ವಿರಹದ ಕಡಲನ್ನು ಧರಿಸಿದವರ್ಯಾರೂ
ಸತ್ತಿಲ್ಲ ಸಾಕೀ
ಒಳಗೊಳಗೆ ಕುದಿಯುತ್ತ
ಹೊರಗೆ ಮೊರೆಯುತ್ತಾರೆ
ಪಾಪಿ ಚಂದ್ರ
ಇರುಳೆಲ್ಲ ನೋಡಿ
ನಗುತ್ತಿರುತ್ತಾನೆ
ಅವನು ಬರುವನೆಂದು
ಒಸಗೆಯಾಯಿತು ನನಗೆ
ಸಾಕಿ,
ಇಂದವನ ಮಧುಪಾತ್ರೆಯಲಿ
ನಶೆಯ ಬೆರಸಲುಬೇಡ
ಹಿಡಿದು ಕೇಳಬೇಕಿದೆ
ನನ್ನ ಇರವ
ಮೂಗುತಿ
ವರ್ಷ ಹತ್ತಾಯ್ತು
ಮೂಗು ಬೆಳೆದೋಯ್ತು
ಮೂಗುತಿಗೆ ಗತಿಯಿಲ್ಲ
ಅಮ್ಮ ಅಲವತ್ತುಕೊಳ್ಳುವಾಗಲೆಲ್ಲ
ಅಪ್ಪನ ಕಿವಿ ಮಂದ
ಮೂಗನ್ನು ಒತ್ತಿ, ಒತ್ತಿ
ಮತ್ತೆ ಕೆಲವೊಮ್ಮೆ ಚಿವುಟಿ
ಬೆಳೆದಿದೆಯೆ?
ಎಂದು ಪರೀಕ್ಷಿಸುತ್ತಿದ್ದ ಬಗೆಗೆ
ಗೊಂಡೆಮೂಗು ಇನ್ನಷ್ಟು ಅಗಲ
ಆ ಬೇಸಗೆಯಲ್ಲಿ
ತೊಡೆ, ಸೀರೆ ಸೀಳಿಕೊಂಡು
ಸರಕಾರೀ ಪ್ಲಾಟಿನ
ಗೇರುಬೀಜ ಕೆದರಿ
ನಾಲ್ಕು ಕಾಸು ಹುಟ್ಟಿಸಿದ ಅಮ್ಮ
ತಾಮ್ರಕ್ಕೆ ಚಿನ್ನ ಬೆರಸುವ
ತವರಿನ ಬಿಂಬಲ ಶೆಟ್ಟಿಯ ಕೈಗಿಟ್ಟು
ಮೂಗುಬೊಟ್ಟಿನ ವೀಳ್ಯಕ್ಕೆ
ಸೈ ಎನಿಸಿಬಿಟ್ಟಳು
ಐಸಿರಿಯ ತವರು
ಅತ್ತೆಗೂ ಆರರ ಮಗಳು
ಅವಳಿಗೂ ಅಂದೇ
ಮೂಗುಚುಚ್ಚುವ ಶಾಸ್ತ್ರ
ಬೆಳ್ಳಿಯ ಹರಿವಾಣದಲಿ
ವಜ್ರದ ಮೂಗುಬೊಟ್ಟು
ರೇಶಿಮೆಯ ಹೊದ್ದ ರತ್ನಾಕರ
ಹೇಳಿದ ಸಮಯಕ್ಕೆ ಹಾಜರಾಗಿದ್ದ
ನಾನು- ಅವಳು
ಬಿಂಬಲ-ರತ್ನಾಕರ
ತಾಮ್ರ- ವಜ್ರ
ಯಾವುದೂ ಏನೂ ತಾಳೆಯಾಗದೇ
ಬೆಳೆದ ಮೂಗಿನ ಹೆದರಿಕೆಯಲಿ
ನಡುಗುತ್ತ ಕುಳಿತೆ
ಕಣ್ಣು ಮಂದವಾದ ಬಿಂಬಲ
ಎಲ್ಲೆಲ್ಲೋ ಚುಚ್ಚಿ,ಮತ್ತೆ ಸರಿಪಡಿಸಿ
ಶಾಸ್ರ್ತ ಮುಗಿಸುವಾಗ
ವಜ್ರದ ಮೂಗುತಿ
ಅವಳ ಮೂಗಲ್ಲಿ
ರಾರಾಜಿಸುತ್ತಿತ್ತು
ಮತ್ತೆ ರಶಿಗೆ, ಗೂಂಜು, ಔಷಧಿ
ಒಗ್ಗಿಕೊಳ್ಳಲು ಹಠಮಾಡಿದ
ಬೆಳೆದ ಮೂಗು
ಈಗಲೂ ಆಗಾಗ ಬಟ್ಟೆಗೆ ಸಿಕ್ಕಿ
ಬಾಲ್ಯ ನೆನಪಿಸುತ್ತಲೇ ಇರುವುದು
ಮೂಗಿನ ನತ್ತು
ಎಲ್ಲಾ ಸರಿ
ಮೂಗಿಗೂ ಯಾಕೆ ಚಿನ್ನ?
ಎನ್ನುವ ಮಗನ ಮಾತಿಗೆ
ನತ್ತು ತೆಗೆದರೆ ತೂತು ಕಾಣುವುದು
ಎಂದು ನಗುತ್ತೇನೆ
ಒಡವೆಯೊಂದಿಗೆ
ಕನಸೊಂದೇ ಅಲ್ಲ
ಕಹಿನೆನಪುಳೂ....
ಎರಕಗೊಂಡಿವೆ
ತೆಗೆದಿಡಲಾರದಂತೆ....
No comments:
Post a Comment