕತೆಯಾಗುತ್ತಿದ್ದವು. ದೂರದಲ್ಲೆಲ್ಲೋ ಜಾಗಟೆಯ ದನಿ ಕೇಳಿದರೆ ಸಾಕು, ಅಂಗಳದಲ್ಲಿ ಭತ್ತ ರಾಶಿಹಾಕಿದ ಹೆಂಗಳೆಯರು ಲಗುಬಗೆಯಲ್ಲಿ ಅದನ್ನು ಚೀಲಗಳಿಗೆ ತುಂಬಿಸುತ್ತಿದ್ದರು. ಕೇಳಿದರೆ, " ಅಗೋ ಬತ್ತವಳೆಯಲ್ಲೇ ಮಾಟಗಾತಿ. ಭತ್ತ ಕಂಡರೆ ಅವಳಿಗೆ ಹೊಗರ್ತದೆ ಕಾಣು. ಚೆಲ್ಲಿ, ತೂರಿ, ಕುಣಿದು ಕುಪ್ಪಳಿಸಿಯೇ ಹೋಗ್ತಾಳೆ. ಕಾಲು ಬಂದ ಮಗೂನಾದ್ರೂ ಹಿಡೀಬಹುದು, ಅವಳನ್ನಲ್ಲ" ಎನ್ನುತ್ತಿದ್ದರು. ಹಾಗಾಗಿ ಆ ದೇವಿ ನಮ್ಮೆದುರು ಕುಣಿವ ಮಗುವಾಗಿಬಿಡುವಳು.
ದೇವಿಗೆ ಜಾತಿಬೇಧವಿರಲಿಲ್ಲ. ಯಾರ್ಯಾರದೋ ಮನೆಯಲ್ಲಿ ಕುಳಿತು ಪೂಜೆಗೊಳ್ಳುವಳು. ಯಾರ್ಯಾರದೋ ತಲೆಗೆ ಸಿಂಗಾರ ಬಡಿಯುತ್ತಾ ಹಾಡು ಹೇಳೆಂದು ಕಾಡುವಳು. ನಾನು ಹಾಡದೇ ಅವಳು ಹೋಗೋದೇ ಇಲ್ಲ ಅನ್ನೋದೇನು? ಕನಕಾಂಬರ ಮುಡಿಯದೇ ಮೇಲೆ ಹೋಗೋಳಲ್ಲ ಅಂತ ಮುಡಿಸೋದೇನು? ಒಂಥರಾ ಮನೆಮಗಳು ತವರಿಗೆ ಬಂದ ಸಂಭ್ರಮ! ನಮಗೆ ಗದ್ದೆ ನೆಟ್ಟಿಯಾಗೆ ಸಿಕ್ಕ ದೇವಿಯವಳು. ಕೆಲಸ ಮಾಡೋರಿಗೆ ಪೂಜೆ ಮಾಡೋಕೆಲ್ಲಿ ಪುರುಸೊತ್ತು ಅಂತಾ ನಾವೇ ಪೂಜಾರ್ರಿಗೆ ಅವಳನ್ನು ಕೊಟ್ಟೆವು. ಹಾಂಗಾಗಿ ನಾವಂದ್ರೆ ಭಾರೀ ಆಸೆ ಅದಕ್ಕೆ ಎಂದು ನಮ್ಮೂರ ಅಮ್ಮೆಣ್ಣು ಅದೆಷ್ಟು ಬಾರಿ ಹೇಳುತ್ತಿದ್ದಳೊ?
