ನಾನು ಚಿಕ್ಕವಳಿರುವಾಗ ನನಗೊಂದು ಅದ್ಭುತ ಅನುಭವವಾಗುತ್ತಿತ್ತು. ನಾನು ಎಲ್ಲೋ ಬೇರೆ ಲೋಕದಿಂದ ಬಂದವಳು. ಇಲ್ಲಿ ಇವರು ನನ್ನನ್ನು ಕದ್ದು ತಂದಿದ್ದಾರೆ. ಯಾವಾಗಲಾದರೊಂದಿನ ನಾನು ನನ್ನ ನಿಜವಾದ ಲೋಕಕ್ಕೆ ಹೋಗುತ್ತೇನೆ. ಅದು ಬರಬರುತ್ತಾ ಎಷ್ಟು ಸಾಮಾನ್ಯವಾಯಿತೆಂದರೆ ನಾನು ಏಕಾಂಗಿಯಾಗಿರುವಾಗಲೆಲ್ಲ ನನ್ನ ಆ ಬೇರೆಯ ಲೋಕಕ್ಕೆ ಹೋಗಿಬಿಡುತ್ತಿದ್ದೆ. ಅದು ಒಂಥರಾ ಯಕ್ಷಗಾನ ಪ್ರಣೀತವಾದ ರಮ್ಯಲೋಕವಾಗಿತ್ತು. ಅಲ್ಲಿ ನನ್ನ ಈ ಇಹದ ಯಾವುದೇ ಪರದಾಟಗಳೂ ಇರಲಿಲ್ಲ. ಸದಾ ಸಂತೋಷ, ಅಚ್ಚರಿಗಳ ಸರಮಾಲೆ ಮತ್ತು ಬಣ್ಣಗಳ ಮೆರಗು ಮಾತ್ರವೇ ಇರುತ್ತಿತ್ತು. ಕೆಲವೊಮ್ಮೆ ನಾನು ಹೀಗೆ ಒಬ್ಬಳೇ ಇರುವಾಗ ಮಾತನಾಡುವುದನ್ನು ಕಂಡು ಅಮ್ಮ ಇವಳಿಗೇನೋ ಆಗಿದೆ ಎಂದು ಆತಂಕಗೊಳ್ಳುತ್ತಿದ್ದಳು. ಇದಕ್ಕೆಲ್ಲಾ ಕಾರಣ ನಾನು ಸದಾ ಪುಸ್ತಕಗಳಲ್ಲಿ ಕಳೆದುಹೋಗುವುದು ಎಂದೇ ಭಾವಿಸಿದ್ದಳು. ನೀನು ಓದಿ, ಓದಿ ಒಂದಿನ ಹುಚ್ಚು ಹಿಡಿಸಿಕೊಳ್ತೀಯ ಎಂದು ಬೈಯ್ಯುತ್ತಿದ್ದಳು. ಸ್ವಲ್ಪ ದೊಡ್ಡವಳಾಗಿ, ಶಿಕ್ಷಣಕ್ಕಾಗಿ ಪೇಟೆಗೆ ಬಂದು ವಾಸ್ತವಕ್ಕೆ ತೆರೆದುಕೊಂಡ ಮೇಲೆ ಇಂತಹ ಹುಚ್ಚಾಟಗಳು ತನ್ನಿಂದ ತಾನೇ ಮರೆಯಾದವು.
ಇದೆಲ್ಲಾ ಮತ್ತೆ ನೆನಪಾದುದು ಅನುಷ್ ಶೆಟ್ಟಿಯವರ ' ನೀನು ನಿನ್ನೊಳಗೆ ಖೈದಿ' ಎಂಬ ಕಾದಂಬರಿಯನ್ನು ಓದುತ್ತಿರುವಾಗ. ದೇಜಾವು ಎಂಬ ಸಮಾಂತರ ಜಗತ್ತಿನ ಕಲ್ಪನೆಯಿಟ್ಟುಕೊಂಡು ಒಂದು ಚೆಂದದ ಕಥೆಯನ್ನು ಹೆಣೆದಿದ್ದಾರೆ ಅನುಷ್. ಕಾದಂಬರಿಯನ್ನು ಓದುವಾಗ ತೇಜಸ್ವಿಯವರ ಹಾರುವ ಓತಿಯ ಅನ್ವೇಷಣೆಯ ಕರ್ವಾಲೋ ನೆನಪಾಗುತ್ತಾರೆ. ಮಂದಣ್ಣನ ಜಾಗದಲ್ಲಿ ಇಲ್ಲಿ ಗಿಲ್ಬರ್ಟ್ ಇದ್ದಾನೆ. ಆದರೆ ಕಾದಂಬರಿಯ ತಂತ್ರ ಸಂಪೂರ್ಣ ಭಿನ್ನವಾಗಿದ್ದು ಕರ್ವಾಲೋದ ಪ್ರಭಾವದಿಂದ ಸಂಪೂರ್ಣವಾಗಿ ತಪ್ಪಿಸಿಕೊಂಡಿದೆ.
