ಸುಡುವ ಕರಾವಳಿಗೆ ಕರಬೂಜವೊಂದೇ ಪರಿಹಾರ..!!
ಸುಧಾ ಆಡುಕಳ
ಅವನು ದಿನವೂ ನನಗೆ ಟಾಟಾ ಹೇಳಿ ಕಾಲೇಜಿಗೆ ಹೊರಡುತ್ತಾನೆ. ಸಂಜೆ ಎಲ್ಲರೊಂದಿಗೆ ಮನೆ ಸೇರಿದರೆ ನನಗೇನೂ ಅನಿಸುತ್ತಿರಲಿಲ್ಲ. ಅವನ ಕನಸುಗಳು ಅವನನ್ನು ಸಂಜೆಯ ಟ್ಯೂಶನ್ ತರಗತಿಗಳಿಗಾಗಿ ದೂರದ ಊರಿನ ಮೂಲೆಯವರೆಗೂ ಕರೆದೊಯ್ಯುತ್ತವೆ. ಅವನಿಗೆ ಪ್ರತಿಷ್ಠಿತ ಟ್ಯೂಶನ್ ಸೆಂಟರ್‍ಗಳಲ್ಲಿ ಓದುವಷ್ಟು ಶ್ರೀಮಂತಿಕೆಯನ್ನು ಅವನು ನಂಬಿದ ದೈವ ಕರು ಸಿಲ್ಲ. ಹಾಗಾಗಿ ಅಲ್ಲೆಲ್ಲೋ ಅಪರಿಚಿತ ಗಲ್ಲಿಯೊಳಗೆ ನಿವೃತ್ತ ಪ್ರೊಫೆಸರ್ ಒಬ್ಬರು ತನ್ನ ಮನೆಯಲ್ಲಿಯೇ ನಡೆಸುವ ತರಗತಿಗಳಿಗೆ ಅವನು ಪ್ರತಿದಿನ ಸಂಜೆ ಬಿಡದೇ ಹೋಗುತ್ತಾನೆ. ರಾತ್ರಿ ಬಹಳ ಹೊತ್ತಿನವರೆಗೆ ಅವನ ಕೋಣೆಯಲ್ಲಿ ಉರಿಯುತ್ತಿರುವ ದೀಪದ ಬೆಳಕು ಅವನು ಅವನ ಕನಸಿಗೆ ಹತ್ತಿರವಾಗುತ್ತಿರುವುದನ್ನು ಸಾರುತ್ತವೆ. ಎಲ್ಲವೂ ಸರಿಯಾಗಿದ್ದರೆ ಚಿಂತೆ ಪಡುವಂಥದ್ದೇನಿರಲಿಲ್ಲ.
ಆದರೆ ಆ ಹುಡುಗ ಪ್ರತಿದಿನ ಕಾಲೇಜಿಗೆ ಹೋಗುವಾಗಲೂ ತನ್ನ ಹಣೆಯ ಮೇಲೆ ಮೂರು ವಿಭೂತಿಯ ಪಟ್ಟಿಗಳನ್ನು ಧರಿಸಿಯೇ ಹೋಗುವುದು. ಯಾರಿಗೆ ಗೊತ್ತು? ಸಂಜೆಯವರೆಗೂ ಅವು ಹಾಗೆಯೇ ಇರಬಹುದು ಕೂಡಾ. ಹಾಗೆಂದು ಅವನೇನು ತನ್ನ ಧರ್ಮದ ವಿಷಯದಲ್ಲಿ ಕರ್ಮಠನಲ್ಲ. ಅವನಿಗೆ ಎಲ್ಲ ಧರ್ಮಗಳ ಗ್ರಂಥಗಳೂ ತಿಳಿದಿವೆ. ಎಲ್ಲವನ್ನೂ ಅವನು ಆಸಕ್ತಿಯಿಂದ ಓದಿದ್ದಾನೆ. ಈದ್‍ನ ಸಿಹಿಯನ್ನೂ, ಕ್ರಿಸ್‍ಮಸ್‍ನ ಕೇಕನ್ನೂ ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ. ದೀಪಾವಳಿಯ ಹೋಳಿಗೆಯ ಕಟ್ಟು ಅವನ ಮನೆಯಿಂದ ಅವರ ಮನೆಗಳಿಗೂ ರವಾನೆಯಾಗಿವೆ.
