Thursday, May 19, 2022

ಹಳ್ಳಿಗಳ ಆತ್ಮಕಥನ ಬರೆಯುತ್ತಿರುವ ಪಿ. ಸಾಯಿನಾಥ

ಮಾಧ್ಯಮವೆಂದರೆ ಟಿ. ಆರ್. ಪಿ. ಎಂದು ಎಲ್ಲರೂ ನಂಬುತ್ತಿರುವಾಗ ಇವರು ಮಾಧ್ಯಮವೆಂದರೆ ಬಹುಜನರ ನೈಜಬದುಕನ್ನು ಅರ್ಥಮಾಡಿಕೊಳ್ಳುವುದು ಎಂದರು. ರಾಜಕಾರಣಿಗಳ ವಿಚಾರಗಳನ್ನು, ವಿವರಗಳನ್ನು ಜನರಿಗೆ ತಿಳಿಸುವುದೇ ಪತ್ರಿಕೋದ್ಯಮ ಎಂದಾಗ ಇವರು ಭಾರತದ ಅದ್ಯಾವುದೋ ಹಳ್ಳಿಯ ಮೂಲೆಯ ಜನರ ತಲ್ಲಣವನ್ನು ರಾಜಕಾರಣಿಗಳಿಗೆ ಕೇಳಿಸುವ ಧಾವಂತದಲ್ಲಿದ್ದರು. ಪ್ರಸಿದ್ಧ ಪತ್ರಕರ್ತರೆಲ್ಲಾ ನಗರದಲ್ಲಿ ಸ್ಥಿರವಾಗಲು ಯತ್ನಿಸುತ್ತಿರುವಾಗ ಇವರು ನಗರಕ್ಕೆ ಬೆನ್ನು ತಿರುಗಿಸಿ ಗ್ರಾಮಭಾರತದೆಡೆಗೆ ಮುಖಮಾಡಿದರು. ಬರವೆಂದರೆ ಜನರಿಗೆ ಕಷ್ಟ ಎಂದು ಹಾಡಿದ ರಾಗವನ್ನೇ ವರದಿಗಾರರು ಹಾಡುತ್ತಿದ್ದಾಗ ಬರದ ನಾಡಿನ ಬಹು ಆಯಾಮಗಳನ್ನು ಸಂಗ್ರಹಿಸಿ  'ಬರ ಅಂದ್ರೆ ಎಲ್ಲರಿಗೂ ಇಷ್ಟ' ಎಂಬ ಅದ್ಭುತ ಪುಸ್ತಕವನ್ನು ಬರೆದು ಎಲ್ಲರ ಹುಬ್ಬೇರುವಂತೆ ಮಾಡಿದರು. ಪಿ. ಸಾಯಿನಾಥ ಎಂಬ ಪತ್ರಕರ್ತರೊಬ್ಬರ ಸಾಹಸಯಾನವಿದು.

ಭಾರತದ ರಾಷ್ರ್ಟಾಧ್ಯಕ್ಷರಾಗಿದ್ದ ವಿ.ವಿ.ಗಿರಿಯವರ ಮೊಮ್ಮಗನಾದ ಸಾಯಿನಾಥ ಅವರು ಜನಿಸಿದ್ದು 1957ರಲ್ಲಿ, ಮದ್ರಾಸಿನಲ್ಲಿ. ಚೆನ್ನೈನ ಲೊಯೋಲಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ ಅವರು ದೆಹಲಿಯ ಜೆ. ಎನ್ ಯು. ಕಾಲೇಜಿನಲ್ಲಿ ಇತಿಹಾಸವನ್ನು ಅಭ್ಯಾಸ ಮಾಡಿದರು. ಯಾವುದೋ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಳೆದುಹೋಗಬಹುದಾದ ಅವರು ಆಕಸ್ಮಿಕವಾಗಿ ಪತ್ರಿಕೋದ್ಯಮದ ಕಡೆಗೆ ಹೊರಳಿದರು. ಯು.ಎನ್. ಐ. ಸುದ್ಧಿ ಸಂಸ್ತೆ ಹಾಗೂ ದ ಡೈಲಿ ಪತ್ರಿಕೆಯ ವಿದೇಶ ಸಂಪಾದಕರಾಗಿ ಕೆಲಸ ಮಾಡಿದರು. ಗೆಳೆಯ ಸುಧೀಂದ್ರ ಕುಲಕರ್ಣಿಯವರೊಂದಿಗೆ ಸೇರಿ ಜಗತ್ತಿನ ಮಾಧ್ಯಮಗಳ ಹುಳುಕುಗಳನ್ನು ಬಯಲಿಗೆಳೆಯುವ 'ಕೌಂಟರ್ ಮೀಡಿಯಾ' ಎಂಬ ಪತ್ರಿಕೆಯನ್ನೂ ಕೆಲಕಾಲ ಹೊರತಂದರು. 