ಮಕ್ಕಳು: ಕಥೆ ಮುಗಿದೋಯ್ತಾ? ನಾವು ಹೇಳೋ ಕತೆ ಮುಗೀತು. ಆದ್ರೆ ನೀವು ಬೇಜಾರು ಮಾಡ್ಕೊಳ್ಳೋದೇನೂ ಬೇಕಾಗಿಲ್ಲ. ಇಲ್ಲೇ ಕಾಣ್ತಾ ಇದೆ ನೋಡಿ, ಗೋವರ್ಧನಗಿರಿ. ಅಲ್ಲಿರೋ ಅಜ್ಜನ್ನ ಕೇಳಿದ್ರೆ ಇನ್ನು ಚೆಂದದ ಕತೆಯನ್ನ ಹೇಳ್ತಾನೆ.
(ಅಜ್ಜ ಮರದಡಿಯಲ್ಲಿ ಕುಳಿತಿರುವನು)
ಮಕ್ಕಳು: ಅಜ್ಜಾ, ಅಜ್ಜಾ ನಮಗೆ ಕೃಷ್ಣನ ಕತೆ ಹೇಳಿ.
ಅಜ್ಜ: ಹಾಂ, ಹೇಳೋಣಂತೆ. ಆದರೆ ಹೇಳಿ, ನಿಮ್ಮ ಕೃಷ್ಣ ಈಗ ಎಲ್ಲಿದ್ದಾನೆ ಅಂತ.
ಮಗು: ಅಜ್ಜಾ, ಅವ ಈಗ ಅದೇ ಆ ಅಕ್ರೂರ ಅಂತ ಬಂದಿದ್ನಲ್ಲ ಅವನ ಜೊತೆ ಮಧುರೆಗೆ ಹೊರಟಿದ್ದಾನೆ ..
ಅಜ್ಜ: ಮಧುರೆಯ ಕತೆ ನಂಗೆಲ್ಲಿ ಗೊತ್ತು? ಯಾರ್ಯಾರೋ ಹೇಳಿದ್ದನ್ನು ಕೇಳಿ ಹೇಳಬಹುದಷ್ಟೆ. ಅದರಲ್ಲಿ ಸತ್ಯ ಎಷ್ಟು, ಮಿಥ್ಯೆ ಎಷ್ಟು ಒಂದೂ ಗೊತ್ತಿಲ್ಲ. ಆದರೆ ನಾನು ನಿಮಗೆ ಗೋಕುಲದಲ್ಲಿ ನಡೆದ ಒಂದು ಚೆಂದದ ಕಥೆನಾ ಹೇಳ್ತೇನೆ.
ಆಗ ಕೃಷ್ಣ ಚಿಗುರು ಮೀಸೆ ಹುಡುಗ ನೋಡಿ. ಅವನು ಬೀದೀಲಿ ಹೊರಟ ಅಂದ್ರೆ ಅವನ ಹಿಂದೆ ಗೋಪಾಲಕರು, ಗೋಪಿಕೆಯರ ದಂಡೆಯ ಹೊರಟ್ತಿತ್ತು.
(ಕೃಷ್ಣ , ಬಲರಾಮ. ಮತ್ತು ಗೋಪಿಕೆಯರ ಹಿಂಡು ಹೊರಡುವುದು)
ನಂದಗೋಪ: ಇದೇನು ಕೃಷ್ಣ, ಇಂದ್ರನ ಉತ್ಸವಕ್ಕೆ ಒಂದು ವಾರ ಮಾತ್ರ ಇದೆ. ನೀವು ನೋಡಿದರೆ ಹೀಗೆ ನಿರಾಳವಾಗಿ ತಿರುಗುತ್ತಾ ಇರುವಿರಿ? ತಯಾರಿ ಮಾಡಬಾರದೇನು?
ಕೃಷ್ಣ: ಅಪ್ಪಾ, ಉತ್ಸವದ ಉಸ್ತುವಾರಿಗೆ ಸಣ್ಣ ಇದ್ದಾನಲ್ಲಾ. ನಮಗೇನು ಕೆಲಸ ಅಲ್ಲಿ?
ನಂ: ಅರೆ ಕೃಷ್ಣ! ಏನಿದು ನಿನ್ನ ಮಾತು? ಕಳೆದಸಲ ಉತ್ಸವದ ಮುಂದಾಳು ಬಲರಾಮನಾಗಿದ್ದ. ಈ ಸಲದ ಸರದಿ ನಿನ್ನದಲ್ಕವೇನು?
ಕೃಷ್ಣ: ನನಗೆ ಇದೆಲ್ಲಾ ಆಗಿಬರದು ತಂದೆ. ನಾನು ಅದರಲ್ಲಿ ಭಾಗಿಯಾಗಲಾರೆ.
ನಂ: ಹಾಗಂದರೇನು? ನಾನೂ ನೋಡ್ತಿದ್ದೇನೆ ನೀನು ಇತ್ತೀಚೆಗೆ ತುಂಬಾ ಸೋಮಾರಿಯಾಗಿರುವೆ. ಗೋಪರನ್ನು ಸೇರಿಸಿಕೊಳ್ಳೋದು, ಬೀದಿ ಬೀದಿ ಅಲೆಯೋದು. ಅದೆಲ್ಲಾ ನಿಲ್ಲಿಸು. ನಿನ್ನ ಪಟಾಲಂನವರಿಗೆಲ್ಲ ಹೇಳು ಇಂದ್ರೋತ್ಸವದ ತಯಾರಿ ನಡೆಸಲು.
ಕೃ: ಅಪ್ಪಾ, ನಾನೊಂದು ಮಾತು ಕೇಳಲೇನು?
ನಂ: ಕೇಳು.
ಕೃ: ನಾವು ಇಂದ್ರನನ್ನು ಯಾಕೆ ಪೂಜಿಸಬೇಕು?
ನಂ: ಹಾಗಂದರೇನು ಮಗು? ಇಂದ್ರ ನಮ್ಮ ದೇವರು. ಅದಕ್ಕೇ ಪೂಜಿಸಬೇಕು.
ನಂ: ಇಂದ್ರನೇ ಯಾಕೆ?