#Copositive# ಬಿಪಾಸಿಟಿವ್#
ಈ ಹಾಶ್ ಟ್ಯಾಗನಲ್ಲಿ ಕೊರೋನಾ ಬಂದು ಗುಣವಾದವರ ಅನಿಸಿಕೆಗಳನ್ನು ಹಂಚಿಕೊಳ್ಳಲು Gayathri HN ಸೂಚಿಸಿರುತ್ತಾರೆ. ಕೊರೊನಾ ಬಂದಿದೆಯೆಂಬುದು ಅಪರಾಧವೆಂಬಂತೆ ಬಿಂಬಿಸುತ್ತಿದ್ದ ಕಾಲದಲ್ಲೇ ನಾನು ಆ ಬಗ್ಗೆ ಅಂತರ್ಜಾಲ ಪತ್ರಿಕೆಯಲ್ಲಿ ವಿವರವಾದ ಲೇಖನವನ್ನು ಬರೆದಿದ್ದೆ. ಅದರ ಸಂಕ್ಷಿಪ್ತ ವಿವರ ಹೀಗಿದೆ...
ಕಳೆದ ವರ್ಷ ಕರೋನಾ ಪೀಕ್ ನಲ್ಲಿರುವಾಗಲೇ ಎಸ್. ಎಸ್. ಎಲ್. ಸಿ. ಮೌಲ್ಯಮಾಪನಕ್ಕೆಂದು ಹೋಗುತ್ತಿದ್ದ ನನ್ನ ಸಂಗಾತಿ ಮೌಲ್ಯಮಾಪನ ಕೆಲಸ ಮುಗಿದ ದಿನವೇ ಜ್ವರದಿಂದ ಬಳಲಿದರು. ಮೊದಲು ಮಳೆಯಲ್ಲಿ ನೆನೆದಿದ್ದರಿಂದ ಬಂದ ಜ್ವರವೆಂದುಕೊಂಡರೂ ಮೂರು ದಿನಗಳ ನಂತರ ರಾತ್ರಿ ಉಸಿರಾಡಲು ಚೂರು ಕಷ್ಟವೆನಿಸಿದ್ದರಿಂದ ಕರೋನಾ ಟೆಸ್ಟ್ ಮಾಡಿಸಿದರು. ಫಲಿತಾಂಶ ಪಾಸಿಟಿವ್ ಎಂದು ಬಂತು. ಅವರಿಗೆ ಇನ್ಯಾವುದೇ ಖಾಯಿಲೆಗಳಿಲ್ಲದಿರುವುದರಿಂದ ಮತ್ತು ಆಸ್ಪತ್ರೆಗಳು ಸರಿಸುಮಾರಾಗಿ ಆಗ ತುಂಬಿರುವುದರಿಂದ ಮನೆಯಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಿದೆವು. ನಾಲ್ಕಾರು ದಿನ ಒಟ್ಟಿಗೇ ಇದ್ದುದರಿಂದ ಇಬ್ಬರು ಮಕ್ಕಳು ಮತ್ತು ನಾನು ಕೂಡಾ ಪಾಸಿಟಿವ್ ಇರಬಹುದು ಅನಿಸಿದರೂ ಇಲಾಖೆಯವರು ಮನೆಯನ್ನು ಸಂಪೂರ್ಣ ಸೀಲ್ಡೌನ್ ಮಾಡಿದ್ದರಿಂದ ನಮ್ಮ ಪರೀಕ್ಷೆಯನ್ನು ಮಾಡಿಸಲಾಗಲಿಲ್ಲ. ಅವರಲ್ಲಿ ವಿನಂತಿಸಿದರೂ ಅವರೂ ಪರೀಕ್ಷೆ ಮಾಡಲಿಲ್ಲ. ನಮ್ಮ ಎಚ್ಚರದಲ್ಲಿ ನಾವಿರಬೇಕೆಂದು ನಾವು ಮುಂದಿನ ಹದಿನೈದು ದಿನ ಪಾಲಿಸಿದ ನಿಯಮಗಳು ಹೀಗಿವೆ..
