Tuesday, February 27, 2018

ಒಂದು ಆಮೆಯ ಕಥೆ


ಯಾವಾಗಲಾದರೊಮ್ಮೆ ಪರೀಕ್ಷೆಗೆ ಓದುವಾಗ "ಅಯ್ಯೋ, ನಿನ್ನೆಯಷ್ಟೇ ಓದಿದ್ದೆ. ಇವತ್ತು ಮರೆತೋಯ್ತು" ಎಂದು ನಾವು ಮಕ್ಕಳು ಪೇಚಾಡುವುದಿತ್ತು. ಆಗೆಲ್ಲ ಅಮ್ಮ ಮರೆಯದೇ ಆಮೆಯ ಕಥೆಯನ್ನು ಹಿಂದಿಯಲ್ಲಿ ಹೇಳಲು ಆರಂಭಿಸುತ್ತಿದ್ದರು. ಏಕ್ ಸರೋವರ್ ಮೆ ಏಕ್ ಕಚವಾ ರಹತಾ ಥಾ. ಉಸೀ ಸರೋವರ್ ಕೆ ಪಾಸ್ ಏಕ್ ಖರಗೋಷ್ ಭೀ ರಹತಾ ಥಾ...... ಎಂದು ತಾನು ಪ್ರಾಥಮಿಕ ಶಾಲೆಯಲ್ಲಿ ಓದಿದ ಪಾಠವನ್ನಿಡೀ ಬಾಯಿಪಾಠ ಹೇಳುತ್ತಿದ್ದಳು. ಆಮೆ,ಮೊಲದ ಕಥೆಯನ್ನು ನಿರರ್ಗಳವಾಗಿ ಹೇಳುವ ಅವಳ ಶೈಲಿಗೆ ನಾವು ಅಚ್ಛರಿಯಿಂದ ತಲೆದೂಗುತ್ತಿದ್ದೆವು. ಆ ಮೂಲಕ ಓದಿರುವುದು ಎಂದಿಗೂ ಮರೆಯದು ಎಂಬ ಎಚ್ಚರವನ್ನು ನಮ್ಮಲ್ಲಿ ತುಂಬುತ್ತಿದ್ದಳು. ಅದಷ್ಟೇ ಅಲ್ಲ ಎಲ್ಲ ಕನ್ನಡ ಪದ್ಯಗಳು, ಕೇಳಿದ ನೂರಾರು ಭಜನೆಗಳು, ಹತ್ತಾರು ಚರಿತ್ರೆಗಳು( ಪದ್ಯರೂಪದ ಜೀವನಚರಿತ್ರೆ) ಎಲ್ಲವನ್ನೂ ಬಾಯಿಪಾಠ ಹೇಳುತ್ತಿದ್ದಳು. ಇಡೀ ದಿನ ಕೆಲಸ ಮಾಡುವಾಗೆಲ್ಲ ಏರುದನಿಯಲ್ಲಿ ಹಾಡುತ್ತಲೇ ಇರುತ್ತಿದ್ದಳು. ಎಲ್ಲಿಯಾದರೂ ಅವಳು ಮನೆಯಲ್ಲಿಲ್ಲವೆಂದರೆ ಮನೆಗೆ ಬಂದವರೆಲ್ಲ ಅವಳ ಹಾಡಿಲ್ಲದ ಖಾಲಿತನವನ್ನು ಅನುಭವಿಸುತ್ತಿದ್ದರು.
ದೊಡ್ಡವಳಾದಾಗೊಮ್ಮೆ ಅಮ್ಮನ ಹತ್ತಿರ ಟಿಪ್ಸ್ ಕೇಳಿದೆ. ಹೇಗೆ ಓದಿದ್ದನ್ನೆಲ್ಲ ನೆನಪಿಟ್ಟುಕೊಂಡಿದ್ದೀಯಾ ಅಂತ. ಅಮ್ಮ ಹೇಳಿದ ಸಂಗತಿ ನನ್ನನ್ನು ಬೆಚ್ಚಿಬೀಳಿಸಿತ್ತು. ಅಮ್ಮನಿಗೆ ಓದಬೇಕೆಂಬ ಅದಮ್ಯ ಆಸೆ. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಅದರ ನಡುವೆ ಪುಸ್ತಕ ಕೊಳ್ಳುವುದೆಲ್ಲ ಕನಸಿನ ಮಾತು. ಅಮ್ಮ ಅವರ ಶಾಲೆಗೆ ಬರುವ ಶ್ರೀಮಂತ ವರ್ತಕರ ಮಕ್ಕಳಿಂದ ಒಂದು ದಿನಕ್ಕೆ ಪುಸ್ತಕ ಓದಲು ತಂದು ಅದನ್ನೆಲ್ಲಾ ಬಾಯಿಪಾಠ ಮಾಡಿ ಹಿಂದಿರುಗಿಸುತ್ತಿದ್ದಳಂತೆ. ಹಾಗಾಗಿ ಅವಳದನ್ನು ಮರೆಯದೇ ನೆನಪಿಟ್ಟುಕೊಳ್ಳುತ್ತಿದ್ದಳಂತೆ.
