ಗೀತಾಂಜಲಿ -೧
ನಿನ್ನ ಕರುಣೆಗೆಣೆಯಿಲ್ಲ ಪ್ರಭುವೆ
ನೀನೆನ್ನ ಅನಂತವಾಗಿಸಿರುವೆ
ದೇಹವೆಂಬ ಸಡಿಲ ಹಡಗನು
ಮತ್ತೆ, ಮತ್ತೆ ನಿರ್ವಾತಗೊಳಿಸಿ
ಹೊಸ ಜೀವವ ತುಂಬಿರುವೆ
ಬರಿದೆ ಬಿದ್ದ ಕೊಳಲು ನಾನು
ಗಿರಿ ಗಹ್ವರಕೆ ಕೊಂಡೊಯ್ವೆ ನೀನು
ಹೊಸಗಾಳಿಯ ಉಸಿರ ತುಂಬಿ
ಜೀವರಾಗ ನೀ ನುಡಿಸಿರುವೆ
ನಿನ್ನ ಅಮರ ಕರವು ಸೋಕಿ
ನನ್ನೆದೆಯ ಹರ್ಷ ಎಲ್ಲೆ ಮೀರಿ
ಭಾಷೆಗೆಟುಕದಂತ ಭಾವವ
ಎದೆಯಾಳದಿ ಮೊಳೆಯಿಸಿದೆ ನೀ
ನನ್ನ ಪುಟ್ಟ ಕರದ ತುಂಬ
ನಿನ್ನ ಪ್ರೀತಿ ಕೊಡುಗೆ ಬಿಂಬ
ಕಾಲವೆಷ್ಟು ಉರುಳಿದರೂ
ಖಾಲಿಯುಳಿದಿದೆ ಮತ್ತೆ ಜಾಗ
ಗೀತಾಂಜಲಿ - ೯೩
ದೊರೆಯ ಕರೆಯು ಬಂದಿದೆ, ಓ ಗೆಳೆಯರೇ
ವಿದಾಯ ಕೋರಿ ಬೀಳ್ಕೊಡುವಿರಾ ಪ್ರಾಣಮಿತ್ರರೇ
ಶರಣು ನಿಮಗೆಲ್ಲರಿಗೂ ಅಗಲುತಿರುವೆನು
ನನ್ನ ಬಾಗಿಲ ಬೀಗವಿದೋ ಮರಳಿಸಿರುವೆನು
ಮನೆಯ ಹೊಣೆಯನೆಲ್ಲ ತೊರೆದೆ ಹಗುರವಾದೆನು
ನಿಮ್ಮ ಅಂತಃಕರಣದೊಂದು ನುಡಿಯ ಬಯಸುವೆ
ಹೊರೆಯು ಆಗದಂತ ನೆರೆಯು ನಾವಾದೆವು
ಪಡೆದುದೇ ಅಧಿಕ ನಾನು ಕೊಡುಗೆಗಿಂತಲೂ
ಮನದೊಳಗೆ ಮುಸುಕಿರುವ ತಮಗಳೆಲ್ಲವೂ
ಹೊಸಬೆಳಕಿನ ಪ್ರಭೆಯಲ್ಲಿ ಕರಗಿಹೋದವು
ದೊರೆಯ ಕಡೆಯ ಕರೆಯು ಇಂದು ನನಗೆ ಬಂದಿದೆ
ಹೋಗಿ ಬರುವೆ ಅನಂತ ದಾರಿ ತೆರೆದುಕೊಂಡಿದೆ
ಗೀತಾಂಜಲಿ - 56
ನನ್ನೊಳಗೆ ಹಾಗೆ ತುಂಬಿ ಹೋದೆ ನಿನ್ನ ಹರುಷವ
ನೀನು ನನ್ನ ಬಳಿಗೆ ಇಳಿದು ಬಂದೆ ಓ ಪ್ರಭು
ಜಗದ ಪತಿಯೆ, ಪ್ರೀತಿ ಝರಿಯೆ ನಾನಿಲ್ಲವಾದರೆ
ನಿನ್ನ ಪ್ರೀತಿ ವರ್ಷಧಾರೆ ಸುರಿವುದೆಲ್ಲಿ ಹೇಳು ದೊರೆ?
ನಿನ್ನ ಎಲ್ಲ ಐಸಿರಿಯಲೂ ನನ್ನ ಪಾಲು ನೀಡಿದೆ
ಮೇರೆಯಿರದ ಆನಂದವ ಹೃದಯದಲ್ಲಿ ಇರಿಸಿದೆ
ನೀನು ಮೂರ್ತವಾಗಿರುವೆ ನನ್ನ ಬದುಕ ಫಲುಕಿನಲ್ಲಿ
ರಾಜ, ಮಹಾರಾಜರ ವಿಧಿಯ ಬರೆವ ದೇವನೆ
ಶೃಂಗರಿಸಿಕೊಂಡೆ ನನ್ನ ಸೂರೆಗೊಳಲು ನಿನಗೆ ನೀನೆ
ಪ್ರೀತಿ ಮತ್ತು ಪ್ರೀತಿಸಿದವರ ಬೇರೆಯಾಗಿಸಿ
ಪೂರ್ಣ ಪ್ರೀತಿಯರಿವ ತಂದೆ ನನ್ನ ಮಾಗಿಸಿ
ಗೀತಾಂಜಲಿ -45
ಮೆಲ್ಲಹೆಜ್ಜೆಯಿಟ್ಟು ಬರುವ ಸದ್ದು ಕೇಳದೇನು?