ಮೂಲತಃ ವಿಜ್ಞಾನದ ವಿದ್ಯಾರ್ಥಿಯಾದ ಅನುಷ್ ಮನುಷ್ಯನೊಬ್ಬ ಎರಡು ಲೋಕದಲ್ಲಿ ಬದುಕುವ ಪರಿಕಲ್ಪನೆಯನ್ನಿಟ್ಟುಕೊಂಡು ಓದುಗರನ್ನು ಒಂದು ವಿಸ್ಮಯದ ಲೋಕಕ್ಕೆ ಕೊಂಡೊಯ್ಯುತ್ತಾರೆ. ಜೈಲಿನಲ್ಲಿ ಖೈದಿಯಾಗಿರುವ ಗಿಲ್ಬರ್ಟ್ ನ ಡೈರಿಯ ವಿವರಣೆಯ ಹಿಂದೆ ಬಿದ್ದ ಬೇಹುಗಾರರಿಗೆ ದೇಜಾವು ಎಂಬ ವಿಸ್ಮಯ ಲೋಕದ ಪರಿಚಯ ಸಿಗುತ್ತಾರೆ ಹೋಗುತ್ತದೆ. ಸಂಶೋಧನೆಗಾಗಿ ಮಗನನ್ನೇ ಕಳಕೊಳ್ಳುವ ರಾವ್, ಹೆಸರನ್ನು ಬದಲಾಯಿಸದೇ ಗಿಲ್ಬರ್ಟ್ ನನ್ನು ಮಗನನ್ನಾಗಿ ಮಾಡಿಕೊಳ್ಳುವ ತಾಯಿ, ತಾಯಿಯ ಬಗ್ಗೆ ಸ್ನೇಹಪೂರಿತ ಪ್ರೀತಿ ತೋರುವ ಗಿಲ್ಬರ್ಟ್, ತಂದೆಯನ್ನು ಅಪ್ಪ ಎನ್ನಲಾರದೇ ಸರ್ ಎಂದೇ ಕರೆಯುವ ಶಾರದೆ, ಜ್ಞಾನ ಲೋಕದಿಂದ ಸಂಪೂರ್ಣ ಹೊರಗಿದ್ದು ಶುದ್ಧ ವ್ಯವಹಾರಿಕ ಮನುಷ್ಯರ ಪ್ರತೀಕವಾಗಿರುವ ಪೊನ್ನಣ್ಣ ಹೀಗೆ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳೂ ವಿಶಿಷ್ಟವಾಗಿವೆ.
ಕಾದಂಬರಿಯಲ್ಲಿ ಗಿಲ್ಬರ್ಟ್ ನ ಡೈರಿಯ ವಿಷಯವೆಲ್ಲವನ್ನೂ ಕೈಬರಹದಲ್ಲಿಯೇ ಇಡಲಾಗಿದೆ. ಇದೊಂಥರಾ ಕಾದಂಬರಿಯ ಓದಿಗೆ ಮತ್ತು ಅರ್ಥೈಸುವಿಕೆಗೆ ಹೊಸ ಆಯಾಮವನ್ನು ಒದಗಿಸುತ್ತದೆ. ಮುದ್ರಣದ ಗುಣಮಟ್ಟವೂ ಉತ್ತಮವಾಗಿದ್ದು ಆಕರ್ಷಕವಾಗಿದೆ. ಥ್ರಿಲ್ಲಿಂಗ್ ಸಿನೆಮಾ ಮಾಡುವಲ್ಲಿ ಅದೇ ಹಳೆ ದೆವ್ವ ಭೂತಗಳ ಪರಿಕಲ್ಪನೆಗಳಿಗೆ ಜೋತುಬಿಳುವ ನಮ್ಮ ಸಿನಿಮಂದಿ ಕಾದಂಬರಿಯನ್ನು ಒಂದಿಷ್ಟು ನಿರೀಕ್ಷೆಯೊಂದಿಗೆ ಓದಬಹುದೇನೋ? ಅಭಿನಂದನೆಗಳು ಅನುಷ್ ಹೊಸದೊಂದು ರೀತಿಯ ಓದಿಗೆ ಅನುವಾದುದಕ್ಕೆ. ಸಂಗೀತ, ರಂಗಚಟುವಟಿಕೆಯೊಂದಿಗೆ ಬರವಣಿಗೆಯೂ ನಿರಂತರವಾಗಿ ಸಾಗಲಿ.
No comments:
Post a Comment