ಅಷ್ಟಾಗಿಯೂ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಅವಳ ಊರಿನಲ್ಲೇ ಹೊಸದಾಗಿ ಪ್ರೌಢಶಾಲೆ ಪ್ರಾರಂಭವಾಗಿ, ಅಲ್ಲಿಯ ಶಿಕ್ಷಕರೆಲ್ಲ ಮನೆಗೆ ಬಂದು ಕರೆದರೂ ಅಜ್ಜ ಅವಳನ್ನು ಶಾಲೆಗೆ ಕಳಿಸಲಿಲ್ಲವಂತೆ. ಅಮ್ಮ ಮೂರುದಿನ ಉಪವಾಸ ವ್ರತ ಮಾಡಿ ಗೆಲ್ಲಲಾಗದೇ ಸೋತಳಂತೆ. ಎಂಥ ಕಠಿಣ ಲೆಕ್ಕವನ್ನೂ ಬಾಯಲ್ಲೇ ಲೀಲಾಜಾಲವಾಗಿ ಬಿಡಿಸುವ ಅವಳ ಜಾಣ್ಮೆಗೆ ನಮ್ಮಿಡೀ ಊರೇ ಮೆಚ್ಚಿತ್ತು. ಆದರೂ ಅಂದು ತನ್ನೊಂದಿಗೆ ಕಲಿತು ಹೈಸ್ಕೂಲು ಮೆಟ್ಟಿಲು ಹತ್ತಿದವರೆಲ್ಲ ಶಾಲೆಯಲ್ಲಿ ಅಕ್ಕೋರು ಎಂದು ದುಡಿಯುವಾಗ ತನ್ನ ಸ್ಥಿತಿಯನ್ನು ಎಣಿಸಿ ಎಷ್ಟೋ ಸಲ ಅಮ್ಮ ಮರುಗುತ್ತಿದ್ದರು. ಒಂದು ಸ್ಟೀಲ್ ಪಾತ್ರೆಗಾಗಿ ಅಮ್ಮ ಪಟ್ಟ ಪಡಿಪಾಟಲು, ಒಂದು ಕಪ್ಪು ಸೀರೆಗಾಗಿ ಅವಳು ಒದ್ದಾಡಿದ ದಿನಗಳು......ಓಹ್! ನೆನಪಿಸಿಕೊಳ್ಳಲಾರೆ.
ಆದರೆ ಅಮ್ಮನ ಅಂದಿನ ಆಮೆ ನನ್ನೊಳಗೆ ಮನೆಮಾಡಿತು. ಕೈಗೆಟುಕದ ವಿಜ್ಞಾನದ ಪುಸ್ತಕಗಳಿಗೆ ಕಾಲೇಜು ಗ್ರಂಥಾಲಯವೇ ಕೈಗನ್ನಡಿಯಾಯಿತು. ದೂರದ ಹಳ್ಳಿಯಿಂದ ಹೋಗಿಮುಟ್ಟಲಾರದ ತರಗತಿಗಳಿಗೆ ಇವೇ ಪುಸ್ತಕಗಳು ಪಾಠವಾದವು. ನಾನು ಎಂತಹ ನೋಟ್ಸ್ ಎಕ್ಸಟ್ರಾಕ್ಟರ್ ಆದೆನೆಂದರೆ ನನ್ನ ನೋಟ್ಸ್ ಗಳಿಗೆ ಜ್ಯೂನಿಯರ್ ಗಳು ಮುಗಿಬೀಳುತ್ತಿದ್ದರು. ಡಿಗ್ರಿಯಲ್ಲಿ ನನಗೆ ರ್ಯಾಂಕ್ ಬಂದಾಗ ಆ ತರಗತಿಗೆ ಬಾರದ ಹುಡುಗಿಗೆ ಅದ್ಹೇಗೆ ಬಂತು ಎಂದು ಲೆಕ್ಚರರ್ ಗಳೇ ಅಚ್ಛರಿಗೊಂಡಿದ್ದರು. ಅಮ್ಮನ ಟಿಪ್ಸ್ ನಿಂದಾಗಿ ಹಲವರಿಗೆ ಕೈಗೆಟುಕದ ವಿಜ್ಞಾನದ ಪದವಿ ನನ್ನ ಮಡಿಲಿಗೆ ಬಂತು.
ಗೆಲ್ಲುವೆನೆಂಬ ಅಹಂಕಾರದಿಂದ ನಿದ್ರಿಸಿದ ಮೊಲವನ್ನು ಉಪಾಯದಿಂದಲೇ ಗೆಲ್ಲುವ ಬಗೆಯನ್ನು ಕಲಿಸಿದ ಅಮ್ಮ ನನ್ನ ಗೆಲುವನ್ನು ಸಂಭ್ರಮಿಸಲು ಇರಲಿಲ್ಲ ಎಂಬುದೊಂದೇ ಕೊರಗು. ಕೊರತೆಯನ್ನು ಬಲವಾಗಿಸುವ ಪಾಠ ಕಲಿಸಿದ ಅಮ್ಮ ಈಗಲೂ ನಾನು ಸೋತಾಗ ಕಥೆ ಹೇಳುತ್ತಾಳೆ " ಏಕ್ ಸರೋವರ್ ಮೆ ....." ನಾನವಳ ಕತೆ ಕೇಳಿ ಕಣ್ಣೊರಸಿ ಸಾಗುತ್ತಲೇ ಇರುತ್ತೇನೆ, ಸುತ್ತಲಿನ ನೋಟಗಳಿಗೆಲ್ಲಾ ಅಕ್ಷರವಾಗುತ್ತ!

No comments:

Post a Comment