ಅವನು ಬರುವ, ಇಂದೂ ಬರುವ, ಬಂದೇ ಬರುವನು
ಎಲ್ಲ ಕ್ಷಣವು, ಎಲ್ಲ ಯುಗವು
ಎಲ್ಲ ಹಗಲು, ಎಲ್ಲ ಇರುಳು
ಅವನು ಬರುವ, ಎಂದೂ ಬರುವ, ಬಂದೇ ಬರುವನು
ಮನದಿ ಸುಳಿವ ರಾಗದಲ್ಲಿ ಅವನ ಸ್ತುತಿಸುವೆ
ಎಲ್ಲ ಸೊಲ್ಲು ಅವನ ಕರುಣೆ ಸಾರುತಿರುವುದು
ಅವನು ಬರುವ, ಇಂದೂ ಬರುವ, ಬಂದೇ ಬರುವನು
ಬಿರುಬಿಸಿಲಿನ ಬೇಸಿಗೆಯಲಿ, ತಂಪು ಕಾಡ ದಾರಿಯಲ್ಲಿ
ಹೂವ ಗಂಧವಾಗಿ ಅವನು ಸುಳಿಯುತಿರುವನು
ಅವನು ಬರುವ, ಎಂದೂ ಬರುವ, ಬಂದೇ ಬರುವನು
ಗುಡುಗು, ಸಿಡಿಲು, ಮಿಂಚು, ಮಳೆಯ
ಕಾರಿರುಳಿನ ರಾತ್ರಿಯಲ್ಲಿ, ಮೋಡದ ಸಾರೋಟನೇರಿ ಬಂದೇ ಬರುವನು
ಅವನು ಬರುವ, ಇಂದೂ ಬರುವ, ಬಂದೇ ಬರುವನು
ದುಗುಡ ಕಳೆದು ಮತ್ತೆ ದುಗುಡ
ಮನವನಾವರಿಸಿರುವ ಗಳಿಗೆ
ಅವನ ಪಾದ ನನ್ನ ಹೃದಯ ಮೆಲ್ಲ ಸೋಕಿತು
ಹೊನ್ನ ಪಾದ ತಾಕಿದಾಗ ದುಗುಡವೆಲ್ಲ ಅಲ್ಲೇ ಕರಗಿ
ಹರ್ಷದ ಹೊನಲುಕ್ಕಿ ಮತ್ತೆ ತುಂಬಿ ಹರಿಯಿತು
ಅವನು ಬಂದ, ಅಂದೂ ಬಂದ, ಇಂದು ಬರುವನು
ಗೀತಾಂಜಲಿ -೧೯
ನೀನು ಮಾತನಾಡದಿದ್ದರೆ.....
ನಿನ್ನ ಮೌನವನು ನಾನು ಧರಿಸುತ್ತೇನೆ
ನನ್ನ ಹೃದಯದೊಳಗೆ ತುಂಬಿಕೊಳ್ಳುತ್ತೇನೆ
ನಿನ್ನ ಮೌನವನು...
ತಾರೆಗಳ ತುಂಬಿಕೊಂಡ ಬಾನು
ನಿನ್ನೆದುರು ತುಸು ಬಾಗಿ ಕಾಯುವಂತೆ
ಕದಲದೆ ಸಹನೆಯಿಂದ ಕಾಯುತ್ತೇನೆ ನಾನು
ಹೊಸಬೆಳಗು ಬಂದೇ ಬರುವುದು
ಕತ್ತಲೆಯ ತೆರೆ ಹರಿದು ಹೋಗುವುದು
ಹೊಮ್ಮುವ ಹೊನ್ನ ಕಿರಣಗಳೊಂದಿಗೆ
ನಿನ್ನ ದನಿಯೂ ತೇಲಿ ಬರುವುದು
ನನ್ನ ಗೂಡಿನ ಎಲ್ಲ ಹಕ್ಕಿಗಳ ರೆಕ್ಕೆ
ಪಡೆದ ನಿನ್ನ ದನಿ ಎತ್ತರಕೆ ಹಾರುವುದು
ಅಗೋ, ನೋಡಲ್ಲಿ ನನ್ನ ತೋಪಿನ
ಹೂಗಳ ತುಂಬೆಲ್ಲಾ ನಿನ್ನ ದನಿಯ ಮಾಧುರ್ಯ!
ಗೀತಾಂಜಲಿ-೭೮
ಸೃಷ್ಟಿಯ ಆರಂಭದ ದಿನ
ಎಲ್ಲ ತಾರೆಗಳೂ ಒಮ್ಮೆಲೆ
ಝಗ್ಗೆಂದು ಮಿನುಗಿದವು!
ಆಗಸದ ತಾರೆಗಳ ಸಭೆಕರೆದು
ಜಗನ್ನಿಯಾಮಕ ಹಾಡು ಹಾಡಿದ
"ಓ... ನನ್ನ ಜಗತ್ತೀಗ ಪರಿಪೂರ್ಣವಾಗಿದೆ
ಪರಿಶುದ್ಧ ಆನಂದ ಇಡೀ ಜಗವ ತುಂಬಿದೆ"
ಇದ್ದಕ್ಕಿದ್ದಂತೆ ಕೇಳಿಬಂತೊಂದು ಕೂಗು!
"ಅಗೋ, ಬೆಳಕಿನ ರೇಖೆ ತುಂಡಾಗಿದೆ
ಎಲ್ಲೋ ಒಂದು ತಾರೆಯ ಅವಸಾನವಾಗಿದೆ"
ಕಾಲದ ವೀಣೆಯ ಚಿನ್ನದ ತಂತಿ ತುಂಡಾಯಿತು
ಮಂಜುಳ ಗಾನವು ಮೌನಕ್ಕೆ ಜಾರಿತು
ಎಲ್ಲರೂ ನಿರಾಸೆಯಿಂದ ಹಾಡಿದರು
"ಹೌದು, ಘನ ನಕ್ಷತ್ರದ ಸಾವಾಗಿದೆ
ಸ್ವರ್ಗದ ಘನತೆಗೆ ಕುಂದಾಗಿದೆ"
ಅಂದಿನಿಂದಲೂ ಹುಡುಕುತ್ತಲೇ ಇದ್ದಾರೆ
ಕುಂದಿಲ್ಲದ ಜಗದ ಮಹದಾನಂದವನ್ನು
ಹುಡುಕಾಟ ತಲೆಮಾರುಗಳ ದಾಟುತ್ತಲೇ ಬಂದಿದೆ
ಇಡಿಯ ಲೋಕದ ತುಂಬೆಲ್ಲಾ ಚಾಚಿಕೊಂಡಿದೆ
ಜಗತ್ತು ನೆಮ್ಮದಿಯನ್ನು ಕಳಕೊಂಡಿದೆ
ಕಡುಗತ್ತಲೆಯ ನಿಶ್ಶಬ್ದ ಇರುಳಿನಲ್ಲಿ
ತಾರೆಗಳು ತಮ್ಮಲ್ಲಿಯೇ ಪಿಸುಗುಡುತ್ತವೆ
ತಾವೇ ಕಣ್ಣುಮಿಟುಕಿಸಿ ನಗುತ್ತವೆ
"ಬಿರುಕಿಲ್ಲದ ಪೂರ್ಣತೆಯ ಹುಡುಕಾಟ
ಆಹಾ! ಅದೆಷ್ಟು ವ್ಯರ್ಥ!"
[25/04, 00:44] : ಗೀತಾಂಜಲಿ -೨
ಹಾಡನೊಂದು ಹಾಡು ಎಂದು
ನೀನು ನನ್ನ ಕೇಳಿದಾಗ
ಎದೆಯ ತುಂಬ ಆನಂದರಾಗ
ತುಂಬಿಹೋಯ್ತು ಧನ್ಯತೆಯಲಿ
ಆಸೆಯಿಂದ ನಿನ್ನ ಮೊಗವ
ದಿಟ್ಟಿಸುವೆನು ನನ್ನ ದೊರೆಯೆ
ನಿರಾಸೆ ಮೋಡ ಕಳಚಿ ಕಣ್ಣ
ತುಂಬಿ ಬಂತು ಆನಂದಬಿಂದು
ಬಾಳ ದುಃಖ ದುಗುಡವೆಲ್ಲ
ಸಿಹಿಯ ರಾಗದಲ್ಲಿ ಕರಗಿ
ನಿನ್ನ ಆರಾಧನೆಯ ಸೊಲ್ಲು
ಹಕ್ಕಿ ರೆಕ್ಕೆಯಂತೆ ಒದಗಿ
ಬಾನಾಡಿಯಾಗಿ ಹಾರಿದೆನು
ಸ್ವಚ್ಛಂದ ಬಾನಿನಗಲದಿ
ನೀ ಬಯಸುವೆ ನನ್ನ ಗಾನ
ಎಂಬ ಮಾತೇ ಅಮೃತ ಸಮಾನ
ಹಾಡ ರೆಕ್ಕೆ ಧರಿಸಿ ನಾನು
ನಿನ್ನ ಪಾದ ಸೋಕುವೆನು
ನಿನ್ನ ಸೇರುವ ಬಯಕೆ ಸ್ವಪ್ನ
ನಿಜವಾದುದಿಂತು ಗಾನದಿಂದ
ಗಾನದಾನಂದವೆಂಬ
ಸೋಮರಸವ ಕುಡಿದೆ ದೇವ
ನನ್ನ ನಾನು ಮರೆತೆ ಹೋದೆ
ನಿನ್ನೊಡನೆ ನಾನು ಐಕ್ಯವಾದೆ
ನನ್ನ ದೇವನ ಚಿತ್ರಿಸಿರುವ
ಜಗದ ಸಿರಿಗೆ ಶರಣು ಎಂದೆ
[25/04, 01:07] :
ಗೀತಾಂಜಲಿ - ೩
ಎಂಥ ಮಧುರ ಸಂಗೀತ
ದೇವ ನಿನ್ನ ಎದೆಯ ಗೀತ
ಕೇಳಿದಾಗಲೆಲ್ಲ ನಾನು ಮೂಕವಿಸ್ಮಿತ!
ನಿನ್ನ ಗಾನದ ಬೆಳಕ ಪಡೆದು
ಇಡಿಯ ಜಗವು ಬೆಳಗುತಿಹುದು
ಹಲವು ಲೋಕಗಳನು ದಾಟಿ
ಗಾನಪ್ರವಾಹ ಹರಿಯುತಿಹುದು
ಎಡರು ತೊಡರುಗಳನು ಮೀರಿ
ದಿವ್ಯಗಾನ ಪ್ರವಹಿಸುವುದು
ಕೇಳಿದಾಗಲೆಲ್ಲ ನಾನು ಮೂಕವಿಸ್ಮಿತ!
ನನ್ನ ದನಿಯು ನಿನ್ನ ದನಿಗೆ
ಬೆರೆಯಬಯಸಿ ಹಾಡುತಿಹುದು
ಬರಿಯ ಮಾತು ಮಾತ್ರವಾಗಿ
ಹಾಡಾಗಲು ಸೋಲುತಿಹುದು
ನಿನ್ನ ಮಧುರ ಗಾನದ ಬಲೆ
ಯಲ್ಲಿ ಸಿಲುಕಿದ ಮೀನು ನಾನು
ನಿನ್ನ ಗಾನದೊಡನೆ ನನ್ನ ದನಿಯ ಸೇರಿಸು
ನಿನ್ನ ಹಾಡಿನಲ್ಲಿ ನನ್ನ ಲೀನವಾಗಿಸು
[27/04, 23:59] : ಗೀತಾಂಜಲಿ -೪
ಜಗದ ಆದಿ ಚೈತನ್ಯವೆ
ನಿನಗೆ ನನ್ನಯ ಪ್ರಾರ್ಥನೆ
ನಿನ್ನ ಅಮೃತ ಸ್ಪರ್ಶ ನನ್ನ
ಅಂಗಾಂಗಗಳ ಆವರಿಸಿದೆ
ಅದಕೆ ನನ್ನ ಇಡಿಯ ದೇಹವ
ನಿರ್ಮಲವಾಗಿಡಲು ಬಯಸುವೆ
ನನ್ನ ಮನದ ತುಂಬ ತುಂಬಿದೆ
ನಿನ್ನ ಸತ್ಯದ ಕರುಣೆ ಬೆಳಕು
ಅದಕೆ ಸುಳ್ಳಿನ ಸುಖದ ಬಯಕೆಯು
ನನ್ನ ಭಾವದ ಹೊರಗಿದೆ
ನನ್ನ ಹೃದಯದ ಆಳದಲ್ಲಿ
ನಿನ್ನ ಬಿಂಬವು ಹುದುಗಿದೆ
ಅದಕೆ ಎದೆಯ ಕೊಳೆಯನೆಲ್ಲ
ತೊಳೆದು ಹೂ ಗಂಧವ ಧರಿಸಿದೆ
ನನ್ನ ಈ ಚೈತನ್ಯವೆಲ್ಲ
ನಿನ್ನ ಕೊಡುಗೆಯು ಹೇ ಪ್ರಭು
ಅದಕೆ ನನ್ನ ಕಾರ್ಯದಲ್ಲಿ
ನೀನು ಸಾಕಾರಗೊಂಡಿಹೆ
