Tuesday, January 05, 2021

ಕವನ

ನಿಜವಾಗಿ ನೋಡಿದರೆ ಹೊಸದೇನಿದೆ ಇದರಲ್ಲಿ?
ಭೂಮಿಯ ಮೇಲೆ ಅಧಿಕಾರ ಬೇಡ
ಅವಳು ಹೆಣ್ಣು ಎಂದಿದ್ದರು ಅವರು
ನಾವು ಭೂಮ್ತಾಯಿ ಪಾದಕ್ಕೆ ಶರಣೆಂದೆವು
ತಾಯ ತುಳಿವಾಗಲೂ ಕಂಪಿಸಿದೆವು
ಬೀಜವೂರುವಾಗಲೂ ಪೂಜಿಸಿದೆವು
ಹಸಿರುಡುಗೆಯುಟ್ಟಾಗ ಕಣ್ತುಂಬಿಕೊಂಡೆವು
ತೆನೆಕಟ್ಟಿ ತೂಗುವಾಗ ಲಾಲಿ ಹಾಡಿದೆವು
ಫಸಲನವರ ಕಣಜದೊಳಗೆ ತುಂಬಿಸಿ
ಬರಿಗೈಲಿ ಮರಳಿದಾಗವಳು ಮಡಿಲಾಗಿದ್ದಳು
ಅವಳುಡಿಯಲ್ಲಿ ಬಿದ್ದ ಬಿತ್ತಗಳನಾಯ್ದು
ಹಸಿವೆ ಹಿಂಗಿಸಿಕೊಂಡೆವು, ಹಾಡಾದೆವು


ತುಂಡುಭೂಮಿ ಸ್ವಂತಕ್ಕೆ ದಕ್ಕಿದಾಗ
ಅದೆಷ್ಟು ಹಿಗ್ಗು! ಅದೆಂಥ ಸುಗ್ಗಿಯ ಬೆರಗು
ಮೊದಲ ಕಣಜವನು ಮನೆಯಂಗಳದಲ್ಲಿ
ತುಂಬಿಸುವಾಗ ಸುಗ್ಗಿ ಧರೆಗಿಳಿದ ಸಗ್ಗ
ಅದೇ ಭೂಮಿಯ ಫಸಲು ಮಕ್ಕಳು
ಮರಿಮಕ್ಕಳ ಬದು ಜೋಕಾಲಿಯನು
ಉದ್ದಕ್ಕೂ ಜೀಕುತ್ತಲೇ ಸಾಗಿದೆ, ಮತ್ತೀಗ
ಅವರು ಮಾತನಾಡುತ್ತಿದ್ದಾರೆ ನಮ್ಮ
ಭೂಮಿಯ ಬಗ್ಗೆ, ಮತ್ತದೇ ಹಳೆಯ
ಕಪ್ಪು ನೆರಳುಗಳುಗಳು ಸುಳಿದಂತಾಗಿ
ಬೆಚ್ಚಿಬೀಳುತ್ತಿದ್ದೇವೆ ಕನಸಿನಲ್ಲೂ


ಶರಣೆನ್ನುವೆ....

