Thursday, August 08, 2024

ಪ್ರೇಮವೆಂಬುದು ಮುಗಿಯದ ಕವಿತೆ

ಅನಿರೀಕ್ಷಿತವಾಗಿ ಭೇಟಿಯಾದ ಮಲ್ಲಿಕಾರ್ಜುನಗೌಡ ತೂಲಹಳ್ಳಿಯವರು ಹೆಚ್ಚಿಗೇನೂ ಹೇಳದೇ ಈ ಕವನ ಸಂಕಲನವನ್ನು ಕೈಗಿಟ್ಟರು. ಅವರು ಬರೆದ 68 ಪ್ರೀತಿ ಕವಿತೆಗಳ ಗುಚ್ಛವಿದು. ಇಲ್ಲಿಯ ಕವಿತೆಗಳನ್ನು ಓದುತ್ತಿರುವಾಗ ಅನಿಸಿದ್ದು ಹೌದಲ್ಲ,  ಪ್ರೇಮದ ಬಗ್ಗೆ ಹೇಳಬೇಕಾದದ್ದು ಇನ್ನೆಷ್ಟೋ ಇದೆ.

ಈಗಾಗಲೇ ಶರೀಫನ ಬೊಗಸೆ, ತುಂಗಭದ್ರೆಯ ಪಾತ್ರದಲಿ ಎಂಬ ಕವನ ಸಂಕಲನವನ್ನು ಪ್ರಕಟಿಸಿರುವ ಗೌಡರು ಇದುವರೆಗೆ ಬರೆದ ಪ್ರೇಮ ಕವಿತೆಗಳನ್ನೆಲ್ಲ ಸೇರಿಸಿ ಈ ಕವನ ಸಂಕಲನವನ್ನು ಪ್ತಕಟಿಸಿದ್ದಾರೆ. ಮಾನವನ ಇತಿಹಾಸವನ್ನು ಗಮನಿಸಿದರೆ ಪ್ರೇಮ ಮತ್ತು ಯುದ್ಧಗಳಷ್ಟು ಅವನನ್ನು ಕಾಡಿದ ಸಂಗತಿಗಳು ಬೇರೆಯಿಲ್ಲ. ಬೇರೆಯಾಗಿಟ್ಟ ಕಾಂತದ ವಿರುದ್ಧ ದ್ರುವಗಳಂತೆ ಸದಾ ಮಿಲನಕ್ಕೆ ಹಾತೊರೆಯುವ ಪ್ರೇಮವೆಂಬ ಭಾವವೇ ಇಲ್ಲಿ ಕವಿಯ ಎದೆಯ ಮೀಟುವ ತಂತಿ. ಕೆಲವೊಮ್ಮೆ ಶೃಂಗಾರ, ಹಲವು ಬಾರಿ ವಿರಹ, ಕಾಯುವಿಕೆ, ಕನಸುವಿಕೆ, ನೆನಪಿನ ಯಾನ, ಮತ್ತೆ ಸೇರುವ ಹಂಬಲ, ಭಾರವಾದ ವಿದಾಯ, ವಿದಾಯದ ನಂತರವೂ ಕಾಡುವ ಪ್ರೇಮಿಯ ಛಾಯೆ ಇಲ್ಲಿನ ಕವಿತೆಗಳ ಭಾವವಾಗಿದೆ. ಪ್ರಣಯದ ಭಾವಗಳಿಗೆ ಹೊಸಬಗೆಯ ಉಪಮೆಗಳು, ರೂಪಕಗಳು ಸಂಕಲನದುದ್ದಕ್ಕೂ ಸಾಲುಗಟ್ಟಿ ನಿಂತಿವೆ. 

ಓದುತ್ತ ಹೋದಂತೆ ಮತ್ತೆ, ಮತ್ತೆ ಜಗ್ಗಿ ನಿಲ್ಲಿಸಿದ ಕವಿತೆಯ ಸಾಲುಗಳು ಕೆಳಗಿವೆ. 
ನೀನು ಹಾಗೆ ನೋಡದಿದ್ದರೆ...
ನಾನೆಂಥ ಬಡವನಾಗಿಬಿಡುತ್ತಿದ್ದೆ!

