Thursday, August 01, 2024

ಗಡಿದಾಟಿದ ಕವಿತೆಗಳ ಮಣಿಸರ

ಕರಾವಳಿಯಲ್ಲಿ ಮುಂಗಾರು ಎಡಬಿಡದೇ ಸುರಿಯುತ್ತಿದೆ. ರಜೆಗೆಂದು ಮನೆಗೆ ಬಂದ ಮಗ ತಡರಾತ್ರಿಯವರೆಗೆ ಓಲಂಪಿಕ್ ಪಂದ್ಯಗಳನ್ನು ವೀಕ್ಷಿಸುತ್ತಾ ಸಮಯ ಕಳೆದರೆ ಅವನೊಂದಿಗೆ ಕುಳಿತುಕೊಳ್ಳುವ ನಾನು ಕವಿತೆಗಳ ಗುಚ್ಛವನ್ನು ಕೈಹಿಡಿದಿರುವೆ. ಈ ಕವಿತೆಗಳ ಮೋಹವೇ ಹಾಗೆ, ಒಮ್ಮೆ ಎದೆಯೊಳಗೆ ಹೊಕ್ಕರೆ ನಮಗರಿವಿಲ್ಲದಂತೆ ಚಿಗುರಿ ಮರವಾಗಿ ಬೇರೂರಿಬಿಡುತ್ತದೆ. ಹಾಗೆ ಕೈಗೆ ಬಂದ ಮಣಿಸರವನ್ನು ವಾರದಿಂದಲೂ ಓದುತ್ತಿರುವೆ.
ಜಗತ್ತಿನ ಉತ್ತಮವಾದ ಕವಿತೆಗಳನ್ನು ಇಲ್ಲಿ ೨೩ ಕವಿಗಳು ಕನ್ನಡಕ್ಕೆ ಅನುವಾದಿಸಿದ್ದಾರೆ. ಹೆಚ್ಚಿನ ಕವಿತೆಗಳು ಇಂಗ್ಲೀಷಿನ ಮೂಸೆಯಿಂದ ಹಾದುಬಂದರೂ ಕೆಲವು ಕವಿತೆಗಳು ಮರಾಠಿ, ತೆಲಗು, ಉರ್ದು ಮತ್ತು ಮಲೆಯಾಳಂನಿಂದ ನೇರ ಕನ್ನಡಕ್ಕಿಳಿದಿವೆ. ರೂಮಿ, ಗುಲ್ಜಾರ್, ಹಫೀಜ್, ಬ್ರೆಕ್ಟ್, ನೆರೂಡಾ, ಅಫ್ರಿನ್, ಮಾಯಾ ಏಂಜೆಲೋ, ಟ್ಯಾಗೋರ್, ಶೆಲ್ಲಿ, ಎಮಿಲಿ, ಬುಕೋವ್ ಸ್ಕಿ ಮೊದಲಾದ ಅನೇಕರ ಕವಿತೆಗಳು ಇಲ್ಲಿವೆ. ಎಚ್. ಎಸ್. ಆರ್. ಓ. ಎಲ್. ಎನ್., ಎಂ. ಆರ್. ಕಮಲಾ, ಚಿದಂಬರ ನರೇಂದ್ರ, ಫಣಿರಾಕ್, ರಮೇಶ ಅರೋಲಿ, ಶಂಕರ ಕೆಂಚನೂರ ಹೀಗೆ ಅನೇಕರು ಇವುಗಳನ್ನು ಕನ್ನಡಿಸಿದ್ದಾರೆ. ಪ್ರತಿಯೊಬ್ಬ ಅನುವಾದಕರು ಅವರ ಅಭಿಪ್ರಾಯದ ಪ್ರಕಾರ ಅನುವಾದವೆಂದರೆ ಏನು? ಮತ್ತು ತಾವು ಯಾಕೆ ಅನುವಾದದಲ್ಲಿ ತೊಡಗಿದ್ದೇವೆ ಎಂಬುದನ್ನು ಸಂಕ್ಷಿಪ್ತವಾಗಿ ಹೇಳಿದ್ದಾರೆ. ಅನುವಾದದ ಬಗೆಗಿನ ಅವರ ಹೇಳಿಕೆಗಳು ತುಂಬಾ ಕತೂಹಲಕಾರಿಯಾಗಿವೆ. 

