Friday, January 10, 2020

ಕವಿತೆ

ಅಮ್ಮನ ಕೈತುತ್ತು ತಿಂದ ನೆನಪಿಲ್ಲ
ಹಗಲಿರುಳು ಹೈರಾಣಾಗುವ ಅಮ್ಮನಿಗೆ
ಮಕ್ಕಳ ಹಸಿವೆಯ ಪರಿವೆಯಿರಲಿಲ್ಲ
ಬೆಳೆದಂತೆಲ್ಲ ನನ್ನೊಂದಿಗೆ ಹಠವೂ ಬೆಳೆಯಿತು
ನಾನು ತಿನ್ನುವ ತುತ್ತು ನನ್ನದೇ ಇರಬೇಕು
ಬೆರಳು ಸುಟ್ಟು ಹೆಪ್ಪಳಿಕೆಯೆದ್ದರೂ
ಕತ್ತರಿಸಿ ನೆತ್ತರು ಸೋರಿದರೂ
ನನ್ನ ತುತ್ತ ನಾನೇ ತಿನ್ನುವ ಹಠ
ಕೈತುತ್ತ ಕನಸಾಗಿಯೇ ಉಳಿಸಿತ್ತು
ಸುತ್ತ ಕಂದಮ್ಮಗಳ ಕೂರಿಸಿ ತುತ್ತು
ಕೊಟ್ಟದ್ದಲ್ಲದೇ ತಿಂದ ನೆನಪಿಲ್ಲ
ನಿನಗೊಂದು ಕೈತುತ್ತು ಉಣಿಸಬೇಕಲ್ಲ
ಅವನ ಸಾಲುಗಳಿಗೆ ಹೃದಯವೇ ಕಂಪಿಸಿತು!
ಮುಟ್ಟು ನಿಲ್ಲುವ ಪ್ರಾಯದಲ್ಲಿಯೂ
ಕೆನ್ನೆ ಕೆಂಪೇರಿತು, ಮರುಗಳಿಗೆಯೇ
ಕಣ್ಣಿನಂಚಲೊಂದು ಸಣ್ಣಹನಿ ಜಾರಿತು!
ಕನಸಿದು ನನಸಾಗದೆಂಬುದು
ನಮಗಿಬ್ಬರಿಗೂ ಗೊತ್ತು, ಆದರೂ
ಎಂದಾದರೊಂದು ದಿನ ಅವನ ತಟ್ಟೆಯ ತುತ್ತ
ಜನರರಿಯದಂತೆ ತೆಗೆದು ತಿನ್ನಬೇಕು
ಅವನ ಕೈಸೋಕಿದ ತುತ್ತು ನನ್ನದಾಗಬೇಕು

No comments:

Post a Comment