ಇಪ್ಪತ್ತು ವರ್ಷಗಳ ಹಿಂದೆ ಎಂ. ಎಸ್ಸಿ. ಪರೀಕ್ಷೆ ಬರೆಯುವ ಸಲುವಾಗಿ ಬೆಂಗಳೂರಿಗೆ ಪ್ರಥಮವಾಗಿ ನಾನು ಕಾಲಿಟ್ಟಿದ್ದೆ. ಆಗ ಬೆಂಗಳೂರೆಂದರೆ ನನಗೆ ಅತೀವವಾದ ಭಯವಿತ್ತು. ಅನೇಕ ಚಲನಚಿತ್ರಗಳಲ್ಲಿ ( ಅದರಲ್ಲಿಯೂ ದೇವರಾಜ್ ಅಭಿನಯದ ಹುಲಿಯ ಚಿತ್ರ), ದಿನಪತ್ರಿಕೆಗಳಲ್ಲಿ, ಕ್ರೈಮ್ ನ್ಯೂಸ್ ಗಳಲ್ಲಿ ಬೆಂಗಳೂರಿನ ಕಥೆ ಕೇಳಿದ್ದ ನಾನು ಇದೊಂದು ರೌರವ ನರಕವೇ ಸರಿ ಎಂಬ ತೀರ್ಮಾನಕ್ಕೆ ಬಂದಿದ್ದೆ. ಅದು ಯಾ ಪಾಟಿ ಬೇರೂರಿತ್ತೆಂದರೆ ಬೆಂಗಳೂರಿನ ರಸ್ತೆಯಲ್ಲಿ ನಡೆಯುವಾಗ ಯಾವುದಾದರೂ ಕಾರಿನವರು ಸರಕ್ಕನೆ ನನ್ನನ್ನು ಸೆಳೆದೊಯ್ಯಬಹುದೆಂದೂ, ಬೆಂಗಳೂರಿನ ರಿಕ್ಷಾದವರು ನಿರ್ಜನ ಪ್ರದೇಶಕ್ಕೇ ಕರೆದೊಯ್ಯುತ್ತಿದ್ದಾರೆಂದು, ಹತ್ತಿರ ಹಾದುಹೋಗುವ ಸ್ಕೂಟರ್ ನವರೆಲ್ಲಾ ಸರಗಳ್ಳರೇ ಇರಬೇಕೆಂದು ನನಗೆ ಅನಿಸುತ್ತಿತ್ತು. ಯಾರಲ್ಲಾದರೂ ದಾರಿ ಕೇಳಿದರೆ ಸುಳ್ಳೇ ಹೇಳುತ್ತಿದ್ದಾರೆಂದು, ಹಿಂದೆ ಯಾರಾದರೂ ಬರುತ್ತಿದ್ದರೆ ನನ್ನನ್ನೇ ಗುರಿಯಾಗಿಸಿ ಬರುತ್ತಿದ್ದಾರೆಂದೂ, ಬಸ್ ನಲ್ಲಿ ಯಾರಾದರೂ ಸೀಟು ಬಿಟ್ಟುಕೊಟ್ಟರೆ ಮೂಗಿಗೆ ಕರ್ಚೀಫ್ ಸೋಕಿಸಿ ಎಚ್ಚರ ತಪ್ಪಿಸಿವರೆಂದೂ........ ಹೀಗೆ ಏನೆಲ್ಲ ಕೆಟ್ಟದಿದೆಯೋ ಎಲ್ಲವನ್ನೂ ಬೆಂಗಳೂರಿಗೆ ಆರೋಪಿಸಿ ಇಲ್ಲಿಯ ತಂಪು ಹವೆಯಲ್ಲೂ ನಾನು ಬೆವರುತ್ತಿದ್ದೆ. ಮೊದಮೊದಲೆಲ್ಲ ಇವರ ಕೈಹಿಡಿದೇ ಎಲ್ಲ ಕಡೆ ಹೋಗುತ್ತಿದ್ದೆ. ಸಿಟಿ ಬಸ್ ನಲ್ಲಿ ನಾನು ಮುಂದೆ, ಇವರು ಹಿಂದಿನ ಬಾಗಿಲಿನಲ್ಲಿ ಹತ್ತಬೇಕಾದಾಗ ಎಷ್ಟು ಹೆದರಿಕೆಯಾಗುತ್ತಿತ್ತೆಂದರೆ ಬಸ್ ನಲ್ಲಿ ಇವರ ಮುಖ ಕಂಡಮೇಲಷ್ಟೇ ಮನಸ್ಸು ನಿರಾಳವಾಗುತ್ತಿತ್ತು. ಇನ್ನು ರಸ್ತೆ ದಾಟುವ ಪಾಡಂತೂ ಕೇಳಲೇಬೇಡಿ. " ನೀನು ಹೀಗೇ ನಿಂತರೆ ಒಂದು ವರ್ಷವಾದರೂ ರೋಡ್ ದಾಟಲಾಗದು" ಎಂದಿವರು ನನ್ನನ್ನು ಅಕ್ಷರಶಃ ಎಳೆದುಕೊಂಡೇ ರಸ್ತೆ ದಾಟುತ್ತಿದ್ದರು. ಆದರೂ ವಾಹನಗಳ ನಡುವೆ ನಡುರಸ್ತೆಯಲ್ಲಿ ನಿಂತಾಗ ನನಗರಿವಿಲ್ಲದೇ ಕಿರುಚಿ, ಇವರಿಗೆ ಅವಮಾನವಾಗುವಂತೆ ಮಾಡುತ್ತಿದ್ದೆ. ಬೆಂಗಳೂರಿಗೆ ಹೊರಡಲು ತಿಂಗಳಿದೆ ಎನ್ನುವಾಗಲೇ ನನಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ನನ್ನನ್ನು ಪರೀಕ್ಷಾಕೇಂದ್ರಕ್ಕೆ ಮುಟ್ಟಿಸುವುದಷ್ಟೇ ಅಲ್ಲ, ನಾನು ಪರೀಕ್ಷೆ ಬರೆದು ಹೊರಬರುವತನಕವೂ ಇವರು ಅಲ್ಲೇ ಕುಳಿತು ಕಾಯಬೇಕಿತ್ತು. ಪರೀಕ್ಷೆ ನನಗಾದರೂ ತಾಳ್ಮೆಯ ಪರೀಕ್ಷೆ ಇವರಿಗಾಗುತ್ತಿತ್ತು.
ಕಾಲೇಜಿಗೆ ಪದೋನ್ನತಿಯಾಗಿ ಮೌಲ್ಯಮಾಪನಕ್ಕೆಂದು ಬೆಂಗಳೂರಿಗೆ ಬರಬೇಕಾದಾಗ ಇವರು, "ಇದು ಇನ್ನು ಪ್ರತಿ ವರ್ಷದ ಹಾಡು. ಅದಕ್ಕೆಲ್ಲಾ ನಿನ್ನ ಜೊತೆ ಬರಕ್ಕಾಗಲ್ಲ. ಒಬ್ಬಳೇ ಹೋಗಿಬರೋದನ್ನ ರೂಢಿಮಾಡಿಕೋ " ಎಂದು ಒಂದೇ ಟಿಕೆಟ್ ತೆಗೆದು ಕೈಗಿಟ್ಟಾಗ ಕಕ್ಕಾಬಿಕ್ಕಿಯಾಗಿದ್ದೆ. ಇವರಿಗೆ ಗೊತ್ತಿಲ್ಲದಂತೆ ಬೆಂಗಳೂರಿನಲ್ಲಿರುವ ಶಿಷ್ಯೋತ್ತಮನಿಗೆ ಕರೆಮಾಡಿ, ನನ್ನನ್ನು ಸ್ವಾಗತಿಸಲು ವಿನಂತಿಸಿಕೊಂಡಿದ್ದೆ. ಅವನು ಬಸ್ಸು ಬೆಂಗಳೂರಿಗೆ ಪ್ರವೇಶಿಸುತ್ತಿದ್ದಂತೆಯೇ ಕರೆಮಾಡಿ, ತಾನು ಮೆಜೆಸ್ಟಿಕ್ ನಿಲ್ದಾಣದಲ್ಲಿರುವುದಾಗಿ ಹೇಳಿದ್ದ. ರಾತ್ರಿ ಬಸ್ಸಿನಲ್ಲಿ ಕ್ಷಣ ಮಾತ್ರವೂ ನಿದ್ರಿಸದೇ, ಬೆಳಗಿನ ನಾಲ್ಕು ಗಂಟೆಗೆ ಬೆಂಗಳೂರು ಬಂದೇಬಿಟ್ಟಿತೆನಿಸಿ, ಅವನಿಗೆ ಕರೆಮಾಡಿ ಎಬ್ಬಿಸಿದ್ದೆ. ಮೊದಲ ಸಿಟಿಬಸ್ ಇರುವುದೇ ಆರರ ನಂತರ ಎಂದು ಹೇಳಿ ಅವ ಮತ್ತೆ ಮುಸುಕೆಳೆದು ಮಲಗಿದ್ದನೇನೋ? ಎರಡುದಿನ ರಜೆ ಮಾಡಿ ನನ್ನೊಂದಿಗೆ ತಿರುಗಿದ ಆತ ಇನ್ನು ನಿಮ್ಮ ತಲೆಗೆ ನಿಮ್ಮದೇ ಕೈ ಎಂದು ಮಾಯವಾಗಿದ್ದ. ನಾನು ಒಬ್ಬಳೇ ಮಾಯಾನಗರಿಯಲ್ಲಿ ಮೊದಲ ಹೆಜ್ಜೆಯಿಡುವ ಮಗುವಿನಂತೆ ನಿಧಾನಕ್ಕೆ ನಡೆಯತೊಡಗಿದ್ದೆ. ರಸ್ತೆ ದಾಟಲು ಪರದಾಡುವ ನನ್ನನ್ನು ಕಂಡು ಟ್ರಾಫಿಕ್ ಪೋಲೀಸರು ಸಹಾಯ ಮಾಡಿದ್ದಿದೆ. ದಾರಿ ಕೇಳಿದರೆ ಸಾವಧಾನವಾಗಿ ವಿವರಿಸುವ ಜನರು, ಬಸ್ ಕೇಳಿದರೆ ಹತ್ತಿಸಿಯೇ ಹೋಗುವವರು, ಮಾರುಮಾರಿಗೆ ಬೇಕಾದ್ದನ್ನು ಮಾರುವವರು........ಹೀಗೆ ಎಲ್ಲರೊಂದಾಗಿ ನನ್ನ ಬೆಂಗಳೂರಿನ ಭಯವನ್ನು ತೊಡೆದರು.