ಎಲ್ಲಿಯಾದರೂ ಮಕ್ಕಳಿಗೇನಾದರೂ ಖಾಯಿಲೆಯಾಯ್ತೋ ಆಗ ನೋಡಬೇಕಿತ್ತು ನಮ್ಮೂರ ಹೆಂಗಳೆಯರ ಜಗಳವನ್ನು. ದೇವಿಯೊಂದಿಗೆ ನೇರಾನೇರ ಹಣಾಹಣಿ ಅವರದ್ದು. ಅಲ್ಲ ನಿನ್ನ ನಂಬಿದ್ದಕ್ಕೆ ನೀನು ಹಿಂಗಾ ಮಾಡೂದು? ಇವತ್ತು ನೀನು ಅದ ಹ್ಯಾಗೆ ತಪ್ಪಿಸ್ಕಂಡು ಹೋಗ್ತೆ ನಾನೂ ಕಾಂತೆ. ನಮಗೇನಾರೂ ರಕ್ಷಣೆ ಕೊಡ್ತೇನೆ ಅಂದರೆ ಬಲಕ್ಕೆ ಪ್ರಸಾದ ಕೊಟ್ಟು ಹೋಗ್ತಿರು. ಇಲ್ಲಾ ಅಂದರೆ ಮುಂದಿನವರ್ಷ ನಿಂಗೆ ನಮ್ಮನೆಯಲ್ಲಿ ಪೂಜೆ ಇಲ್ಲ ತಿಳ್ಕೊ ಅಂತ ಸೀದಾ ಬಯ್ಯೂದೆ. ಆಗ ಯಾರಾದರೂ ತಿಳಿದವರು ದೇವರಿಗೆ ಕಟ್ಟುನಿಟ್ಟು ಮಾಡೂಕಾಯ್ತದೆಯಾ? ಸುಮ್ಮನಿರು. ಅವಳಿಗೆಲ್ಲ ತಿಳಿಯದೆ ಅನ್ನೋದು, ಅದಕ್ಕಿವಳು ಮತ್ತೆ ನೂರಾರು ಮಾತು ಸೇರಿಸಿ ದೇವಿಗೆ ಬೈಯೋದು.........
ಅಬ್ಬಾಬ್ಬಾಬ್ಬಾ........ ದೇವಿ ಆ ಪ್ರಸಂಗದಲ್ಲಿ ವ್ಯಕ್ತರೂಪದಲ್ಲಿ ಇಲ್ಲಾ ಅನಿಸಿದರೆ ಆಣೆ ಮತ್ತೆ! ಸುತ್ತ ತಿರುಗಿ ನಲಿಯುವ ದೇವಿ ಆ ಕ್ಷಣಕ್ಕೆ ಮೌನವಾಗಿ ನಿಲ್ಲುವುದು......... ಬಲದಿಂದ ಪ್ರಸಾದ ಉದುರಿಸಿ ಸಂತೈಸುವುದು, ನೊಂದವರ ತಲೆಯಮೇಲೆ ತನ್ನ ಕೊಂಬನ್ನಿಟ್ಟು ಸಮಾಧಾನ ಮಾಡುವುದು.....
ಇವುಗಳಲೆಲ್ಲಾ ಪಲ್ಲಕ್ಕಿ ಹೊತ್ತವರ ಪಾಲೆಷ್ಟೋ ನಾನರಿಯೆ. ಆದರೆ ನಮ್ಮೊಳಗಂತೂ ಅವಳು ಜೀವಂತ ಪ್ರವಹಿದ್ದು ಸತ್ಯ.
ದೇವಿಗೆ ವರ್ಷದ ಕಾಣಿಕೆಯನ್ನು ನಿಗದಿಪಡಿಸಲು ಒಂದು ವಿಶೇಷ ಸಭೆ. ಅಲ್ಲಿ ತಲೆಗಿಷ್ಟು, ಬಾಲಕ್ಕಿಷ್ಟು ಎಂದು ವಂತಿಗೆ. ಅದರಲ್ಲೂ ಪಕ್ಕಾ ಚೌಕಾಶಿ. ( ತಲೆ ಎಂದರೆ ಮನುಷ್ಯರು, ಬಾಲವೆಂದರೆ ದನಕರುಗಳು) ಅಂತೂ ದರನಿಗದಿಯಾಗಿ ತಲೆಬಾಲಗಳ ವರ್ಷವಿಡೀ ರಕ್ಷಣೆಯ ಭಾರವನ್ನು ದೇವಿಯ ಹೆಗಲಿಗೆ ಹಾಕಿ ಜನರೆಲ್ಲಾ ನಿರುಮ್ಮಳವಾಗುತ್ತಿದ್ದರು. ಮಧ್ಯದಲ್ಲೇನಾದರೂ ಅವಘಡವಾದರೆ ದೇವಿಗೆ ಬದುಕು ಕಷ್ಟವಾಗುತ್ತಿತ್ತು. ಹೀಗೆ ನಮ್ಮ ನಡುವೆ ಓಡಾಡುವ ದೇವರು ಗುಡಿಯಲ್ಲಿ ಬಂಧಿಯಾಗುವತನಕವೂ ನಮ್ಮೂರಲ್ಲಿ ಸತ್ಯ ಉಸಿರಾಡುತ್ತಲೇ ಇತ್ತು. ಯಾವಾಗ ತಿಳಿದೂ ತಪ್ಪಮಾಡಿ, ತಪ್ಪಗಾಣಿಕೆಯೆಂದು ಬೆಳ್ಳಿ, ಚಿನ್ನಗಳ ಕವಚ ಸಮರ್ಪಣೆ ಶುರುವಾಯಿತೋ ಆಗ ಸುಳ್ಳಿನ ಕಾಲ ಮಿಂಚತೊಡಗಿತು. ದೇವಿ ಈಗ ಹೇಗಿರುವಳೋ?
