ನಾನಾಗ ಪುಟ್ಟ ಹುಡುಗಿ. ನನಗೊಬ್ಬಳು ಪುಟ್ಟ ಗೆಳತಿ. ಇಬ್ಬರಿಗೂ ಅದೆಂಥದ್ದೋ ಸೆಳೆತ. ನಮ್ಮ ಅಂದಿನ ದಿನಚರಿಯೆಂದರೆ ಪ್ರತಿದಿನ ನಾವಿಬ್ಬರೂ ಹೊಸದೊಂದು ಕವನ ಬರೆಯುತ್ತಿದ್ದೆವು. ಮತ್ತೆ ಬೆಳಿಗ್ಗೆ ಸಿಕ್ಕಿದಾಗ ನಮ್ಮ ಕವನಗಳನ್ನು ಪರಸ್ಪರ ಬದಲಾಯಿಸಿ ಓದುತ್ತಿದ್ದೆವು.
ಅವಳ ಅಕ್ಕಂದಿರೆಲ್ಲ ಕಾಲೇಜಿನಲ್ಲಿ ಓದುತ್ತಿದ್ದರು. ಬಹಳ ಜಾಣೆಯರೂ ಹೌದು. ಹಾಗಾಗಿ ಅವಳಿಗೆ ಸಮಕಾಲೀನ ಸಾಹಿತ್ಯದ ಸಾಂಗತ್ಯವಿತ್ತೇನೊ? ಅವಳು ತನ್ನ ಕವನಕ್ಕೆ ತಲೆಬರಹ ಕೊಟ್ಟು ವಾಸ್ತವಿಕ ವಿಷಯದ ಬಗ್ಗೆ ಬರೆಯುತ್ತಿದ್ದಳು. ನನಗೋ ಅಪ್ಪನ ಯಕ್ಷಗಾನದ ಪದ್ಯ ಮತ್ತು ಅಮ್ಮನ ದೇವರನಾಮ ಬಿಟ್ಟರೆ ಬೇರೆ ಗೊತ್ತಿರಲಿಲ್ಲ. ಹಾಗಾಗಿ ಅಂಕಿತವನ್ನಿಟ್ಟುಕೊಂಡು ಹಾಡು ಬರೆಯುತ್ತಿದ್ದೆ. ನನ್ನನ್ನು ಬಹಳ ಪ್ರೀತಿಸುತ್ತಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಹೆಸರನ್ನೇ ನನ್ನ ಅಂಕಿತವಾಗಿಸಿಕೊಂಡಿದ್ದೆ. ಹಾಗಾಗಿ ಕೃಷ್ಣಾನಂದ ಎಂಬುದು ನನ್ನ ಅಂಕಿತವಾಗಿತ್ತು. ಒಮ್ಮೆ ನಾವಿಬ್ಬರೂ ತಲೆಬರಹ ಮೇಲೋ, ಅಂಕಿತ ಮೇಲೋ ಎಂಬ ಬಗ್ಗೆಯೇ ಸುಮಾರು ಕವನಗಳನ್ನು ಬರೆದ ನೆನಪು.
ಸಾಧಾರಣವಾಗಿ ನನ್ನ ಕವನಗಳು ಹೀಗಿರುತ್ತಿದ್ದವು.