" ಈ ಕವಿಯ ಆಲೋಚನಾಕ್ರಮ ನಮಗಿಂತ ಅದೆಷ್ಟು ಭಿನ್ನ ಅಥವಾ ಈ ಪರದೇಶಿ ಕವಿ ಅದೆಷ್ಟು ನಮ್ಮ ಹಾಗೆಯೇ ಯೋಚಿಸುತ್ತಾಳೆ" ಎನ್ನುವ ಸೋಜಿಗವೇ ಅನುವಾದಕ್ಕೆ ಪ್ರೇರಣೆ ಎಂದು ಬಾಗೇಶ್ರೀ ಹೇಳಿದರೆ, "ಅವಳ ಹಿಂದೆ ಓಡಾಡಿದ್ದೆಲ್ಲ ಆಧ್ಯಾತ್ಮ, ಆಕೆ ಹಿಂತಿರುಗಿ ನೋಡಿದ್ದಷ್ಟೇ ಕವಿತೆ" ಎನ್ನುತ್ತಾರೆ ಚಿದಂಬರ ನರೇಂದ್ರ. ಜಗದ ನಿಜಸಾಹಿತ್ಯಗಳು 'ಬದುಕನ್ನು ಬದಲಾಯಿಸುವ ತತ್ವಶಾಸ್ತ್ರ' ಗಳ ಹಾಗೆ ಕಾಣತ್ತವೆ ಎನ್ನುತ್ತಾರೆ ಫಣಿರಾಜ್. ಹಲವು ಅನುವಾದಗಳು ಸರಾಗವಾಗಿ ಓದಿಸಿಕೊಳ್ಳುತ್ತವೆಯಾದರೂ, ಕೆಲವು ಕನ್ನಡ ಭಾಷೆಯಲ್ಲಿ ಬರೆದ ಅನ್ಯಭಾಷೆಯ ಕವಿತೆಯಂತೆ ಭಾಸವಾಗುತ್ತವೆ. ಕವನಗಳನ್ನು ಅನುವಾದಿಸುವಾಗ ಪದಗಳೊಂದಿಗೆ ಭಾವಗಳೂ ಅನುವಾದಗೊಳ್ಳುವುದು ಕವಿ, ಅನುವಾದಕರಿಬ್ಬರ ಅದೃಷ್ಟ ಅನಿಸುತ್ತದೆ. ಹಾಗೆ ಓದುತ್ತ ಹೋದಂತೆ ಹಿಡಿದು ನಿಲ್ಲಿಸಿದ ಕೆಲವು ಸಾಲುಗಳು ಇಲ್ಲಿವೆ.
ಇನ್ನೇನು
ಕೆಲ ಕೋಟಿ ವರ್ಷಗಳಲ್ಲಿ
ಸೂರ್ಯನ ಬೆಂಕಿ 
ತಣ್ಣಗಾಗಿ
ಎಲ್ಲೆಲ್ಲೂ
ಬೂದಿ ಹರಡಿಕೊಳ್ಳುತ್ತದೆ
.......
....ಆಗೇನಾದರೂ
ಕಾಗದದ ಮೇಲೆ
ಬರೆದ ಕವಿತೆಯೊಂದು
ಸೂರ್ಯನ ಮೇಲೆ ಬಿದ್ದರೆ
ಸೂರ್ಯ ಮತ್ತೆ ಹೊತ್ತಿ ಉರಿಯಬಹುದು
ಅದೊಂದೇ ಆಸೆಯಿಂದ
ನಾನು ಬರೆಯುತ್ತೇನೆ
-ಗುಲ್ಜಾರ್ (ಚಿದಂಬರ ನರೇಂದ್ರ)

ಆ ಕೋಮುದಂಗೆಯಲ್ಲಿ
ಅವರು ಅಳಿಸಿಹಾಕಿದ್ದು
ವ್ಯಕ್ತಿಗಳನ್ನಲ್ಲ
ಕೇವಲ ಹೆಸರುಗಳನ್ನು
ಅವರು ತರಿದು ಹಾಕಿದ್ದು
ತಲೆಗಳನ್ನಲ್ಲ
ಕೇವಲ ಟೊಪ್ಪಿಗೆಗಳನ್ನು
ಆಕಸ್ಮಿಕವಾಗಿ ಟೊಪ್ಪಿಗೆಯೊಳಗೆ
ತಲೆಗಳಿದ್ದವು ಅಷ್ಟೆ
-ಗುಲ್ಜಾರ್ (ಜಗದೀಶ ಕೊಪ್ಪ)