ಇರುವಳೋ?
ಗೊತ್ತಿಲ್ಲ.

ನಾನು ಕತ್ತಲೆಗೆ ಮಾತು ಕಲಿಸಿದೆ

ನಾನು ಕತ್ತಲೆಗೆ ಮಾತು ಕಲಿಸಿದೆ
ಬೆಳಕಿನ ಮಾತು ಇದ್ದದ್ದೇ ಬಿಡಿ
ಥಳುಕು ಬಳುಕು.......
ಇದೀಗ ಕತ್ತಲೆಯಲಿ ಸತ್ಯದ ಕಲರವ!

ಒಂದು ಆಮೆಯ ಕಥೆ


ಯಾವಾಗಲಾದರೊಮ್ಮೆ ಪರೀಕ್ಷೆಗೆ ಓದುವಾಗ "ಅಯ್ಯೋ, ನಿನ್ನೆಯಷ್ಟೇ ಓದಿದ್ದೆ. ಇವತ್ತು ಮರೆತೋಯ್ತು" ಎಂದು ನಾವು ಮಕ್ಕಳು ಪೇಚಾಡುವುದಿತ್ತು. ಆಗೆಲ್ಲ ಅಮ್ಮ ಮರೆಯದೇ ಆಮೆಯ ಕಥೆಯನ್ನು ಹಿಂದಿಯಲ್ಲಿ ಹೇಳಲು ಆರಂಭಿಸುತ್ತಿದ್ದರು. ಏಕ್ ಸರೋವರ್ ಮೆ ಏಕ್ ಕಚವಾ ರಹತಾ ಥಾ. ಉಸೀ ಸರೋವರ್ ಕೆ ಪಾಸ್ ಏಕ್ ಖರಗೋಷ್ ಭೀ ರಹತಾ ಥಾ...... ಎಂದು ತಾನು ಪ್ರಾಥಮಿಕ ಶಾಲೆಯಲ್ಲಿ ಓದಿದ ಪಾಠವನ್ನಿಡೀ ಬಾಯಿಪಾಠ ಹೇಳುತ್ತಿದ್ದಳು. ಆಮೆ,ಮೊಲದ ಕಥೆಯನ್ನು ನಿರರ್ಗಳವಾಗಿ ಹೇಳುವ ಅವಳ ಶೈಲಿಗೆ ನಾವು ಅಚ್ಛರಿಯಿಂದ ತಲೆದೂಗುತ್ತಿದ್ದೆವು. ಆ ಮೂಲಕ ಓದಿರುವುದು ಎಂದಿಗೂ ಮರೆಯದು ಎಂಬ ಎಚ್ಚರವನ್ನು ನಮ್ಮಲ್ಲಿ ತುಂಬುತ್ತಿದ್ದಳು. ಅದಷ್ಟೇ ಅಲ್ಲ ಎಲ್ಲ ಕನ್ನಡ ಪದ್ಯಗಳು, ಕೇಳಿದ ನೂರಾರು ಭಜನೆಗಳು, ಹತ್ತಾರು ಚರಿತ್ರೆಗಳು( ಪದ್ಯರೂಪದ ಜೀವನಚರಿತ್ರೆ) ಎಲ್ಲವನ್ನೂ ಬಾಯಿಪಾಠ ಹೇಳುತ್ತಿದ್ದಳು. ಇಡೀ ದಿನ ಕೆಲಸ ಮಾಡುವಾಗೆಲ್ಲ ಏರುದನಿಯಲ್ಲಿ ಹಾಡುತ್ತಲೇ ಇರುತ್ತಿದ್ದಳು. ಎಲ್ಲಿಯಾದರೂ ಅವಳು ಮನೆಯಲ್ಲಿಲ್ಲವೆಂದರೆ ಮನೆಗೆ ಬಂದವರೆಲ್ಲ ಅವಳ ಹಾಡಿಲ್ಲದ ಖಾಲಿತನವನ್ನು ಅನುಭವಿಸುತ್ತಿದ್ದರು.
