ಬ್ಲಾಗ್ನಲ್ಲಿ ಬರೆಯದೇ ಅದೆಷ್ಟೋ ದಿನಗಳು ಕಳೆದುಹೋದವು. ಹೊಳೆಕೆರೆಯ ಹೊಳೆ ಇನ್ನೂ ನನ್ನೊಳಗೆ ಹರಿಯುತ್ತಲೇ ಇದೆ. ಹೊಳೆಯದೊಂದು ಕಥೆ ನಿಮಗಾಗಿ.
ಆಗ ನಾನಿನ್ನೂ ತೀರಾ ಸಣ್ಣವಳು. ಮೂರನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಶಾಲೆಯಿಂದ ಚಿತ್ರಾಪುರ ಮಠಕ್ಕೆ ಪ್ರವಾಸ ನಿಗದಿಯಾಗಿತ್ತು. ಹೋಗಲು ನನಗೆ ಮನೆಯಿಂದ ಅನುಮತಿ ಸಿಕ್ಕಿತ್ತು. ಆಗೆಲ್ಲ ಪ್ರವಾಸ ನಿಗದಿಯಾಯಿತೆಂದರೆ ಒಂದಿಡೀ ತಿಂಗಳು ನಾವು ಪ್ರವಾಸದ ಚೀಟಿ ತಯಾರಿಸುತ್ತಿದ್ದೆವು. ಅಂದರೆ ಹೀಗೆ. " ಆಡುಕಳ ಶಾಲಾ ಮಕ್ಕಳ ಚಿತ್ರಾಪುರ ಪ್ರವಾಸಕ್ಕೆ
ಜಯವಾಗಲಿ" ಅಂತ ಒಂದು ಬಗೆಯ ಚೀಟಿಯಾದರೆ, ಇನ್ನೊಂದು ಜಯವಾಯಿತು ಎಂಬ ಚೀಟಿ. ಮೊದಲನೆಯದನ್ನು ಹೋಗುವಾಗ ದಾರಿಯುದ್ದಕ್ಕೂ ಬಿಸಾಡಿದರೆ, ಎರಡನೆಯದನ್ನು ಬರುವಾಗ ಬಸ್ಸಿನ ಕಿಟಕಿಯಿಂದ ಹೊರಗೆ ಬಿಸಾಡುವುದು. ದಾರಿಯುದ್ದಕ್ಕೂ ಅದನ್ನು ಹೆಕ್ಕಿ ಓದುವವರಿಗೆ ನಮ್ಮ ಪ್ರವಾಸದ ವಿಷಯ ಗೊತ್ತಾಗಬೇಕೆಂಬುದು ನಮ್ಮ ಇಂಗಿತ. ಹಾಗೆ ನಾನೂ ಕೂಡ ನೂರಾರು ಚೀಟಿಗಳನ್ನು ತಯಾರಿಸಿ ನನ್ನ ಸ್ಕರ್ಟ ನ ಕಿಸೆಯಲ್ಲಿ ತುಂಬಿಸಿಕೊಂಡಿದ್ದೆ.
ಪ್ರವಾಸದ ಮೊದಲ ದಿನ ರಾತ್ರಿ ನಿದ್ರೆಯೇ ಮಾಡಿರಲಿಲ್ಲ. ಬೆಳಗಾಗುವುದರೊಳಗೆ ಎದ್ದು ತಯಾರಾಗಿ, ಬೆಳಕು ಹರಿಯುವುದನ್ನೇ ಕಾಯುತ್ತಾ ಕುಳಿತಿದ್ದೆ. ನಾನು ಹೊರಡುವಾಗ ಅಪ್ಪ ನನ್ನ ಕೈಯಲ್ಲಿ ಕೆಲವು ನಾಣ್ಯಗಳನ್ನು ಕೊಟ್ಟರು. ಹೇಗೂ ಕಿಸೆಯಲ್ಲಿ ಚೀಟಿಯಿತ್ತಲ್ಲ, ಹಾಗಾಗಿ ಅದನ್ನು ಕೈಯಲ್ಲಿ ಹಿಡಿದು ಹೊರಟೆ. (ಆಗೆಲ್ಲ ಸ್ಕೂಲ್ ಬ್ಯಾಗ್ ಎಂಬುದು ಬಹಳ ದುಬಾರಿಯಾಗಿದ್ದು, ನಮಗೆಲ್ಲ ಹತ್ತನೇ ತರಗತಿಯವರೆಗೆ ಚೀಲವೇ ಇರಲಿಲ್ಲ. ಅದರ ಬದಲು ಒಂದು ದಪ್ಪ ಇಲಾಸ್ಟಿಕ್ ಇರುತ್ತಿತ್ತು. ಅದನ್ನು ಪುಸ್ತಕಕಗಳಿಗೆ ಹಾಕಿಕೊಂಡು ಹೋಗುತ್ತಿದ್ದೆವು.)
ನಮ್ಮೂರಿಂದ ಎಲ್ಲಿಗೆ ಹೊರಡಬೇಕೆಂದರೂ ಹೊಳೆ ದಾಟಲೇಬೇಕು. ನಾನು ಒಂದು ಕೈಯಲ್ಲಿ ನನ್ನ ಸ್ಕರ್ಟನ್ನು ಮೇಲಕ್ಕೆತ್ತಿಕೊಂಡು, ನಡುಹೊಳೆಗೆ ಬರುತ್ತಿದ್ದಂತೆ ಕೈಯಲ್ಲಿರುವ ಎಲ್ಲಾ ನಾಣ್ಯಗಳು ಹೊಳೆಯ ಪಾಲಾದವು. ನೀರು ತಿಳಿಯಾಗಿದ್ದರಿಂದ ನಾಣ್ಯಗಳು ಕಾಣುತ್ತಿದ್ದವು. ಆದರೆ ಅವುಗಳನ್ನು ಹೆಕ್ಕಬೇಕೆಂದರೆ ನೀರಿನಲ್ಲಿ ಪೂರ್ಣವಾಗಿ ಮುಳುಗಬೇಕಿತ್ತು. ಆಗ ನಾನು ಪೂರ್ತಿಯಾಗಿ ಒದ್ದೆಯಾಗುತ್ತಿದ್ದೆ. ಮತ್ತೆ ಹಿಂದಿರುಗಿ ಮನೆಗೆ ಹೋದರೂ ಇನ್ನೊಂದು ಹೊಸ ಅಂಗಿ ಮನೆಯಲ್ಲಿಲ್ಲ. ಒಂದುಕ್ಷಣ ಯೋಚಿಸಿ, ಮತ್ತೆ ಸರಕ್ಕನೆ ಮುಳುಗಿ ನಾಣ್ಯವನ್ನು ಹೆಕ್ಕಿಕೊಂಡೆ. ಆದರೆ ಇವೆಲ್ಲದರ ಮಧ್ಯೆ ನನ್ನ ಪ್ರವಾಸದ ಚೀಟಿಗಳು ಒದ್ದೆಯಾದದ್ದು ನೆನಪಿಗೆ ಬಂದಿರಲಿಲ್ಲ.
ಮುಂದಿನದೆಲ್ಲವನ್ನು ನಿಮ್ಮ ಊಹೆಗೇ ಬಿಡುವುದೊಳಿತು.
No comments:
Post a Comment