Saturday, March 24, 2018

ಮಿಂಚಿದ ಮೂಗುಬೊಟ್ಟು

ಅದು ಬಾಲ್ಯಕಾಲದಲ್ಲಿ ಕಂಡ ಒಂದು ಅಚ್ಚಳಿಯದ ದೃಶ್ಯ. ಆಗೆಲ್ಲ ನಮ್ಮೂರಿಗೆ ಬರುವ ಹೆಂಚುಮಣ್ಣಿನ ಲಾರಿಗಳೇ ನಮ್ಮ ಸಂಪರ್ಕಸಾಧನಗಳಾಗಿದ್ದವು. ಹೀಗೆ ಒಮ್ಮೆ ಲಾರಿಯಲ್ಲಿ ಹೋಗುವಾಗ ರಸ್ತೆಯಂಚಿನ ಬಯಲಿನಲ್ಲಿ ಸಾಲುಸಾಲು ಜನರು ಸೇರಿದ್ದರು.  ನಮ್ಮ ಡ್ರೈವರ್ ಕೂಡಾ ಏನಾಗಿದೆಯೆಂದು ನೋಡಲು ಲಾರಿ ನಿಲ್ಲಿಸಿದ.  ಕುಡುಕ ಗಂಡನೊಬ್ಬ ಹೆಂಡತಿಯನ್ನು ಅಟ್ಟಾಡಿಸಿ ಹೊಡೆಯುತ್ತಿದ್ದ. ಅವಳ ಅತ್ತೆಯಿರಬೇಕು ಗುಡಿಸಲ ಪಕ್ಕ ನಿಂತವಳು. ಮತ್ತಿಷ್ಟು ಹೊಡೆಯುವಂತೆ ಪ್ರಚೋದಿಸುತ್ತಿದ್ದಳು. ಅವನು ಅವಳ ತಲೆಗೂದಲು ಹಿಡಿದು ಜಗ್ಗಾಡುತ್ತಾ, ಹಿಗ್ಗಾಮುಗ್ಗಾ ಬಾರಿಸುತ್ತಿದ್ದ. ಸೇರಿದವರೆಲ್ಲ. ಮುಸಿ ಮುಸಿ ನಗುತ್ತಾ, ' ಕುಡಿತ ಹೆಚ್ಚಾದರೆ ಹೀಗೆ 'ಎನ್ನುತ್ತಾ ಸಾಗುತ್ತಿದ್ದರು.

ಕರುಳು ಕಿವುಚುವ ಅವಳ ಕೂಗು ಎಷ್ಟೋ ದಿನ ನನ್ನನ್ನು ಕಲಕಿಬಿಟ್ಟಿತ್ತು. ಶಾಲೆಯಲ್ಲಿ ಬಂದು ಗೆಳತಿಗೆ ಹೇಳಿದಾಗ ಅವಳು ಆ ಊರಿಗೆ ಮದುವೆಯಾಗಿ ಹೋದ ತನ್ನ ಅಕ್ಕನಿರಬಹುದೆ  ಎಂದು ಯೋಚಿಸಿ ಕಣ್ಣೀರಾಗಿದ್ದಳು. ಆಗೆಲ್ಲ ನಮ್ಮ ಹಳ್ಳಿಯಲ್ಲಿ ಹೇಗಿತ್ತೆಂದರೆ ಮದುವೆಯಾಗಿ ವರ್ಷದೊಳಗೆ ಹೆಂಡತಿಗೆ ಹೊಡೆಯದಿದ್ದರೆ ಅವನು ಗಂಡಸೇ ಅಲ್ಲ ಎಂಬಂತೆ. ಹಾಗಾಗಿ ಮದುವೆಯಾಗಿ ತಿಂಗಳೊಳಗೇ ಕುಡಿದು ಬಂದು ಹೆಂಡತಿಗೊಮ್ಮೆ ಬಾರಿಸಿ, ತಮ್ಮ ಗಂಡಸ್ತನವನ್ನು ಸಾಬೀತುಗೊಳಿಸುತ್ತಿದ್ದರು.