ದೊಡ್ಡವಳಾದಾಗೊಮ್ಮೆ ಅಮ್ಮನ ಹತ್ತಿರ ಟಿಪ್ಸ್ ಕೇಳಿದೆ. ಹೇಗೆ ಓದಿದ್ದನ್ನೆಲ್ಲ ನೆನಪಿಟ್ಟುಕೊಂಡಿದ್ದೀಯಾ ಅಂತ. ಅಮ್ಮ ಹೇಳಿದ ಸಂಗತಿ ನನ್ನನ್ನು ಬೆಚ್ಚಿಬೀಳಿಸಿತ್ತು. ಅಮ್ಮನಿಗೆ ಓದಬೇಕೆಂಬ ಅದಮ್ಯ ಆಸೆ. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಅದರ ನಡುವೆ ಪುಸ್ತಕ ಕೊಳ್ಳುವುದೆಲ್ಲ ಕನಸಿನ ಮಾತು. ಅಮ್ಮ ಅವರ ಶಾಲೆಗೆ ಬರುವ ಶ್ರೀಮಂತ ವರ್ತಕರ ಮಕ್ಕಳಿಂದ ಒಂದು ದಿನಕ್ಕೆ ಪುಸ್ತಕ ಓದಲು ತಂದು ಅದನ್ನೆಲ್ಲಾ ಬಾಯಿಪಾಠ ಮಾಡಿ ಹಿಂದಿರುಗಿಸುತ್ತಿದ್ದಳಂತೆ. ಹಾಗಾಗಿ ಅವಳದನ್ನು ಮರೆಯದೇ ನೆನಪಿಟ್ಟುಕೊಳ್ಳುತ್ತಿದ್ದಳಂತೆ.
ಅಷ್ಟಾಗಿಯೂ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಅವಳ ಊರಿನಲ್ಲೇ ಹೊಸದಾಗಿ ಪ್ರೌಢಶಾಲೆ ಪ್ರಾರಂಭವಾಗಿ, ಅಲ್ಲಿಯ ಶಿಕ್ಷಕರೆಲ್ಲ ಮನೆಗೆ ಬಂದು ಕರೆದರೂ ಅಜ್ಜ ಅವಳನ್ನು ಶಾಲೆಗೆ ಕಳಿಸಲಿಲ್ಲವಂತೆ. ಅಮ್ಮ ಮೂರುದಿನ ಉಪವಾಸ ವ್ರತ ಮಾಡಿ ಗೆಲ್ಲಲಾಗದೇ ಸೋತಳಂತೆ. ಎಂಥ ಕಠಿಣ ಲೆಕ್ಕವನ್ನೂ ಬಾಯಲ್ಲೇ ಲೀಲಾಜಾಲವಾಗಿ ಬಿಡಿಸುವ ಅವಳ ಜಾಣ್ಮೆಗೆ ನಮ್ಮಿಡೀ ಊರೇ ಮೆಚ್ಚಿತ್ತು. ಆದರೂ ಅಂದು ತನ್ನೊಂದಿಗೆ ಕಲಿತು ಹೈಸ್ಕೂಲು ಮೆಟ್ಟಿಲು ಹತ್ತಿದವರೆಲ್ಲ ಶಾಲೆಯಲ್ಲಿ ಅಕ್ಕೋರು ಎಂದು ದುಡಿಯುವಾಗ ತನ್ನ ಸ್ಥಿತಿಯನ್ನು ಎಣಿಸಿ ಎಷ್ಟೋ ಸಲ ಅಮ್ಮ ಮರುಗುತ್ತಿದ್ದರು. ಒಂದು ಸ್ಟೀಲ್ ಪಾತ್ರೆಗಾಗಿ ಅಮ್ಮ ಪಟ್ಟ ಪಡಿಪಾಟಲು, ಒಂದು ಕಪ್ಪು ಸೀರೆಗಾಗಿ ಅವಳು ಒದ್ದಾಡಿದ ದಿನಗಳು......ಓಹ್! ನೆನಪಿಸಿಕೊಳ್ಳಲಾರೆ.