'ಬ್ಲಿಟ್ಸ್' ಪತ್ರಿಕೆಯ ಉಪಸಂಪಾದಕರಾಗಿಯೂ ಕೆಲಸ ನಿರ್ವಹಿಸಿದರು. ಆಗಲೇ ದೇಶದ ಹತ್ತು ರಾಜ್ಯಗಳು ಭೀಕರ ಬರದ ದವಡೆಗೆ ಸಿಕ್ಕಿ ನರಳುತ್ತಿದ್ದವು. ಸಾಯಿನಾಥ ಅವರಿಗೆ ತನ್ನ ಕೆಲಸವಿರುವುದು ಅಂತಹ ಜಾಗದಲ್ಲಿ ಅನಿಸತೊಡಗಿತು. 'ಬ್ಲಿಟ್ಸ್' ಗೆ ರಾಜೀನಾಮೆ ರವಾನಿಸಿ ಹಳ್ಳಿಗಳೆಡೆಗೆ ಹೊರಟೇಬಿಟ್ಟರು. ಹತ್ತು ವರ್ಷಗಳ ಪತ್ರಿಕೋದ್ಯಮದ ಅನುಭವದಲ್ಲಿ ಅವರಿಗೆ ತೀವ್ರವಾಗಿ ಅನಿಸಿದ್ದೆಂದರೆ ಭಾರತದ ಮೂರನೇ ಎರಡರಷ್ಟಿರುವ ಗ್ರಾಮೀಣ ಭಾರತವನ್ನು ಯಾವ ಮಾಧ್ಯಮಗಳೂ ಸ್ಪರ್ಶಿಸುತ್ತಿಲ್ಲವೆಂಬ ಕಹಿಸತ್ಯ. ಟೈಮ್ಸ್ ಆಫ್ ಇಂಡಿಯಾದ ಫೆಲೋಶಿಪ್ ಪಡೆದ ಅವರು ಗ್ರಾಮಭಾರತದಲ್ಲಿ ಸುಮಾರು ಒಂದು ಲಕ್ಷ ಕಿ. ಮೀ. ದೂರವನ್ನು 16 ವಿವಿಧ ಸಾರಿಗೆ ವ್ಯವಸ್ಥೆಯ ಮೂಲಕ ಮತ್ತು 5,000ಕಿ. ಮೀ. ದೂರವನ್ನು ಕಾಲ್ನಡಿಯಿಂದ ಕ್ರಮಿಸಿದರು. ಗ್ರಾಮಭಾರತದ ಆತ್ಮಕಥನವನ್ನು ಹೊರಜಗತ್ತಿಗೆ ಬಗೆದು ತೋರಿದರು. ಅಲ್ಲಿ ವಲಸೆಯ ತಲ್ಲಣಗಳು, ದಲಿತರ ಸಂಕಷ್ಟ, ಆದಿವಾಸಿಗಳ ತಲ್ಲಣ, ಪ್ರಕೃತಿಪ್ರೇಮ, ಕೂಲಿಗಳ ಶೋಷಣೆ, ಹೆಣ್ಣುಗಳ ಗಟ್ಟಿತನ, ಉಳ್ಳವರ ದರ್ಪ, ಆಳುವವರ ವಂಚನೆ ಹೀಗೆ ಚಿತ್ರವಿಚಿತ್ರ ಕಥಾನಕಗಳಿದ್ದವು. ಹಾಗೆ ಬರೆದ ಕಥೆಗಳನ್ನೆಲ್ಲ ಒಂದುಗೂಡಿಸಿ 'ಎವರಿಬಡಿ ಲವ್ಸ್ ಅ ಗುಡ್ ಡ್ರಾಟ್' ಎನ್ನುವ ಪುಸ್ತಕವನ್ನು ಬರೆದರು. ಈ ಅಪೂರ್ವ ಕೆಲಸಕ್ಕಾಗಿ ಅವರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ದೊರೆಯಿತು. ನಲವತ್ತಕ್ಕಿಂತ ಹೆಚ್ಚು ಮುದ್ರಣಗಳನ್ನು ಕಂಡ ಈ ಪುಸ್ತಕ ಭಾರತದ ಹತ್ತಕ್ಕಿಂತಲೂ ಹೆಚ್ಚು ಭಾಷೆಗೆ ಅನುವಾದಗೊಂಡಿದೆ. ಭಾರತದ ನಕಾಶೆಯಲ್ಲಿ ಮಾತ್ರವೇ ಇದ್ದ ಹಳ್ಳಿಗಳಿಗೆ ಪ್ರಧಾನಿಯೂ ಸೇರಿದಂತೆ ರಾಜಕಾರಣಿಗಳು ಭೇಟಿಕೊಡುವಂತಾಯಿತು. ತಮಿಳುನಾಡು, ಓರಿಸ್ಸಾ ಮೊದಲಾದ ರಾಜ್ಯಗಳು ತಮ್ಮ ಆಡಳಿತ ಪಾಲಿಸಿಗಳಲ್ಲಿ ಅವರ ಕ್ಷೇತ್ರಕಾರ್ಯಗಳ ಫಲಿತವನ್ನು ಅಳವಡಿಸಿಕೊಳ್ಳುವಂತಾಯಿತು. ಈ ಪುಸ್ತಕವನ್ನು ಜಿ. ಎನ್. ಮೋಹನ್ ಅವರು 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಸಾಯಿನಾಥ ಕೇವಲ ಹಳ್ಳಿಗಳ ಬಗ್ಗೆ ಮಾತ್ರವೇ ಚಿಂತಿಸಿದವರಲ್ಲ. ಹಳ್ಗಳಿಳಿಂದ ಹೊರತಳ್ಳಲ್ಪಟ್ಟ ದಲಿತರ ಬಗ್ಗೆ 'ದಿ ಹಿಂದೂ' ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಬರೆದರು. ಎಲೈಟ್ ನೋಟದ ನಗರಕೇಂದ್ರಿತ ಪತ್ರಕರ್ತರಿಗೆ ಗ್ರಾಮಭಾರತವನ್ನು ನೋಡಬೇಕಾದ ಪರಿಕ್ರಮಗಳ ಬಗ್ಗೆ ಹೇಳಿಕೊಟ್ಟರು. ಹಾಗೆ ನೋಡುವ ಯುವ ಪತ್ರಕರ್ತರ ಪಡೆಯನ್ನೇ ತನ್ನೊಂದಿಗೆ ಕರೆದೊಯ್ಯತೊಡಗಿದರು. 'ಪತ್ರಿಕೋದ್ಯಮವಿರುವುದು ಜನರಿಗಾಗಿ, ಬಂಡವಾಳಶಾಹಿಗಳಿಗಾಗಿಯಲ್ಲ' ಎಂಬ ಬದ್ಧತೆಯೊಂದಿಗೆ 2014ರಲ್ಲಿ 'ಪೀಪಲ್ ಆರ್ಕೈವ್ ಆಫ್ ರೂರಲ್ ಇಂಡಿಯಾ' ಅಂದರೆ 'ಪರಿ'ಎಂಬ ಮಾಧ್ಯಮಸಂಸ್ತೆಯೊಂದನ್ನು ಹುಟ್ಟುಹಾಕಿದರು. ಗ್ರಾಮೀಣ ಜನರು ಅನುಭವಿಸುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ, ಅಲ್ಲಿನ ಪ್ರಸ್ತುತ ವಿದ್ಯಮಾನಗಳು ಮತ್ತು ಜಾಗತೀಕರಣದ ನಂತರದ ಪರಿಣಾಮಗಳ ಬಗ್ಗೆ ಪರಿ ನಿರಂತರ ಶೋಧಗಳನ್ನು ನಡೆಸುತ್ತಾ, ವರದಿಗಳನ್ನು ಪ್ರಕಟಿಸುತ್ತದೆ. ಜೊತೆಯಲ್ಲಿ ಆದಿವಾಸಿ ಜನಾಂಗ ಮತ್ತು ಜಾನಪದ ಲೋಕದಲ್ಲಿ ಮರೆಯಾಗುತ್ತಿರುವ ಅನೇಕ ಮೌಖಿಕ ಕಥಾನಕಗಳನ್ನು ಸಂಗ್ರಹಿಸಿ, ದಾಖಲಿಸಿಡುವ ಕೆಲಸವನ್ನೂ ಮಾಡುತ್ತಿದೆ. ದೇಶವಿದೇಶಗಳ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಸಾಯಿನಾಥ ಸಾರ್ಥಕ ಪತ್ರಿಕೋದ್ಯಮದ ಪಾಠವನ್ನು ಮಾಡುತ್ತಾರೆ.

