Friday, March 09, 2018

ಆ ಹುಡುಗ ನನಗಾಗಿ ದಿನವೂ ಹಾಡುತ್ತಾನೆ

ಮಗ ಸಂಗೀತ ಕಲಿಯಲು ಆರಂಭಿಸಿದ ನಂತರ ಸಂಗೀತ ಕೇಳುವುದೊಂದು ಗೀಳಾಗಿ ಹೋಯ್ತು. ಮೊದಲೆಲ್ಲ ಕೆಲಸ ಮಾಡುವಾಗ ಹಾಡುತ್ತಲೇ ಮಾಡುತ್ತಿದ್ದೆ. ಅರೆಯುವ ಕಲ್ಲಲ್ಲಿ ಬೀಸುವಾಗ, ಬಹಳ ಹೊತ್ತು ನಿಂತು ಬಟ್ಟೆ ಒಗೆಯುವಾಗ, ರಾಶಿಗಟ್ಟಲೆ ಪಾತ್ರೆ ತೊಳೆಯುವಾಗಲೆಲ್ಲ ಹಾಡಿನ ಜೊತೆ ಬೇಕಾಗುತ್ತಿತ್ತು. ಈಗ ಅಂತಹ ಸುದೀರ್ಘ ಕೆಲಸಗಳೇ ಕಣ್ಮರೆಯಾಗಿ ಹಾಡೂ ನನ್ನ ಕೈಬಿಟ್ಟು ಹೋಗಿತ್ತು. ಸಂಗೀತ ಕಲಿಯುವ ಮಗ ಮತ್ತೆ ನನಗೆ ಹಾಡಿನ ಗೀಳು ಹತ್ತಿಸಿದ. ಊಟ, ತಿಂಡಿ ಮಾಡುವಾಗ, ಏಕಾಂತದಲ್ಲಿರುವಾಗ, ಓದುವಾಗಲೆಲ್ಲ ನಾವು ಹಾಡು ಕೇಳುತ್ತಲೇ ಇರುತ್ತೇವೆ. ಹಾಗೆ ಕೇಳಲು ನಾವು ಯು ಟ್ಯೂಬ್ ನ ಮೊರೆಹೋಗುತ್ತೇವೆ. ಹಿಂದಿಯ ಝೀ ಸರೆಗಮಪ ಎಪಿಸೋಡುಗಳಿಗೆ ಹೋದರೆ ಮಕ್ಕಳು ಹಾಡುವ ಚೆಂದದ ಹಾಡುಗಳನ್ನು ಕೇಳಬಹುದು.

ಹೀಗೆ ಒಮ್ಮೆ ಹಾಡಿಗಾಗಿ ತಡಕಾಡುತ್ತಿರುವಾಗ ಸಿಕ್ಕಿದವನೇ ಅಝ್ಮತ್ ಹುಸೇನ್ ಎಂಬ ಪುಟ್ಟ ಬಾಲಕ. ಕೇವಲ ಹತ್ತು ವರ್ಷದವನಿದ್ದಾಲೇ ೨೦೧೧ ರ ಎಪಿಸೋಡಿನಲ್ಲಿ ಚಾಂಪಿಯನ್ ಆದವ. ಅವನ ಹಾಡುಗಳು ಅದೆಷ್ಟುಮೋಹಕವೆಂದರೆ ಕೇಳುತ್ತಿರುವಂತೆಯೇ ಹಾಡಿನೊಳಗೆ ನಾವು ಸೇರಿಹೋಗುತ್ತೇವೆ. ಗವಾಯಿಗಳ ಶೈಲಿಯಲ್ಲಿ ಅವನು ಉರ್ದುಮಿಶ್ರಿತ ಉಚ್ಛಾರದೊಂದಿಗೆ ಹಾಡತೊಡಗಿದನೆಂದರೆ...... ವಾಹ್! ಎಂತಹ ಕಲ್ಲೆದೆಯೂ ಕರಗಿ ಆರ್ದೃವಾಗುತ್ತದೆ. ಅವನ ಹಾಡುಗಳನ್ನು ಪದೇ ಪದೇ ಕೇಳಿದರೂ ಯಾಕೋ ಬೇಸರವೆನಿಸುವುದೇ ಇಲ್ಲ. ನೈನೋಮೆ ಮನ ....
ಎಂಬ ಅವನ ಹಾಡನ್ನು ನೂರಕ್ಕೂ ಹೆಚ್ಚಿಸಲು ಕೇಳಿರುವೆ. ಸಂಗೀತ ಅವನಿಗೆ ಕಲಿತು ಬಂದಿರುವುದಲ್ಲ. ಅದು ಅವನೊಳಗೇ ಇದೆ. ತಡೆಯಿರದ ಸುಧೆಯಾಗಿ ಹರಿಯುತ್ತದೆ.