ಆದರೆ ಅಮ್ಮನ ಅಂದಿನ ಆಮೆ ನನ್ನೊಳಗೆ ಮನೆಮಾಡಿತು. ಕೈಗೆಟುಕದ ವಿಜ್ಞಾನದ ಪುಸ್ತಕಗಳಿಗೆ ಕಾಲೇಜು ಗ್ರಂಥಾಲಯವೇ ಕೈಗನ್ನಡಿಯಾಯಿತು. ದೂರದ ಹಳ್ಳಿಯಿಂದ ಹೋಗಿಮುಟ್ಟಲಾರದ ತರಗತಿಗಳಿಗೆ ಇವೇ ಪುಸ್ತಕಗಳು ಪಾಠವಾದವು. ನಾನು ಎಂತಹ ನೋಟ್ಸ್ ಎಕ್ಸಟ್ರಾಕ್ಟರ್ ಆದೆನೆಂದರೆ ನನ್ನ ನೋಟ್ಸ್ ಗಳಿಗೆ ಜ್ಯೂನಿಯರ್ ಗಳು ಮುಗಿಬೀಳುತ್ತಿದ್ದರು. ಡಿಗ್ರಿಯಲ್ಲಿ ನನಗೆ ರ್ಯಾಂಕ್ ಬಂದಾಗ ಆ ತರಗತಿಗೆ ಬಾರದ ಹುಡುಗಿಗೆ ಅದ್ಹೇಗೆ ಬಂತು ಎಂದು ಲೆಕ್ಚರರ್ ಗಳೇ ಅಚ್ಛರಿಗೊಂಡಿದ್ದರು. ಅಮ್ಮನ ಟಿಪ್ಸ್ ನಿಂದಾಗಿ ಹಲವರಿಗೆ ಕೈಗೆಟುಕದ ವಿಜ್ಞಾನದ ಪದವಿ ನನ್ನ ಮಡಿಲಿಗೆ ಬಂತು.
ಗೆಲ್ಲುವೆನೆಂಬ ಅಹಂಕಾರದಿಂದ ನಿದ್ರಿಸಿದ ಮೊಲವನ್ನು ಉಪಾಯದಿಂದಲೇ ಗೆಲ್ಲುವ ಬಗೆಯನ್ನು ಕಲಿಸಿದ ಅಮ್ಮ ನನ್ನ ಗೆಲುವನ್ನು ಸಂಭ್ರಮಿಸಲು ಇರಲಿಲ್ಲ ಎಂಬುದೊಂದೇ ಕೊರಗು. ಕೊರತೆಯನ್ನು ಬಲವಾಗಿಸುವ ಪಾಠ ಕಲಿಸಿದ ಅಮ್ಮ ಈಗಲೂ ನಾನು ಸೋತಾಗ ಕಥೆ ಹೇಳುತ್ತಾಳೆ " ಏಕ್ ಸರೋವರ್ ಮೆ ....." ನಾನವಳ ಕತೆ ಕೇಳಿ ಕಣ್ಣೊರಸಿ ಸಾಗುತ್ತಲೇ ಇರುತ್ತೇನೆ, ಸುತ್ತಲಿನ ನೋಟಗಳಿಗೆಲ್ಲಾ ಅಕ್ಷರವಾಗುತ್ತ!