[28/04, 00:53] : ಗೀತಾಂಜಲಿ -೫
ನಾನು ಕ್ಷಣದ ಬಯಕೆಯನು ನಿನ್ನೆದುರು ಹರಡಿ ಕುಳಿತಿರುವೆ
ಕಾಯುತ್ತಿರುವ ನೂರು ಕೆಲಸಗಳನ್ನು ಮುಗಿಸುವೆ ಮತ್ತೆ
ನಿನ್ನ ನೋಟದಿಂದ ಮರೆಯಾದ ಕ್ಷಣ
ನನ್ನ ಹೃದಯಕ್ಕಿಲ್ಲ ಒಂದಿನಿತೂ ನೆಮ್ಮದಿ, ವಿರಾಮ
ದಡವಿಲ್ಲದ ಶ್ರಮ ಸಾಗರದಂತೆ
ನನ್ನ ಕೆಲಸಗಳೆಲ್ಲವೂ ಮುಗಿಯದ ಪಾಡಾಗುತ್ತವೆ
ಇಂದು ಬೇಸಿಗೆ ನನ್ನ ಕಿಡಕಿಯಲ್ಲಿಣುಕುತ್ತಿದೆ
ಅದರ ನಿಟ್ಟುಸಿರು, ಗೊಣಗಾಟ ನನ್ನ ಕಲಕಿದೆ
ಹೂ ತೋಪಿನ ಒಡ್ಡೋಲಗದಲ್ಲಿ
ದುಂಬಿಗಳು ಅಲೆಮಾರಿಯ ಹಾಡು ಹಾಡುತ್ತಿವೆ
ನಿನ್ನೊಂದಿಗೆ ಮುಖಾಮುಖಿಯಾಗಿ ಕುಳಿತಿರುವೆ ಪ್ರಭುವೆ
ಗಾಢ ಮೌನವನು ಕ್ಷಣಗಳು ಹೊದ್ದುಕೊಂಡಿವೆ
ಉಕ್ಕಿ ಹರಿಯುವ ಈ ವಿರಾಮ ಕಾಲದಲ್ಲಿ
ಬದುಕ ಸಮರ್ಪಣೆಯ ಹಾಡ ಹಾಡಬೇಕಿದೆ
ಕಾಯುತ್ತಿರುವ ಕೆಲಸಗಳನ್ನೆಲ್ಲ ಮತ್ತೆ ಮುಗಿಸುವೆ
ಈ ಕ್ಷಣವನ್ನು ನಿನ್ನೆದುರು ಹರಡಿ ಕುಳಿತಿರುವೆ
[28/04, 01:13] : ಗೀತಾಂಜಲಿ -೬
ಕಿತ್ತುಬಿಡು ಈ ಹೂವನ್ನು, ಕೈಗೆತ್ತಿಕೋ, ತಡಮಾಡಬೇಡ
ವಾಲುತ್ತಿದೆ ನೋಡು ನೆಲದೆಡೆಗೆ, ಬೀಳುವ ಮುನ್ನ ಧೂಳಿನೊಳಗೆ, ಕೊಯ್ದುಬಿಡು ನೀನು
ಹೂಮಾಲೆಯಲಿ ಜಾಗವಿಲ್ಲದಿರಬಹುದು ಅದಕೆ
ನಿನ್ನ ಕೈಯ್ಯ ಸ್ಪರ್ಶಕ್ಕೆ ಹಂಬಲಿಸಿದೆ, ಕೊಯ್ದುಕೋ
ಸಮರ್ಪಣೆಯ ಸಮಯವೀಗ ಜಾರಿ ಹೋಗುತ್ತಿದೆ
ದಿನವು ಮುಗಿಯುವ ಮುನ್ನ ಕಿತ್ತುಬಿಡು ಹೂವನ್ನ
ಹೂ ಬಣ್ಣ ಅಷ್ಟೇನೂ ಗಾಢವಿಲ್ಲದಿರಬಹುದು
ಮೈ ಮರೆಸುವ ಸುಗಂಧವ ಚೆಲ್ಲದಿರಬಹುದು
ನಿನ್ನ ಸೇವೆಗೆಂದೇ ಅರಳಿದೆ ಈ ಹೂವು
ಸಮಯ ಉರುಳುವ ಮುನ್ನ ಕೊಯ್ದುಬಿಡು ಅದನ
[29/04, 22:46] : ಗೀತಾಂಜಲಿ - ೭
ನನ್ನ ಹಾಡು ತನ್ನೆಲ್ಲ ಬೆಡಗಿನ ಪೋಷಾಕು ಕಳಚಿದೆ
ಶೃಂಗಾರದ ಬೆರಗ ಹೆಮ್ಮೆಯ ಬದಿಗೆ ಸರಿಸಿದೆ
ಆಭರಣಗಳು ನಡುವೆ ಬಂದು ದೂರವಾಗಿಸಬಹುದು
ಅದರ ಸದ್ದು ನಮ್ಮ ಪಿಸುದನಿಯ ಕಸಿಯಬಹುದು
ನಿನ್ನೆದುರು ನನ್ನ ಕವಿತನದ ವೈಯ್ಯಾರ ನಾಚಿ ಅಳಿಯಿತು
ಓ ಜಗದ ಕವಿಯೆ, ನಿನ್ನೆದುರು ನನ್ನ ಶಿರವು ಮಣಿಯಿತು
ಮಧುರಗಾನ ಮಿಡಿವ ನಿನ್ನ ಕೊಳಲ ರಂಧ್ರದಂತೆ
ನೇರ, ಸರಳವಿರಿಸು ನನ್ನ ಬದುಕ ಬೇಡಿಕೊಂಬೆ
[29/04, 23:18] : ಗೀತಾಂಜಲಿ - ೮
ಮುದ್ದು ಮಗುವಿಗಿಲ್ಲಿ ರಾಜಕುಮಾರನ ಪೋಷಾಕು ತೊಡಿಸಲಾಗಿದೆ