ಆದರೂ ಅವನು ತನ್ನ ಹಣೆಯ ನಾಮವನ್ನು ಒರೆಸಲು ತಯಾರಿಲ್ಲ. ನಾನೂ ಅವನನ್ನು ಕೇಳಿದ್ದೇನೆ, ಯಾಕೆ ಬೇಕು ಅದು? ಎಂದು. ಆಗವನು ಚೆಂದದ ಕಥೆ ಹೇಳಿದ್ದಾನೆ. ಅವನಿಗೆ ಅವನ ಅಜ್ಜನೆಂದರೆ ಪ್ರಾಣ. ಅವರೇ ಅವನಿಗೆ ಅಘ್ರ್ಯ, ತರ್ಪಣಗಳನ್ನೆಲ್ಲ ಕಲಿಸಿದ್ದಾರೆ. ಪ್ರತಿದಿನ ಪ್ರೀತಿಯಿಂದ ಅವರೇ ಹಣೆಗೆ ಮೂರು ಗೆರೆಗಳನ್ನಿಟ್ಟು, ‘ಇವು ನಿನ್ನನ್ನು ಕಾರುಣ್ಯದಿಂದ ರಕ್ಷಿಸುವ ಬ್ರಹ್ಮಗೆರೆಗಳು’ ಎಂದು ಬೆನ್ನು ಸವರಿದ್ದಾರೆ. ಇಂದು ಅವರಿಲ್ಲ. ಆದರೆ ಅವರು ಕಲಿಸಿದ ನೂರಾರು ಶ್ಲೋಕಗಳು, ಉಪನಿಷತ್ ಮಂತ್ರಗಳು ಅವನ ಮಸ್ತಿಷ್ಕದಲ್ಲಿ ಜೋಪಾನವಾಗಿವೆ.
ಅಜ್ಜನ ನೆನಪಿಗಾಗಿ ದಿನವೂ ಅವನು ಶ್ರದ್ಧೆಯಿಂದ ಹಣೆಯ ಮೇಲೆ ಮೂರು ಗೆರೆ ಎಳೆದು ಕನ್ನಡಿಯೆದುರು ನಿಂತು ನಗುತ್ತಾನೆ. ನನಗೀಗ ಅದೇ ಚಿಂತೆ! ಅವನ ಕಥೆಯನ್ನು, ನೆನಪನ್ನು ಅಳಿಸುವುದು ನನಗಂತೂ ಶಕ್ಯವಿಲ್ಲ. ಈ ಕಡೆ ಅಲ್ಲಿ, ಆ ಗಲ್ಲಿಯಲ್ಲಿ ಇತ್ತೀಚಿಗೆ ಎಲ್ಲವೂ ಸರಿಯಿಲ್ಲ. ಆ ಸಂಜೆಯಲ್ಲಿ, ಎಲ್ಲರ ತಲೆಯೊಳಗೆ ಭೂತ, ಪಿಶಾಚಿಗಳು ಓಡಾಡುವ ಸಮಯದಲ್ಲಿ ಇವನ ಹಣೆಯ ಮೇಲಿನ ಗೆರೆಗಳು ಅವರನ್ನು ಸರ್ಪದಂತೆ ಕೆಣಕಿ, ಹತಿಯಾರಗಳು ಹೊರಬಂದು ಝಳಪಿಸಿ, ನನ್ನ ಕನಸು ಹೊತ್ತ ಹುಡುಗನನ್ನು …… ಮತ್ತು ಅವನ ಕನಸನ್ನೂ ಒಟ್ಟಿಗೇ….. ಓ ದೇವರೇ………. ಹಾಗಾಗದಿರಲಿ.
ಏನನ್ನು ಬಿಟ್ಟರೂ ಊರ ಸಂತೆಗೆ ವಾರಕ್ಕೊಂದು ಭೇಟಿಯನ್ನು ನಾನು ತಪ್ಪಿಸಲಾರೆ. ಸಂತೆಯ ಮೂಲೆಯಲ್ಲಿ ಇಮಾಮ್ ಸಾಬಿ ಇಷ್ಟು ತರಕಾರಿ ಹಣ್ಣುಗಳೊಂದಿಗೆ ಕುಳಿತಿರುತ್ತಾನೆ. ನನ್ನನ್ನು ಕಂಡೊಡನೆ, “ಬಾ ಬೇಟಿ, ಈ ಸಲ ಕರಬೂಜದ ಹಣ್ಣು ಪಸಂದಾಗಿದೆ. ನಾಲ್ಕು ನಿನಗೇ ಅಂತ ತೆಗೆದಿಟ್ಟಿದ್ದೇನೆ” ಎಂದು ಚೀಲದೊಳಗೆ ತುಂಬಿಸುತ್ತಾನೆ. ‘ಸುಡುವ ಕರಾವಳಿಯ ಧಗೆಗೆ ಕರಬೂಜವೊಂದೇ ಪರಿಹಾರ’ ಎಂದು ನಂಬುವ ನಾನು ಅವುಗಳ ಲೆಕ್ಕಾ ಚುಕ್ತಾ ಮಾಡುತ್ತೇನೆ. ಅವನು ನನಗೆ ಪರಿಚಿತವಾದದ್ದೇ ಹಾಗೆ. ಕರಬೂಜದ ಹಣ್ಣು ಸಿಹಿಯಾಗಿವೆಯೆಂದು ಏನು ಗ್ಯಾರಂಟಿ? ಎಂದು ಮೊದಲ ದಿನ ನಾನವನೊಂದಿಗೆ ವಾದಕ್ಕೆ ನಿಂತಿದ್ದೆ. ಅದಕ್ಕವನು ಸಮಾಧಾನದಿಂದಲೇ ‘ಸಿಹಿಯಿಲ್ಲ ಅಂದ್ರೆ ಮುಂದಿನ ವಾರ ದುಡ್ಡು ವಾಪಸ್, ಮಾತಂದ್ರೆ ಮಾತು. ವ್ಯಾಪಾರದಲ್ಲಿ ಮೋಸ ಮಾಡಿದ್ರೆ ಅಲ್ಲಾ ಖುದಾ ಮಾಡೋದಿಲ್ಲ’ ಅಂತ ಅವನ ದೇವರನ್ನು ಎಳೆದು ತಂದಿದ್ದ. ಅಲ್ಲಿಂದ ಮುಂದೆ ಅವನು ನನ್ನ ಖಾಯಂ ಹಣ್ಣಿನ ವ್ಯಾಪಾರಿ. ಅವನು ಆರಿಸಿಕೊಟ್ಟನೆಂದರೆ ಅದು ಸಿಹಿಯೆ. ಸಂತೆಯ ಸಣ್ಣ ಪುಟ್ಟ ಜಗಳಗಳಿಗೆಲ್ಲ ಅವನೇ ನ್ಯಾಯಾದೀಶ. ‘ಜರಾ ಸುಮ್ನಿರು ಚೋಟು. ವ್ಯವಹಾರ ಅಂದ್ಮೇಲೆ ಒಂದ್ಮಾತು ಬರ್ತದೆ, ಹೋಗ್ತದೆ.