ಇಷ್ಟಾದರೂ ಬೆಂಗಳೂರು ಕಚೇರಿ ಕೆಲಸಕ್ಕೆಂದು ಬರುವ ಅನಿವಾರ್ಯವಾಯಿತೇ ಹೊರತು ಪ್ರವಾಸದ ಖುಶಿನೀಡುವ ತಾಣವಾಗಲಿಲ್ಲ. ನೋಡಿ ಮುಗಿಸಬೇಕಾದ ಫೈಲ್ ಆಯಿತೇ ವಿನಃ ಆಸೆಪಟ್ಟು ಓದುವ ಪುಸ್ತಕವಾಗಲಿಲ್ಲ. ಹೀಗೇ ಅನಿವಾರ್ಯವಾಗಿ ಬರುವುದು, ಕೆಲಸ ಮುಗಿದೊಡನೆ ಓಡುವುದು ಕಳೆದ ಐದಾರು ವರ್ಷಗಳಿಂದ ನಡೆದೇ ಇತ್ತು. ಆದರೆ ಕಳೆದ ವರ್ಷ ಶ್ರೀಪಾದ ರಂಗೋತ್ಸವಕ್ಕೆಂದು ಬೆಂಗಳೂರಿಗೆ ಬಂದಾಗ ನಿಜಕ್ಕೂ ಬೆಂಗಳೂರು ಆಪ್ಯಾಯಮಾನ ಎನಿಸತೊಡಗಿತು. ಎಲ್ಲ ರಂಗಸ್ನೇಹಿತರ ಭೇಟಿ, ಓಲಾ ಕ್ಯಾಬ್ ಬುಕ್ ಮಾಡಿ ಎಲ್ಲೆಂದರಲ್ಲಿ ಓಡಾಡಬಹುದಾದ ಸ್ವಚ್ಛಂದತೆ, ಸಂಜೆಯಾದೊಡನೆ ರಂಗಶಂಕರದಲ್ಲಿ ತೆರೆದುಕೊಳ್ಳುವ ರಂಗ ಜಗತ್ತು ಬೆಂಗಳೂರಿನ ನೆನಪಿಗೆ ಬಣ್ಣ ಮೆತ್ತತೊಡಗಿದ್ದವು. ಮಕ್ಕಳಿಗಂತೂ ಬೆಂಗಳೂರೆಂದರೆ ರಂಗಶಂಕರ ಎಂಬಂತ ಗಾಢ ನೆನಪನ್ನು ಅದು ಉಳಿಸಿತು. ನಾನು ಕೇಳಿದ್ದಕ್ಕಿಂತ ಭಿನ್ನವಾದುದು ಕೂಡ ಬೆಂಗಳೂರಿನಲ್ಲಿದೆ ಎಂದು ನನಗನಿಸತೊಡಗಿತು.
ಇವೆಲ್ಲ ಮತ್ತೆ ಈಗ ಯಾಕೆ ನೆನಪಾಯಿತೆಂದರೆ ಒಂದು ವಾರದಿಂದ ಪುನಃ ಮತ್ತೆ ಬೆಂಗಳೂರಿನಲ್ಲಿದ್ದೇನೆ. ಇಂದು ಸಂಜೆ ಅನುಷ್ ಕಲಾಕ್ಷೇತ್ರದಲ್ಲಿ ವಾಲಿವಧೆ ನಾಟಕವಿದೆ. ಬಿಡುವಾಗಿದ್ದರೆ ಬನ್ನಿ ಎಂದು ಸಂದೇಶ ರವಾನಿಸಿದ್ದ. ಬಿಟ್ಟೂ ಬಿಡದೇ ಸುರಿವ ಮಳೆಯನ್ನೂ ಲೆಕ್ಕಿಸದೇ ಓಲಾದಲ್ಲಿ ಓಲಾಡುತ್ತಾ ಗೆಳತಿಯೊಂದಿಗೆ ಕಲಾಕ್ಷೇತ್ರಕ್ಕೆ ದೌಡಾಯಿಸಿದರೆ ಹಿರಿಯ ಸಾಹಿತಿ ಕಂಬಾರರು ನಾಟಕೋತ್ಸವವನ್ನು ಉದ್ಘಾಟಿಸುತ್ತಿದ್ದರು. ಶೇಷಗಿರಿಯ ಕಲಾತಂಡದವರು ಕುವೆಂಪು