ಚಿನ್ನದ ಕಂಠೀಹಾರ ತರಳನ ಕೊರಳ ಬಳಸಿದೆ
ಹೆಜ್ಜೆಯಿಡಲೂ ಅಡ್ಡಿಪಡಿಸುತ್ತಿದೆ ಈ ಪೋಷಾಕು
ಬಾಲ್ಯದಾಟದ ಖುಶಿಯ ಕಳಕೊಂಡಿದೆ ಬದುಕು
ಝರಿಯಂಚು ಹರಿದೀತೆಂಬ ಭಯ
ಅಂಗಿ ಕೊಳೆಯಾದೀತೆಂಬ ಆತಂಕ
ಸಹಜ ಬದುಕಿನ ಕೊಂಡಿ ಕಳಚಿದೆ
ಭಯದ ನೆರಳಲ್ಲಿ ಹೆಜ್ಜೆ ಹಿಂಜರಿದಿದೆ
ಅಮ್ಮಾ, ಇವೆಲ್ಲವೂ ವ್ಯರ್ಥ ಸಾಹಸಗಳು
ನಿನ್ನ ಅತಿಪ್ರೀತಿ ಉಸಿರುಗಟ್ಟಿಸುವುದು ಕೇಳು
ಕಳೆದುಹೋಗಿದೆ ಬೆಳವಣಿಗೆಯ ಸಹಜ ಮಜಲುಗಳು
ಕಳೆದುಹೋಗುತ್ತವೆ ನೈಜ ಬದುಕಿನ ಸುಖಗಳು
ಗೀತಾಂಜಲಿ - ೯
ಮೂರ್ಖನೇ,
ನಿನ್ನ ಶಿಲುಬೆಯನು ನೀನೇ ಹೊತ್ತು ನಡೆದುಬಿಡು
ಓ ಭಿಕ್ಷುಕನೇ,
ನಿನ್ನ ಮನೆಯಂಗಳದಲ್ಲೇ ನಿಂತು ಭಿಕ್ಷೆ ಬೇಡು
ನಿಮ್ಮ ಎಲ್ಲ ದುಗುಡಗಳನ್ನೂ ಅವನ ಕೈಯ್ಯಲ್ಲಿಟ್ಟುಬಿಡಿ
ಎಂದಿಗೂ ವಿಷಾದದಿಂದ ಹಿಂದಿರುಗಿ ನೋಡದಿರಿ
ಆಸೆಗಳ ನಿಟ್ಟುಸಿರು ದಾರಿ ಬೆಳಗುವ ದೀಪವನ್ನಾರಿಸುತಿದೆ
ಅಶುದ್ಧ ಕೈಗಳಿಂದ ಪವಿತ್ರ ಉಡುಗೊರೆಗಳನ್ನು ಸ್ವೀಕರಿಸಲಾದು
ಗೀತಾಂಜಲಿ - ೧೨
ದೀರ್ಘಕಾಲದ ಪಯಣ ನನ್ನದು: ದಾರಿಯೂ ಅಷ್ಟೇ ದೀರ್ಘವಾಗಿದೆ
ಮೊದಲ ಬೆಳಕಿನ ಪುಂಜದ ರಥವನ್ನೇರಿ ಹೊರಟಿರುವೆ
ಭೂಮ್ಯಾಕಾಶದ ಮೇರೆ ಮೀರಿ ಚಲಿಸುತ್ತಿರುವೆ
ಎಲ್ಲ ತಾರೆ, ಗ್ರಹಗಳ ಮೇಲಿವೆ ನನ್ನ ಹೆಜ್ಜೆಗುರುತು!
ನಿನ್ನೆಡೆಗೆ ಬರುವ ದಾರಿಯೇ ಹಾಗೆ; ದೀರ್ಘ, ಸಂಕೀರ್ಣ
ರಾಗವನು ಅತಿ ಸರಳಗೊಳಿಸಿ ಹಾಡಿದ ಹಾಗೆ
ಎಲ್ಲ ಪರಕೀಯರ ಮನೆಯ ಬಾಗಿಲು ತಟ್ಟಬೇಕು
ನಮ್ಮ ಮನೆಯ ನಾವು ಕಂಡುಕೊಳಲು
ಜಗದ ಸೀಮೆಯನ್ನೆಲ್ಲ ದಾಟಿ ಬರಬೇಕು
ಒಳಗಿನರಿವಿನ ಬೆಳಕ ಸೇರಿಕೊಳಲು
ನನ್ನ ಕಣ್ಣುಗಳ ನೋಟ ದೂರ, ವಿಶಾಲ ಜಗದೆಡೆಗಿತ್ತು
ಕಣ್ಣು ಮುಚ್ಚಿ ಧ್ಯಾನಿಸಿದೆ; ಹೇಳಿದೆ "ಓ ನೀನಿಲ್ಲಿರುವೆ!"
"ಅರೆ! ಎಲ್ಲಿ?" ಪ್ರಶ್ನೆಯ ಕೂಗು ಕರಗಿತು
ಸಾವಿರ ಕಣ್ಣುಗಳ ಆನಂದಾಶ್ರುಗಳಲಿ
ಭರವಸೆಯ ಪ್ರವಾಹ ತೇಲಿಬರುತ್ತಿದೆ "ನಾನಿರುವೆ ಇಲ್ಲಿ!"
ಗೀತಾಂಜಲಿ -೫೯
ಹೌದು, ಇದು ಬರಿಯ ಬೆಳಗಲ್ಲ
ಬೇರೇನೂ ಅಲ್ಲ, ನಿನ್ನ ಪ್ರೀತಿಯ ಹೊರತು
ಈ ಎಲೆಗಳ ಮೇಲೆ ಹೊಳೆವಹೊನ್ನ ಕಿರಣ
ಆಕಾಶದಲ್ಲಿ ತೇಲುತ್ತಿರುವ ಮೋಡಗಳ ತೋರಣ
ನನ್ನ ಮುಖವ ಸೋಕುವ ಈ ತಂಪು ಗಾಳಿ
ಬರಿಯ ಬೆಳಗಲ್ಲವಿದು, ನಿನ್ನ ಅದಮ್ಯ ಪ್ರೀತಿ!
