Friday, May 20, 2022

ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿರುವ ಜಿ. ಎಸ್. ಜಯದೇವ

ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ ಮತ್ತು ರುದ್ರಾಣಿಯವರ ಮಗನಾಗಿ 1951ರಲ್ಲಿ ಜನಿಸಿದ ಜಿ. ಎಸ್. ಜಯದೇವ ಅವರು ಪ್ರಚಾರಗಳಿಂದ ದೂರವಿರುವ ಸಾಮಾಜಿಕ ಕಾರ್ಯಕರ್ತರು. ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಮೈಸೂರಿನ ಪ್ರತಿಷ್ಠಿತ ಜೆ.ಎಸ್.ಎಸ್. ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸವನ್ನು ನಿರ್ವಹಿಸಿದವರು. ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರಾದ ಡಾ. ಸುದರ್ಶನ ಅವರ ಸಂಪರ್ಕಕ್ಕೆ ಬಂದ ಅವರು ತಮ್ಮ ಉದ್ಯೋಗವನ್ನು ತ್ಯಜಿಸಿ, ಗಿರಿಜನರ ಮತ್ತು ದೀನದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡರು. ಮೈಸೂರಿನ ಸುತ್ತಮುತ್ತಲ ಗಿರಿಜನರೊಡನೆ ಸಂಪರ್ಕವನ್ನಿಟ್ಟುಕೊಂಡು ಅವರ ಸಂಕಷ್ಟಗಳನ್ನು ಅರಿತರು. ಚಾಮರಾಜನಗರದ ಅನೇಕ ಸರಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಅಲ್ಲಿನ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಿದರು.

ಅನಾಥ ಮಕ್ಕಳ ದುಃಖಕ್ಕೆ ಮರುಗಿದ ಅವರು ಮಕ್ಕಳಿಗಾಗಿ ದೀನ ಬಂಧು ಮಕ್ಕಳ ಮನೆ ಎಂಬ ಅನಾಥಾಶ್ರಮವನ್ನು ತೆರೆದರು. ಬಾಡಿಗೆ ಕಟ್ಟಡದಲ್ಲಿ ಮಕ್ಕಳನ್ನು ಪೋಷಿಸುತ್ತಾ, ಅವರ ಸಮಗ್ರ ಕಲ್ಯಾಣಕ್ಕಾಗಿ ದೀನಬಂಧು ಟ್ರಸ್ಟ್ ಶ್ರಮಿಸುತ್ತಿದೆ. ಚಾಮರಾಜನಗರದಲ್ಲಿಂದು ಇಂತಹ ನಾಲ್ಕು ಮಕ್ಕಳ ಮನೆಗಳಿದ್ದು, ಪ್ರತಿ ಮನೆಯಲ್ಲಿಯೂ ಹನ್ನೆರಡು ಮಕ್ಕಳು ಮದರ್ ಅಥವಾ ಫಾದರ್ ಎಂಬ ಪೋಷಕರೊಂದಿಗೆ ವಾಸಿಸುತ್ತಾರೆ. ಈ ಮಕ್ಕಳ ಸೃಜನಶೀಲ ಶಿಕ್ಷಣಕ್ಕಾಗಿ ಅವರು ರಾಮಸಮುದ್ರದಲ್ಲಿ ಒಂದು ಶಾಲೆಯನ್ನು ಕೂಡಾ ತೆರೆದಿದ್ದಾರೆ.

ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸ್ವಯಂಉದ್ಯೋಗ ಕಲಿಕೆಗಾಗಿ ಅವರು ಹೆಣ್ಣುಮಕ್ಕಳ ಹಸಿರುಮನೆ ಶಿಕ್ಷಣ ಕಾರ್ಯಕ್ರಮ ಎಂಬ ಯೋಜನೆಯನ್ನು ರೂಪಿಸಿದ್ದಾರೆ. ಪರಿಸರದ ಬಗ್ಗೆಯೂ ಅವರದು ಕೊನೆಯಿಲ್ಲದ ಕಾಳಜಿ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಡೆಸಿದ ಬಿಳಿಗಿರಿರಂಗನ ಬೆಟ್ಟದ ಜೀವವೈವಿಧ್ಯಗಳ  ದಾಖಲಾತಿ ಕಾರ್ಯಕ್ರಮದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಮೈಸೂರಿನ ಶಕ್ತಿಧಾಮ ಎಂಬ ಮಹಿಳೆಯರ ಪುನರ್ವಸತಿ ಕೇಂದ್ರದ ಕಾರ್ಯನಿರ್ವಾಹಕ ಧರ್ಮದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ವಿವೇಕಾನಂದ ಪೀಠದ ಸಂದರ್ಶಕ ಪ್ರಾಧ್ಯಾಪಕರೂ ಹೌದು.

ಪ್ರಸಿದ್ಧ ಕವಿಯ ಪುತ್ರನಾದ ಜಯದೇವ ಅವರು ಉತ್ತಮ ಲೇಖಕರೂ ಹೌದು. ಶಕ್ತಿಧಾಮದ ಸತ್ಯ ಕಥೆಗಳು, ಮಕ್ಕಳ ಬೆಳವಣಿಗೆ ಮತ್ತು ನಾವು, ಹಳ್ಳಿಹಾದಿ ಇವು ಅವರು ರಚಿಸಿದ ಕೃತಿಗಳು. ಗಾಂಧೀಜಿಯವರ ಗ್ರಾಮಭಾರತದ ಕನಸನ್ನು ನನಸಾಗಿಸಲು ಶ್ರಮಿಸುತ್ತಿರುವ ಅವರಿಗೆ 2019ರಲ್ಲಿ ಪ್ರತಿ಼ಷ್ಠಿತ ಮಹಾತ್ಮಗಾಂಧಿ ಸೇವಾರತ್ನ ಪ್ರಶಸ್ತಿ ದೊರಕಿದೆ. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳು ಅರ್ಹವಾಗಿಯೇ ಸಂದಿವೆ. 

No comments:

Post a Comment