ಪತ್ರಕರ್ತರಾದವರು ಸರಕಾರದ ಕಾರ್ಯಗಳ ವಿಮರ್ಶಕರೂ ಆಗಿರುವುದರಿಂದ ಸರಕಾರ ಕೊಡುವ ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸಬಾರದೆಂಬುದು ಸಾಯಿನಾಥ ಅವರ ಅಭಿಪ್ರಾಯ. ಹಾಗಾಗಿ ಪ್ರತಿಷ್ಠಿತ ಪದ್ಮಭೂಷಣವೂ ಸೇರಿದಂತೆ ಎಲ್ಲ ರಾಜ್ಯ ಮತ್ತು ರಾಷ್ರ್ಟಮಟ್ಟದ ಪ್ರಶಸ್ತಿಗಳನ್ನವರು ನಿರಾಕರಿಸಿದ್ದಾರೆ. ಅವರ ಕಾರ್ಯಯೋಜನೆಗಳಿಗೆ ಸರಕಾರ ಅಥವಾ ಬಂಡವಾಳಗಾರರಿಂದ ನೇರ ಹಣಸಹಾಯವನ್ನೂ ಅವರು ಪಡೆಯುವುದಿಲ್ಲ. ಆದರೆ ಗ್ರಾಮೀಣ ಪ್ರದೇಶದ ವರದಿಗಳ ಬಗೆಗೇ ಅವರಿಗೆ 13ಪ್ರತಿಷ್ಠಿತ ಪ್ರಶಸ್ತಿಗಳು ದೊರಕಿವೆ. 2021ರ ಪುಕವೋಕಾ ಗ್ರ್ಯಾಂಡ್ ಫ್ರೈಜ್ ಅವರಿಗೆ ಸಂದಿದೆ. ಪತ್ರಿಕೋದ್ಯಮ ವಿಭಾಗದಿಂದ ಈ ಪ್ರಶಸ್ತಿ ಪಡೆದ ಮೊದಲಿಗರು ಅವರು. ಯುರೋಪಿಯನ್ ಕಮೀಷನ್ ನೀಡುವ ಲಾರೆಂಜೋ ನೆಟಾಲಿ ಫ್ರೈಜ್ ಪಡೆದ ಮೊದಲ ಭಾರತೀಯರೂ ಹೌದು. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ 2009ರಲ್ಲಿ ಅವರನ್ನು ವರ್ಷದ ಪತ್ರಕರ್ತ ಪ್ರಶಸ್ತಿ ನೀಡಿ ಗೌರವಿಸಿದೆ. ಅವರೊಬ್ನ ಉತ್ತಮ ಛಾಯಾಗ್ರಾಹಕರೂ ಹೌದು. ತಮ್ಮ ಕ್ಯಾಮರಾವನ್ನು ಹಳ್ಳಿಗಾಡಿನ ಹೆಂಗಸರ ಕೊರಳಲ್ಲಿ ನೇತಾಡಿಸಿ ಅವರ ಕಣ್ಣಿನಿಂದಲೂ ಚಿತ್ರಗಳನ್ನವರು ಸಂಗ್ರಹಿಸಿದ್ದಾರೆ. ಅವರ 'ವಿಸಿಬಲ್ ವರ್ಕ್, ಇನವಿಸಿಬಲ್ ವುಮೆನ್ ಎಂಡ್ ವರ್ಕ ಇನ್ ರೂರಲ್ ಇಂಡಿಯಾ' ಎಂಬ ಚಿತ್ರಗ್ಯಾಲರಿಯನ್ನು ಆರು ಲಕ್ಷ ಭಾರತೀಯರು ವೀಕ್ಷಿಸಿದ್ದಾರೆ. ಕೆನಡಾದ ಡಾಕ್ಯುಮೆಂಟರಿ ನಿರ್ದೇಶಕ ಜಿಯೋ ಮೌಲಿನ್ಸ್ ಅವರ ಬಗ್ಗೆ ನಿರ್ಮಿಸಿದ ಸಾಕ್ಷಚಿತ್ರವು ಅಂತರಾಷ್ಟ್ರೀಯ ಪಿಲ್ಮ ಫೆಸ್ಟಿವಲ್ ನಲ್ಲಿ ಪ್ರಥಮ ಬಹುಮಾನ ಗಳಿಸಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ  ಭಾರತೀಯ   ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರನ್ನು 'ಸ್ತ್ರೀಲೋಕ ಮತ್ತು ಹಸಿವಿನ ಜಗತ್ತಿನ ಶ್ರೇಷ್ಠ ಪರಿಣಿತ' ಎಂದು ಬಣ್ಣಿಸಿದ್ದಾರೆ. 