ಬೆಳಗಿನ ಬೆಳಕು ನನ್ನ ಕಣ್ತುಂಬಿದೆ
ನಿನ್ನ ಸಂದೇಶವನು ನನ್ನೆದೆಗೆ ದಾಟಿಸಿವೆ
ನಿನ್ನ ಮೊಗವೀಗ ನನ್ನೆಡೆಗೆ ಚಾಚಿದೆ
ನಿನ್ನ ಕಣ್ಣುಗಳು ನನ್ನ ಕಣ್ಣುಗಳ ದಿಟ್ಟಿಸಿವೆ
ನನ್ನ ಹೃದಯವೀಗ ನಿನ್ನ ಪಾದಗಳ ತಾಕಿದೆ
ಮತ್ತಿದು ಬರಿಯ ಬೆಳಗಲ್ಲ, ನಿನ್ನ ಪ್ರೀತಿಯ ಹೊರತು
ಗೀತಾಂಜಲಿ - ೧೪
ನೂರಾರು ಆಸೆಗಳು ನನಗೆ
ಅದಕೆಂದೇ ಗೋಳಿಡುವೆ ಪ್ರತಿದಿನವೂ
ಮತ್ತೆ ನೀನು?
ಪ್ರತಿಸಲವೂ ನಿರಾಕರಣೆಯೆಂಬ ಸುತ್ತಿಗೆಯಲಿ
ಬಡಿದು ಹದವಾಗಿಸುತ್ತಿರುವೆ ದಿನವೂ
ನನ್ನ ಸರಳಗೊಳಿಸುತ್ತಿರುವೆ ದಿನ ದಿನವೂ
ನಿನ್ನ ನಂಬಿಗಸ್ತನಾಗಿಸಲು
ಈ ಆಗಸ, ಬೆಳಕು ನಿನ್ನದೇ ಕೊಡುಗೆ
ಕೇಳದೆಯೂ ನನಗದನು ನೀ ನೀಡಿರುವೆ
ಅಂತೆಯೇ ಈ ದೇಹ, ಜೀವನ, ಮನಸ್ಸುಗಳನೂ
ಆದರೆ...
ಅತೀವ ಬಯಕೆಯ ಅಪಾಯದಿಂದ
ನನ್ನನ್ನು ರಕ್ಷಿಸಿರುವೆ ಪ್ರತಿಬಾರಿಯೂ
ನಾನು ದಣಿದು ಕಾಲಹರಣ ಮಾಡುವಾಗಲೂ
ಎಚ್ಚರಗೊಂಡು ಗುರಿಯ ಬೆನ್ನತ್ತಿದಾಗಲೂ
ನೀನು ಎದುರು ಬಾರದೇ ಅಡಗಿ ಕುಳಿತು
ಕ್ರೂರವಾಗಿಯೇ ವರ್ತಿಸಿರುವೆ
ನನ್ನನ್ನೂ ಎಂದೆಂದಿಗೂ ನಿರಾಕರಿಸಿ
ದುರ್ಬಲ ಅಶಾಶ್ವತ ಆಸೆಗಳಿಂದ ಮುಕ್ತಗೊಳಿಸಿ
ದಿನದಿಂದ ದಿನಕ್ಕೆ ನಂಬಿಗಸ್ತನನ್ನಾಗಿಸಿರುವೆ ನೀನು
ಗೀತಾಂಜಲಿ -೧೬
ಈ ಜಗದ ಉತ್ಸವಕೆ ನನ್ನನ್ನು ಆಹ್ವಾನಿಸಿರುವೆ
ಪ್ರಭುವೇ, ನಾನು ನಿಜಕ್ಕೂ ಆಶೀರ್ವದಿಸಲ್ಪಟ್ಟುವೆ
ನನ್ನ ಕಣ್ಣಗಳಿಗೀಗ ದಿವ್ಯ ಕಾಣ್ಕೆ
ನನ್ನ ಕಿವಿಗಳಿಗೆ ಶ್ರಾವ್ಯ ಯೋಗ
ನನ್ನ ತಂಬೂರಿಯನು ಶ್ರತಿಗೊಳಿಸುತ್ತಿರುವೆ
ಈ ಉತ್ಸವದಲ್ಲಿ ನನಗೂ ಸ್ಥಾನವಿದೆ
ನನ್ನಿಂದಾಗುವ ಎಲ್ಲವನ್ನೂ ಮಾಡಬೇಕಿದೆ
ಈಗ ನಾನು ಕೇಳಿಕೊಳ್ಲಕುತ್ತಿದ್ದೇನೆ
ನನ್ನ ಕೊನೆಗಾಲದಲ್ಲಿ ನಿನ್ನ ದರ್ಶನವಾಗಬಹುದೆ?
ನನ್ನ ಮೌನ ಪ್ರಾರ್ಥನೆ ನಿನ್ನ ತಲುಪಬಹುದೆ?