ಅದಕ್ಯಾಕೆ ಅಷ್ಟು ಹಾರಾಡ್ತಿ?’ ಎನ್ನುತ್ತಾ ಎಲ್ಲರನ್ನು ಸಮಾಧಾನ ಮಾಡ್ತಾನೆ. ಅಲ್ಲೇ ಸಮಯವಿದ್ದರೆ ತನ್ನ ದೊಡ್ಡ ಮಗಳ ಮಗಳಿಗೆ ಮಗುವಾದ ವಿಷಯ, ಸಣ್ಣ ಸೊಸೆಗೆ ಸೀಮಂತವಾದ ವಿಷಯ, ಮೊಹರಂಗೆ ದೊರೆತ ಜಕಾತ್‍ಗಳ ವಿಷಯ ಎಲ್ಲವನ್ನೂ ಮಾತನಾಡುತ್ತಾನೆ. ನಾನೂ ನನ್ನ ವಾರದ ಹಳವಂಡಗಳನ್ನೆಲ್ಲ ಕೆಲವೊಮ್ಮೆ ಕಕ್ಕುತ್ತೇನೆ. ವಾರಪತ್ರಿಕೆಯಲ್ಲಿ ಬರುವ ಧಾರಾವಾಹಿಗಳಿಗೆ ಕಾಯುವಂತೆ ನಾವಿಬ್ಬರೂ ಆ ದಿನಕ್ಕಾಗಿ ಕಾಯುತ್ತೇವೆ.
ಇಂದು ಸಂತೆಯನ್ನು ಪ್ರವೇಶಿಸುತ್ತಿರುವಂತೆಯೆ ಎಂಥದ್ದೋ ಆವಾಂತರಗಳ ವಾಸನೆ ಮೂಗಿಗೆ ಬಡಿಯುತ್ತಿದೆ. ನಾನಿದುವರೆಗೆ ಕಂಡಿರದ ಚಿತ್ರ, ವಿಚಿತ್ರ ನಾಮಧಾರಿಗಳ ಪಾತ್ರಗಳು ಸಂತೆಯಲ್ಲಿ ನಿರುದ್ದಿಶ್ಯವಾಗಿ ಓಡಾಡುತ್ತಿರುವಂತೆ ಭಾಸವಾಗುತ್ತಿದೆ. ಅವನು ನಂಬಿದ ಅಲ್ಲಾನೆ ಅವನಿಗೆ ಮುಳುವಾಗುವನೇನೋ ಎಂದನಿಸುತ್ತಿದೆ. ಉದ್ದ ಗಡ್ಡದ, ಬಿಳಿಯ ಟೊಪ್ಪಿಗೆಯ ಈ ಮುದುಕನನ್ನು ಹೊಸಕಿಹಾಕಲು ಹತ್ತಾರು ಕೈಗಳು ಠಳಾಯಿಸುತ್ತಿವೆಯೆ? ಓ ದೇವರೇ…….. ಆ ಪಾಪಿ ಕೈಗಳು ಬಿಳಿಯ ಗಡ್ಡದ ನನ್ನ ಪ್ರೀತಿಯ ಮುದುಕನ ಮುಖದ ಅಚ್ಚಬಿಳಿಯ ನಗೆಯನ್ನು ಅಳಿಸದಿರಲಿ.
ಯಾಕೆಂದರೆ….. ನನಗೆ ಈ ಇಬ್ಬರೂ ಬೇಕು. ನನ್ನ ಬದುಕು ಹಸನಾಗಿರಲು ಅವರಿಬ್ಬರೂ ನಗುತ್ತಿರಬೇಕು.
http://avadhimag.com/?p=190725
No comments:
Post a Comment