ಪಟ್ಟಣದ ಶೋಕಿಯ ಜಗತ್ತಿಗೆ ಬಂದಮೇಲೆ ಅದೆಲ್ಲವೂ ಮನಸ್ಸಿನಾಳದಲ್ಲೆಲ್ಲೋ ತಳ್ಳಲ್ಪಟ್ಟ ನೆನಪುಗಳಾಗಿದ್ದವು. ಮೊನ್ನೆ ಮೊಗಳ್ಳಿಯವರ 'ಮೂಗುಬೊಟ್ಟು' ಕಥೆ ಓದಿದಾಗ ಮತ್ತೆ ಎಲ್ಲವೂ ತಾ ಮುಂದೆ, ತಾ ಮುಂದೆ ಎಂದು ಒತ್ತರಿಸಿ ಬಂದವು.
ಕುಡುಕ ಗಂಡನ ಪೌರುಷತ್ವದ ದಬ್ಬಾಳಿಕೆಗೆ ನಲುಗಿದ ತಾಯಿಯೊಬ್ಬಳು ತಾನಾಡಬೇಕಾದ ಒಂದು ಮಾತನ್ನು ಕೊನೆಗೂ ಆಡಲಾರದೆ ಮರೆಯಾಗುವ ಸಂಕಟದ ಕಥೆಯಿದು.  ಅದೆಲ್ಲವನ್ನೂ ಹೇಳುವ ಆ ಮುಗ್ಧ ಮಗುವಿನ ಅಸಹಾಯಕ ಸ್ಥಿತಿ ಓದುಗರೆದೆಯನ್ನು ಮರಮರನೆ ಕಲುಕಿಬಿಡುತ್ತದೆ. ಮಾತೇ ಆಡಲಾಗದ ಆ ಹೆಂಗಳೆಯರ ಮಾತು ಓದುಗರ ಗಂಟಲಿನವರೆಗೆ ಬಂದು ಹೊರಬರಲಾರದೇ ಚಡಪಡಿಸುತ್ತದೆ. ಅವರಾಡದ ಎಷ್ಟು ಮಾತುಗಳನ್ನಿಂದು ನಾವು ಆಡಬೇಕಿದೆ ಎಂಬುದನ್ನು ಸೂಚಿಸುತ್ತದೆ. ಓದಿ ಎರಡು ದಿನ ಏನನ್ನೂ ಬರೆಯಲಾರದಷ್ಟು ನನ್ನನ್ನು ಕಾಡಿತು. ಇನ್ನೂ ಹಳ್ಳಿಗಳಲ್ಲಿ ಹೆಣ್ಣಿನ ಸ್ಥಿತಿ ಹಾಗೆಯೇ ಇದೆಯೋ ಏನೋ ಯಾರಿಗೆ ಗೊತ್ತು?

ಕುಡಿದು ಬರುವ ಗಂಡನ ಹೊಡೆತ ತಾಳಲಾರದೇ ಇಡೀ ರಾತ್ರಿ ಬಯಲಲ್ಲಿ ಕಳೆವ ಹೆಂಗಸರು, ಮಕ್ಕಳನ್ನೆಲ್ಲಿ ಕೊಂದಾನೆಂದು ರಾತ್ರಿಯಿಡೀ ಎಚ್ಚರವಿದ್ದು ಕಾಯುವ ತಾಯಂದಿರು, ಕಟ್ಟಿದ ತಾಳಿಯನ್ನೂ ಗಂಡನ ಕುಡಿತಕ್ಕೆಂದು ಬಿಚ್ಚಿಕೊಡುವ ಪತಿವ್ರತೆಯರು....... ಇಷ್ಟಾದರೂ ಅನಾರೋಗ್ಯ, ಆಪತ್ತು ಬಂದರೆ ಗಂಡನ ಸೇವೆಗೆ ಟೊಂಕಕಟ್ಟಿ ನಿಲ್ಲುವ ಗರತಿಯರು..... ಎಲ್ಲರನ್ನೂ ಹಳ್ಳಿಯಲ್ಲಿ ಕಂಡು ನೊಂದಿರುವೆ. ಕುಡಿಯದವರೂ ಇದಕ್ಕೆ ಹೊರತೇನಲ್ಲ. ತನ್ನ ಮೊಣಕಾಲುದ್ದದ ಜಡೆಯನ್ನು ಗಂಡ ಬಾಯ್ಗತ್ತಿಯಿಂದ ಕೊಯ್ದುಬಿಟ್ಟ ಎನ್ನಲಾಗದೇ ಟೈಪಾಯ್ಡ್ ಬಂದು ಕೂದಲುದುರಿ ಮತ್ತೆ ಬರುತ್ತಿದೆ ಎಂದು ಕತೆಕಟ್ಟಿ ಹೇಳುತ್ತಿದ್ದ ಚಿಕ್ಕಮ್ಮನ ಮುಖ ಕಣ್ಣೆದುರು ಬಂದು ಕಾಡುತ್ತದೆ.

ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ಕನಿಷ್ಠ ದೈಹಿಕ ಹಿಂಸೆಯಿಂದಲಾದರೂ ಸ್ವಲ್ಪಮಟ್ಟಿಗೆ ಹೆಣ್ಣನ್ನು ರಕ್ಷಿಸಿದೆ ಅನಿಸುತ್ತದೆ. ಸತ್ಯವಾಗಲಿ ಎಂದೇ ಮನಸ್ಸು ಬಯಸುತ್ತದೆ. ಕಂಡುಂಡ ನೋವುಗಳಷ್ಟೇ ಇಂತಹ ಗಾಢವಾದ ಕತೆಯಾಗಲು ಸಾಧ್ಯವೇನೋ?

No comments:

Post a Comment