Monday, March 12, 2018

ಕಾಡುವ ಪಾದಗಳ ನೆನಪು

ಇಂದಿಡೀ ಕಿತ್ತುಹೋದ ಆ ತಾಯಿಯ ಪಾದಗಳೇ ಕಾಡಿದವು. ಒಂದು ಟೊಮ್ಯಾಟೊ ಗಿಡ ನೆಟ್ಟು ಎರಡು ತಿಂಗಳ ಮೇಲಾಯ್ತು. ಪ್ರತಿದಿನ ನೀರು, ವಾರಕ್ಕೊಮ್ಮೆ ಗೊಬ್ಬರಗಳ ಸೇವೆಯೂ ನಡೆಯಿತು. ಅಂತೂ ಬೆಟ್ಟದ ನೆಲ್ಲಿ ಗಾತ್ರದ ನಾಲ್ಕಾರು ಟೊಮ್ಯಾಟೋಗಳು ಈಗ ನೇತಾಡುತ್ತಿವೆ. ಮೊನ್ನೆ ಸಂತೆಯಲ್ಲಿ ಇಪ್ಪತ್ತು ರೂಪಾಯಿಗೆ ಮೂರುಕಿಲೋ ಟೊಮ್ಯಾಟೊ ಸಿಗುತ್ತಿತ್ತು. ಆ ಮೂರು ಕಿಲೋ ಟೊಮ್ಯಾಟೋಗೆ ರೈತನಿಗೆ ಸಿಕ್ಕಿದ್ದು ಹೆಚ್ಚೆಂದರೆ ಹತ್ತು ರೂಪಾಯಿಯಿದ್ದೀತು! ಆ ಹತ್ತು ರೂಪಾಯಿಗಾಗಿ ಅವನು ಪಟ್ಟ ಶ್ರಮವೆಷ್ಟಿದ್ದೀತು? ರೈತರ ಬವಣೆಗೆ ಕೊನೆಯೇ ಇಲ್ಲವೆನಿಸುತ್ತದೆ. ಎರಡು ತುತ್ತಿನಲ್ಲಿ ತಿನ್ನಬಹುದಾದ ಚಾಕಲೇಟ್ ಗೆ ಕಣ್ಮುಚ್ಚಿ ಐವತ್ತು ರೂಪಾಯಿ ಕೊಡುವ ನಾವು, ತರಕಾರಿಯವಳ ಕೂಡ ಒಂದು ರೂಪಾಯಿಗೂ ಚೌಕಾಶಿ ಮಾಡುತ್ತೇವೆ. ಆ ಪಾದಗಳಿಗೆ ಇನ್ನಾದರೂ ನ್ಯಾಯ ಸಿಗಲಿ. ಅನ್ನವಿಕ್ಕುವ ಜೀವಗಳು ನೆಮ್ಮೆಯಲ್ಲಿರಲಿ.

ನನಗೆ ಆ ಪಾದಗಳು ಮತ್ತೆ ನನ್ನಮ್ಮನನ್ನು ನೆನಪಿಸಿದವು. ಆ ದಿನ ಅಪ್ಪ, ಅಮ್ಮನಿಗೆ ದೊಡ್ಡ ಜಗಳವಾಗಿತ್ತು. ಅಂದರೆ ಸಣ್ಣ ಜಗಳಗಳು ದಿನವೂ ಸಾಮಾನ್ಯ ಎಂದರ್ಥ. ಜಗಳದ ಕೊನೆಯಲ್ಲಿ ಅಮ್ಮ ಮನೆಯಲ್ಲಿರಲೇಬೇಕೆಂದರೆ ದನ ಕಾಯ್ದುಕೊಂಡು ಇರಬೇಕು ಎಂದು ತೀರ್ಮಾನವಾಯಿತು. ಅಮ್ಮನೂ ಹಟದಿಂದ ಆಯಿತೆಂದು ಒಪ್ಪಿಯೇಬಿಟ್ಟಳು. ಹತ್ತಾರು ದನಗಳನ್ನು ಮೇಯಿಸಲು ಬೆಳಿಗ್ಗೆ ಕಾಡಿಗೆ ಹೋದರೆ ಸಂಜೆ ಬರುತ್ತಿದ್ದಳು. ಅಮ್ಮ ಕಾಲಿಗೆ ಚಪ್ಪಲಿ ಧರಿಸುತ್ತಿರಲಿಲ್ಲ. ಹೆಂಗಸರೆಲ್ಲ ಚಪ್ಪಲಿ ಧರಿಸುವ ಕ್ರಮವೂ ಅಲ್ಲಿರಲಿಲ್ಲ.  ಹೇಳಿ ಕೇಳಿ ಕಾಡಿನಲ್ಲಿ ಮುಳ್ಳುಗಳ ರಾಶಿ. ದಿನವೂ ಮನೆಗೆ ಬಂದು ಮುಳ್ಳು ತೆಗೆಯುವ ನೆವದಲ್ಲಿ ಸೂಜಿ ಚುಚ್ಚಿ ಮತ್ತೊಂದಿಷ್ಟು ಗಾಯ ಮಾಡಿಕೊಂಡಿದ್ದಳು. ಕುಂಟುತ್ತಾ ನಡೆಯುವ ಅವಳನ್ನು ಅಸಹಾಯಕತೆಯಿಂದ ನೋಡುವುದಷ್ಟೇ ನಮ್ಮ ಕೆಲಸವಾಗಿತ್ತು.  ಅಂತೂ ವಾರದೊಳಗೆ ರಾಜಿಯಾಗಿ ಅಮ್ಮ ಮನೆಯೊಳಗೆ ಬಂದರೋ ಮುಳ್ಳಿನ ಗಾಯಗಳು ಕೀವಾಗಿ ಮಾಯಲು ಎಷ್ಟೋ ದಿನಗಳನ್ನು ತೆಗೆದುಕೊಂಡಿದ್ದವು. ಅಮ್ಮನಿಗೂ,ಆ ತಾಯಿಗೂ ಒಂದು ಜೊತೆ ಹೊಸ ಚಪ್ಪಲಿಗಳನ್ನು ಕೊಡಿಸಬೇಕಿತ್ತು.

No comments:

Post a Comment