ಗೀತಾಂಜಲಿ - ೧೭
ನಾನು ಪ್ರೀತಿಗಾಗಿ ಮಾತ್ರವೇ ಕಾಯುತ್ತಿದ್ದೇನೆ
ಅಂತಿಮವಾಗಿ ನನ್ನ ನಾನೇ ಅರ್ಪಿಸಿಕೊಳ್ಳಲು
ಅದಕ್ಕೆಂದೇ ಇಷ್ಟು ನಿಧಾನಿಸುತ್ತಿದ್ದೇನೆ
ನನ್ನ ಲೋಪಗಳ ಬಗ್ಗೆ ಪಶ್ಚಾತ್ತಾಪವಿದೆ
ಅವರು ನನ್ನ ಬಂಧಿಸಲು ಬರುತ್ತಾರೆ
ತಮ್ಮ ಕಾನೂನು ಕಟ್ಟಳೆಗಳ ಹತಿಯಾರದೊಂದಿಗೆ
ನಾನು ಸದಾ ತಪ್ಪಿಸಿಕೊಂಡೇ ತಿರುಗುತ್ತೇನೆ
ನಾನು ಪ್ರೀತಿಗಾಗಿಯೇ ಕಾಯುತ್ತಿದ್ದೇನೆ
ಅಂತಿಮವಾಗಿ ಅದರ ತೋಳಿನಲ್ಲಿರಲು
ನನ್ನ ಅಜಾಗರೂಕತೆಗಾಗಿ ಜನರು ಶಪಿಸುತ್ತಾರೆ
ಅವರ ಬೈಗುಳದಲ್ಲಿ ಸತ್ಯವಿದೆಯೆಂದು ನನಗನಿಸುವುದಿಲ್ಲ
ಸಂತೆ ಮುಗಿದಿದೆ ಮತ್ತು ಕೆಲಸವೂ ಅವಸರದಲ್ಲಿ
ನನ್ನ ಕರೆಯಬಂದವರು ಕೋಪದಿಂದ ಹಿಂದಿರುಗಿದ್ದಾರೆ
ನಾನು ಬರಿಯ ಪ್ರೀತಿಗಾಗಿ ಕಾಯುತ್ತಿದ್ದೇನೆ
ಅಂತಿಮವಾಗಿ ಪ್ರೀತಿಯ ಬಂಧಿಯಾಗಲು
ಗೀತಾಂಜಲಿ - ೧೮
ದಟ್ಟ ಕಾರ್ಮೋಡ ಕವಿಯುತ್ತಿದೆ
ಸುತ್ತ ಕತ್ತಲೆ ಮುಸುಕುತ್ತಿದೆ
ಓ ಪ್ರೀತಿಯೇ,
ಯಾಕೆ ನನ್ನನ್ನಿನ್ನೂ ಬಾಗಿಲ ಬಳಿಯೇ
ಒಂಟಿಯಾಗಿ ಕಾಯುವಂತೆ ಮಾಡುತ್ತಿರುವೆ?
ದಿನದ ದಂದುಗದ ಒತ್ತಡದ ಗಳಿಗೆಗಳಲ್ಲಿ
ನಾನು ಜನಸಂದಣಿಯಲ್ಲಿ ಕಳೆದುಹೋಗುತ್ತೇನೆ
ಈ ಒಂಟಿತನದ ಕತ್ತಲ ರಾತ್ರಿಯಲಿ
ನಿನ್ನ ಸಂಗಾತಕ್ಕಾಗಿ ಎಚ್ಚರವಿದ್ದು ಕಾಯುತ್ತೇನೆ
ನಿನ್ನ ಮುಖದರ್ಶನದ ಭಾಗ್ಯವಿಲ್ಲದಿದ್ದರೆ
ನಿನೇ ನಿರ್ಲಕ್ಷದಿಂದ ಬದಿಗೆ ಸರಿಸಿದರೆ
ಈ ದೀರ್ಘಮಳೆರಾತ್ರಿಗಳನು ಒಂಟಿಯಾಗಿ
ಹೇಗೆ ಕಳೆಯುವುದೆಂದು ತಿಳಿಯೆ ನಾನು
ದೂರ ದಿಗಂತದೆಡೆಗೆ ನನ್ನ ದೃಷ್ಟಿ ಹರಿಸುತ್ತೇನೆ
ಸುಳಿದಾಡುವ ಗಾಳಿಯಂತೆ ಹೃದಯವೀಗ ಹೊಯ್ದಾಡುತ್ತಿದೆ
[14/05, 11:26] : ಗೀತಾಂಜಲಿ -೨೦
ಆಹಾ! ಕಮಲವೊಂದು ಅರಳಿದ ಆ ದಿನ
ಯಾಕೋ ಅರಿಯೆ, ನನ್ನ ಮನಸ್ಸು ದಾರಿ ತಪ್ಪಿತು
ನನ್ನ ಹೂದಾನಿ ಖಾಲಿಯಾಗಿತ್ತು ಮತ್ತು
ಹೂವು ಗಮನಕ್ಕೆ ಬಾರದೇ ಉಳಿಯಿತು
ಆಗೀಗ ಬೇಸರದ ಛಾಯೆ ಮುಸುಕಿದಾಗ
ನಾನು ಕನಸುಗಳ ಬೆಂಬತ್ತಿ ಹೊರಟೆ
ದಕ್ಷಿಣದ ಗಾಳಿಯಲಿ ವಿಚಿತ್ರ ಮಾಧುರ್ಯದ ಸೆಳೆತವಿತ್ತು
ದೀರ್ಘಕಾಲದ ಅಸ್ಪಷ್ಟ ಮಾಧುರ್ಯ
ನನ್ನ ಹೃದಯವನ್ನು ನೋಯಿಸಿತು
ಉತ್ಸಾಹೀ ಬೇಸಗೆಯ ಉಸಿರು ಪೂರ್ಣಗೊಳ್ಳಲು ಹಪಹಪಿಸುತ್ತಿತ್ತು
ನನಗೆ ತಿಳಿದಿರಲಿಲ್ಲ ಮಾಧುರ್ಯ ಎಲ್ಲಿದೆಯೆಂದು
ಅದು ಅಷ್ಟು ಹತ್ತಿರದಲ್ಲಿತ್ತು, ನನ್ನೊಳಗೇ
ನನ್ನ ಹೃದಯದಾಳದಿಂದಲೇ ಅರಳಿ ಬಂದಿತ್ತು
[14/05, 11:36] : ಗೀತಾಂಜಲಿ -೨೧
ವಸಂತ ಅದಾಗಲೇ ಹೂವನರಳಿಸೊದ್ದ
ಎಲೆಗಳ ತೆರಿಗೆ ಪಡೆದುಕೊಂಡು
ಪಕಳೆಯುದುರಿದ ಹೂಗಳ ನಿರರ್ಥಕತೆಯ ಧರಿಸಿ
ನಾನು ಕಾಯುತ್ತಿದ್ದೆ ಲಂಗರು ಹಿಡಿದುಕೊಂಡು
ನಾನು ನನ್ನ ನಾವೆಯನ್ನು ನಡೆಸಬೇಕಿತ್ತು
ನಿರರ್ಥಕ ಘಳಿಗೆಗಳು ದಾಟಿ ಹೋಗುತ್ತಿದ್ದವು
ಓಹ್! ಅವೆಲ್ಲವೂ ನನ್ನದಾಗಿದ್ದವು!