ಎಂದೂ ನನ್ನ ಮನದಲಿ
ನಿನ್ನಿರವೇ ಇರಲಿ
ಹೃದಯದಾಳದಲ್ಲಿ ನಿನ್ನ
ದಿವ್ಯರೂಪವಿರಲಿ
ನನ್ನ ಮನದ ಭಾವ ನೀ
ಮೀಟುವ ವೀಣೆಯಾಗಿರಲಿ
ನೋವು ನಲಿವು ಎಲ್ಲವೂ
ನಿನ್ನ ಕೃಪೆಯಾಗಿರಲಿ
ನನ್ನ ಕೀರ್ತಿ ಅಪಮಾನವು
ಎಂದೂ ನಿನ್ನದಾಗಿರಲಿ
ಸ್ವಾಮಿ ಕೃಷ್ಣಾನಂದನನ್ನು
ನಿರುತ ನೆನೆಯುತಿರಲಿ
ಹೀಗೆ ನಾನು ಬೇಸರವಾದರೆ, ದುಃಖವಾದರೆ ಕವನ ಬರೆಯುತ್ತಾ ನನ್ನನ್ನು ನಾನು ಮಹಾನ್ ಕವಿ ಎಂದುಕೊಂಡಿದ್ದೆ. ಒಂದು ದಿನ ಪೇಟೆಯ ಶಾಲೆಗೆ ಹೋಗುವ ಅಕ್ಕ ಮನೆಗೆ ಬಂದಿದ್ದಳು. ನನಗೆ ಆ ದಿನ ಏನೋ ವಿಷಯಕ್ಕೆ ಬೇಸರವಾಗಿತ್ತು. ಯಥಾಪ್ರಕಾರ ನಾನು
ಎಂದಿಗೆ ಒಯ್ಯುವೆಯೋ ಹರಿಯೆ
ಬಂಧನದಲಿ ಸಿಕ್ಕಿ ಬಳಲಿ ನಾ ಬೆಂಡಾದೆ
ಎಂದು ಹರಿಯೊಂದಿಗೆ ಗೋಳು ತೋಡಿಕೊಳ್ಳುವ ಪದ್ಯ ಬರೆದಿದ್ದೆ. ಅಕ್ಕ ನನ್ನ ಪದ್ಯವನ್ನು ಕದ್ದು ಓದಿದಳು. ಮತ್ತೆ ನನ್ನನ್ನು ಕರೆದು ಹೇಳಿದಳು, " ಕವನ ಅಂದರೆ ಹಾಗಲ್ಲ. ಅದೆಲ್ಲ ಹಿಂದಿನ ಕಾಲದ ಭಜನೆಗಳು. ನೀನು ನಿನ್ನ ಪಾಠ ಪುಸ್ತಕದಲ್ಲಿಬರುತ್ತದೆಯಲ್ಲ, ಆ ಥರದ ಪದ್ಯ ಬರೆಯಬೇಕು. ಹೀಗಿದ್ದದ್ದೆಲ್ಲಾ ಎಷ್ಟು ಬೇಕಾದರೂ ಬರೆಯಬಹುದು."
ನನಗೆಷ್ಟು ಅರ್ಥವಾಯಿತೋ ಗೊತ್ತಿಲ್ಲ. ಆದರೆ ಬೇರೆಯೇ ಒಂದು ಬರೆಯುವ ರೀತಿಯಿದೆ ಎಂಬುದಂತೂ ತಿಳಿಯಿತು. ನಂತರ ನಾನು, ನನ್ನ ಗೆಳತಿ ಕಾರಣಾಂತರಗಳಿಂದ ಬೇರೆ ಬೇರೆ ಶಾಲೆಗಳಿಗೆ ಹೋದೆವು. ಆದರೇನಂತೆ? ಪ್ರತಿ ವಾರ ನಮ್ಮ ಕವನಗಳನ್ನು ಹೊತ್ತ ಪತ್ರಗಳು ವಿನಿಮಯವಾಗುತ್ತಿದ್ದವು. ಕೊನೆಯ ಪತ್ರದಲ್ಲಿ ಅವಳು ತಾನು ' ಸಮರ ಸಾಹಸಿಗೆ ಹುಲ್ಲು ಹಾಸಿಗೆ' ಎಂಬ ನೀಳ್ಗವಿತೆ ಬರೆಯುತ್ತಿರುವುದಾಗಿ ಹೇಳಿದ್ದಳು. ಕಾಲೇಜಿನಲ್ಲಿ ತೆಗೆದುಕೊಂಡ ವಿಜ್ಞಾನದ ಹೆದರಿಕೆ ಮತ್ತೆ ನಮ್ಮ ಬರವಣಿಗೆಯನ್ನು ಬರಿದಾಗಿಸಿತು. ಪತ್ರಗಳೂ ಕ್ಷೀಣಿಸಿದವು. ಆ ಕಾಲದ ಪತ್ರಗಳನ್ನು ಮನೆಯೇ ಇರದ ನಾನು ಕಾಯ್ದಿಟ್ಟುಕೊಳ್ಳಲಾಗಲಿಲ್ಲ. ಅವಳೆಲ್ಲಾದರೂ ಇಟ್ಟುಕೊಂಡಿದ್ದಾಳೋ ಗೊತ್ತಿಲ್ಲ. ಅವಳೆಲ್ಲಿರುವಳೆಂಬುದೂ ತಿಳಿದಿಲ್ಲ.