ಹುಟ್ಟು ಅನಾಮಿಕವಾಗಿತ್ತು
ಬಯಸಿ ಪಡೆದುದೂ ಅಲ್ಲವಾಗಿತ್ತು.
ಬೇಡದ ಮಕ್ಕಳೆಂದರೆ ರೋಗಗಳಿಗೆ ಪ್ರೀತಿ ಜಾಸ್ತಿ. 
ಒಟ್ಟಾಗಿ ಧಾಳಿಯಿಟ್ಟು ಬಾಲ್ಯವನ್ನು ತೆವಳಿಸಿದವು. 
ತೆವಳುವ ಮಕ್ಕಳ ಬಗ್ಗೆ ಅಪ್ಪನಿಗೆ ಅಕ್ಕರೆ ಹೆಚ್ಚು.
ಮುದ್ದಿಸಿ ಹೆಗಲೇರಿಸಿಕೊಂಡ.
ಅಕ್ಷರಗಳು ಎದೆಗಿಳಿದು, ರೆಕ್ಕೆಗಳಾಗಿ ಮಾರ್ಪಾಡಾದವು.
ಅಮ್ಮನ ಅರಿವು ಬಾಳಿಗೆ ಬೆಳಕಾಯಿತು.
ಅವಳ ಸಾವು ಬಯಲಿಗೆ ನೂಕಿತು.
ಬಯಲಾದಮೇಲೆ ಹಾರಲೇಬೇಕು, ವಿಧಿಯಿಲ್ಲ.
ಹಾರುವ ಅನಿವಾರ್ಯಕ್ಕಷ್ಟೇ ಹಾರಿದೆ.
ನೀವೆಲ್ಲ ಪ್ರೀತಿಯ ತುತ್ತು ಹಿಡಿದು ದಾರಿಗಾಯುತ್ತೀರೆಂದು ನನಗೆಲ್ಲಿ ಗೊತ್ತಿತ್ತು?
ಎಷ್ಟೆಲ್ಲ ಮಮತೆಯಿಂದ ಹಾರೈಸಿದಿರಿ ನಿನ್ನೆ.
ಹುಟ್ಟು ಸಾರ್ಥಕವೆನಿಸಿತು!
ಹನಿಗಣ್ಣಾಗಿದ್ದೇನೆ, ನಿಮ್ಮ ಪ್ರೀತಿಗೆ...
ಧನ್ಯವಾದಗಳು ಎಂದು ಸಾಲ ತೀರಿಸಲಾರೆ.
ಎದೆಯಲ್ಲಿ ಹೊತ್ತುಕೊಂಡೇ ನಡೆಯುವೆ ನಿಮ್ಮ ಹಾರೈಕೆಗಳನ್ನು
ಬದುಕಿನ ಕರುಣೆಯ ಕರಗಳಿಗೆ ಶರಣು


ನಿತ್ಯ ನೂತನ ಧಾವಂತಗಳ ನಡುವೆ
ನನ್ನ ನಾನೇ ಮುಟ್ಟಿಕೊಳುವ
ಬಚ್ಚಲಮನೆಯ ಏಕಾಂತದಲಿ
ಬಗ್ಗಿ ಪಾದವುಜ್ಜಿದಾಗಲೇ ಹೊಳೆದದ್ದು
ಆಹ್! ಮತ್ತೆ ಒಂಟಿ ಗೆಜ್ಜೆ!
ಅದೇನು ಮಾಯಕವೋ ನನ್ನ ಪಾದಗಳದ್ದು
ಸದಾ ಒಂದನ್ನು ಅರಿಲ್ಲದೇ ಕಳಚಿಕೊಳ್ಳುವುದು
ದೇಹದ ಕೊಳೆಯ ಕಳಚುತ್ತಲೇ
ಮನದೊಳಗೆ ಕಳಕೊಂಡ ಗೆಜ್ಜೆನಿನಾದ
ಮೆಲಕು ಹಾಕುತ್ತಲೇ ಮಲಗುವ ಮನೆಗೆ ಪಯಣ
ಪಲ್ಲಂಗದ ಮೇಲೆ ಕಣ್ಣಿಗೆ ರಾಚುವಂತೆ
ಮಲಗಿದೆ ನನ್ನ ಒಂಟಿಗೆಜ್ಜೆ
ಮತ್ತೆ ನನ್ನ ಕಳಕೊಳ್ಳುವಿಕೆಗೆ ಸಾಕ್ಷಿ
ಯಾಗುವಂತೆ ಪ್ರದರ್ಶನಕ್ಕಿಟ್ಟಿದ್ದಾನೆ ಅವನು
ಆ ಗೆಜ್ಜೆಯೊಂದಿಗೆ ಇನ್ನೊಂದನ್ನು
ಹೊಂದಿಸಿಟ್ಟು ನಿರಾಳವಾದೆ
ಬಯಲಾಗಬೇಕೆಂದರೆ ಬಂಧನವನ್ನು
ಕಳಚಲೇಬೇಕಿದೆ
ಜಂಟಿಗೆಜ್ಜೆಗಳು ನನ್ನ ನೋಡಿ ನಕ್ಕವು!