ಇಡಿಯ ಜಗತ್ತು ಕೊರೊನಾವೆಂಬ ಸಾಂಕ್ರಾಮಿಕಕ್ಕೆ ಬಲಿಯಾದಾಗಲೂ ಸಾಯಿನಾಥರ ಲೇಖನಿ ಮತ್ತು ಕ್ಯಾಮರಾ ಕ್ವಾರೈಂಟೈನ್ ನಲ್ಲಿರಲಿಲ್ಲ. ಸರಕಾರ ಮತ್ತು ಆಡಳಿತ ಯಂತ್ರಗಳು ಕೊರೊನಾ ನಿಯಂತ್ರಣದಲ್ಲಿ ತೋರಿದ ಲಕ್ಷ, ನಿರ್ಲಕ್ಷ ಎಲ್ಲವನ್ನೂ ಅವರು ನಿರಂತರವಾಗಿ ದಾಖಲಿಸಿದ್ದಾರೆ. ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಹಿಡಿದು ಪರಿಹಾರ ನೀಡಿಕೆಯಲ್ಲಿನ ತಾರತಮ್ಯದವರೆಗೆ ಎಲ್ಲವನ್ನೂ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ದೇಶದಲ್ಲಿ ತನಿಖಾ ಪತ್ರಿಕೋದ್ಯಮ ಹಳ್ಳಹಿಡಿದಿದೆ ಎಂಬ ಮುಖ್ಯನ್ಯಾಯಾಧೀಶರ ಭಾಷಣಕ್ಕೆ ಅವರು ನೀಡಿದ ಪ್ರತಿಕ್ರಿಯೆ ಪ್ರಸ್ತುತ ಭಾರತದ ಮಾಧ್ಯಮಲೋಕದ ನೈಜಚಿತ್ರಣವೂ ಹೌದೂ. ಬಂಡವಾಳಶಾಹಿಗಳ ಹಿಡಿತ, ಆಡಳಿತಾರೂಢ ಪಕ್ಷಗಳ ಬೆದರಿಕೆ ಮತ್ತು ಬದ್ಧತೆಯ ಕೊರತೆ ಹೇಗೆ ಎಲ್ಲರನ್ನೂ ಜನಪ್ರಿಯ ಪತ್ರಿಕೋದ್ಯಮದ ಕಡೆಗೆ ಸೆಳೆಯುತ್ತಿದೆ ಎಂಬುದನ್ನವರು ಕೂಲಂಕುಷವಾಗಿ ವಿವರಿಸಿದ್ದಾರೆ. ಭಾರತವು ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ವಿಶ್ವದ ಯಾದಿಯಲ್ಲಿ 142ನೇ ಸ್ಥಾನದಲ್ಲಿದೆ ಎಂಬುದು ನಿಜಕ್ಕೂ ಆತಂಕಕಾರಿ. 

ಯಾವುದೇ ಘಟನೆಯನ್ನು ವರದಿಗಾರನೊಬ್ಬ ನೋಡಬೇಕಾಗಿದ್ದು ಒಂದು ಪ್ರಕರಣವಾಗಿಯಲ್ಲ, ಬದಲಾಗಿ ಒಮನದು ಪ್ರಕ್ರಿಯೆಯಾಗಿ, ಯಾಕೆಂದರೆ ಇಲ್ಲಿರುವುದು ಕೇವಲ ಸಂಖ್ಯೆಯಲ್ಲ, ಮನುಷ್ಯರು ಮಬ ಸೂಕ್ಮಗ್ರಹಿಕೆಯನ್ನು ಪತ್ರಿಕೋದ್ಯಮಕ್ಕೆ ನೀಡಿದ ಸಾಯಿನಾಥ ಉತ್ತಮ ವಾಗ್ಮಿಯೂ ಹೌದು. ಸಾಕ್ಷಾಧಾರಗಳ ಸಹಿತವಾಗಿ, ಸಚಿತ್ರವಾಗಿ ಅವರು ಗ್ರಾಮ್ಯಭಾರತದ ಕಥಾನಕಗಳನ್ನು ತಮ್ಮ ಲಘುಹಾಸ್ಯ ಮತ್ತು ಲೇವಡಿಯ ಧಾಟಿಯಲ್ಲಿ ಹೇಳುತ್ತಾ ಹೋದರೆ ಗಂಟೆಗಳೇನು? ದಿನಗಳು ಸರಿದದ್ದೂ ಗೊತ್ತಾಗದು. ಕೇಡಿಗಳೇ ಹಿರೋಗಳಾಗುತ್ತಿರುವ ಈ ಕಾಲದಲ್ಲೂ ಸಾಯಿನಾಥ ಹಲವರ ಹೀರೋ ಆಗಿರುವುದಂತೂ ಸುಳ್ಳಲ್ಲ. 


No comments:

Post a Comment