೧. ಆರೋಗ್ಯ ಇಲಾಖೆಗೆ ಸಂಬಂಧಿಸಿದ ಫೋನ್ ನಂ ಸಂಗ್ರಹಿಸಿಟ್ಟುಕೊಂಡೆವು. ತೀರಾ ಆತ್ಮೀಯರಾದ ಒಬ್ಬರು ಖಾಸಗಿ ವೈದ್ಯರಿಗೆ ವಿಷಯ ತಿಳಿಸಿ ಸಲಹೆ ಪಡೆದೆವು.
೨. ಉಸಿರಾಡಲು ತೊಂದರೆಯಾದರೆ ಎಂದು ಒಂದು ಹಬೆ ತೆಗೆದುಕೊಳ್ಳುವ ಯಂತ್ರವನ್ನು ತರಿಸಿ ದಿನಕ್ಕೆ ಮೂರು ಬಾರಿ ಹಬೆ ತೆಗೆದುಕೊಂಡರು.
೩. ನನ್ನವರಿಗೆ ಆಯುರ್ವೇದ ಕಷಾಯಗಳಲ್ಲಿ ಬಹಳ ನಂಬಿಕೆಯಿದ್ದುದರಿಂದ ಶುಂಠಿಯೇ ಮೊದಲಾದ ಹಲವು ಬಗೆಯ ಮಸಾಲೆ ವಸ್ತುಗಳ ಕಷಾಯವನ್ನು ಬಹಳ ಸಲ ಕುಡಿಯುವುದರಿಂದಾಗುವ ಏರುಪೇರಿನ ಬಗ್ಗೆ ಅರಿವಿದ್ದ ನಾನು ಸಾಧ್ಯವಾದಷ್ಟು ನೆಲನೆಲ್ಲಿ, ಅಮೃತಬಳ್ಳಿ ಮೊದಲಾದ ಗಿಡಮೂಲಿಕೆಗಳ ಕಷಾಯವನ್ನು ಬೆಳಿಗ್ಗೆ ಮತ್ತು ರಾತ್ರಿ ಮಾತ್ರ ಕುಡಿಯಲು ಕೊಡುತ್ತಿದ್ದೆ.
೪. ಇನ್ನುಳಿದಂತೆ ಪ್ಯಾರಾಸಿಟಮೋಲ್ ಮತ್ತು ವಿಟಾಮಿನ್ ಸಿ ಮಾತ್ರೆಯನ್ನು ಐದು ದಿನಗಳ ಕಾಲ ತೆಗೆದುಕೊಂಡಿದ್ದಾರೆ.
೫. ವಿಟಾಮಿನ್ ಸಿ ಮಾತ್ರೆಯನ್ನು ನಾವೆಲ್ಲರೂ ತೆಗೆದುಕೊಂಡಿದ್ದೇವೆ.
೬. ನಮ್ಮಲ್ಲಿಯೂ ಯಾರು ಬೇಕಾದರೂ ಪಾಸಿಟಿವ್ ಇರಬಹುದಾದ್ದರಿಂದ, ಮತ್ತು ನಮ್ಮನೆಯಲ್ಲಿ ಎಲ್ಲರಿಗೂ ಸಾಕಾಗುವಷ್ಟು ಕೊಠಡಿಗಳಿದ್ದರಿಂದ ಎಲ್ಲರೂ ಆದಷ್ಟು ದೂರದೂರವೇ ಉಳಿದೆವು.
೭. ನಾನು ಕೆಲವು ದಿನಗಳವರೆಗೆ ರಾತ್ರಿ ಅನೇಕ ಸಲ ಎಲ್ಲರ ಕೊಠಡಿಯಲ್ಲಿ ಇಣುಕಿ, ನಿದ್ರಿಸಿರುವುದನ್ನು ಖಾತ್ರಿಗೊಳಿಸಿಕೊಂಡದ್ದುಂಟು.