ಅವನ ಕೌಟುಂಬಿಕ ಹಿನ್ನೆಲೆಯನ್ನು ನೋಡಿದರೆ ಅಯ್ಯೋ ಅನಿಸುತ್ತಿತ್ತು. ಫೀಸು ಕಟ್ಟಲು ಹಣವಿಲ್ಲವೆಂದು ಅವನು ಶಾಲೆಯನ್ನೇ ತೊರೆದಿದ್ದ. ಹಾಡುಗಳನ್ನೆಲ್ಲ ಅವನು ಕೇಳಿಯೇ ಕಲಿಸುವುದು. ಜೊತೆಯಲ್ಲಿ ಕುಶಲ ಹಾರ್ಮೋನಿಯಂ ವಾದಕನೂ ಹೌದು. ಗುರು ಕೈಲಾಶ್ ಖೇರ್ ಅವನ ಬಗ್ಗೊಮ್ಮೆ ಹೀಗೆ ಹೇಳಿದ್ದರು, " ಈ ಖಾನ್ ಸಾಬ್ ಇದ್ದಾನಲ್ಲಾ. ಹೀಗೆ ಸ್ವರಗಳ ಸಮುದ್ರದಲ್ಲಿ ನಿರಾಳವಾಗಿ ಮುಳುಗಿಬಿಡುತ್ತಾನೆ ಮತ್ತು ಗುಳುಗುಳು ಎನ್ನುತ್ತಾ ಆಳದಿಂದ ಒಂದು ಅದ್ಭುತ ಮುತ್ತನ್ನು ಆರಿಸಿ ತರುತ್ತಾನೆ " ಎಂದು. ನನಗೆ ಅವನ ಹಾಡು ಕೇಳುತ್ತಾ, ಕೇಳುತ್ತಾ ತೀರ ಬಡತನದ ಹಿನ್ನೆಲೆಯ ಅವನು ಸಂಗೀತ ಕಲಿಕೆಯನ್ನು ಮುಂದುವರೆಸಿರಬಹುದೇ? ಇಲ್ಲವೆ? ಸಂಗೀತದಿಂದ ದೂರವಾದರೆ ಅವನೆಷ್ಟು ಅಪೂರ್ಣ ಮತ್ತು ವಿಕಾರ ವ್ಯಕ್ತಿತ್ವದವನಾಗಬಹುದು ಎಂದೆಲ್ಲಾ ಚಿಂತೆಯಾಗತೊಡಗಿತು. ಮಗ ನನ್ನ ಮಾತನ್ನು ಕೇಳಿ ಹಾಡು ಕೇಳುವುದನ್ನು ಬಿಟ್ಟು ಅವನ ಬಗೆಗೆ ಯೋಚಿಸೋದು ತೀರ ಅತಿಯಾಯ್ತು ಎನ್ನುತ್ತಿದ್ದ. ನಾನವನಿಗೆ ಬಡತನದ ಹಿನ್ನೆಲೆಯ ಮುಸ್ಲಿಂ ಕುಟುಂಬದ ಸ್ಥಿತಿಗತಿ ಮತ್ತು ಅವರನ್ನು ಗುರಿಯಾಗಿಸಿಕೊಂಡ ಕಂದಾಚಾರಗಳ ಬಗೆಗೆ ತಿಳಿಸಿದಾಗ ಅವನಿಗೂ ಹೌದೆನ್ನಿಸಿತ್ತು. ಅಂತೂ ಮತ್ತೆ ಯೂ ಟ್ಯೂಬ್‌ ನ್ನು ಜಾಲಾಡಿ ಅವನು ಈಗಲೂ ಹಾಡುತ್ತಿರುವ ವೀಡಿಯೋ ತೋರಿಸಿದ. ಆದರೂ ಬಾಲ್ಯದ ಆ ಗಟ್ಟಿತನ ಈಗಿಲ್ಲ ಅನಿಸಿತು. ಏನೇ ಇರಲಿ ಹಾಡುತ್ತಿದ್ದಾನೆ ಎಂಬುದೊಂದು ನೆಮ್ಮದಿ ನಮಗೆ.

ಮತ್ತೀಗ ಪುಟ್ಟ ಅಝ್ಮತ್ ನನಗೆ ಬೇಕಾದಾಗಲೆಲ್ಲ ನಮ್ಮ ನಡುಮನೆಯಲ್ಲಿ ಕುಳಿತು ಎದೆತುಂಬಿ ಹಾಡುತ್ತಾನೆ  ಮತ್ತು ನಾವದನ್ನು ಕೇಳಿ ನಿರುಮ್ಮಳವಾಗುತ್ತೇವೆ. ಯಾವ ಜನ್ಮದ ಬಂಧವೇನೋ ಇದು? ಆ ಕಿಶೋರನಿಗಿದು ತಲುಪಿದರೆ ಎಷ್ಟು ಖುಶಿಪಟ್ಟಾನು ಅಲ್ಲವೆ?

No comments:

Post a Comment