ಅಕ್ಕ ಪಕ್ಕಾ ಸಾಹಿತ್ಯದ ವಿದ್ಯಾರ್ಥಿ. ಅವಧಾನಿಯಂತಹ ಪ್ರಸಿದ್ಧರ ಶಿಷ್ಯೆ. ಅವಳು ಡಿಗ್ರಿ ಮೊದಲ ವರ್ಷದವಳಿದ್ದಾಗಲೇ ಬೇಂದ್ರೆಯವರ ಸಖೀಗೀತಕ್ಕೆ ಭಾಷ್ಯ ಬರೆದು ಗುರುಗಳಿಂದ ಭೇಷ್ ಎನಿಸಿಕೊಂಡಿದ್ದಳು. ಪ್ರಾಣಿಬಲಿಯ ಕುರಿತು ಅವಳು ಬರೆದ ಮಾರಿಬಲಿ ಕತೆ ಕಾಲೇಜಿನಲ್ಲಿ ಹೊಸ ಸಂಚಲನ. ಮೂಡಿಸಿತ್ತು. ಆದರೆ ಅದೇ ವರ್ಷ ನಡೆದ ಮದುವೆ ಅವಳ ಕನಸನ್ನೆಲ್ಲಾ ಬಲಿತೆಗೆದುಕೊಂಡಿತು. ಇಪ್ಪತ್ತೈದು ವರ್ಷ ಅವಳು ಸವೆಸಿದ ಬದುಕು ಹತ್ತಾರು ಕಾದಂಬರಿಗೆ ಸಾಕಾದೀತು!
ಈಗ ಅಕ್ಕ ಮತ್ತೆ ನೆಲೆಗೊಂಡಿದ್ದಾಳೆ. ಸ್ಮಾರ್ಟ್ ಫೋನ್ ಬಂದಮೇಲೆ ಸಣ್ಣಕ್ಕೆ ಸಾಹಿತ್ಯದ ರಚನೆ ಆರಂಭಿಸಿದ್ದಾಳೆ. ಹೇಗೆ ಬರೆಯೋದು? ನಂಗೊಂಚೂರು ಹೇಳೆ ಎಂದವಳು ಕೇಳುವಾಗ ಮತ್ತೆ ನನಗೆ ಬರೆಯುವುದನ್ನು ಕಲಿಸಿದ ಅಕ್ಕ ಕಣ್ಮುಂದೆ ಬಂದಳು. ನೆಲಮಟ್ಟದ ಬದುಕನ್ನು ಕಂಡ, ಬದುಕಿನ ಎಲ್ಲ ಕಷ್ಟಗಳನ್ನು ಉಂಡ ಅವಳು ಬರೆದಳೆಂದರೆ...... ಎಲ್ಲರ ಮಾರಿಬಲಿಯಾಗುವುದಂತೂ ಖಂಡಿತ! ನನಗೋ ಹೇಳತೀರದ ಹಿಗ್ಗು.....
ವಾವ್! ಅಕ್ಕ ಮತ್ತೆ ಬರೀತಿದ್ದಾಳೆ!