೮. ಯಾವುದೇ ಸನ್ನಿವೇಶವನ್ನು ಎದುರಿಸಲು ಅನುಕೂಲವಾಗುವಂತೆ ಅಗತ್ಯ ಊಟದ ತಯಾರಿಯ ಬಗ್ಗೆ ಎಲ್ಲರೂ ಸಿದ್ಧರಾದೆವು. ಸಾಮಾನುಗಳೆಲ್ಲ ಎಲ್ಲಿವೆಯೆಂದು ಎಲ್ಲರೂ ಖಾತ್ರಿಪಡಿಸಿಕೊಂಡು, ಸುಲಭ ಅಡುಗೆ ಯಾವುದೆಂದು ಗುರುತು ಹಾಕಿಕೊಂಡೆವು.
೯. ಸ್ನೇಹಿತರಿಗೆ ಕರೆಮಾಡಿ ಒಂದು ತಿಂಗಳಿಗಾಗುವಷ್ಟು ದಿನಸಿಯನ್ನು ವಾಟ್ಸಾಫ್ ಮಾಡಿ ತರಿಸಿಟ್ಟುಕೊಂಡೆವು.
೧೦. ಬಿಸಿಯಾದ, ಜಿಡ್ಡಿಲ್ಲದ, ರುಚಿಯಾದ ಅಡುಗೆಯನ್ನು ಮೂರೂ ಹೊತ್ತು ತಯಾರಿಸಿ ಉಂಡೆವು.
೧೧. ನನ್ನವರು ಯೋಗ ಪರಿಣಿತರಾದ್ದರಿಂದ ಬೆಳಗಿನ ಕೆಲವು ಸಮಯವನ್ನು ಅದಕ್ಕೆ ಮೀಸಲಿಟ್ಟರು. ಎಲ್ಲ ಬಂಧುಗಳಿಗೆ ಕರೆಮಾಡಿ ಮಾತನಾಡಿ ಸಮಯ ಕಳೆದರು.
೧೨. ನಡುನಡುವೆ ನಮಗೆ ಶೀತ, ಚೂರು ಜ್ವರ, ತಲೆನೋವು ಎಲ್ಲಾ ಕಾಡಿತಾದರೂ ಭಯಗೊಳ್ಳದೇ ಅದಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ತಿಂದೆವು.
೧೩. ಟಿ. ವಿ. ವಾರ್ತೆಗಳನ್ನು ಸಾಧ್ಯವಾದಷ್ಟು ಕಡಿಮೆ ನೋಡಿ ಆತಂಕದಿಂದ ದೂರವಿದ್ದೆವು.
ಹೀಗೆ ಹದಿನೇಳು ದಿನಗಳನ್ನು ಕಳೆದಮೇಲೆ ನಮ್ಮೆಲ್ಲರ ಪರೀಕ್ಷಾ ವರದಿ ನೆಗೆಟಿವ್ ಅಂತ ಬಂತು. ನನ್ನವರಿಗೆ ಬೆಸ್ಡ್ ಕ್ವಾರೈಂಟೈನ್ ಪೇಶಂಟ್ ಎಂದು ಜಿಲ್ಲಾಡಳಿತದಿಂದ ಸನ್ಮಾನವೂ ಆಯಿತು. ನನ್ನ ಅನುಭವದಿಂದ ಹೇಳುವುದಾದರೆ ಕೋವಿಡ್ ಕಾಲದಲ್ಲಿ ಆ ಕ್ಷಣದ ತೊಂದರೆಯ ಬಗ್ಗೆ ಯೋಚಿಸಿ, ಅದರ ನಿವಾರಣೆಗೆ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಸಾಕು. ಉಸಿರಾಟದ ತೊಂದರೆಯಾದಲ್ಲಿ ಮಾತ್ರ ತುರ್ತು ನೆರವು ಸಿಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಅದೇ ಗುಂಗಿನಲ್ಲಿರದೇ ಮಾಮೂಲಿಯಂತೆ ಚಟುವಟಿಕೆಯಲ್ಲಿದ್ದರೆ ಬೇಗ ಮೊದಲಿನಂತಾಗಬಹುದು....
No comments:
Post a Comment