ಛೇ! ಎದ್ದುಹೋಗಿದೆ 
ನೀ ಪುಸ್ತಕದಲ್ಲಿಟ್ಟಿದ್ದ ನವಿಲುಗರಿ
ಹೂ ಪಕಳೆ ಚಿಟ್ಟೆಯಾಗಿದೆ
ಓಡುವ ಶಕ್ತಿ ಪರೀಕ್ಷೆಗೆ ನೀನಿಳಿದರೆ
ನನಗೀಗ ಗಾಳಿಯಾಗುವುದೊಂದೇ ದಾರಿ

ಹಬ್ಬಕ್ಕೆ ಹೊರಟಂತೆ ಬಂದುಬಿಡು
ನಿನ್ನ ಪಾದದಂಚಿಗೆ ಮೋಹ ಸವರಿ
ಇದ್ದಷ್ಟೂ ಕಾಲ ಕಾಲ ಮರೆಸಿ ಕಳಿಸುವೆ

ನೀನು ಕಾಯಿಸದಿದ್ದರೆ
ನನ್ನಲ್ಲಿ
ಒಂದು ಪದವೂ ಹುಟ್ಟುತ್ತಿರಲಿಲ್ಲ
ನೀನು ನೋಯಿಸದಿದ್ದರೆ 
ನಾನು ಬದುಕುತ್ತಿರಲಿಲ್ಲ

ಒಂದು ಕೈಗಳ ಬಿಸುಪಿನಿಂದ
ಸಂದ ಸಂದೇಶಗಳು
ಮಲ್ಲಿಗೆ ಅಂಟಂತೆ ಹಬ್ಬಿ
ನಿನ್ನ ಜಾತ್ರೆ ಮನದೊಳಗೆ
ಸುಗಂಧರಾಗವ ನುಡಿಸುತ
ಓಡಾಡುವ ನಾನು
ಒಂದು ಕೊಳಲು ಮರ

ಎಲೆಭಾರ ಮರಕಾಗಿ
ಎದೆಭಾರ ನೆಲಕಾಗಿ
ಹರಿದು ಕಾಮನಬಿಲ್ಲು
ಕಣ್ಣೀರ ಹೊಳೆಯಲ್ಲಿ
ಕೊಚ್ಚಿಹೋಯಿತು 
ನೆರೆಗೆ ಚಿತ್ರಶಾಲೆ

ಚೂರಿ ಮೊನೆ ಮೇಲೂ
ಧ್ಯಾನಸ್ಥ ಹುಣ್ಣಿಮೆ
ಹಾಲು ಬೆಳಕನ್ಮು ಚೆಲ್ಲಬಹುದೆ?

ಬೆರಗೆಂದರೆ
ಜೋರು ಗಾಳಿ
ಮಳೆ
ಒಂಟಿ ಛತ್ರಿ ಹಂಚಿಕೊಂಡ ನಾವು
ಮೊದಲ ಪ್ರೇಮದ ಸೆಳಕಿಗೆ ಒಳಗಾದ ಪ್ರೇಮಿಯ ಮಿತಮಾತಿನಂತೆ ಇಲ್ಲಿಯ ಕವಿತೆಗಳು ಎಲ್ಲಿಯೂ ವಾಚಾಳಿಯಾಗುವುದಿಲ್ಲ, ಬಿಗಿ ಬಂಧದ ಹದವ ಬಿಟ್ಟುಕೊಡುವುದಿಲ್ಲ. ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ ಇವರು ಪ್ರಕಟಿಸಿದ ಈ ಕವಿತೆಯ ಪುಸ್ತಕ ಕವನದಂತೆ ನವಿರಾಗಿದೆ ಮತ್ತು ನೋಡಿದೊಡನೆ ಕೈಗೆತ್ತಿಕೊಳ್ಳುವಷ್ಟು ಮುದ್ದಾಗಿದೆ. ವಾರಗಳ ಕಾಲ ರಾತ್ರಿಯ ಓದನ್ನು ಸಂಪನ್ನಗೊಳಿಸಿದ ಕವಿಗೆ, ಕವಿತೆಗೆ ಶರಣು.

No comments:

Post a Comment