ಅಲೆಗಳ ಅಬ್ಬರ ಜೋರಾಗಿಯೇ ಇತ್ತು
ನೆರಳಿನ ದಂಡೆಯಲಿ ಹಳದಿ ಎಲೆಗಳಿದ್ದವು
ಅದುರುತ್ತಿದ್ದವು ಮತ್ತು ಉದುರುತ್ತಿದ್ದವು
ಯಾವ ಖಾಲಿತನವನ್ನು ಎದುರು ನೋಡುತ್ತಿರುವೆ?
ಆಚೆಯ ದಡದಿಂದ ಬೀಸಿ ಬರುತ್ತಿರುವ
ಗಾಳಿಯೊಂದಿಗೆ ತೇಲಿಬಂದ ಗಾನದೊಳಗೆ
ಮುಳಿಗಿಹೋಗುವುದು ರೋಮಾಂಚಕವೆನಿಸುತ್ತಿಲ್ಲವೆ ನಿನಗೆ?
[14/05, 11:41] : ಗೀತಾಂಜಲಿ -೨೨
ಜುಲೈ ತಿಂಗಳ ಮಳೆಯ ರಾತ್ರಿಗಳಲ್ಲಿ
ನಿನ್ನ ರಹಸ್ಯ ಹೆಜ್ಜೆಗಳು
ರಾತ್ರಿಯಷ್ಟೇ ಮೌನವಾಗಿ
ವೀಕ್ಷಕರ ಕಣ್ಣು ತಪ್ಪಿಸಿ ಚಲಿಸುತ್ತವೆ
ಇಂದಿನ ಬೆಳಗು ಕಣ್ಣುಗಳನ್ನು ಮುಚ್ಚಿಕೊಂಡಿದೆ
ಪೂರ್ವದ ಗಾಳಿಯ ಕರೆಯು ಭೋರ್ಗರೆಯುತ್ತಿದೆ!
ಸದಾ ಎಚ್ಚರವಿರುವ ನೀಲಿಯ ಆಗಸಕ್ಕೆ
ಗಾಢವಾದ ಮುಸುಕನ್ನು ಎಳೆಯಲಾಗಿದೆ
ಕಾಡುಗಳು ಎದೆಯ ಹಾಡುಗಳನ್ನು ಅಡಗಿಸಿವೆ
ಎಲ್ಲರ ಮನೆಯ ಬಾಗಿಲುಗಳೂ ಮುಚ್ಚಿವೆ
ನಿರ್ಜನವಾದ ಓಣಿಯಲ್ಲಿ ನೀನೊಬ್ಬನೇ ಪಥಿಕ
ಓ ನನ್ನ ಒಬ್ಬನೇ ಗೆಳೆಯನೇ, ಪರಮಾಪ್ತ ಸ್ನೇಹಿತನೇ,
ನನ್ನ ಮನೆಯ ಬಾಗಿಲುಗಳು ತೆರೆದೇ ಇವೆ
ಕನಸಿನಂತೆ ಸುಳಿದು ಹೋಗಬೇಡ
ಸೃಷ್ಟಿಯ ಆರಂಭದ ದಿನ
ಎಲ್ಲ ತಾರೆಗಳೂ ಒಮ್ಮೆಲೆ
ಝಗ್ಗೆಂದು ಮಿನುಗಿದವು!
ಆಗಸದ ತಾರೆಗಳ ಸಭೆಕರೆದು
ಜಗನ್ನಿಯಾಮಕ ಹಾಡು ಹಾಡಿದ
"ಓ... ನನ್ನ ಜಗತ್ತೀಗ ಪರಿಪೂರ್ಣವಾಗಿದೆ
ಪರಿಶುದ್ಧ ಆನಂದ ಇಡೀ ಜಗವ ತುಂಬಿದೆ"
ಇದ್ದಕ್ಕಿದ್ದಂತೆ ಕೇಳಿಬಂತೊಂದು ಕೂಗು!
"ಅಗೋ, ಬೆಳಕಿನ ರೇಖೆ ತುಂಡಾಗಿದೆ
ಎಲ್ಲೋ ಒಂದು ತಾರೆಯ ಅವಸಾನವಾಗಿದೆ"
ಕಾಲದ ವೀಣೆಯ ಚಿನ್ನದ ತಂತಿ ತುಂಡಾಯಿತು
ಮಂಜುಳ ಗಾನವು ಮೌನಕ್ಕೆ ಜಾರಿತು
ಎಲ್ಲರೂ ನಿರಾಸೆಯಿಂದ ಹಾಡಿದರು
"ಹೌದು, ಘನ ನಕ್ಷತ್ರದ ಸಾವಾಗಿದೆ
ಸ್ವರ್ಗದ ಘನತೆಗೆ ಕುಂದಾಗಿದೆ"
ಅಂದಿನಿಂದಲೂ ಹುಡುಕುತ್ತಲೇ ಇದ್ದಾರೆ
ಕುಂದಿಲ್ಲದ ಜಗದ ಮಹದಾನಂದವನ್ನು
ಹುಡುಕಾಟ ತಲೆಮಾರುಗಳ ದಾಟುತ್ತಲೇ ಬಂದಿದೆ
ಇಡಿಯ ಲೋಕದ ತುಂಬೆಲ್ಲಾ ಚಾಚಿಕೊಂಡಿದೆ
ಜಗತ್ತು ನೆಮ್ಮದಿಯನ್ನು ಕಳಕೊಂಡಿದೆ
ಕಡುಗತ್ತಲೆಯ ನಿಶ್ಶಬ್ದ ಇರುಳಿನಲ್ಲಿ
ತಾರೆಗಳು ತಮ್ಮಲ್ಲಿಯೇ ಪಿಸುಗುಡುತ್ತವೆ
ತಾವೇ ಕಣ್ಣುಮಿಟುಕಿಸಿ ನಗುತ್ತವೆ
"ಬಿರುಕಿಲ್ಲದ ಪೂರ್ಣತೆಯ ಹುಡುಕಾಟ
ಆಹಾ! ಅದೆಷ್ಟು ವ್ಯರ್ಥ!"
ರವೀಂದ್ರನಾಥ ಟ್ಯಾಗೋರ್
ಗೀತಾಂಜಲಿ ೭೮
No comments:
Post a Comment