ಬೇರುಗಳಿಗೆ ಗೊತ್ತು
ತನ್ನ ಜೀವಂತ ಇಡುವುದು
..........
ಉರಿವ ಕಾಡಿನಲ್ಲಿ 
ಉಳಿದೇ ಇರುತ್ತವೆ ಅನೇಕ ಬೇರುಗಳು
ಮಳೆಗಾಗಿ ಕಾದು
ತೊನೆಯಲು ಸಿದ್ದವಾಗಿ
-ಪ್ರಭಾ ಮುಜುಂದಾರ್ (ಲಲಿತಾಂಬಾ ಬಿ. ವೈ)

ಅವರು ನನ್ನ ಭಾಷೆಯನ್ನು ಆಕ್ರಮಿಸುವುದಕ್ಲೂ ಮುಂಚೆ
ನನಗೆ ಅರಬ್ಬಿಯಲ್ಲಿ ಮಾತಾಡಲು ಬಿಡಿ
ನನ್ನಮ್ಮನ ನೆನಪುಗಳನ್ನು ವಸಾಹತಾಗಿಸುವ ಮುಂಚೆ
ನನ್ನ ತಾಯ್ನುಡಿಯಾಡಲು ಅವಕಾಶ ಕೊಡಿ
ನಾನು ಅರಬರ ಹೆಣ್ಣು, ನಮ್ಮ ಸಿಟ್ಟಿಗೆ ಹಲವು ನೆಸಲುಗಳು
-ರಫೀಪ ಜಿಯದಹ್ (ಫಣಿರಾಜ್)

ಆಕೆ ಬಾಗಿಲು ಬಡಿದಳು
ನಾನು 
ಚಾವಿಯ ಗೊಂಚಲನ್ನೇ ಕೊಟ್ಟೆ
ಕೋಣೆ
ಮನೆಯಾಗುವುದನ್ನು ನೋಡುತ್ತಿತ್ತು
ನಾನು
ಪ್ರೀತಿ ಉದಿಸುವುದನ್ನು ನೋಡುತ್ತಿದ್ದೆ
-ಇಮರೋಜ್ (ರೇಣುಕಾ ನಿಡುಗುಂದಿ)

ಇವುಗಳಲ್ಲದೇ ಬುಕೋವಸ್ಕಿಯವರ, ಶಂಕರ ಕೆಂಚನೂರು ಅನುವಾದಿಸಿದ 'ನಗು' ಕವಿತೆ, ತೇಜಶ್ರೀ ಅನುವಾದಿಸಿದ ಪಾಬ್ಲೋ ನೆರುಡಾ ಅವರ 'ಪಾದದ ಮಗು ಪಾದಕ್ಕೆ ಹೇಳಿದ್ದು' ಕವಿತೆ, ರಮೇಶ ಅರೋಲಿ ಅನುವಾದದ ಗೋರಟಿ ವೆಂಕನ್ನ ಅವರ 'ಮಳೆ ಬಂತಮ್ಮಾ' ಕವಿತೆ, ಎಂ. ಆರ್. ಕಮಲಾ ಅವರ ಅನುವಾದದ ಕಸೂತಿಯಾದ ನೆನಪು ಕವಿತೆಗಳು ಮತ್ತೆ, ಮತ್ತೆ ಓದಿಸಿಕೊಂಡವು. ಒಂದೇ ಕವಿತೆಯನ್ನು ದಿಗ್ಗಜ ಅನುವಾದಕರಾದ ಓ. ಎಲ್. ಎನ್. ಮತ್ತು ಎಚ್. ಎಸ್. ಆರ್. ಅವರು ಅನುವಾದಿಸಿದ್ದು ಗ್ರಹಿಕೆಗಳ ವಿಭಿನ್ನತೆಗೊಂದು ಉಪಮೆಯಂತೆ ದಾಖಲಾಗಿವೆ. ಕುವೆಂಪು ಭಾಷಾಭಾರತಿ ಪ್ರಕಟಿಸಿದ ಈ ಪುಸ್ತಕದ ಬೆಲೆ ಕೇವಲ ೧೨೦ ರೂಪಾಯಿಗಳು. ಡಾ| ಎಚ್. ಎಸ್ ಅನುಪಮಾ ಈ ಕವಿತೆಗಳನ್ನು ಸಂಪಾದಿಸಿದ್ದಾರೆ. 

No comments:

Post a Comment