ನೆನಪು ಹೊರಗಿನದಲ್ಲ

ಕಾಡುವ ನಿನ್ನ ನೆನಪುಗಳಿಗೆ
ನೀನೇ ಹೇಳು ಪರಿಹಾರ
ಬಿಡದೇ ಕಾಡಿದೆ ಅವನ
'ಓದು' ಎಂದ ತಣ್ಣಗೆ
ನನ್ನ ಮೂರು ಮಾತಿಗೆ
ಅವನದ್ದು ಒಂದೇ 'ಪದ'

ಓದತೊಡಗಿದೆ 'ಅವನ'
ಗಡಸು, ಹಠಮಾರಿ, ಜಗಳಗಂಟ
ಮುನ್ನುಡಿಯ ಪುಟಗಳ ದಾಟಿ
ತಲೆಬರಹಗಳಡಿಯಲ್ಲಿ ಸಿಕ್ಕರು
ಮೃದುಹೃದಯಿ, ಮಿತಭಾಷಿ,
ಗೆಳೆಯ, ತಾಯಿ, ಗುರು...
ಕೈಕುಲುಕಿ, ಮೈಗೊತ್ತಿ, ತಲೆಸವರಿ
ವಂದಿಸುತ್ತಾ ನಡೆದೆ ಮುಂದೆ

ಒಳಗಿಳಿದಂತೆಲ್ಲ ಗವ್ವೆನುವ ಏಕಾಂತ
ಸಣ್ಣ ನರಳುವಿಕೆಗೆ ಬೆಚ್ಚಿದೆ
ತಣ್ಣಗೆ ಮಲಗಿತ್ತು ದೊಡ್ಡ ನೋವು!
ಮೈಯ್ಯಿಡೀ ಗಾಯ, ರಕ್ತ, ಕೀವು
ಎಲ್ಲಿ ಒತ್ತಿದರೂ ವೇದನೆಯ ಕೂಗು
ಮೃದುವಾಗಿ ನೇವರಿಸಿದೆ
ಹಿತವಾದ ನರಳಿಕೆ, 
ಬಾಯ್ದೆರೆದ ಗಾಯಕ್ಕೆ ಪ್ರೀತಿಯೇ ಚಿಕಿತ್ಸೆ
ಎದ್ದು ಹೊರಬರಲಾರೆ ಗಾಯ ಮಾಗದೇ
ಮತ್ತೀಗ ನೆನಪು ಹೊರಗಿನದಲ್ಲ
ನನ್ನಾತ್ಮದ್ದು....

ಕಿಟಕಿ

ಮನೆಯ ಗೋಡೆಯ ನಡುವೆ ಇದೆ
ಒಂದು ಮಾಯಾ ಕಿಟಕಿ
ತೋರದು ಯಾರಿಗೂ ತನ್ನಿರವನು
ಸುತ್ತ ಕತ್ತಲು ಹರಡಿಕೊಂಡಾಗ
ಮೆಲ್ಲನೆ ತೆರೆದುಕೊಳ್ಳುವುದು
ಚಿಟ್ಟೆ ರೆಕ್ಕೆ ಪಡೆದುಕೊಂಡಂತೆ
ಕತ್ತಲೆ ಸೀಳಿ ಕಿಟಕಿಯಾಚೆಗೆ
ಮಾಯಕದ ಬೆಳಕು ಹರಡಿಕೊಳ್ಳುವುದು
ಅಪ್ಸರೆಯರು ಹಾದು ಹೋಗುತ್ತಾರೆ
ಅಪ್ಪಟ ಗೃಹಿಣಿಯರು ಮುಖ ಮುಚ್ಚದೆಯೆ
ಮನ ಮೆಚ್ಚಿದವರೊಂದಿಗೆ ಹೆಜ್ಜೆ ಹಾಕುತ್ತಾರೆ
ಮಾತೇ ಬಾರದವರಲ್ಲಿ ತಾವೇ ಮಾತಾಗುತ್ತಾರೆ
ಸುಳಿವ ಗಾಳಿಗೆ ಹಲವರ ಸೆರಗು ಜಾರುತ್ತದೆ
ಮುದುಕಿಯರೂ ಯೌವ್ವನಕ್ಕೆ ಜಿಗಿಯುತ್ತಾರೆ
ಕಟ್ಟಿದ ಅನೇಕ ಪ್ರತಿಮೆಗಳು ಒಡೆದು ಹಾರುತ್ತವೆ
ಸತ್ಯ, ಸುಳ್ಳುಗಳ ಗೆರೆ ಕಲಸಿ ಕರಗುತ್ತದೆ
ಗಂಡು, ಹೆಣ್ಣೆಂಬ ಭೇದವೆಲ್ಲವೂ ಭಿನ್ನಗೊಂಡು
ಹೊಸದೊಂದು ಲೋಕ ತೆರೆದುಕೊಳ್ಳುತ್ತದೆ
ಎಲ್ಲ ಮುಗಿದು ಗರಿಯೊಂದು ತೇಲಿಬರುವಾಗ
ನಿನ್ನ ಬರವನ್ನು ಕಾಯುತ್ತೇನೆ ಕಾತರಳಾಗಿ
ಹಾಳು ಕಿಟಕಿ! ತನ್ನಷ್ಟಕ್ಕೇ ಮುಚ್ಚಿಕೊಳ್ಳುತ್ತದೆ
ನಾನು ಮತ್ತದೇ ಭ್ರಮೆಯಿಂದ ನಾಳೆಯೂ ಕಾಯುತ್ತೇನೆ.......