ವಿರಚಿತ ವಾಲಿವಧೆಯನ್ನು ಭೇಷ್ ಎನ್ನುವಂತೆ ಪ್ರದರ್ಶಿಸಿದರು. ನಿರ್ದೇಶಕ ಎಂ. ಗಣೇಶ ಯಕ್ಷಗಾನದ ಮಟ್ಟುಗಳನ್ನು ಲೀಲಾಜಾಲವಾಗಿ ಉರುಳಿಸುತ್ತಿದ್ದರೆ ಪ್ರೇಕ್ಷಕರು ದಣಿವರಿಯದಂತೆ ಚಪ್ಪಾಳೆ, ಶಿಳ್ಳೆ ಹೊಡೆಯುತ್ತಿದ್ದರು. ಹಳ್ಳಿ ಹುಡುಗರ ನಟನೆಯನ್ನು ಮನದುಂಬಿಕೊಳ್ಳುವ ಬೆಂಗಳೂರಿಗರನ್ನು ನೋಡುತ್ತಾ, ನೋಡುತ್ತಾ ಕ್ರಮೇಣ ನನಗೆ ದೇಶಕಾಲದ ತೆರೆಯೇ ಅಳಿಸಿಹೋಗಿ ಇಲ್ಲೆಲ್ಲೋ ನನ್ನ ಹಳ್ಳಿಯಲ್ಲಿಯೇ ಇರುವೆನೆನಿಸಿ, ಸುತ್ತ ಕುಳಿತವರೆಲ್ಲ ನಮ್ಮಂತೆಯೇ ಸಂವೇದನೆಯುಳ್ಳ ಮನುಷ್ಯರಂತೆ ಕಂಡು ಬೆಂಗಳೂರಿನ ಬಗೆಗಿನ ಭಯವೆಲ್ಲ ಕರಗಿಹೋಯಿತು. ಬೆಂಗಳೂರಿನ ಬಗೆಗಿರುವ ಕೆಟ್ಟ ಭಾವನೆಯನ್ನೆಲ್ಲ ಭೋರೆಂದು ಸುರಿದ ಮಳೆ ಕೊಚ್ಚಿಹೋಯಿತು. ನಾಟಕ ಮುಗಿದು ಅನುಷ್, ಮುನ್ನಾ, ಪ್ರಥ್ವಿನ್ ಎಲ್ಲರ ಕೈಕುಲುಕಿ ವಾಪಸಾಗುವಾಗ ಗೆಳತಿ ಹೇಳಿದಳು, "ಇನ್ನು ಪ್ರತಿಸಲ ಬಂದಾಗಲೂ ಹೀಗೇ ನಾಟಕ ನೋಡೋಣ" ಎಂದು.
ಹೌದಲ್ಲಾ, ನಾನೀಗ ಮುಂದಿನ ಬೆಂಗಳೂರು ಭೇಟಿಗೆ ಕಾಯುತ್ತಿದ್ದೇನೆ. ಹಗಲಿಡೀ ಮೌಲ್ಯಮಾಪನ ಕಾರ್ಯ ಮಾಡಿ, ಸಂಜೆಯಾಗುತ್ತಿದ್ದಂತೇ ಓಲಾದಲ್ಲಿ ನಾಟಕ ಹುಡುಕಿ ಹೋಗಬೇಕು. ರಂಗಶಂಕರದಲ್ಲಿ ಮತ್ತೆ ನಾಟಕ ನೋಡಬೇಕು. ಬದುಕಿಗೆ ಮತ್ತಿಷ್ಟು ರಂಗು ಮೆತ್ತಿಕೊಳ್ಳಬೇಕು ಎಂಬೆಲ್ಲಾ ಕನಸು ಮೂಡಿಸಿದ ಇಂದಿನ ಪ್ರದರ್ಶನಕ್ಕೆ ನಾನು ಚಿರಋಣಿ. ಹಳ್ಳಿಗಾಡಿನ ಸೊಬಗ ಬೆಂಗಳೂರಿಗೆ ಬಳಿದ ನಾಟಕವೆಂಬ ಮಾಯೆಗೆ ಶರಣೆಂಬೆ. ಮುಂದಿನ ಬೆಂಗಳೂರು ಭೇಟಿಗೆ ಕಾಯುತ್ತಿರುವೆ.
No comments:
Post a Comment