ಅವಳ ಹಾಡು

ಇಂದು ನೀನು ಎಷ್ಟಾದರೂ ಬೈಯ್ಯಬಹುದು ನನ್ನ
ವಿನಾಕಾರಣ
ಆಫೀಸಿನಲಿ ನಿನ್ನ ಮೇಲಿನವನು ಹಂಗಿಸಿದಾಗ
ನಿನ್ನ ಕೆಳಗಿನವಳು ಇಣುಕಿ ನೋಡಿದ ಅವಮಾನ ಕಳೆಯಲು
ಎದೆಯುದ್ದ ಬೆಳೆದ ನಿನ್ನ ಮಕ್ಕಳು
ನೀನೆಳೆದ ವೃತ್ತದಾಚೆ ಜಿಗಿದಾಗಲೂ
ಮನೆಯ ನಾಯಿ ಸುಮ್ಮನೆ ಬೊಗಳಲು
ನಿನ್ನ ಗಂಡೆಂಬ ಅಹಂಗೆ ಎಲ್ಲಿಂದಲೋ
ಯಾರಿಂದಲೋ ಸಣ್ಣೇಟು ಬಿದ್ದಾಗಲೂ
ಸುಳ್ಳೇ ಸುಳ್ಳು ಸಾರಿಗೆ ಉಪ್ಪು ಸಿಕ್ಕಾಪಟ್ಟೆ
ಹೆಚ್ಚೆಂದು ಅರ್ಧ ಊಟದಿಂದೆದ್ದು ಕೆಕ್ಕರಿಸಿ
ಗೆಳೆಯನಿಗೆ ಕೊಟ್ಟ ಸಾಲ ಬಾರದಿರುವ ಬಿಸಿಯಲ್ಲಿ
ಚಹಾ ತುಸುವೇ ತುಸು ತಣ್ಣಗಾಯಿತೆಂದು
ಬೆಳಗಿನ ಗಡಿಬಿಡಿಗೊಂದು ಕರ್ಚೀಪು ಸಿಗದ
ನೆವವಾದರೂ ಹಿಡಿದು ಭೂಮಿ ಬಾನು ಒಂದಾಗಿಸಿ
ಕೂಗಿ, ಕಿರುಚಿ ಬೈಯ್ಯಬಹುದು ನೀನು
ನಾನೀಗ ನಿನ್ನ ಬೈಗುಳದ ಬೇರನು
ನನ್ನಲ್ಲಿ ಹುಡುಕುತ್ತಿಲ್ಲ ತಿಳಿದಿದೆ ನನಗೆ
ನಿನ್ನೊಳಗೇ ಅಡಗಿರುವ ಬಗೆ
ಹಾಗಾಗಿ ಸುಮ್ಮನೆ ಬೈದುಬಿಡು ನನ್ನ
ವಿನಾಕಾರಣ

No comments:

Post a Comment